ಪ್ರಧಾನ ಮಂತ್ರಿಯವರ ಕಛೇರಿ

ರೋಜ್ಗಾರ್ ಮೇಳದಡಿ ಹೊಸದಾಗಿ ಸೇರ್ಪಡೆಗೊಂಡ ಸುಮಾರು 71,000 ಮಂದಿಗೆ ನೇಮಕಾತಿ ಪತ್ರಗಳ ವಿತರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಇಂಗ್ಲಿಷ್ ಭಾಷಾಂತರ

Posted On: 22 NOV 2022 1:00PM by PIB Bengaluru

 

ನಮಸ್ಕಾರ!

'ರೋಜ್ಗಾರ್ ಮೇಳ' (ಉದ್ಯೋಗ ಮೇಳ)ದ ನನ್ನ ಯುವ ಸ್ನೇಹಿತರೇ,

ನಿಮ್ಮೆಲ್ಲರಿಗೂ ಅಭಿನಂದನೆಗಳು. ಇಂದು, ದೇಶದ 45 ನಗರಗಳಲ್ಲಿ 71,000 ಕ್ಕೂ ಹೆಚ್ಚು  ಯುವಕ / ಯುವತಿಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ. ಇಂದು ಸಾವಿರಾರು ಮನೆಗಳಲ್ಲಿ ಸಮೃದ್ಧಿಯ ಹೊಸ ಯುಗವು ಪ್ರಾರಂಭವಾಗಿದೆ. ಕಳೆದ ತಿಂಗಳು, ಧಂತೇರಸ್ ದಿನದಂದು, ಕೇಂದ್ರ ಸರ್ಕಾರವು 75,000  ಯುವಕ / ಯುವತಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿತ್ತು. ಇಂದಿನ 'ರೋಜ್ಗಾರ್ ಮೇಳ'ವು ಸರ್ಕಾರಿ ಉದ್ಯೋಗಗಳನ್ನು ಒದಗಿಸಲು ಮಿಷನ್ ಮೋಡ್ ನಲ್ಲಿ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಕಳೆದ ತಿಂಗಳು 'ರೋಜ್ಗಾರ್ ಮೇಳ'ಕ್ಕೆ ಚಾಲನೆ ನೀಡಿದಾಗ, ವಿವಿಧ ಕೇಂದ್ರಾಡಳಿತ ಪ್ರದೇಶಗಳು, ಎನ್ ಡಿಎ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳು ಸಹ 'ರೋಜ್ಗಾರ್ ಮೇಳ'ಗಳನ್ನು ಆಯೋಜಿಸುವುದನ್ನು ಮುಂದುವರಿಸುತ್ತವೆ ಎಂದು ನಾನು ತಿಳಿಸಿದ್ದೆ. ಕಳೆದ ತಿಂಗಳಲ್ಲೇ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಸಾವಿರಾರು  ಯುವಕ / ಯುವತಿಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿರುವುದು ನನಗೆ ಸಂತೋಷ ತಂದಿದೆ. ಕೆಲವು ದಿನಗಳ ಹಿಂದೆ, ಯುಪಿ ಸರ್ಕಾರವು ಅನೇಕ  ಯುವಕ / ಯುವತಿಯರಿಗೆ ನೇಮಕಾತಿ ಪತ್ರಗಳನ್ನು ಸಹ ನೀಡಿತ್ತು. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು ಮತ್ತು ಚಂಡೀಗಢದಲ್ಲಿ ಕಳೆದ ಒಂದು ತಿಂಗಳಲ್ಲಿ 'ರೋಜ್ಗಾರ್ ಮೇಳ'ಗಳ ಮೂಲಕ ಸಾವಿರಾರು  ಯುವಕ / ಯುವತಿಯರಿಗೆ ಉದ್ಯೋಗ ನೀಡಲಾಗಿದೆ. ನಾಡಿದ್ದು ಅಂದರೆ ನವೆಂಬರ್ 24 ರಂದು ಗೋವಾ ಸರ್ಕಾರವೂ ಇದೇ ರೀತಿಯ 'ರೋಜ್ಗಾರ್ ಮೇಳ'ವನ್ನು ಆಯೋಜಿಸಲಿದೆ ಎಂದು ನನಗೆ ತಿಳಿದು ಬಂದಿದೆ. ತ್ರಿಪುರಾ ಸರ್ಕಾರವು ಸಹ ನವೆಂಬರ್ 28 ರಂದು 'ರೋಜ್ಗಾರ್ ಮೇಳ'ವನ್ನು ಆಯೋಜಿಸಲಿದೆ. ಇದು ಡಬಲ್ ಎಂಜಿನ್ ಸರ್ಕಾರದ ಡಬಲ್ ಪ್ರಯೋಜನವಾಗಿದೆ. 'ರೋಜ್ಗಾರ್ ಮೇಳ'ಗಳ ಮೂಲಕ ದೇಶದ  ಯುವಕ / ಯುವತಿಯರಿಗೆ ನೇಮಕಾತಿ ಪತ್ರಗಳನ್ನು ನೀಡುವ ಈ ಅಭಿಯಾನವು ಅವಿರತವಾಗಿ ಮುಂದುವರೆಯಲಿದೆ.

