ಗೃಹ ವ್ಯವಹಾರಗಳ ಸಚಿವಾಲಯ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶ್ರೀ ಸ್ವಾಮಿನಾರಾಯಣ ಸಂಸ್ಥಾನ ವಡ್ತಾಲ್ ನಿರ್ಮಿಸಿರುವ ಎಸ್.ಜಿಎಂಎಲ್ ಕಣ್ಣಿನ ಆಸ್ಪತ್ರೆಯನ್ನಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ದೇಶದ 80 ಕೋಟಿ ಬಡವರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಿರುವುದು ಮಾತ್ರವಲ್ಲದೆ, ವೈದ್ಯಕೀಯ ಕಾಲೇಜುಗಳು, ಎಂಬಿಬಿಎಸ್ ಸೀಟುಗಳು ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಸಹ ಹೆಚ್ಚಿಸಿದ್ದಾರೆ

ಶ್ರೀ ಸ್ವಾಮಿನಾರಾಯಣ ಸಂಸ್ಥಾನ ವಡ್ತಾಳ್  ಭಗವಾನ್ ಸ್ವಾಮಿನಾರಾಯಣ್  ಅವರು ತೋರಿಸಿದ ಸಾರ್ವಜನಿಕ ಕಲ್ಯಾಣದ ಹಾದಿಯಲ್ಲಿ ಸಾಗಿದ್ದು, ಜನರಿಗೆ ಅಗ್ಗದ ದರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ

 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಡ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ನೇತ್ರ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ

ಭಗವಾನ್ ಸ್ವಾಮಿನಾರಾಯಣ್ ಅವರು ದೇಶಾದ್ಯಂತ ಸಂಚರಿಸುವ ಮೂಲಕ ಜ್ಞಾನವನ್ನು ಸಂಪಾದಿಸಿ, ಅದನ್ನು ಜನರಲ್ಲಿ ಪ್ರಚುರ ಪಡಿಸಿದರು ಮತ್ತು ಅವರು ಇಡೀ ಜಗತ್ತಿನ ಕಲ್ಯಾಣಕ್ಕಾಗಿ, ವಿಶೇಷವಾಗಿ ಗುಜರಾತ್ ಗಾಗಿ ಸಾಕಷ್ಟು ಕೆಲಸ ಮಾಡಿದರು

ಸ್ವಾಮಿನಾರಾಯಣ ಪಂಥವು ಅನೇಕ ರೀತಿಯ ಸಾಮಾಜಿಕ ಸೇವೆಗಳನ್ನು ಮಾಡಿದೆ, ಗುಜರಾತ್ ನ ಸ್ವಾಮಿನಾರಾಯಣ ಪಂಥದ ಅನೇಕ ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ, ಈ ಪಂಥವು ದೇಶದ ಕೋಟ್ಯಂತರ ಯುವಕರಿಗೆ ಮಾದಕ ದ್ರವ್ಯ ವ್ಯಸನದಿಂದ ಹೊರಬರಲು ಸಹಾಯ ಮಾಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ

ಭಗವಾನ್ ಸ್ವಾಮಿನಾರಾಯಣರಿಗೆ ವ್ಯಸನ ಮುಕ್ತಿ ಪ್ರಮುಖ ವಿಷಯವಾಗಿತ್ತು, ಅದನ್ನು ಅವರು ಧರ್ಮದೊಂದಿಗೆ ಸಂಯೋಜಿಸುವ ಮೂಲಕ, ಜನರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಅವರು ಬೃಹತ್ ಅಭಿಯಾನವನ್ನು ಪ್ರಾರಂಭಿಸಿದ್ದರು

ಮಹಾತ್ಮಾ ಗಾಂಧಿಯವರ 75ನೇ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಶ್ರೀ ಅಮಿತ್ ಶಾ; ಬಾಪೂ ಅವರು ಭಾರತದ ಅಹಿಂಸೆಯ ಸಂದೇಶವನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಿದ್ದಲ್ಲದೆ, ಅದನ್ನು ಸ್ಥಾಪಿಸಿದರು ಎಂದು ಹೇಳಿಕೆ

