ಪ್ರಧಾನ ಮಂತ್ರಿಯವರ ಕಛೇರಿ

75000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ ನಂತರ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

Posted On: 22 OCT 2022 2:45PM by PIB Bengaluru

ಇಲ್ಲಿ ಉಪಸ್ಥಿತರಿರುವ ದೇಶದ ಯುವಜನರೇ, ಇತರ ಎಲ್ಲ ಗಣ್ಯರೇ ಹಾಗೂ ಮಹಿಳೆಯರೇ  ಮತ್ತು ಮಹನೀಯರೇ! ಮೊದಲನೆಯದಾಗಿ, ಧನತೇರಸ್ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು! ಧನ್ವಂತರಿ ದೇವನು ನಿಮ್ಮನ್ನು ಆರೋಗ್ಯವಾಗಿಡಲಿ, ಲಕ್ಷ್ಮಿದೇವಿಯ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ! ಅದಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ. ನಾನು ಈಗಷ್ಟೇ ಕೇದಾರನಾಥ-ಬದರಿನಾಥದಿಂದ ಹಿಂದಿರುಗಿದೆ. ಆದ್ದರಿಂದ, ಸ್ವಲ್ಪ ತಡವಾಗಿ ಬಂದಿದ್ದೇನೆ ಮತ್ತು ಅದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ.

ಸ್ನೇಹಿತರೇ,

ಇಂದು ಭಾರತದ ಯುವ ಶಕ್ತಿಗೆ ಮಹತ್ವದ ಸಂದರ್ಭವಾಗಿದೆ. ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ನಡೆಯುತ್ತಿರುವ ಅಭಿಯಾನಕ್ಕೆ 'ಉದ್ಯೋಗ ಮೇಳ' ದ (ನೇಮಕಾತಿ ಅಭಿಯಾನ) ರೂಪದಲ್ಲಿ ಹೊಸ ಕೊಂಡಿ ನೀಡಲಾಗುತ್ತಿದೆ. ಈ ಕೊಂಡಿಯೇ ‘ಉದ್ಯೋಗ ಮೇಳ’. 75 ವರ್ಷಗಳ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಇಂದು 75,000 ಯುವಜನರಿಗೆ ಕಾರ್ಯಕ್ರಮದಡಿ ನೇಮಕಾತಿ ಪತ್ರ ನೀಡುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗಿದೆ, ಆದರೆ ಈ ಬಾರಿ ನಾವು ಒಂದೇ ಬಾರಿಗೆ ನೇಮಕಾತಿ ಪತ್ರಗಳನ್ನು ನೀಡುವ ಸಂಪ್ರದಾಯವನ್ನು ಪ್ರಾರಂಭಿಸಲು ನಿರ್ಧರಿಸಿದೆವು. ಇದರಿಂದಾಗಿ ಎಲ್ಲಾ ಇಲಾಖೆಗಳು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಸಾಮೂಹಿಕ ಮನೋಧರ್ಮವು ಬೆಳೆಯುತ್ತದೆ. ಆದ್ದರಿಂದಲೇ, ಭಾರತ ಸರ್ಕಾರವು ‘ಉದ್ಯೋಗ ಮೇಳ’ವನ್ನು ಪ್ರಾರಂಭಿಸಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತ ಸರ್ಕಾರವು ಕಾಲಕಾಲಕ್ಕೆ ಲಕ್ಷಾಂತರ ಯುವಜನರಿಗೆ ನೇಮಕಾತಿ ಪತ್ರಗಳನ್ನು ನೀಡಲಿದೆ. ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಎನ್ಡಿಎ ಆಡಳಿತವಿರುವ ಮತ್ತು ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಕೂಡ ಇದೇ ರೀತಿಯ ಅಭಿಯಾನಗಳನ್ನು ಆಯೋಜಿಸಲು ಹೊರಟಿರುವುದು ನನಗೆ ಸಂತಸ ತಂದಿದೆ. ಜಮ್ಮು ಮತ್ತು ಕಾಶ್ಮೀರ, ದಾದ್ರಾ ಮತ್ತು ನಗರ ಹವೇಲಿ, ದಮನ್-ದಿಯು ಮತ್ತು ಅಂಡಮಾನ್-ನಿಕೋಬಾರ್ ಆಡಳಿತವು ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾವಿರಾರು ಯುವಜನರಿಗೆ ನೇಮಕಾತಿ ಪತ್ರಗಳನ್ನು ನೀಡಲು ಹೊರಟಿದೆ. ಇಂದು ನೇಮಕಾತಿ ಪತ್ರಗಳನ್ನು ಪಡೆದ ಯುವ ಸಹೋದ್ಯೋಗಿಗಳಿಗೆ ನನ್ನ ಅಭಿನಂದನೆಗಳು. 

