ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿಯ ಕಲ್ಕಾಜಿಯಲ್ಲಿ ಹೊಸದಾಗಿ ನಿರ್ಮಿಸಲಾದ ಇಡಬ್ಲ್ಯೂಎಸ್‌ ಮನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ

Posted On: 02 NOV 2022 6:51PM by PIB Bengaluru

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನನ್ನ ಸಚಿವ ಸಂಪುಟ ಸಹೋದ್ಯೋಗಿಗಳಾದ ಶ್ರೀ ಹರ್ದೀಪ್ ಸಿಂಗ್ ಪುರಿ, ರಾಜ್ಯ ಸಚಿವರಾದ ಶ್ರೀ ಕೌಶಲ್ ಕಿಶೋರ್ ಮತ್ತು ಮೀನಾಕ್ಷಿ ಲೇಖಿ ಅವರೇ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರೇ, ದೆಹಲಿಯ ಗೌರವಾನ್ವಿತ ಸಂಸದರೇ, ಇತರ ಗಣ್ಯರೇ, ಎಲ್ಲ ಉತ್ಸಾಹಿ ಫಲಾನುಭವಿಗಳೇ, ಸಹೋದರ ಸಹೋದರಿಯರೇ!

ವಿಜ್ಞಾನ ಭವನದಲ್ಲಿ ಕೋಟ್, ಪ್ಯಾಂಟ್, ಟೈ ಇತ್ಯಾದಿ ಧರಿಸಿದ ಜನರು ಭಾಗವಹಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಇಂದು ವಿಜ್ಞಾನ ಭವನದಲ್ಲಿ ನಮ್ಮ ಕುಟುಂಬದ ಸದಸ್ಯರಲ್ಲಿ ಕಾಣುತ್ತಿರುವ ಸಂಭ್ರಮ ಮತ್ತು ಉತ್ಸಾಹವನ್ನು ನೋಡುತ್ತಿರುವುದು ಅಪರೂಪದ್ದಾಗಿದೆ. ನೂರಾರು ಕುಟುಂಬಗಳಿಗೆ, ದೆಹಲಿಯ ನಮ್ಮ ಸಾವಿರಾರು ಬಡ ಸಹೋದರ ಸಹೋದರಿಯರಿಗೆ ಇಂದು ಬಹಳ ಮುಖ್ಯವಾದ ದಿನವಾಗಿದೆ. ದೆಹಲಿಯ ಕೊಳೆಗೇರಿಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬಗಳಿಗೆ ಇದು ಒಂದು ರೀತಿಯ ಹೊಸ ಜೀವನದ ಆರಂಭವಾಗಿದೆ. ದೆಹಲಿಯ ಬಡ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಒದಗಿಸುವ ಅಭಿಯಾನವು ಸಾವಿರಾರು ಬಡ ಕುಟುಂಬಗಳ ಕನಸನ್ನು ನನಸಾಗಿಸುತ್ತಿದೆ. ಇಂದು ನೂರಾರು ಫಲಾನುಭವಿಗಳು ತಮ್ಮ ಮನೆಗಳ ಕೀಲಿಗಳನ್ನು ಪಡೆದುಕೊಂಡಿದ್ದಾರೆ. ಇಂದು ನಾನು ಭೇಟಿಯಾದ ನಾಲ್ಕೈದು ಕುಟುಂಬಗಳ ಮುಖದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ನೋಡಿದೆ. ಕಲ್ಕಾಜಿ ವಿಸ್ತರಣೆಗಾಗಿ ಮೊದಲ ಹಂತದಲ್ಲಿ 3,000 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಶೀಘ್ರದಲ್ಲೇ ಇಲ್ಲಿ ವಾಸಿಸುವ ಇತರ ಕುಟುಂಬಗಳು ಸಹ ಮನೆಗಳನ್ನು ಪಡೆಯುತ್ತವೆ. ಮುಂದಿನ ದಿನಗಳಲ್ಲಿ ದೆಹಲಿಯನ್ನು ಮಾದರಿ ನಗರವನ್ನಾಗಿ ಮಾಡುವಲ್ಲಿ ಭಾರತ ಸರ್ಕಾರದ ಪ್ರಯತ್ನಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೇ,

