ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಭೌತಚಿಕಿತ್ಸಾ ತಜ್ಞ (ಫಿಸಿಯೊಥೆರಪಿಸ್ಟ್)ರ ಸಂಘಟನೆಯ 60ನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾಡಲಾದ ಭಾಷಣ

Posted On: 11 FEB 2023 10:30AM by PIB Bengaluru

ನಮಸ್ಕಾರ!

ಭಾರತೀಯ ಭೌತಚಿಕಿತ್ಸಾ ತಜ್ಞರ ಸಂಘಟನೆಯ 60ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ನಿಮ್ಮೆಲ್ಲರಿಗೂ ಶುಭ ಕಾಮನೆಗಳು.

ವೈದ್ಯಕೀಯ ಕ್ಷೇತ್ರದ ಹಲವು ಪ್ರಮುಖ ವೃತ್ತಿಪರರು ಅಹಮದಾಬಾದ್‌ನಲ್ಲಿ ಒಂದುಗೂಡುತ್ತಿರುವುದು ನನಗೆ ಖುಷಿ ತಂದಿದೆ. ಯಾವುದೇ ಗಾಯ ಅಥವಾ ನೋವು ಇರಲಿ, ಅದು ಯುವಕರೇ ಆಗಿರಲಿ ಅಥವಾ ವೃದ್ಧರೇ ಆಗಿರಲಿ, ಕ್ರೀಡಾಪಟುಗಳೇ ಆಗಿರಲಿ ಅಥವಾ ಫಿಟ್‌ನೆಸ್ ಉತ್ಸಾಹಿಗಳೇ ಆಗಿರಲಿ, ಫಿಸಿಯೋಥೆರಪಿಸ್ಟ್‌ಗಳು ಅಥವಾ ಭೌತಚಿಕಿತ್ಸಾ ತಜ್ಞರು ಯಾವಾಗಲೂ ಎಲ್ಲ ವಯಸ್ಸಿನ ಜನರ ಮಿತ್ರರಾಗುವ ಮೂಲಕ ಅವರ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಸನ್ನದ್ಧರಾಗಿರುತ್ತಾರೆ. ಕಷ್ಟದ ಸಮಯದಲ್ಲಿ ನೀವು ಭರವಸೆಯ ಸಂಕೇತವಾಗುತ್ತೀರಿ. ನೀವು ಪುಟಿದೇಳುವ ಸಂಕೇತವಾಗುತ್ತೀರಿ. ನೀವು ಚೇತರಿಕೆಯ ಸಂಕೇತವಾಗಿದ್ದೀರಿ, ಏಕೆಂದರೆ ಒಬ್ಬ ವ್ಯಕ್ತಿಯು ಇದ್ದಕ್ಕಿದ್ದಂತೆ ಗಾಯಗೊಂಡಾಗ ಅಥವಾ ಅಪಘಾತಕ್ಕೆ ಬಲಿಯಾದಾಗ, ಅದು ಅವನಿಗೆ ದೈಹಿಕ ಆಘಾತ ಮಾತ್ರವಲ್ಲ, ಮಾನಸಿಕ ಮತ್ತು ಮನೋವೈಜ್ಞಾನಿಕ ಸವಾಲಾಗಿದೆ. ಅಂತಹ ಕಷ್ಟದ ಸಮಯದಲ್ಲಿ, ಫಿಸಿಯೋಥೆರಪಿಸ್ಟ್‌ಗಳು ಅವರಿಗೆ ಚಿಕಿತ್ಸೆ ಕೊಡುವುದಲ್ಲದೆ, ಪ್ರೋತ್ಸಾಹವನ್ನೂ ನೀಡುತ್ತಾರೆ.