ಸ್ನೇಹಿತರೇ,

ದೇಶವು ಸ್ವಾತಂತ್ರ್ಯದ ಅಮೃತ ಕಾಲವನ್ನು ಪ್ರವೇಶಿಸಿದ ಸಮಯದಲ್ಲಿ ನೀವೆಲ್ಲರೂ ಭಾರತ ಸರ್ಕಾರಕ್ಕೆ ಸೇರುತ್ತಿದ್ದೀರಿ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸಲು ನಾವು ‘ಆತ್ಮನಿರ್ಭರ ಭಾರತ’(ಸ್ವಾವಲಂಬಿ ಭಾರತ) ಮಾರ್ಗದಲ್ಲಿ ನಡೆಯುತ್ತಿದ್ದೇವೆ. ನಮ್ಮ ನವೋದ್ಯಮಿಗಳು, ಉದ್ಯಮಿಗಳು, ರೈತರು ಮತ್ತು ಸೇವೆಗಳು ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಭಿವೃದ್ಧಿ ಹೊಂದಿದ ಭಾರತವು ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬ ಭಾರತೀಯನಿಗೂ ಮೂಲಭೂತ ಸೌಕರ್ಯಗಳು ತ್ವರಿತವಾಗಿ ಲಭ್ಯವಾದಾಗ ಮತ್ತು ಸರ್ಕಾರಿ ಪ್ರಕ್ರಿಯೆಗಳು ತ್ವರಿತವಾದಾಗ ಮಾತ್ರ ‘ಸಬ್ಕಾ ಪ್ರಯಾಸ್’(ಎಲ್ಲರ ಪ್ರಯತ್ನ) ಮನೋಭಾವವು ಜಾಗೃತಗೊಳ್ಳುತ್ತದೆ. ಕೆಲವೇ ತಿಂಗಳಲ್ಲಿ ನೇಮಕಾತಿ ಪತ್ರ ನೀಡಿ ಲಕ್ಷಾಂತರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿರುವುದು ಕಳೆದ 7-8 ವರ್ಷಗಳಲ್ಲಿ ಸರಕಾರಿ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿರುವುದಕ್ಕೆ ಸಾಕ್ಷಿಯಾಗಿದೆ.  8-10 ವರ್ಷಗಳ ಹಿಂದೆ ಸಣ್ಣ ಸರ್ಕಾರಿ ನೌಕರಿಯೂ ಹಲವು ತಿಂಗಳು ಪ್ರಕ್ರಿಯೆಯಾಗಿದ್ದ ಪರಿಸ್ಥಿತಿಯನ್ನು ನಾವು ನೋಡಿದ್ದೇವೆ. ಒಂದು ಟೇಬಲ್ನಿಂದ ಇನ್ನೊಂದು ಟೇಬಲ್ಗೆ ಹೋಗುವಾಗ ಸರ್ಕಾರಿ ಕಡತಗಳು ಧೂಳು ಹಿಡಿಯುತ್ತಿದ್ದವು. ಆದರೆ ಈಗ ದೇಶದಲ್ಲಿ ಪರಿಸ್ಥಿತಿ ಹಾಗೂ ಕೆಲಸದ ಸಂಸ್ಕೃತಿ ಬದಲಾಗುತ್ತಿದೆ.