Posted On: 30 JAN 2023 4:53PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶ್ರೀ ಸ್ವಾಮಿನಾರಾಯಣ ಸಂಸ್ಥಾನ ವಡ್ತಾಲ್ ನಿರ್ಮಿಸಿರುವ ಎಸ್.ಜಿಎಂಎಲ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಅಮಿತ್ ಶಾ ಅವರು ಮಹಾತ್ಮಾ ಗಾಂಧಿಯವರ 75 ನೇ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಬಾಪೂ ಅವರು ಭಾರತದ ಅಹಿಂಸೆಯ ಸಂದೇಶವನ್ನು ವಿಶ್ವದಾದ್ಯಂತ ಪ್ರಚಾರ ಮಾಡಿದ್ದಲ್ಲದೆ, ಅದನ್ನು ಸ್ಥಾಪಿಸಿದರು ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಉಜ್ಜಯಿನಿ ಧಾಮ್ ಸದಾ ದೇಶದ ಕೋಟ್ಯಂತರ ಭಕ್ತರಿಗೆ ಶ್ರದ್ಧೆಯ ಕೇಂದ್ರವಾಗಿದೆ ಮತ್ತು ವೇದಗಳ ಕಾಲದಿಂದಲೂ ಮಹಾಕಾಲ್ ದೇವಾಲಯವು ನಮ್ಮ ದೇಶದ ಇತಿಹಾಸದಲ್ಲಿ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಉಜ್ಜಯಿನಿಯ ಅನೇಕ ದೇವಾಲಯಗಳು ಇಡೀ ವಿಶ್ವದ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿವೆ ಮತ್ತು ಇತ್ತೀಚೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಜ್ಜಯಿನಿಯ ಭವ್ಯತೆ ಮತ್ತು ಅದರ ನಂಬಿಕೆಯನ್ನು ಮರುಸ್ಥಾಪಿಸಲು 'ಮಹಾಕಾಲ್ ಲೋಕ್' ನ ಭವ್ಯ ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ ಎಂದು ಅವರು ಹೇಳಿದರು. ಮಹಾಕಾಲ್ ಲೋಕದ ನಿರ್ಮಾಣದೊಂದಿಗೆ, ದೇಶಾದ್ಯಂತ ಕೋಟ್ಯಂತರ ಜನರ ಭಕ್ತಿಯ ಕೇಂದ್ರವು ಇನ್ನಷ್ಟು ಬಲಗೊಂಡಿದೆ ಎಂದರು.

ಇಂದು ಇಲ್ಲಿ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಗವಾನ್ ಸ್ವಾಮಿನಾರಾಯಣರು ಉತ್ತರ ಪ್ರದೇಶದಿಂದ ಗುಜರಾತಿಗೆ ಬಂದು ಅಲ್ಲಿ ಶಾಶ್ವತವಾಗಿ ನೆಲೆಸಿದ್ದರು ಮತ್ತು ದೇಶಾದ್ಯಂತ ಸಂಚರಿಸುವ ಮೂಲಕ ಅವರು ಜ್ಞಾನ ಸಂಪಾದಿಸಿ, 'ವಚನಾಮೃತ' ಮೂಲಕ ಜನರಲ್ಲಿ ಪ್ರಚಾರ ಮಾಡಿದರು ಮತ್ತು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ, ವಿಶೇಷವಾಗಿ ಗುಜರಾತ್ ಜನರ ಕಲ್ಯಾಣಕ್ಕಾಗಿ ಅವರು ಸಾಕಷ್ಟು ಕೆಲಸ ಮಾಡಿದರು ಎಂದು ಅವರು ಹೇಳಿದರು. 200 ವರ್ಷಗಳ ಹಿಂದೆ, ಅವರು ಸ್ವಾಮಿನಾರಾಯಣ ಪಂಥವನ್ನು ಸ್ಥಾಪಿಸಿದರು, ಅದು ಇಂದು ಭಾರತದಲ್ಲಿ ಅಗಾಧವಾಗಿ ಬೆಳೆದಿದೆ ಮತ್ತು ಧ್ರುವ ನಕ್ಷತ್ರದಂತೆ ಪ್ರಕಾಶಿಸುತ್ತಿದೆ ಎಂದು ಶ್ರೀ ಶಾ ಹೇಳಿದರು.

 