ಈ ಬಡ ಸಹೋದರ ಸಹೋದರಿಯರ ಬೆವರು ಮತ್ತು ಶ್ರಮವು ದೆಹಲಿಯಂತಹ ದೊಡ್ಡ ನಗರಗಳಲ್ಲಿ ನಾವು ಕಾಣುವ ಪ್ರಗತಿ, ದೊಡ್ಡ ಕನಸುಗಳು ಮತ್ತು ಎತ್ತರವಾದ ಕಟ್ಟಡಗಳಿಗೆ ಅಡಿಪಾಯವಾಗಿದೆ. ಆದರೆ ದುರದೃಷ್ಟವಶಾತ್, ನಗರಗಳ ಅಭಿವೃದ್ಧಿಗಾಗಿ ತಮ್ಮ ರಕ್ತ ಮತ್ತು ಬೆವರು ಸುರಿಸುವ ಬಡವರು ಅದೇ ನಗರದಲ್ಲಿ ದುಃಖದ ಜೀವನವನ್ನು ನಡೆಸುತ್ತಿದ್ದಾರೆ ಎಂಬುದು ಸತ್ಯ. ಕಳೆದ ಏಳು ದಶಕಗಳಲ್ಲಿ ನಮ್ಮ ನಗರಗಳು ಸಮಗ್ರ ಮತ್ತು ಸಮತೋಲಿತ ಅಭಿವೃದ್ಧಿಯಿಂದ ವಂಚಿತವಾಗಿದ್ದವು. ಹೊಳೆಯುವ ಬಹುಮಹಡಿ ಕಟ್ಟಡಗಳನ್ನು ಹೊಂದಿರುವ ನಗರಗಳ ಪಕ್ಕದಲ್ಲಿ ಶಿಥಿಲಗೊಂಡ ಕೊಳೆಗೇರಿಗಳಿವೆ. ಒಂದೆಡೆ, ನಗರದ ಕೆಲವು ಪ್ರದೇಶಗಳು ಐಷಾರಾಮಿಯಾಗಿವೆ; ಮತ್ತೊಂದೆಡೆ, ಅದೇ ನಗರದ ಅನೇಕ ಪ್ರದೇಶಗಳಲ್ಲಿ ಜನರು ಜೀವನದ ಮೂಲಭೂತ ಅವಶ್ಯಕತೆಗಳಿಗಾಗಿ ಹಂಬಲಿಸುತ್ತಿದ್ದಾರೆ. ಒಂದೇ ನಗರದಲ್ಲಿ ಇಷ್ಟೊಂದು ಅಸಮಾನತೆ, ತಾರತಮ್ಯ ಇರುವಾಗ ಸಮಗ್ರ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಸ್ವಾತಂತ್ರ್ಯದ ‘ಅಮೃತ ಕಾಲʼದಲ್ಲಿ ನಾವು ಈ ಅಂತರವನ್ನು ಕಡಿಮೆ ಮಾಡಬೇಕಾಗಿದೆ. ಆದ್ದರಿಂದ ದೇಶವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್‌ ಮತ್ತು ಸಬ್ಕಾ ಪ್ರಯಾಸ್' ಎಂಬ ಮಂತ್ರವನ್ನು ಅನುಸರಿಸುವ ಮೂಲಕ ಎಲ್ಲರ ಬೆಳವಣಿಗೆಗೆ ಶ್ರಮಿಸುತ್ತಿದೆ.

