ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಮುಖ್‌ ಸ್ವಾಮಿ ಮಹಾರಾಜ್‌ ಜನ್ಮ ಶತಾಬ್ದಿ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಭಾಷಣ


ಅಕ್ಷರ ಧಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದರ್ಶನ ಪಡೆದ ಪ್ರಧಾನಿ

ಭಾರತೀಯ ಆಧ್ಯಾತ್ಮಿಕ ಪರಂಪರೆ ಹಾಗೂ ಚಿಂತನೆಗೆ ಶಾಶ್ವತ ಹಾಗೂ ಸಾರ್ವತ್ರಿಕ ಮಹತ್ವವಿದೆ

ಜನ್ಮ ಶತಮಾನೋತ್ಸವದ ಆಚರಣೆ ಸಂದರ್ಭ ದಲ್ಲಿ ವೇದಗಳ ಕಾಲದಿಂದ ವಿವೇಕಾನಂದರವರೆಗಿನ ಪಯಣದ ಅನಾವರಣ

ಪ್ರತಿಯೊಬ್ಬರ ಜೀವನದ ಪರಮೋಚ್ಛ ಗುರಿ ಸೇವೆಯಷ್ಟೇ

ಸ್ವಾಮಿಜೀ ಮಹಾರಾಜ್ ಅವರಿಂದ ಲೇಖನಿ ಪಡೆದು ನಾಮಪತ್ರ ಸಲ್ಲಿಸುವ ಸಂಪ್ರದಾಯ ರಾಜ್‌ಕೋಟ್‌ನಿಂದ ಕಾಶಿವರೆಗೆ ಮುಂದುವರಿದಿದೆ

ನಮ್ಮ ಸನಾತನ ಸಂಪ್ರದಾಯಗಳು ಕೇವಲ ಸಂಸ್ಕೃತಿ, ಧರ್ಮ, ನೀತಿ ಹಾಗೂ ಸಿದ್ಧಾಂತಗಳ ಪ್ರಚಾರಕ್ಕಷ್ಟೇ ಸೀಮಿತವಾಗದೆ, ಭಾರತೀಯ ಸಂತರು "ವಸುದೈವ ಕುಟುಂಬಕಂ" ಆಶಯದೊಂದಿಗೆ ಜಗತ್ತನ್ನೇ ಒಂದುಗೂಡಿಸಿದ್ದಾರೆ

ಪ್ರಮುಖ್‌ ಸ್ವಾಮಿ ಮಹಾರಾಜ್‌ ಅವರು ದೈವಭಕ್ತಿ ಹಾಗೂ ದೇಶಭಕ್ತಿಯಲ್ಲಿ ನಂಬಿಕೆ ಇಟ್ಟವರು

ʼರಾಜಸಿʼ ಅಥವಾ ʼತಾಮಸಿಕʼ ಅಲ್ಲ, "ಸ್ವಾತ್ವಿಕ"ರಾಗಿಯೇ ಮುಂದುವರಿಯಬೇಕು

Posted On: 14 DEC 2022 9:21PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನಲ್ಲಿ ನಡೆದ ಪ್ರಮುಖ್‌ ಸ್ವಾಮಿ ಮಹಾರಾಜ್‌ ಜನ್ಮ ಶತಾಬ್ಧಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದರು.  ಶಾಹಿಬಾಗ್ ನಲ್ಲಿ ಜಾಗತಿಕ ಕಚೇರಿ ಹೊಂದಿರುವ ಬಿಎಪಿಎಸ್‌ ಸ್ವಾಮಿ ನಾರಾಯಣ ಸಂಸ್ಥೆಯೊಂದಿಗೆ ಬಿಎಪಿಎಸ್‌ ಸ್ವಾಮಿ ನಾರಾಯಣ  ಮಂದಿರ ಆಯೋಜಿಸಿರುವ "ಪ್ರಮುಖ್‌ ಸ್ವಾಮಿ ಮಹಾರಾಜ್‌ ಜನ್ಮ ಶತಾಬ್ಧಿ ಮಹೋತ್ಸವʼʼವು ಜಗತ್ತಿನಾದ್ಯಂತ ವರ್ಷವಿಡೀ ಆಚರಣೆಯಾಗಿ ಪೂರ್ಣಗೊಂಡಿದೆ. ಇದೀಗ ಡಿ. 15ರಿಂದ 2023ರ ಜನವರಿ 15ರವರೆಗೆ ಅಹಮದಾಬಾದ್‌ನಲ್ಲಿ ಮಾಸಾಚರಣೆ ನಡೆಯಲಿದ್ದು, ನಿತ್ಯ ನಾನಾ ಕಾರ್ಯಕ್ರಮಗಳು, ಪ್ರದರ್ಶನಗಳು, ಚಿಂತನಶೀಲ ಗೋಷ್ಠಿಗಳು ನಡೆಯಲಿವೆ.

