ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾರ್ಗಿಲ್ ನಲ್ಲಿ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಮಂತ್ರಿ


ಈ ಸಂದರ್ಭದಲ್ಲಿ ವೀರ ಯೋಧರೊಂದಿಗೆ ಸಂವಾದ

Posted On: 24 OCT 2022 2:26PM by PIB Bengaluru

"ಅನೇಕ ವರ್ಷಗಳಿಂದ, ನೀವು ನನ್ನ ಕುಟುಂಬದ ಭಾಗವಾಗಿದ್ದೀರಿ"


"ದೀಪಾವಳಿಯು ಭಯೋತ್ಪಾದನೆಯನ್ನು ಕೊನೆಗಾಣಿಸುವ ಹಬ್ಬವಾಗಿದೆ"
 

"ನಾವು ಗೌರವಿಸುವ ಭಾರತವು ಕೇವಲ ಭೌಗೋಳಿಕ ಪ್ರದೇಶವಷ್ಟೇ ಅಲ್ಲ, ಅದು ಒಂದು ಜೀವಂತ ಚೇತನ, ನಿರಂತರ ಪ್ರಜ್ಞೆ, ಅಮರ ಅಸ್ತಿತ್ವ"
 

"ನೀವು ಗಡಿಯಲ್ಲಿ ಗುರಾಣಿಯಂತೆ ನಿಂತಿದ್ದೀರಿ, ಈ ನಡುವೆ ದೇಶದೊಳಗಿನ ಶತ್ರುಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ".
 

"ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ, ಅವರು ಇನ್ನು ಮುಂದೆ 400 ಕ್ಕೂ ಹೆಚ್ಚು ರಕ್ಷಣಾ ಉಪಕರಣಗಳನ್ನು ವಿದೇಶದಿಂದ ಖರೀದಿಸುವುದಿಲ್ಲ ಬದಲಾಗಿ, ಈಗ ಭಾರತದಲ್ಲಿಯೇ ತಯಾರಿಸಲು ನಿರ್ಧರಿಸಿದ್ದಾರೆ"


"ಹೊಸ ಸವಾಲುಗಳು, ಹೊಸ ವಿಧಾನಗಳು ಮತ್ತು ರಾಷ್ಟ್ರೀಯ ರಕ್ಷಣೆಯ ಬದಲಾಗುತ್ತಿರುವ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ದೇಶದ ಸೇನಾ ಶಕ್ತಿಯನ್ನು ಅಣಿಗೊಳಿಸುತ್ತಿದ್ದೇವೆ" .

ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುವ ತಮ್ಮ ಸಂಪ್ರದಾಯದಂತೆ  ಪ್ರಧಾನಮಂತ್ರಿಯವರು ಈ ದೀಪಾವಳಿಯನ್ನು ಕಾರ್ಗಿಲ್ ನಲ್ಲಿ ಪಡೆಗಳೊಂದಿಗೆ ಕಳೆದರು.