ಸ್ನೇಹಿತರೇ,

ಭಾರತದಂತಹ ಯುವ ದೇಶದಲ್ಲಿ, ನಮ್ಮ ಕೋಟ್ಯಂತರ  ಯುವಕ / ಯುವತಿಯರು ಈ ರಾಷ್ಟ್ರದ ಅತಿದೊಡ್ಡ ಶಕ್ತಿಯಾಗಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ, ಯುವ ಪ್ರತಿಭೆ ಮತ್ತು ಶಕ್ತಿಯ ಗರಿಷ್ಠ ಬಳಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇಂದು, ರಾಷ್ಟ್ರ ನಿರ್ಮಾಣದ ಹಾದಿಗೆ ಸೇರುತ್ತಿರುವ 71,000 ಕ್ಕೂ ಹೆಚ್ಚಿನ ಹೊಸ ಸಹೋದ್ಯೋಗಿಗಳನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಕಠಿಣ ಸ್ಪರ್ಧೆಯಲ್ಲಿ ಯಶಸ್ವಿಯಾಗುವ ಮೂಲಕ ನೀವು ಯಾವ ಸ್ಥಾನಗಳಲ್ಲಿ ನೇಮಕಗೊಳ್ಳಲಿದ್ದೀರಿ ಎಂಬುದನ್ನು ನೀವು ಸಾಧಿಸಿ ನಿರ್ಧರಿಸಿದ್ದೀರಿ. ಆದ್ದರಿಂದ, ನೀವು ಮತ್ತು ನಿಮ್ಮ ಕುಟುಂಬವೂ ಕೂಡ ಅಭಿನಂದನೆಗಳಿಗೆ ಅರ್ಹವಾಗಿದೆ.

ನನ್ನ ಯುವ ಸಹೋದ್ಯೋಗಿಗಳೇ,

ವಿಶೇಷ ಅವಧಿಯಲ್ಲಿ ನೀವು ಈ ಹೊಸ ಜವಾಬ್ದಾರಿಯನ್ನು ಪಡೆಯುತ್ತಿದ್ದೀರಿ. ದೇಶವು 'ಅಮೃತ ಕಾಲ' (ಸುವರ್ಣ ಯುಗ) ಪ್ರವೇಶಿಸಿದೆ. ದೇಶದ ಜನರು ಈ 'ಅಮೃತ ಕಾಲ'ದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಪಣತೊಟ್ಟಿದ್ದಾರೆ. ಈ ಪ್ರತಿಜ್ಞೆಯನ್ನು ಪೂರೈಸುವಲ್ಲಿ ನೀವೆಲ್ಲರೂ ದೇಶದ ಸಾರಥಿಗಳಾಗಲಿದ್ದೀರಿ. ನೀವೆಲ್ಲರೂ ವಹಿಸಿಕೊಳ್ಳಲಿರುವ ಹೊಸ ಜವಾಬ್ದಾರಿಯಲ್ಲಿ, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನೇಮಕಗೊಳ್ಳಲಿದ್ದೀರಿ. ಆದ್ದರಿಂದ, ನಿಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ನೀವು ನಿಮ್ಮ ಪಾತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಸಾರ್ವಜನಿಕ ಸೇವಕರಾಗಿ ನಿಮ್ಮ ಸೇವೆಗಳನ್ನು ಒದಗಿಸಲು ನೀವು ನಿರಂತರವಾಗಿ ಸಾಮರ್ಥ್ಯ ವರ್ಧನೆಯತ್ತ ಗಮನ ಹರಿಸಬೇಕು. ಇಂದು, ಸರ್ಕಾರವು ತಂತ್ರಜ್ಞಾನದ ಸಹಾಯದಿಂದ ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಗೂ ಉತ್ತಮ ತರಬೇತಿ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಪ್ರಾರಂಭಿಸಲಾದ 'ಕರ್ಮಯೋಗಿ ಭಾರತ' ತಂತ್ರಜ್ಞಾನ ವೇದಿಕೆಯಲ್ಲಿ ಅನೇಕ ಆನ್ ಲೈನ್ ಕೋರ್ಸ್ ಗಳು ಲಭ್ಯವಿವೆ. ನಿಮ್ಮಂತಹ ಹೊಸ ಸರ್ಕಾರಿ ಉದ್ಯೋಗಿಗಳಿಗಾಗಿ ಇಂದು ವಿಶೇಷ ಕೋರ್ಸ್ ಅನ್ನು ಸಹ ಪ್ರಾರಂಭಿಸಲಾಗುತ್ತಿದೆ. ಇದಕ್ಕೆ 'ಕರ್ಮಯೋಗಿ ಪ್ರಾರಂಭ' ಎಂದು ಹೆಸರಿಡಲಾಗಿದೆ. 'ಕರ್ಮಯೋಗಿ ಭಾರತ' ವೇದಿಕೆಯಲ್ಲಿ ಲಭ್ಯವಿರುವ ಆನ್ ಲೈನ್ ಕೋರ್ಸ್ ಗಳ ಗರಿಷ್ಠ ಪ್ರಯೋಜನವನ್ನು ನೀವು ಪಡೆದುಕೊಳ್ಳಬೇಕು ಏಕೆಂದರೆ ಇದು ನಿಮ್ಮ ಕೌಶಲ್ಯಗಳನ್ನು ನವೀಕರಿಸುವುದು ಮಾತ್ರವಲ್ಲದೆ, ಭವಿಷ್ಯದಲ್ಲಿ ನಿಮ್ಮ ವೃತ್ತಿಜೀವನಕ್ಕೂ ಪ್ರಯೋಜನಕಾರಿಯಾಗಲಿದೆ.