ಪ್ರಮುಖ್‌ ಸ್ವಾಮಿ ಮಹಾರಾಜ್‌ ಅವರಿಗೆ ವಂದಿಸುವ ಮೂಲಕ ಭಾಷಣ ಆರಂಭಿಸಿದ ಪ್ರಧಾನ ಮಂತ್ರಿಗಳು ಅಪೂರ್ವ ಸಮಾರಂಭಕ್ಕೆ ಸಾಕ್ಷಿಯಾಗಿರುವ ಎಲ್ಲರಿಗೂ ವಂದಿಸಿದರು. ದೈವತ್ವದ ಸಮ್ಮುಖದಲ್ಲಿ ಸಂಕಲ್ಪಗಳ ಹಿರಿಮೆ, ಪರಂಪರೆಯ ಹೆಮ್ಮೆಯ ಭಾವನೆ ಮನದಲ್ಲಿ ಮೂಡಿದೆ. ಈ  ಆವರಣದಲ್ಲಿರುವವರು ದೇಶದ ಎಲ್ಲ ವೈವಿಧ್ಯವನ್ನು ಇಲ್ಲೇ ಕಾಣಬಹುದಾಗಿದೆ ಎಂದು ಬಣ್ಣಿಸಿದರು.

ಇಂತಹ ಅದ್ಭುತ ಸಮಾವೇಶ ಆಯೋಜನೆಯಾಗಲು ತಮ್ಮ ಕಲ್ಪನಾ ಶಕ್ತಿಯನ್ನು ಧಾರೆ ಎರೆದು ಶ್ರಮಿಸಿದ ಪ್ರತಿಯೊಬ್ಬ ಸಂತರಿಗೂ ಧನ್ಯವಾದ ಅರ್ಪಿಸಲಾಗುವುದು. ಈ ಅದ್ಧೂರಿ ಸಮಾವೇಶವು ವಿಶ್ವದ ಗಮನ ಸೆಳೆಯುವುದು ಮಾತ್ರವಲ್ಲದೆ, ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ನೀಡುವ ಜತೆಗೆ ಗಾಢ ಪ್ರಭಾವವನ್ನೂ ಬೀರಲಿದೆ. ದೊಡ್ಡ ಸಮೂಹದ ಸಮಾಗಮದ ಜತೆಗೆ ಅದ್ಭುತ ಸ್ವರೂಪದಲ್ಲಿ ಸಮಾರಂಭ ಆಯೋಜಿಸಿರುವ ಸಂತರು, ಶ್ರೀಗಳ ಚಿಂತನೆಗೆ ಅಭಿನಂದನೆ ಸಲ್ಲಿಸುತ್ತೇವೆ. ಪುಣ್ಯ ಪ್ರಮುಖ್‌ ಸ್ವಾಮಿ ಮಹಾರಾಜ್‌ ಅವರು ತಮಗೆ ತಂದೆ ಸಮಾನರು ಎಂದು ಗೌರವ ಸಲ್ಲಿಸಿದ ಪ್ರಧಾನ ಮಂತ್ರಿಗಳು, ಪ್ರಮುಖ್‌ ಸ್ವಾಮಿ ಮಹಾರಾಜ್‌ ಅವರು ನಡೆಸುತ್ತಿರುವ ಕಾರ್ಯಕ್ರಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಜನ ಆಗಮಿಸಿದ್ದಾರೆ. ಭಾರತದ ಆಧ್ಯಾತ್ಮಿಕ ಸಂಪ್ರದಾಯ ಹಾಗೂ ಚಿಂತನೆಯ ಶಾಶ್ವತ, ಸಾರ್ವತ್ರಿಕ ಮಹತ್ವವನ್ನು ಸಾರುವ ಶತಮಾನೋತ್ಸವ ಆಚರಣೆಯು ವಿಶ್ವಸಂಸ್ಥೆಯಲ್ಲೂ ನಡೆದಿದೆ. ಸ್ವಾಮಿ ಮಹಾರಾಜ್‌ ಸೇರಿದಂತೆ ಭಾರತೀಯ ಮಹಾನ್‌ ಸಂತರ ಚಿಂತನೆಯ "ವಸುದೈವ ಕುಟುಂಬಕಂʼ ಆಶಯದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, ವೇದಗಳಿಂದ ಸ್ವಾಮಿ ವಿವೇಕಾನಂದವರೆಗಿನ ಪಯಣವನ್ನು ಈ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಕಾಣಬಹುದು. ಭಾರತದ ಶ್ರೀಮಂತ ಸಂತ ಪರಂಪರೆಯನ್ನು ಒಮ್ಮೆಗೆ ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಹೇಳಿದರು. ಹಾಗೆಯೇ, ನಮ್ಮ ಸಂತ ಪರಂಪರೆಯು ಕೇವಲ ಸಂಸ್ಕೃತಿ, ಧರ್ಮ, ನೀತಿ ಹಾಗೂ ಸಿದ್ಧಾಂತಗಳ ಪ್ರಚಾರಕ್ಕಷ್ಟೇ ಸೀಮಿತವಾಗದೆ ಭಾರತೀಯ ಸಂತರು "ವಸುದೈವ ಕುಟುಂಬಕಂ" ಭಾವನೆಯನ್ನು ಉತ್ತೇಜಿಸುವ ಮೂಲಕ ಜಗತ್ತನ್ನು ಒಟ್ಟುಗೂಡಿಸಿದ್ದಾರೆ ಎಂದು ಶ್ಲಾಘಿಸಿದರು.