ಸ್ನೇಹಿತರೇ,

ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಇತ್ತೀಚಿನ ತ್ವರಿತ ಪ್ರಕ್ರಿಯೆ ಮತ್ತು ದಕ್ಷತೆಗಾಗಿ 7-8 ವರ್ಷಗಳ ಕಠಿಣ ಪರಿಶ್ರಮ ಮತ್ತು ‘ಕರ್ಮಯೋಗಿಗಳ’ದೊಡ್ಡ ಸಂಕಲ್ಪವೇ ಕಾರಣವಾಗಿದೆ. ಹಿಂದೆ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಎದುರಿಸುತ್ತಿದ್ದ ಸಮಸ್ಯೆಗಳನ್ನು ನೆನಪಿಸಿಕೊಳ್ಳಿ. ಅರ್ಜಿ ಸಲ್ಲಿಕೆಗೆ ವಿವಿಧ ಪ್ರಮಾಣ ಪತ್ರಗಳ ಅವಶ್ಯಕತೆಯಿದ್ದು, ಆ ಪ್ರಮಾಣಪತ್ರಗಳನ್ನು ದೃಢೀಕರಿಸಲು ರಾಜಕೀಯ ಮುಖಂಡರ ಮನೆಯ ಹೊರಗೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಮೊದಲು ಅಧಿಕಾರಿಗಳ ಶಿಫಾರಸುಗಳು ಬೇಕಾಗಿದ್ದವು. ಸರ್ಕಾರದ ಆರಂಭದ ವರ್ಷಗಳಲ್ಲಿಯೇ ನಾವು ಈ ಎಲ್ಲಾ ಸಮಸ್ಯೆಗಳಿಂದ ಯುವಕರನ್ನು ಮುಕ್ತಗೊಳಿಸಿದ್ದೇವೆ. ನಾವು ಸ್ವಯಂ-ದೃಢೀಕರಣವನ್ನು ಅನುಮತಿಸಿದ್ದೇವೆ, ಆ ಮೂಲಕ ಯುವಜನರು ತಮ್ಮ ಪ್ರಮಾಣಪತ್ರಗಳನ್ನು ಸ್ವತಃ ಪ್ರಮಾಣೀಕರಿಸಬಹುದು. ಕೇಂದ್ರ ಸರ್ಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೇಮಕಾತಿಗಳಲ್ಲಿ ಸಂದರ್ಶನಗಳನ್ನು ತೆಗೆದುಹಾಕಿದ್ದು ನಾವು ತೆಗೆದುಕೊಂಡ ಎರಡನೇ ದೊಡ್ಡ ಕ್ರಮ. ಸಂದರ್ಶನ ಪ್ರಕ್ರಿಯೆ ಸ್ಥಗಿತಗೊಂಡ ನಂತರ ಲಕ್ಷಾಂತರ ಯುವಜನರು ಅಪಾರ ಪ್ರಯೋಜನ ಪಡೆದಿದ್ದಾರೆ.

ಸ್ನೇಹಿತರೇ,

ಇಂದು ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಏಳೆಂಟು ವರ್ಷಗಳಲ್ಲೇ 10 ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದೇವೆ. ಪ್ರಪಂಚದ ಪರಿಸ್ಥಿತಿಯು ಅನುಕೂಲಕರವಾಗಿಲ್ಲ ಮತ್ತು ಅನೇಕ ದೊಡ್ಡ ಆರ್ಥಿಕತೆಗಳು ಹೆಣಗಾಡುತ್ತಿವೆ ಎಂಬುದು ನಿಜ. ಹಣದುಬ್ಬರ ಮತ್ತು ಉದ್ಯೋಗ ಸೇರಿದಂತೆ ಹಲವು ಸಮಸ್ಯೆಗಳು ವಿಶ್ವದ ಹಲವು ದೇಶಗಳಲ್ಲಿ ಉತ್ತುಂಗದಲ್ಲಿದೆ. 100 ವರ್ಷಗಳಲ್ಲೇ ಅತ್ಯಂತ ದೊಡ್ಡ ಬಿಕ್ಕಟ್ಟಿನ ಅಡ್ಡ ಪರಿಣಾಮಗಳು 100 ದಿನಗಳಲ್ಲಿ ಮಾಯವಾಗುತ್ತವೆ ಎಂದು ಭಾರತವಾಗಲೀ ಅಥವಾ ಜಗತ್ತಾಗಲೀ ಭಾವಿಸುವುದಿಲ್ಲ. ಬಿಕ್ಕಟ್ಟು ದೊಡ್ಡದಾಗಿದೆ ಮತ್ತು ಇದು ಪ್ರಪಂಚದಾದ್ಯಂತ ಇದೆ ಮತ್ತು ಅದರ ಪರಿಣಾಮವು ಎಲ್ಲೆಡೆಯೂ ಇದೆ. ಆದರೆ ಇದರ ಹೊರತಾಗಿಯೂ, ಭಾರತವು ಈ ವಿಶ್ವವ್ಯಾಪಿ ಬಿಕ್ಕಟ್ಟಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿದೆ ಮತ್ತು ಹೊಸ ಉಪಕ್ರಮಗಳು ಮತ್ತು ಕೆಲವು ಲೆಕ್ಕಾಚಾರದ ಅಪಾಯಗಳನ್ನು ತೆಗೆದುಕೊಳ್ಳುವ ಮೂಲಕ ಅದರ ಪರಿಣಾಮವನ್ನು ಕಡಿಮೆ ಮಾಡುತ್ತಿದೆ. ಇದು ಪರೀಕ್ಷೆಯ ಅವಧಿ, ಆದರೆ ನಿಮ್ಮ ಆಶೀರ್ವಾದ ಮತ್ತು ಸಹಕಾರದಿಂದ ನಾವು ಇಲ್ಲಿಯವರೆಗೆ ಉಳಿದಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸಿದ ಆ ದೋಷಗಳನ್ನು ನಾವು ನಿವಾರಿಸಿದ್ದರಿಂದ ಇದು ಸಾಧ್ಯವಾಗಿದೆ.

