ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ರಾಷ್ಟ್ರಪತಿಯವರು ಕುರುಕ್ಷೇತ್ರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ 18ನೇ ಘಟಿಕೋತ್ಸವದಲ್ಲಿ ಭಾಗಿಯಾದರು


ಜೀವನದಲ್ಲಿ ತೃಪ್ತಿಯನ್ನು ಮತ್ತು ಸಾರ್ಥಕತೆ ನೀಡುವ ವೃತ್ತಿಯನ್ನು ಆಯ್ಕೆ ಮಾಡಲು ವಿದ್ಯರ್ಥಿಗಳನ್ನು ರಾಷ್ಟ್ರಪತಿ ಮುರ್ಮು ಅವರು ಒತ್ತಾಯಿಸಿದರು.

Posted On: 29 NOV 2022 5:03PM by PIB Bengaluru

ಭಾರತದ ರಾಷ್ಟ್ರಪತಿ, ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 29, 2022) ಕುರುಕ್ಷೇತ್ರದಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ ಐ ಟಿ) 18 ನೇ ಘಟಿಕೋತ್ಸವದಲ್ಲಿ ಭಾಗಿಯಾದರು.

ಇಂದು ಇಡೀ ಜಗತ್ತು ಕ್ಷಿಪ್ರ ಬದಲಾವಣೆಯ ಹಂತದಲ್ಲಿ ಸಾಗುತ್ತಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ತಾಂತ್ರಿಕ ಕ್ರಾಂತಿಯಿಂದಾಗಿ ಉದ್ಯೋಗಗಳ ಸ್ವರೂಪ ಹಾಗೂ ಜನರ ಮೂಲಭೂತ ಅಗತ್ಯಗಳು ಬದಲಾಗುತ್ತಿವೆ. ಈ ಬದಲಾವಣೆಗಳು ಇಂಜಿನಿಯರಿಂಗ್‌ನ ಅಸ್ತಿತ್ವದಲ್ಲಿರುವ ವಿಧಾನಗಳಿಗೆ ಸಹ ಸವಾಲು ಹಾಕುತ್ತಿವೆ. ತಾಂತ್ರಿಕ ಪಲ್ಲಟದಿಂದಾಗಿ ಆಗುತ್ತಿರುವ ಬದಲಾವಣೆಗಳ ದೃಷ್ಟಿಯಿಂದ, ಎನ್ ಐ ಟಿ ಕುರುಕ್ಷೇತ್ರ ಸೇರಿದಂತೆ ನಮ್ಮ ತಾಂತ್ರಿಕ ಸಂಸ್ಥೆಗಳು 'ಭವಿಷ್ಯಕ್ಕೆ ಸಿದ್ಧ'ವಾಗುವುದು ಬಹಳ ಮುಖ್ಯವಾಗುತ್ತದೆ. ಎನ್ಐಟಿ ಕುರುಕ್ಷೇತ್ರವು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ದತ್ತಾಂಶ ವಿಜ್ಞಾನ, ರೊಬೊಟಿಕ್ಸ್ ಮತ್ತು ಆಟೊಮೇಷನ್ ಮತ್ತು ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್ ನಂತಹ  ಭವಿಷ್ಯತ್ತಿಗೆ ಸಂಬಂಧಿಸಿದ ಕೋರ್ಸ್ ಗಳನ್ನು ಪರಿಚಯಿಸುವತ್ತ ಸಾಗುತ್ತಿದೆ ಎಂದು ಅವರು ಸಂತೋಷಪಟ್ಟರು. ಎನ್ ಐ ಟಿ ಕುರುಕ್ಷೇತ್ರವು ಅತ್ಯಾಧುನಿಕ 'ಸೀಮೆನ್ಸ್ ಸೆಂಟರ್ ಆಫ್ ಎಕ್ಸಲೆನ್ಸ್' ಅನ್ನು ಸ್ಥಾಪಿಸಿದೆ, ಇದರಲ್ಲಿ ಸ್ಮಾರ್ಟ್ ಉತ್ಪಾದನೆ ಮತ್ತು ಆಟೋಮೇಷನ್ ವಿನ್ಯಾಸಗಳು ಮತ್ತು ಇ-ಮೊಬಿಲಿಟಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಎನ್ಐಟಿ ಕುರುಕ್ಷೇತ್ರ ಇಂತಹ ಕೇಂದ್ರವನ್ನು ಸ್ಥಾಪಿಸಿದ ಉತ್ತರ ಭಾರತದಲ್ಲಿ ಮೊದಲ ಮತ್ತು ದೇಶದ ಎರಡನೇ ಎನ್ಐಟಿ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಈ ಕೇಂದ್ರದ ಸ್ಥಾಪನೆಯು ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಾದ ಡಿ ಆರ್ ಡಿ ಒ  ಮತ್ತು ಬಿಎಚ್ ಇ ಎಲ್ ನೊಂದಿಗೆ ಸಹಯೋಗವನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಅವರು ಹೇಳಿದರು.

