ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ರವರು 2023 ರ ಭಾರತ ಸರ್ಕಾರದ ಅಧಿಕೃತ ಕ್ಯಾಲೆಂಡರನ್ನು ಅನಾವರಣಗೊಳಿಸಿದರು


ಸರ್ಕಾರದ ಸಾಧನೆಗಳು ಮತ್ತು ಭವಿಷ್ಯದ ಬದ್ಧತೆಗಳನ್ನು ಪ್ರದರ್ಶಿಸಲು 'ನಯಾ ವರ್ಷ, ನಯೇ ಸಂಕಲ್ಪ್' ವಿಷಯಾಧಾರಿತ ಕ್ಯಾಲೆಂಡರ್ 
ಕ್ಯಾಲೆಂಡರ್ಗಳ 11 ಲಕ್ಷ ಪ್ರತಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ 2.5 ಲಕ್ಷ ಪ್ರತಿಗಳನ್ನು ಮುದ್ರಿಸಲಾಗುವುದು 

13 ಭಾಷೆಗಳಲ್ಲಿ ಮುದ್ರಿಸಲಾದ ಕ್ಯಾಲೆಂಡರ್ ಅನ್ನು ದೇಶದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಪಂಚಾಯಿತಿ ಕಚೇರಿಗಳಿಗೆ ವಿತರಿಸಲಾಗುವುದು.

Posted On: 28 DEC 2022 5:59PM by PIB Bengaluru

ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು 2023 ನೇ ಸಾಲಿನ ಭಾರತ ಸರ್ಕಾರದ ಅಧಿಕೃತ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಕ್ಯಾಲೆಂಡರ್ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ʼಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸʼ (ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ)  ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕ್ರಿಯಾತ್ಮಕವಾಗಿ ಬೆಳೆಯುತ್ತಿರುವ ಭಾರತವನ್ನು ಬಿಂಬಿಸುವ 12 ಚಿತ್ರಗಳ ಪ್ರಭಾವಶಾಲಿ ಸಂಗ್ರಹವಾಗಿದೆ ಎಂದು ಅವರು ಕ್ಯಾಲೆಂಡರ್ ಅನ್ನು ಶ್ಲಾಘಿಸಿದರು. 12ತಿಂಗಳ 12ವಿಷಯಗಳು ಸಾರ್ವಜನಿಕ ಕಲ್ಯಾಣಕ್ಕಾಗಿ ಸರ್ಕಾರವು ಮಾಡಿರುವ ಶ್ರಮದಾಯಕ ಪ್ರಯತ್ನಗಳ ಒಂದು ನೋಟವಾಗಿದೆ ಎಂದು ಅವರು ಒತ್ತಿ ಹೇಳಿದರು.