ವೀರ ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶೌರ್ಯ ಪರಾಕ್ರಮದಿಂದ ಕೂಡಿದ ಕಾರ್ಗಿಲ್ ನ ಈ ಮಣ್ಣಿಗೆ ನಮನ ಸಲ್ಲಿಸುವ ಭಾವನೆಯು ತಮ್ಮನ್ನು ಪದೇ ಪದೇ ಸಶಸ್ತ್ರ ಪಡೆಗಳ ವೀರ ಪುತ್ರರು ಮತ್ತು ಪುತ್ರಿಯರತ್ತ ಸೆಳೆದು ತರುತ್ತದೆ ಎಂದು ಹೇಳಿದರು. "ಹಲವು ವರ್ಷಗಳಿಂದ, ನೀವು ನನ್ನ ಕುಟುಂಬದ ಭಾಗವಾಗಿದ್ದೀರಿ", ಎಂದು ಪ್ರಧಾನಮಂತ್ರಿ ಹೇಳಿದರು. ಯೋಧರೊಂದಿಗೆ ಇದ್ದಾಗ ದೀಪಾವಳಿಯ ಸಿಹಿ ಮತ್ತಷ್ಟು ಹೆಚ್ಚುತ್ತದೆ ಮತ್ತು ಅವರ ನಡುವೆ ಇರುವ ದೀಪಾವಳಿಯ ಪ್ರಕಾಶ ತಮ್ಮೊಂದಿಗೆ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಒಂದು ಕಡೆ ರಾಷ್ಟ್ರದ ಸಾರ್ವಭೌಮ ಗಡಿಗಳಿದ್ದರೆ, ಇನ್ನೊಂದು ಕಡೆ ಬದ್ಧತೆಯ ಸೈನಿಕರಿದ್ದಾರೆ, ಒಂದು ಕಡೆ ನಮಗೆ ತಾಯ್ನಾಡಿನ ಮಣ್ಣಿನ ಬಗ್ಗೆ ಪ್ರೀತಿ ಇದ್ದರೆ, ಮತ್ತೊಂದೆಡೆ, ಧೈರ್ಯಶಾಲಿ ಸೈನಿಕರು ಇದ್ದಾರೆ. ಇಷ್ಟು ದೊಡ್ಡ ಪ್ರಮಾಣದ ದೀಪಾವಳಿಯು ತಮಗೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ". ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಭಾಗವಾಗಿರುವ ಪರಾಕ್ರಮ ಮತ್ತು ಶೌರ್ಯದ ಈ ಗಾಥೆಗಳನ್ನು ಭಾರತವು ಸಂತೋಷದಿಂದ ಆಚರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. "ಇಂದು, ಕಾರ್ಗಿಲ್ ನ ವಿಜಯ ಭೂಮಿಯಿಂದ, ಭಾರತ ಮತ್ತು ವಿಶ್ವದ ಪ್ರತಿಯೊಬ್ಬರಿಗೂ ತಾವು ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು. 

ಕಾರ್ಗಿಲ್ ನಲ್ಲಿ ವಿಜಯಧ್ವಜ ಹಾರಿಸಿದಂತಹ ಒಂದೇ ಒಂದು ಅಂತಹ ಯುದ್ಧ ಪಾಕಿಸ್ತಾನದೊಂದಿಗೆ ನಡೆದಿರಲಿಲ್ಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇಂದಿನ ಜಗತ್ತಿನಲ್ಲಿ ಭಾರತದ ಹಂಬಲದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬೆಳಕಿನ ಹಬ್ಬವು ಇಂದಿನ ಭೌಗೋಳಿಕ ರಾಜಕೀಯ ಭೂರಮೆಯಲ್ಲಿ ಶಾಂತಿ ಮತ್ತು ಸಮೃದ್ಧಿಯ ಹಾದಿಯನ್ನು ಬೆಳಗಿಸಲಿ ಎಂದು ಹಾರೈಸಿದರು. ದೀಪಾವಳಿಯ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿಯವರು, "ಇದು ಭಯೋತ್ಪಾದನೆಯನ್ನು ಕೊನೆಗಾಣಿಸುವ ಹಬ್ಬ" ಎಂದು ಹೇಳಿದರು. ದೀಪಾವಳಿಯೊಂದಿಗೆ ಹೋಲಿಕೆ ಮಾಡಿದ ಅವರು, ಕಾರ್ಗಿಲ್ ನಿಖರವಾಗಿ ಅದೇ ರೀತಿ ಮಾಡಿದೆ ಮತ್ತು ವಿಜಯೋತ್ಸವದ ಆಚರಣೆಗಳು ಇಂದಿಗೂ ನೆನಪಿನಲ್ಲಿವೆ ಎಂದು ಪ್ರಧಾನಮಂತ್ರಿ ಹೇಳಿದರು.

