ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯಲ್ಲಿ ಆರಂಭವಾದ ಭಯೋತ್ಪಾದನೆಗೆ ಹಣಕಾಸು ನಿಗ್ರಹ ಕುರಿತ 3ನೇ 'ಭಯೋತ್ಪಾದನೆಗೆ ಹಣವಿಲ್ಲ' (ನೋ ಮನಿ ಫಾರ್‌ ಟೆರರ್)‌ ಸಚಿವರ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ


“ಒಂದೇ ಒಂದು ದಾಳಿಯನ್ನೂ ಸಹ ಹಲವಾರು ಎಂದು, ಕಳೆದುಕೊಂಡ ಒಂದೇ ಒಂದು ಜೀವವೂ ಸಹ ಹಲವಾರು ಎಂದು ನಾವು ಪರಿಗಣಿಸುತ್ತೇವೆ. ಹಾಗಾಗಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವವರೆಗೂ ನಾವು ವಿರಮಿಸುವುದಿಲ್ಲ”

"ಒಳ್ಳೆಯ ಭಯೋತ್ಪಾದನೆ ಮತ್ತು ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ. ಅದು ಮನುಕುಲ, ಸ್ವಾತಂತ್ರ್ಯ ಮತ್ತು ನಾಗರಿಕತೆಯ ಮೇಲಿನ ದಾಳಿಯಾಗಿದೆ. ಅದಕ್ಕೆ ಯಾವುದೇ ಗಡಿಗಳಿರುವುದಿಲ್ಲ"

"ಏಕರೂಪದ, ಒಗ್ಗಟ್ಟಿನ ಮತ್ತು ಇಂತಹ ಕೃತ್ಯವನ್ನು ಸಹಿಸದಿರುವ ವಿಧಾನದಿಂದ ಮಾತ್ರ ಭಯೋತ್ಪಾದನೆಯನ್ನು ಸೋಲಿಸಬಹುದು"

"ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ಬೆಲೆ ತೆರುವಂತಾಗಬೇಕು"

"ಹೊಸ ಹಣಕಾಸು ತಂತ್ರಜ್ಞಾನಗಳ ಏಕರೂಪದ ತಿಳಿವಳಿಕೆಯ ಅಗತ್ಯವಿದೆ"

"ಭಯೋತ್ಪಾದನೆಯನ್ನು ಬೆಂಬಲಿಸುವ ಯಾರಿಗೂ ಯಾವುದೇ ದೇಶದಲ್ಲೂ ಸ್ಥಳವಿರಬಾರದು”

