ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 16 ರಂದು ನವದೆಹಲಿಯ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಆದಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ: ಶ್ರೀ ಅರ್ಜುನ್ ಮುಂಡಾ
28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1000 ಬುಡಕಟ್ಟು ಕುಶಲಕರ್ಮಿಗಳು ಮತ್ತು ಕಲಾವಿದರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ
ಬುಡಕಟ್ಟು ಸಮುದಾಯಗಳು ಉತ್ಪಾದಿಸುವ ಸಾವಯವ ಉತ್ಪನ್ನಗಳು ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಎದುರಿಸುವಲ್ಲಿ ದೊಡ್ಡ ಪಾತ್ರ ವಹಿಸಲಿವೆ: ಶ್ರೀ ಅರ್ಜುನ್ ಮುಂಡಾ
17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 39 ವನ್ ಧನ್ ವಿಕಾಸ್ ಕೇಂದ್ರಗಳು ಈ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ
Posted On:
13 FEB 2023 6:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಫೆಬ್ರವರಿ 16ರಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಆದಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀಮತಿ ರೇಣುಕಾ ಸರುತಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಮಂತ್ರಿಯವರಿಗೆ ವಿವಿಧ ಮಳಿಗೆಗಳಲ್ಲಿ ಪ್ರದರ್ಶಿಸಲಾಗುವ ಉತ್ಪನ್ನಗಳ ಪಕ್ಷಿನೋಟವನ್ನು ನೀಡಲಾಗುವುದು ಮತ್ತು ಬುಡಕಟ್ಟು ಸಮುದಾಯಗಳ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಬುಡಕಟ್ಟು ಸಮುದಾಯಗಳ ಸಂಪೂರ್ಣ ಭಾಗವಹಿಸುವಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಸಚಿವರು ಹೇಳಿದರು. ಬುಡಕಟ್ಟು ಸಮುದಾಯಗಳು ಉತ್ಪಾದಿಸುವ ಸಾವಯವ ಉತ್ಪನ್ನಗಳಿಗೆ ಒತ್ತು ನೀಡಲಾಗಿದ್ದು, ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಎದುರಿಸುವಲ್ಲಿ ಇದು ದೊಡ್ಡ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು. ಹೆಚ್ಚಿನ ವಿವರಗಳನ್ನು ನೀಡಿದ ಸಚಿವರು, ದೇಶಾದ್ಯಂತ ಆಯೋಜಿಸಲಾಗುವ ಆದಿ ಮಹೋತ್ಸವಗಳಲ್ಲಿ ಭಾಗವಹಿಸಲು ಹೆಚ್ಚು ಪರಿಚಿತರಲ್ಲದ ಮತ್ತು ವಿಶಿಷ್ಟ ವಸ್ತುಗಳನ್ನು ಉತ್ಪಾದಿಸುವ ದೂರದ ಪ್ರದೇಶಗಳ ಹೆಚ್ಚು ಹೆಚ್ಚು ಕುಶಲಕರ್ಮಿಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. ಆದಿವಾಸಿ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಆದಿ ಮಹೋತ್ಸವವು ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು. ಬುಡಕಟ್ಟು ಉತ್ಪನ್ನಗಳಲ್ಲಿ ಗುಣಮಟ್ಟ ಮತ್ತು ಸಮಕಾಲೀನ ವಿನ್ಯಾಸಗಳನ್ನು ಖಚಿತಪಡಿಸಿಕೊಳ್ಳಲು ಟ್ರೈಫೆಡ್ ಉನ್ನತ ವಿನ್ಯಾಸಕರೊಂದಿಗೆ ತೊಡಗಿಕೊಂಡಿದೆ. ಅದೇ ವೇಳೆ ಅವುಗಳ ಸ್ವಂತಿಕೆಯನ್ನು ಕಾಪಾಡಿಕೊಳ್ಳುವಂತೆ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ಟ್ರೈಫೆಡ್ ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಪ್ರಸ್ತುತ ಆವೃತ್ತಿಯು "ಬುಡಕಟ್ಟು ಕರಕುಶಲತೆ, ಸಂಸ್ಕೃತಿ, ಪಾಕಪದ್ಧತಿ ಮತ್ತು ವಾಣಿಜ್ಯದ ಸ್ಫೂರ್ತಿಯ ಆಚರಣೆ" ಎಂಬ ಧ್ಯೇಯವಾಕ್ಯವನ್ನು ಹೊಂದಿದೆ, ಇದು ಬುಡಕಟ್ಟು ಜೀವನದ ಮೂಲಭೂತ ನೀತಿಗಳನ್ನು ಪ್ರತಿನಿಧಿಸುತ್ತದೆ. ಉತ್ಸವದಲ್ಲಿ ಬುಡಕಟ್ಟು ಕರಕುಶಲ ವಸ್ತುಗಳು, ಕೈಮಗ್ಗ, ವರ್ಣಚಿತ್ರಗಳು, ಆಭರಣಗಳು, ಕಬ್ಬು ಮತ್ತು ಬಿದಿರು, ಕುಂಬಾರಿಕೆ, ಆಹಾರ ಮತ್ತು ನೈಸರ್ಗಿಕ ಉತ್ಪನ್ನಗಳು, ಉಡುಗೊರೆಗಳು ಮತ್ತು ಸಂಗ್ರಹಣೆ, ಬುಡಕಟ್ಟು ಪಾಕಪದ್ಧತಿ ಮುಂತಾದವುಗಳ ಪ್ರದರ್ಶನ ಮತ್ತು ಮಾರಾಟವನ್ನು 200 ಮಳಿಗೆಗಳ ಮೂಲಕ ಪ್ರದರ್ಶಿಸಲಾಗುವುದು ಎಂದರು.