ಸ್ನೇಹಿತರೇ,

ದೇಶದಲ್ಲಿ ದಶಕಗಳಿಂದ ಚಾಲ್ತಿಯಲ್ಲಿರುವ ವ್ಯವಸ್ಥೆಯು ಬಡತನವನ್ನು ಬಡವರ ಸಮಸ್ಯೆ ಎಂದು ಪರಿಗಣಿಸುತ್ತಲೇ ಇತ್ತು. ಆದರೆ ಇಂದು ದೇಶದಲ್ಲಿ ಬಡವರ ಪರವಾದ ಸರಕಾರವಿದ್ದು, ಅವರನ್ನು ಬಡವರಾಗಿಯೇ ಇರಲು ಬಿಡುವುದಿಲ್ಲ. ಆದ್ದರಿಂದ ಇಂದು ಬಡವರು ದೇಶದ ನೀತಿಗಳ ಕೇಂದ್ರವಾಗಿದ್ದಾರೆ. ಬಡವರು ಇಂದು ರಾಷ್ಟ್ರದ ನಿರ್ಧಾರಗಳ ಕೇಂದ್ರಬಿಂದುವಾಗಿದ್ದಾರೆ. ನಮ್ಮ ಸರ್ಕಾರವು ವಿಶೇಷವಾಗಿ ನಗರಗಳಲ್ಲಿ ವಾಸಿಸುವ ಬಡ ಸಹೋದರ ಸಹೋದರಿಯರ ಬಗ್ಗೆ ಸಮಾನ ಗಮನವನ್ನು ನೀಡುತ್ತಿದೆ.

ಸ್ನೇಹಿತರೇ,

ದೆಹಲಿಯಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಬ್ಯಾಂಕ್ ಖಾತೆಯನ್ನು ಹೊಂದಿರಲಿಲ್ಲ ಎಂದು ತಿಳಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಈ ಜನರು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿರಲಿಲ್ಲ ಮತ್ತು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗಿದ್ದರು. ಬಡವರು ಬ್ಯಾಂಕ್‌ಗಳಿಗೆ ಕಾಲಿಡಲೂ ಹೆದರುತ್ತಿದ್ದರು ಎಂಬುದು ಸತ್ಯ. ಈ ಜನರು ದೆಹಲಿಯಲ್ಲಿ ವಾಸಿಸುತ್ತಿದ್ದರು, ಆದರೆ ದೆಹಲಿ ಅವರಿಗೆ ತುಂಬಾ ದೂರವಿತ್ತು. ನಮ್ಮ ಸರ್ಕಾರ ಈ ಪರಿಸ್ಥಿತಿಯನ್ನು ಬದಲಾಯಿಸಿದೆ. ಅಭಿಯಾನವೊಂದನ್ನು ನಡೆಸಲಾಯಿತು ಮತ್ತು ದೆಹಲಿ ಹಾಗೂ ದೇಶದ ಬಡವರ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಆ ಸಮಯದಲ್ಲಿ, ಅದರ ಪ್ರಯೋಜನಗಳನ್ನು ಯಾರೂ ಊಹಿಸಿರಲಿಲ್ಲ. ಇಂದು ದೆಹಲಿಯ ಬಡವರೂ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ದೆಹಲಿಯಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಮಾರುವ ಸಾವಿರಾರು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಆಟೋ-ರಿಕ್ಷಾ ಮತ್ತು ಟ್ಯಾಕ್ಸಿಗಳನ್ನು ಓಡಿಸುವ ಅನೇಕರಿದ್ದಾರೆ. ಅವರಲ್ಲಿ ಇಂದು ಭೀಮ್-ಯುಪಿಐ ಇಲ್ಲದವರು ಯಾರೂ ಇರಲಾರರು! ಅವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ನೇರವಾಗಿ ಹಣವನ್ನು ಪಡೆಯುತ್ತಾರೆ ಮತ್ತು ಅವರು ಮೊಬೈಲ್ ಫೋನ್‌ಗಳಿಂದ ಪಾವತಿಗಳನ್ನೂ ಮಾಡುತ್ತಾರೆ. ಇದು ಅವರಿಗೆ ದೊಡ್ಡ ಆರ್ಥಿಕ ಭದ್ರತೆಯಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸುವ ಪ್ರಯೋಜನವು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಆರ್ಥಿಕ ನೆರವು ನೀಡಲಾಗುತ್ತಿದೆ. ದೆಹಲಿಯ 50,000 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿ ಸಹೋದರರು ಮತ್ತು ಸಹೋದರಿಯರು ಸ್ವನಿಧಿ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಇದಲ್ಲದೇ ಮುದ್ರಾ ಯೋಜನೆಯಡಿ ಯಾವುದೇ ಖಾತ್ರಿ ಇಲ್ಲದೆ 30,000 ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಲಾಗಿದೆ. ಇದರಿಂದ ದೆಹಲಿಯ ಸಣ್ಣ ಉದ್ಯಮಿಗಳಿಗೆ ಸಾಕಷ್ಟು ನೆರವಾಗಿದೆ.

