ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ 41ನೇ ಪ್ರಗತಿ ಸಂವಾದ


13 ರಾಜ್ಯಗಳಿಗೆ ಸಂಬಂಧಿಸಿದ 41,500 ಕೋಟಿ ರೂ.ಗೂ ಅಧಿಕ ಮೌಲ್ಯದ ಒಂಬತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ

ಮೂಲಸೌಕರ್ಯ ಯೋಜನೆಗಳ ಯೋಜನೆಗಾಗಿ ಪಿಎಂ ಗತಿಶಕ್ತಿ ಪೋರ್ಟಲ್ ಬಳಸಲು ಪ್ರಧಾನಮಂತ್ರಿ ಸಲಹೆ

ಅಮೃತ್ ಸರೋವರ್ ಅಭಿಯಾನದ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ; ಮುಂಗಾರು ಆರಂಭಕ್ಕೂ ಮುನ್ನ ಅಮೃತ್ ಸರೋವರ್ ಕಾಮಗಾರಿಯನ್ನು ಅಭಿಯಾನದೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಎಲ್ಲ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ 

Posted On: 22 FEB 2023 7:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಆಡಳಿತ ಪರವಾದ ಮತ್ತು ಸಕಾಲಿಕ  ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ  ಪ್ರಗತಿಯ  41ನೇ ಆವೃತ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ, ಒಂಬತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಾಯಿತು. ಒಂಬತ್ತು ಯೋಜನೆಗಳಲ್ಲಿ, ಮೂರು ಯೋಜನೆಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ್ದಾದರೆ, ಎರಡು ಯೋಜನೆಗಳು ರೈಲ್ವೆ ಸಚಿವಾಲಯ ಹಾಗೂ ತಲಾ ಒಂದು ಯೋಜನೆ ವಿದ್ಯುತ್ ಸಚಿವಾಲಯ, ಕಲ್ಲಿದ್ದಲು ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಬಂದವು. ಛತ್ತೀಸ್ ಗಢ, ಪಂಜಾಬ್, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಕೇರಳ, ಕರ್ನಾಟಕ, ತಮಿಳುನಾಡು, ಅಸ್ಸಾಂ, ಗುಜರಾತ್, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 13 ರಾಜ್ಯಗಳಿಗೆ ಸಂಬಂಧಿಸಿದ ಈ ಒಂಬತ್ತು ಯೋಜನೆಗಳ ಒಟ್ಟು ವೆಚ್ಚ 41,500 ಕೋಟಿ ರೂ. ಆಗಿದೆ. ಅಮೃತ್ ಸರೋವರ್  ಅಭಿಯಾನ ಕುರಿತಂತೆಯೂ ಸಭೆಯಲ್ಲಿ ಪರಾಮರ್ಶಿಸಲಾಯಿತು.

ಮೂಲಸೌಕರ್ಯ ಯೋಜನೆಗಳ ಯೋಜನೆಗಾಗಿ ಪಿಎಂ ಗತಿಶಕ್ತಿ ಪೋರ್ಟಲ್ ಅನ್ನು ಬಳಸುವಂತೆ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಧಾನಮಂತ್ರಿ ಸಲಹೆ ನೀಡಿದರು. ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಭೂಸ್ವಾಧೀನ, ಸೌಲಭ್ಯ ಸ್ಥಳಾಂತರ ಮತ್ತು ಇತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕೆಂದು ಅವರು ಆಗ್ರಹಿಸಿದರು. ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ನಡುವೆ ಸರಿಯಾದ ಸಮನ್ವಯವನ್ನು ಖಚಿತಪಡಿಸಿಕೊಳ್ಳುವಂತೆ ಅವರು ಒತ್ತಿ ಹೇಳಿದರು.

