ರಾಷ್ಟ್ರಪತಿಗಳ ಕಾರ್ಯಾಲಯ

ಎಲ್ಬಿಎಸ್ಎನ್ಎಎ 97ನೇ ಮೂಲ ಕೋರ್ಸ್ನ ಸಮಾರೋಪ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಭಾಷಣ


ದಕ್ಷತೆ, ಸಂಯಮ, ಅನಾಮಧೇಯತೆ  ನಾಗರಿಕ ಸೇವೆ ಮಾಡುವ ಅಧಿಕಾರಿಗಳ ಭೂಷಣಗಳು: ರಾಷ್ಟ್ರಪತಿ ದ್ರೌಪದಿ  ಮುರ್ಮು

Posted On: 09 DEC 2022 1:22PM by PIB Bengaluru

ಉತ್ತರಾಖಂಡ್‌ ನ ಮಸ್ಸೂರಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯ 97ನೇ ಮೂಲ ಕೋರ್ಸ್ನ (ಎಲ್ಬಿಎಸ್ಎನ್ಎಎ) ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು.

ತರಬೇತಿ ಪಡೆಯುತ್ತಿರುವವರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಈ ಹಿಂದೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಹೇಳಿದ ಮಾತುಗಳು ನನಗೆ ನೆನಪಿಗೆ ಬರುತ್ತಿದೆ ಎಂದರು. 1947ರ ಆಗಸ್ಟ್ನಲ್ಲಿ ಐಎಎಸ್ ಟ್ರೈನಿಗಳ ಬ್ಯಾಚ್ ಅನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಭೇಟಿಯಾಗಿದ್ದರು. ಆ ಸಮಯದಲ್ಲಿ ಅವರು ಹೇಳಿದ್ದೇನು ಗೊತ್ತೆ. "ನಾವು ಸದಾ ನಿರೀಕ್ಷಿಸಬೇಕು. ನಾಗರಿಕ ಸೇವೆಗೆ ಆಯ್ಕೆಯಾಗುವ ಪುರುಷ ಅಥವಾ ಮಹಿಳಾ ಅಧಿಕಾರಿಯಿಂದ ಹಾಗೂ ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿದ್ದವರಿಂದ ಉತ್ತಮವಾದದ್ದನ್ನು ನಿರೀಕ್ಷಿಸುವ ಹಕ್ಕು ನಮಗಿದೆ" ಎಂದು ಹೇಳಿದ್ದರು. ಈ ನಿರೀಕ್ಷೆಗಳು ಈಗ ಬಹುತೇಕ ಈಡೇರಿದೆ. ಎಲ್ಲ ಅಧಿಕಾರಿಗಳು ಈಗ ಬದ್ಧತೆ ತೋರುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

ಈ ಮೂಲ ಕೋರ್ಸ್ನ ಮೂಲ ಮಂತ್ರ ಎಂದರೆ "ನಾವು, ನಾನು ಅಲ್ಲ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ಪಷ್ಟಪಡಿಸಿದರು.  ಈಗ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿ ಅಧಿಕಾರಿಗಳು,  ದೇಶವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಅನೇಕರು ಮುಂಬರುವ 10-15 ವರ್ಷಗಳ ಕಾಲ ಆಡಳಿತವನ್ನು ನಡೆಸಬೇಕಾಗುತ್ತದೆ ಮತ್ತು ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕಾಗುತ್ತದೆ ಎಂದು ದ್ರೌಪದಿ ಮುರ್ಮು ಹೇಳಿದರು. ಅಭಿವೃದ್ಧಿ ಪಥಕ್ಕೆ ಸಾಗಬೇಕು ಅನ್ನುವ ದೇಶದ ಕನಸಿಗೆ ನೀವು ನೀರೆರೆದು ಪೋಷಿಸಬೇಕಾಗುತ್ತದೆ. ಕನಸಿನ ಭಾರತಕ್ಕೆ ಸ್ಪಷ್ಟ ರೂಪ ನೀಡಬೇಕಾಗುತ್ತದೆ ಎಂದು ರಾಷ್ಟ್ರಪತಿಯವರು ತಿಳಿಸಿದರು.

ಅಕಾಡೆಮಿಯ ಧ್ಯೇಯವಾಕ್ಯವಾದ 'ಶೀಲಂ ಪರಮ ಭೂಷಣಂ' ಅಂದರೆ 'ನಮ್ಮ ಚಾರಿತ್ರ್ಯ ಅಥವಾ ನಡತೆಯೇ ಉನ್ನತ ಸದ್ಗುಣ ಅಥವಾ ಭೂಷಣ' ಎಂದು ರಾಷ್ಟ್ರಪತಿಗಳು ಉಲ್ಲೇಖಿಸಿದರು. ಎಲ್ಬಿಎಸ್ಎನ್ಎಎನಲ್ಲಿನ ತರಬೇತಿಯ ವಿಧಾನವು ಕರ್ಮ-ಯೋಗದ ತತ್ವವನ್ನು ಆಧರಿಸಿದೆ, ಇದರಲ್ಲಿ ನಡತೆಯು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಸಮಾಜದ ಹಿಂದುಳಿದ ವರ್ಗದ ಬಗ್ಗೆ ಸಂವೇದನಾಶೀಲರಾಗಿರಬೇಕು ಎಂದು ತರಬೇತಿ ಪಡೆಯುತ್ತಿರುವವರಿಗೆ ದ್ರೌಪದಿ ಮರ್ಮು ಸಲಹೆ ನೀಡಿದರು. 