ಸ್ನೇಹಿತರೇ,

ಪಡಿತರ ಚೀಟಿಗೆ ಸಂಬಂಧಿಸಿದ ಅಸಂಗತತೆಯಿಂದಾಗಿ ನಮ್ಮ ಬಡ ಸ್ನೇಹಿತರು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದರು.  'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಒದಗಿಸುವ ಮೂಲಕ ನಾವು ದೆಹಲಿಯ ಲಕ್ಷಾಂತರ ಬಡವರಿಗೆ ಜೀವನವನ್ನು ಸುಲಭಗೊಳಿಸಿದ್ದೇವೆ. ನಮ್ಮ ವಲಸೆ ಕಾರ್ಮಿಕರು ಬೇರೆ ರಾಜ್ಯಗಳಿಗೆ ಕೆಲಸಕ್ಕೆ ಹೋದರೆ ಅವರ ಪಡಿತರ ಚೀಟಿ ನಿಷ್ಪ್ರಯೋಜಕವಾಗುತ್ತಿತ್ತು ಮತ್ತು ಅದೊಂದು ಕೇವಲ ಕಾಗದದ ತುಂಡು ಆಗುತ್ತಿತ್ತು. ಇದರಿಂದ ಅವರಿಗೆ ಪಡಿತರ ಸಮಸ್ಯೆ ಎದುರಾಗುತ್ತಿತ್ತು. 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಮೂಲಕ ಈಗ ಈ ಸಮಸ್ಯೆಯಿಂದ ಅವರು ಮುಕ್ತಿ ಪಡೆದಿದ್ದಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯ ಬಡವರು ಸಹ ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಈ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಕಳೆದ ಎರಡು ವರ್ಷಗಳಿಂದ ದೆಹಲಿಯ ಲಕ್ಷಾಂತರ ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ದೆಹಲಿಯೊಂದರಲ್ಲೇ ಈ ಯೋಜನೆಗೆ ಕೇಂದ್ರ ಸರ್ಕಾರ 2,500 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದೆ. ಈಗ ಹೇಳಿ, ಇಷ್ಟು ವಿಷಯಗಳಿಗಾಗಿ ನಾನು ಜಾಹೀರಾತುಗಳಿಗೆ ಎಷ್ಟು ಹಣವನ್ನು ಖರ್ಚು ಮಾಡಬೇಕಾಗಿತ್ತು. ಪತ್ರಿಕೆಗಳಲ್ಲಿ ಮೋದಿಯವರ ಫೋಟೋ ಇರುವ ಎಷ್ಟು ಪುಟಗಳ ಜಾಹೀರಾತುಗಳನ್ನು ನೋಡಿದ್ದೀರಿ? ನಾನು ಪಟ್ಟಿ ಮಾಡಿದ ಕೆಲಸ ಬಹಳ ಕಡಿಮೆ; ಎಲ್ಲವನ್ನೂ ಹೇಳು ಸಮಯವಿಲ್ಲ. ನಿಮ್ಮ ಜೀವನದಲ್ಲಿ ಬದಲಾವಣೆ ತರಲು ನಾವು ಇಲ್ಲಿದ್ದೇವೆ.