ಸ್ನೇಹಿತರೆ,

ಪದೇಪದೆ, ನಿಮ್ಮ ವೃತ್ತಿ ಮತ್ತು ವೃತ್ತಿಪರತೆಯಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ಸವಾಲುಗಳಿಗಿಂತ ನಿಮ್ಮ ಆಂತರಿಕ ಶಕ್ತಿ ಪ್ರಬಲವಾಗಿದೆ ಎಂಬುದನ್ನು ನಿಮ್ಮ ಕ್ಷೇತ್ರದಲ್ಲಿ ನೀವು ಕಲಿತಿರಬೇಕು. ಸ್ವಲ್ಪ ಪ್ರೋತ್ಸಾಹ ಮತ್ತು ಬೆಂಬಲ ಸಿಕ್ಕರೆ, ಜನರು ಅತ್ಯಂತ ಕಷ್ಟಕರ ಸವಾಲುಗಳನ್ನು ಸಹ ಜಯಿಸಬಹುದು. ಆಡಳಿತದಲ್ಲೂ ಇದೇ ರೀತಿಯದ್ದನ್ನು ಕಾಣಬಹುದು. ನಮ್ಮ ದೇಶದ ಬಡ ಜನರಿಗೆ ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಬೆಂಬಲದ ಅಗತ್ಯವಿದೆ. ಬ್ಯಾಂಕ್ ಖಾತೆ ತೆರೆಯುವುದು, ಶೌಚಾಲಯಗಳನ್ನು ನಿರ್ಮಿಸುವುದು, ಜನರಿಗೆ ನಲ್ಲಿ ನೀರು ಒದಗಿಸುವುದು ಸೇರಿದಂತೆ ಅನೇಕ ಅಭಿಯಾನಗಳ ಮೂಲಕ ನಾವು ಜನರನ್ನು ಬೆಂಬಲಿಸಿದ್ದೇವೆ. ನಮ್ಮ ಸರ್ಕಾರದಿಂದ ಆಯುಷ್ಮಾನ್ ಭಾರತ್ ಯೋಜನೆ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ದೇಶದಲ್ಲಿ ಬಲವಾದ ಸಾಮಾಜಿಕ ಭದ್ರತಾ ಜಾಲ ರಚಿಸಲಾಗಿದೆ. ಈ ಯೋಜನೆಗಳ ಫಲಿತಾಂಶಗಳನ್ನು ನಾವು ಇಂದು ನೋಡಬಹುದು. ಇಂದು ದೇಶದ ಬಡ ಮತ್ತು ಮಧ್ಯಮ ವರ್ಗದ ಜನರು ದೊಡ್ಡ ಕನಸುಗಳನ್ನು ಕಾಣುವ ಮತ್ತು ಅವುಗಳನ್ನು ಈಡೇರಿಸುವ ಧೈರ್ಯ ಹೊಂದಲು ಸಮರ್ಥರಾಗಿದ್ದಾರೆ. ಇಂದು, ಅವರು ತಮ್ಮ ಸ್ವಂತ ತಾಕತ್ತಿನಿಂದ ಹೊಸ ಎತ್ತರಕ್ಕೆ ಏರಲು ಸಮರ್ಥರಾಗಿದ್ದಾರೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸುತ್ತಿದ್ದಾರೆ.