Posted On: 18 NOV 2022 11:09AM by PIB Bengaluru

ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾವುದೇ ಇಬ್ಬಗೆ ನೀತಿ ಇರಬಾರದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಲವಾಗಿ ಕರೆಕೊಟ್ಟಿದ್ದಾರೆ ಮತ್ತು ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ಸಾಧನವಾಗಿ ಬಳಸುವ ರಾಷ್ಟ್ರಗಳ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ಇಂದು ನವದೆಹಲಿಯಲ್ಲಿ ಭಯೋತ್ಪಾದನೆಗೆ ಹಣಕಾಸು ನಿಗ್ರಹ ಕುರಿತ 'ನೋ ಮನಿ ಫಾರ್ ಟೆರರ್' (ಎನ್‌ಎಂಎಫ್‌ಟಿ) ಸಚಿವರ ಮೂರನೇ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಸಮಾವೇಶಕ್ಕೆ ಎಲ್ಲರನ್ನೂ ಸ್ವಾಗತಿಸಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ನಡೆಯುತ್ತಿರುವ ಸಮ್ಮೇಳನದ ಮಹತ್ವವನ್ನು ಹೇಳಿದರು. ಜಗತ್ತು ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸುವ ಮೊದಲೇ ನಮ್ಮ ರಾಷ್ಟ್ರವು ಭಯೋತ್ಪಾದನೆಯ ಕರಾಳ ಮುಖವನ್ನು ನೋಡಿತ್ತು ಎಂದು ನೆನಪಿಸಿಕೊಂಡರು. ದಶಕಗಳಿಂದ, ಭಯೋತ್ಪಾದನೆಯು ವಿಭಿನ್ನ ಹೆಸರುಗಳು ಮತ್ತು ರೂಪಗಳಲ್ಲಿ ಭಾರತವನ್ನು ಘಾಸಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡರೂ ಭಾರತವು ಭಯೋತ್ಪಾದನೆಯ ವಿರುದ್ಧ ಧೈರ್ಯದಿಂದ ಹೋರಾಡಿದೆ ಎಂದ ಅವರು ಭಯೋತ್ಪಾದನೆಯನ್ನು ಎದುರಿಸಲು ದೃಢವಾಗಿರುವ ಭಾರತ ಮತ್ತು ಅದರ ಜನರೊಂದಿಗೆ ಸಂವಹನ ನಡೆಸಲು ಎಲ್ಲ ಪ್ರತಿನಿಧಿಗಳಿಗೆ ಇದೊಂದು ಅವಕಾಶವಾಗಿದೆ ಎಂದರು. ಒಂದು ದಾಳಿಯನ್ನೂ ಸಹ ಹಲವಾರು ಎಂದು, ಕಳೆದುಹೋದ ಒಂದೇ ಒಂದು ಜೀವವೂ ಸಹ ಹಲವಾರು ಎಂದು ನಾವು ಪರಿಗಣಿಸುತ್ತೇವೆ. ಆದ್ದರಿಂದ, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯುವವರೆಗೂ ನಾವು ವಿರಮಿಸುವುದಿಲ್ಲ ಎಂದು ಪ್ರಧಾನಿ ಘೋಷಿಸಿದರು.

