ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಯವರು 2021 ಮತ್ತು 2022ನೇ ಸಾಲಿನ ವಿಶಿಷ್ಟಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.



ದಿವ್ಯಾಂಗರಲ್ಲಿ ಆತ್ಮಸ್ಥೈರ್ಯ ತುಂಬುವುದು ಅವರನ್ನು ಸಶಕ್ತಗೊಳಿಸಲು ಬಹಳ ಮುಖ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು

Posted On: 03 DEC 2022 2:16PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2022 ಡಿಸೆಂಬರ್‌ 3) ಅಂತಾರಾಷ್ಟ್ರೀಯ ವಿಶಿಷ್ಟಚೇತನರ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ 2021 ಮತ್ತು 2022ನೇ ಸಾಲಿನ ವಿಶಿಷ್ಟಚೇತನರ ಸಶಕ್ತೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅವರು, ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ವಿಶ್ವದಲ್ಲಿಬಒಂದು ಶತಕೋಟಿಗಿಂತಲೂ ಹೆಚ್ಚು ಜನರು ವಿಶಿಷ್ಟಚೇತನರಿದ್ದಾರೆ ಎಂದು ಹೇಳಿದರು. ಇದರರ್ಥ ಪ್ರಪಂಚದ ಪ್ರತಿಯೊಬ್ಬ 8ನೇ ವ್ಯಕ್ತಿಯು ಒಂದಲ್ಲ ಒಂದು ರೂಪದಲ್ಲಿ ಅಂಗವೈಕಲ್ಯವನ್ನು ಹೊಂದಿರುತ್ತಾರೆ. ಭಾರತದ ಜನಸಂಖ್ಯೆಯಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಜನರು ವಿಶಿಷ್ಟಚೇತನರಿದ್ದಾರೆ. ಆದ್ದರಿಂದ, ವಿಶಿಷ್ಟಚೇತನರು ಸ್ವತಂತ್ರವಾಗಿ ಗೌರವಾನ್ವಿತ ಜೀವನವನ್ನು ನಡೆಸಬಹುದು ಎಂದು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರು ಉತ್ತಮ ಶಿಕ್ಷಣವನ್ನು ಪಡೆದಿದ್ದಾರಾ, ಮನೆಗಳು ಮತ್ತು ಸಮಾಜದಲ್ಲಿ ಸುರಕ್ಷಿತವಾಗಿದ್ದಾರೆಯೇ, ವೃತ್ತಿಜೀವನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆಯೇ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ, ಜ್ಞಾನವನ್ನು ಗಳಿಸಲು ಮತ್ತು ಉತ್ಕೃಷ್ಟತೆಯನ್ನು ಸಾಧಿಸಲು ಅಂಗವೈಕಲ್ಯವನ್ನು ಎಂದಿಗೂ ಅಡ್ಡಿಯಾಗಿ ಪರಿಗಣಿಸಲಾಗಿಲ್ಲ ಎಂದು ರಾಷ್ಟ್ರಪತಿ ಅವರು ಹೇಳಿದರು. ಆಗಾಗ್ಗೆ, ದಿವ್ಯಾಂಗರು ದೈವಿಕ ಗುಣಗಳನ್ನು ಹೊಂದಿರುವುದನ್ನು ಕಾಣಬಹುದು. ನಮ್ಮ ದಿವ್ಯಾಂಗ ಸಹೋದರ ಸಹೋದರಿಯರು ತಮ್ಮ ಅದಮ್ಯ ಧೈರ್ಯ, ಪ್ರತಿಭೆ ಮತ್ತು ದೃಢನಿಶ್ಚಯದ ಬಲದಿಂದ ಅನೇಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಸಾಧನೆಗಳನ್ನು ಮಾಡಿದ ಅಸಂಖ್ಯಾತ ಉದಾಹರಣೆಗಳಿವೆ. ಸಾಕಷ್ಟು ಅವಕಾಶಗಳು ಮತ್ತು ಸರಿಯಾದ ಪರಿಸರವನ್ನು ಕಲ್ಪಿಸಿದರೆ, ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಕೃಷ್ಟತೆಯನ್ನು ಸಾಧಿಸಬಲ್ಲರು ಎಂದರು.

