ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ಪ್ರಧಾನಮಂತ್ರಿಯವರು ವಿಡಿಯೋ ಸಂದೇಶದ ಮೂಲಕ ನೀರಿನ ಪ್ರಥಮ ಅಖಿಲ ಭಾರತ ವಾರ್ಷಿಕ ರಾಜ್ಯ ಸಚಿವರ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದರು.


​​​​​​​"ವಾಟರ್ ವಿಷನ್ @ 2047 ಮುಂದಿನ 25 ವರ್ಷಗಳ ಅಮೃತ ಕಾಲ ಪ್ರಯಾಣದ ಪ್ರಮುಖ ಆಯಾಮವಾಗಿದೆ"

"ಸಾರ್ವಜನಿಕರು ಒಂದು ಅಭಿಯಾನದಲ್ಲಿ ಭಾಗವಹಿಸಿದಾಗ, ಅವರು ಆ ಅಭಿಯಾನದ ಗಂಭೀರತೆಯನ್ನು ಅರಿಯುತ್ತಾರೆ"

"ಜನರು ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸಿದಾಗ, ಸಾರ್ವಜನಿಕರಲ್ಲಿಯೂ ಅದರ ಬಗ್ಗೆ ಒಂದು ಪ್ರಜ್ಞೆಯನ್ನು ಮೂಡಿಸಲಾಯಿತು"

"ದೇಶವು ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸುತ್ತಿದೆ, ಈ ಹಾದಿಯಲ್ಲಿ ಈಗಾಗಲೇ 25 ಸಾವಿರ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ."

"ಜಲ ಜೀವನ್ ಮಿಷನ್ ಪ್ರತಿ ಮನೆಗೂ ನೀರನ್ನು ಒದಗಿಸುವಲ್ಲಿ ರಾಜ್ಯದ ಒಂದು ಪ್ರಮುಖ ಅಭಿವೃದ್ಧಿಯ ನಿಯತಾಂಕವಾಗಿದೆ"

"'ಪ್ರತಿ ಹನಿಗೂ ಹೆಚ್ಚು ಬೆಳೆ' ಅಭಿಯಾನದಡಿ, ದೇಶದಲ್ಲಿ ಈ ವರೆಗೆ 70 ಲಕ್ಷ ಹೆಕ್ಟೇರ್ ಗೂ ಹೆಚ್ಚು ಭೂಮಿಯನ್ನು ಸೂಕ್ಷ್ಮ ನೀರಾವರಿಗೆ ಒಳಪಡಿಸಲಾಗಿದೆ."

"ಗ್ರಾಮ ಪಂಚಾಯಿತಿಗಳು ಮುಂದಿನ 5 ವರ್ಷಗಳಲ್ಲಿ ನೀರು ಪೂರೈಕೆ, ಸ್ವಚ್ಛತೆ, ಮತ್ತು ತ್ಯಾಜ್ಯ ನಿರ್ವಹಣೆಯವರೆಗೆ ಮಾರ್ಗಸೂಚಿಯನ್ನು ಪರಿಗಣಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು."

"ನಮ್ಮ ನದಿಗಳು, ನಮ್ಮ ಜಲಮೂಲಗಳು ಇಡೀ ಜಲ ಪರಿಸರ ವ್ಯವಸ್ಥೆಯ ಅತ್ಯಂತ ಪ್ರಮುಖ ಭಾಗವಾಗಿವೆ"

"ನಮಾಮಿ ಗಂಗೆ ಮಿಷನ್ ಅನ್ನು ಉದಾಹರಣೆಯಾಗಿಟ್ಟುಕೊಂಡು, ಇತರ ರಾಜ್ಯಗಳು ನದಿಗಳ ಸಂರಕ್ಷಣೆಗಾಗಿ ಇದೇ ರೀತಿಯ ಅಭಿಯಾನಗಳನ್ನು ಪ್ರಾರಂಭಿಸಬಹುದು"