ಸ್ನೇಹಿತರೇ,

ಕೃಷಿ, ಖಾಸಗಿ ವಲಯ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಬಲಗೊಳ್ಳುವಂತಹ ವಾತಾವರಣವನ್ನು ನಾವು ದೇಶದಲ್ಲಿ ನಿರ್ಮಿಸುತ್ತಿದ್ದೇವೆ. ಇವು ದೇಶದಲ್ಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಾಗಿವೆ. ಇಂದು ನಾವು ಯುವಜನರ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ ಅಡಿಯಲ್ಲಿ ದೇಶದ ಉದ್ಯಮಗಳ ಅಗತ್ಯಗಳಿಗೆ ಅನುಗುಣವಾಗಿ ಯುವಜನರಿಗೆ ತರಬೇತಿ ನೀಡಲು ಬೃಹತ್ ಅಭಿಯಾನ ನಡೆಯುತ್ತಿದೆ. ಸ್ಕಿಲ್ ಇಂಡಿಯಾ ಅಭಿಯಾನದಡಿ ಇದುವರೆಗೆ 1.25 ಕೋಟಿಗೂ ಹೆಚ್ಚು ಯುವಜನರಿಗೆ ತರಬೇತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರವು ನೂರಾರು ಹೊಸ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. ನಾವು ಯುವಕರಿಗೆ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ್ದೇವೆ ಮತ್ತು ಡ್ರೋನ್ ನೀತಿಯನ್ನು ಸರಳಗೊಳಿಸಿದ್ದೇವೆ ಇದರಿಂದ ದೇಶಾದ್ಯಂತ ಯುವಜನರಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ.

ಸ್ನೇಹಿತರೇ,

ಬ್ಯಾಂಕಿಂಗ್ ವ್ಯವಸ್ಥೆಗೆ ಜನರ ಸೀಮಿತ ಪ್ರವೇಶವು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಮತ್ತು ಸ್ವಯಂ ಉದ್ಯೋಗಗಳ ಸೃಷ್ಟಿಗೆ ದೊಡ್ಡ ಅಡಚಣೆಯಾಗಿತ್ತು. ಈ ಅಡೆತಡೆಯನ್ನೂ ನಿವಾರಿಸಿದ್ದೇವೆ. ಮುದ್ರಾ ಯೋಜನೆಯು ದೇಶದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಉದ್ಯಮಶೀಲತೆಯನ್ನು ವಿಸ್ತರಿಸಿದೆ. ಈ ಯೋಜನೆಯಡಿ ಇಲ್ಲಿಯವರೆಗೆ 20 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ಇಂತಹ ದೊಡ್ಡ ಕಾರ್ಯಕ್ರಮ ದೇಶದಲ್ಲಿ ಹಿಂದೆಂದೂ ಜಾರಿಯಾಗಿರಲಿಲ್ಲ. ಈ ಸಾಲ ಪಡೆದ ಎಲ್ಲಾ ಸ್ನೇಹಿತರಲ್ಲಿ, ಮೊದಲ ಬಾರಿಗೆ ವ್ಯವಹಾರವನ್ನು ಪ್ರಾರಂಭಿಸಿದ 7.5 ಕೋಟಿಗೂ ಹೆಚ್ಚು ಜನರಿದ್ದಾರೆ. ಮತ್ತು ಮುಖ್ಯವಾಗಿ, ಮುದ್ರಾ ಯೋಜನೆಯ ಸುಮಾರು 70 ಪ್ರತಿಶತದಷ್ಟು ಫಲಾನುಭವಿಗಳು ನಮ್ಮ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರು. ಇದರ ಹೊರತಾಗಿ ಇನ್ನೊಂದು ಅಂಕಿ ಅಂಶ ಬಹಳ ಮುಖ್ಯ. ಕಳೆದ ಕೆಲವು ವರ್ಷಗಳಲ್ಲಿ, ಎಂಟು ಕೋಟಿ ಮಹಿಳೆಯರು ಸ್ವ-ಸಹಾಯ ಗುಂಪುಗಳಿಗೆ ಸೇರಿದ್ದಾರೆ, ಅವರಿಗೆ ಭಾರತ ಸರ್ಕಾರ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಈ ಕೋಟ್ಯಂತರ ಮಹಿಳೆಯರು ಈಗ ದೇಶಾದ್ಯಂತ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಿನ್ನೆ, ನಾನು ಬದರಿನಾಥದ ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ನಮ್ಮ ತಾಯಂದಿರು ಮತ್ತು ಸಹೋದರಿಯರೊಂದಿಗೆ ಸಂವಾದ ನಡೆಸುತ್ತಿದ್ದೆ. ಜನರು ಬದರಿನಾಥಕ್ಕೆ ಭೇಟಿ ನೀಡಲು ಆರಂಭಿಸಿದ ನಂತರ ತಮ್ಮ ಪ್ರತಿಯೊಂದು ಸ್ವಸಹಾಯ ಗುಂಪು ಸಹ 2.5 ಲಕ್ಷ ರೂಪಾಯಿ ಲಾಭ ಗಳಿಸಿವೆ ಎಂದು ಅವರು ನನಗೆ ತಿಳಿಸಿದರು.