ಹಿಂದಿನ ಕ್ಯಾಲೆಂಡರ್ ಅನ್ನು ಕೇವಲ ಡಿಜಿಟಲ್ ರೂಪದಲ್ಲಿ ಹೊರತಂದಿದ್ದ ಎರಡು ವರ್ಷಗಳ ನಂತರ ಈ ಕ್ಯಾಲೆಂಡರ್ ಅನ್ನು ಭೌತಿಕ ರೂಪದಲ್ಲಿ ಮುದ್ರಿಸಲಾಗುತ್ತಿದೆ ಎಂದು ಸಚಿವರು ಸ್ಮರಿಸಿದರು. ಇದು ಸರ್ಕಾರದ ಅತ್ಯುತ್ತಮ ರಚನೆಗಳಲ್ಲಿ ಒಂದಾಗಿದೆ ಎಂದ ಶ್ರೀ ಠಾಕೂರ್, ಈ ವರ್ಷ ಡಿಜಿಟಲ್ ಮತ್ತು ಭೌತಿಕ ರೂಪದಲ್ಲಿ ಲಭ್ಯವಿರುವ ಕ್ಯಾಲೆಂಡರ್ ಸರ್ಕಾರದ ಮಧ್ಯಸ್ಥಿಕೆಗಳು ಮತ್ತು ಕಲ್ಯಾಣ ಕ್ರಮಗಳ ಬಗ್ಗೆ ಮಾಹಿತಿಗಾಗಿ ಪ್ರಸರಣ ಮಾಧ್ಯಮವಾಗಿದೆ ಎಂದು ಹೇಳಿದರು. ಈ ಸಂದೇಶದ ವಿತರಣೆಯನ್ನು ದೇಶದ ಎಲ್ಲಾ ಪಂಚಾಯಿತಿ ಕಚೇರಿಗಳಿಗೆ ಕ್ಯಾಲೆಂಡರನ್ನು ವಿತರಿಸುವ ಮೂಲಕ ಅತ್ಯಂತ ತಳ ಮಟ್ಟಕ್ಕೆ ಮುಟ್ಟಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಈ ಕ್ಯಾಲೆಂಡರಿನ ಈ ಆವೃತ್ತಿಯು ಸರ್ಕಾರದ ಇದುವರೆಗಿನ ಸಾಧನೆಗಳು ಮತ್ತು ಭವಿಷ್ಯದ ಬದ್ಧತೆಯನ್ನು ಪ್ರದರ್ಶಿಸುತ್ತದೆ, ಆದ್ದರಿಂದ 'ನಯ ವರ್ಷ, ನಯೇ ಸಂಕಲ್ಪ'  (ಹೊಸ ವರ್ಷ್ ಹೊಸ ಸಂಕಲ್ಪ) ಎನ್ನುವ ವಿಷಯವಾಗಿದೆ ಎಂದು ಸಚಿವರು ತಿಳಿಸಿದರು. ಇದು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 13 ಭಾಷೆಗಳಲ್ಲಿ ಲಭ್ಯವಿರುತ್ತದೆ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ನವೋದಯ ಮತ್ತು ಕೇಂದ್ರೀಯ ವಿದ್ಯಾಲಯಗಳು, ಜಿಲ್ಲೆಗಳಲ್ಲಿನ ಬಿಡಿಒಗಳು ಮತ್ತು ಡಿಎಂಗಳ ಕಚೇರಿಗಳಲ್ಲಿ ವಿತರಿಸಲಾಗುವುದು ಹಾಗು ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಖರೀದಿಸಲು ಲಭ್ಯವಿರುತ್ತದೆ. ಒಟ್ಟು 11 ಲಕ್ಷ ಪ್ರತಿಗಳನ್ನು ಮುದ್ರಿಸಲಾಗುವುದು ಮತ್ತು 2.5 ಲಕ್ಷ ಪ್ರತಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪಂಚಾಯಿತಿ ಕಚೇರಿಗಳಿಗೆ ವಿತರಿಸಲಾಗುವುದು.

ಶ್ರೀ ಠಾಕೂರ್ ಅವರು ಸಚಿವಾಲಯದ ವಿವಿಧ ವಿಭಾಗಗಳ ಸಾಧನೆಗಳನ್ನು ಪುನರುಚ್ಚರಿಸಿದರು. ಪ್ರಸಾರ ಭಾರತಿ ತನ್ನ ಎಲ್ಲಾ ಅನಲಾಗ್ ಟೆರೆಸ್ಟ್ರಿಯಲ್ ಟ್ರಾನ್ಸ್ಮಿಟರ್ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಿದೆ, ಆಯಕಟ್ಟಿನ ಸ್ಥಳಗಳಲ್ಲಿ 50 ಟ್ರಾನ್ಸ್ಮಿಟರ್ಗಳನ್ನು ಸ್ಥಾಪಿಸಲಿದೆ. 2022ರ ಆರಂಭದ ವೇಳೆಗೆ ಡಿಡಿ ಫ್ರೀ ಡಿಶ್ 43 ದಶಲಕ್ಷ ಮನೆಗಳನ್ನು ತಲುಪಿದೆ, ಪ್ರಸಾರ ಭಾರತಿ ಅಡಿಯಲ್ಲಿ ವಿವಿಧ ಚಾನೆಲ್ಗಳು 2 ಕೋಟಿಗೂ ಹೆಚ್ಚು ಚಂದಾದಾರರನ್ನು ತಲುಪಿವೆ. ಈ ವರ್ಷ ದೇಶವು 75 ಸಮುದಾಯ ರೇಡಿಯೋ ಕೇಂದ್ರಗಳನ್ನು ಸೇರಿಸಿದ್ದು, ದೇಶದಲ್ಲಿ ಒಟ್ಟು  ಕೇಂದ್ರಗಳು 397 ಕ್ಕೆ ತಲುಪಿದೆ ಎಂದು ಅವರು ಹೇಳಿದರು.