ಸ್ನೇಹಿತರೆ,

ರೋಗಿಗೆ ಮತ್ತೆ ಮತ್ತೆ ಚಿಕಿತ್ಸೆ ಅಥವಾ ಶುಶ್ರೂಷೆಯ ಅಗತ್ಯವಿಲ್ಲ ಎಂಬ ಭಾವನೆ ಮೂಡಿದರೆ ಅವರೇ  ಉತ್ತಮ ಭೌತಚಿಕಿತ್ಸಾ ತಜ್ಞ ಎಂದು ಹೇಳಲಾಗುತ್ತದೆ. ಒಂದು ರೀತಿಯಲ್ಲಿ, ನಿಮ್ಮ ವೃತ್ತಿಯು ಸ್ವಾವಲಂಬನೆಯ ಮಹತ್ವ ಕಲಿಸುತ್ತದೆ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಿಮ್ಮ ಗುರಿ ಎಂದು ನಾವು ಹೇಳಬಹುದು. ಇಂದು ಭಾರತವು ಸ್ವಾವಲಂಬನೆಯತ್ತ ಸಾಗುತ್ತಿರುವಾಗ, ನಿಮ್ಮ ವೃತ್ತಿಯಲ್ಲಿರುವ ಜನರು ನಮ್ಮ ದೇಶದ ಭವಿಷ್ಯಕ್ಕೆ ಏಕೆ ಅಗತ್ಯ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಮುಖ್ಯವಾಗಿ, ವೈದ್ಯರು ಮತ್ತು ಭೌತಚಿಕಿತ್ಸೆಯ ಅಗತ್ಯವಿರುವ ಜನರು ಅಥವಾ ರೋಗಿಗಳು ಒಟ್ಟಿಗೆ ಕೆಲಸ ಮಾಡಿದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಭೌತಚಿಕಿತ್ಸಾ ತಜ್ಞನಿಗೆ ತಿಳಿದಿದೆ. ಆದ್ದರಿಂದ, ಅಭಿವೃದ್ಧಿಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡುವ ಸರ್ಕಾರದ ಪ್ರಯತ್ನಗಳ ಮಹತ್ವವನ್ನು ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಸ್ವಚ್ಛ ಭಾರತ, ಬೇಟಿ ಬಚಾವೋ, ಬೇಟಿ ಪಢಾವೋ ಮತ್ತು ಇತರ ಅನೇಕ ಉಪಕ್ರಮಗಳ ಯಶಸ್ಸಿನಲ್ಲಿ ಸಾರ್ವಜನಿಕ ಸಹಭಾಗಿತ್ವದ ಈ ಮನೋಭಾವವು ಗೋಚರಿಸುತ್ತದೆ.

ಸ್ನೇಹಿತರೆ,

ಫಿಸಿಯೋಥೆರಪಿಯ ತತ್ವಾದರ್ಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ದೇಶಕ್ಕೂ ಹಲವು ಪ್ರಮುಖ ಸಂದೇಶಗಳು ಅಡಗಿವೆ. ಉದಾಹರಣೆಗೆ, ಭೌತಚಿಕಿತ್ಸೆಯ ಮೊದಲ ಸ್ಥಿತಿ ಸ್ಥಿರತೆಯಾಗಿದೆ! ಸಾಮಾನ್ಯವಾಗಿ, ಜನರು ಉತ್ಸಾಹದಿಂದ 2-3 ದಿನಗಳವರೆಗೆ ವ್ಯಾಯಾಮ ಮಾಡುತ್ತಾರೆ, ಆದರೆ ಶೀಘ್ರದಲ್ಲೇ ಅವರ ಉತ್ಸಾಹವು ಕ್ರಮೇಣ ಕಡಿಮೆಯಾಗುತ್ತದೆ. ಆದರೆ, ಭೌತಚಿಕಿತ್ಸಕರಾಗಿ, ಸ್ಥಿರತೆ ಇಲ್ಲದೆ ಫಲಿತಾಂಶಗಳು ಬರುವುದಿಲ್ಲ ಎಂದು ನಿಮಗೆ ತಿಳಿದಿದೆ. ಅಗತ್ಯವಿರುವ ವ್ಯಾಯಾಮಗಳನ್ನು ಯಾವುದೇ ಅಂತರವಿಲ್ಲದೆ ಮಾಡಬೇಕಾಗುತ್ತದೆ ಎಂದು ನೀವು ಖಚಿತಪಡಿಸುತ್ತೀರಿ. ಇಂತಹ ನಿರಂತರತೆ ಮತ್ತು ದೃಢವಿಶ್ವಾಸ ನಮ್ಮ ದೇಶಕ್ಕೂ ಅಗತ್ಯ. ನಮ್ಮ ನೀತಿಗಳಲ್ಲಿ ಸ್ಥಿರತೆ ಇರಬೇಕು, ಅವುಗಳನ್ನು ಕಾರ್ಯಗತಗೊಳಿಸುವ ಬಲವಾದ ಇಚ್ಛಾಶಕ್ತಿ ಇರಬೇಕು, ಆಗ ಮಾತ್ರ ದೇಶದ ಎಲ್ಲ ಅಗತ್ಯಗಳು ಈಡೇರುತ್ತವೆ ಮತ್ತು ದೇಶವು ಎದ್ದು ನಿಂತು ದೀರ್ಘ ಜಿಗಿತ ಸಾಧಿಸುತ್ತದೆ.