ಸ್ನೇಹಿತರೇ,

ಜಾಗತಿಕ ಸಾಂಕ್ರಾಮಿಕ ರೋಗ ಮತ್ತು ನಡೆಯುತ್ತಿರುವ ಯುದ್ಧದಿಂದಾಗಿ ಇಂದು ವಿಶ್ವದಾದ್ಯಂತ ಯುವಕರ ಮುಂದೆ ಹೊಸ ಅವಕಾಶಗಳ ಬಿಕ್ಕಟ್ಟು ಮೂಡಿದೆ. ಅನೇಕ ತಜ್ಞರು ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ದೊಡ್ಡ ಬಿಕ್ಕಟ್ಟನ್ನು ನಿರೀಕ್ಷಿಸುತ್ತಿದ್ದಾರೆ. ಆದಾಗ್ಯೂ, ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು, ಭಾರತವು ತನ್ನ ಆರ್ಥಿಕ ಸಾಮರ್ಥ್ಯವನ್ನು ಪ್ರದರ್ಶಿಸಿ ಹೊಸ ಅವಕಾಶಗಳನ್ನು ತೆರೆಯಲು ಒಂದು ವಿಶಿಷ್ಟ ಅವಕಾಶವನ್ನು ಹೊಂದಿದೆ ಎಂದು ಹೇಳುತ್ತಿದ್ದಾರೆ. ಇಂದು ಭಾರತವು ಸೇವಾ ರಫ್ತಿನ ವಿಷಯದಲ್ಲಿ ವಿಶ್ವದ ಪ್ರಮುಖ ಶಕ್ತಿಯಾಗಿದೆ. ಈಗ ತಜ್ಞರು ಭಾರತವು ವಿಶ್ವದ ಉತ್ಪಾದನಾ ಕೇಂದ್ರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ ಮತ್ತು ಇತರ ಯೋಜನೆಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ, ಆದರೆ ಭಾರತದ ನುರಿತ ಮಾನವಶಕ್ತಿ ಮತ್ತು ಯುವಕರು ಇದರ ಕೇಂದ್ರಬಿಂದುವಾಗಲಿದ್ದಾರೆ. ಪಿಎಲ್ಐ ಯೋಜನೆಯೊಂದರಿಂದಲೇ ದೇಶದಲ್ಲಿ ಸುಮಾರು 80 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. 'ಮೇಕ್ ಇನ್ ಇಂಡಿಯಾ' ಆಗಿರಲಿ, 'ವೋಕಲ್ ಫಾರ್ ಲೋಕಲ್' ಆಗಿರಲಿ, ಅಥವಾ 'ಲೋಕಲ್ ಟು ಗ್ಲೋಬಲ್' ಆಗಿರಲಿ, ಈ ಎಲ್ಲಾ ಅಭಿಯಾನಗಳು ದೇಶದಲ್ಲಿ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಅಂದರೆ, ಸರ್ಕಾರಿ ಮತ್ತು ಸರ್ಕಾರೇತರ ವಲಯಗಳೆರಡರಲ್ಲೂ ಹೊಸ ಉದ್ಯೋಗಗಳ ಸಾಧ್ಯತೆ ನಿರಂತರವಾಗಿ ಹೆಚ್ಚುತ್ತಿದೆ. ಮುಖ್ಯವಾಗಿ, ಯುವಕರಿಗೆ ಈ ಹೊಸ ಅವಕಾಶಗಳನ್ನು ತಮ್ಮ ಸ್ವಂತ ನಗರಗಳು ಮತ್ತು ಹಳ್ಳಿಗಳಲ್ಲಿ ಸೃಷ್ಟಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಯುವಕರು ಇತರ ನಗರಗಳಿಗೆ ವಲಸೆ ಹೋಗುವುದು ತಪ್ಪಿ, ಅವರು ತಮ್ಮ ಪ್ರದೇಶಾಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತಿದೆ.