ಸ್ವಾಮಿ ಜಿ ಅವರೊಂದಿಗಿನ ಒಡನಾಟನವನ್ನು ಸ್ಮರಿಸಿದ ಪ್ರಧಾನ ಮಂತ್ರಿಗಳು, "ನನ್ನ ಬಾಲ್ಯ ಜೀವನದಿಂದಲೂ ಪರಮಪೂಜ್ಯ ಪ್ರಮುಖ್‌ ಸ್ವಾಮಿ ಮಹಾರಾಜ್‌ ಜಿ ಅವರ ಚಿಂತನೆಗಳಿಗೆ ಆಕರ್ಷಿತನಾಗಿದ್ದೇನೆ. ನನ್ನ ಜೀವನದಲ್ಲಿ ಅವರನ್ನು ಎಂದಾದರೂ ಒಮ್ಮೆ ಅವರನ್ನು ಭೇಟಿಯಾಗುತ್ತೇನೆ ಎಂಬ ಯೋಚನೆ ಕೂಡ ಇರಲಿಲ್ಲ. 1981ರಲ್ಲಿ ನಾನು ಸತ್ಸಂಗ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದೆ. ಆಗ ಅವರು ಸೇವೆಯ ಕುರಿತಷ್ಟೇ ಮಾತನಾಡಿದ್ದರು . ಅವರ ಪ್ರತಿಯೊಂದು ಮಾತು, ಪದ ನನ್ನ ಹೃದಯದಲ್ಲಿ ಅಚ್ಚೊತ್ತಿದವು. ಪ್ರತಿಯೊಬ್ಬರ ಜೀವನದ ಪರಮೋಚ್ಛ ಗುರಿ ಸೇವೆಯೇ ಆಗಿರಬೇಕು ಎಂಬುದು ಅವರ ಮಾತುಗಳ ಸ್ಪಷ್ಟ ಸಂದೇಶವಾಗಿತ್ತು. ಅನುಕರಿಸುವವರ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೇಗೆ ಸಂದೇಶಗಳನ್ನು ಅಳವಡಿಸಿಕೊಳ್ಳಬಹುದು ಎಂಬುದು ರೂಢಿಯಾಗುವಂತೆ ಮಾಡುತ್ತಿದ್ದುದು ಅವರ ವ್ಯಕ್ತಿತ್ವದ ವೈಶಾಲ್ಯವನ್ನು ತೋರಿಸುತ್ತದೆ. ಎಲ್ಲರೂ ಅವರನ್ನು ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಎಂದು ತಿಳಿದಿದ್ದಾರೆ. ಆದರೆ ನೈಜ ಅರ್ಥದಲ್ಲಿ ಹೇಳುವುದಾದರೆ ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಆಧುನಿಕ ಅವಕಾಶಗಳ ಬಗ್ಗೆ ಸ್ವಾಮಿಜೀ ಅವರಿಗೆ ಅದ್ಭುತ ಗ್ರಹಿಕೆ ಇತ್ತು. ಹಾಗೆಯೇ ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿತ್ತು. ಸಮಾಜದ ಸುಧಾರಣೆ ಅವರ ಆದ್ಯತೆಯಾಗಿತ್ತು ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. "ಪರಮ ಪೂಜ್ಯ ಪ್ರಮುಖ್‌ ಸ್ವಾಮೀಜಿ ಅವರೊಬ್ಬ ಸುಧಾರಕರಾಗಿದ್ದರು. ಪ್ರತಿಯೊಬ್ಬರಲ್ಲೂ ಒಳ್ಳೆಯತನವನ್ನೇ ಕಂಡು ಅವರು ತಮ್ಮ ಸಾಮರ್ಥ್ಯಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಪ್ರೋತ್ಸಾಹಿಸುತ್ತಿದ್ದುದು ಅವರ ವಿಶೇಷ ಗುಣ. ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೂ ಅವರು ನೆರವಾಗಿದ್ದಾರೆ. ಇತ್ತೀಚೆಗೆ ಮೊರ್ಬಿಯ ಮಚ್ಚು ಅಣೆಕಟ್ಟಿನ ದುರಂತ ಸಂದಭದಲ್ಲಿ ಅವರ ಸ್ಪಂದನೆ ಹಾಗೂ ಪ್ರಯತ್ನಗಳನ್ನು ನಾನು ಎಂದಿಗೂ ಮರೆಯಲಾರೆ," ಎಂದ ಪ್ರಧಾನ ಮಂತ್ರಿಗಳು, ಸ್ವಾಮಿ ಜೀ ಭೇಟಿಯಾದ ಸಂದರ್ಭಗಳ ಘಟನಾವಳಿಗಳನ್ನು ಮೆಲುಕು ಹಾಕಿದರು.