 ಕಾರ್ಗಿಲ್ ಯುದ್ಧಕ್ಕೆ ತಾವು ಸಾಕ್ಷಿಯಾಗಿದ್ದಾಗಿ ಮತ್ತು ಅದನ್ನು ಹತ್ತಿರದಿಂದ ಗಮನಿಸಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ಯುದ್ಧದ ಸಮಯದಲ್ಲಿ ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾಗ ಸೈನಿಕರೊಂದಿಗೆ ಸಮಯ ಕಳೆಯಲು ಬಂದಿದ್ದಾಗಿನ 23 ವರ್ಷಗಳ ಹಳೆಯ ಛಾಯಾಚಿತ್ರಗಳನ್ನು ಸಂರಕ್ಷಿಸಿ, ತಮಗೆ ತೋರಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. "ಒಬ್ಬ ಸಾಮಾನ್ಯ ನಾಗರಿಕನಾಗಿ, ತಮ್ಮ ಕರ್ತವ್ಯ ಪಥವು ತಮ್ಮನ್ನು ಯುದ್ಧಭೂಮಿಗೆ ಕರೆತಂದಿತ್ತು" ಎಂದು ಪ್ರಧಾನಮಂತ್ರಿ ಹೇಳಿದರು. ದೇಶವಾಸಿಗಳು ಒಟ್ಟುಗೂಡಿಸಿ ನೀಡಿದ್ದ ಸಾಮಾನು ಸರಂಜಾಮುಗಳನ್ನು ತಲುಪಿಸಲು ತಾವು ಬಂದಿದ್ದನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು ಮತ್ತು ಇದು ತಮಗೆ ಆರಾಧನೆಯ ಕ್ಷಣವಾಗಿತ್ತು ಎಂದು ಹೇಳಿದರು. ಆ ಸಮಯದಲ್ಲಿನ ವಾತಾವರಣದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮನಸ್ಸು, ದೇಹ ಮತ್ತು ಆತ್ಮವನ್ನು ಉದ್ದೇಶಕ್ಕೆ ಸಮರ್ಪಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರೆಯಾಗಿತ್ತು ಮತ್ತು ವಿಜಯದ ಹರ್ಷೋದ್ಗಾರಗಳು ನಮ್ಮ ಸುತ್ತಲೂ ಗಾಳಿಯಲ್ಲಿ ತುಂಬಿದ್ದವು ಎಂದು ಹೇಳಿದರು. 

