ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತವು ಡ್ರೋನ್ ತಂತ್ರಜ್ಞಾನದ ಕೇಂದ್ರವಾಗಲಿದೆ - ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ 


ಮುಂದಿನ ವರ್ಷದ ವೇಳೆಗೆ ಭಾರತಕ್ಕೆ ಕನಿಷ್ಠ 1 ಲಕ್ಷ ಡ್ರೋನ್ ಪೈಲಟ್ ಗಳ ಅಗತ್ಯವಿದೆ ಎಂದು ಸಚಿವರ ಹೇಳಿಕೆ.

ಡ್ರೋನ್ ವಲಯದಲ್ಲಿ ವರ್ಷಕ್ಕೆ 6000 ಕೋಟಿ ರೂ.ಗಳ ಉದ್ಯೋಗ ಸೃಷ್ಟಿಸಬಹುದು

ಚೆನ್ನೈನ ಅಗ್ನಿ ತಾಂತ್ರಿಕ ಕಾಲೇಜಿನ ಗರುಡಾ ಏರೋಸ್ಪೇಸ್ ನಲ್ಲಿ ಮೊದಲ ಡ್ರೋನ್ ಕೌಶಲ್ಯ ಮತ್ತು ತರಬೇತಿ ಸಮಾವೇಶ ಮತ್ತು ಡ್ರೋನ್ ಯಾತ್ರೆಗೆ ಚಾಲನೆ.

2023 ರಲ್ಲಿ ಡ್ರೋನ್ ವಲಯವು ಕೃಷಿ ವಲಯಕ್ಕೆ 3 ಶತಕೋಟಿ ಡಾಲರ್ ಸೇರ್ಪಡೆ ಮಾಡಲಿದ್ದು, 10 ಕೋಟಿ ರೈತರಿಗೆ ಪ್ರಯೋಜನವಾಗಲಿದೆ: ಅನುರಾಗ್ ಠಾಕೂರ್.

Posted On: 06 DEC 2022 5:15PM by PIB Bengaluru

ಭಾರತವು ಡ್ರೋನ್ ತಂತ್ರಜ್ಞಾನದ ಕೇಂದ್ರವಾಗಲಿದ್ದು, ಮುಂದಿನ ವರ್ಷದ ವೇಳೆಗೆ ಭಾರತಕ್ಕೆ ಕನಿಷ್ಠ 1 ಲಕ್ಷ ಡ್ರೋನ್ ಪೈಲಟ್ ಗಳ ಅಗತ್ಯವಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.  ಚೆನ್ನೈನಲ್ಲಿಂದು 'ಡ್ರೋನ್ ಯಾತ್ರಾ 2.0'ಕ್ಕೆ ಹಸಿರು ನಿಶಾನೆ ತೋರಿದ ನಂತರ ಅವರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ತಂತ್ರಜ್ಞಾನವು ನಿಜವಾಗಿಯೂ ಜಗತ್ತನ್ನು ವೇಗವಾಗಿ ಪರಿವರ್ತಿಸುತ್ತಿದೆ ಮತ್ತು ಅದರ ಆನ್ವಯಿಕಗಳು ಭೂಮಿಯ ಮೇಲಿನ ಕೆಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುತ್ತಿರುವುದರಿಂದ ಇದು ಇವತ್ತಿಗಿಂತ ಎಂದಿಗೂ ಹೆಚ್ಚು ಪ್ರಸ್ತುತವಾಗಿರಲಿಲ್ಲ ಎಂದು ಸಚಿವರು ಹೇಳಿದರು. "ಒಂದು ದಶಲಕ್ಷ ಸಮಸ್ಯೆಗಳಿಗೆ ಭಾರತವು ಶತಕೋಟಿ ಪರಿಹಾರಗಳನ್ನು ಹೊಂದಿದೆ" ಎಂದು ಪ್ರಧಾನಮಂತ್ರಿ ಮೋದಿ ಒಮ್ಮೆ ಹೇಳಿದ್ದರು. ಒಂದು ಶತಕೋಟಿಗಿಂತಲೂ ಹೆಚ್ಚು ಜನರ ದೇಶವಾಗಿ, ಭಾರತವು ಏರುಮುಖವಾಗಿ ಮುಂದೆ ಸಾಗಲು ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುತ್ತಿದೆ".