ಭಾರತದ ಕೃಷಿ ಅಭಿವೃದ್ಧಿಯಲ್ಲಿ ಹರಿಯಾಣ ಮತ್ತು ಪಂಜಾಬ್ ಪ್ರದೇಶಗಳು ಬಹಳ ಮಹತ್ವದ ಕೊಡುಗೆಯನ್ನು ನೀಡಿವೆ ಎಂದು ರಾಷ್ಟ್ರಪತಿಯವರು ಹೇಳಿದರು. ಈ ಭಾಗದ ಪ್ರಗತಿಪರ ರೈತರು ಆಧುನಿಕ ತಂತ್ರಜ್ಞಾನ ಬಳಸಿ ಹಸಿರು ಕ್ರಾಂತಿಯನ್ನು ಮಾಡಿ ದೇಶಕ್ಕೆ ಆಹಾರ ಭದ್ರತೆ ಒದಗಿಸಿದ್ದಾರೆ. ಆದರೆ ಇಂದು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಯು ಮತ್ತು ಭೂಮಾಲಿನ್ಯ ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ. ಈ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವುದು ಎನ್ಐಟಿ ಕುರುಕ್ಷೇತ್ರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ, ಭಾರತದ ಸಾಮಾನ್ಯ ನಾಗರಿಕನು ತಂತ್ರಜ್ಞಾನ ಸ್ನೇಹಿಯಾಗಿದ್ದಾನೆ ಎನ್ನುವುದು ಸ್ಪಷ್ಟವಾಯಿತು. ತಂತ್ರಜ್ಞಾನ ಸಮಾಜದ ಒಳಿತಿಗಾಗಿ ಇದ್ದರೆ ಅದಕ್ಕೆ ಸಾರ್ವಜನಿಕರಿಂದ ಸಂಪೂರ್ಣ ಸಹಕಾರ ದೊರೆಯುತ್ತದೆ. ಡಿಜಿಟಲ್ ಪಾವತಿಯ ಯಶಸ್ಸು ಇದಕ್ಕೆ ಒಂದು ಉದಾಹರಣೆಯಾಗಿದೆ.

ತಂತ್ರಜ್ಞಾನವು ಕೇವಲ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ನ ಉಪ ಉತ್ಪನ್ನವಲ್ಲ, ಆದರೆ ಇದು ಸಾಮಾಜಿಕ ಮತ್ತು ರಾಜಕೀಯ ಸಂದರ್ಭವನ್ನು ಹೊಂದಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ‘ಸಾಮಾಜಿಕ ನ್ಯಾಯಕ್ಕಾಗಿ ತಂತ್ರಜ್ಞಾನ’ ಎಂಬ ಚಿಂತನೆಯೊಂದಿಗೆ ನಾವೆಲ್ಲರೂ ಮುನ್ನಡೆಯಬೇಕಿದೆ. ಇದರಲ್ಲಿ ವಂಚಿತ ವರ್ಗ ಹಿಂದೆ ಬೀಳದಂತೆ ಪ್ರಯತ್ನ ಮಾಡಬೇಕು. ಸಮಾನತೆಯ ಸಮಾಜ ನಿರ್ಮಾಣಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು.