‘ಅನಾಮಧೇಯತೆ’, ‘ದಕ್ಷತೆ’ ಮತ್ತು ‘ಕಠಿಣತೆ’ಯು ಅಧಿಕಾರಿಗಳಿಗೆ ನಿಜಕ್ಕೂ ಭೂಷಣವಾಗಿರುತ್ತವೆ ಎಂದು ರಾಷ್ಟ್ರಪತಿಯವರು ಹೇಳಿದರು. ಈ ಗುಣಗಳು ಸೇವಾ ಅವಧಿಯುದ್ದಕ್ಕೂ ಅವರಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ತರಬೇತಿ ಸಮಯದಲ್ಲಿ ನೀವು ಕಲಿತ ಪಾಠಗಳು, ಮೌಲ್ಯಗಳು ಕೇವಲ ಸಿದ್ಧಾಂತ ಹಾಗೂ ಥಿಯರಿಗೆ  ಸೀಮಿತವಾಗಬಾರದು ಎಂದು ರಾಷ್ಟ್ರಪತಿಗಳು ಮನವರಿಕೆ ಮಾಡಿದರು. ದೇಶದ ಜನರಿಗಾಗಿ ಕೆಲಸ ಮಾಡುವಾಗ ಅನೇಕ ಸವಾಲುಗಳನ್ನು ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಈ ಮೌಲ್ಯಗಳನ್ನು ಅನುಸರಿಸಿ ಸಂಪೂರ್ಣ ವಿಶ್ವಾಸದಿಂದ ಹಾಗೂ ಧೈರ್ಯದಿಂದ ಎಲ್ಲವನ್ನೂ ನಿಭಾಯಿಸಬೇಕು, ಸಂಯಮದಿಂದ ವರ್ತಿಸಬೇಕು. ಭಾರತವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದು ಮತ್ತು ಉನ್ನತಿಗೆ ದಾರಿ ಮಾಡಿಕೊಡುವುದು ನಿಮ್ಮ ಸಾಂವಿಧಾನಿಕ ಕರ್ತವ್ಯ ಮತ್ತು ನೈತಿಕ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜದ ಹಿತದೃಷ್ಟಿಯಿಂದ ಯಾವುದೇ ಕೆಲಸವಾಗಲಿ ಎಲ್ಲರೂ ಒಂದುಗೂಡಿದಾಗ ಮಾತ್ರ ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂದು ರಾಷ್ಟ್ರಪತಿಗಳು ತಿಳಿಸಿದರು. ಸಮಾಜದ ಅಂಚಿನಲ್ಲಿರುವ ಮತ್ತು ಸೌಲಭ್ಯ ವಂಚಿತ ಸಮುದಾಯವನ್ನು  ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ತಮ್ಮ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ ಎಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ವಿವರಿಸಿದರು.

ಉತ್ತಮ ಆಡಳಿತ ಇಂದಿನ ದಿನಮಾನದಲ್ಲಿ  ಅತ್ಯಗತ್ಯವಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಉತ್ತಮ ಆಡಳಿತದ ಕೊರತೆಯು ನಮ್ಮ ಅನೇಕ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಜನರ ಸಮಸ್ಯೆಗಳನ್ನು ಆಲಿಸಲು ಸಾಮಾನ್ಯ ಜನರೊಂದಿಗೆ ಬೆರೆಯಬೇಕು.  ಜನರೊಂದಿಗೆ ಸಂಪರ್ಕ ಸಾಧಿಸಲು ವಿನಯಶೀಲರಾಗಿರಬೇಕು. ಆಗ ಮಾತ್ರ ಅವರೊಂದಿಗೆ ಸಂವಾದ ನಡೆಸಿ ಅಗತ್ಯಗಳನ್ನು ಅರಿತು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.

ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಕುರಿತು ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಇಡೀ ಜಗತ್ತು ಈಗ ಇದರ ಸಮಸ್ಯೆ ವಿರುದ್ಧ ಹೋರಾಡುತ್ತಿದೆ, ಈ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ತುರ್ತು ಅಗತ್ಯವಿದೆ. ನಮ್ಮ ಭವಿಷ್ಯವನ್ನು ಉಜ್ವಲವಾಗಿಸಲು, ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಎಲ್ಲರೂ ಸಂಕಲ್ಪ ತೊಡಬೇಕು ಎಂದು ಭವಿಷ್ಯದ  ಅಧಿಕಾರಿಗಳಿಗೆ ಮನವಿ ಮಾಡಿದರು.