Posted On: 05 JAN 2023 10:14AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂದೇಶದ ಮೂಲಕ ನೀರಿನ ಪ್ರಥಮ ಅಖಿಲ ಭಾರತ ವಾರ್ಷಿಕ ರಾಜ್ಯ ಸಚಿವರ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಮ್ಮೇಳನದ ಧ್ಯೇಯವಾಕ್ಯ 'ವಾಟರ್ ವಿಷನ್ @ 2047' ಎಂಬುದಾಗಿದೆ.  ಸುಸ್ಥಿರ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗಾಗಿ ಜಲಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮಾರ್ಗಗಳ ಬಗ್ಗೆ ಚರ್ಚಿಸಲು ಪ್ರಮುಖ ನೀತಿ ನಿರೂಪಕರನ್ನು ಒಟ್ಟುಗೂಡಿಸುವುದು ವೇದಿಕೆಯ ಉದ್ದೇಶವಾಗಿದೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜಲ ಭದ್ರತೆಯ ಕ್ಷೇತ್ರಗಳಲ್ಲಿ ಭಾರತ ಮಾಡಿದ ಅಭೂತಪೂರ್ವ ಕಾರ್ಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ದೇಶದ ಜಲ ಸಚಿವರ ಪ್ರಥಮ ಅಖಿಲ ಭಾರತ ಸಮ್ಮೇಳನದ ಮಹತ್ವವನ್ನು ಒತ್ತಿ ಹೇಳಿದರು.  ನಮ್ಮ ಸಾಂವಿಧಾನಿಕ ವ್ಯವಸ್ಥೆಯಲ್ಲಿ, ನೀರಿನ ವಿಷಯವು ಆಯಾ ರಾಜ್ಯಗಳ ನಿಯಂತ್ರಣಕ್ಕೆ ಬರುತ್ತದೆ ಮತ್ತು ಜಲ ಸಂರಕ್ಷಣೆಗಾಗಿ ರಾಜ್ಯಗಳ ಪ್ರಯತ್ನಗಳು ದೇಶದ ಸಾಮೂಹಿಕ ಗುರಿಗಳನ್ನು ಸಾಧಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಪ್ರಧಾನಿ ಗಮನಸೆಳೆದರು. "ಜಲ ವಿಷನ್ @ 2047 ಮುಂದಿನ 25 ವರ್ಷಗಳ ಅಮೃತ ಕಾಲದ ಪ್ರಯಾಣದ ಒಂದು ಪ್ರಮುಖ ಆಯಾಮವಾಗಿದೆ" ಎಂದು ಪ್ರಧಾನಿ ಹೇಳಿದರು.

'ಇಡೀ ಸರ್ಕಾರ' ಮತ್ತು 'ಇಡೀ ದೇಶ' ಎಂಬ ತಮ್ಮ ದೃಷ್ಟಿಕೋನವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಎಲ್ಲಾ ಸರ್ಕಾರಗಳು ಒಂದು ವ್ಯವಸ್ಥೆಯಂತೆ ಕೆಲಸ ಮಾಡಬೇಕು.  ಇದರಲ್ಲಿ ಜಲ ಸಂಪನ್ಮೂಲ ಸಚಿವಾಲಯ, ನೀರಾವರಿ ಸಚಿವಾಲಯ, ಕೃಷಿ ಸಚಿವಾಲಯ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಚಿವಾಲಯ ಮತ್ತು ವಿಪತ್ತು ನಿರ್ವಹಣೆಯಂತಹ ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ ನಡುವೆ ನಿರಂತರ ಸಂವಹನ ಮತ್ತು ಸಂವಾದ ಇರಬೇಕು ಎಂದು ಒತ್ತಿ ಹೇಳಿದರು. ಈ ಇಲಾಖೆಗಳು ಪರಸ್ಪರ ಸಂಬಂಧಿಸಿದ ಮಾಹಿತಿ ಮತ್ತು ದತ್ತಾಂಶಗಳನ್ನು ಹೊಂದಿದ್ದರೆ ಯೋಜನಾ ವಿಭಾಗವು ಇದರಿಂದ ಸಹಾಯ ಪಡೆಯುತ್ತದೆ ಎಂದು ಅವರು ಹೇಳಿದರು.