ಸ್ವಾಮಿನಾರಾಯಣ ಪಂಥವು ಅನೇಕ ರೀತಿಯ ಸೇವೆಗಳನ್ನು ಒದಗಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಗುಜರಾತ್ ನ ಸ್ವಾಮಿನಾರಾಯಣ ಪಂಥದ ವಿವಿಧ ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ ಎಂದರು. ಸ್ವಾಮಿನಾರಾಯಣ ಪಂಥದ ಗುರುಕುಲಗಳಲ್ಲಿ ಧಾರ್ಮಿಕ ನೀತಿಗಳನ್ನು ಬೋಧಿಸುವುದಲ್ಲದೆ ಬಡ ವಿದ್ಯಾರ್ಥಿಗಳಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನೂ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು. ಸ್ವಾಮಿನಾರಾಯಣ ಪಂಥವು ಶಿಕ್ಷಣ ಕ್ಷೇತ್ರದ ಜೊತೆಗೆ ದೇಶದ ಕೋಟ್ಯಂತರ ಯುವಕರಿಗೆ ಮಾದಕ ವ್ಯಸನದಿಂದ ಹೊರಬರಲು ಸಹಾಯ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಅವರು ಹೇಳಿದರು. ಸ್ವಾಮಿ ನಾರಾಯಣ್ ಭಗವಾನ್ ಅವರಿಗೆ ವ್ಯಸನ ಮುಕ್ತಿ ಬಹಳ ಮುಖ್ಯವಾದ ವಿಷಯವಾಗಿತ್ತು, ಅದನ್ನು ಧರ್ಮದೊಂದಿಗೆ ಸಂಯೋಜಿಸುವ ಮೂಲಕ ಜನರನ್ನು ಮಾದಕವಸ್ತುಗಳಿಂದ ಮುಕ್ತಗೊಳಿಸಲು ಅವರು ದೊಡ್ಡ ಅಭಿಯಾನವನ್ನು ಪ್ರಾರಂಭಿಸಿದರು ಎಂದು ಅವರು ಹೇಳಿದರು. ಈ 50 ಹಾಸಿಗೆಗಳ ಕಣ್ಣಿನ ಆಸ್ಪತ್ರೆ ಜನರನ್ನು ವಿವಿಧ ರೀತಿಯ ಕಣ್ಣಿನ ಕಾಯಿಲೆಗಳಿಂದ ಮುಕ್ತಗೊಳಿಸುತ್ತದೆ ಎಂದು ಶ್ರೀ ಶಾ ಹೇಳಿದರು. 15 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ 50 ಹಾಸಿಗೆಗಳ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನದ ಆಸ್ಪತ್ರೆ ಮೂಲಕ ಬಡ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಕಣ್ಣಿನ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ದೇಶದ 80 ಕೋಟಿ ಬಡ ಜನರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ಆರೈಕೆಯನ್ನು ಒದಗಿಸಿರುವುದು ಮಾತ್ರವಲ್ಲದೆ, ವೈದ್ಯಕೀಯ ಕಾಲೇಜುಗಳು, ಎಂಬಿಬಿಎಸ್ ಸೀಟುಗಳು ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಸಹ ಹೆಚ್ಚಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.  ಇಡೀ ಜಗತ್ತಿನಲ್ಲಿ 80 ಕೋಟಿ ಜನರಿಗೆ 5 ಲಕ್ಷ ರೂ.ವರೆಗೆ ಸಂಪೂರ್ಣ ಆರೋಗ್ಯ ರಕ್ಷಣೆ ಭರವಸೆ ಒದಗಿಸುವ ಮೊದಲ ಮತ್ತು ಏಕೈಕ ಉದಾಹರಣೆ ಇದಾಗಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು 387 ರಿಂದ 596 ಕ್ಕೆ ಹೆಚ್ಚಿಸಿದೆ, ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 51,000 ದಿಂದ 89,000 ಕ್ಕೆ ಹೆಚ್ಚಿಸಿದೆ ಮತ್ತು ಪಿಜಿ ಸೀಟುಗಳ ಸಂಖ್ಯೆಯನ್ನು 31,000 ರಿಂದ 60,000 ಕ್ಕೆ ಹೆಚ್ಚಿಸಿದೆ ಎಂದು ಶ್ರೀ ಶಾ ಹೇಳಿದರು. ಕಾಲೇಜುಗಳ ಸಂಖ್ಯೆಯಲ್ಲಿ ಶೇ.55ರಷ್ಟು ಹೆಚ್ಚಳ, ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಒಂದೂವರೆ ಪಟ್ಟು ಹೆಚ್ಚಳ ಮತ್ತು ಎಂಎಸ್ ಮತ್ತು ಎಂಡಿ ಸೀಟುಗಳ ದ್ವಿಗುಣ ಭಾರತದ ಆರೋಗ್ಯ ಮೂಲಸೌಕರ್ಯವನ್ನು ಅಗಾಧವಾಗಿ ಬಲಪಡಿಸುತ್ತದೆ ಎಂದು ಅವರು ಹೇಳಿದರು. ಭಾರತ ಸರ್ಕಾರವು 22 ಹೊಸ ಏಮ್ಸ್ ಗಳನ್ನು ಸ್ಥಾಪಿಸಿದೆ, ಇದು ಬಡವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಶಾ ಹೇಳಿದರು. ಇಡೀ ಭಾರತದಲ್ಲಿ ಮೊದಲ ಬಾರಿಗೆ ಭಾರತೀಯ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಾರಂಭಿಸಿದ್ದಕ್ಕಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಭಿನಂದಿಸಿದ ಶ್ರೀ ಶಾ, ಎಲ್ಲಾ ಎಂಬಿಬಿಎಸ್ ಕೋರ್ಸ್ ಗಳನ್ನು ಸಂಪೂರ್ಣವಾಗಿ ಹಿಂದಿಗೆ ಭಾಷಾಂತರಿಸುವ ಮೂಲಕ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾರತೀಯ ಭಾಷೆಗಳಿಗೆ ಹೊಸ ಆವೇಗವನ್ನು ನೀಡಿದ್ದಾರೆ ಎಂದು ಹೇಳಿದರು.

***(Release ID: 1894815) Visitor Counter : 129