ಸ್ನೇಹಿತರೇ,

ದೆಹಲಿಯ 40 ಲಕ್ಷಕ್ಕೂ ಹೆಚ್ಚು ಬಡವರಿಗೆ ಕೇಂದ್ರ ಸರ್ಕಾರ ವಿಮೆ ಸೌಲಭ್ಯವನ್ನೂ ನೀಡಿದೆ. ಕೈಗೆಟಕುವ ಔಷಧಿಗಳಿಗಾಗಿ ಜನೌಷಧಿ ಕೇಂದ್ರಗಳ ಸೌಲಭ್ಯವೂ ಇದೆ. ಬಡವರ ಜೀವನದಲ್ಲಿ ಈ ಭದ್ರತೆ ಇದ್ದಾಗ ಅವರು ತಮ್ಮಲ್ಲ ಶಕ್ತಿಯಿಂದ ಶ್ರಮಿಸುತ್ತಾರೆ. ಬಡತನದಿಂದ ಹೊರಬರಲು ಮತ್ತು ಬಡತನವನ್ನು ಸೋಲಿಸಲು ಶ್ರಮಿಸುತ್ತಾರೆ. ಬಡವರ ಜೀವನದಲ್ಲಿ ಈ ಭದ್ರತೆ ಎಷ್ಟು ಮುಖ್ಯ, ಅದು ಬಡವರಿಗಿಂತ ಯಾರಿಗೂ ಚೆನ್ನಾಗಿ ಗೊತ್ತಿರಲು ಸಾಧ್ಯವಿಲ್ಲ.

ಸ್ನೇಹಿತರೇ,

ದಶಕಗಳ ಹಿಂದೆ ದೆಹಲಿಯಲ್ಲಿ ನಿರ್ಮಿಸಲಾದ ಅನಧಿಕೃತ ಕಾಲೋನಿಗಳು ಮತ್ತೊಂದು ಸಮಸ್ಯೆಯಾಗಿದೆ. ನಮ್ಮ ಲಕ್ಷಾಂತರ ಸಹೋದರ ಸಹೋದರಿಯರು ಈ ಕಾಲೋನಿಗಳಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಇಡೀ ಜೀವನವನ್ನು ತಮ್ಮ ಮನೆಯ ಬಗ್ಗೆ ಚಿಂತಿಸುತ್ತಾ ಕಳೆದರು. ದೆಹಲಿಯ ಜನರ ಆತಂಕವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ತನ್ನನ್ನು ತೊಡಗಿಸಿಕೊಂಡಿತು. ಪಿಎಂ-ಯುಡಿಎವೈ ಯೋಜನೆಯಡಿ ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ನಿರ್ಮಿಸಲಾದ ಮನೆಗಳನ್ನು ಸಕ್ರಮಗೊಳಿಸುವ ಅಭಿಯಾನ ನಡೆಯುತ್ತಿದೆ. ಇದುವರೆಗೆ ಸಾವಿರಾರು ಜನರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ದೆಹಲಿಯ ಮಧ್ಯಮ ವರ್ಗದ ಜನರಿಗೆ ತಮ್ಮ ಸ್ವಂತ ಮನೆಯ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರವು ಸಾಕಷ್ಟು ನೆರವು ನೀಡಿದೆ. ದೆಹಲಿಯ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಸಹಾಯಧನ ನೀಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ 700 ಕೋಟಿ ರೂ.ಗೂ ಹೆಚ್ಚು ಮೊತ್ತ ವೆಚ್ಚ  ಮಾಡಿದೆ.

ಸ್ನೇಹಿತರೇ,

ದೆಹಲಿಯನ್ನು ದೇಶದ ರಾಜಧಾನಿಗೆ ಸರಿಹೊಂದುವ ಭವ್ಯವಾದ ಮತ್ತು ಅನುಕೂಲಕರ ನಗರವನ್ನಾಗಿ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ದೆಹಲಿಯ ಅಭಿವೃದ್ಧಿಯನ್ನು ವೇಗಗೊಳಿಸಲು ನಾವು ಮಾಡಿರುವ ಕೆಲಸಗಳಿಗೆ ದೆಹಲಿಯ ಜನರು, ಬಡವರು ಮತ್ತು ಮಧ್ಯಮ ವರ್ಗದವರು ಸಾಕ್ಷಿಯಾಗಿದ್ದಾರೆ. ನಾನು ಈ ವರ್ಷ ಕೆಂಪು ಕೋಟೆಯಿಂದ ದೇಶದ ಮಹತ್ವಾಕಾಂಕ್ಷೆಯ ಸಮಾಜದ ಬಗ್ಗೆ ಮಾತನಾಡಿದೆ. ದೆಹಲಿಯ ಬಡ ಅಥವಾ ಮಧ್ಯಮ ವರ್ಗದ ಜನರು ಮಹತ್ವಾಕಾಂಕ್ಷೆಯ ಜೊತೆಗೆ ಅಸಾಧಾರಣ ಪ್ರತಿಭೆಯಿಂದ ತುಂಬಿದ್ದಾರೆ. ಅವರ ಅನುಕೂಲ ಮತ್ತು ಅವರ ಆಕಾಂಕ್ಷೆಗಳನ್ನು ಈಡೇರಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