ಕೇವಲ ಸರ್ಕಾರದ ಪ್ರಯತ್ನಗಳಿಂದ ಮಾತ್ರ ಯಶಸ್ಸು ಸಿಗುವುದಿಲ್ಲ ಎಂದು ಹೇಳಿದ ಪ್ರಧಾನಮಂತ್ರಿಯವರು, ಸಾರ್ವಜನಿಕ ಮತ್ತು ಸಾಮಾಜಿಕ ಸಂಘಟನೆಗಳು ಮತ್ತು ನಾಗರಿಕ ಸಮಾಜಗಳ ಪಾತ್ರದ ಬಗ್ಗೆಯೂ ಗಮನ ಸೆಳೆದರು. ಜಲ ಸಂರಕ್ಷಣೆಗೆ ಸಂಬಂಧಿಸಿದ ಅಭಿಯಾನಗಳಲ್ಲಿ ಸಾರ್ವಜನಿಕ ಮತ್ತು ಸಾಮಾಜಿಕ ಸಂಘಟನೆಗಳು ಮತ್ತು ನಾಗರಿಕ ಸಮಾಜಗಳ ಗರಿಷ್ಠ ಭಾಗವಹಿಸುವಿಕೆಯನ್ನು ಕೋರಿದರು. ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದರಿಂದ ಸರ್ಕಾರದ ಉತ್ತರದಾಯಿತ್ವವು ಕಡಿಮೆಯಾಗುವುದಿಲ್ಲ, ಅಂದರೆ ಅದರರ್ಥ ಎಲ್ಲಾ ಜವಾಬ್ದಾರಿಗಳನ್ನು ಜನರ ಮೇಲೆ ಹಾಕುವುದು ಎಂದರ್ಥವಲ್ಲ ಎಂದು ಪ್ರಧಾನಮಂತ್ರಿಯವರು ವಿವರಿಸಿದರು. ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಅತಿದೊಡ್ಡ ಪ್ರಯೋಜನವೆಂದರೆ ಈ ಅಭಿಯಾನದಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳು ಮತ್ತು ಖರ್ಚು ಮಾಡುತ್ತಿರುವ ಹಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು. "ಸಾರ್ವಜನಿಕರು ಇಂತಹ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ, ಅವರು ಕೆಲಸದ ಗಂಭೀರತೆಯನ್ನು ಸಹ ತಿಳಿದುಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಯಾವುದೇ ಯೋಜನೆ ಅಥವಾ ಅಭಿಯಾನದ ಬಗ್ಗೆ ಮಾಲೀಕತ್ವದ ಪ್ರಜ್ಞೆ ಸಾರ್ವಜನಿಕರಲ್ಲಿ ಬರುತ್ತದೆ "ಎಂದು ಅವರು ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, "ಜನರು ಸ್ವಚ್ಛ ಭಾರತ ಅಭಿಯಾನಕ್ಕೆ ಸೇರಿದಾಗ, ಸಾರ್ವಜನಿಕರಲ್ಲಿಯೂ ಒಂದು ಪ್ರಜ್ಞೆ ಜಾಗೃತಗೊಳ್ಳಲಿದೆ" ಎಂದು ಹೇಳಿದರು. ಭಾರತದ ಜನತೆಯ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಕೊಳಕನ್ನು ತೆಗೆದುಹಾಕಲು ಸಂಪನ್ಮೂಲಗಳನ್ನು ಸಂಗ್ರಹಿಸುವುದು, ವಿವಿಧ ಜಲ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದು ಅಥವಾ ಶೌಚಾಲಯಗಳನ್ನು ನಿರ್ಮಿಸುವುದು ಸೇರಿದಂತೆ ಅನೇಕ ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದೆ, ಆದರೆ ಸಾರ್ವಜನಿಕರು ಯಾವುದೇ ಕೊಳಕು ಇರಬಾರದು ಎಂದು ನಿರ್ಧರಿಸಿದಾಗ ಮಾತ್ರ ಈ ಅಭಿಯಾನ ಯಶಸ್ಸನ್ನು ಕಂಡಿದೆ ಎಂದು ಉಲ್ಲೇಖಿಸಿದರು. ಜಲಸಂರಕ್ಷಣೆಯ ಕಡೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಈ ಕಲ್ಪನೆಯನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅದರ ಬಗ್ಗೆ ಜಾಗೃತಿಯು ಉಂಟುಮಾಡಬಹುದಾದ ಪರಿಣಾಮವನ್ನು ಒತ್ತಿ ಹೇಳಿದರು.