ಶಿಕ್ಷಣದ ಯಶಸ್ಸಿಗೆ ಸಂಬಳದ ಪ್ಯಾಕೇಜ್ ಗಳನ್ನು ಮಾನದಂಡವನ್ನಾಗಿ ಮಾಡುವ ಪ್ರವೃತ್ತಿಯನ್ನು ಸೂಚಿಸಿದ ರಾಷ್ಟ್ರಪತಿಯವರು, ಹೆಚ್ಚಿನ ಸಂಬಳ ಪ್ಯಾಕೇಜ್ ಗಳನ್ನು ಪಡೆಯುವುದು ಒಳ್ಳೆಯದೇ, ಆದರೆ ಉತ್ತಮ ಸಂಬಳ ಪ್ಯಾಕೇಜ್ ಪಡೆಯದ ವಿದ್ಯಾರ್ಥಿಗಳು ಕಡಿಮೆ ಅರ್ಹತೆ ಹೊಂದಿರುವರು ಎಂದು ಅರ್ಥವಲ್ಲ. ಪ್ಯಾಕೇಜ್ ಆಧಾರದ ಮೇಲೆ ತಮ್ಮ ಯಶಸ್ಸನ್ನು ಎಂದಿಗೂ ನಿರ್ಣಯಿಸಬೇಡಿ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು ಯಶಸ್ಸಿನ ಸಾಂಪ್ರದಾಯಿಕ ಕಲ್ಪನೆಗಳು ಮತ್ತು ಸಾಮಾಜಿಕ ಒತ್ತಡಗಳಿಂದ ಸೀಮಿತವಾಗಿರಬಾರದು ಎಂದು ಅವರು ಹೇಳಿದರು. ಅವರು ತಮ್ಮ ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸಬೇಕು. ಜೀವನದಲ್ಲಿ ತೃಪ್ತಿ ಮತ್ತು ಸಾರ್ಥಕತೆಯ ಅರ್ಥವನ್ನು ನೀಡುವ ವೃತ್ತಿಯನ್ನು ಆಯ್ಕೆ ಮಾಡಲು ಅವರು ಅವರನ್ನು ಒತ್ತಾಯಿಸಿದರು.  ರಾಷ್ಟ್ರಪತಿಗಳು ಪೋಷಕರಿಗೆ ತಮ್ಮ ಮಕ್ಕಳನ್ನು ಶ್ರೇಷ್ಠತೆಗೆ ಪ್ರೇರೇಪಿಸಬೇಕು ಎಂದು ಒತ್ತಾಯಿಸಿದರು. ಶ್ರೇಷ್ಠತೆಗಾಗಿ ಶ್ರಮಿಸಿದರೆ, ಸಾಧನೆಗಳು ತಾನಾಗಿಯೇ ಬರುತ್ತವೆ ಎಂದು ಅವರು ಹೇಳಿದರು.

1963 ರಲ್ಲಿ ಸ್ಥಾಪನೆಯಾದ ಎನ್ಐಟಿ ಕುರುಕ್ಷೇತ್ರ ಭಾರತದ ಮೊದಲ ಎನ್ಐಟಿಗಳಲ್ಲಿ ಒಂದಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಈ ಪ್ರದೇಶದಲ್ಲಿ ವೈಜ್ಞಾನಿಕ ಮನೋಭಾವವನ್ನು ಹರಡುವಲ್ಲಿ ಇದು ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. ಕಳೆದ ಆರು ದಶಕಗಳಲ್ಲಿ, ಇದು ದೇಶ ಮತ್ತು ವಿದೇಶಗಳಲ್ಲಿನ ಉನ್ನತ-ಕಲಿಕೆಯ ತಾಂತ್ರಿಕ ಸಂಸ್ಥೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಈ ಸಂಸ್ಥೆಯ 40,000 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಿದ್ದಾರೆ ಮತ್ತು ಪ್ರಪಂಚದಾದ್ಯಂತ ಭಾರತದ ಖ್ಯಾತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು. ಎನ್ಐಟಿ ಕುರುಕ್ಷೇತ್ರದ ವಿದ್ಯಾರ್ಥಿಗಳು ಸಿಂಗಾಪುರದಿಂದ ಸಿಲಿಕಾನ್ ವ್ಯಾಲಿಯವರೆಗೆ, ನಾಗರಿಕ ಸಮಾಜದಿಂದ ನಾಗರಿಕ ಸೇವೆಗಳವರೆಗೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸ್ಥಾನವನ್ನು ಗಳಿಸಿದ್ದಾರೆ ಎಂದು ಅವರು ತಿಳಿಸಿದರು.

*****



(Release ID: 1879870) Visitor Counter : 123