ಪ್ರಧಾನ ಮಂತ್ರಿಯವರ ಕಛೇರಿ
ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಿದರು
Posted On:
11 NOV 2022 12:20PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದ ಪ್ಲಾಟ್‌ಫಾರಂ ನಂ. 7 ರಲ್ಲಿರುವ ಫ್ಲ್ಯಾಗ್‌ಆಫ್ ಪ್ರದೇಶಕ್ಕೆ ಪ್ರಧಾನಿಯವರು ಆಗಮಿಸಿದರು ಮತ್ತು ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದರು. ಇದು ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಇದು ಕೈಗಾರಿಕಾ ಕೇಂದ್ರ ಚೆನ್ನೈ, ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಕೇಂದ್ರ ಬೆಂಗಳೂರು ಮತ್ತು ಪ್ರಸಿದ್ಧ ಪ್ರವಾಸಿ ನಗರವಾದ ಮೈಸೂರಿನ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ.
“ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಇದು ಜೀವನವನ್ನು ಸುಲಭಗೊಳಿಸುತ್ತದೆ. ಈ ರೈಲಿಗೆ ಬೆಂಗಳೂರಿನಿಂದ ಹಸಿರು ನಿಶಾನೆ ತೋರಿಸಿರುವುದು ಸಂತೋಷ ನೀಡಿದೆ.” ಎಂದು ಪ್ರಧಾನಿಯವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದಾದ ನಂತರ ಪ್ರಧಾನಮಂತ್ರಿಯವರು ಪ್ಲಾಟ್‌ಫಾರ್ಮ್ ನಂ. 8 ಕ್ಕೆ ಆಗಮಿಸಿದರು ಮತ್ತು ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಕರ್ನಾಟಕ ಸರ್ಕಾರ ಮತ್ತು ರೈಲ್ವೇ ಸಚಿವಾಲಯವು ಕರ್ನಾಟಕದಿಂದ ಕಾಶಿಗೆ ಯಾತ್ರಾರ್ಥಿಗಳನ್ನು ಕಳುಹಿಸಲು ಒಟ್ಟಾಗಿ ಕೆಲಸ ಮಾಡುತ್ತಿರುವ ಭಾರತ್ ಗೌರವ್ ಯೋಜನೆಯಡಿಯಲ್ಲಿ ಈ ರೈಲು ಸಂಚಾರ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಆರಾಮದಾಯಕ ವಾಸ್ತವ್ಯ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗುವುದು.
“ಭಾರತ್ ಗೌರವ್ ಕಾಶಿ ಯಾತ್ರೆ ರೈಲು ಕಾರ್ಯಕ್ರಮವನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕವನ್ನು ನಾನು ಅಭಿನಂದಿಸುತ್ತೇನೆ. ಈ ರೈಲು ಕಾಶಿ ಮತ್ತು ಕರ್ನಾಟಕವನ್ನು ಸಮೀಪಗೊಳಿಸಿದೆ. ಈಗ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್‌ಗೆ ಸುಲಭವಾಗಿ ಭೇಟಿ ನೀಡಬಹುದು.” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿಯವರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಶ್ರೀ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.
ಹಿನ್ನೆಲೆ
ವಂದೇ ಭಾರತ್ ಎಕ್ಸ್‌ಪ್ರೆಸ್
ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ರೈಲು ಉನ್ನತ ಮಟ್ಟದ ಮತ್ತು ವಿಮಾನ ಪ್ರಯಾಣದಂತಹ ಅನುಭವಗಳನ್ನು ನೀಡುತ್ತದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ - ಕವಚ್ ಸೇರಿದಂತೆ ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ವಂದೇ ಭಾರತ್ 2.0 ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ಯಿಂದ 100 ಕಿಲೋಮೀಟರ್‌ಗಳ ವೇಗವನ್ನು ಮತ್ತು