ವಿಶಿಷ್ಟಚೇತನರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಸಬಲೀಕರಣಕ್ಕೆ ಶಿಕ್ಷಣವು ಕೀಲಿಕೈಯಾಗಿದೆ ಎಂದು ರಾಷ್ಟ್ರಪತಿ ಅವರು ಪ್ರತಿಪಾದಿಸಿದರು. ಶಿಕ್ಷಣದಲ್ಲಿ ಭಾಷೆಗೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಅಂಗವಿಕಲ ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಲು  ತಂತ್ರಜ್ಞಾನದ ಗರಿಷ್ಠ ಬಳಕೆ ಅತ್ಯಗತ್ಯ ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ಅಂಗವಿಕಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಸಮಾನ ಅವಕಾಶಗಳನ್ನು ಒದಗಿಸಲು ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಪ್ರಾಮುಖ್ಯವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದ ಅವರು,  ಶ್ರವಣದೋಷವುಳ್ಳ ಮಕ್ಕಳಿಗಾಗಿ 1 ರಿಂದ 6 ನೇ ತರಗತಿಯವರೆಗೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಭಾರತೀಯ ಸಂಜ್ಞಾ ಭಾಷೆಯಾಗಿ ಪರಿವರ್ತಿಸಲಾಗಿದೆ ಎಂದು ಅವರು ಸಂತಸಪಟ್ಟರು. ಶ್ರವಣದೋಷವುಳ್ಳ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಯ ಶಿಕ್ಷಣ ಪ್ರಕ್ರಿಯೆಯಲ್ಲಿ ಸೇರಿಸುವುದು ಒಂದು ಪ್ರಮುಖ ಉಪಕ್ರಮವಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.

ದಿವ್ಯಾಂಗರ ಸಬಲೀಕರಣಕ್ಕಾಗಿ ಸರ್ಕಾರವು ಹಲವಾರು ಕ್ರಮಗಳನ್ನು  ಕೈಗೊಳ್ಳುತ್ತಿದೆ ಎಂದ ರಾಷ್ಟ್ರಪತಿ ಅವರು  ದಿವ್ಯಾಂಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ಅವರನ್ನು ಸಶಕ್ತಗೊಳಿಸಲು ಬಹಳ ಮುಖ್ಯ ಎಂದು ಪ್ರತಿಪಾದಿಸಿದರು. ಅಂಗವೈಕಲ್ಯ ಹೊಂದಿರುವ ಜನರು ಸಾಮಾನ್ಯ ಜನರಂತೆ ಪ್ರತಿಭೆ ಮತ್ತು ಸಾಮರ್ಥ್ಯ‌ಗಳನ್ನು ಹೊಂದಿರುತ್ತಾರೆ ಮತ್ತು ಕೆಲವೊಮ್ಮೆ ಅವರಿಗಿಂತ ಹೆಚ್ಚಿನದನ್ನು ಹೊಂದಿರುತ್ತಾರೆ. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಮಾತ್ರ ಅಗತ್ಯವಾಗಿದೆ. ದಿವ್ಯಾಂಗರು ಸ್ವಾವಲಂಬಿಗಳಾಗಲು ಮತ್ತು ಜೀವನದಲ್ಲಿ ಮುಂದೆ ಸಾಗಲು ಸಮಾಜದ ಎಲ್ಲ ವರ್ಗಗಳು ಪ್ರೇರೇಪಿಸಬೇಕು ಎಂದು ಅವರು ಒತ್ತಾಯಿಸಿದರು. ನಮ್ಮ ದಿವ್ಯಾಂಗ ಸಹೋದರ ಸಹೋದರಿಯರು ಮುಖ್ಯವಾಹಿನಿಗೆ ಸೇರುವ ಮೂಲಕ ತಮ್ಮ ಪರಿಣಾಮಕಾರಿ ಕೊಡುಗೆಯನ್ನು ನೀಡಿದಾಗ, ನಮ್ಮ ದೇಶವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಿಶಿಷ್ಟಚೇತನರ ಸಬಲೀಕರಣ ಇಲಾಖೆ (ದಿವ್ಯಾಂಗರು), ವಿಶಿಷ್ಟಚೇತನರ ಸಬಲೀಕರಣಕ್ಕಾಗಿ ಪ್ರತಿ ವರ್ಷ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು, ರಾಜ್ಯ/ಜಿಲ್ಲೆ ಇತ್ಯಾದಿಗಳಿಗೆ ಅವರ ಅಸಾಧಾರಣ ಸಾಧನೆಗಳು ಮತ್ತು ವಿಶಿಷ್ಟಚೇತನರ ಸಬಲೀಕರಣಕ್ಕಾಗಿ ಮಾಡಿದ ಕೆಲಸಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುತ್ತದೆ.

ರಾಷ್ಟ್ರಪತಿ ಭಾಷಣ ನೋಡಲು ಇಲ್ಲಿ ಕ್ಲಿಕ್‌ ಮಾಡಿ

*****


(Release ID: 1880741) Visitor Counter : 195