ಸಂವಾದದ ವೇಳೆ ಪ್ರಧಾನಮಂತ್ರಿಯವರು 'ಅಮೃತ ಸರೋವರ ಅಭಿಯಾನ'ದ ಪರಾಮರ್ಶೆ ನಡೆಸಿದರು. ಬಿಹಾರದ ಕಿಶನ್ ಗಂಜ್ ಮತ್ತು ಗುಜರಾತ್ ನ ಬೊಟಾಡ್  ನಲ್ಲಿ ಡ್ರೋನ್ ಗಳ ಮೂಲಕ ಅಮೃತ್ ಸರೋವರ್ ತಾಣಗಳ ನೈಜ ಸಮಯ ವೀಕ್ಷಣೆಯನ್ನು ಅವರು ಮಾಡಿದರು. ಮಾನ್ಸೂನ್ ಆರಂಭಕ್ಕೂ ಮುನ್ನ ಅಮೃತ ಸರೋವರ್ ಕಾಮಗಾರಿಯನ್ನು ಅಭಿಯಾನದೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಎಲ್ಲ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಧಾನಮಂತ್ರಿ ಸಲಹೆ ನೀಡಿದರು. ಈ ಯೋಜನೆಯಡಿ 50,000 ಅಮೃತ್ ಸರೋವರ್ ಗಳ ಗುರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ವಿಭಾಗ ಮಟ್ಟದ ಮೇಲ್ವಿಚಾರಣೆಗೆ ಪ್ರಧಾನಮಂತ್ರಿ ಒತ್ತು ನೀಡಿದರು.

'ಅಮೃತ್ ಸರೋವರ್  ಅಭಿಯಾನ' ಎಂಬ ಅನನ್ಯ ಕಲ್ಪನೆಯು ದೇಶಾದ್ಯಂತ ಜಲಮೂಲಗಳನ್ನು ಪುನಶ್ಚೇತನಗೊಳಿಸಲು ಶ್ರಮಿಸುತ್ತಿದೆ, ಇದು ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಅಭಿಯಾನ ಪೂರ್ಣಗೊಂಡ ನಂತರ, ನೀರು ಸಂಗ್ರಣೆಯ ಸಾಮರ್ಥ್ಯದಲ್ಲಿ ನಿರೀಕ್ಷಿತ ಹೆಚ್ಚಳವು ಸುಮಾರು 50 ಕೋಟಿ ಕ್ಯೂಬಿಕ್ ಮೀಟರ್ ಆಗಲಿದೆ, ಅಂದಾಜು ಇಂಗಾಲದ ಸೀಕ್ವೆಸ್ಟ್ರೇಷನ್ ವಾರ್ಷಿಕ ಸುಮಾರು 32,000 ಟನ್ ಆಗಿರುತ್ತದೆ ಮತ್ತು ಅಂತರ್ಜಲ ಮರುಪೂರಣದಲ್ಲಿ 22 ದಶಲಕ್ಷ ಘನ ಮೀಟರ್ ಗಿಂತ ಹೆಚ್ಚಿನ ಹೆಚ್ಚಳವಾಗಲಿದೆ. ಇದಲ್ಲದೆ, ಪೂರ್ಣಗೊಂಡ ಅಮೃತ್ ಸರೋವರ್ ಗಳು ಸಮುದಾಯ ಚಟುವಟಿಕೆ ಮತ್ತು ಭಾಗವಹಿಸುವಿಕೆಯ ಕೇಂದ್ರಗಳಾಗಿ ವಿಕಸನಗೊಳ್ಳುತ್ತಿವೆ, ಇದರಿಂದಾಗಿ ಜನ ಪಾಲ್ಗೊಳ್ಳುವಿಕೆಯ ಉತ್ಸಾಹವನ್ನು ಹೆಚ್ಚಿಸುತ್ತದೆ. ಅಮೃತ್ ಸರೋವರ ತಾಣಗಳಲ್ಲಿ ಸ್ವಚ್ಛತಾ ರ‍್ಯಾಲಿ, ಜಲ ಸಂರಕ್ಷಣೆ ಕುರಿತು ಜಲ ಶಪಥ, ರಂಗೋಲಿ ಸ್ಪರ್ಧೆ ಮೊದಲಾದ ಶಾಲಾ ಮಕ್ಕಳ ಚಟುವಟಿಕೆಗಳು, ಛತ್ ಪೂಜೆಯಂತಹ ಧಾರ್ಮಿಕ ಹಬ್ಬಗಳ ಆಚರಣೆಯೇ ಮೊದಲಾದ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
ಪ್ರಗತಿ ಸಭೆಗಳಲ್ಲಿ ಈವರೆಗೆ ಒಟ್ಟು 15.82 ಲಕ್ಷ ಕೋಟಿ ರೂ.ಗಳ 328 ಯೋಜನೆಗಳನ್ನು ಪರಾಮರ್ಶಿಸಲಾಗಿದೆ.


***
 


(Release ID: 1901870) Visitor Counter : 152