 "ನಾವು ಗೌರವಿಸುವ ಭಾರತವು ಕೇವಲ ಭೌಗೋಳಿಕ ಪ್ರದೇಶವಷ್ಟೇ ಅಲ್ಲ, ಅದು ಒಂದು ಜೀವಂತ ಚೇತನ, ನಿರಂತರ ಪ್ರಜ್ಞೆ, ಅಮರ ಅಸ್ತಿತ್ವ" ಎಂದು ಪ್ರಧಾನಮಂತ್ರಿ ಬಣ್ಣಿಸಿದರು. "ನಾವು ಭಾರತದ ಬಗ್ಗೆ ಮಾತನಾಡಿದಾಗ, ಭಾರತದ ಸಂಸ್ಕೃತಿಯ ಶಾಶ್ವತ ಚಿತ್ರಣವು ಮುನ್ನೆಲೆಗೆ ಬರುತ್ತದೆ, ಪರಂಪರೆಯ ಪರಿಧಿ ತನ್ನನ್ನು ತಾನೇ ನಿರ್ಮಿಸಿಕೊಳ್ಳುತ್ತದೆ ಮತ್ತು ಭಾರತದ ಶಕ್ತಿಯ ಮಾದರಿ ಬೆಳೆಯಲು ಪ್ರಾರಂಭಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು. ಭಾರತವು ಅಂತಹ ಶಸ್ತ್ರಾಸ್ತ್ರಗಳ ಪ್ರವಾಹವಾಗಿದ್ದು, ಅದು ಒಂದು ತುದಿಯಲ್ಲಿ ಆಕಾಶದೆತ್ತರದ ಹಿಮಾಲಯದಿಂದ ಪ್ರಾರಂಭವಾಗುತ್ತದೆ ಮತ್ತು ಹಿಂದೂ ಮಹಾಸಾಗರವನ್ನು ಆವರಿಸುತ್ತದೆ ಎಂದು ಅವರು ಹೇಳಿದರು. ಗತಕಾಲದ ಪ್ರವರ್ಧಮಾನಕ್ಕೆ ಬಂದ ಅನೇಕ ನಾಗರಿಕತೆಗಳು ಮರಳಿನ ಕಣಗಳಾಗಿ ನಾಶವಾಗಿವೆ ಆದರೆ ಭಾರತದ ಸಾಂಸ್ಕೃತಿಕ ಪ್ರವಾಹದ ಅಸ್ತಿತ್ವವು ಅಡೆತಡೆಯಿಲ್ಲದೆ ಉಳಿದಿದೆ ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. ಈ ನೆಲದ ಧೈರ್ಯಶಾಲಿ ಪುತ್ರರು ಮತ್ತು ಹೆಣ್ಣುಮಕ್ಕಳು ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳಲ್ಲಿ ಸಂಪೂರ್ಣ ನಂಬಿಕೆಯನ್ನು ತೋರಿಸಿದಾಗ ಒಂದು ರಾಷ್ಟ್ರವು ಅಮರವಾಗುತ್ತದೆ ಎಂದು ಅವರು ವಿವರಿಸಿದರು.