"ನಾವು 'ಜಲ ಜಾಗೃತಿ ಉತ್ಸವಗಳನ್ನು' ಆಯೋಜಿಸಬಹುದು ಅಥವಾ ಜಲ ಜಾಗೃತಿಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಸ್ಥಳೀಯ ಮಟ್ಟದಲ್ಲಿ ನಡೆಯುವ ಜಾತ್ರೆಗಳಲ್ಲಿ ಸೇರಿಸಬಹುದು" ಎಂದು ಪ್ರಧಾನಿ ಸಲಹೆ ನೀಡಿದರು. ಪಠ್ಯಕ್ರಮದಿಂದ ಹಿಡಿದು ಶಾಲೆಗಳಲ್ಲಿನ ಚಟುವಟಿಕೆಗಳವರೆಗೆ ನವೀನ ವಿಧಾನಗಳ ಮೂಲಕ ಯುವ ಪೀಳಿಗೆಗೆ ಈ ವಿಷಯದ ಬಗ್ಗೆ ಅರಿವು ಮೂಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ದೇಶವು ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸುತ್ತಿದ್ದು, ಇದರಲ್ಲಿ ಈಗಾಗಲೇ 25 ಸಾವಿರ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ತಂತ್ರಜ್ಞಾನ, ಕೈಗಾರಿಕೆ ಮತ್ತು ಸ್ಟಾರ್ಟ್ಅಪ್ ಗಳನ್ನು ಸಂಪರ್ಕಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜಿಯೋ-ಸೆನ್ಸಿಂಗ್ ಮತ್ತು ಜಿಯೋ-ಮ್ಯಾಪಿಂಗ್ ನಂತಹ ತಂತ್ರಜ್ಞಾನಗಳನ್ನು ಉಲ್ಲೇಖಿಸಿದ ಅವರು, ಅದು ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಹೇಳಿದರು. ಶಾಸನ ಮಟ್ಟದಲ್ಲಿ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರದ ನೀತಿಗಳು ಮತ್ತು ಅಧಿಕಾರಶಾಹಿ ಕಾರ್ಯವಿಧಾನಗಳನ್ನು ರೂಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪ್ರತಿ ಮನೆಗೂ ನೀರನ್ನು ಒದಗಿಸಲು ರಾಜ್ಯದ ಪ್ರಮುಖ ಅಭಿವೃದ್ಧಿ ಮಾನದಂಡವಾಗಿ 'ಜಲ ಜೀವನ್ ಮಿಷನ್' ನ ಯಶಸ್ಸನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಅನೇಕ ರಾಜ್ಯಗಳು ಉತ್ತಮ ಕೆಲಸವನ್ನು ಮಾಡಿವೆ ಮತ್ತು ಅನೇಕ ರಾಜ್ಯಗಳು ಈ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ ಎಂದು ಹೇಳಿದರು. ಈ ವ್ಯವಸ್ಥೆ ಜಾರಿಗೆ ಬಂದ ನಂತರ ನಾವು ಭವಿಷ್ಯದಲ್ಲಿ ಅದೇ ರೀತಿಯಲ್ಲಿ ಅದರ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಶಿಫಾರಸು ಮಾಡಿದರು. ಗ್ರಾಮ ಪಂಚಾಯತಿಗಳು ಜಲ ಜೀವನ್ ಮಿಷನ್ ನ ನೇತೃತ್ವ ವಹಿಸಬೇಕು ಮತ್ತು ಕಾಮಗಾರಿ ಪೂರ್ಣಗೊಂಡ ನಂತರ, ಸಾಕಷ್ಟು ಶುದ್ಧ ನೀರು ಲಭ್ಯವಾಗಿದೆ ಎಂದು ಅವರು ಪ್ರಮಾಣೀಕರಿಸಬೇಕು ಎಂದು ಅವರು ಪ್ರಸ್ತಾಪಿಸಿದ ಅವರು "ಪ್ರತಿ ಗ್ರಾಮ ಪಂಚಾಯತಿಯು ಗ್ರಾಮದಲ್ಲಿ ನಲ್ಲಿ ನೀರನ್ನು ಪಡೆಯುತ್ತಿರುವ ಮನೆಗಳ ಸಂಖ್ಯೆಯನ್ನು ತಿಳಿಸುವ ಮಾಸಿಕ ಅಥವಾ ತ್ರೈಮಾಸಿಕ ವರದಿಯನ್ನು ಸಹ ಆನ್ಲೈನ್ ನಲ್ಲಿ ಸಲ್ಲಿಸಬಹುದು" ಎಂದು ತಿಳಿಸಿದರು. ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆವರ್ತಕ ನೀರಿನ ಪರೀಕ್ಷೆಯ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.

