ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್  ಅವರು ಜೀವವೈವಿಧ್ಯ ಒಡಂಬಡಿಕೆಯ ಪಕ್ಷಗಳ ಹದಿನೈದನೇ ಸಮಾವೇಶದ ಸಭೆಯಲ್ಲಿ ರಾಷ್ಟ್ರೀಯ ಹೇಳಿಕೆಯನ್ನು ನೀಡಿದ್ದಾರೆ

Posted On: 17 DEC 2022 9:20AM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಕೆನಡಾದ ಮಾಂಟ್ರಿಯಲ್ ನಲ್ಲಿ ನಡೆದ ಜೀವವೈವಿಧ್ಯ ಒಡಂಬಡಿಕೆಯ (ಸಿಬಿಡಿ) ಪಕ್ಷಗಳ ಹದಿನೈದನೇ ಸಮಾವೇಶದ (ಸಿಒಪಿ 15) ಸಭೆಯಲ್ಲಿ ಭಾರತದ ರಾಷ್ಟ್ರೀಯ ಹೇಳಿಕೆಯನ್ನು ನೀಡಿದರು. ಈ ಹೇಳಿಕೆಯನ್ನು ನೀಡಿದ ಶ್ರೀ ಯಾದವ್ ಅವರು, 

"ಮಾನ್ಯ ಸಭಾಧ್ಯಕ್ಷರೇ, ಘನತೆವೆತ್ತರೇ, ಮಹಿಳೆಯರೇ ಮತ್ತು ಮಹನೀಯರೇ,

ಜೀವವೈವಿಧ್ಯ ಸೇರಿದಂತೆ ಎಲ್ಲ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿಶ್ವಾಸಾರ್ಹ ಕ್ರಮವೇ ಶಕ್ತಿ ಮತ್ತು ಆಶಾವಾದದ ಮೂಲವಾಗಿದೆ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಭಾರತವು ಜಾಗತಿಕ ಜನಸಂಖ್ಯೆಯ ಶೇಕಡಾ 17 ರಷ್ಟನ್ನು ಹೊಂದಿದ್ದರೂ, ಕೇವಲ 2.4 ಪ್ರತಿಶತದಷ್ಟು ಭೂಪ್ರದೇಶ ಮತ್ತು ಅದರ ಜಲ ಸಂಪನ್ಮೂಲದ ಕೇವಲ 4 ಪ್ರತಿಶತವನ್ನು ಹೊಂದಿದ್ದರೂ, ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದೇವೆ.

ನಮ್ಮ ವನ್ಯಜೀವಿಗಳ ಸಂಖ್ಯೆಯೊಂದಿಗೆ ನಮ್ಮ ಅರಣ್ಯ ಮತ್ತು ಮರಗಳ ವ್ಯಾಪ್ತಿ ಕೂಡಾ ಸ್ಥಿರವಾಗಿ ಹೆಚ್ಚುತ್ತಿದೆ. ಸಾಂಪ್ರದಾಯಿಕ ಚೀತಾಗಳನ್ನು ಭಾರತೀಯ ಆವಾಸಸ್ಥಾನಗಳಿಗೆ ಮರಳಿ ತರಲು ಖಚಿತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತವು ತನ್ನ ಘೋಷಿತ ರಾಮ್ಸಾರ್ ತಾಣಗಳ ಸಂಖ್ಯೆಯನ್ನು ಎಪ್ಪತ್ತೈದಕ್ಕೆ ಹೆಚ್ಚಿಸಿದೆ. ಒಂದು ದೊಡ್ಡ ಅಭಿವೃದ್ಧಿಶೀಲ ದೇಶವಾಗಿ, ನಮ್ಮ ಅರಣ್ಯ ನೀತಿಯನ್ನು ಜಾರಿಗೆ ತರುವುದು ಸವಾಲಾಗಿದ್ದರೂ, ನಮ್ಮ ಅರಣ್ಯ ಸಮೀಕ್ಷೆಗಳು ಅದರ ಯಶಸ್ಸಿಗೆ ಸಾಕ್ಷಿಯಾಗಿವೆ.

ಐಚಿ(Aichi) ಗುರಿಗಳನ್ನು ಕಾರ್ಯಗತಗೊಳಿಸುವಲ್ಲಿ ಭಾರತದ ಆಯ-ವ್ಯಯ ಪಟ್ಟಿ ಸಕ್ರಿಯ ಮತ್ತು ದೂರದೃಷ್ಟಿಯಿಂದ ಕೂಡಿದೆ. ಈ ನಿಟ್ಟಿನಲ್ಲಿ ಭಾರತವು ತನ್ನ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿದೆ.