ಸ್ನೇಹಿತರೇ,

ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗ ಸೃಷ್ಟಿಗೆ ಇನ್ನೊಂದು ಉದಾಹರಣೆಯೆಂದರೆ ನಮ್ಮ ಖಾದಿ ಮತ್ತು ಗ್ರಾಮೋದ್ಯೋಗ. ಖಾದಿ ಮತ್ತು ಗ್ರಾಮೋದ್ಯೋಗದ ವಹಿವಾಟು ದೇಶದಲ್ಲೇ ಪ್ರಥಮ ಬಾರಿಗೆ ಒಂದು ಲಕ್ಷ ಕೋಟಿ ರೂ.ದಾಟಿದೆ. ಕಳೆದ ಕೆಲವು ವರ್ಷಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದಲ್ಲಿ ಒಂದು ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಮುಖ್ಯವಾಗಿ, ನಮ್ಮ ಸಹೋದರಿಯರಿಗೆ ಅದರಲ್ಲಿ ಹೆಚ್ಚಿನ ಪಾಲು ಇದೆ.

ಸ್ನೇಹಿತರೇ,

ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನವು ಪ್ರಪಂಚದಾದ್ಯಂತ ದೇಶದ ಯುವಜನರ ಸಾಮರ್ಥ್ಯವನ್ನು ರುಜುವಾತು ಪಡಿಸಿದೆ. 2014ರವರೆಗೆ ದೇಶದಲ್ಲಿ ಕೆಲವು ನೂರು ಸ್ಟಾರ್ಟ್ಅಪ್ಗಳು ಮಾತ್ರ ಇದ್ದವು, ಇಂದು ಈ ಸಂಖ್ಯೆ 80,000 ಕ್ಕೂ ಹೆಚ್ಚಿದೆ. ನಮ್ಮ ಯುವ ಸಹೋದ್ಯೋಗಿಗಳಿಂದ ಈ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅನೇಕ ಕಂಪನಿಗಳು ಹುಟ್ಟಿಕೊಂಡಿವೆ. ಇಂದು ದೇಶದ ಸಾವಿರಾರು ಸ್ಟಾರ್ಟ್ಅಪ್ಗಳಲ್ಲಿ ಲಕ್ಷಾಂತರ ಯುವಕರು ಕೆಲಸ ಮಾಡುತ್ತಿದ್ದಾರೆ. ಇಂದು ಕೋಟಿಗಟ್ಟಲೆ ಜನರು ಎಂಎಸ್ಎಂಇಗಳು ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಜನರೂ ಸೇರಿದ್ದಾರೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಣಾಮ ಬೀರಿದ ಸುಮಾರು 1.5 ಕೋಟಿ ಉದ್ಯೋಗಗಳನ್ನು ಕೇಂದ್ರ ಸರ್ಕಾರವು ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ನೆರವು ಒದಗಿಸಿ ಉಳಿಸಲಾಗಿದೆ. ಭಾರತ ಸರ್ಕಾರವು ಎಂ ಎನ್ ಆರ್ ಇ ಜಿ ಎ ಮೂಲಕ ದೇಶಾದ್ಯಂತ ಏಳು ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ, ಇದು ಆಸ್ತಿ ಸೃಷ್ಟಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಡಿಜಿಟಲ್ ಇಂಡಿಯಾ ಅಭಿಯಾನವು ದೇಶಾದ್ಯಂತ ಲಕ್ಷಾಂತರ ಡಿಜಿಟಲ್ ಉದ್ಯಮಿಗಳನ್ನು ಸೃಷ್ಟಿಸಿದೆ. ದೇಶದ 5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಕ್ಷಾಂತರ ಯುವಜನರು ಉದ್ಯೋಗ ಪಡೆದಿದ್ದಾರೆ. 5ಜಿ ವಿಸ್ತರಣೆಯೊಂದಿಗೆ ಡಿಜಿಟಲ್ ವಲಯದಲ್ಲಿ ಉದ್ಯೋಗಾವಕಾಶಗಳು ಮತ್ತಷ್ಟು ಹೆಚ್ಚಾಗಲಿವೆ.

