ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ʻಜೆಪಿಎಂ ಕಾಯ್ದೆ-1987ʼರ ಅಡಿಯಲ್ಲಿ ʻ2022-23ನೇ ಸಾಲಿನ ಸೆಣಬಿನ ವರ್ಷʼಕ್ಕೆ ಸೆಣಬಿನ ಪ್ಯಾಕೇಜಿಂಗ್ ಸಾಮಗ್ರಿಗಳಿಗೆ ಮೀಸಲಾತಿ ನಿಯಮಗಳು


ʻ2022-23ನೇ ಸಾಲಿನ ಸೆಣಬಿನ ವರ್ಷʼಕ್ಕೆ ಆಹಾರ ಧಾನ್ಯಗಳು ಮತ್ತು ಸಕ್ಕರೆ ಪ್ಯಾಕೇಜಿಂಗ್‌ನಲ್ಲಿ ಸೆಣಬಿನ ಕಡ್ಡಾಯ ಬಳಕೆಗಾಗಿ ಮೀಸಲಾತಿ ನಿಯಮಗಳಿಗೆ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ

ಸರ್ಕಾರದ ನಿರ್ಧಾರವು ಪಶ್ಚಿಮ ಬಂಗಾಳದ ಸೆಣಬಿನ ಕಾರ್ಮಿಕರು, ರೈತರು, ಗಿರಣಿಗಳಿಗೆ ದೊಡ್ಡ ಉತ್ತೇಜನ ನೀಡಲಿದೆ

40 ಲಕ್ಷ ಕೃಷಿ ಕುಟುಂಬಗಳು, ಸೆಣಬಿನ ಗಿರಣಿಗಳು ಮತ್ತು ಪೂರಕ ಘಟಕಗಳಲ್ಲಿ 3.7 ಲಕ್ಷ ಕಾರ್ಮಿಕರಿಗೆ ಸಹಾಯ ಮಾಡಲು ಈ ನಿರ್ಧಾರದಿಂದ ನೆರವಾಗಲಿದೆ

ಪ್ಯಾಕಿಂಗ್‌ಗಾಗಿ ಸರ್ಕಾರವು ವರ್ಷಕ್ಕೆ 9,000 ಕೋಟಿ ರೂ.ಗಳ ಸೆಣಬು ಖರೀದಿಸುವ ಮೂಲಕ ಸೆಣಬು ಕೃಷಿಕರು, ಕಾರ್ಮಿಕರ ಉತ್ಪನ್ನಗಳಿಗೆ ಖಾತರಿ ಮಾರುಕಟ್ಟೆಯನ್ನು ಒದಗಿಸುತ್ತದೆ 
ಆತ್ಮನಿರ್ಭರ ಭಾರತ್ ಉಪಕ್ರಮಕ್ಕೆ ಅನುಗುಣವಾಗಿ ದೇಶೀಯ ಸೆಣಬಿನ ಉತ್ಪಾದನೆಯನ್ನು ಈ ನಿರ್ಧಾರ ಬೆಂಬಲಿಸಲಿದೆ

Posted On: 22 FEB 2023 4:54PM by PIB Bengaluru

ʻ2022-23ನೇ ಸಾಲಿನ ಸೆಣಬಿನ ವರ್ಷʼದಲ್ಲಿ ಅಕ್ಕಿ, ಗೋಧಿ ಮತ್ತು ಸಕ್ಕರೆಯ ಪ್ಯಾಕೇಜಿಂಗ್‌ನಲ್ಲಿ ಸೆಣಬಿನ ಕಡ್ಡಾಯ ಬಳಕೆಗಾಗಿ ಮೀಸಲಾತಿ ನಿಯಮಗಳನ್ನು ಭಾರತ ಸರಕಾರ ಅನುಮೋದಿಸಿದೆ. ಈ ನಿಯಮಗಳು ಸೆಣಬಿನ ಚೀಲಗಳಲ್ಲಿ ಆಹಾರ ಧಾನ್ಯಗಳ ಪ್ಯಾಕೇಜಿಂಗ್‌ಗೆ ಸಂಪೂರ್ಣ ಮೀಸಲಾತಿ ಮತ್ತು ಸಕ್ಕರೆ ಪ್ಯಾಕೇಜಿಂಗ್‌ಗೆ 20% ಮೀಸಲಾತಿಯನ್ನು ಕಡ್ಡಾಯಗೊಳಿಸುತ್ತವೆ. ಇದರಿಂದ ಪಶ್ಚಿಮ ಬಂಗಾಳಕ್ಕೆ ದೊಡ್ಡ ಉತ್ತೇಜನ ದೊರೆಯಲಿದೆ.

ಸೆಣಬಿನ ಉದ್ಯಮವು ಭಾರತದ ರಾಷ್ಟ್ರೀಯ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 75 ಸೆಣಬಿನ ಗಿರಣಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಲಕ್ಷಾಂತರ ಕಾರ್ಮಿಕರಿಗೆ ಜೀವನೋಪಾಯವನ್ನು ಒದಗಿಸುತ್ತವೆ. ಇದು ಸೆಣಬಿನ ವಲಯದ 40 ಲಕ್ಷ ಕೃಷಿ ಕುಟುಂಬಗಳನ್ನು ಬೆಂಬಲಿಸುತ್ತದೆ. ಈ ನಿರ್ಧಾರವು ಬಿಹಾರ, ಒಡಿಶಾ, ಅಸ್ಸಾಂ, ತ್ರಿಪುರ, ಮೇಘಾಲಯ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಸೆಣಬಿನ ವಲಯಕ್ಕೂ ಸಹಾಯ ಮಾಡುತ್ತದೆ.