ಈ ಹಿಂದೆ ಅಂದರೆ 2002ರಲ್ಲಿ ರಾಜ್‌ಕೋಟ್‌ನಿಂದ ಅಭ್ಯರ್ಥಿಯಾಗಿದ್ದನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, "ಚುನಾವಣಾ ಪ್ರಚಾರ ಸಂದರ್ಭದಲ್ಲಿ ನನ್ನನ್ನು ಭೇಟಿಯಾದ ಇಬ್ಬರು ಸಂತರು ಪ್ರಮುಖ್‌ ಸ್ವಾಮಿ ಮಹಾರಾಜ್‌ ಜೀ ಅವರು ತಮಗೆ ಈ ಪೆನ್‌ ನೀಡಿದ್ದು, ಇದರಲ್ಲೇ ನಾಮಪತ್ರಕ್ಕೆ ಸಹಿ ಹಾಕಿ ಸಲ್ಲಿಸುವಂತೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು. "ಅಲ್ಲಿಂದ ಇತ್ತೀಚಿನ ಕಾಶಿ ಚುನಾವಣೆವರೆಗೆ ಇದೇ ಅಭ್ಯಾಸ ನಡೆದುಕೊಂಡು ಬಂದಿದೆ ಎಂದು ಹೇಳಿದರು. ಒಬ್ಬ ತಂದೆ ಹಾಗೂ ಪುತ್ರನ ಸಂಬಂಧಕ್ಕೆ ಹೋಲಿಸಿದ ಪ್ರಧಾನ ಮಂತ್ರಿಗಳು, ಈ ಹಿಂದೆ ಕಛ್‌ನಲ್ಲಿ ಸ್ವಯಂಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಪ್ರಮುಖ್‌ ಸ್ವಾಮಿ ಮಹಾರಾಜ್‌ ಅವರು ಊಟದ ವ್ಯವಸ್ಥೆ ಮಾಡಿದ್ದನ್ನೂ ಸ್ಮರಿಸಿದರು. ಕಳೆದ 40 ವರ್ಷಗಳಿಂದ ಒಂದು ವರ್ಷವೂ ತಪ್ಪದಂತೆ ಪ್ರತಿ ವರ್ಷ ಪೂಜ್ಯ ಸ್ವಾಮೀ ಜೀಯವರಿಂದ ಕುರ್ತಾ ಪೈಜಾಮ ಸ್ವೀಕರಿಸುತ್ತಿರುವುದನ್ನು ಹಂಚಿಕೊಂಡರು. ಇದು ತಂದೆ ಹಾಗೂ ಮಗ ನಡುವಿನ ಆಧ್ಯಾತ್ಮಿಕ ಸಂಬಂಧ ಎನ್ನುತ್ತಾ ಭಾವುಕರಾದ ಪ್ರಧಾನ ಮಂತ್ರಿಗಳು, ದೇಶ ಸೇವೆಯಲ್ಲಿನ ಪ್ರತಿಯೊಂದು ನಡೆಯನ್ನು ಸ್ವಾಮೀಜಿಯವರು ಗಮನಿಸುತ್ತಿರುವುದು ಖಾತರಿಯಾಗಿದೆ ಎಂದು ಹೇಳಿದರು.