ಸೆಂಟ್ರಲ್ ಬ್ಯೂರೊ ಆಫ್ ಕಮ್ಯುನಿಕೇಷನ್ನ ಯಾಂತ್ರೀಕೃತಗೊಂಡ ಪ್ರಕ್ರಿಯೆಯು ಪೂರ್ಣಗೊಂಡಿದೆ, ಆದರೆ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಫಾರ್ ಇಂಡಿಯಾಗೆ ಅದೇ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಸಭಿಕರಿಗೆ ತಿಳಿಸಿದರು. ಸಚಿವಾಲಯವು ಕಳೆದ 5 ವರ್ಷಗಳಲ್ಲಿ ಪತ್ರಕರ್ತರ ಕಲ್ಯಾಣ ಯೋಜನೆಯಡಿಯಲ್ಲಿ 290 ಪತ್ರಕರ್ತರು ಮತ್ತು ಪತ್ರಕರ್ತರ ಕುಟುಂಬಗಳಿಗೆ 13.12 ಕೋಟಿ ರೂಪಾಯಿಗಳನ್ನು ವಿತರಿಸಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ಉಪಕ್ರಮದ ಪ್ರಕಾರ ರೂಪಿಸಲಾದ ಭಾರತ ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ನೀತಿಗಳನ್ನು 'ನಯ ವರ್ಷ್, ನಯೇ ಸಂಕಲ್ಪ್' (ಹೊಸ ವರ್ಷ್ ಹೊಸ ಸಂಕಲ್ಪ) ಎನ್ನುವ ವಿಷಯವನ್ನು ಕ್ಯಾಲೆಂಡರ್ ಬಿಂಬಿಸುತ್ತದೆ ಎಂದು ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ನ ಮಹಾನಿರ್ದೇಶಕ ಶ್ರೀ ಮನೀಶ್ ದೇಸಾಯಿ ಸಭಿಕರಿಗೆ ತಿಳಿಸಿದರು. ಕ್ಯಾಲೆಂಡರನ್ನು ಭಾರತದಾದ್ಯಂತ ಕೇಂದ್ರ ಸರ್ಕಾರದ ಕಚೇರಿಗಳಿಗೆ ವಿತರಿಸಲಾಗುತ್ತದೆ. ಜೊತೆಗೆ, ಸಿಬಿಸಿಯ ಸಾಮೂಹಿಕ ಅಂಚೆ ರವಾನೆ ಘಟಕವು ಭಾರತದ 2.5 ಲಕ್ಷ ಪಂಚಾಯಿತಿ ಕಚೇರಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಕ್ಯಾಲೆಂಡರನ್ನು ವಿತರಿಸಲು ಭಾರತೀಯ ಅಂಚೆಯೊಂದಿಗೆ ಕೈಜೋಡಿಸಿದೆ ಎಂದು ಶ್ರೀ ದೇಸಾಯಿ ಹೇಳಿದರು.

ಕ್ಯಾಲೆಂಡರ್ ಬಗ್ಗೆ

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿ, ಉಪಕ್ರಮ ಮತ್ತು ನಾಯಕತ್ವದ ಪ್ರಕಾರ ಸರ್ವಾಂಗೀಣ ಅಭಿವೃದ್ಧಿಯನ್ನು ತರುವ ಭಾರತ ಸರ್ಕಾರದ ಸಂಕಲ್ಪವನ್ನು 2023ರ ಕ್ಯಾಲೆಂಡರ್ ಬಿಂಬಿಸುತ್ತದೆ. ಬಲಿಷ್ಠ ಭಾರತವನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಆಯ್ದ ಆಡಳಿತ ತತ್ವಗಳು ಮತ್ತು ನೀತಿಗಳನ್ನು ಪ್ರತಿ ತಿಂಗಳುಗಳ ಪುಟಗಳು ಎತ್ತಿ ತೋರಿಸುತ್ತವೆ.