ಭಾರತದಲ್ಲಿ ಡ್ರೋನ್ ತಂತ್ರಜ್ಞಾನದ ಪ್ರಗತಿಯನ್ನು ವಿವರಿಸಿದ ಅವರು, ಬೀಟಿಂಗ್ ರಿಟ್ರೀಟ್ ಸಮಯದಲ್ಲಿ, ಐಐಟಿ ಹಿರಿಯ ವಿದ್ಯಾರ್ಥಿಗಳ ನೇತೃತ್ವದ ಭಾರತೀಯ ನವೋದ್ಯಮ 'ಬಾಟ್ಲಾಬ್ ಡೈನಾಮಿಕ್ಸ್' 1000 'ಮೇಡ್ ಇನ್ ಇಂಡಿಯಾ' ಡ್ರೋನ್ ಗಳ ಅದ್ಭುತ ಪ್ರದರ್ಶನದಿಂದ ಇಡೀ ದೇಶವನ್ನೇ ಮಂತ್ರಮುಗ್ಧಗೊಳಿಸಿತು ಎಂದು ಹೇಳಿದರು. ಸ್ವಾಮಿತ್ವ ಯೋಜನೆಯ ಭಾಗವಾಗಿ (ಗ್ರಾಮಗಳ ಮೋಜಿಣಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ನಕ್ಷೆ ಮಾಡುವುದು), ಹಳ್ಳಿಗಳಲ್ಲಿ ಡ್ರೋನ್ ಗಳ ಮೂಲಕ ಭೂಮಿ ಮತ್ತು ಮನೆಗಳ ಸರ್ವೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿನ ಹೊಲಗಳಲ್ಲಿ ಕೀಟನಾಶಕಗಳು ಮತ್ತು ನ್ಯಾನೊ ರಸಗೊಬ್ಬರಗಳನ್ನು ಸಿಂಪಡಿಸಲು ಡ್ರೋನ್ ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದರು.

ಇತ್ತೀಚೆಗೆ, ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 2021ರಲ್ಲಿ ಭಾರತ ಕ್ರಿಕೆಟ್ ಋತುವಿನ ನೇರ ವೈಮಾನಿಕ ಛಾಯಾಗ್ರಹಣಕ್ಕಾಗಿ ಡ್ರೋನ್ ಗಳನ್ನು ನಿಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಷರತ್ತುಬದ್ಧ ವಿನಾಯಿತಿ ನೀಡಿವೆ ಎಂದು ಅವರು ಹೇಳಿದರು.

"ಕಿಸಾನ್ ಡ್ರೋನ್ ಯಾತ್ರೆ"ಯ ಭಾಗವಾಗಿ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ 100 ಕಿಸಾನ್ ಡ್ರೋನ್ ಗಳನ್ನು ಕೀಟನಾಶಕಗಳನ್ನು ಸಿಂಪಡಿಸಲು ದೇಶಾದ್ಯಂತದ ಹಳ್ಳಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. "ಕಿಸಾನ್ ಡ್ರೋನ್ ಈಗ ಈ ದಿಕ್ಕಿನಲ್ಲಿ ನವ ಯುಗದ ಕ್ರಾಂತಿಯ ಪ್ರಾರಂಭವಾಗಿದೆ" ಎಂಬ ಪ್ರಧಾನಮಂತ್ರಿ ಮೋದಿಯವರ ಹೇಳಿಕೆಯನ್ನು ಅವರು ಉಲ್ಲೇಖಿಸಿದರು.

ಭಾರತದ ಅತಿ ದೊಡ್ಡ ಡ್ರೋನ್ ಉತ್ಪಾದನಾ ಘಟಕವಾದ ಗರುಡಾ ಏರೋಸ್ಪೇಸ್ ಮಾಡಿದ ಮಹಾನ್ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಈ ಘಟಕಕ್ಕೆ ಭೇಟಿ ನೀಡಿದಾಗ ಸಚಿವರು ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಉದ್ಘಾಟಿಸಿದ ಗರುಡ ಕಿಸಾನ್ ಡ್ರೋನ್ ಗಳ ಸುಧಾರಿತ ಸಾಧನಗಳು ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ವೀಕ್ಷಿಸಿದರು. ಇಷ್ಟು ಕಡಿಮೆ ಅವಧಿಯಲ್ಲಿ ಘಟಕವು ಮಾಡಿದ ಸಾಧನೆಯ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. ಸುಧಾರಿತ 'ಮೇಕ್ ಇನ್ ಇಂಡಿಯಾ' ಡ್ರೋನ್ ಗಳ ಕಾರ್ಯಚಟುವಟಿಕೆಗಳನ್ನು ಎಂಜಿನಿಯರ್ ಗಳು ಸಚಿವರಿಗೆ ವಿಶದವಾಗಿ ವಿವರಿಸಿದರು.

ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಈ ಡ್ರೋನ್ ಗಳು ಹೊಲಗಳಲ್ಲಿ ಕೀಟನಾಶಕಗಳ ಬಳಕೆಯನ್ನು ಸುವ್ಯವಸ್ಥಿತಗೊಳಿಸಲು ನೆರವಾಗುತ್ತವೆ ಎಂದು ನಿರೀಕ್ಷಿಸಲಾಗಿದೆ, ಇದು ನಮ್ಮ ರೈತರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವುದಲ್ಲದೆ ಆದಾಯವನ್ನು ಹೆಚ್ಚಿಸುತ್ತದೆ.

ಈ ವರ್ಷದ ಮೇ ತಿಂಗಳಲ್ಲಿ, ಪ್ರಧಾನಮಂತ್ರಿ ಮೋದಿ ಅವರು ಭಾರತದ ಅತಿದೊಡ್ಡ ಡ್ರೋನ್ ಉತ್ಸವವಾದ ಭಾರತ್ ಡ್ರೋನ್ ಮಹೋತ್ಸವ್ 2022 ಅನ್ನು ಉದ್ಘಾಟಿಸಿದ್ದರು, ಅದರಲ್ಲಿ ಅವರು ಕಿಸಾನ್ ಡ್ರೋನ್ ಪೈಲಟ್ ಗಳೊಂದಿಗೆ ಸಂವಾದ ನಡೆಸಿದ್ದರು. ಡ್ರೋನ್ ತಂತ್ರಜ್ಞಾನವನ್ನು ಉತ್ತೇಜಿಸುವುದು ಉತ್ತಮ ಆಡಳಿತ ಮತ್ತು ಸುಗಮ ಜೀವನಕ್ಕಾಗಿ ನಮ್ಮ ಬದ್ಧತೆಯನ್ನು ಮುನ್ನಡೆಸುವ ಮತ್ತೊಂದು ಮಾಧ್ಯಮವಾಗಿದೆ ಎಂದರು.

ಇಂದು, ಡ್ರೋನ್ ತಂತ್ರಜ್ಞಾನವು ರಕ್ಷಣೆಯಿಂದ ಹಿಡಿದು ಕೃಷಿಯವರೆಗೆ ಮತ್ತು ಆರೋಗ್ಯದಿಂದ ಮನರಂಜನೆಯವರೆಗೆ ವಿವಿಧ ಕ್ಷೇತ್ರಗಳಿಗೆ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಗಳಂತಹ ಯೋಜನೆಗಳ ಮೂಲಕ ಭಾರತವು ದೇಶದಲ್ಲಿ ಬಲವಾದ ಡ್ರೋನ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.

ಮೋದಿ ಸರ್ಕಾರವು ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಮತ್ತು ಸೇವೆಗಳ ಬೇಡಿಕೆಯನ್ನು ತ್ರಿಮುಖ ವಿಧಾನದಲ್ಲಿ ಹೆಚ್ಚಿಸಲು ಶ್ರಮಿಸುತ್ತಿದೆ ಎಂದು ಹೇಳಿದರು. ಹೊಸ ಡ್ರೋನ್ ನಿಯಮಗಳು, 2021 ರ ಪರಿಣಾಮಕಾರಿ ನೀತಿ; ಡ್ರೋನ್ ಗಳು ಮತ್ತು ಡ್ರೋನ್ ಘಟಕಗಳಿಗೆ ಪಿಎಲ್ಐ ರೂಪದಲ್ಲಿ ಪ್ರೋತ್ಸಾಹಕವನ್ನು ಒದಗಿಸುವುದು ಸ್ಥಳೀಯ ಮಟ್ಟದಲ್ಲಿ ಬೇಡಿಕೆಯನ್ನು ಸೃಷ್ಟಿಸುತ್ತದೆ, ಇದರಲ್ಲಿ ಕೇಂದ್ರ ಸರ್ಕಾರದ 12 ಸಚಿವಾಲಯಗಳಿಗೆ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ವಹಿಸಲಾಗಿದೆ.