ತಮ್ಮ ಹಾಗೂ ಪ್ರಮುಖ್‌ ಸ್ವಾಮೀಜಿಯವರೊಂದಿಗಿನ ಸಂಬಂಧದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದ ಪ್ರಧಾನ ಮಂತ್ರಿಗಳು, 1991ರಲ್ಲಿ ಡಾ. ಮುರಳಿ ಮನೋಹರ ಜೋಷಿ ಅವರ ನೇತೃತ್ವದಲ್ಲಿ ನಡೆದ ಏಕತಾ ಯಾತ್ರೆಯ ಪ್ರತಿಕೂಲ ಸಂದರ್ಭದಲ್ಲಿ ನಾನು ಜಮ್ಮು ತಲುಪಿದಾಗ ಮೊದಲ ಕರೆ ಮಾಡಿದವರು ಸ್ವಾಮಿ ಮಹಾರಾಜ್‌ ಜೀ ಎಂದು ನೆನಪಿಸಿಕೊಂಡರು. "ಲಾಲ್‌ಚೌಕದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಜಮ್ಮುವಿಗೆ ಹಿಂತಿರುಗುತ್ತಿದ್ದಂತೆ ನನಗೆ ಕರೆ ಮಾಡಿದ ಮೊದಲ ವ್ಯಕ್ತಿ ಎಂದರೆ ಅದು ಪ್ರಮುಖ್‌ ಸ್ವಾಮಿ ಮಹಾರಾಜ್‌. ಅವರು ನನ್ನ ಯೋಗಕ್ಷೇಮದ ಬಗಗ್ಗೆ ವಿಚಾರಿಸಿದರು,ʼʼ ಎಂದು ಹೇಳಿದರು. ಅಕ್ಷರ ಧಾಮ ದೇವಾಲಯದ ಮೇಲೆ ಭಯೋತ್ಪಾದಕ ಧಾಳಿಯ ಕರಾಳ ಸಂದರ್ಭವನ್ನೂ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು, ಅಂತಹ ಪ್ರಕ್ಷುಬ್ಧ ಸಂದಭದಲ್ಲೂ ಶಾಂತಿ ಕಾಪಾಡಿಕೊಳ್ಳುವ ಬಗ್ಗೆ ಪ್ರಮುಖ್‌ ಸ್ವಾಮಿ  ಮಹಾರಾಜ್‌ ಅವರೊಂದಿಗೆ ನಡೆದ ಮಾತುಕತೆಯನ್ನು ಸ್ಮರಿಸಿದರು. ಇದು ಪೂಜ್ಯ ಸ್ವಾಮಿ ಜೀ ಅವರಲ್ಲಿನ ಆಂತರಿಕ ಆಧ್ಯಾತ್ಮಿಕ ಶಕ್ತಿಯಿಂದಷ್ಟೇ ಈ ರೀತಿ ಮಾನಸಿಕ ಸಮತೋಲನ ಸಾಧ್ಯವಾದಂತೆ ಕಾಣುತ್ತದೆ ಎಂದು ಹೇಳಿದರು.