 ಕಾರ್ಗಿಲ್ ಯುದ್ಧಭೂಮಿಯು ಭಾರತೀಯ ಸೇನೆಯ ಧೈರ್ಯಕ್ಕೆ ಜ್ವಲಂತ ಸಾಕ್ಷಿಯಾಗಿದೆ. "ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯದ ಮುಂದೆ ಪರ್ವತದ ಮೇಲೆ ಕುಳಿತಿದ್ದ ಶತ್ರುಗಳು ಕುಬ್ಜರಾಗಿದ್ದರು ಎಂಬುದಕ್ಕೆ ದ್ರಾಸ್, ಬಟಾಲಿಕ್ ಮತ್ತು ಟೈಗರ್ ಹಿಲ್ ಪುರಾವೆಗಳಾಗಿವೆ" ಎಂದು ಶ್ರೀ ಮೋದಿ ಹೇಳಿದರು. ಭಾರತದ ಗಡಿಗಳನ್ನು ನಿರ್ವಹಿಸುತ್ತಿರುವವರು ಭಾರತದ ಭದ್ರತೆಯ ಚೈತನ್ಯದ ಸ್ತಂಭಗಳು ಎಂದು ಅವರು ಹೇಳಿದರು. ಒಂದು ದೇಶದ ಗಡಿಗಳು ಸುಭದ್ರವಾಗಿದ್ದರೆ, ಅದರ ಆರ್ಥಿಕತೆಯು ಸದೃಢವಾಗಿದ್ದರೆ ಮತ್ತು ಸಮಾಜವು ಆತ್ಮವಿಶ್ವಾಸದಿಂದ ತುಂಬಿದ್ದರೆ ಮಾತ್ರ ದೇಶವು ಸುರಕ್ಷಿತವಾಗಿರುತ್ತದೆ ಎಂದು ಅವರು ಹೇಳಿದರು. ದೇಶದ ಶಕ್ತಿಯ ಬಗ್ಗೆ ನಾವು ಸುದ್ದಿಗಳನ್ನು ಕೇಳಿದಾಗ ಇಡೀ ರಾಷ್ಟ್ರದ ನೈತಿಕ ಸ್ಥೈರ್ಯ ಹೆಚ್ಚಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶವಾಸಿಗಳಲ್ಲಿನ ಏಕತೆಯ ಭಾವನೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು ಸ್ವಚ್ಛ ಭಾರತ ಅಭಿಯಾನ ಮತ್ತು ವಿದ್ಯುತ್ ಮತ್ತು ನೀರಿನ ಜೊತೆಗೆ ಪಕ್ಕಾ ಮನೆಗಳನ್ನು ಸಕಾಲದಲ್ಲಿ ವಿತರಿಸುವ ಉದಾಹರಣೆಯನ್ನು ನೀಡಿದರು ಮತ್ತು ಪ್ರತಿಯೊಬ್ಬ ಯೋಧರೂ ಅದರ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ಹೇಳಿದರು. ದೂರದಲ್ಲಿರುವ ಈ ಸೇವೆಗಳು ಯೋಧರ ಮನೆಗಳನ್ನು ತಲುಪಿದಾಗ, ಅದು ಅವರಿಗೆ ಸಂತೃಪ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು. ಯೋಧರ ಸಂಪರ್ಕದ ಹೆಚ್ಚಳವನ್ನು ಗಮನಿಸಿದಾಗ, ಮನೆಗೆ ಕರೆ ಮಾಡುವುದು ಸುಲಭವಾಗುತ್ತದೆ ಮತ್ತು ರಜಾದಿನಗಳಲ್ಲಿ ಮನೆಗೆ ಮರಳುವುದು ಇನ್ನೂ ಸುಲಭವಾಗುತ್ತದೆ ಎಂದು ಅವರು ಹೇಳಿದರು. 7-8 ವರ್ಷಗಳ ಹಿಂದೆ 10 ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದ ಭಾರತ ವಿಶ್ವದ 5 ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿರುವ ಇತ್ತೀಚಿನ ಸಾಧನೆಯನ್ನು ಅವರು ಎತ್ತಿ ತೋರಿಸಿದರು. 80,000 ಕ್ಕೂ ಹೆಚ್ಚು ನವೋದ್ಯಮಗಳ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿ, ಇವು ನಾವೀನ್ಯದ ಚಕ್ರ ಉರುಳುವಂತೆ ಮಾಡಿದೆ ಎಂದರು. ಎರಡು ದಿನಗಳ ಹಿಂದೆ, ಇಸ್ರೋ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಅನ್ನು ವಿಸ್ತರಿಸಲು ಏಕಕಾಲದಲ್ಲಿ 36 ಉಪಗ್ರಹಗಳನ್ನು ಉಡಾಯಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿತು ಎಂಬುದನ್ನು  ಅವರು ನೆನಪಿಸಿಕೊಂಡರು. ಉಕ್ರೇನ್ ಯುದ್ಧದ ಬಗ್ಗೆಯೂ ಬೆಳಕು ಚೆಲ್ಲಿದರು ಪ್ರಧಾನಮಂತ್ರಿ, ಅಲ್ಲಿ ತ್ರಿವರ್ಣ ಧ್ವಜವು ಭಾರತೀಯರಿಗೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸಿತು ಎಂದರು.