2023 ರಲ್ಲಿ ಭಾರತಕ್ಕೆ ಕನಿಷ್ಠ 1 ಲಕ್ಷ  ಡ್ರೋನ್ ಪೈಲಟ್ ಗಳ ಅಗತ್ಯವಿದೆ ಎಂದು ಹೇಳಿದ ಅವರು, ಪ್ರತಿಯೊಬ್ಬ ಪೈಲಟ್ ತಿಂಗಳಿಗೆ ಕನಿಷ್ಠ 50-80 ಸಾವಿರ ಗಳಿಸುತ್ತಾರೆ ಎಂದು ಹೇಳಿದರು. ನೀವು ಸಾಂಪ್ರದಾಯಿಕವಾಗಿ ಸರಾಸರಿಯನ್ನು ತೆಗೆದುಕೊಂಡರೆ 50,000 × 1 ಲಕ್ಷ ಯುವಕರು 12 ತಿಂಗಳು = ವರ್ಷಕ್ಕೆ 6000 ಕೋಟಿ ರೂ.ಗಳ ಮೌಲ್ಯದ ಉದ್ಯೋಗವನ್ನು ಡ್ರೋನ್ ವಲಯದಲ್ಲಿ ಸೃಷ್ಟಿಸಬಹುದು ಎಂದು ಅವರು ಹೇಳಿದರು.
ಇದಲ್ಲದೆ, ಡ್ರೋನ್ ಗಳನ್ನು ಬಳಸುವ ಕೈಗಾರಿಕೆಗಳು ಮತ್ತು ಸರ್ಕಾರಿ ಏಜೆನ್ಸಿಗಳ ಮೇಲೂ ಇದು ಪರಿಣಾಮ ಬೀರುತ್ತದೆ ಎಂದ ಅವರು, ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ 'ಮೇಡ್ ಇನ್ ಇಂಡಿಯಾ' ಡ್ರೋನ್ ಗಳನ್ನು ತಯಾರಿಸುವ ಗರುಡ ಏರೋಸ್ಪೇಸ್ ನ ಯೋಜನೆಯನ್ನು ಅವರು ಶ್ಲಾಘಿಸಿದರು.

ದೇಶಾದ್ಯಂತ 775 ಜಿಲ್ಲೆಗಳಲ್ಲಿ ನಡೆಯಲಿರುವ ಗರುಡದ ಡ್ರೋನ್ ಕೌಶಲ್ಯ ಮತ್ತು ತರಬೇತಿ ಸಮಾವೇಶವು 10 ಲಕ್ಷ ಯುವಕರನ್ನು ತಲುಪುವ ವಿಶ್ವಾಸವಿದೆ. 1 ಲಕ್ಷ ಯುವಕರಿಗೆ ತರಬೇತಿ ನೀಡುವ ಗುರಿಯೊಂದಿಗೆ ಕೇವಲ ಡ್ರೋನ್ ಪರಿಸರ ವ್ಯವಸ್ಥೆ ಅಥವಾ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವುದರ ಮೇಲೆ ಗಮನಾರ್ಹ ಪರಿಣಾಮ ಬೀರುವುದರ ಜೊತೆಗೆ ಕೃಷಿ, ಗಣಿಗಾರಿಕೆ, ಸರ್ಕಾರಿ ಇಲಾಖೆಗಳು ಮತ್ತು ಇತರ ಕೈಗಾರಿಕೆಗಳ ಮೇಲೂ ಭಾರಿ ಪರಿಣಾಮ ಬೀರುವ ಭರವಸೆ ಇದೆ  ಎಂದರು.

ಪ್ರಸ್ತುತ ದೇಶದಲ್ಲಿ 200ಕ್ಕೂ ಹೆಚ್ಚು ಡ್ರೋನ್ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉಲ್ಲೇಖಿಸಿದ ಸಚಿವರು, ಯುವಕರಿಗೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.

ಪರಿಣಾಮಕಾರಿ ನೀತಿಗಳು, ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು 'ಸುಗಮ ವ್ಯಾಪಾರ' ಡ್ರೋನ್ ವಲಯಕ್ಕೆ ಅಗತ್ಯವಾದ ಉತ್ತೇಜನವನ್ನು ಒದಗಿಸುತ್ತಿದೆ, ಇದು ಭಾರತದಲ್ಲಿ ಅದರ ಅಗಾಧ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದರು. "ಪ್ರಧಾನಮಂತ್ರಿ ಮೋದಿಯವರ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿ, ಬೆಳೆಯುತ್ತಿರುವ ನಾವಿನ್ಯ ಮತ್ತು ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಪರಿಸರ ವ್ಯವಸ್ಥೆಯು ಅಮೃತ ಕಾಲದಲ್ಲಿ ಸ್ವಾವಲಂಬಿ ಮತ್ತು ಸ್ವಾವಲಂಬಿ ನವ ಭಾರತವನ್ನು ಖಾತ್ರಿಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಅವರು ಹೇಳಿದರು.

1ನೇ ಡ್ರೋನ್ ಕೌಶಲ್ಯ ಮತ್ತು ತರಬೇತಿ ಸಮಾವೇಶದ ಉದ್ಘಾಟನೆಯ ಅಂಗವಾಗಿ ಸಚಿವರು ಡ್ರೋನ್ ಅನ್ನು ಚಲಾಯಿಸಿದರು. ಡ್ರೋನ್ ಪೈಲಟ್ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಇದೇ ಕಾರ್ಯಕ್ರಮದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

*****(Release ID: 1881269) Visitor Counter : 158