ಅಂತೆಯೇ, ಇತರ ಅಭಿವೃದ್ಧಿಶೀಲ ರಾಷ್ಟ್ರಗಳಂತೆ, ನಮ್ಮ ಕೃಷಿಯು ನೂರಾರು ಮಿಲಿಯನ್ ಜನರ ಜೀವನ, ಜೀವನೋಪಾಯ ಮತ್ತು ಸಂಸ್ಕೃತಿಯ ಮೂಲವಾಗಿದೆ. ಅಂತಹ ದುರ್ಬಲ ವರ್ಗಗಳಿಗೆ ಅಗತ್ಯ ಬೆಂಬಲವನ್ನು ಸಬ್ಸಿಡಿಗಳು ಎಂದು ಕರೆಯುವುದು ಸೂಕ್ತವಾಗುವುದಿಲ್ಲ. ಅವುಗಳನ್ನು ತರ್ಕಬದ್ಧಗೊಳಿಸಬಹುದು. ಸಕಾರಾತ್ಮಕ ಹೂಡಿಕೆಯ ಮೂಲಕ ಜೀವವೈವಿಧ್ಯವನ್ನು ಉತ್ತೇಜಿಸಬೇಕು. ಅಂತೆಯೇ, ಕೀಟನಾಶಕಗಳ ಕಡಿತಕ್ಕೆ ಜಾಗತಿಕ ಸಾಂಖ್ಯಿಕ ಗುರಿಯು ಅನಗತ್ಯವಾಗಿದ್ದು ಅದನ್ನು ನಿರ್ಧರಿಸಲು ಆಯಾ ದೇಶಗಳಿಗೆ ಬಿಟ್ಟು ಬಿಡಬೇಕು.

ಆಕ್ರಮಣಕಾರಿ ಪರಕೀಯ ಪ್ರಭೇದಗಳನ್ನು ದೂರವಿಡಲು ಭಾರತವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಅಗತ್ಯ ಮಾನದಂಡ ಮತ್ತು ಸಂಬಂಧಿತ ವೈಜ್ಞಾನಿಕ ಪುರಾವೆಗಳಿಲ್ಲದೆ ಒಂದು ಸಂಖ್ಯಾತ್ಮಕ ಗುರಿಯನ್ನು ಕಾರ್ಯಸಾಧ್ಯ ಮಾಡುವುದು ಅಸಾಧ್ಯವಾಗಿದೆ.

ಮಹನೀಯರೇ,

ಜೀವವೈವಿಧ್ಯ ಕುರಿತಾದ ಒಡಂಬಡಿಕೆಯಲ್ಲಿ ಸೂಚಿಸಿರುವಂತೆ, ವಿಜ್ಞಾನ ಮತ್ತು ಸಮಾನತೆಯ ಬೆಳಕಿನಲ್ಲಿ ಜಾಗತಿಕ ಜೀವವೈವಿಧ್ಯದ ಚೌಕಟ್ಟನ್ನು ರೂಪಿಸಿ ತಮ್ಮ ಸಂಪನ್ಮೂಲಗಳ ಮೇಲೆ ರಾಷ್ಟ್ರಗಳ ಸಾರ್ವಭೌಮ ಹಕ್ಕನ್ನು ನಿರ್ಣಯಿಸಬೇಕು. ಹವಾಮಾನವು ಜೀವವೈವಿಧ್ಯದೊಂದಿಗೆ ಗಾಢವಾಗಿ ಸಂಬಂಧ ಹೊಂದಿದ್ದರೆ, ಸಮಾನತೆ ಮತ್ತು ಸಾಮಾನ್ಯ ತತ್ವ, ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ ತತ್ವವು ಜೀವವೈವಿಧ್ಯಕ್ಕೂ ಕೂಡಾ ಸಮಾನವಾಗಿ ಅನ್ವಯವಾಗಬೇಕು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಚಾರಿತ್ರಿಕ ಅಸಮತೋಲನ ಮತ್ತು ನ್ಯಾಯಸಮ್ಮತವಲ್ಲದ ಹಸಿರುಮನೆ ಅನಿಲ ಹೊರಸೂಸುವಿಕೆಗಳಿಂದಾಗಿ ಪ್ರಕೃತಿಯೇ ಸ್ವತಃ ಒತ್ತಡದಲ್ಲಿರುವಾಗ, ಜಾಗತಿಕ ತಾಪಮಾನ ಏರಿಕೆ ಮತ್ತು ಇತರ ಪರಿಸರ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳು ತಮ್ಮ ಐತಿಹಾಸಿಕ ಮತ್ತು ಪ್ರಸ್ತುತ ಜವಾಬ್ದಾರಿಗಳನ್ನು ಅಳೆಯಲು ಅಭಿವೃದ್ಧಿ ಹೊಂದಿದ ದೇಶಗಳು ದೃಢನಿರ್ಧಾರದ ಕ್ರಮವನ್ನೇ ತೆಗೆದುಕೊಳ್ಳಬೇಕಾಗಿದೆ. ಪ್ರಕೃತಿ ತನ್ನನ್ನು ತಾನು ರಕ್ಷಿಸಿಕೊಳ್ಳದಿದ್ದರೆ, ಅದನ್ನು ರಕ್ಷಿಸಲು ಸಾಧ್ಯವಿಲ್ಲ. ಪ್ರಕೃತಿಯು ಜಾಗತಿಕ ತಾಪಮಾನ ಏರಿಕೆಯ ಬಲಿಪಶುವಾಗಿದ್ದು, ಅದರ ರಕ್ಷಣಾತ್ಮಕ ಲಕ್ಷಣಗಳು ಅನಿಯಂತ್ರಿತ ತಾಪಮಾನ ಏರಿಕೆಯ ವಿರುದ್ಧ ಏನೂ ಮಾಡಲು ಸಾಧ್ಯವಿಲ್ಲ.

