ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಗಣಿಗಳಲ್ಲಿ ಹೆಸರಾಂತ ಗಣಿ ಅಭಿವೃದ್ಧಿ ಮತ್ತು ನಿರ್ವಹಣೆ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಪ್ರಯತ್ನ 


ಕೋಲ್ ಇಂಡಿಯಾ ಲಿಮಿಟೆಡ್ ಇಂತಹ ಒಂಬತ್ತು ʻಗ್ರೀನ್‌ಫೀಲ್ಡ್‌ʼ ಯೋಜನೆಗಳಿಗೆ ಸ್ವೀಕೃತಿ ಪತ್ರಗಳನ್ನು ಬಿಡುಗಡೆ ಮಾಡಿದೆ

169 ದಶಲಕ್ಷ ಟನ್ ಸಾಮರ್ಥ್ಯದ ಒಟ್ಟು 15 ಯೋಜನೆಗಳು ಲಭ್ಯವಿವೆ

Posted On: 10 JAN 2023 11:54AM by PIB Bengaluru

ಕಲ್ಲಿದ್ದಲು ಗಣಿಗಳಲ್ಲಿ, ಮುಕ್ತ ಜಾಗತಿಕ ಟೆಂಡರ್‌ಗಳ ಮೂಲಕ ಹೆಸರಾಂತ ಗಣಿ ಅಭಿವೃದ್ಧಿ ಮತ್ತು ನಿರ್ವಹಣೆ ಸಂಸ್ಥೆಗಳನ್ನು (ಎಂ.ಡಿ.ಒ.ಗಳು) ನೇಮಿಸಿಕೊಳ್ಳಲು ಹಾಗೂ ದೇಶೀಯ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಕಲ್ಲಿದ್ದಲು ಸಚಿವಾಲಯ ಉದ್ದೇಶಿಸಿದೆ. ಆ ಮೂಲಕ ಆಮದು ಅವಲಂಬನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸಚಿವಾಲಯದ ಉದ್ದೇಶವಾಗಿದೆ. ಒಪ್ಪಂದದ ಅವಧಿಯು 25 ವರ್ಷಗಳು ಅಥವಾ ಗಣಿಯ ಜೀವಿತಾವಧಿ ಇದರಲ್ಲಿ ಯಾವುದು ಕನಿಷ್ಠವೋ ಅದಾಗಿರುತ್ತದೆ. 

ಸರಕಾರಿ ಸ್ವಾಮ್ಯದ ಕಲ್ಲಿದ್ದಲು ಗಣಿಗಾರಿಕೆ ಸಂಸ್ಥೆಗಳು, ಸುಮಾರು 20600 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಒಟ್ಟು 15 ʻಗ್ರೀನ್ ಫೀಲ್ಡ್ʼ ಯೋಜನೆಗಳನ್ನು ʻಎಂ.ಡಿ.ಓʼಗಳ ಮೂಲಕ ಅನುಷ್ಠಾನ ಮಾಡಲು ನೋಡುತ್ತಿವೆ. ಈ ಹೂಡಿಕೆಯಲ್ಲಿ ಬಹುತೇಕ ಭಾಗವು ಭೂ ಸ್ವಾಧೀನ, ಪುನರ್ವಸತಿ ಮತ್ತು ಕೆಲವು ಸಂದರ್ಭಗಳಲ್ಲಿ ರೈಲ್ವೆ ಹಳಿಗಳಿಗೆ ಸಂಬಂಧಿಸಿದ್ದಾಗಿದೆ.