ಬಾಹ್ಯ ಮತ್ತು ಆಂತರಿಕ ಶತ್ರುಗಳೆರಡರ ವಿರುದ್ಧದ ಹೋರಾಟವನ್ನು ಭಾರತ ಯಶಸ್ವಿಯಾಗಿ ಕೈಗೆತ್ತಿಕೊಂಡ ಪರಿಣಾಮ ಇದಾಗಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು. "ನೀವು ಗಡಿಯಲ್ಲಿ ಗುರಾಣಿಯಂತೆ ನಿಂತಿದ್ದೀರಿ, ಅದೇ ವೇಳೆ ದೇಶದೊಳಗಿನ ಶತ್ರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಅವರು ಹೇಳಿದರು. ಭಯೋತ್ಪಾದನೆ, ನಕ್ಸಲ್ ವಾದ ಮತ್ತು ಉಗ್ರವಾದವನ್ನು ಬೇರುಸಹಿತ ಕಿತ್ತೊಗೆಯಲು ದೇಶವು ಯಶಸ್ವಿ ಪ್ರಯತ್ನ ನಡೆಸಿದೆ ಎಂದು ಶ್ರೀ ಮೋದಿ ಗಮನಸೆಳೆದರು. ಒಂದು ಕಾಲದಲ್ಲಿ ದೇಶದ ಬಹುಭಾಗವನ್ನು ಆವರಿಸಿದ್ದ ನಕ್ಸಲ್ ವಾದದ  ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅದರ ವ್ಯಾಪ್ತಿ ನಿರಂತರವಾಗಿ ಕುಗ್ಗುತ್ತಿದೆ ಎಂದರು. ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವು ನಿರ್ಣಾಯಕ ಯುದ್ಧದಲ್ಲಿ ಹೋರಾಡುತ್ತಿದೆ ಎಂದು ಹೇಳಿದರು. "ಭ್ರಷ್ಟರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ." ದುರಾಡಳಿತವು ನಮ್ಮ ಅಭಿವೃದ್ಧಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಮೂಲಕ ದೇಶದ ಸಾಮರ್ಥ್ಯವನ್ನು ಸೀಮಿತಗೊಳಿಸಿದೆ ಎಂದು ಅವರು ಹೇಳಿದರು. ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನ, ಎಂಬ ಮಂತ್ರದೊಂದಿಗೆ, ನಾವು ಆ ಎಲ್ಲ ಹಳೆಯ ನ್ಯೂನತೆಗಳನ್ನು ತ್ವರಿತವಾಗಿ ತೆಗೆದುಹಾಕುತ್ತಿದ್ದೇವೆ ಎಂದು ಅವರು ಹೇಳಿದರು. 

ಆಧುನಿಕ ಯುದ್ಧದಲ್ಲಿ ತಂತ್ರಜ್ಞಾನಗಳ ಪ್ರಗತಿಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಭವಿಷ್ಯದ ಯುದ್ಧಗಳ ಸ್ವರೂಪ ಬದಲಾಗಲಿದೆ ಮತ್ತು ಈ ಹೊಸ ಯುಗದಲ್ಲಿ, ನಾವು ಹೊಸ ಸವಾಲುಗಳು, ಹೊಸ ವಿಧಾನಗಳು ಮತ್ತು ರಾಷ್ಟ್ರೀಯ ರಕ್ಷಣೆಯ ಬದಲಾಗುತ್ತಿರುವ ಅವಶ್ಯಕತೆಗಳಿಗೆ ಅನುಗುಣವಾಗಿ ದೇಶದ ಸೇನಾ ಶಕ್ತಿಯನ್ನು ಅಣಿಗೊಳಿಸುತ್ತಿದ್ದೇವೆ ಎಂದು ಹೇಳಿದರು. ದಶಕಗಳಿಂದ ಅಗತ್ಯಗಳನ್ನು ಮನಗಂಡಿರುವ ಸೇನೆಯಲ್ಲಿ ಪ್ರಮುಖ ಸುಧಾರಣೆಗಳ ಅಗತ್ಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ಸವಾಲಿನ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ನಮ್ಮ ಪಡೆಗಳು ಉತ್ತಮ ಸಮನ್ವಯ ಸಾಧಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಭರವಸೆ ನೀಡಿದರು. ಇದಕ್ಕಾಗಿ ಸಿಡಿಎಸ್ ನಂತಹ ಹುದ್ದೆಯನ್ನು ಸೃಷ್ಟಿಸಲಾಗಿದೆ. ಗಡಿಯಲ್ಲಿ ಆಧುನಿಕ ಮೂಲಸೌಕರ್ಯಗಳ ಜಾಲವನ್ನು ರೂಪಿಸಲಾಗುತ್ತಿದೆ, ಇದರಿಂದ ನಮ್ಮ ಸೈನಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಹೆಚ್ಚು ಅನುಕೂಲಕರವಾಗಿದೆ "ಎಂದು ಅವರು ಹೇಳಿದರು. ದೇಶದಲ್ಲಿ ಅನೇಕ ಸೈನಿಕ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು.