ಕೈಗಾರಿಕೆ ಮತ್ತು ಕೃಷಿ ವಲಯಗಳೆರಡರಲ್ಲೂ ನೀರಿನ ಅಗತ್ಯತೆಗಳನ್ನು ಗಮನಿಸಿದ ಪ್ರಧಾನಮಂತ್ರಿಯವರು, ಅವರಿಗೆ ನೀರಿನ ಭದ್ರತೆಯ ಬಗ್ಗೆ ಅರಿವು ಮೂಡಿಸಲು ವಿಶೇಷ ಅಭಿಯಾನಗಳನ್ನು ನಡೆಸುವಂತೆ ಶಿಫಾರಸು ಮಾಡಿದರು. ಅವರು ನೀರಿನ ಸಂರಕ್ಷಣೆಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುವ ಬೆಳೆ ವೈವಿಧ್ಯೀಕರಣ ಮತ್ತು ನೈಸರ್ಗಿಕ ಕೃಷಿಯಂತಹ ತಂತ್ರಗಳ ಉದಾಹರಣೆಗಳನ್ನು ನೀಡಿದರು. ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಯಡಿ ಪ್ರಾರಂಭವಾದ 'ಪ್ರತಿ ಹನಿ ಹೆಚ್ಚು ಬೆಳೆ' ಅಭಿಯಾನವನ್ನು ಎತ್ತಿ ತೋರಿಸಿದ ಅವರು, ದೇಶದಲ್ಲಿ ಇದುವರೆಗೆ 70 ಲಕ್ಷ ಹೆಕ್ಟೇರ್ ಗೂ ಹೆಚ್ಚು ಭೂಮಿಯನ್ನು ಸೂಕ್ಷ್ಮ ನೀರಾವರಿಯಡಿ ತರಲಾಗಿದೆ ಎಂದು ಮಾಹಿತಿ ನೀಡಿದರು. "ಸೂಕ್ಷ್ಮ ನೀರಾವರಿಯನ್ನು ಎಲ್ಲಾ ರಾಜ್ಯಗಳು ನಿರಂತರವಾಗಿ ಉತ್ತೇಜಿಸಬೇಕು" ಎಂದು ಅವರು ತಿಳಿಸಿದರು. ಅಟಲ್ ಭೂಜಲ್ ಸಂರಕ್ಷಣಾ ಯೋಜನೆಯ ಉದಾಹರಣೆಯನ್ನು ನೀಡಿದ ಅವರು, ಅಂತರ್ಜಲ ಮರುಪೂರಣಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಶೇಖರಣಾ ಕೆಲಸದ ಅಗತ್ಯವಿದೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ಸ್ಪ್ರಿಂಗ್ ಶೆಡ್ ಅನ್ನು ಪುನರುಜ್ಜೀವನಗೊಳಿಸಲು ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಜಲಸಂರಕ್ಷಣೆಗಾಗಿ ರಾಜ್ಯದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಅಗತ್ಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಪರಿಸರ ಸಚಿವಾಲಯ ಮತ್ತು ಜಲ ಸಂಪನ್ಮೂಲ ಸಚಿವಾಲಯದ ಸಂಘಟಿತ ಪ್ರಯತ್ನಗಳಿಗೆ ಕರೆ ನೀಡಿದರು. ನೀರಿನ ಎಲ್ಲಾ ಸ್ಥಳೀಯ ಮೂಲಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸುವಂತೆ ಕರೆ ನೀಡಿದ ಅವರು, ಗ್ರಾಮ ಪಂಚಾಯಿತಿಗಳು ನೀರು ಪೂರೈಕೆಯಿಂದ ಹಿಡಿದು ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯವರೆಗೆ ಮಾರ್ಗಸೂಚಿಯನ್ನು ಪರಿಗಣಿಸಿ ಮುಂದಿನ 5 ವರ್ಷಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಪುನರುಚ್ಚರಿಸಿದರು. ಯಾವ ಗ್ರಾಮದಲ್ಲಿ ಎಷ್ಟು ನೀರಿನ ಅಗತ್ಯವಿದೆ ಮತ್ತು ಅದಕ್ಕಾಗಿ ಯಾವ ಕೆಲಸವನ್ನು ಮಾಡಬಹುದು ಎಂಬುದರ ಆಧಾರದ ಮೇಲೆ ಪಂಚಾಯತಿ ಮಟ್ಟದಲ್ಲಿ ನೀರಿನ ಬಜೆಟ್ ಅನ್ನು ತಯಾರಿಸುವ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಮಂತ್ರಿಯವರು ರಾಜ್ಯಗಳಿಗೆ ಸೂಚಿಸಿದರು. 'ಕ್ಯಾಚ್ ದಿ ರೈನ್' ಅಭಿಯಾನದ ಯಶಸ್ಸನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಇಂತಹ ಅಭಿಯಾನಗಳು ರಾಜ್ಯ ಸರ್ಕಾರದ ಅತ್ಯಗತ್ಯ ಭಾಗವಾಗಬೇಕು, ಅವುಗಳನ್ನು ವಾರ್ಷಿಕವಾಗಿ ಮೌಲ್ಯಮಾಪನ ಮಾಡಬೇಕು ಎಂದು ಪುನರುಚ್ಚರಿಸಿದರು. "ಮಳೆಗಾಗಿ ಕಾಯುವ ಬದಲು, ಮಳೆಗೆ ಮುಂಚಿತವಾಗಿ ಎಲ್ಲಾ ಯೋಜನೆಗಳನ್ನು ಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.

