ಕಲ್ಲಿದ್ದಲು ಸಚಿವಾಲಯ

ಮೇಲ್ಮಣ್ಣು ಪದರದಿಂದ (ಓವರ್ ಬರ್ಡನ್) ಎಂ-ಸ್ಯಾಂಡ್ ಉತ್ಪಾದಿಸಲಿರುವ ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್


ಸುಸ್ಥಿರ ಗಣಿಗಾರಿಕೆ ಮತ್ತು 'ತ್ಯಾಜ್ಯದಿಂದ ಸಂಪತ್ತಿನ' ಸೃಷ್ಟಿಯತ್ತ ಗಮನ 

Posted On: 10 JAN 2023 1:04PM by PIB Bengaluru

ಮಿನಿರತ್ನಾ ಕಲ್ಲಿದ್ದಲು ಉತ್ಪಾದಕ ಕಂಪನಿಯಾದ ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎನ್.ಸಿ.ಎಲ್) ತನ್ನ ಅಮ್ಲೋಹ್ರಿ ಯೋಜನೆಯಲ್ಲಿ ಸಿವಿಲ್ ಕಾಮಗಾರಿಗಾಗಿ ಕಟ್ಟಡ ನಿರ್ಮಾಣದಲ್ಲಿ ಬಳಸಲಾಗುವ ಪ್ರಮುಖ ವಸ್ತುವಾದ 'ಎಂ-ಸ್ಯಾಂಡ್' ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಗರಿಷ್ಠಗೊಳಿಸಲು ಮತ್ತು ಗಣಿಗಾರಿಕೆಯ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಕಲ್ಲಿದ್ದಲು ಸಚಿವಾಲಯದ ಮಾರ್ಗದರ್ಶನದ ಅಡಿಯಲ್ಲಿ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದನ್ನು ಈ ಉಪಕ್ರಮದಲ್ಲಿ ಆಳವಡಿಸಿಕೊಳ್ಳಲಾಗಿದೆ. ಪರಿಸರ ಸಮತೋಲನದ ಮೇಲೆ ಗಮನ ಹರಿಸಿ ವ್ಯಾಪಾರ ವೈವಿಧ್ಯದ ಮೇಲೆ ಕಣ್ಣಿಟ್ಟಿರುವ ಈ ಕಂಪನಿಯು ಮೇಲ್ಮಣ್ಣು ಪದರವನ್ನು (ಓವರ್ ಬರ್ಡನ್, ಓ.ಬಿ) ಕಚ್ಚಾ ವಸ್ತುವಾಗಿ ಬಳಸಿಕೊಂಡು ಮರಳು ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ.

ಕಂಪನಿಯ ಈ ಪರಿಸರ-ಪರವಾದ ಉಪಕ್ರಮವು ನದಿ ತೀರದ ಸವೆತವನ್ನು ಸಂರಕ್ಷಿಸಲು ಮತ್ತು ಜಲ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಇತ್ತೀಚೆಗೆ ಎನ್.ಸಿ.ಎಲ್. ವಾಣಿಜ್ಯ ಉತ್ಪಾದನೆ ಮತ್ತು ಎಂ-ಸ್ಯಾಂಡ್ ನ ಹರಾಜಿಗೆ ದಾರಿ ಮಾಡಿಕೊಡುವ ಕಾರ್ಯನಿರ್ವಹಣಾ ಸಮ್ಮತಿಯನ್ನು (ಸಿ.ಟಿ.ಒ) ಪಡೆದುಕೊಂಡಿದೆ, ಇದು ಮುಂದಿನ ತಿಂಗಳು ಪ್ರಾರಂಭವಾಗುವ ಸಾಧ್ಯತೆಯಿದೆ.

ತಳದಲ್ಲಿರುವ ಕಲ್ಲಿದ್ದಲನ್ನು ಹೊರತೆಗೆಯಲು 410 ದಶಲಕ್ಷ ಘನ ಮೀಟರ್ ನಷ್ಟು ಬೃಹತ್ ಹೊರೆಯ ಮೇಲ್ಮಣ್ಣು, ಕಲ್ಲು ಪದರಗಳ ಮೇಲ್ಭಾಗವನ್ನು ತೆಗೆಯಬೇಕಾಗುತ್ತದೆ. ಕಲ್ಲಿದ್ದಲಿನ ಪದರದ ಮೇಲಿನ ವಸ್ತುವನ್ನು ಓವರ್ ಬರ್ಡನ್ (ಓ.ಬಿ) ಎಂದು ಕರೆಯಲಾಗುತ್ತದೆ. ಈ ಬೃಹತ್ ಪ್ರಮಾಣದ ಮೇಲ್ಮಣ್ಣು ಹೊರತೆಗೆಯಬೇಕಾದ ಕಲ್ಲಿದ್ದಲಿನ ಪ್ರಮಾಣಕ್ಕಿಂತ ಸುಮಾರು 4 ಪಟ್ಟು ಹೆಚ್ಚಾಗಿರುತ್ತದೆ. ಎನ್.ಸಿ.ಎಲ್. ತನ್ನ ವ್ಯಾಪ್ತಿಯ 10 ತೆರೆದ ಗುಂಡಿಯ ಗಣಿಗಳಿಂದ ವಾರ್ಷಿಕವಾಗಿ 122 ದಶಲಕ್ಷ ಟನ್ ಗಿಂತಲೂ ಹೆಚ್ಚು ಕಲ್ಲಿದ್ದಲನ್ನು ಉತ್ಪಾದಿಸುತ್ತದೆ. ಈ ಓವರ್ ಬರ್ಡನ್ (ಓ.ಬಿ) ತ್ಯಾಜ್ಯ ವಸ್ತುವಾಗಿದ್ದು, ಈ ಬೃಹತ್ ಪ್ರಮಾಣವು ಹೆಚ್ಚಿನ ಸ್ಥಳವನ್ನು ಆಕ್ರಮಿಸುತ್ತದೆ.