ಈ ಸಮ್ಮೇಳನದ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಯೋತ್ಪಾದನೆಯು ಇಡೀ ಮನುಕುಲದ ಮೇಲೆ ಪರಿಣಾಮ ಬೀರುವುದರಿಂದ ಇದನ್ನು ಮಂತ್ರಿಗಳ ಸಭೆಯಾಗಿ ಮಾತ್ರ ನೋಡಬಾರದು ಎಂದು ಹೇಳಿದರು. ಭಯೋತ್ಪಾದನೆಯ ದೀರ್ಘಕಾಲೀನ ಪರಿಣಾಮವು ವಿಶೇಷವಾಗಿ ಬಡವರು ಮತ್ತು ಸ್ಥಳೀಯ ಆರ್ಥಿಕತೆಯ ಮೇಲೆ ಕೆಟ್ಟದಾಗಿರುತ್ತದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮ ಅಥವಾ ವ್ಯವಹಾರವಾಗಲಿ, ನಿರಂತರವಾಗಿ ಬೆದರಿಕೆಗೆ ಒಳಗಾಗುವ ಪ್ರದೇಶವನ್ನು ಯಾರೂ ಇಷ್ಟಪಡುವುದಿಲ್ಲ ಎಂದು ಶ್ರೀ ಮೋದಿ ಹೇಳಿದರು. ಭಯೋತ್ಪಾದನೆಯ ಪರಿಣಾಮವಾಗಿ ಜನರ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ನಾವು ಭಯೋತ್ಪಾದನೆಯ ಹಣಕಾಸು ಮೂಲವನ್ನು ನಿರ್ಮೂಲನೆ ಮಾಡುವುದು ಹೆಚ್ಚು ಮುಖ್ಯವಾಗಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾವುದೇ ಇಬ್ಬಗೆ ನೀತಿ ಇರಬಾರದು ಎಂದು ಪ್ರಧಾನಿ ಎಚ್ಚರಿಕೆ ನೀಡಿದರು. ಭಯೋತ್ಪಾದನೆಯ ಬಗೆಗಿನ ತಪ್ಪು ಕಲ್ಪನೆಗಳ ಬಗ್ಗೆ ಮಾತನಾಡಿದ ಅವರು, ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯೆಯ ತೀವ್ರತೆಯು ಅದು ಎಲ್ಲಿ ನಡೆಯುತ್ತದೆ ಎಂಬುದರ ಆಧಾರದ ಮೇಲೆ ಬದಲಾಗುವುದಿಲ್ಲ. ಎಲ್ಲ ಭಯೋತ್ಪಾದಕ ದಾಳಿಗಳು ಸಮಾನ ಆಕ್ರೋಶ ಮತ್ತು ಕ್ರಮಕ್ಕೆ ಅರ್ಹವಾಗಿವೆ. ಇದಲ್ಲದೆ, ಕೆಲವೊಮ್ಮೆ, ಭಯೋತ್ಪಾದಕರ ವಿರುದ್ಧದ ಕ್ರಮವನ್ನು ತಡೆಯಲು ಭಯೋತ್ಪಾದನೆಯನ್ನು ಬೆಂಬಲಿಸುವ ವಾದಗಳೂ ಇವೆ. ಜಾಗತಿಕ ಅಪಾಯದೊಂದಿಗೆ ವ್ಯವಹರಿಸುವಾಗ ಇಬ್ಬಗೆ ನೀತಿಗೆ ಸ್ಥಳವಿಲ್ಲ ಎಂದು ಅವರು ಒತ್ತಿ ಹೇಳಿದರು. ಒಳ್ಳೆಯ ಭಯೋತ್ಪಾದನೆ ಮತ್ತು ಕೆಟ್ಟ ಭಯೋತ್ಪಾದನೆ ಇಲ್ಲ. ಇದು ಮನುಕುಲ, ಸ್ವಾತಂತ್ರ್ಯ ಮತ್ತು ನಾಗರಿಕತೆಯ ಮೇಲಿನ ದಾಳಿಯಾಗಿದೆ. ಅದಕ್ಕೆ ಯಾವುದೇ ಗಡಿರೇಖೆಗಳಿರುವುದಿಲ್ಲ.ಏಕರೂಪದ, ಒಗ್ಗಟ್ಟಿನ ಮತ್ತು ಅದನ್ನು ಕಿಂಚಿತ್ತೂ ಸಹಿಸದಿರುವ ವಿಧಾನದಿಂದ ಮಾತ್ರ ಭಯೋತ್ಪಾದನೆಯನ್ನು ತೊಡೆದು ಹಾಕಲು ಸಾಧ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. 

ಭಯೋತ್ಪಾದಕರ ವಿರುದ್ಧ ಹೋರಾಟ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದ ನಡುವಿನ ವ್ಯತ್ಯಾಸದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿಯವರು, ಶಸ್ತ್ರಾಸ್ತ್ರಗಳು ಮತ್ತು ತಕ್ಷಣದ ಯುದ್ಧತಂತ್ರದ ಪ್ರತಿಕ್ರಿಯೆಗಳಿಂದ ಭಯೋತ್ಪಾದಕನನ್ನು ತಟಸ್ಥಗೊಳಿಸಬಹುದು. ಆದರೆ ಭಯೋತ್ಪಾದಕರ ಆರ್ಥಿಕತೆಗೆ ಹಾನಿ ಮಾಡುವ ದೊಡ್ಡ ತಂತ್ರವಿಲ್ಲದಿದ್ದರೆ ಈ ಯುದ್ಧತಂತ್ರದ ಲಾಭಗಳು ಬಹಳ ಬೇಗ ಕಳೆದುಹೋಗುತ್ತವೆ ಎಂದು ಹೇಳಿದರು. ಭಯೋತ್ಪಾದಕ ಒಬ್ಬ ವ್ಯಕ್ತಿ, ಆದರೆ ಭಯೋತ್ಪಾದನೆಯು ವ್ಯಕ್ತಿಗಳ ಜಾಲವಾಗಿದೆ ಎಂದು ಶ್ರೀ ಮೋದಿ ಹೇಳಿದರು. ದಾಳಿಯು ರಕ್ಷಣೆಯ ಅತ್ಯುತ್ತಮ ರೂಪವಾಗಿದೆ ಮತ್ತು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ದೊಡ್ಡ, ಸಕ್ರಿಯ, ವ್ಯವಸ್ಥಿತ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನಮ್ಮ ನಾಗರಿಕರು ಸುರಕ್ಷಿತವಾಗಿರಲು ನಾವು ಭಯೋತ್ಪಾದಕರನ್ನು ಬೆನ್ನಟ್ಟಬೇಕು, ಅವರಿಗೆ ಬೆಂಬಲ ನೀಡುವ ಜಾಲವನ್ನು ಮುರಿಯಬೇಕು ಮತ್ತು ಅವರ ಆರ್ಥಿಕ ಮೂಲವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಅವರು ಒತ್ತಿ ಹೇಳಿದರು.