ಎಲ್ಬಿಎಸ್ಎನ್ಎಎ 97ನೇ ಮೂಲ ಕೋರ್ಸ್ನ  ಅಧಿಕಾರಿಗಳು ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷವಾಗಿರುವ ಅಮೃತ ಮಹೋತ್ಸವದ ವೇಳೆಯೇ  ನಾಗರಿಕ ಸೇವೆ ಮಾಡಲು ಪ್ರವೇಶಿಸುತ್ತಿದ್ದಾರೆ ಎಂದು ರಾಷ್ಟ್ರಪತಿಯವರು ಹೇಳಿದರು. ಮುಂದಿನ 25 ವರ್ಷಗಳಲ್ಲಿ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನೀತಿ ರಚನೆ ಮತ್ತು ಅದರ ಅನುಷ್ಠಾನದಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸುತ್ತೀರಿ ಎಂದು ದ್ರೌಪದಿ ಮುರ್ಮು ತಿಳಿಸಿದರು.

ಅಕಾಡೆಮಿಯಲ್ಲಿ ಇಂದು ಉದ್ಘಾಟನೆಗೊಂಡ 'ಸೇವಾ ಮಾರ್ಗ'ದ ಬಗ್ಗೆ ರಾಷ್ಟ್ರಪತಿಯವರು ಉಲ್ಲೇಖಿಸಿದರು. ಪ್ರತಿ ವರ್ಷ, ಅಧಿಕಾರಿ ಪ್ರಶಿಕ್ಷಣಾರ್ಥಿಗಳು ರಾಷ್ಟ್ರ ನಿರ್ಮಾಣದ ಗುರಿಗಳನ್ನು ಇರಿಸಿಕೊಂಡಿರುತ್ತಾರೆ. ಅವರು ನಿಗದಿಪಡಿಸಿದ ಗುರಿಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. ಅವುಗಳನ್ನು ಸಾಧಿಸಲು ನೀವು ನಿಮ್ಮ ಎಲ್ಲ ಪರಿಶ್ರಮ ಹಾಕಬೇಕು. ಅದಕ್ಕಾಗಿ ನಿಮ್ಮನ್ನು ನೀವು ಸಮರ್ಪಿಸಿಗೊಳ್ಳಬೇಕು. 2047 ರ ವೇಳೆಗೆ  ನೀವು ಇರಿಸಿಕೊಂಡಿದ್ದ ಗುರಿಗಳ ಬಗ್ಗೆ ಪರಾಮರ್ಶೆ ಮಾಡಿದಾಗ ಗುರಿಯನ್ನು ಸಾಧಿಸಿದ ನಿಮಗೆ ಹೆಮ್ಮೆ ಎನಿಸಬೇಕು. ನಿಮ್ಮ ಕಣ್ಣಲ್ಲಿ ವಿಶ್ವಾಸ ಕಾಣಬೇಕು, ಮುಖದಲ್ಲಿ ಮಂದಹಾಸ ಮೂಡಬೇಕು, ಮನಸಿನಲ್ಲಿ ಧನ್ಯತೆ, ತೃಪ್ತಿ ಮೂಡಿರಬೇಕು ಎಂದು ದ್ರೌಪದಿ ಮುರ್ಮು ತಿಳಿಸಿದರು.

ಎಲ್ಬಿಎಸ್ಎನ್ಎಎ ಸಮರ್ಥ ನಾಗರಿಕ ಸೇವಕರನ್ನು ದೇಶ ಸೇವೆಗೆ ರೂಪಿಸುವಲ್ಲಿ ಯಶಸ್ವಿಯಾಗಿದೆ. ಇದು ನಿಜಕ್ಕೂ ಅದ್ಭುತ ಕಾರ್ಯ. ಹಿಂದಿನ ಮತ್ತು ಪ್ರಸ್ತುತ ಅಧಿಕಾರಿಗಳು ಸಮರ್ಪಣೆ ಮತ್ತು ಕಠಿಣ ಪರಿಶ್ರಮ ತೋರಿರುವುದು ಶ್ಲಾಘನೀಯ ಎಂದು ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಹಾಸ್ಟೆಲ್ ಬ್ಲಾಕ್ ಮತ್ತು ಮೆಸ್ ಸೇರಿದಂತೆ ಇಂದು ಉದ್ಘಾಟನೆಗೊಂಡಿರುವ ಸೌಲಭ್ಯಗಳು ಪ್ರಶಿಕ್ಷಣಾರ್ಥಿ ಅಧಿಕಾರಿಗಳಿಗೆ ದೊರೆಯಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.. "ಪರ್ವತಮಾಲಾ ಹಿಮಾಲಯನ್ ಮತ್ತು ಈಶಾನ್ಯ ಹೊರಾಂಗಣ ಕಲಿಕೆ ಸ್ಥಳ", ಹಿಮಾಲಯ ಮತ್ತು ಈಶಾನ್ಯ ಭಾರತದ ನಾಗರಿಕ ಸೇವಾ ಆಕಾಂಕ್ಷಿಗಳು ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಜ್ಞಾನ ಒದಗಿಸುವ  ಕಾರ್ಯನಿರ್ವಹಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂಪೂರ್ಣ  ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ



(Release ID: 1882127) Visitor Counter : 83