ಸ್ನೇಹಿತರೇ,

21 ನೇ ಶತಮಾನದಲ್ಲಿ ಮೇಕ್-ಇನ್-ಇಂಡಿಯಾ ‘ಆತ್ಮನಿರ್ಭರ ಭಾರತ’ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಅಭಿಯಾನವಾಗಿದೆ.  ಇಂದು ದೇಶವು ಅನೇಕ ವಿಷಯಗಳಲ್ಲಿ ಆಮದುದಾರ ರಾಷ್ಟ್ರದಿಂದ ರಫ್ತುದಾರ ದೇಶವಾಗುವತ್ತ ಸಾಗುತ್ತಿದೆ. ಭಾರತ ಇಂದು ಜಾಗತಿಕ ಹಬ್ ಆಗುವತ್ತ ಸಾಗುತ್ತಿರುವ ಹಲವು ಕ್ಷೇತ್ರಗಳಿವೆ. ಪ್ರತಿ ತಿಂಗಳು ಒಂದು ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನ್ಗಳ ರಫ್ತು ನಮ್ಮ ಹೊಸ ಸಾಮರ್ಥ್ಯವನ್ನು ತೋರಿಸುತ್ತಿದೆ. ಭಾರತವು ತನ್ನ ಹಿಂದಿನ ಎಲ್ಲಾ ರಫ್ತು ದಾಖಲೆಗಳನ್ನು ಮುರಿದಾಗ, ಹೊಸ ಉದ್ಯೋಗಾವಕಾಶಗಳು ಸಹ ಸೃಷ್ಟಿಯಾಗುತ್ತಿವೆ. ಇಂದು, ರಫ್ತುಗಳು ವಾಹನಗಳಿಂದ ಮೆಟ್ರೋ ಮತ್ತು ರೈಲು ಬೋಗಿಗಳು ಮತ್ತು ರಕ್ಷಣಾ ಸಾಧನಗಳವರೆಗೆ ಅನೇಕ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿವೆ. ಭಾರತದಲ್ಲಿ ಕಾರ್ಖಾನೆಗಳು ಬೆಳೆಯುತ್ತಿರುವುದರಿಂದ ಇದು ಸಾಧ್ಯವಾಗಿದೆ. ಕಾರ್ಖಾನೆಗಳ ಬೆಳವಣಿಗೆಯು ಅವುಗಳಲ್ಲಿ ಕೆಲಸ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸ್ನೇಹಿತರೇ,

ಉತ್ಪಾದನೆ ಮತ್ತು ಪ್ರವಾಸೋದ್ಯಮವು ಅಂತಹ ಎರಡು ಕ್ಷೇತ್ರಗಳಾಗಿವೆ, ಇವು ಗರಿಷ್ಠ ಸಂಖ್ಯೆಯ ಉದ್ಯೋಗವನ್ನು ಸೃಷ್ಟಿಸುತ್ತವೆ. ಇಂದು ಕೇಂದ್ರ ಸರ್ಕಾರವು ಈ ಕ್ಷೇತ್ರಗಳ ಮೇಲೆ ಅತ್ಯಂತ ಸಮಗ್ರ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಪ್ರಪಂಚದಾದ್ಯಂತದ ಕಂಪನಿಗಳು ಭಾರತಕ್ಕೆ ಬರಲು, ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಮತ್ತು ವಿಶ್ವದ ಬೇಡಿಕೆಯನ್ನು ಪೂರೈಸಲು ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುತ್ತಿದೆ. ಪ್ರೋತ್ಸಾಹಕಗಳನ್ನು ನೀಡಲು ಸರ್ಕಾರವು ಉತ್ಪಾದನೆ ಆಧರಿತ ಪಿ ಎಲ್ ಐ ಯೋಜನೆಗಳನ್ನು ಪ್ರಾರಂಭಿಸಿದೆ. ಉತ್ಪಾದನೆಯ ಆಧಾರದ ಮೇಲೆ ಪ್ರೋತ್ಸಾಹ ನೀಡುವುದು ಭಾರತದ ನೀತಿಯಾಗಿದೆ. ಅದರ ಉತ್ತಮ ಫಲಿತಾಂಶಗಳು ಇಂದು ಅನೇಕ ಕ್ಷೇತ್ರಗಳಲ್ಲಿ ಈಗಾಗಲೇ ಗೋಚರಿಸುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದ ನೀತಿಗಳಿಂದಾಗಿ ಉದ್ಯೋಗದ ಹೆಚ್ಚಳವಾಗಿರುವುದನ್ನು ಇಪಿಎಫ್ಒ ದತ್ತಾಂಶವು ತೋರಿಸುತ್ತಿದೆ. ಎರಡು ದಿನಗಳ ಹಿಂದೆ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಈ ವರ್ಷದ ಆಗಸ್ಟ್ ತಿಂಗಳಲ್ಲಿ ಸುಮಾರು 17 ಲಕ್ಷ ಜನರು ಇಪಿಎಫ್ಒಗೆ ಸೇರಿದ್ದಾರೆ. ಅಂದರೆ, ಅವರು ದೇಶದ ಔಪಚಾರಿಕ ಆರ್ಥಿಕತೆಯ ಒಂದು ಭಾಗವಾಗಿ ಮಾರ್ಪಟ್ಟಿದ್ದಾರೆ. ಇವರಲ್ಲಿ 18ರಿಂದ 25 ವರ್ಷ ವಯೋಮಾನದ ಸುಮಾರು ಎಂಟು ಲಕ್ಷ ಮಂದಿ ಇದ್ದಾರೆ.