ಪ್ರಮುಖ್‌ ಸ್ವಾಮಿ ಮಹಾರಾಜ್‌ ಅವರ ಯಮುನಾ ನದಿ ದಂಡೆಯಲ್ಲಿ ಅಕ್ಷರ ಧಾಮ ನಿರ್ಮಾಣ ಆಶಯವನ್ನೂ ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, "ಪ್ರಮುಖ ಸ್ವಾಮಿ ಮಹಾರಾಜ್ ಅವರ ಶಿಷ್ಯರಾಗಿದ್ದ ಮಹಂತ ಸ್ವಾಮಿ ಮಹಾರಾಜ್ ಅವರ ದೂರದೃಷ್ಟಿಯ ಬಗ್ಗೆಯೂ ಸ್ಮರಿಸಿದರು. ಜನರು ಮಹಾಂತ ಸ್ವಾಮಿ ಮಹಾರಾಜ್ ಅವರನ್ನು ಗುರುವಾಗಿ ಕಾಣುತ್ತಿದ್ದರೂ ಅವರ ಶಿಷ್ಯರಾಗಿ ಪ್ರಮುಖ್ ಸ್ವಾಮಿ ಮಹಾರಾಜ್ ಜೀ ಅವರ ಸಮರ್ಪಣಾಭಾವದ ಬಗ್ಗೆ ತಿಳಿದಿದೆ. “ಅವರ ದೂರದೃಷ್ಟಿ ಮತ್ತು ಸಮರ್ಪಣಾ ಮನೋಭಾವದ ಫಲವಾಗಿ ಯಮುನಾ ನದಿ ದಂಡೆಯಲ್ಲಿ ಅಕ್ಷರಧಾಮ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರತಿವರ್ಷ ಹತ್ತಾರು ಲಕ್ಷ ಜನ ಅಕ್ಷರ ಧಾಮ ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ವೈಭವವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಪ್ರಮುಖ್‌ ಸ್ವಾಮಿ ಮಹಾರಾಜ್‌ ಜೀ ಅವರ ಚಿಂತನೆಯ ಫಲವನ್ನು ಕಾಣಬಹುದು. ನಮ್ಮ ದೇವಾಲಯಗಳ ಆಧುನೀಕರಣ ಹಾಗೂ ಸಂಪ್ರದಾಯಕ್ಕೆ ನೀಡಿರುವ ಆದ್ಯತೆಯನ್ನು ತೋರಿಸುತ್ತದೆ. ಅವರಂತಹ ಶ್ರೇಷ್ಠರು ಹಾಗೂ ರಾಮಕೃಷ್ಣ ಮಿಷನ್‌ನಂತಹ ಸಂಸ್ಥೆಗಳು ಸಂತ ಪರಂಪರೆಯನ್ನು ಪುನರ್‌ವ್ಯಾಖ್ಯಾನಿಸಿವೆ. ಪೂಜ್ಯ ಸ್ವಾಮಿ ಜೀ ಅವರು ಆಧ್ಯಾತ್ಮಿಕ ಉನ್ನತಿಗೆ ಮೀರಿದ ಸಾಂಪ್ರದಾಯಿಕ ಸೇವೆಯನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಒಬ್ಬ ಸಂತರು ಪರಿತ್ಯಾಗದ ಹೊರತಾಗಿಯೂ ಸಮರ್ಥರಾಗಿ, ಪಾರಂಗತರಾಗಿರಬೇಕು ಎಂಬುದನ್ನು ಖಾತರಿಪಡಿಸಿದ್ದಾರೆ. ಸ್ವಾಮಿ ಜೀ ಅವರು ಸಮಗ್ರ ಆಧ್ಯಾತ್ಮಿಕ ತರಬೇತಿಗಾಗಿ ಸಾಂಸ್ಥಿಕ  ವ್ಯವಸ್ಥೆ ರೂಪಿಸಿರುವುದು ಮುಂದಿನ ಹಲವು ಪೀಳಿಗೆಯವರಿಗೆ ಪ್ರಯೋಜನವಾಗಲಿದೆ. "ದೈವಭಕ್ತಿ ಹಾಗೂ ದೇಶ ಭಕ್ತಿ ನಡುವೆ ಎಂದು ಎಂದಿಗೂ ಭೇದ ಎಣಿಸಿರಲಿಲ್ಲ.,ʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನ ಮಂತ್ರಿಗಳು, ಅವರ ದೃಷ್ಟಿಯಲ್ಲಿ ದೈವಭಕ್ತಿ ಹಾಗೂ ದೇಶಭಕ್ತಿಗಾಗಿ ಬದುಕುವವರ ಸತ್ಸಂಗಿಗಳು. ನಮ್ಮ ಸಂತರು ಸಂಕುಚಿತ ಪಂಗಡ ಭೇದಗಳನ್ನು ಮೀರಿ ಜಗತ್ತನ್ನೇ ಒಂದುಗೂಡಿಸಲು ವಸುದೈವ ಕುಟುಂಬಕಂ' ಆಶಯವನ್ನು ಸಾಕಾರಗೊಳಿಸಲು ಶ್ರಮಿಸಿದ್ದಾರೆ ಎಂದು ಗುಣಗಾನ ಮಾಡಿದರು.