ಜನವರಿ

ಭಾರತವು ಅಮೃತ ಕಾಲವನ್ನು ಪ್ರವೇಶಿಸುತ್ತಿದ್ದಂತೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 22 ರಂದು ರಾಜಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದರು. ಈ ಕಾರ್ಯವು ವಸಾಹತುಶಾಹಿ ಮನಸ್ಥಿತಿಯ ಸಂಕೋಲೆಗಳನ್ನು ಮುರಿದು ನಮ್ಮ ರಾಷ್ಟ್ರದ ಕಡೆಗೆ ಕರ್ತವ್ಯದ ಹಾದಿಯಲ್ಲಿ ಸಾಗುವುದನ್ನು ತೋರಿಸುತ್ತದೆ.

ಫೆಬ್ರವರಿ

ಫೆಬ್ರವರಿಯನ್ನು "ಕಿಸಾನ್ ಕಲ್ಯಾಣ್" ಅಥವಾ ರೈತರ ಕಲ್ಯಾಣ ಕಾರ್ಯಕ್ರಮಗಳಿಗೆ ಸಮರ್ಪಿಸಲಾಗಿದೆ. ರೈತರು ನಮ್ಮ ರಾಷ್ಟ್ರದ ಹೆಮ್ಮೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರು ಸೂಕ್ತವಾಗಿ ಹೇಳಿದ್ದಾರೆ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕಾಗಿ ರೈತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸರ್ಕಾರವು ಹಲವಾರು ನೀತಿಗಳನ್ನು ಜಾರಿಗೆ ತಂದಿದೆ.

ಮಾರ್ಚ್

ಮಾರ್ಚ್ ಭಾರತೀಯ ಮಹಿಳೆಯರ ಚೈತನ್ಯ ʼನಾರಿ ಶಕ್ತಿʼಯನ್ನು ಗೌರವಿಸುವ ತಿಂಗಳು. ಪ್ರತಿ ಮನೆಯಲ್ಲೂ ಮಹಿಳೆಯರಿಗೆ ಧನ್ಯವಾದ ಹೇಳುತ್ತಾ, ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ನಾವು ಈ ತಿಂಗಳಲ್ಲಿದ್ದೇವೆ. ಅಡೆತಡೆಗಳನ್ನು ಒಡೆದು ತಮಗಾಗಿ ಛಾಪು ಮೂಡಿಸಿದ ಮತ್ತು ಇತರರಿಗೆ ಅನುಸರಿಸಲು ಮಾದರಿಯಾದ ಎಲ್ಲ ಮಹಿಳೆಯರನ್ನು ಆಚರಿಸುವ ತಿಂಗಳು ಇದು. ಭಾರತ ಸರ್ಕಾರ ಪ್ರತಿ ವರ್ಷ ಮಹಿಳಾ ಸಾಧಕರಿಗೆ ‘ನಾರಿ ಶಕ್ತಿ ಪುರಸ್ಕಾರ’ ನೀಡಿ ಗೌರವಿಸುತ್ತದೆ.

ಏಪ್ರಿಲ್

ಶೈಕ್ಷಣಿಕ ಸುಧಾರಣೆಗಳಿಗೆ ಒತ್ತು ನೀಡುವುದು ಸರ್ಕಾರದ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ಈ ಗುರಿಯು ಪ್ರಧಾನಮಂತ್ರಿಯವರ ಘೋಷಣೆಯ ಸಾರವಾಗಿದೆ, "ಪಡೇ ಭಾರತ್, ಬಡೇ ಭಾರತ್" (ಓದಲಿ ಭಾರತ, ಮುಂದುವರೆಯಲಿ ಭಾರತ) ಮತ್ತು ಏಪ್ರಿಲ್ ನ ವಿಷಯ ʼವಿದ್ಯಾವಂತ ಭಾರತʼವಾಗಿದೆ. ಹೊಸ ಶಿಕ್ಷಣ ನೀತಿಯಂತಹ ಸುಧಾರಣೆಗಳು ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ತಳಮಟ್ಟದ ಬದಲಾವಣೆಗಳನ್ನು ಪರಿಚಯಿಸುವುದರೊಂದಿಗೆ, ಭಾರತೀಯ ಶಿಕ್ಷಣ ವ್ಯವಸ್ಥೆಯು ಬಹುನಿರೀಕ್ಷಿತ ನವೀಕರಣಕ್ಕೆ ಒಳಗಾಗುತ್ತಿದೆ.

