ಜವಳಿ ಸಚಿವಾಲಯ

ನವದೆಹಲಿಯಲ್ಲಿ ಜವಳಿ ಸಲಹಾ ಗುಂಪಿನೊಂದಿಗೆ 3ನೇ ಸಂವಾದ ಸಭೆ ನಡೆಸಿದ ಕೇಂದ್ರ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್; ಹತ್ತಿ ಮೌಲ್ಯ ಸರಪಳಿಯ ಉಪಕ್ರಮಗಳ ಪರಿಶೀಲನೆ


ಉದ್ಯಮ ರಂಗವು ಉದ್ಯಮ ನಿಧಿಯ ಕೊಡುಗೆಗಳೊಂದಿಗೆ ಬ್ರ್ಯಾಂಡಿಂಗ್ ಉಪಕ್ರಮಗಳನ್ನು ಮುನ್ನಡೆಸಲು ಸರ್ಕಾರದಿಂದ ಹೊಂದಾಣಿಕೆಯ ಬೆಂಬಲ: ಶ್ರೀ ಗೋಯಲ್ ಅಭಯ

ಹೆಚ್ಚಿನ ಇಳುವರಿ ನೀಡುವ ಹತ್ತಿ ಬೀಜಗಳಿಗೆ ಸಂಬಂಧಿಸಿದ ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸುವ ವಿಧಾನಗಳ ಮೇಲೆ ಆದ್ಯತೆಯ ಗಮನ ಕೇಂದ್ರೀಕರಿಸಿ: ಶ್ರೀ ಗೋಯಲ್ ಒತ್ತು

ಸ್ವಾತಂತ್ರ್ಯ ಅಮೃತೋತ್ಸವದ ಸಂದರ್ಭದಲ್ಲಿ ಹತ್ತಿ ಬೆಳೆಗಾರರಿಗೆ 75 ಸಾವಿರ ಕಪಾಸ್ ಪ್ಲಕ್ಕರ್ ಯಂತ್ರಗಳನ್ನು ಒದಗಿಸಲು ಧನಸಹಾಯ ಮಾಡುವಂತೆ ಉದ್ಯಮ ಮತ್ತು ಕೈಗಾರಿಕಾ ಸಂಘಗಳಿಗೆ ಪ್ರೋತ್ಸಾಹ; ಭಾರತೀಯ ಹತ್ತಿ ನಿಗಮದಿಂದ ರೈತರಿಗೆ ಯಂತ್ರಗಳ ವಿತರಣೆ ಬೆಂಬಲ: ಶ್ರೀ ಗೋಯಲ್

Posted On: 08 NOV 2022 2:55PM by PIB Bengaluru

ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಹತ್ತಿ ಮೌಲ್ಯ ಸರಪಳಿಯ ಉಪಕ್ರಮಗಳ ಪ್ರಗತಿ ಪರಿಶೀಲಿಸಲು ನವದೆಹಲಿಯ ವಾಣಿಜ್ಯ ಭವನದಲ್ಲಿಂದು  ಜವಳಿ ಸಲಹಾ ಗುಂಪಿನ (ಟಿಎಜಿ) ಜತೆ 3ನೇ ಸಂವಾದ ಸಭೆ ನಡೆಸಿದರು., ಜವಳಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವೆ ಶ್ರೀಮತಿ. ದರ್ಶನ ವಿ. ಜರ್ದೋಶ್, ಜವಳಿ ಕಾರ್ಯದರ್ಶಿ ಶ್ರೀಮತಿ ರಚನಾ ಶಾ, ಟಿಎಜಿ ಅಧ್ಯಕ್ಷ ಶ್ರೀ ಸುರೇಶ್ ಕೋಟಕ್, ಸಂಬಂಧಿಸಿದ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಮತ್ತು ಹತ್ತಿ ಮೌಲ್ಯ ಸರಪಳಿಯ ಪಾಲುದಾರರು ಉಪಸ್ಥಿತರಿದ್ದರು.