ಭಾಷಣ ಮುಕ್ತಾಯಗೊಳಿಸುವ ಹೊತ್ತಿನಲ್ಲಿ ಅವರ ಆತ್ಮಸಾಕ್ಷಿಯ ಪಯಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿಗಳು ತಾವು ಯಾವಾಗಲೂ ಸಂತರ ಹಾಗೂ ಆಧುನಿಕ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವುದನ್ನು ಉಲ್ಲೇಖಿಸಿದರು. "ಜಗತ್ತಿನಾದ್ಯಂತ ಇಂದಿನ ಪ್ರತಿಕಾರದ ಸಂದರ್ಭದಲ್ಲಿ ಪ್ರಮುಖ್‌ ಸ್ವಾಮಿ ಮಹಾರಾಜ್‌ ಹಾಗೂ ಮಹಾಂತ ಸ್ವಾಮಿ ಮಹಾರಾಜ್‌ರಂತಹವರ ಸದ್ಗುಣಶೀಲರಿರುವ ವಾತಾವರಣ, ಒಡನಾಟ ದೊರಕಿರುವುದು ಅದೃಷ್ಟವೇ ಸರಿ. ನಾನು ಈ ವಾತಾವರಣದಲ್ಲಿ ದಣಿದ ವ್ಯಕ್ತಿ ದೊಡ್ಡ ಆಲದ ಮರದ ನೆರಳಿನಲ್ಲಿ ದಣಿವಾರಿಸಿಕೊಳ್ಳುತ್ತಿರುವ ರೀತಿಯಲ್ಲಿ ಇದ್ದೇನೆ. ‘ರಾಜಸಿ’ ಅಥವಾ ‘ತಾಮಸಿಕʼರಾಗದೆ ‘ಸಾತ್ವಿಕ’ರಾಗಿ ಉಳಿದುಕೊಂಡು ಮುಂದುವರಿಯುವುದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ಹೇಳಿ ಮಾತಿಗೆ ವಿರಾಮ ಹೇಳಿದರು.

ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಪರಮಪೂಜ್ಯ ಮಹಾಂತ ಸ್ವಾಮಿ ಮಹಾರಾಜ್ ಮತ್ತು ಪೂಜ್ಯ ಈಶ್ವರಚರಣ ಸ್ವಾಮಿ ಉಪಸ್ಥಿತರಿದ್ದರು.

ಹಿನ್ನೆಲೆ

ಪರಮಪೂಜ್ಯ ಪ್ರಮುಖ್‌ ಸ್ವಾಮಿ ಮಹಾರಾಜ್‌ ಅವರು ಒಬ್ಬ ಮಾರ್ಗದರ್ಶಕರಾಗಿ, ಗುರುವಾಗಿ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಸಂಖ್ಯಾತ ಜನರನ್ನು ತಲುಪಿದ್ದಾರೆ. ಅವರು ಹೆಚ್ಚು ಗೌರವಾದರಗಳಿಂದ ಕಾಣುವ ಶ್ರೇಷ್ಠ ಆಧ್ಯಾತ್ಮಿಕ ಗುರುವಾಗಿದ್ದಾರೆ. ಆಧ್ಯಾತ್ಮಿಕ ಹಾಗೂ ಮಾನವೀಯತೆಯ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರದ್ದೇ ನೇತೃತ್ವದ ಬಿಎಪಿಎಸ್‌ ಸ್ವಾಮಿನಾರಾಯಣ ಸಂಸ್ಥೆಯು ಅಸಂಖ್ಯಾತರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉಪಕ್ರಮಗಳ ಮೂಲಕ ಲಕ್ಷಾಂತರ ಜನರಿಗೆ ಸಾಂತ್ವನದ ಜತೆಗೆ ನೆಮ್ಮದಿ ಪಡೆಯಲು ನೆರವಾಗಿದೆ.