ಮೇ

ಸ್ಕಿಲ್ ಇಂಡಿಯಾ ಕಾರ್ಯಕ್ರಮಕ್ಕೆ ಮೀಸಲಾದ ತಿಂಗಳು ಮೇ. ಸುವ್ಯವಸ್ಥಿತ ಸಾಂಸ್ಥಿಕ ವಿಧಾನಗಳ ಮೂಲಕ ವ್ಯಾಪಕವಾದ ಕೌಶಲ್ಯಗಳೊಂದಿಗೆ ಭಾರತದಲ್ಲಿ 30 ಕೋಟಿಗೂ ಹೆಚ್ಚು ಜನರಿಗೆ ತರಬೇತಿ ನೀಡಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ಉದ್ದೇಶಿಸಿದೆ. ಕೌಶಲ್ಯವು ದೇಶದ ಯಾವುದೇ ಯುವಕ ತನ್ನ ನಿಜವಾದ ಸಾಮರ್ಥ್ಯವನ್ನು ಪಡೆಯಲು ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

ಜೂನ್

ಜೂನ್ 21 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತದಲ್ಲಿ ಎಲ್ಲಾ ವಯಸ್ಸಿನ ಜನರು ದೈಹಿಕವಾಗಿ ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲು ಫಿಟ್ ಇಂಡಿಯಾ ಆಂದೋಲನವನ್ನು ಪ್ರಾರಂಭಿಸಿದರು. ಫಿಟ್ ಇಂಡಿಯಾ, ಹಿಟ್ ಇಂಡಿಯಾ ಎಂಬ ತಿಂಗಳ ವಿಷಯವಾಗಿದ್ದು ಫಿಟ್ನೆಸ್ ಮಂತ್ರವನ್ನು ಭಾರತದ ಪ್ರತಿ ಮನೆಗೆ ತಲುಪಿಸುತ್ತದೆ.

ಜುಲೈ

ಪರಿಸರದ ಆರೋಗ್ಯದ ವಿಷಯವಿಲ್ಲದೆ ಆರೋಗ್ಯದ ಬಗ್ಗೆ ಯಾವುದೇ ಚರ್ಚೆ ಪೂರ್ಣಗೊಳ್ಳುವುದಿಲ್ಲ. ಹವಾಮಾನ ಸ್ನೇಹಿಯಾಗಿರುವ ಆರೋಗ್ಯಕರ ಪರ್ಯಾಯಗಳನ್ನು ಆಯ್ಕೆ ಮಾಡುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಜನರು 'ಕಡಿಮೆ ಬಳಕೆ, ಮರುಬಳಕೆ ಮತ್ತು ಮರುಸಂಸ್ಕರಣೆ' ಜೀವನ ವಿಧಾನವನ್ನು ಅಳವಡಿಸಿಕೊಳ್ಳುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮಿಷನ್ ಲೈಫ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಆಗಸ್ಟ್

ಒಲಿಂಪಿಕ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಮಾತ್ರವಲ್ಲದೆ ವಿಶೇಷ ಚೇತನರಿಗಾಗಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳ ಅದ್ಭುತ ಪ್ರದರ್ಶನಗಳು, ನಮಗೆಲ್ಲ ಹೆಮ್ಮೆ ತಂದಿವೆ. ಆಗಸ್ಟ್ ತಿಂಗಳ ವಿಷಯ ಖೇಲೋ ಇಂಡಿಯಾ ಆಗಿದೆ. ತಳಮಟ್ಟದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲವನ್ನು ನೀಡುವುದರಿಂದ ಹಿಡಿದು ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ರಚಿಸುವವರೆಗೆ, ಖೇಲೋ ಇಂಡಿಯಾ ಭಾರತವನ್ನು ಎಲ್ಲಾ ಕ್ರೀಡೆಗಳಲ್ಲಿ ಪ್ರಶಸ್ತಿಪಡೆಯುವ ಮಟ್ಟಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತದೆ.