ಸ್ನೇಹಿತರೇ,

2014 ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ದೆಹಲಿ-ಎನ್‌ಸಿಆರ್‌ನಲ್ಲಿ 190 ಕಿಮೀ ಮಾರ್ಗದಲ್ಲಿ ಮಾತ್ರ ಮೆಟ್ರೋ ಓಡುತ್ತಿತ್ತು, ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಮೆಟ್ರೋ ವಿಸ್ತರಣೆಯು ಸುಮಾರು 400 ಕಿ.ಮೀಗೆ ಹೆಚ್ಚಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಇಲ್ಲಿ 135 ಹೊಸ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇಂದು ಹೆಚ್ಚಿನ ಸಂಖ್ಯೆಯ ಕಾಲೇಜಿಗೆ ಹೋಗುವ ಮಕ್ಕಳು ಮತ್ತು ಸಂಬಳ ಪಡೆಯುವ ಜನರು ದೆಹಲಿಯಲ್ಲಿ ಮೆಟ್ರೋ ಸೇವೆಗಾಗಿ ನನಗೆ ಕೃತಜ್ಞತಾ ಪತ್ರಗಳನ್ನು ಬರೆಯುತ್ತಾರೆ. ಮೆಟ್ರೋ ಸೇವೆಗಳ ವಿಸ್ತರಣೆಯಿಂದ ಅವರ ಹಣದ ಜೊತೆಗೆ ಅವರ ಸಮಯವೂ ಉಳಿತಾಯವಾಗುತ್ತಿದೆ. ಸಂಚಾರ ದಟ್ಟಣೆಯಿಂದ ದೆಹಲಿಗೆ ಪರಿಹಾರವನ್ನು ಒದಗಿಸುವ ಸಲುವಾಗಿ, ಭಾರತ ಸರ್ಕಾರವು 50,000 ಕೋಟಿ. ರೂ.ಗಳ ಹೂಡಿಕೆಯೊಂದಿಗೆ ರಸ್ತೆಗಳನ್ನು ಅಗಲೀಕರಣ ಮತ್ತು ಆಧುನೀಕರಣಗೊಳಿಸುತ್ತಿದೆ. ಒಂದೆಡೆ, ಪೆರಿಫೆರಲ್‌ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ; ಮತ್ತೊಂದೆಡೆ, ದೆಹಲಿಯಲ್ಲೂ ‘ಕರ್ತವ್ಯ ಪಥ’ದಂತಹ ನಿರ್ಮಾಣಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು ಅನೇಕ ಅಭಿವೃದ್ಧಿ ಯೋಜನೆಗಳನ್ನು ನಡೆಸುತ್ತಿದೆ, ಅದು ದ್ವಾರಕಾ ಎಕ್ಸ್‌ಪ್ರೆಸ್‌ವೇ ಅಥವಾ ನಗರ ವಿಸ್ತರಣೆ ರಸ್ತೆ, ಅಕ್ಷರಧಾಮದಿಂದ ಬಾಗ್‌ಪತ್ ಆರು-ಪಥದ ಪ್ರವೇಶ ನಿಯಂತ್ರಣ ಹೆದ್ದಾರಿ ಅಥವಾ ಗುರುಗ್ರಾಮ್-ಸೋಹ್ನಾ ಎಲಿವೇಟೆಡ್ ಕಾರಿಡಾರ್ ಇವುಗಳು ದೇಶದ ರಾಜಧಾನಿಯಲ್ಲಿ ಆಧುನಿಕ ಮೂಲಸೌಕರ್ಯವನ್ನು ವಿಸ್ತರಿಸಿವೆ. 