ನಾವು ಕೇವಲ ರಕ್ಷಿಸಿ, ಸಂರಕ್ಷಿಸಲು ಮತ್ತು ಪುನಃಸ್ಥಾಪಿಸಲು ಸಾಧ್ಯವಿಲ್ಲ. ನಾವು ಸುಸ್ಥಿರ ಬಳಕೆಯನ್ನು ಉತ್ತೇಜಿಸಬೇಕು. ಈ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 2022 ರ ಅಕ್ಟೋಬರ್ 20 ರಂದು ಗುಜರಾತ್ ನ ಏಕತಾ ನಗರದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಆಂಟೋನಿಯೊ ಗುಟೆರಸ್ ಅವರ ಉಪಸ್ಥಿತಿಯಲ್ಲಿ ಪ್ರಾರಂಭಿಸಿದ ಎಲ್.ಐ.ಎಫ್.ಇ. - ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್ ಅನ್ನು ಕೇಂದ್ರೀಕರಿಸಿ ಜನಾಂದೋಲನಕ್ಕೆ ನೀಡಿದ ಕರೆಯು ಮಹತ್ವ ಪಡೆದುಕೊಂಡಿದೆ.

ಮಹನೀಯರೇ,

ಅನುಷ್ಠಾನದ ಸಾಧನಗಳ ನಿಬಂಧನೆಗಳು ನಮ್ಮ ಮಹತ್ವಾಕಾಂಕ್ಷೆಗೆ ಹೊಂದಿಕೆಯಾಗಬೇಕು. ಎಂ.ಡಿ.ಜಿ.ಗಳು ಎಂಟು ಗುರಿಗಳನ್ನು ಹೊಂದಿದ್ದರೆ, ಎಸ್. ಡಿ.ಜಿ.ಗಳು 17 ಗುರಿಗಳನ್ನು ಹೊಂದಿವೆ, ಐಚಿ ಜೀವವೈವಿಧ್ಯದ ಗುರಿಗಳು 20, ಮತ್ತು ಜಾಗತಿಕ ಜೀವವೈವಿಧ್ಯ ಚೌಕಟ್ಟು (ಜಿ.ಬಿ.ಎಫ್.) 23 ಗುರಿಗಳನ್ನು ಹೊಂದಿದೆ. ಈ ಗುರಿಗಳ ಮೂಲಕ ಹೆಚ್ಚಿದ ನಿರೀಕ್ಷೆಗಳು, ವಿಶೇಷವಾಗಿ ಸಾರ್ವಜನಿಕ ಹಣಕಾಸಿನ ಮೂಲಕ, ಅನುಷ್ಠಾನದ ಹೊಂದಾಣಿಕೆಯ ವಿಧಾನಗಳಿಗೆ ಕರೆ ನೀಡುತ್ತವೆ. ಅನೇಕ ಒಡಂಬಡಿಕೆಗಳನ್ನು ಪೂರೈಸುವ ಜಾಗತಿಕ ಪರಿಸರ ಸೌಲಭ್ಯವು ನಮ್ಮ ನಿಧಿಯ ಏಕೈಕ ಮೂಲವಾಗಿದೆ.

ಮನುಕುಲಕ್ಕೆ ಜೀವವೈವಿಧ್ಯದ ಮೌಲ್ಯವು ಸಾಂಸ್ಕೃತಿಕ ಮತ್ತು ಸಾಮಾಜಿಕತೆಯ ಜೊತೆಗೆ ಅದರ ಆರ್ಥಿಕ ಆಯಾಮದಲ್ಲಿಯೂ ಲಭ್ಯವಿದೆ. ಸುಸ್ಥಿರ ಬಳಕೆ, ಪ್ರವೇಶ ಮತ್ತು ಪ್ರಯೋಜನ ಹಂಚಿಕೆಯು ಜೀವವೈವಿಧ್ಯವನ್ನು ಉತ್ತೇಜಿಸುವುದು ಪ್ರಮುಖವಾಗಿದ್ದು, ಜೊತೆಗೆ ಇವು ಸಂರಕ್ಷಿಸುವ, ರಕ್ಷಿಸುವ ಮತ್ತು ಪುನಃಸ್ಥಾಪಿಸುವ ಪ್ರಯತ್ನಗಳಾಗಿವೆ. 