ಸೆಪ್ಟೆಂಬರ್

ವಸುಧೈವ ಕುಟುಂಬಕಂ, ಅಥವಾ "ಜಗತ್ತು ಒಂದೇ ಕುಟುಂಬ" ಎನ್ನುವುದು ಸೆಪ್ಟೆಂಬರ್ ತಿಂಗಳ ವಿಷಯವಾಗಿದೆ. ಭಾರತದ  ಜಿ-20 ಅಧ್ಯಕ್ಷತೆಯು  "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎನ್ನುವುದಾಗಿದ್ದು ಈ ಪ್ರಾಚೀನ ಭಾರತೀಯ ಮಾದರಿಯನ್ನು ಜಾಗತಿಕವಾಗಿ ಉಪಯೋಗಿಸುತ್ತದೆ. ಆಸಕ್ತಿಗಳು ಮತ್ತು ಸಮಸ್ಯೆಗಳು ಎಲ್ಲಾ ಜನರ ಮೇಲೆ ಒಂದೇ ರೀತಿ ಪರಿಣಾಮ ಬೀರುತ್ತವೆ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ನಾವು ಸಹಕರಿಸಬೇಕು ಎಂದು ಅದರ ಅರ್ಥ.

ಅಕ್ಟೋಬರ್

ಉನ್ನತ ಸಾಧನೆಗಳನ್ನು ಮಾಡುತ್ತಿರುವಾಗ, ದೇಶದ ಮೂಲಭೂತ ಅಗತ್ಯಗಳ  ಪೂರೈಕೆಯ ಬಗ್ಗೆಯೂ ನಾವು ದೃಢವಾಗಿ ಗಮನಿಸುತ್ತೇವೆ. ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಮೂಲಕ ಎಲ್ಲಾ ಭಾರತೀಯರಿಗೆ ಆಹಾರದ ಹಕ್ಕನ್ನು ಕೊಟ್ಟಿದೆ. ಆದ್ದರಿಂದ, ಅಕ್ಟೋಬರ್ ತಿಂಗಳ ವಿಷಯವು ಆಹಾರ ಭದ್ರತೆಯಾಗಿದೆ.

ನವೆಂಬರ್

ಭಾರತವನ್ನು ಆತ್ಮನಿರ್ಭರ ಮಾಡುವ ನಮ್ಮ ಪ್ರಧಾನಮಂತ್ರಿಯವರ ಉತ್ಸಾಹದಿಂದ ಪ್ರೇರಿತರಾಗಿ ನವೆಂಬರ್ ತಿಂಗಳಿನ ವಿಷಯವು ಸ್ವಾವಲಂಬಿ ಭಾರತವಾಗಿದೆ. ಈ ಕನಸು ಸೆಪ್ಟೆಂಬರ್ 2, 2022 ರಂದು ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭ ಮಾಡುವುದರೊಂದಿಗೆ ನನಸಾಗಿದೆ. ಇದು ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ಭಾರತ ನಿರ್ಮಿತ ಮೊದಲ ವಿಮಾನವಾಹಕ ನೌಕೆಯಾಗಿದೆ.

ಡಿಸೆಂಬರ್

ಈಶಾನ್ಯದ ಜನರ ಜೀವನವನ್ನು ಸುಲಲಿತಗೊಳಿಸುವ, ಅವರ ಸುಪ್ತ ಪ್ರತಿಭೆ ಮತ್ತು ಸಂಪತ್ತನ್ನು ಆಚರಿಸುವತ್ತ ಗಮನಹರಿಸಿರುವ ಪ್ರಧಾನಮಂತ್ರಿಯವರು, ಈಶಾನ್ಯದ ಎಂಟು ರಾಜ್ಯಗಳನ್ನು ಅಷ್ಟಲಕ್ಷ್ಮಿ ಎಂದು ಕರೆದಿದ್ದಾರೆ. ಇದು ಭಾರತದ ಏಳಿಗೆಗಾಗಿ ಈ ಎಂಟು ರಾಜ್ಯಗಳ ವ್ಯಾಪಾರ, ವಾಣಿಜ್ಯ, ನೈಸರ್ಗಿಕ ಸಂಪನ್ಮೂಲಗಳು ಮತ್ತು ವೈವಿಧ್ಯಮಯ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ ಮತ್ತು ಎಲ್ಲರನ್ನೊಳಗೊಂಡ ಭಾರತವನ್ನು ನಿರ್ಮಿಸುವತ್ತ ಹೆಜ್ಜೆಯಾಗಿದೆ.



(Release ID: 1887161) Visitor Counter : 230