ಭಯೋತ್ಪಾದನೆಗೆ ರಾಜಕೀಯ, ಸೈದ್ಧಾಂತಿಕ ಮತ್ತು ಆರ್ಥಿಕ ಬೆಂಬಲದ ಪ್ರಮುಖ ಮೂಲಗಳಲ್ಲಿ ದೇಶದ ಬೆಂಬಲವೂ ಒಂದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೆಲವು ದೇಶಗಳು ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಭಯೋತ್ಪಾದಕರನ್ನು ಬೆಂಬಲಿಸುತ್ತವೆ ಎಂದು ಅವರು ಹೇಳಿದರು. ಪರೋಕ್ಷ ಯುದ್ಧಗಳ ಬಗ್ಗೆ ಜಾಗರೂಕರಾಗಿರಲು ಅವರು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಕರೆಕೊಟ್ಟರು. ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ಬೆಲೆ ತೆರುವಂತಾಗಬೇಕು. ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಮೂಡಿಸಲು ಪ್ರಯತ್ನಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ದೂರವಿಡಬೇಕು. ಅಂತಹ ವಿಷಯಗಳಲ್ಲಿ ಯಾವುದೇ ಆದರೆ ಹೋದರೆ ಎಂಬ ಉದಾಸೀನ ಇರುವಂತಿಲ್ಲ. ಭಯೋತ್ಪಾದನೆಗೆ ಎಲ್ಲ ರೀತಿಯ ಬಹಿರಂಗ ಮತ್ತು ನಿಗೂಢ ಬೆಂಬಲದ ವಿರುದ್ಧ ಜಗತ್ತು ಒಗ್ಗೂಡಬೇಕಾಗಿದೆ ಎಂದು ಅವರು ಹೇಳಿದರು.

ಸಂಘಟಿತ ಅಪರಾಧವು ಭಯೋತ್ಪಾದಕ ನಿಧಿಯ ಮತ್ತೊಂದು ಮೂಲ ಎಂದ ಪ್ರಧಾನಮಂತ್ರಿಯವರು, ಕ್ರಿಮಿನಲ್ ಗ್ಯಾಂಗ್‌ಗಳು ಮತ್ತು ಭಯೋತ್ಪಾದಕ ಸಂಘಟನೆಗಳ ನಡುವಿನ ಆಳವಾದ ಸಂಪರ್ಕದ ಬಗ್ಗೆ ಒತ್ತಿಹೇಳಿದರು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸಂಘಟಿತ ಅಪರಾಧದ ವಿರುದ್ಧ ಕ್ರಮವು ಅತ್ಯಂತ ಮುಖ್ಯವಾಗಿದೆ. ಕೆಲವೊಮ್ಮೆ, ಹಣ ವರ್ಗಾವಣೆ ಮತ್ತು ಆರ್ಥಿಕ ಅಪರಾಧಗಳಂತಹ ಚಟುವಟಿಕೆಗಳು ಭಯೋತ್ಪಾದಕ ನಿಧಿಗೆ ಸಹಾಯ ಮಾಡುತ್ತವೆ ಎಂದು ತಿಳಿದುಬಂದಿದೆ. ಇದರ ವಿರುದ್ಧ ಹೋರಾಡಲು ಜಾಗತಿಕ ಸಹಕಾರದ ಅಗತ್ಯವಿದೆ ಎಂದರು.

