ವಾರ್ತಾ ಮತ್ತು ಪ್ರಸಾರ ಸಚಿವಾಲಯ
53 ನೇ ಐಎಫ್ಎಫ್ಐ ಸಮಾರೋಪ ಸಮಾರಂಭದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ 2022 ರ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿ ಪ್ರದಾನ
ಚಿರಂಜೀವಿ ಎಂದೇ ಹೆಸರಾಗಿರುವ ಟಾಲಿವುಡ್ನ ಮೆಗಾ ಸ್ಟಾರ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಕೊನಿಡೇಲ ಶಿವಶಂಕರ ವರಪ್ರಸಾದ್ ಅವರಿಗೆ 2022 ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯನ್ನು ಗೋವಾದಲ್ಲಿ ಇಂದು ನಡೆದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಈ ಗೌರವ ನೀಡಿದ್ದಕ್ಕಾಗಿ ಐಎಫ್ಎಫ್ಐ, ಭಾರತ ಸರ್ಕಾರ ಮತ್ತುಪ್ರಧಾನ ಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದ ಚಿರಂಜೀವಿ, ತಮ್ಮ ಹೆತ್ತವರು ಮತ್ತು ತೆಲುಗು ಚಲನಚಿತ್ರೋದ್ಯಮಕ್ಕೆ ಕೃತಜ್ಞತೆ ಸಲ್ಲಿಸಿದರು. ‘ಕೊನಿಡೇಲ ಶಿವಶಂಕರ ವರಪ್ರಸಾದ್ ಆಗಿ ನನಗೆ ಜನ್ಮ ನೀಡಿದ ನನ್ನ ತಂದೆ ತಾಯಿಗೆ ಹಾಗೂ ಚಿರಂಜೀವಿಯಾಗಿ ಮರುಜನ್ಮ ನೀಡಿದ ತೆಲುಗು ಚಿತ್ರರಂಗಕ್ಕೆ ನಾನು ಸದಾ ಚಿರಋಣಿ. ಈ ಉದ್ಯಮಕ್ಕೆ ನನ್ನ ಜೀವಮಾನವಿಡೀ ಋಣಿಯಾಗಿದ್ದೇನೆ’ಎಂದು ಅವರು ಹೇಳಿದರು.
ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಚಿರಂಜೀವಿ ಅವರು ರಾಜಕೀಯದಿಂದ ಮರಳಿ ಸಿನಿಮಾರಂಗಕ್ಕೆ ಬಂದ ತಮ್ಮನ್ನು ಮತ್ತೆ ಸ್ವೀಕರಿಸಿದ್ದಕ್ಕಾಗಿ ತಮ್ಮ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. ನನ್ನ ಮೇಲೆ ತೋರಿದ ಪ್ರೀತಿ ಮತ್ತು ಅಕ್ಕರೆ ತುಂಬಾ ದೊಡ್ಡದು. 45 ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದೇನೆ, ಈ ಪೈಕಿ ರಾಜಕೀಯಕ್ಕಾಗಿ ಒಂದು ದಶಕ ಇಲ್ಲಿಂದ ದೂರವಾಗಿದ್ದೆ. ಮತ್ತೆ ಚಿತ್ರರಂಗಕ್ಕೆ ಬಂದಾಗ ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಅನುಮಾನ ಕಾಡುತ್ತಿತ್ತು. ಆದರೆ ನನ್ನ ಅಭಿಮಾನಿಗಳ ಪ್ರೀತಿ ಮತ್ತು ವಾತ್ಸಲ್ಯ ಎಂದಿಗೂ ಬದಲಾಗಿಲ್ಲ, ಅವರ ಹೃದಯದಲ್ಲಿ ನನ್ನ ಸ್ಥಾನವು ಅಚಲವಾಗಿದೆ, ನಾನು ಇನ್ನು ಮುಂದೆ ಎಂದಿಗೂ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ, ನಾನು ನಿಮ್ಮೊಂದಿಗೇ ಇರುತ್ತೇನೆ ಎಂದು ಅವರು ಹೇಳಿದರು.
ಚಿರಂಜೀವಿ ಅವರು ತಮಗೆ ನೀಡಿದ ಬೆಂಬಲ ಮತ್ತು ಜೀವಮಾನ ಪ್ರಶಸ್ತಿಯಗಾಗಿ ಸರ್ಕಾರ ಮತ್ತು ಚಲನಚಿತ್ರೋದ್ಯಮಕ್ಕೂ ಕೃತಜ್ಞತೆ ಸಲ್ಲಿಸಿದರು. ‘ನಾನು ಪ್ರತಿಯೊಬ್ಬರಿಗೂ ತಲೆ ಬಾಗಿ ನಮಸ್ಕರಿಸುತ್ತೇನೆ. ಯಾರಿಗಾದರೂ ಸಿನಿಮಾ ರಂಗಕ್ಕೆ ಬರುವ ಯೋಚನೆ ಇದ್ದರೆ ದಯವಿಟ್ಟು ಬನ್ನಿ, ಇದು ಭ್ರಷ್ಟಾಚಾರ ರಹಿತ ವೃತ್ತಿ, ನಿಮಗೆ ಪಾಪಪ್ರಜ್ಞೆ ಇರುವುದಿಲ್ಲ, ನಿಮ್ಮಲ್ಲಿ ಪ್ರತಿಭೆ ಇದ್ದರೆ ಅದರಿಂದ ಬೆಳೆಯಬಹುದು, ನೀವು ಆಕಾಶದೆತ್ತರಕ್ಕೆ ಬೆಳೆಯುತ್ತೀರಿ' ಎಂದು ಅವರು ಹೇಳಿದರು.
ಚಿರಂಜೀವಿಯವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ, ತೆಲುಗಿನಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಕೆಲವು ಚಲನಚಿತ್ರಗಳಲ್ಲೂ ನಟಿಸಿದ್ದಾರೆ.
*****
(Release ID: 1879683)
Visitor Counter : 156