28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1000 ಕ್ಕೂ ಹೆಚ್ಚು ಬುಡಕಟ್ಟು ಕುಶಲಕರ್ಮಿಗಳು ಮತ್ತು ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬುಡಕಟ್ಟು ಅಡುಗೆಯವರು ಸೇರಿರುತ್ತಾರೆ, ಇದಕ್ಕಾಗಿ 20 ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಸಿರಿಧಾನ್ಯಗಳು ಬುಡಕಟ್ಟು ಸಮುದಾಯಗಳ ಆಹಾರದ ಅವಿಭಾಜ್ಯ ಅಂಗವಾಗಿದೆ. ಇದಲ್ಲದೆ, ಭಾರತ ಸರ್ಕಾರದ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದೆ. ಇದರ ಅಂಗವಾಗಿ ಮತ್ತು ಜಾಗೃತಿ ಮೂಡಿಸಲು ಹಾಗೂ ಬುಡಕಟ್ಟು ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು, ದೇಶಾದ್ಯಂತದ ಬುಡಕಟ್ಟು ಕುಶಲಕರ್ಮಿಗಳನ್ನು ಸಿರಿಧಾನ್ಯ (ಶ್ರೀ ಅನ್ನ) ಉತ್ಪನ್ನಗಳು ಮತ್ತು ಪಾಕಪದ್ಧತಿಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಆಹ್ವಾನಿಸಲಾಗಿದೆ ಎಂದರು.
ವನ ಧನ್ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕಾಗಿ ವಿಶೇಷ ಪೆವಿಲಿಯನ್ ತೆರೆಯಲು ಉದ್ದೇಶಿಸಲಾಗಿದೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 39 ವನ ಧನ್ ವಿಕಾಸ ಕೇಂದ್ರಗಳು ಈ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಉತ್ಸವದ ಇತರ ಮುಖ್ಯಾಂಶಗಳು ಹೀಗಿವೆ:
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಗ್ಯಾಲರಿ
ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ (ಎನ್.ಸಿ.ಎಸ್.ಟಿ.) ಮೂಲಕ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಗಾಥೆಗಳು ಮತ್ತು ಎನ್.ಸಿ.ಜೆಡ್.ಸಿ.ಸಿ ಮೂಲಕ ದಿನಕ್ಕೆ ಎರಡು ಬಾರಿ ಅವರ ಕಥೆಗಳನ್ನು ನಿರೂಪಿಸುವುದು.
ಇ.ಎಂ.ಆರ್.ಎಸ್.
ವಿವಿಧ ಕ್ಷೇತ್ರಗಳಲ್ಲಿ ಮತ್ತು ಇಎಂಆರ್.ಎಸ್ ಶಾಲೆಗಳಲ್ಲಿನ ಉನ್ನತ ಸಾಧಕರ, ಹಳೆಯ ವಿದ್ಯಾರ್ಥಿಗಳ ಬಗ್ಗೆ ನ್ಯಾಷನಲ್ ಎಜುಕೇಷನಲ್ ಸೊಸೈಟಿಯಿಂದ ಶೈಕ್ಷಣಿಕ ಮತ್ತು ತಂತ್ರಜ್ಞಾನ ಚಾಲಿತ ಮಧ್ಯಸ್ಥಿಕೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲಾಗುದು. 2023ರ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರಥಮ ಬಹುಮಾನವನ್ನು ಪಡೆದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಗಣರಾಜ್ಯೋತ್ಸವ ಸ್ತಬ್ಧಚಿತ್ರವನ್ನು ಸಹ ಪ್ರದರ್ಶಿಸಲಾಗುವುದು.