ಗಂಟೆಗೆ 180 ಕಿಲೋಮೀಟರ್‌ಗಳವರೆಗೆ ಗರಿಷ್ಠ ವೇಗವನ್ನು ತಲುಪುವಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಸುಧಾರಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದಿನ ಆವೃತ್ತಿಯ 430 ಟನ್‌ಗಳಿಗೆ ಹೋಲಿಸಿದರೆ 392 ಟನ್ ತೂಕವಿರುತ್ತದೆ. ಇದು ವೈ-ಫೈ ಕಂಟೆಂಟ್ ಆನ್ ಡಿಮ್ಯಾಂಡ್ ಸೌಲಭ್ಯವನ್ನೂ ಹೊಂದಿರಲಿದೆ. ಪ್ರಯಾಣಿಕರಿಗೆ ಮಾಹಿತಿ ಮತ್ತು ಮನರಂಜನೆ ಒದಗಿಸಲು ಪ್ರತಿ ಬೋಗಿಯಲ್ಲಿ 32 ಇಂಚಿನ ಟಿವಿ ಪರದೆಗಳು ಇವೆ. ಹಿಂದಿನ ಆವೃತ್ತಿಯು 24 ಇಂಚು ಪರದೆ ಹೊಂದಿತ್ತು. ವಂದೇ ಭಾರತ್ ಎಕ್ಸ್‌ಪ್ರೆಸ್ ಪರಿಸರ ಸ್ನೇಹಿಯಾಗಿದೆ. ಏಕೆಂದರೆ ಎಸಿಗಳು ಶೇಕಡಾ 15 ರಷ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತವೆ. ಟ್ರ್ಯಾಕ್ಷನ್ ಮೋಟರ್‌ನ ಧೂಳು-ಮುಕ್ತ ಶುದ್ಧ ಗಾಳಿಯ ತಂಪಾಗಿಸುವಿಕೆಯೊಂದಿಗೆ, ಪ್ರಯಾಣವು ಹೆಚ್ಚು ಆರಾಮದಾಯಕವಾಗುತ್ತದೆ. ಈ ಹಿಂದೆ ಎಕ್ಸಿಕ್ಯೂಟಿವ್ ವರ್ಗದ ಪ್ರಯಾಣಿಕರಿಗೆ ಮಾತ್ರ ನೀಡಲಾಗಿದ್ದ ಸೈಡ್ ರಿಕ್ಲೈನರ್ ಸೀಟ್ ಸೌಲಭ್ಯವನ್ನು ಈಗ ಎಲ್ಲಾ ವರ್ಗಗಳಿಗೂ ಲಭ್ಯವಾಗುವಂತೆ ಮಾಡಲಾಗುವುದು. ಎಕ್ಸಿಕ್ಯೂಟಿವ್ ಬೋಗಿಗಳು 180-ಡಿಗ್ರಿ ತಿರುಗುವ ಆಸನಗಳ ಹೆಚ್ಚುವರಿ ವೈಶಿಷ್ಟ್ಯವನ್ನು ಹೊಂದಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸದಲ್ಲಿ, ಗಾಳಿಯ ಶುದ್ಧೀಕರಣಕ್ಕಾಗಿ ರೂಫ್-ಮೌಂಟೆಡ್ ಪ್ಯಾಕೇಜ್ ಘಟಕದಲ್ಲಿ (ಆರ್ ಎಂ ಪಿ ಯು) ಫೋಟೋ-ಕ್ಯಾಟಲಿಟಿಕ್ ಅಲ್ಟ್ರಾವಯಲೆಟ್ ಗಾಳಿ ಶುದ್ಧೀಕರಣ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಚಂಡೀಗಢದ ವೈಜ್ಞಾನಿಕ ಸಲಕರಣೆಗಳ ಕೇಂದ್ರೀಯ ಸಂಸ್ಥೆ (ಸಿ ಎ ಐ ಒ) ಶಿಫಾರಸಿನಂತೆ, ತಾಜಾ ಗಾಳಿ ಮತ್ತು ಹಿಂತಿರುಗುವ ಗಾಳಿಯ ಮೂಲಕ ಬರುವ ಸೂಕ್ಷ್ಮಾಣುಗಳು, ಬ್ಯಾಕ್ಟೀರಿಯಾಗಳು, ವೈರಸ್‌ಗಳು ಇತ್ಯಾದಿಗಳನ್ನು ಫಿಲ್ಟರ್ ಮಾಡಲು ಮತ್ತು ಸ್ವಚ್ಛಗೊಳಿಸಲು ಈ ವ್ಯವಸ್ಥೆಯನ್ನು ಆರ್ ಎಂ ಪಿ ಯು ನ ಎರಡೂ ತುದಿಗಳಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ.
ಭಾರತ್ ಗೌರವ್ ರೈಲುಗಳು
ಭಾರತೀಯ ರೈಲ್ವೆಯು ನವೆಂಬರ್ 2021 ರಲ್ಲಿ ಥೀಮ್-ಆಧರಿತ ಭಾರತ್ ಗೌರವ್ ರೈಲಿನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಥೀಮ್‌ನ ಉದ್ದೇಶವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಭಾರತ ಮತ್ತು ಪ್ರಪಂಚದ ಜನರಿಗೆ ಭಾರತ್ ಗೌರವ್ ರೈಲುಗಳ ಮೂಲಕ ತೋರಿಸುವುದಾಗಿದೆ. ಈ ಯೋಜನೆಯು ಭಾರತದ ಅಪಾರವಾದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಥೀಮ್-ಆಧರಿತ ರೈಲುಗಳನ್ನು ಓಡಿಸಲು ಪ್ರವಾಸೋದ್ಯಮ ಕ್ಷೇತ್ರದ ವೃತ್ತಿಪರರ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಗುರಿಯನ್ನು ಸಹ ಹೊಂದಿದೆ.
******
(Release ID: 1875146)
Visitor Counter : 223
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam