ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನಿನ್ನೆಯ ಕಾಲ್ಪನಿಕ ಕಥೆಗಳನ್ನು ವಿಜ್ಞಾನ ಇಂದಿನ ವಾಸ್ತವಕ್ಕೆ ಮಾರ್ಪಡಿಸಿದೆ ಮತ್ತು ಆಧುನಿಕ ಸಂಶೋಧನೆಯೊಂದಿಗೆ ಸಾಂಪ್ರದಾಯಿಕ ಜ್ಞಾನದ ಅತ್ಯುತ್ತಮ ಮಿಶ್ರಣವು ಕಲ್ಪನೆಗೂ ಮೀರಿದ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.


ಮೋದಿ ಸರ್ಕಾರದ ನೇತೃತ್ವದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ದೃಷ್ಟಿ ಮತ್ತು ಜಾಗತಿಕ ಚಿತ್ರಣ ಹೊಸ ಎತ್ತರಕ್ಕೇರಿದೆ ಎಂದರು 
 
ಡೆಹ್ರಾಡೂನ್‌ನ ಉತ್ತರಾಂಚಲ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಆಕಾಶ್ ತತ್ವ- “ಆಕಾಶ್ ಫಾರ್ ಲೈಫ್” ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವರು ಪ್ರಮುಖ ಭಾಷಣ ಮಾಡಿದರು
 
2024 ರಲ್ಲಿ ದೇಶದ ಮೊದಲ ಮಾನವ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳುತ್ತಾರೆ

Posted On: 05 NOV 2022 6:09PM by PIB Bengaluru

ಕೇಂದ್ರದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ; ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಭೂ ವಿಜ್ಞಾನ; ರಾಜ್ಯ ಸಚಿವರು ಪ್ರಧಾನಮಂತ್ರಿಗಳ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರು ಇಂದು ವಿಜ್ಞಾನವು ನಿನ್ನೆಯ ಕಾಲ್ಪನಿಕ ಕಥೆಗಳನ್ನು ಇಂದಿನ ವಾಸ್ತವಕ್ಕೆ ಬದಲಾಯಿಸಿದೆ. ಆದ್ದರಿಂದ ಆಧುನಿಕ ಸಂಶೋಧನೆಯೊಂದಿಗೆ ಸಾಂಪ್ರದಾಯಿಕ ಜ್ಞಾನದ ಅತ್ಯುತ್ತಮ ಮಿಶ್ರಣವು ಕಲ್ಪನೆಗೂ ಮೀರಿದ ಫಲಿತಾಂಶಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು
ತಾವು ಚಿಕ್ಕವರಿದ್ದಾಗ ರೇಡಿಯೋ ಮಾತ್ರ ಇತ್ತು, ದೂರದರ್ಶನದ ಬಗ್ಗೆ ಯಾರೂ ಕೇಳಿರಲಿಲ್ಲ ಆದರೆ ಮುಂದೊಂದು ದಿನ ನಾವು ರೇಡಿಯೊದಲ್ಲಿ ವಾರ್ತಾ ವಾಚಕರ ಮುಖವನ್ನು ನೋಡಬಹುದು ಎಂದು ಶಿಕ್ಷಕರು ಬೆರಗಿನಿಂದ ಹೇಳುತ್ತಿದ್ದರು ಎಂದು ಸಚಿವರು ನೆನಪಿಸಿಕೊಂಡರು. ಅಂತೆಯೇ, ಸಾರಾಭಾಯ್ ಬಾಹ್ಯಾಕಾಶ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿದಾಗ, ಭಾರತದಲ್ಲಿ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮುಂದೊಂದು ದಿನ ಭಾರತೀಯ ಬಾಹ್ಯಾಕಾಶ ಚಟುವಟಿಕೆಗಳಿಂದಾಗಿ ಚಂದ್ರನ ಮೇಲ್ಮೈಯ ಮೇಲೆ ನಾವು ಇಳಿಯುತ್ತೇವೆ ಎಂಬ ಪರಿವೆಯಿಲ್ಲದೆ ಚಂದ್ರನ ಬಗ್ಗೆ ಅಂಗನವಾಡಿಗಳಲ್ಲಿ ಪದ್ಯಗಳನ್ನು ಹಾಡಿದ್ದೇವೆ ಎಂದು ಕೂಡಾ ಅವರು ಹೇಳಿದರು.

ಡೆಹ್ರಾಡೂನ್‌ನ ಉತ್ತರಾಂಚಲದ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಆಕಾಶ್ ತತ್ವ- “ಆಕಾಶ್ ಫಾರ್ ಲೈಫ್” ಕುರಿತು 4 ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಭಾಷಣನ್ನು ಮಾಡಿದ ಡಾ ಜಿತೇಂದ್ರ ಸಿಂಗ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ವಿಜ್ಞಾನ, ತಂತ್ರಜ್ಞಾನ ಹಾಗೂ ನಾವೀನ್ಯದ ಸಾಮರ್ಥ್ಯಗಳು ಸಾರ್ವತ್ರಿಕ ಮನ್ನಣೆಗಳಿಸಲು ಭಾರತವನ್ನು ಸಶಕ್ತಗೊಳಿಸಿದ್ದಾರೆ ಮತ್ತು ಈ ಮೂಲಕ ನಮ್ಮ ಸ್ಟಾರ್ಟ್‌ಅಪ್‌ಗಳು ಹೆಚ್ಚಿನ ಬೇಡಿಕೆ ಪಡೆದಿವೆ. ಇಡೀ ಜಗತ್ತು ಭಾರತವನ್ನು ಸ್ಫೂರ್ತಿದಾಯಕ ತಾಣವಾಗಿ ನೋಡುತ್ತಿದೆ, ಏಕೆಂದರೆ ಇದು ಉದಯೋನ್ಮುಖ ರಾಷ್ಟ್ರಗಳಿಗೆ ನ್ಯಾನೊಸಾಟಲೈಟ್‌ಗಳು ಸೇರಿದಂತೆ ಸಾಮರ್ಥ್ಯ ವರ್ಧನೆ ಮತ್ತು ಉಪಗ್ರಹ ನಿರ್ಮಾಣದಲ್ಲಿ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು. 

ಕಳೆದ ಎಂಟು ವರ್ಷಗಳಲ್ಲಿ ಜೀವನದ ಎಲ್ಲ ಕ್ಷೇತ್ರಗಳಲ್ಲಿ ವೈಜ್ಞಾನಿಕ ಅನ್ವೇಷಣೆಗಳಿಗೆ ಪ್ರಧಾನಮಂತ್ರಿ ಮೋದಿಯವರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ವಿಶ್ವದಲ್ಲಿಯೇ ಮುಂಚೂಣಿಯಲ್ಲಿರುವ ವೈಜ್ಞಾನಿಕ ಶಕ್ತಿಯನ್ನಾಗಿ ಮಾಡಲು ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಭಾರತದ ಪಾತ್ರವನ್ನು ವ್ಯಾಖ್ಯಾನಿಸಲಿವೆ ಎಂದು ಅವರು ಒತ್ತಿ ಹೇಳಿದರು. 

ಹಿರಿಯ ಆರೆಸ್ಸೆಸ್ ವಿಚಾರವಾದಿ ಭಯ್ಯಾಜಿ ಜೋಶಿ, ಉತ್ತರಾಖಂಡ್ ಮುಖ್ಯಮಂತ್ರಿ, ಪುಷ್ಕರ್ ಸಿಂಗ್ ಧಾಮಿ, ಉತ್ತರಾಂಚಲ ವಿಶ್ವವಿದ್ಯಾಲಯದ ಕುಲಪತಿ ಜಿತೇಂದರ್ ಜೋಶಿ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್ ಕುಮಾರ್ ಸೂದ್, ಇಸ್ರೋ ಅಧ್ಯಕ್ಷ, ಎಸ್. ಸೋಮನಾಥ್, ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ್, ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ.ರಾಜೇಶ್ ಎಸ್.ಗೋಖಲೆ ಹಾಗೂ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಶ್ವ ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತದ ಆರೋಹಣ ಪ್ರಾರಂಭವಾಗಿದೆ ಮತ್ತು ಇದು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಸಾಧ್ಯವಾಗಲಿದೆ ಎಂದು ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು. ರೈಲ್ವೇ, ಹೆದ್ದಾರಿಗಳು, ಕೃಷಿ ಮತ್ತು ಸ್ಮಾರ್ಟ್ ಸಿಟಿಗಳಂತಹ ವಿವಿಧ ಕ್ಷೇತ್ರಗಳಿಗೆ ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯಿಸಿರುವುದು ಸಾಮಾನ್ಯ ಜನರಿಗೆ 'ಈಸ್ ಆಫ್ ಲಿವಿಂಗ್’ ಒದಗಿಸಿದೆ ಎಂದು ಅವರು ಹೇಳಿದರು. 2020 ರ ಜೂನ್‌ನಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ತೆರವುಗೊಳಿಸಿದ ಐತಿಹಾಸಿಕ ನಿರ್ಧಾರದ ನಂತರ, ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವ ಮೂಲಕ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅವುಗಳನ್ನು ಅಳವಡಿಸುವ ಮೂಲಕ ಮತ್ತು ರಾಕೆಟ್‌ಗಳು ಹಾಗೂ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸುವ  ಮೂಲಕ ಈ ಕ್ಷೇತ್ರದಲ್ಲಿ ಪರಿವರ್ತನೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು. ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ 102 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಷ್ಟೇ ಅಲ್ಲದೆ, ಜಿಯೋಸ್ಪೇಷಿಯಲ್ ಮಾರ್ಗಸೂಚಿಗಳು ಎಲ್ಲಾ 6 ಲಕ್ಷಕ್ಕೂ ಹೆಚ್ಚು ಭಾರತೀಯ ಗ್ರಾಮಗಳನ್ನು ಸಮೀಕ್ಷೆ ಮಾಡಲು SVAMITVA ದಂತಹ ಯೋಜನೆಗಳನ್ನು ಸಕ್ರಿಯಗೊಳಿಸಿವೆ ಎಂದು ಸಚಿವರು ಹೇಳಿದರು.

ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳು ಚಂದ್ರ ಮತ್ತು ಮಂಗಳ ಗ್ರಹಗಳ ಕುರಿತಾದ ಕಾರ್ಯಚಟುವಟಿಕೆಗಳಲ್ಲಿ ಪ್ರತಿಫಲಿಸಿದರೂ, ದೇಶದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಯಾದ ಗಗನ್ ಯಾನ್ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. 2023 ರ ಅಂತ್ಯದ ವೇಳೆಗೆ ಮಾನವರಹಿತ ಗಗನ್ ಯಾನ್  ಹಾರಾಟವನ್ನು ನಿಗದಿಪಡಿಸಲಾಗಿದೆ, ಎರಡನೇ ಮಾನವರಹಿತ ಹಾರಾಟವು 2024 ರ ಮಧ್ಯದ ವೇಳೆಗೆ ನಡೆಯಲಿದೆ ಮತ್ತು ಮಾನವಸಹಿತ ಹಾರಾಟವನ್ನು 2024 ರ ವೇಳೆಗೆ ಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಆಕಾಶ ತತ್ವ ಸಮಾವೇಶದ ವಿಷಯದ ಬಗ್ಗೆ ಮಾತನಾಡಿದ ಡಾ ಜಿತೇಂದ್ರ ಸಿಂಗ್ ಅವರು ಸ್ವಾತಂತ್ರ್ಯದ ನಂತರ ಭಾರತದಲ್ಲಿ ಆಯೋಜಿಸಲಾದ ಈ ರೀತಿಯ ಮೊದಲ ಕಾರ್ಯಕ್ರಮ ಇದಾಗಿದೆ, ಇಲ್ಲಿ ಪ್ರಾಚೀನ ವೈಚಾರಿಕತೆಯನ್ನು ಆಧುನಿಕ ಸಂಶೋಧನೆಯೊಂದಿಗೆ ಸಮತೋಲಿತ ರೂಪದಲ್ಲಿ ಸಂಯೋಜಿಸಿ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಅತ್ಯುತ್ತಮ  ಪ್ರಯತ್ನ ಮಾಡಲಾಗುತ್ತಿದೆ. ಆಕಾಶ, ವಾಯು, ಜಲ, ಪೃಥ್ವಿ ಮತ್ತು ಅಗ್ನಿ ಕುರಿತ ಪಂಚಮಹಾಭೂತಗಳ ಸಮಾವೇಶದ ಹಿಂದೆ ಭೈಯಾಜಿ ಜೋಶಿ ಅವರ ಜಾಣ್ಮೆಯನ್ನು ಸಚಿವರು ಶ್ಲಾಘಿಸಿದರು.

ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರರಿ (ಟಿಕೆಡಿಎಲ್) ದತ್ತಾಂಶವನ್ನು ಬಳಕೆದಾರರಿಗೆ ತೆರೆಯುವ ಉದಾಹರಣೆಯನ್ನು ನೀಡುವ ಮೂಲಕ ಪೇಟೆಂಟ್ ಕಚೇರಿಗಳ ಜೊತೆಗೆ ಭಾರತೀಯ ಸಾಂಪ್ರದಾಯಿಕ ಜ್ಞಾನಕ್ಕೆ ಈ ವರ್ಷದ ಆಗಸ್ಟ್ ನಲ್ಲಿ ಹೊಸ ಬೆಳಕು ಮೂಡಿದಂತಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.  ಇದನ್ನು ಆಧುನಿಕ ಜ್ಞಾನದೊಂದಿಗೆ ಜೋಡಿಸಲಾಗುವುದು ಮತ್ತು ಇದು ಸಾಮಾನ್ಯ ಬಳಕೆದಾರರಿಗೆ ಮತ್ತಷ್ಟು ಮೌಲ್ಯಯುತವಾಗಿರಲಿದೆ ಎಂದರು. ಹಿಂದಿನ ಅಥವಾ ಪ್ರಾಚೀನ ಕಾಲದ ಕಾಲ್ಪನಿಕ ಕಥೆಗಳು ಅಥವಾ ಕಾಲ್ಪನಿಕ ಆನಂದಕ್ಕೆ ಒಳಗಾಗದೆ, ಆಧುನಿಕ ಕಾಲಕ್ಕೆ ಪ್ರಸ್ತುತವಾದದ್ದನ್ನು ಹೇಗೆ ಅತ್ಯುತ್ತಮ ರೀತಿಯಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಅಂಶವನ್ನು ಇದು ಒತ್ತಿ ಹೇಳುತ್ತದೆ ಮತ್ತು ಇದು ಪಂಚಮಹಾಭೂತಗಳ ಪ್ರಾಚೀನ ವೈಚಾರಿಕತೆಯ ತಿರುಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತದೆ ದು ಅವರು ಹೇಳಿದರು.