`ಜೆಪಿಎಂ ಕಾಯ್ದೆ’ ಅಡಿಯಲ್ಲಿ ಮೀಸಲಾತಿ ನಿಯಮಗಳು 3.70 ಲಕ್ಷ ಕಾರ್ಮಿಕರಿಗೆ ನೇರ ಉದ್ಯೋಗವನ್ನು ಒದಗಿಸುತ್ತವೆ ಮತ್ತು ಸೆಣಬಿನ ವಲಯದಲ್ಲಿ ಸುಮಾರು 40 ಲಕ್ಷ ಕೃಷಿ ಕುಟುಂಬಗಳ ಹಿತಾಸಕ್ತಿಯನ್ನು ರಕ್ಷಿಸುತ್ತವೆ.  ʻಜೆಪಿಎಂ ಕಾಯ್ದೆ-1987ʼ ಸೆಣಬು ಕೃಷಿಕರು, ಕಾರ್ಮಿಕರು ಮತ್ತು ಸೆಣಬಿನ ಸರಕುಗಳ ಉತ್ಪಾದನೆಯಲ್ಲಿ ತೊಡಗಿರುವ ವ್ಯಕ್ತಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ.  ಸೆಣಬಿನ ಉದ್ಯಮದ ಒಟ್ಟು ಉತ್ಪಾದನೆಯಲ್ಲಿ 75% ಸೆಣಬಿನ ಚೀಲಗಳೇ ಆಗಿವೆ. ಈ ಪೈಕಿ 85% ಅನ್ನು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ರಾಜ್ಯ ಖರೀದಿ ಏಜೆನ್ಸಿಗಳಿಗೆ (ಎಸ್‌ಪಿಎ) ಸರಬರಾಜು ಮಾಡಲಾಗುತ್ತದೆ ಮತ್ತು ಉಳಿದವುಗಳನ್ನು ನೇರವಾಗಿ ರಫ್ತು/ಮಾರಾಟ ಮಾಡಲಾಗುತ್ತಿದೆ.

ಆಹಾರ ಧಾನ್ಯಗಳನ್ನು ಪ್ಯಾಕ್ ಮಾಡಲು ಸರ್ಕಾರವು ಪ್ರತಿವರ್ಷ ಸರಿಸುಮಾರು 9,000 ಕೋಟಿ ರೂ.ಗಳ ಸೆಣಬಿನ ಚೀಲಗಳನ್ನು ಖರೀದಿಸುತ್ತದೆ. ಈ ಕ್ರಮವು ಸೆಣಬಿನ ರೈತರು ಮತ್ತು ಕಾರ್ಮಿಕರ ಉತ್ಪನ್ನಗಳಿಗೆ ಖಾತರಿ ಮಾರುಕಟ್ಟೆಯನ್ನು ಒದಗಿಸುತ್ತದೆ.

ಸೆಣಬಿನ ಚೀಲಗಳ ಸರಾಸರಿ ಉತ್ಪಾದನೆ ಸುಮಾರು 30 ಲಕ್ಷ ಬೇಲ್‌(9 ಲಕ್ಷ ಮೆಟ್ರಿಕ್ ಟನ್)ಗಳಷ್ಟಿದೆ. ಸೆಣಬಿನ ರೈತರು, ಕಾರ್ಮಿಕರು ಮತ್ತು ಸೆಣಬಿನ ಉದ್ಯಮದಲ್ಲಿ ತೊಡಗಿರುವ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಸೆಣಬಿನ ಚೀಲಗಳ ಉತ್ಪಾದನೆ ಸಂಪೂರ್ಣವಾಗಿ ವಿಲೇವಾರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.

ಮೀಸಲಾತಿ ನಿಯಮಗಳೂ ಭಾರತದಲ್ಲಿ ಕಚ್ಚಾ ಸೆಣಬು ಮತ್ತು ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ ದೇಶೀಯ ಉತ್ಪಾದನೆಯತ್ತ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆ ಮೂಲಕ ಭಾರತವನ್ನು ʻಆತ್ಮನಿರ್ಭರ ಭಾರತʼಕ್ಕೆ ಅನುಗುಣವಾಗಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಸೆಣಬು ನೈಸರ್ಗಿಕ, ಜೈವಿಕ ವಿಘಟನೀಯ, ನವೀಕರಿಸಬಹುದಾದ ಮತ್ತು ಮರುಬಳಕೆ ಮಾಡಬಹುದಾದ ಉತ್ಪನ್ನ ಆಗಿರುವುದರಿಂದ, ಇದು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಎಲ್ಲಾ ಸುಸ್ಥಿರತೆ ಮಾನದಂಡಗಳನ್ನು ಪೂರೈಸುತ್ತದೆ.


***
 



(Release ID: 1902094) Visitor Counter : 121