ಸುಮಾರು 169 ದಶಲಕ್ಷ ಟನ್ (ಎಂಟಿ) ಒಟ್ಟು ಸಾಮರ್ಥ್ಯವನ್ನು ಹೊಂದಿರುವ ಹದಿನೈದು ಗಣಿಗಾರಿಕೆ ಯೋಜನೆಗಳಲ್ಲಿ ಹನ್ನೊಂದು ತೆರೆದ ಗಣಿಗಾರಿಕೆಗಳಾಗಿದ್ದರೆ ನಾಲ್ಕು ಭೂಗತ ಗಣಿಗಳಾಗಿವೆ. ಈ ಪೈಕಿ ತೆರೆದ ಗಣಿ ಯೋಜನೆಗಳ ಸಾಮರ್ಥ್ಯವು 165 ಮೆಟ್ರಿಕ್ ಟನ್ಗಳಷ್ಟಾದರೆ, ಉಳಿದ ಸಾಮರ್ಥ್ಯವು ಭೂಗತ ಗಣಿಗಳಿಗೆ ಸೇರಿದೆ. 

ʻಎಂ.ಡಿ.ಒʼಗಳು ಅನುಮೋದಿತ ಗಣಿಗಾರಿಕೆ ಯೋಜನೆಗೆ ಅನುಗುಣವಾಗಿ ಕಲ್ಲಿದ್ದಲನ್ನು ಅಗೆದು ಕಲ್ಲಿದ್ದಲು ಕಂಪನಿಗಳಿಗೆ ಸರಬರಾಜು ಮಾಡುತ್ತವೆ. ʻಎಂ.ಡಿ.ಒ.ʼಗಳು ಪರಸ್ಪರ ಪ್ರಯೋಜನಕಾರಿ ತಂತ್ರಜ್ಞಾನದ ಒಳಹರಿವು, ಆರ್ಥಿಕವಾಗಿ ಕಾರ್ಯಸಾಧ್ಯವಾದ ಕಾರ್ಯಾಚರಣೆಗಳು ಮತ್ತು ಹೆಚ್ಚಿದ ಉತ್ಪಾದನೆಗೆ ನೆರವಾಗುತ್ತವೆ. ಸಂಸ್ಥೆಗಳಿಗೆ ನೀಡುವ ಗುತ್ತಿಗೆಗಳು ದೀರ್ಘಕಾಲೀನ ಆಧಾರದ ಮೇಲೆ ಇರುವುದರಿಂದ, ಗಣಿ ಯೋಜನೆಗಳಿಗೆ ಸಂಬಂಧಪಟ್ಟ ಮೂಲಸೌಕರ್ಯಗಳನ್ನು ಸಹ ಈ ಖಾಸಗಿ ಕಂಪನಿಗಳು ಅಭಿವೃದ್ಧಿಪಡಿಸುತ್ತವೆ. ಅವುಗಳಿಗೆ ʻಆರ್ & ಆರ್ʼ ಸಮಸ್ಯೆಗಳು, ಭೂ ಸ್ವಾಧೀನ, ಪರಿಸರ ಅನುಮತಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಮಾಲಿನ್ಯ ಮಂಡಳಿಗಳೊಂದಿಗೆ ಸಮನ್ವಯ ಸಾಧಿಸಲು ಅನುಕೂಲ ಮಾಡಿಕೊಡಲಾಗುವುದು.

ಗಣಿ ಅಭಿವೃದ್ಧಿ ಮತ್ತು ನಿರ್ವಾಹಕರ  ಮೂಲಕ ಅನುಷ್ಠಾನಗೊಳಿಸಬಹುದಾದ ಒಂಬತ್ತು ಕಲ್ಲಿದ್ದಲು ಯೋಜನೆಗಳಿಗೆ ಸ್ವೀಕೃತಿ ಪತ್ರಗಳನ್ನು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನೀಡಿದೆ. ಈ ಯೋಜನೆಗಳು ಒಟ್ಟಾರೆಯಾಗಿ ವರ್ಷಕ್ಕೆ ಸುಮಾರು 127 ಮಿಲಿಯನ್ ಟನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ. ಉಳಿದ ಆರು ಯೋಜನೆಗಳು ಟೆಂಡರ್‌ನ ವಿವಿಧ ಹಂತಗಳಲ್ಲಿವೆ.

*****
 



(Release ID: 1889999) Visitor Counter : 98