ಸ್ನೇಹಿತರೆ,

ದೇಶವು ಪ್ರಸ್ತುತ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿದೆ. 75 ವರ್ಷಗಳಿಂದ ಕಾಯುತ್ತಿದ್ದ ಈ ಅಮೃತ ಮಹೋತ್ಸವದಲ್ಲಿ ದೇಶದ ಎಲ್ಲ ಫಿಸಿಯೋಥೆರಪಿಸ್ಟ್‌ಗಳಿಗೆ ನಮ್ಮ ಸರ್ಕಾರ ಉಡುಗೊರೆ ನೀಡಿರುವುದು ಸಂತಸ ತಂದಿದೆ. ಈ ಕಾಯುವಿಕೆ - ಫಿಸಿಯೋಥೆರಪಿಯನ್ನು ವೃತ್ತಿಯಾಗಿ ಗುರುತಿಸುವುದಕ್ಕಾಗಿ. ಅಂತೂ ನಮ್ಮ ಸರ್ಕಾರ ನಿಮ್ಮ ಕಾಯುವಿಕೆಗೆ ಕೊನೆ ಹಾಡಿದೆ. ಆರೋಗ್ಯ ಸಂಬಂಧಿತ ಮತ್ತು ಆರೋಗ್ಯ ಸಂರಕ್ಷಣಾ ವೃತ್ತಿಗಳ ರಾಷ್ಟ್ರೀಯ ಆಯೋಗದ ವಿಧೇಯಕ ತರುವ ಮೂಲಕ, ನಿಮ್ಮ ಗೌರವ ಮತ್ತು ಘನತೆ ಹೆಚ್ಚಿಸಲು ನಮಗೆ ಅವಕಾಶ ಸಿಕ್ಕಿದೆ. ಇದು ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ನಿಮ್ಮ ಪ್ರಮುಖ ಕೊಡುಗೆಯನ್ನು ಗುರುತಿಸಿದೆ. ಇದು ನಿಮ್ಮೆಲ್ಲರಿಗೂ ಭಾರತದಲ್ಲಿ ಮತ್ತು ವಿದೇಶದಲ್ಲಿ ಕೆಲಸ ಮಾಡಲು ಸುಲಭವಾಗಿಸಿದೆ. ಸರ್ಕಾರವು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಜಾಲಕ್ಕೆ ಫಿಸಿಯೋಥೆರಪಿಸ್ಟ್‌ಗಳನ್ನು ಕೂಡ ಸೇರಿಸಿದೆ. ಇದು ನಿಮಗೆ ರೋಗಿಗಳನ್ನು  ತಲುಪಲು ಸುಲಭವಾಗಿದೆ. ಇಂದು ಖೇಲೋ ಇಂಡಿಯಾ ಆಂದೋಲನದ ಜತೆಗೆ ಫಿಟ್ ಇಂಡಿಯಾ ಆಂದೋಲನವೂ ದೇಶದಲ್ಲಿ ಮುನ್ನಡೆಯುತ್ತಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆ ನೇರವಾಗಿ ಫಿಸಿಯೋಥೆರಪಿಸ್ಟ್‌ಗಳಿಗೆ ಸಂಬಂಧಿಸಿದೆ. ದೇಶದ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಕ್ರೀಡಾ ಮೂಲಸೌಕರ್ಯಗಳು ಅಭಿವೃದ್ಧಿ ಹೊಂದುತ್ತಿರುವಂತೆ ಈಗ ನೀವು ಸಹ ಬೆಳವಣಿಗೆ ಕಾಣುತ್ತಿದ್ದೀರಿ. ಮೊದಲು ನಾವು ಕುಟುಂಬ ವೈದ್ಯರನ್ನು ಹೊಂದಿದ್ದೆವು. ಅದೇ ರೀತಿ ಈಗ ಫ್ಯಾಮಿಲಿ ಫಿಸಿಯೋಥೆರಪಿಸ್ಟ್ ಗಳೂ ಇದ್ದಾರೆ. ಇದು ನಿಮಗೆ ಹೊಸ ಸಾಧ್ಯತೆಗಳನ್ನು ಸಹ ಸೃಷ್ಟಿಸುತ್ತಿದೆ.