ಸ್ಟಾರ್ಟ್ ಅಪ್ ಗಳಿಂದ ಹಿಡಿದು ಸ್ವಉದ್ಯೋಗದವರೆಗೆ ಮತ್ತು ಬಾಹ್ಯಾಕಾಶದಿಂದ ಡ್ರೋನ್ ಗಳವರೆಗೆ ಇಂದು ಭಾರತದ ಯುವಕರಿಗೆ ಸರ್ವಾಂಗೀಣ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಇಂದು, ಭಾರತದ 80,000 ಕ್ಕೂ ಹೆಚ್ಚು ನವೋದ್ಯಮಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಯುವಕರಿಗೆ ಅವಕಾಶಗಳನ್ನು ನೀಡುತ್ತಿವೆ. ಔಷಧಗಳ ಪೂರೈಕೆಯಾಗಲಿ, ಕೀಟನಾಶಕಗಳ ಸಿಂಪಡಣೆಯಾಗಲಿ, ಸ್ವಮಿತ್ವ ಯೋಜನೆ ಅಥವಾ ರಕ್ಷಣಾ ವಲಯದಲ್ಲಿ ಭೂಮಿಗಳ ಮ್ಯಾಪಿಂಗ್ ಆಗಲಿ, ದೇಶದಲ್ಲಿ ಡ್ರೋನ್ ಗಳ ಬಳಕೆ ನಿರಂತರವಾಗಿ ಹೆಚ್ಚುತ್ತಿದೆ. ಡ್ರೋನ್ ಗಳ ಈ ಹೆಚ್ಚುತ್ತಿರುವ ಬಳಕೆಯು ಯುವಕರಿಗೆ ಹೊಸ ಉದ್ಯೋಗಗಳನ್ನು ನೀಡುತ್ತಿದೆ. ಬಾಹ್ಯಾಕಾಶ ವಲಯದ ಮುಕ್ತತೆಗೆ ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರವು ಯುವಕರಿಗೆ ಸಾಕಷ್ಟು ಪ್ರಯೋಜನವನ್ನು ನೀಡಿದೆ. ಭಾರತದಲ್ಲಿ ಖಾಸಗಿ ವಲಯವು 2-3 ದಿನಗಳ ಹಿಂದೆ ತನ್ನ ಮೊದಲ ಬಾಹ್ಯಾಕಾಶ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ.

ಇಂದು, ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರು ಮುದ್ರಾ ಸಾಲಗಳಿಂದ ಹೆಚ್ಚಿನ ಸಹಾಯವನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ, ದೇಶದಲ್ಲಿ 35 ಕೋಟಿಗೂ ಹೆಚ್ಚು ಮುದ್ರಾ ಸಾಲಗಳನ್ನು ಮಂಜೂರು ಮಾಡಲಾಗಿದೆ. ದೇಶದಲ್ಲಿ ಆವಿಷ್ಕಾರ ಮತ್ತು ಸಂಶೋಧನೆಯ ಉತ್ತೇಜನವು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ. ಈ ಹೊಸ ಅವಕಾಶಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಾನು ದೇಶದ ಎಲ್ಲಾ ಯುವಕರನ್ನು ಒತ್ತಾಯಿಸುತ್ತೇನೆ. ಇಂದು, ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ 71,000 ಕ್ಕೂ ಹೆಚ್ಚು  ಯುವಕ / ಯುವತಿಯರಿಗೆ ನಾನು ಮತ್ತೊಮ್ಮೆ ಅಭಿನಂದನೆಗಳು ಮತ್ತು ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡುವಲ್ಲಿ ನೀವು ಸಾಧ್ಯವಿರುವ ಎಲ್ಲವನ್ನೂ ಮಾಡುವಿರಿ, ಯಾವುದೇ ಅವಕಾಶವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಇಂದಿನ ನೇಮಕಾತಿ ಪತ್ರ ಕೇವಲ ನಿಮ್ಮ ಪ್ರವೇಶ ಪತ್ರವಾಗಿದೆ. ಇದರರ್ಥ ಪ್ರಗತಿಯ ಹೊಸ ಜಗತ್ತು ಈಗ ನಿಮ್ಮ ಮುಂದೆ ತೆರೆದಿದೆ. ಕೆಲಸ ಮಾಡುವಾಗ ಏಕಕಾಲದಲ್ಲಿ ಜ್ಞಾನವನ್ನು ಗಳಿಸುವ ಮೂಲಕ ನಿಮ್ಮನ್ನು ನೀವು ಹೆಚ್ಚು ಅರ್ಹರನ್ನಾಗಿ ಮಾಡಿಕೊಳ್ಳಿ ಮತ್ತು ನಿಮ್ಮ ಗುರು-ಹಿರಿಯರಿಂದ ಉತ್ತಮ ವಿಷಯಗಳನ್ನು ಕಲಿಯುವ ಮೂಲಕ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.