ನವದೆಹಲಿಯಲ್ಲಿ ನಡೆದ 2ನೇ ಸಂವಾದಾತ್ಮಕ ಸಭೆಯ ನಂತರ ಆರಂಭಿಸಲಾದ ಉಪಕ್ರಮಗಳನ್ನು ಶ್ರೀ ಗೋಯಲ್ ಪರಿಶೀಲಿಸಿದರು. ಹತ್ತಿ ಉತ್ಪಾದಕತೆ ಹೆಚ್ಚಿಸುವ ಸಮಗ್ರ ಯೋಜನೆಯ ವಿವರಗಳನ್ನು ನಾಗ್ಪುರದ ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ (ಸಿಐಸಿಆರ್) ಪ್ರಸ್ತುತಪಡಿಸಿತು. ರೈತ ಜಾಗೃತಿ ಕಾರ್ಯಕ್ರಮಗಳು, ಹೆಚ್ಚಿನ ಸಾಂದ್ರತೆಯ ನಾಟಿ ವ್ಯವಸ್ಥೆ(ಎಚ್ ಡಿಪಿಎಸ್) ಮತ್ತು ಜಾಗತಿಕ ಉತ್ತಮ ಕೃಷಿ ಪದ್ಧತಿಗಳ ಅಳವಡಿಕೆ ಮೂಲಕ ಹತ್ತಿ ಉತ್ಪಾದಕತೆಯನ್ನು ಸುಧಾರಿಸುವ ವಿಧಾನಗಳನ್ನು ಅದು ಸಭೆಯಲ್ಲಿ ಪ್ರಸ್ತುತಪಡಿಸಿತು.

ಭಾರತೀಯ ಹತ್ತಿಯನ್ನು ಬ್ರ್ಯಾಂಡಿಂಗ್ ಮಾಡಲು ಇದು ಸುಸಮಯವಾಗಿದೆ. ಕಸ್ತೂರಿ ಬ್ರಾಂಡ್ ಉತ್ಪನ್ನಗಳು ಗ್ರಾಹಕರ ವಿಶ್ವಾಸ ಮತ್ತು ಆಕರ್ಷಣೆಗೆ ಒಳಗಾಗಿವೆ. ಹಾಗಾಗಿ, ಇದು ಆತ್ಮನಿರ್ಭರ್ ಭಾರತದ ಕಡೆಗೆ ಸಾಗಲು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು. ಹತ್ತಿ ಉದ್ಯಮವು ಮುಂಚೂಣಿಯಲ್ಲಿರಬೇಕು ಮತ್ತು ಭಾರತೀಯ ಹತ್ತಿ ಕಸ್ತೂರಿಯನ್ನು ಬ್ರ್ಯಾಂಡಿಂಗ್ ಮಾಡಲು ಮತ್ತು ಪ್ರಮಾಣೀಕರಿಸುವ ಜವಾಬ್ದಾರಿ ಹೊರುವ ಮೂಲಕ ಸ್ವಯಂ ನಿಯಂತ್ರಣ ತತ್ವದ ಮೇಲೆ ಕೆಲಸ ಮಾಡಬೇಕು ಎಂದು ಗೋಯಲ್ ಸಲಹೆ ನೀಡಿದರು.