ಸ್ನೇಹಿತರೆ,

ನಮ್ಮ ಸಮಾಜಕ್ಕೆ ಮತ್ತು ನಿಮ್ಮ ರೋಗಿಗಳಿಗೆ ನೀವು ನೀಡುತ್ತಿರುವ  ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ಆದರೆ ನಿಮ್ಮಲ್ಲಿ ನನ್ನದು ಒಂದು ವಿನಂತಿ ಇದೆ. ಈ ವಿನಂತಿಯು ನಿಮ್ಮ ಸಮ್ಮೇಳನದ ವಿಷಯಕ್ಕೂ ಸಂಬಂಧಿಸಿದ್ದಾಗಿದೆ ಮತ್ತು ಫಿಟ್ ಇಂಡಿಯಾ ಆಂದೋಲನಕ್ಕೂ ಸಂಬಂಧಿಸಿದ್ದಾಗಿದೆ. ಸರಿಯಾದ ಭಂಗಿಗಳು, ಸರಿಯಾದ ಅಭ್ಯಾಸಗಳು, ಸಮರ್ಪಕ ವ್ಯಾಯಾಮಗಳು ಮತ್ತು ಅವುಗಳ ಪ್ರಾಮುಖ್ಯದ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ನೀವು ಹೊರಬಹುದೆ? ಫಿಟ್ನೆಸ್ ಬಗ್ಗೆ ಜನರು ಸರಿಯಾದ ವಿಧಾನವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಲೇಖನಗಳು ಮತ್ತು ಉಪನ್ಯಾಸಗಳ ಮೂಲಕ ನೀವು ಇದನ್ನು ಮಾಡಬಹುದು. ನನ್ನ ಯುವ ಸ್ನೇಹಿತರು ಇದನ್ನು ರೀಲ್‌ಗಳ ಮೂಲಕ (ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ) ಸಹ ಮಾಡಬಹುದು.

ಸ್ನೇಹಿತರೆ,

ನಾನು ಫಿಸಿಯೋಥೆರಪಿಸ್ಟ್‌ಗಳ ಸೇವೆಯನ್ನು ಪ್ರಸ್ತಾಪಿಸಬೇಕಾಗುತ್ತದೆ. ನನ್ನ ಅನುಭವದ ಆಧಾರದ ಮೇಲೆ, ನಾನು ನಿಮಗೆ ಇನ್ನೊಂದು ವಿಷಯ ಹೇಳಲು ಬಯಸುತ್ತೇನೆ. ಯೋಗದ ಪರಿಣತಿಯನ್ನು ಫಿಸಿಯೋಥೆರಪಿಯೊಂದಿಗೆ ಸಂಯೋಜಿಸಿದಾಗ, ಅದರ ಶಕ್ತಿ ಮತ್ತು ಫಲಿತಾಂಶ ಅನೇಕ ಪಟ್ಟು ಹೆಚ್ಚಾಗುತ್ತದೆ ಎಂಬುದು ನನ್ನ ಅನುಭವ. ಸಾಮಾನ್ಯವಾಗಿ ಭೌತಚಿಕಿತ್ಸೆಯ ಅಗತ್ಯವಿರುವ ದೇಹದ ಸಾಮಾನ್ಯ ಸಮಸ್ಯೆಗಳನ್ನು ಕೆಲವೊಮ್ಮೆ ಯೋಗ ಮತ್ತು ಆಸನಗಳ (ದೇಹದ ಭಂಗಿಗಳು) ಮೂಲಕವೂ ಗುಣಪಡಿಸಬಹುದು. ಆದ್ದರಿಂದ, ನೀವು ಫಿಸಿಯೋಥೆರಪಿ ಜತೆಗೆ ಯೋಗಾಭ್ಯಾಸ ಅಥವಾ ಯೋಗಾಸನ ತಿಳಿದಿದ್ದರೆ, ನಿಮ್ಮ ವೃತ್ತಿಪರ ಸಾಮರ್ಥ್ಯ ಇನ್ನೂ ಹೆಚ್ಚಾಗುತ್ತದೆ.

