ಸಂಪುಟ

2022-23ರ ಹಿಂಗಾರು ಹಂಗಾಮು; 2022 ಅಕ್ಟೋಬರ್ 1ರಿಂದ 2023 ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ, ಪೋಷಕಾಂಶ ಆಧರಿತ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ


ಸಹಾಯಧನ ಮೊತ್ತ 51,875 ಕೋಟಿ ರೂ. ಒದಗಿಸಲು ಒಪ್ಪಿಗೆ ಸೂಚಿಸಿದ ಸಭೆ

Posted On: 02 NOV 2022 3:09PM by PIB Bengaluru

ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ವಿವಿಧ ಪೋಷಕಾಂಶಗಳಾದ ಸಾರಜನಕ(ಎನ್), ರಂಜಕ(ಪಿ), ಪೊಟ್ಯಾಷ್(ಕೆ), ಸಲ್ಫರ್(ಎಸ್) ಪೊಟ್ಯಾಷ್(ಪಿ)ಗೆ ಪ್ರತಿ ಕಿಲೋಗ್ರಾಂ ದರದಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ಒದಗಿಸುವ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

2022-23ರ ಸಾಲಿನ(ಪ್ರಸಕ್ತ ವರ್ಷ) ಹಿಂಗಾರು ಹಂಗಾಮಿನಲ್ಲಿ 2022 ಅಕ್ಟೋಬರ್ 1ರಿಂದ 2023 ಮಾರ್ಚ್ 31ರ ವರೆಗೆ  ಈ ಸಬ್ಸಿಡಿ ಅನ್ವಯವಾಗಲಿದೆ. ಅದು ಈ ಕೆಳಕಂಡಂತೆ ಇದೆ.

ವರ್ಷ

ಪ್ರತಿ ಕಿಲೋ ಗ್ರಾಂಗೆ ರೂಪಾಯಿ ದರ

ಸಾರಜನಕ(ಎನ್)

ರಂಜಕ(ಪಿ)

ಪೊಟ್ಯಾಷ್(ಕೆ)

ಸಲ್ಫರ್(ಎಸ್)

2022-23ರ ಹಿಂಗಾರು ಹಂಗಾಮು

(2022 ಅಕ್ಟೋಬರ್ 01 – 2023 ಮಾರ್ಚ್ 31)

98.02

66.93

23.65

6.12

ಯೋಜನೆಯ ಹಣಕಾಸು ಗಾತ್ರ:

ಕೇಂದ್ರ ಸಚಿವ ಸಂಪುಟ ಸಭೆಯು 2022ರ ಹಿಂಗಾರು ಹಂಗಾಮಿಗೆ ಅಂದರೆ 2022 ಅಕ್ಟೋಬರ್ 01ರಿಂದ 2023 ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ, ರಸಗೊಬ್ಬರಗಳ ಪೋಷಕಾಂಶ ಆಧರಿತ ಸಬ್ಸಿಡಿ ಮೊತ್ತ 51,875 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿದೆ. ದೇಶೀಯ ರಸಗೊಬ್ಬರ ಕಾರ್ಖಾನೆಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರವು, ಸರಕು ಸಬ್ಸಿಡಿ ಮೂಲಕ ಈ ಸಹಾಯಧನ ಒದಗಿಸುತ್ತಿದೆ.

ಪ್ರಯೋಜನಗಳು:

2022-23ರ ಹಿಂಗಾರು ಹಂಗಾಮಿನಲ್ಲಿ ದೇಶದ ರೈತರಿಗೆ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಸಬ್ಸಿಡಿ ಹಾಗೂ ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಮತ್ತು ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ಸುಗಮ ಲಭ್ಯತೆಯನ್ನು ಸಂಪುಟ ನಿರ್ಧಾರವು ಸಕ್ರಿಯಗೊಳಿಸುತ್ತದೆ. ಅಲ್ಲದೆ, ಕೃಷಿ ವಲಯವನ್ನು ಬೆಂಬಲಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳು ಮತ್ತು ಕಚ್ಚಾ ವಸ್ತುಗಳ ಬೆಲೆ  ಚಂಚಲತೆ(ಏರಿಳಿತ)ಯನ್ನು ಹತ್ತಿಕ್ಕಲು ಸರ್ಕಾರದ ಈ ಮಹತ್ವದ ನಿರ್ಧಾರವು ಸಹಾಯ ಮಾಡಲಿದೆ.

ಹಿನ್ನೆಲೆ:

ಕೇಂದ್ರ ಸರ್ಕಾರವು ರಸಗೊಬ್ಬರ ತಯಾರಕರು, ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಯೂರಿಯಾ ಮತ್ತು ಪಿ&ಕೆ ರಸಗೊಬ್ಬರಗಳ 25 ಶ್ರೇಣಿಗಳು ಸರಾಗವಾಗಿ ಲಭ್ಯವಾಗುವಂತೆ ಮಾಡುತ್ತಿದೆ. ಪಿ&ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಪೋಷಕಾಂಶ ಆಧರಿತ ಸಬ್ಸಿಡಿ(ಎನ್ ಬಿ ಎಸ್) ಯೋಜನೆ ಮೂಲಕ 01.04.2010ರಿಂದ ಅನ್ವಯವಾಗುವಂತೆ ನಿರ್ವಹಿಸಲಾಗುತ್ತಿದೆ. ರೈತಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರವು ಕೈಗೆಟಕುವ ಬೆಲೆಗೆ ರೈತರಿಗೆ ಪಿ&ಕೆ ರಸಗೊಬ್ಬರಗಳ ಲಭ್ಯತೆ ಖಚಿತಪಡಿಸಲು ಬದ್ಧವಾಗಿದೆ. ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ ಮತ್ತಿತರ ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆ ಏರಿಳಿತದಿಂದ ರೈತರಿಗೆ ಆಗುವ ಹಣಕಾಸಿನ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು,  ಡಿಎಪಿ ಸೇರಿದಂತೆ ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವ ಮೂಲಕ ರೈತರಿಗೆ ಹೆಗಲು ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅನುಮೋದಿತ ದರಗಳ ಪ್ರಕಾರ, ದೇಶೀಯ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಬಿಡುಗಡೆ ಮಾಡಲಾಗುವುದು ಇದರಿಂದ ಅವರು ರೈತರಿಗೆ ಕೈಗೆಟುಕುವ ಬೆಲೆಗೆ ರಸಗೊಬ್ಬರ ಲಭ್ಯವಾಗುವಂತೆ ಮಾಡುತ್ತಾರೆ.

*****



(Release ID: 1873173) Visitor Counter : 282