ಆಧುನಿಕ ತಂತ್ರಜ್ಞಾನಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನವು ನಮ್ಮ ಗುರಿಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಡಿಜಿಟಲ್ ಸೀಕ್ವೆನ್ಸಿಂಗ್ ಮಾಹಿತಿಯನ್ನು ನ್ಯಾಯಸಮ್ಮತ ಮತ್ತು ನ್ಯಾಯಯುತ ರೀತಿಯಲ್ಲಿ ಪ್ರವೇಶ ಮತ್ತು ಪ್ರಯೋಜನ ಹಂಚಿಕೆಗೆ ಸೇರ್ಪಡೆ ಮಾಡಬೇಕು. 

ಮಹನೀಯರೇ,

ನಮ್ಮ ಪೂರ್ವಜರು ಮತ್ತು ಸಂಪ್ರದಾಯಗಳು ನಮಗೆ ಒದಗಿಸಿದ ನಮ್ಮ ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಬಲವರ್ಧಿಸುವ ಫಲಪ್ರದ ಚರ್ಚೆಗಳನ್ನು ಭಾರತವು ನಿರೀಕ್ಷಿಸುತ್ತಿದೆ. ನಾವು ಕೇವಲ ಇದರ ರಕ್ಷಕರಾಗಿದ್ದೇವೆ. ಈ ಭೂಮಿ ತಾಯಿಯ ಶ್ರೀಮಂತ ಜೀವವೈವಿಧ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ, ಅದರ ಪ್ರಾಚೀನ ವೈಭವವನ್ನು ಪುನಃಸ್ಥಾಪಿಸುವುದು ಮತ್ತು ಮನುಕುಲ, ಪ್ರಕೃತಿ ಮತ್ತು ಎಲ್ಲ ಜೀವಿಗಳ ಅನುಕೂಲಕ್ಕಾಗಿ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಇಂದು ನಮ್ಮ ತುರ್ತು ಅವಶ್ಯಕತೆಯೆಂದರೆ, ಬುದ್ಧಿಹೀನ ಮತ್ತು ವಿನಾಶಕಾರಿ ಅನುಭೋಗದ ಬದಲು, ಪ್ರಜ್ಞಾಪೂರ್ವಕ ಮತ್ತು ಉದ್ದೇಶಪೂರ್ವಕ ಬಳಕೆ ಎಂದು ನಾನು ಪುನರುಚ್ಚರಿಸುತ್ತೇನೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪರಿಸರ ಪ್ರಜ್ಞೆಯ ಜೀವನಶೈಲಿಯತ್ತ ಜನಾಂದೋಲನ ಧ್ಯೇಯವಾದ ಎಲ್.ಐ.ಎಫ್.ಇ.ಗೆ ಚಾಲನೆ ನೀಡಿದ್ದಾರೆ. ಅದನ್ನು ಒಪ್ಪಿಕೊಂಡು, ಸಿಬಿಡಿಯ ಅಡಿಪಾಯ ತತ್ವಗಳನ್ನು ಅಕ್ಷರಶಃ ಅದರ ಉತ್ಸಾಹದಲ್ಲಿ ಅನುಷ್ಠಾನಗೊಳಿಸುವ ಮೂಲಕ ನಾವು ನ್ಯಾಯಸಮ್ಮತ ಮತ್ತು ಸುಸ್ಥಿರ ಪ್ರಪಂಚದೆಡೆಗೆ ಮುಂದುವರಿಯೋಣ. ಭಾರತದ ಅಧ್ಯಕ್ಷತೆಯ ಜಿ20ರ ಲಾಂಛನದಲ್ಲಿ ಈ ಚೈತನ್ಯವನ್ನು "ಒಂದೇ ಜಗತ್ತು, ಒಂದೇ ಕುಟುಂಬ" ಅಥವಾ "ವಸುಧೈವ ಕುಟುಂಬಕಂ" ಎಂದು ನೈಜವಾಗಿ ಸೆರೆಹಿಡಿಯಲಾಗಿದೆ.

ಜೈ ಹಿಂದ್ !!" 
ಎಂದು ತಮ್ಮ ಮಾತನ್ನು ಮುಗಿಸಿದರು.

*****


(Release ID: 1884497) Visitor Counter : 205