ಸ್ನೇಹಿತರೆ,

ಭಾರತದಲ್ಲಿ ನಿಮ್ಮ ವೃತ್ತಿ ಅಭ್ಯಾಸದ ಹೆಚ್ಚಿನ ಭಾಗವು ಹಿರಿಯರ ಆರೈಕೆಗೆ ಮೀಸಲಾಗಿದೆ. ರೋಗಿಗಳ ಆರೈಕೆಯಲ್ಲಿ ನಿಮ್ಮ ಅನುಭವ ಮತ್ತು ನಿಮ್ಮ ಪ್ರಾಯೋಗಿಕ ತಿಳಿವಳಿಕೆ ಬಹಳಷ್ಟು ಮುಖ್ಯವಾಗಿದೆ. ನಿಮ್ಮ ಅನುಭವಗಳನ್ನು ಸಂಪೂರ್ಣವಾಗಿ ದಾಖಲಿಸಲು ಮತ್ತು ಧಾರೆ ಎರೆಯಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಜಗತ್ತಿನಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವಂತೆ, ಅವರನ್ನು ನೋಡಿಕೊಳ್ಳುವುದು ಹೆಚ್ಚು ಸವಾಲಿನ ಕೆಲಸವಾಗಿದೆ ಮತ್ತು ದುಬಾರಿಯಾಗುತ್ತಿದೆ. ಶೈಕ್ಷಣಿಕ ಪತ್ರಿಕೆಗಳು ಮತ್ತು ಪ್ರಸ್ತುತಿಗಳ ರೂಪದಲ್ಲಿ ನಿಮ್ಮ ಅನುಭವ ಸಾದರಪಡಿಸುವುದು ಇಡೀ ಜಗತ್ತಿಗೆ ತುಂಬಾ ಉಪಯುಕ್ತವಾಗಿದೆ. ಇದರಿಂದ ಭಾರತೀಯ ಭೌತಚಿಕಿತ್ಸಾ ತಜ್ಞನ ಕೌಶಲ್ಯವು ಮುನ್ನೆಲೆಗೆ ಬರಲಿದೆ.

ಸ್ನೇಹಿತರೆ,

ಟೆಲಿಮೆಡಿಸಿನ್ ಮತ್ತೊಂದು ಸಮಸ್ಯೆಯಾಗಿದೆ. ನೀವು ವೀಡಿಯೊ ಮೂಲಕ ಸಮಾಲೋಚನೆಯ ವಿಧಾನಗಳನ್ನು ಸಹ ಅಭಿವೃದ್ಧಿಪಡಿಸಬೇಕು. ಕೆಲವೊಮ್ಮೆ ಇದು ತುಂಬಾ ಸಹಾಯಕ ಎಂಬುದು ಸಾಬೀತಾಗಿದೆ. ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇಂತಹ ಅನಾಹುತದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಫಿಸಿಯೋಥೆರಪಿಸ್ಟ್ ಗಳ ಅವಶ್ಯಕತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ನೀವೆಲ್ಲರೂ ಮೊಬೈಲ್ ಫೋನ್ ಮೂಲಕ ಅನೇಕ ರೀತಿಯಲ್ಲಿ ಸಹಾಯ ಮಾಡಬಹುದು. ಫಿಸಿಯೋಥೆರಪಿಸ್ಟ್ ಅಸೋಸಿಯೇಷನ್ ಈ ಬಗ್ಗೆ ಯೋಚಿಸಬೇಕು. ನಿಮ್ಮಂತಹ ಪರಿಣತರು ಮತ್ತು ತಜ್ಞರ ನಾಯಕತ್ವದಲ್ಲಿ ಭಾರತ ಫಿಟ್ ಆಗುವುದರ ಜತೆಗೆ ಸೂಪರ್ ಹಿಟ್ ಆಗುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು. ಧನ್ಯವಾದ!

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದ ಇದಾಗಿದೆ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

*****



(Release ID: 1898585) Visitor Counter : 134