ಇದರ ಸಂಕೀರ್ಣತೆಯ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್, ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್‌ಗಳು ಮತ್ತು ಎಗ್ಮಾಂಟ್ ಗ್ರೂಪ್, ಅಕ್ರಮ ಹಣ ಹರಿವು ತಡೆಗಟ್ಟುವಿಕೆ, ಪತ್ತೆ ಮತ್ತು ಕಾನೂನು ಕ್ರಮದಲ್ಲಿ ಸಹಕಾರವನ್ನು ಹೆಚ್ಚಿಸುತ್ತಿವೆ ಎಂದು ಒತ್ತಿ ಹೇಳಿದರು. ಕಳೆದ ಎರಡು ದಶಕಗಳಲ್ಲಿ ಭಯೋತ್ಪಾದನೆಯ ವಿರುದ್ಧದ ಸಮರಕ್ಕೆ ಚೌಕಟ್ಟು ಹಲವು ವಿಧದಲ್ಲಿ ಸಹಾಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇದು ಭಯೋತ್ಪಾದಗೆ ಹಣಕಾಸು ಒದಗಿಸುವುದರ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಮುಂದುವರಿದ ತಂತ್ರಜ್ಞಾನದಿಂದಾಗಿ ಬದಲಾಗುತ್ತಿರುವ ಬೆಳಕಿನಲ್ಲಿ ಭಯೋತ್ಪಾದನೆಯ ಸ್ವರೂಪಗಳನ್ನು ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ಭಯೋತ್ಪಾದನೆಗೆ ಹಣಕಾಸು ಮತ್ತು ನೇಮಕಾತಿಗಾಗಿ ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಡಾರ್ಕ್ ನೆಟ್, ಖಾಸಗಿ ಕರೆನ್ಸಿಗಳಿಂದ ಸವಾಲುಗಳು ಎದುರಾಗುತ್ತಿವೆ. ಹೊಸ ಹಣಕಾಸು ತಂತ್ರಜ್ಞಾನಗಳ ಏಕರೂಪದ ತಿಳುವಳಿಕೆಯ ಅಗತ್ಯವಿದೆ. ಈ ಪ್ರಯತ್ನಗಳಲ್ಲಿ ಖಾಸಗಿ ವಲಯವನ್ನು ತೊಡಗಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಆದಾಗ್ಯೂ, ಭಯೋತ್ಪಾದನೆಯನ್ನು ಪತ್ತೆಹಚ್ಚಲು, ಹಿಂಬಾಲಿಸಲು ಮತ್ತು ನಿಭಾಯಿಸಲು ತಂತ್ರಜ್ಞಾನವನ್ನು ಬಳಸಬೇಕು. ಆದರೆ ತಂತ್ರಜ್ಞಾನದ ರಾಕ್ಷಸೀತನದ ಬಗ್ಗೆ ಎಚ್ಚರವಾಗಿರಬೇಕು ಎಂದು ಅವರು ಹೇಳಿದರು.

ಭೌತಿಕ ಮತ್ತು ವರ್ಚುವಲ್ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಸೈಬರ್ ಭಯೋತ್ಪಾದನೆ ಮತ್ತು ಆನ್‌ಲೈನ್ ಉಗ್ರವಾದಕ್ಕೆ ಬಳಸುವ ಮೂಲಸೌಕರ್ಯಗಳನ್ನು ವಿತರಿಸಲಾಗಿದೆ. ಕೆಲವು ಸಂಘಟನೆಗಳು ದೂರದ ಸ್ಥಳಗಳಿಂದ ಮತ್ತು ಆನ್‌ಲೈನ್ ಸಂಪನ್ಮೂಲಗಳಿಂದ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳ ತರಬೇತಿಯನ್ನೂ ನೀಡುತ್ತಿವೆ ಎಂದು ಹೇಳಿದರು. ಸಂವಹನಗಳು, ಪ್ರಯಾಣ, ಲಾಜಿಸ್ಟಿಕ್ಸ್ – ಹೀಗೆ ವಿವಿಧ ದೇಶಗಳಲ್ಲಿ ಸರಪಳಿಯ ಅನೇಕ ಕೊಂಡಿಗಳಿವೆ. ಪ್ರತಿಯೊಂದು ದೇಶವು ತಮ್ಮ ವ್ಯಾಪ್ತಿಯಲ್ಲಿರುವ ಸರಪಳಿಯ ಆ ಕೊಂಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರಧಾನಿ ಒತ್ತಾಯಿಸಿದರು.