ಇದಲ್ಲದೆ, ಭಾರತೀಯ ಹತ್ತಿ ನಾರಿನ ಗುಣಮಟ್ಟ ಅತ್ಯುನ್ನತವಾಗಿದೆ. ಆದ್ದರಿಂದ ಬಿಐಎಸ್ ಕಾಯಿದೆ 2016ರ ಅಡಿ, ಹತ್ತಿ ಬೇಲ್‌ಗಳ ಗುಣಮಟ್ಟ ನಿಯಂತ್ರಣ ಆದೇಶ ಅನುಷ್ಠಾನವು ತಾಂತ್ರಿಕ ಗುಣಮಟ್ಟದ ನಿಯತಾಂಕಗಳ ವಿಷಯದಲ್ಲಿ ಹತ್ತಿ ಬೇಲ್‌ಗಳನ್ನು ಪ್ರಮಾಣೀಕರಿಸಲು ಮತ್ತು ಎಲ್ಲಾ ಪಾಲುದಾರರ ಪ್ರಯೋಜನಕ್ಕಾಗಿ ಹತ್ತಿ ಬೇಲ್ ಪತ್ತೆ ಹಚ್ಚುವಿಕೆ ಮತ್ತು ಗುರುತಿಸುವುದು ಅತ್ಯಗತ್ಯ ಎಂದು ಗೋಯಲ್ ಸೂಚಿಸಿದರು. 
ಕಸ್ತೂರಿ ಹತ್ತಿಯ ಗುಣಮಟ್ಟ, ಪತ್ತೆ ಹಚ್ಚುವಿಕೆ ಮತ್ತು ಬ್ರ್ಯಾಂಡಿಂಗ್‌ನಲ್ಲಿ ಕೆಲಸ ಮಾಡಲು ಉದ್ಯಮ ಮತ್ತು ಅದರ ನಾಮನಿರ್ದೇಶಿತ ಸಂಸ್ಥೆಗಳು ಕೈಗೊಂಡ ಕ್ರಮಳನ್ನು ಸಚಿವರು ಶ್ಲಾಘಿಸಿದರು. ಉದ್ಯಮದ ಕೊಡುಗೆಗಳಿಗೆ ಹೊಂದಿಕೆಯಾಗುವ ನಿಧಿಗಳನ್ನು ಒದಗಿಸುವ ಉಪಕ್ರಮಗಳನ್ನು ಸರ್ಕಾರವು ಬೆಂಬಲಿಸುತ್ತದೆ ಎಂದರು.

ಕಸ್ತೂರಿ ಹತ್ತಿಯ ಮಾನದಂಡಗಳು, ಡಿಎನ್ಎ ಪರೀಕ್ಷೆ ಮತ್ತು ಪತ್ತೆ ಹಚ್ಚುವಿಕೆಗೆ ಅನುಗುಣವಾಗಿ ಅಗತ್ಯವಿರುವ ಪರೀಕ್ಷಾ ಸೌಲಭ್ಯವನ್ನು ಬಲಪಡಿಸಲು ಒತ್ತು ನೀಡಲಾಗುವುದು. ಬಿಐಎಸ್ ಮತ್ತು ಟಿಆರ್‌ಎ ಮೂಲಕ ಸಾಕಷ್ಟು ಆಧುನಿಕ ಪರೀಕ್ಷಾ ಸೌಲಭ್ಯಗಳನ್ನು ಸೃಜಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಹತ್ತಿ ಉತ್ಪಾದಕತೆ ಹೆಚ್ಚಿಸಲು, ಉತ್ತಮ ಗುಣಮಟ್ಟದ ಹತ್ತಿ ಬೀಜಗಳ ಪೂರೈಕೆ ಈ  ಸಮಯದ ಅಗತ್ಯವಾಗಿದೆ. ಇದಕ್ಕೆ ಪೂರಕವಾಗಿ, ಸಂಬಂಧಿತ ಸಚಿವಾಲಯಗಳಿಂದ ಸಮರೋಪಾದಿಯಲ್ಲಿ ಕೆಲವು ನಿರ್ದಿಷ್ಟ ಕ್ರಮಗಳ ಅಗತ್ಯವಿದೆ ಎಂದು ಸಚಿವರು ಒತ್ತಿ ಹೇಳಿದರು. ಹತ್ತಿಯ ಉತ್ಪಾದಕತೆ ಹೆಚ್ಚಿಸಲು ಹೆಚ್ಚಿನ ಇಳುವರಿ ನೀಡುವ ಹತ್ತಿ ಬೀಜಗಳಿಗೆ ಸಂಬಂಧಿಸಿದ ಸುಧಾರಿತ ತಂತ್ರಜ್ಞಾನಗಳನ್ನು ಮತ್ತು ಹೆಚ್ಚಿನ ಸಾಂದ್ರತೆಯ ನಾಟಿ  ವ್ಯವಸ್ಥೆಯಂತಹ ನವೀನ ಕೃಷಿಶಾಸ್ತ್ರ ಪರಿಚಯಿಸುವ ಅಗತ್ಯವಿದೆ. ರೈತ ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುವ ಸಿಮಾ-ಸಿಡಿಆರ್‌ಎ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೈಯಿಂದ ಹಿಡಿಯುವ ಕಪಾಸ್ ಪ್ಲಕ್ಕರ್ ಯಂತ್ರಗಳ ಬಳಕೆಯಿಂದ ಹತ್ತಿಯನ್ನು ಹೆಕ್ಕಿ ತೆಗೆಯುವ ಯಾಂತ್ರೀಕರಣ ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಜವಳಿ ಉದ್ಯಮ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಶ್ರೀ ಗೋಯಲ್ ಒತ್ತಾಯಿಸಿದರು. ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ವಿತರಣಾ ಬೆಂಬಲದೊಂದಿಗೆ ಭಾರತೀಯ ಜವಳಿ ಉದ್ಯಮ ಒಕ್ಕೂಟ (ಸಿಐಟಿಐ) ಈ ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳುತ್ತದೆ. ಕೈಗಾರಿಕಾ ಸಂಘಗಳು ಮತ್ತು ಉದ್ಯಮದ ಮುಖಂಡರು ಒಟ್ಟಾಗಿ 75,000 ಸಂಖ್ಯೆಯ ಕೈಯಲ್ಲಿ ಹಿಡಿಯುವ ಕಪಾಸ್ ಪ್ಲಕ್ಕರ್ ಯಂತ್ರಗಳಿಗೆ ಧನಸಹಾಯ ನೀಡಲು ಒಪ್ಪಿಕೊಂಡರು. ಹೆಚ್ಚುವರಿಯಾಗಿ, ಹತ್ತಿ ಬೆಳೆಗಾರರನ್ನು ಸಶಕ್ತಗೊಳಿಸಲು ರೈತ ಉತ್ಪಾದಕ ಸಂಘಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು.