ಸ್ನೇಹಿತರೇ,

ನಾನು ಸಹ ನಿಮ್ಮಂತೆ ನಿರಂತರವಾಗಿ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನನ್ನೊಳಗಿನ ವಿದ್ಯಾರ್ಥಿಯನ್ನು ಸಾಯಲು ಎಂದಿಗೂ ಬಿಡುವುದಿಲ್ಲ. ನಾನು ಎಲ್ಲರಿಂದಲೂ ಕಲಿಯುತ್ತೇನೆ ಮತ್ತು ಪ್ರತಿಯೊಂದು ಸಣ್ಣ ವಿಷಯದಿಂದಲೂ ಕಲಿಯಲು ಪ್ರಯತ್ನಿಸುತ್ತೇನೆ. ಇದರ ಪರಿಣಾಮವಾಗಿ, ನಾನು ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ನಾನು ಹಾಗೆ ಮಾಡಲು ಸಮರ್ಥನಾಗಿದ್ದೇನೆ. ನೀವೂ ಅದನ್ನು ಮಾಡಬಹುದು, ಆದ್ದರಿಂದ, ನೀವು 'ಕರ್ಮಯೋಗಿ ಭಾರತ'ದೊಂದಿಗೆ ಸಂಪರ್ಕ ಹೊಂದಬೇಕೆಂದು ನಾನು ಬಯಸುತ್ತೇನೆ. ಆನ್ ಲೈನ್ ತರಬೇತಿಯಲ್ಲಿ ನಿಮ್ಮ ಅನುಭವ ಮತ್ತು ಅದರಲ್ಲಿ ನ್ಯೂನತೆಗಳೇನಾದರೂ ಇದ್ದಲ್ಲಿ, ಅದನ್ನು ಮತ್ತಷ್ಟು ಸುಧಾರಿಸುವುದು ಹೇಗೆ ಎಂಬುದರ ಬಗ್ಗೆ ಒಂದು ತಿಂಗಳ ನಂತರ ನಿಮ್ಮ ಸಲಹೆಗಳನ್ನು ನೀಡಬೇಕೆಂದು ಬಯಸುತ್ತೇನೆ. ಅದನ್ನು ನೀವು ನೀಡಲು ಸಾಧ್ಯವೇ? ಅದನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ನೀವು ನಿಮ್ಮ ಸಲಹೆಗಳನ್ನು ನೀಡಬಲ್ಲಿರೇ? ನಿಮ್ಮ ಪ್ರತಿಕ್ರಿಯೆಗಾಗಿ ನಾನು ಕಾಯುತ್ತೇನೆ. ನೋಡಿ, ನಾವೆಲ್ಲರೂ ಇದರಲ್ಲಿ ಭಾಗೀದಾರರು, ಸಹೋದ್ಯೋಗಿಗಳು ಮತ್ತು ಸಹ-ಪ್ರಯಾಣಿಕರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಹಾದಿಯಲ್ಲಿ ನಾವು ಸಾಗಿದ್ದೇವೆ. ನಾವೆಲ್ಲರೂ ಇನ್ನೂ ಮುಂದೆ ಸಾಗಲು ಸಂಕಲ್ಪ ತೊಡೋಣ. ನಿಮಗೆ ಅನೇಕ ಶುಭ ಹಾರೈಕೆಗಳು!

ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣಾ ಹೇಳಿಕೆ:  ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

*****

 



(Release ID: 1878149) Visitor Counter : 102