ಈ ಕ್ರಮವು ಕಂಪನಿ, ಸರ್ಕಾರ ಮತ್ತು ಸ್ಥಳೀಯ ಮಧ್ಯಸ್ಥಗಾರರಿಗೆ ಸಮಾನ ಗೆಲುವಿನ ಪರಿಸ್ಥಿತಿಯಾಗಿದೆ. ಎನ್.ಸಿ.ಎಲ್. ವಾರ್ಷಿಕವಾಗಿ ಸುಮಾರು 3 ಲಕ್ಷ ಕ್ಯೂಬಿಕ್ ಮೀಟರ್ ಎಂ-ಸ್ಯಾಂಡ್ ಅನ್ನು ಉತ್ಪಾದಿಸುತ್ತದೆ ಮತ್ತು ಪ್ರತಿದಿನ 1429 ಕ್ಯೂಬಿಕ್ ಮೀಟರ್ ಮೇಲ್ಪದರ ಬಳಸಿ ದಿನಕ್ಕೆ 1000 ಕ್ಯೂಬಿಕ್ ಮೀಟರ್ ಮರಳನ್ನು ತಯಾರಿಸುತ್ತದೆ. ಉತ್ಪಾದಿಸಿದ 'ಎಂ-ಸ್ಯಾಂಡ್' ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರಳಿಗೆ ಹೋಲಿಸಿದರೆ ಉತ್ಕೃಷ್ಟ ಅಥವಾ ಸಮಾನ ಗುಣಮಟ್ಟದಲ್ಲಿದ್ದು, ಅತ್ಯಂತ ಅಗ್ಗದ ಮೂಲ ಬೆಲೆಯಲ್ಲಿ ಇದನ್ನು ಇ-ಹರಾಜು ಮಾಡಲಾಗುತ್ತದೆ.

ಈ ಸ್ಥಾವರದ ಯಶಸ್ವಿ ಪ್ರಾರಂಭದ ನಂತರ, ಕಂಪನಿಯು ವಿವಿಧ ಉತ್ಪಾದನಾ ಯೋಜನೆಗಳಲ್ಲಿ ಎಂ-ಸ್ಯಾಂಡ್ ತಯಾರಿಕೆಗೆ ಅಂತಹ ನವೀನ ಓವರ್ ಬರ್ಡನ್ ಘಟಕಗಳನ್ನು ಸ್ಥಾಪಿಸಲು ಪರಿಗಣಿಸುತ್ತಿದೆ. ಎನ್.ಸಿ.ಎಲ್.ನ ಮೇಲ್ಮಣ್ಣು ಸಿಲಿಕಾದ ಉತ್ತಮ ಸಂಯೋಜನೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ, ಸೌರ ಫಲಕಗಳು, ಗಾಜು, ಜಿ.ಆರ್.ಪಿ ಪೈಪ್ ಗಳು ಮತ್ತು ಇತರ ವಸ್ತುಗಳನ್ನು ತಯಾರಿಸುವ ಸಾಧ್ಯತೆಯನ್ನು ಸಹ ಅನ್ವೇಷಿಸಲಾಗುತ್ತಿದೆ.

ಎನ್.ಸಿ.ಎಲ್ ಕೋಲ್ ಇಂಡಿಯಾ ಲಿಮಿಟೆಡ್ ನ ಪ್ರಮುಖ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಇದು ತನ್ನ 10 ಹೆಚ್ಚು ಯಾಂತ್ರೀಕೃತ ಗಣಿಗಳಿಗೆ ಹೆಸರುವಾಸಿಯಾಗಿದೆ. ಇದು ವಿದ್ಯುತ್ ಕ್ಷೇತ್ರದ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಂಪನಿಯು ಅನುಕ್ರಮವಾಗಿ ಮಧ್ಯಪ್ರದೇಶ ಮತ್ತು ಯುಪಿ ರಾಜ್ಯಗಳ ಸಿಂಗ್ರೌಲಿ ಮತ್ತು ಸೋನ್ಭದ್ರ ಜಿಲ್ಲೆಗಳಲ್ಲಿದೆ. ಪ್ರಸ್ತುತ 2022-23ರ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆ ಗುರಿಯನ್ನು 122 ಮಿಲಿಯನ್ ಟನ್ ಗಳೆಂದು ನಿಗಧಿಪಡಿಸಲಾಗಿದೆ. 

****

 



(Release ID: 1890011) Visitor Counter : 87