ಹತ್ತಿಯ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ರಸಗೊಬ್ಬರ ಚೀಲಗಳ ಬಣ್ಣ ಬದಲಾವಣೆ (ರೈತರು ಹತ್ತಿ ಕೊಯ್ಲು ಮತ್ತು ಶೇಖರಣೆಯಲ್ಲಿ ಮರುಬಳಕೆ ಮಾಡುವ) ಮಾಡಬೇಕೆಂಬ ಉದ್ಯಮದ ಬೇಡಿಕೆಗೆ ಪ್ರತಿಕ್ರಿಯಿಸಿದ ಶ್ರೀ ಗೋಯಲ್, ಭಾರತ ಸರ್ಕಾರವು ಈ ಆತಂಕ ನಿವಾರಣೆ ಮಾಡುವ ಉದ್ದೇಶದಿಂದ ಲೋಗೊ ಮತ್ತು ಮಾದರಿಯನ್ನು ವ್ಯಾಖ್ಯಾನಿಸುವ ‘ಒಂದು ರಾಷ್ಟ್ರ, ಒಂದು ರಸಗೊಬ್ಬರ’ ಯೋಜನೆಯ 'ಅಧಿಸೂಚನೆ' ಹೊರಡಿಸಿದೆ ಎಂದು ಸಚಿವರು ತಿಳಿಸಿದರು. 

ಸಲಹಾ ವಿಧಾನದ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಾಮಾಣಿಕ  ಮತ್ತು ಪ್ರಾಯೋಗಿಕ ವಿಧಾನಗಳನ್ನು ಕಲ್ಪಿಸಿದ ಸಚಿವರಿಗೆ ಉದ್ಯಮ ಮತ್ತು ಜವಳಿ ಮೌಲ್ಯ ಸರಪಳಿಯ ಪಾಲುದಾರರು ಕೃತಜ್ಞತೆಗಳನ್ನು ಸಲ್ಲಿಸಿದರು.

*****



(Release ID: 1874509) Visitor Counter : 146