ವಿವಿಧ ದೇಶಗಳಲ್ಲಿನ ಕಾನೂನುಗಳು, ಕಾರ್ಯವಿಧಾನಗಳು ಮತ್ತು ಪ್ರಕ್ರಿಯೆಗಳಲ್ಲಿನ ವ್ಯತ್ಯಾಸಗಳನ್ನು ದುರುಪಯೋಗಪಡಿಸಿಕೊಳ್ಳಲು ಭಯೋತ್ಪಾದಕರಿಗೆ ಅವಕಾಶ ನೀಡಬಾರದು ಎಂದು ಪ್ರಧಾನಿ ಎಚ್ಚರಿಸಿದರು. ಸರ್ಕಾರಗಳ ನಡುವೆ ಆಳವಾದ ಸಮನ್ವಯ ಮತ್ತು ತಿಳುವಳಿಕೆಯ ಮೂಲಕ ಇದನ್ನು ತಡೆಯಬಹುದು. ಜಂಟಿ ಕಾರ್ಯಾಚರಣೆಗಳು, ಗುಪ್ತಚರ ಸಮನ್ವಯ ಮತ್ತು ಹಸ್ತಾಂತರವು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ಭಯೋತ್ಪಾದನೆ ಮತ್ತು ಉಗ್ರವಾದದ ಸಮಸ್ಯೆಯನ್ನು ಜಂಟಿಯಾಗಿ ಪರಿಹರಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಉಗ್ರವಾದವನ್ನು ಬೆಂಬಲಿಸುವ ಯಾರಿಗೂ ಯಾವುದೇ ದೇಶದಲ್ಲೂ ಸ್ಥಳವಿರಬಾರದು ಎಂದು ಅವರು ಹೇಳಿದರು.

ಭಯೋತ್ಪಾದನೆ ವಿರುದ್ಧ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಭಾರತ ಕೈಗೊಂಡಿರುವ ಇತ್ತೀಚಿನ ಪ್ರಯತ್ನಗಳ ಬಗ್ಗೆ ತಿಳಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು. ಭದ್ರತೆಯ ವಿವಿಧ ಆಯಾಮಗಳ ವಿವಿಧ ಸಮಾವೇಶಗಳ ಕುರಿತು ಮಾಹಿತಿ ನೀಡಿದ ಪ್ರಧಾನಿಯವರು, ಮುಂಬೈನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ವಿಶೇಷ ಅಧಿವೇಶನ, ನವದೆಹಲಿಯಲ್ಲಿ ನಡೆದ ಇಂಟರ್‌ಪೋಲ್‌ನ ಸಾಮಾನ್ಯ ಸಭೆಯ ಬಗ್ಗೆ ಪ್ರಸ್ತಾಪಿಸಿದರು. ಇಂದಿನ 'ಭಯೋತ್ಪಾದನೆಗೆ ಹಣವಿಲ್ಲ' ಸಮಾವೇಶದ ಮೂಲಕ ಭಯೋತ್ಪಾದಕ ನಿಧಿಯ ವಿರುದ್ಧ ಜಾಗತಿಕ ಆವೇಗವನ್ನು ನಿರ್ಮಿಸಲು ಭಾರತ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಗೃಹ ಖಾತೆ ಸಹಾಯಕ ಸಚಿವ ಶ್ರೀ ನಿತ್ಯಾನಂದ ರೈ, ಗೃಹ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲಾ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕ ಶ್ರೀ ದಿನಕರ್ ಗುಪ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ
ನವೆಂಬರ್ 18-19 ರಂದು ಆಯೋಜಿಸಲಾಗಿರುವ ಎರಡು ದಿನಗಳ ಸಮಾವೇಶವು ಭಾಗವಹಿಸುವ ರಾಷ್ಟ್ರಗಳು ಮತ್ತು ಸಂಸ್ಥೆಗಳಿಗೆ ಭಯೋತ್ಪಾದನೆಗೆ ಹಣಕಾಸು ನಿಗ್ರಹ ಮತ್ತು ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಕ್ರಮಗಳ ಬಗ್ಗೆ ಪ್ರಸ್ತುತ ಅಂತರರಾಷ್ಟ್ರೀಯ ವ್ಯವಸ್ಥೆಯ ಪರಿಣಾಮಕಾರಿತ್ವದ ಬಗ್ಗೆ ಚರ್ಚಿಸಲು ಒಂದು ಅನನ್ಯ ವೇದಿಕೆಯನ್ನು ಕಲ್ಪಿಸುತ್ತದೆ. ಸಮ್ಮೇಳನವು ಹಿಂದಿನ ಎರಡು ಸಮ್ಮೇಳನಗಳ (ಏಪ್ರಿಲ್ 2018 ರಲ್ಲಿ ಪ್ಯಾರಿಸ್‌ನಲ್ಲಿ ಮತ್ತು ನವೆಂಬರ್ 2019 ರಲ್ಲಿ ಮೆಲ್ಬೋರ್ನ್‌ನಲ್ಲಿ) ಲಾಭಗಳು ಮತ್ತು ಕಲಿಕೆಗಳ ಮೇಲೆ ಮತ್ತು ಭಯೋತ್ಪಾದಕರಿಗೆ ಹಣಕಾಸು ನಿರಾಕರಿಸಲು ಮತ್ತು ಕಾರ್ಯನಿರ್ವಹಣೆಗೆ ತಮ್ಮ ಪ್ರದೇಶದಲ್ಲಿ ಅನುಮತಿ ನಿರಾಕರಣೆಯನ್ನು ಹೆಚ್ಚಿಸಲು ಜಾಗತಿಕ ಸಹಕಾರ ಕುರಿತು ಕೆಲಸ ಮಾಡುತ್ತದೆ. ಸಚಿವರು, ಬಹುಪಕ್ಷೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನಿಯೋಗಗಳ ಮುಖ್ಯಸ್ಥರು ಸೇರಿದಂತೆ ವಿಶ್ವದಾದ್ಯಂತದ ಸುಮಾರು 450 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಸಮಾವೇಶದಲ್ಲಿ ಸಮಯದಲ್ಲಿ, 'ಭಯೋತ್ಪಾದನೆ ಮತ್ತು ಭಯೋತ್ಪಾದಕ ಹಣಕಾಸಿನಲ್ಲಿ ಜಾಗತಿಕ ಪ್ರವೃತ್ತಿಗಳು', 'ಭಯೋತ್ಪಾದನೆಗಾಗಿ ಔಪಚಾರಿಕ ಮತ್ತು ಅನೌಪಚಾರಿಕ ನಿಧಿಗಳ ಬಳಕೆ', ಹೊಸ ತಂತ್ರಜ್ಞಾನಗಳು ಹಾಗೂ ಭಯೋತ್ಪಾದನೆಗೆ ಹಣಕಾಸು ಮತ್ತು ಭಯೋತ್ಪಾದನೆಗೆ ಹಣಕಾಸು ಹೋರಾಟದ ಸವಾಲುಗಳುʼ ಕುರಿತು ಚರ್ಚೆಗಳು ನಡೆಯಲಿವೆ.


(Release ID: 1877050) Visitor Counter : 309