ಸ್ನೇಹಿತರೇ,

ಮೂಲಸೌಕರ್ಯ ನಿರ್ಮಾಣವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ವಲಯವು ಉದ್ಯೋಗಕ್ಕೆ ಉತ್ತೇಜನವನ್ನು ನೀಡುತ್ತದೆ ಎಂದು ಪ್ರಪಂಚದಾದ್ಯಂತ ರುಜುವಾತಾಗಿದೆ. ಕಳೆದ ಎಂಟು ವರ್ಷಗಳಲ್ಲಿ ದೇಶದಾದ್ಯಂತ ಸಾವಿರಾರು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ಗೇಜ್ ಪರಿವರ್ತನೆ ಮತ್ತು ರೈಲ್ವೆಯಲ್ಲಿ ವಿದ್ಯುದ್ದೀಕರಣವು ದೇಶಾದ್ಯಂತ ನಡೆಯುತ್ತಿದೆ. ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ, ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ ಮತ್ತು ಹೊಸ ಜಲಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಆಪ್ಟಿಕಲ್ ಫೈಬರ್ ನೆಟ್ವರ್ಕ್ಗಳ ಅಭಿಯಾನವು ದೇಶಾದ್ಯಂತ ನಡೆಯುತ್ತಿದೆ. ಲಕ್ಷಾಂತರ ಕ್ಷೇಮ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮೂರು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಧನತೇರಸ್ ಸಂದರ್ಭದಲ್ಲಿ ಇಂದು ಸಂಜೆ ಮಧ್ಯಪ್ರದೇಶದ 4.5 ಲಕ್ಷ ಸಹೋದರ ಸಹೋದರಿಯರಿಗೆ ಮನೆಗಳ ಕೀಲಿಕೈಗಳನ್ನು ಹಸ್ತಾಂತರಿಸುವಾಗ ನಾನು ಈ ವಿಷಯದ ಬಗ್ಗೆ ವಿವರವಾಗಿ ಮಾತನಾಡಲಿದ್ದೇನೆ. ಸಂಜೆ ನನ್ನ ಆ ಭಾಷಣವನ್ನು ಕೇಳುವಂತೆ ನಿಮಗೆ ವಿನಂತಿಸುತ್ತೇನೆ. 