ಜಲಸಂರಕ್ಷಣೆ ಕ್ಷೇತ್ರದಲ್ಲಿ ವೃತ್ತಾಕಾರದ ಆರ್ಥಿಕತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಬಜೆಟ್ ನಲ್ಲಿ ಸರ್ಕಾರವು ವೃತ್ತಾಕಾರದ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಮಾಹಿತಿ ನೀಡಿದರು. "ನೀರನ್ನು ಸಂಸ್ಕರಿಸಿದಾಗ, ನೀರನ್ನು ಮರುಬಳಕೆ ಮಾಡಲಾಗುತ್ತದೆ. ಶುದ್ಧ ನೀರನ್ನು ಸಂರಕ್ಷಿಸಲಾಗುತ್ತದೆ. ಇದು ಇಡೀ ಪರಿಸರ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಅಂತೆಯೇ ನೀರಿನ ಸಂಸ್ಕರಣೆ, ನೀರಿನ ಮರುಬಳಕೆ ಅತ್ಯಗತ್ಯ" ಎಂದು ಅವರು ಹೇಳಿದರು. ವಿವಿಧ ಉದ್ದೇಶಗಳಿಗಾಗಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಲು ರಾಜ್ಯಗಳು ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು. "ನಮ್ಮ ನದಿಗಳು, ನಮ್ಮ ಜಲಮೂಲಗಳು ಇಡೀ ಜಲ ಪರಿಸರ ವ್ಯವಸ್ಥೆಯ ಅತ್ಯಂತ ಪ್ರಮುಖ ಭಾಗವಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ರಾಜ್ಯದಲ್ಲೂ ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣೆಯ ಜಾಲವನ್ನು ರಚಿಸಲು ಒತ್ತು ನೀಡಿದರು. "'ನಮಾಮಿ ಗಂಗೆ ಮಿಷನ್' ಅನ್ನು ಒಂದು ಮಾದರಿಯಾಗಿ ತೆಗೆದುಕೊಂಡು, ಇತರ ರಾಜ್ಯಗಳು ಸಹ ನದಿಗಳ ಸಂರಕ್ಷಣೆಗಾಗಿ ಇದೇ ರೀತಿಯ ಅಭಿಯಾನಗಳನ್ನು ಪ್ರಾರಂಭಿಸಬಹುದು. ನೀರನ್ನು ಸಹಕಾರ ಮತ್ತು ಸಮನ್ವಯದ ವಿಷಯವನ್ನಾಗಿ ಮಾಡುವುದು ಪ್ರತಿಯೊಂದು ರಾಜ್ಯದ ಜವಾಬ್ದಾರಿಯಾಗಿದೆ," ಎಂದು ಪ್ರಧಾನ ಮಂತ್ರಿಯವರು ಮುಕ್ತಾಯಗೊಳಿಸಿದರು.

ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರು ಪ್ರಥಮ ಅಖಿಲ ಭಾರತ ವಾರ್ಷಿಕ ರಾಜ್ಯ ಸಚಿವರ ಜಲ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

 

*****



(Release ID: 1888923) Visitor Counter : 166