ಮೂರು ದಿನಗಳ ಸಮಾವೇಶದಲ್ಲಿ ಸುಮಾರು 35 ಪ್ರಖ್ಯಾತ ವಾಗ್ಮಿಗಳು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದು, ಡೆಹ್ರಾಡೂನ್ ಸಮಾವೇಶದಲ್ಲಿ ಆಕಾಶ ತತ್ವದ ವಿವಿಧ ಆಯಾಮಗಳ ಕುರಿತು ಹೊಸ ಆಲೋಚನೆಗಳನ್ನು ತಾವು ಎದುರು ನೋಡುತ್ತಿರುವುದಾಗಿ ಡಾ ಜಿತೇಂದ್ರ ಸಿಂಗ್ ಹೇಳಿದರು. ಆಧುನಿಕ ವೈಜ್ಞಾನಿಕ ಪ್ರಗತಿಯೊಂದಿಗೆ ಪ್ರಾಚೀನ ವಿಜ್ಞಾನದ ಜ್ಞಾನವನ್ನು ಭಾರತದ ಯುವಜನರಿಗೆ ತೆರೆದಿಡುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.

ಈ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ಇಸ್ರೋ ಮತ್ತು ಎಲ್ಲ ಪ್ರಮುಖ ವೈಜ್ಞಾನಿಕ ಸಚಿವಾಲಯಗಳು ಮತ್ತು ಇಲಾಖೆಗಳು ವಿಜ್ಞಾನ ಭಾರತಿಯೊಂದಿಗೆ ಕೈಜೋಡಿಸುತ್ತಿವೆ. ವಿಜ್ಞಾನ ಭಾರತಿಯು ಸ್ವದೇಶಿ ಸ್ಫೂರ್ತಿಯೊಂದಿಗೆ ಒಂದು ಕ್ರಿಯಾತ್ಮಕ ವಿಜ್ಞಾನ ಉಪಕ್ರಮವಾಗಿದ್ದು, ಒಂದೆಡೆ ಸಾಂಪ್ರದಾಯಿಕ ಮತ್ತು ಆಧುನಿಕ ವಿಜ್ಞಾನಗಳನ್ನು ಮತ್ತು ಇನ್ನೊಂದೆಡೆ ನೈಸರ್ಗಿಕ ಮತ್ತು ಆಧ್ಯಾತ್ಮಿಕ ವಿಜ್ಞಾನಗಳ ಮಧ್ಯೆ ಕೊಂಡಿಯನ್ನು ಬೆಸೆಯುತ್ತಿದೆ. 

ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದಂತಹ ಪರಿಸರ ಸಮಸ್ಯೆಗಳಿಗೆ ಭಾರತೀಯ ದೃಷ್ಟಿಕೋನದಿಂದ 

ಪರಿಹಾರಗಳನ್ನು ಕಂಡುಹಿಡಿಯಲು ದೇಶಾದ್ಯಂತ  ‘ಸುಮಂಗಲಂ’ ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಭಾರತೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ದೃಷ್ಟಿಕೋನದಿಂದ, ಸಮಾಜದ ಒಳಿತಿಗಾಗಿ ಪರಿಸರ ಸಮಸ್ಯೆಗಳನ್ನು ಬಗೆಹರಿಸುವಂತಹ ಪಂಚಮಹಾಭೂತಗಳ ಕುರಿತು ದೇಶದಾದ್ಯಂತ ಐದು ರಾಷ್ಟ್ರೀಯ ಸಮಾವೇಶಗಳನ್ನು ನಡೆಸಲಾಗುವುದು –ಈ ಪಂಚಮಹಾಭೂತಗಳು ಆಕಾಶ, ವಾಯು ಜಲ, ಪೃಥ್ವಿ ಮತ್ತು ಅಗ್ನಿಯನ್ನು ಒಳಗೊಂಡಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. 

*****



(Release ID: 1874069) Visitor Counter : 186