ಸ್ನೇಹಿತರೇ,

ಭಾರತ ಸರ್ಕಾರವು ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುವ ಗುರಿಯನ್ನು ಹೊಂದಿದೆ. ಇಂತಹ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ಸ್ಥಳೀಯ ಮಟ್ಟದಲ್ಲಿ ಯುವಕರಿಗೆ ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಆಧುನಿಕ ಮೂಲಸೌಕರ್ಯಕ್ಕಾಗಿ ಈ ಎಲ್ಲ ಯೋಜನೆಗಳು ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೊಸ ಶಕ್ತಿ ನೀಡುತ್ತಿವೆ. ಐತಿಹಾಸಿಕ ಪ್ರಾಮುಖ್ಯತೆ, ನಂಬಿಕೆ ಮತ್ತು ಆಧ್ಯಾತ್ಮಿಕತೆಯ ತಾಣಗಳನ್ನು ದೇಶಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಎಲ್ಲ ಪ್ರಯತ್ನಗಳು ದೂರದ ಪ್ರದೇಶಗಳ ಯುವಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತಿವೆ ಮತ್ತು ಅವಕಾಶಗಳನ್ನು ನೀಡುತ್ತಿವೆ. ಒಟ್ಟಾರೆ, ದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರವು ಏಕಕಾಲದಲ್ಲಿ ಹಲವು ರಂಗಗಳಲ್ಲಿ ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ದೇಶದ ಯುವ ಜನತೆಯನ್ನು ನಮ್ಮ ದೊಡ್ಡ ಶಕ್ತಿ ಎಂದು ಪರಿಗಣಿಸಿದ್ದೇವೆ. ಸ್ವಾತಂತ್ರ್ಯದ ‘ಅಮೃತ ಕಾಲ’ ದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಚಾಲಕರು ನಮ್ಮ ಯುವಕರು. ಇಂದು ನೇಮಕಾತಿ ಪತ್ರಗಳನ್ನು ಪಡೆದಿರುವವರು ಕಚೇರಿಗೆ ಸೇರಿದಾಗ ನಿಮ್ಮ ಕರ್ತವ್ಯದ ಹಾದಿಯನ್ನು ನೆನಪಿಟ್ಟುಕೊಳ್ಳುವಂತೆ ನಾನು ವಿಶೇಷವಾಗಿ ನೆನಪಿಸಲು ಬಯಸುತ್ತೇನೆ. ಸಾರ್ವಜನಿಕ ಸೇವೆಗಾಗಿ ನಿಮ್ಮನ್ನು ನೇಮಿಸಲಾಗಿದೆ. 21ನೇ ಶತಮಾನದ ಭಾರತದಲ್ಲಿ ಸರ್ಕಾರಿ ಸೇವೆ ಎನ್ನುವುದು ಸೌಲಭ್ಯವಲ್ಲ, ಕಾಲಮಿತಿಯೊಳಗೆ ಕೆಲಸ ಮಾಡುವ ಮೂಲಕ ದೇಶದ ಜನರ ಸೇವೆ ಮಾಡುವ ಬದ್ಧತೆಯಾಗಿದೆ. ಇದೊಂದು ಸುವರ್ಣಾವಕಾಶ. ಎಷ್ಟೇ ಕಷ್ಟದ ಸಂದರ್ಭಗಳು ಮತ್ತು ಸನ್ನಿವೇಶಗಳಿದ್ದರೂ, ನಾವು ನಮ್ಮ ಕರ್ತವ್ಯಗಳನ್ನು ಸಮಯ ಮಿತಿಯೊಳಗೆ ನಿರ್ವಹಿಸುವುದನ್ನು ಮುಂದುವರಿಸಬೇಕು. ಈ ನಿರ್ಣಯವನ್ನು ಮನಸ್ಸಿನಲ್ಲಿಟ್ಟುಕೊಂಡು ನೀವು ಸೇವಾ ಮನೋಭಾವವನ್ನು ಅತಿಮುಖ್ಯವಾಗಿ ಇಟ್ಟುಕೊಳ್ಳುತ್ತೀರಿ ಎಂದು ನನಗೆ ಭರವಸೆ ಇದೆ. ನಿಮ್ಮ ಕನಸು ಇಂದಿನಿಂದ ಪ್ರಾರಂಭವಾಗಿದೆ, ಅದು ಅಭಿವೃದ್ಧಿ ಹೊಂದಿದ ಭಾರತದಿಂದ ಮಾತ್ರ ಈಡೇರುತ್ತದೆ.ಎಂಬುದನ್ನು ನೆನಪಿಡಿ. ನೇಮಕಾತಿ ಪತ್ರಗಳ ರೂಪದಲ್ಲಿ ಹೊಸ ಜೀವನದ ಆರಂಭಕ್ಕಾಗಿ ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು. ದೇಶದ ಸಾಮಾನ್ಯ ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ನಾವು ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಎಂದು ನನಗೆ ನಂಬಿಕೆ ಇದೆ! ಇಂದು ಧನತೇರಸ್ ಪವಿತ್ರ ಹಬ್ಬ. ನಮ್ಮ ದೇಶದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಕೂಡ ಇದೆ. ವಾಸ್ತವವಾಗಿ, ಇದು ಹಬ್ಬದ ಋತುವಾಗಿದೆ. ನಿಮ್ಮ ಕೈಯಲ್ಲಿರುವ ಈ ನೇಮಕಾತಿ ಪತ್ರಗಳು ನಿಮ್ಮ ಹಬ್ಬಗಳನ್ನು ಹೆಚ್ಚು ಉತ್ಸಾಹಭರಿತವಾಗಿಸುತ್ತವೆ. ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ ಅದನ್ನು ಸಾಕಾರಗೊಳಿಸುವ ಸಂಕಲ್ಪದೊಂದಿಗೆ ನಿಮ್ಮನ್ನು ಬೆಸೆಯುತ್ತದೆ. ಈ 25 ವರ್ಷಗಳ ‘ಅಮೃತ ಕಾಲ’ಮತ್ತು ನಿಮ್ಮ ಜೀವನದ 25 ವರ್ಷಗಳು ಬಹಳ ಮುಖ್ಯವಾದುವು. ನಾವೆಲ್ಲರೂ ಸೇರಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ. ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು. ಧನ್ಯವಾದಗಳು.

ಸೂಚನೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

******



(Release ID: 1870792) Visitor Counter : 132