ಸ್ನೇಹಿತರೇ,

ದೆಹಲಿ ಎನ್‌ಸಿಆರ್‌ಗೆ ತ್ವರಿತ ರೈಲು ಸೇವೆಗಳು ಸಹ ಮುಂದಿನ ದಿನಗಳಲ್ಲಿ ಪುನರಾರಂಭಗೊಳ್ಳಲಿವೆ. ನವದೆಹಲಿ ರೈಲು ನಿಲ್ದಾಣದ ಭವ್ಯ ನಿರ್ಮಾಣದ ಚಿತ್ರಗಳನ್ನೂ ನೀವು ನೋಡಿರಬೇಕು. ದ್ವಾರಕಾದಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಭಾರತ ವಂದನಾ ಉದ್ಯಾನವನ ನಿರ್ಮಾಣವು ಮುಂದಿನ ಕೆಲವು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ದೆಹಲಿಯಲ್ಲಿ 700 ದೊಡ್ಡ ಉದ್ಯಾನವನಗಳನ್ನು ಡಿಡಿಎ ನಿರ್ವಹಿಸುತ್ತಿದೆ. ವಜೀರಾಬಾದ್ ಬ್ಯಾರೇಜ್ ಮತ್ತು ಓಖ್ಲಾ ಬ್ಯಾರೇಜ್ ನಡುವಿನ 22 ಕಿಮೀ ವ್ಯಾಪ್ತಿಯಲ್ಲಿ ಡಿಡಿಎ ವಿವಿಧ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಸ್ನೇಹಿತರೇ,