ಎನ್.ಎಸ್.ಟಿ.ಎಫ್.ಡಿ.ಸಿ.
ಬುಡಕಟ್ಟು ಉದ್ಯಮಿಗಳು ಮತ್ತು ಬುಡಕಟ್ಟು ನವೋದ್ಯಮಗಳು ಸೇರಿದಂತೆ ಪರಿಶಿಷ್ಟ ಪಂಗಡಗಳಿಗೆ ಒದಗಿಸಲಾಗುತ್ತಿರುವ ವಿವಿಧ ಯೋಜನೆಗಳು ಮತ್ತು ಆರ್ಥಿಕ ನೆರವಿನ ಬಗ್ಗೆ ಎನ್.ಎಸ್.ಟಿ.ಎಫ್.ಡಿ.ಸಿ.ಯಿಂದ ಮಾಹಿತಿಯ ಪ್ರಸರಣ.
ಅಂಚೆ ಇಲಾಖೆ
ಬುಡಕಟ್ಟು ಜನಾಂಗದವರ ಅಂಚೆ ಚೀಟಿ ಪ್ರದರ್ಶನ ಸೇರಿದಂತೆ ದೂರದ ಪ್ರದೇಶಗಳಲ್ಲಿ ಅವರ ಯೋಜನೆಯನ್ನು ಪ್ರದರ್ಶಿಸಲಾಗುವುದು.
ದೇಶದ ಸುಮಾರು 20 ರಾಜ್ಯಗಳ ಬುಡಕಟ್ಟು ಆಚರಣೆಗಳು, ಸುಗ್ಗಿ, ಹಬ್ಬಗಳು, ಸಮರ ಕಲೆಗಳು ಇತ್ಯಾದಿಗಳ ಆಧಾರದ ಮೇಲೆ ಸುಮಾರು 500 ಬುಡಕಟ್ಟು ಕಲಾವಿದರು ಬುಡಕಟ್ಟು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲಿದ್ದಾರೆ. ವಿವಿಧ ರಾಜ್ಯಗಳ ಪ್ರದರ್ಶನಗಳು ಕಾರ್ಯಕ್ರಮದ ಅವಧಿಯಲ್ಲಿ ಶ್ರೀಮಂತ ಬುಡಕಟ್ಟು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಿವೆ.
ಪ್ರಮುಖ ನಗರಗಳಲ್ಲಿ ಆದಿ ಮಹೋತ್ಸವವನ್ನು ಆಯೋಜಿಸುವ ಪರಿಕಲ್ಪನೆಯು ಮಧ್ಯವರ್ತಿಗಳನ್ನು ತೊಡೆದುಹಾಕುವ ಮೂಲಕ ಮತ್ತು ದೊಡ್ಡ ಮಾರುಕಟ್ಟೆಗಳಿಗೆ ನೇರ ಪ್ರವೇಶವನ್ನು ಒದಗಿಸುವ ಮೂಲಕ ಬುಡಕಟ್ಟು ಕುಶಲಕರ್ಮಿಗಳಿಗೆ ವರದಾನವೆಂದು ಸಾಬೀತಾಗಿದೆ.
ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಂಸ್ಥೆಯಾದ ಟ್ರೈಫೆಡ್, ದೊಡ್ಡ ಮಹಾನಗರಗಳು ಮತ್ತು ರಾಜ್ಯ ರಾಜಧಾನಿಗಳಲ್ಲಿ ಬುಡಕಟ್ಟು ನುರಿತ-ಕುಶಲಕರ್ಮಿಗಳು ಮತ್ತು ಮಹಿಳೆಯರಿಗೆ ನೇರ ಮಾರುಕಟ್ಟೆ ಪ್ರವೇಶವನ್ನು ಒದಗಿಸಲು "ಆದಿ ಮಹೋತ್ಸವ - ರಾಷ್ಟ್ರೀಯ ಬುಡಕಟ್ಟು ಉತ್ಸವ" ವನ್ನು ಆಯೋಜಿಸುತ್ತಿದೆ.
*****
(Release ID: 1899140)
Visitor Counter : 238