ಪರಮ ಪೂಜ್ಯ ಪ್ರಮುಖ ಸ್ವಾಮಿ ಮಹಾರಾಜ್‌ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸುವ ಮೂಲಕ ಅವರ ಜೀವನ ಹಾಗೂ ಕಾರ್ಯ, ಸಂದೇಶಗಳನ್ನು ಸ್ಮರಿಸಲಾಗುತ್ತಿದೆ.  ಬಿಎಪಿಎಸ್‌ ಸ್ವಾಮಿ ನಾರಾಯಣ ಸಂಸ್ಥೆಯು ಸಾಹಿಬಾಗ್ ನಲ್ಲಿ ಜಾಗತಿಕ ಕಚೇರಿ ಹೊಂದಿದ್ದು, ಬಿಎಪಿಎಸ್‌ ಸ್ವಾಮಿನಾರಾಯಣ ಮಂದಿರವು ವಿಶ್ವಾದ್ಯಂತ ವರ್ಷವಿಡೀ ಆಯೋಜಿಸಿದ್ದ "ಪ್ರಮುಖ್‌ ಸ್ವಾಮಿ ಮಹಾರಾಜ್ ಜನ್ಮ ಶತಾಬ್ದಿ ಮಹೋತ್ಸವ'ಕ್ಕೆ ತೆರೆಬಿದ್ದಿದೆ . 2022ರ ಡಿ. 15ರಿಂದ 2023ರ ಜನವರಿ 15ರವರೆಗೆ ಅಹಮದಾಬಾದ್‌ನಲ್ಲಿ ಜನ್ಮ ಶತಮಾನೋತ್ಸವದ ಮಾಸಾಚರಣೆ ನಡೆಯಲಿದೆ. ಅದರ ಭಾಗವಾಗಿ ನಿತ್ಯ ನಾನಾ ಕಾರ್ಯಕ್ರಮ, ವಿಷಯಾಧಾರಿತ ಪ್ರದರ್ಶನಗಳು ಮತ್ತು ಚಿಂತನಾಗೋಷ್ಠಿಗಳು ನೆರವೇರಲಿವೆ.

ಶಾಸ್ತ್ರೀಜಿ ಮಹಾರಾಜ್‌ ಅವರು 1907ರಲ್ಲಿ ಬಿಎಪಿಎಸ್‌ ಸ್ವಾಮಿನಾರಾಯಣ ಸಂಸ್ಥೆಯನ್ನು  ಸ್ಥಾಪಿಸಿದರು. ವೇದಗಳ ಬೋಧನೆಯ ಆಧಾರದ ಜತೆಗೆ ಪ್ರಾಯೋಗಿಕ ಆಧ್ಯಾತ್ಮಿಕತೆಯ ಸ್ತಂಭಗಳ ಮೇಲೆ ಸಂಸ್ಥೆ ಸ್ಥಾಪನೆಯಾಗಿದ್ದು, ಇಂದಿನ ಆಧ್ಯಾತ್ಮಿಕ, ನೈತಿಕ ಮತ್ತು ಸಾಮಾಜಿಕ ಸವಾಲುಗಳನ್ನು ಪರಿಹರಿಸಲು ಬಿಎಪಿಎಸ್‌ ಸಹಕಾರಿಯಾಗಿದೆ. ಬಿಎಪಿಎಸ್‌ ನಂಬಿಕೆ, ಏಕತೆ ಮತ್ತು ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಸಂರಕ್ಷಿಸುವ ಗುರಿಯ ಜತೆಗೆ ಎಲ್ಲ ವರ್ಗದ ಜನರ ಆಧ್ಯಾತ್ಮಿಕ, ಸಾಂಸ್ಕೃತಿಕ, ದೈಹಿಕ ಮತ್ತು ಭಾವನಾತ್ಮಕ ಅಗತ್ಯಗಳಿಗೆ ಸ್ಪಂದಿಸಲು ಶ್ರಮಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಮಾನವೀಯ ಮೌಲ್ಯಗಳ ಪ್ರತಿಪಾದನೆ, ಪಾಲನೆಗೆ ಒತ್ತು ನೀಡಿದೆ.

*****



(Release ID: 1883777) Visitor Counter : 143