ಇಂದು ತಮ್ಮ ಜೀವನದಲ್ಲಿ ಹೊಸ ಆರಂಭವನ್ನು ಮಾಡಲು ಹೊರಟಿರುವ ನನ್ನ ಬಡ ಸಹೋದರ ಸಹೋದರಿಯರಿಂದ ನಾನು ಖಂಡಿತವಾಗಿಯೂ ಕೆಲವು ನಿರೀಕ್ಷೆಗಳನ್ನು ಹೊಂದಿದ್ದೇನೆ. ನಾನು ನಿಮ್ಮಿಂದ ಏನನ್ನಾದರೂ ನಿರೀಕ್ಷಿಸಿದರೆ, ನೀವು ಅದನ್ನು ಪೂರೈಸುತ್ತೀರಾ? ನಾನು ನಿಮಗೆ ಸ್ವಲ್ಪ ಜವಾಬ್ದಾರಿಯನ್ನು ನೀಡಬಹುದೇ? ನೀವು ಅದನ್ನು ಪೂರೈಸುತ್ತೀರಾ? ಅಥವಾ ನೀವು ಅದನ್ನು ಮರೆತುಬಿಡುತ್ತೀರಾ? ಭಾರತ ಸರ್ಕಾರವು ಬಡವರಿಗೆ ನಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕದ ಸೌಲಭ್ಯಗಳೊಂದಿಗೆ ಕೋಟಿಗಟ್ಟಲೆ ಮನೆಗಳನ್ನು ನಿರ್ಮಿಸುತ್ತಿದೆ. ತಾಯಂದಿರು ಮತ್ತು ಸಹೋದರಿಯರು ಹೊಗೆಯಿಲ್ಲದೆ ಅಡುಗೆ ಮಾಡಲು ಉಜ್ವಲಾ ಸಿಲಿಂಡರ್‌ಗಳನ್ನು ಸಹ ನೀಡಲಾಗುತ್ತಿದೆ. ಈ ಸೌಲಭ್ಯಗಳ ಮಧ್ಯೆ ನಮ್ಮ ಮನೆಗಳಲ್ಲಿ ಎಲ್ ಇ ಡಿ ಬಲ್ಬ್ ಗಳನ್ನೇ ಬಳಸುವಂತೆ ನೋಡಿಕೊಳ್ಳಬೇಕು. ನೀವು ಅದನ್ನು ಮಾಡುತ್ತೀರಾ? ಎರಡನೆಯದಾಗಿ, ಯಾವುದೇ ಸಂದರ್ಭದಲ್ಲೂ ನಮ್ಮ ಕಾಲೋನಿಗಳಲ್ಲಿ ನೀರು ವ್ಯರ್ಥವಾಗಲು ಬಿಡಬಾರದು. ಕೆಲವರು ಏನು ಮಾಡುತ್ತಾರೆಂದು ನಿಮಗೆ ತಿಳಿದಿದೆ. ಅವರು ಸ್ನಾನದ ಮನೆಯಲ್ಲಿ ಬಕೆಟ್ ಅನ್ನು ತಲೆಕೆಳಗಾಗಿ ಇರಿಸುತ್ತಾರೆ ಮತ್ತು ನಲ್ಲಿಯಲ್ಲಿ ನೀರನ್ನು ಬಿಡುತ್ತಾರೆ. ಬೆಳಿಗ್ಗೆ 6 ಗಂಟೆಗೆ ಏಳಬೇಕಾದ ಜನರಿಗೆ ಇದು ಅಲಾರಂನಂತೆ ಕಾರ್ಯನಿರ್ವಹಿಸುತ್ತದೆ. ನಲ್ಲಿಯ ನೀರು ಬಕೆಟ್ ಮೇಲೆ ಬೀಳುವ ಶಬ್ದ ಕೇಳಿ ಅವರು ಎಚ್ಚರವಾಗುತ್ತಾರೆ. ನೀರು ಮತ್ತು ವಿದ್ಯುತ್ ಉಳಿಸುವುದು ಬಹಳ ಮುಖ್ಯ. ಮುಖ್ಯವಾಗಿ, ನಾವು ಇಲ್ಲಿ ಕೊಳೆಗೇರಿಯಂತಹ ವಾತಾವರಣವನ್ನು ಸೃಷ್ಟಿಸಬಾರದು. ನಮ್ಮ ಕಾಲೋನಿಗಳು ಸ್ವಚ್ಛ ಮತ್ತು ಸುಂದರವಾಗಿರಬೇಕು. ನಿಮ್ಮ ಕಾಲೋನಿಯಲ್ಲಿರುವವರ ನಡುವೆ ಸ್ವಚ್ಛತೆ ಸ್ಪರ್ಧೆಯನ್ನು ನಡೆಸುವಂತೆ ನಾನು ಸಲಹೆ ನೀಡುತ್ತೇನೆ. ಕೊಳೆಗೇರಿಗಳು ಕೊಳಕಾಗಿಯೇ ಉಳಿದಿರುವ ದಶಕಗಳ ಕಾಲದ ಈ ಗ್ರಹಿಕೆಯನ್ನು ಕೊನೆಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ದೆಹಲಿ ಮತ್ತು ದೇಶದ ಅಭಿವೃದ್ಧಿಯಲ್ಲಿ ನೀವು ನಿಮ್ಮ ಪಾತ್ರವನ್ನು ನಿರ್ವಹಿಸುತ್ತೀರಿ ಎಂದು ನನಗೆ ಖಾತ್ರಿಯಿದೆ ಮತ್ತು ದೆಹಲಿ ಮತ್ತು ದೇಶದ ಅಭಿವೃದ್ಧಿಯ ಈ ನಿರಂತರ ಪ್ರಯಾಣವು ದೆಹಲಿಯ ಪ್ರತಿಯೊಬ್ಬ ನಾಗರಿಕರ ಕೊಡುಗೆಯೊಂದಿಗೆ ಮುಂದುವರಿಯುತ್ತದೆ. ಈ ನಂಬಿಕೆಯೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ಅಭಿನಂದನೆಗಳನ್ನು ತಿಳಿಸುತ್ತೇನೆ. ತುಂಬಾ ಧನ್ಯವಾದಗಳು!
 
ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****



(Release ID: 1873844) Visitor Counter : 115