ಆತ್ಮನಿರ್ಭರ ಭಾರತದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತೀಯ ಸೇನೆಗಳಲ್ಲಿ ಆಧುನಿಕ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ದೇಶದ ಭದ್ರತೆಗೆ ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ಗಮನಸೆಳೆದರು. ರಕ್ಷಣಾ ಇಲಾಖೆಯ ಮೂರೂ ವಿಭಾಗಗಳು ವಿದೇಶಿ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳ ಮೇಲಿನ ನಮ್ಮ ಅವಲಂಬನೆಯನ್ನು ತಗ್ಗಿಸಲು ನಿರ್ಧರಿಸಿವೆ ಮತ್ತು ಸ್ವಾವಲಂಬಿಗಳಾಗುವುದಾಗಿ ಪ್ರತಿಜ್ಞೆ ಮಾಡಿವೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. "ನಮ್ಮ ಮೂರು ಸೇನೆಗಳನ್ನು ನಾನು ಮೆಚ್ಚುತ್ತೇನೆ, ಅವರು ಇನ್ನು ಮುಂದೆ 400 ಕ್ಕೂ ಹೆಚ್ಚು ರಕ್ಷಣಾ ಉಪಕರಣಗಳನ್ನು ವಿದೇಶದಿಂದ ಖರೀದಿಸುವುದಿಲ್ಲ ಮತ್ತು ಈಗ ಭಾರತದಲ್ಲಿಯೇ ತಯಾರಿಸಲು ನಿರ್ಧರಿಸಿದ್ದಾರೆ" ಎಂದು ಅವರು ಹೇಳಿದರು. ಸ್ವದೇಶಿ ಶಸ್ತ್ರಾಸ್ತ್ರಗಳ ಬಳಕೆಯ ಪ್ರಯೋಜನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತದ ಯೋಧರು ದೇಶದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಿದಾಗ, ಅವರ ನಂಬಿಕೆ ಉತ್ತುಂಗದಲ್ಲಿರುತ್ತದೆ ಮತ್ತು ಅವರ ದಾಳಿಗಳು ಶತ್ರುವಿನ ನೈತಿಕ ಸ್ಥೈರ್ಯವನ್ನು ನಿಗ್ರಹಿಸುವಾಗ ಶತ್ರುಗಳಿಗೆ ಅಚ್ಚರಿಯ ಅಂಶಗಳು ಎದುರಾಗುತ್ತವೆ ಎಂದು ಹೇಳಿದರು. ಪ್ರಚಂಡ್ - ಲಘು ಯುದ್ಧ ಹೆಲಿಕಾಪ್ಟರ್ ಗಳು, ತೇಜಸ್ ಯುದ್ಧ ವಿಮಾನಗಳು ಮತ್ತು ಬೃಹತ್ ವಿಮಾನ ವಾಹಕ ನೌಕೆ ವಿಕ್ರಾಂತ್ ನ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಅರಿಹಂತ್, ಪೃಥ್ವಿ, ಆಕಾಶ್, ತ್ರಿಶೂಲ್, ಪಿನಾಕ್ ಮತ್ತು ಅರ್ಜುನ್ ನಲ್ಲಿ ಭಾರತದ ಕ್ಷಿಪಣಿ ಸಾಮರ್ಥ್ಯವನ್ನು ಪ್ರತಿಪಾದಿಸಿದರು. ಇಂದು, ಭಾರತವು ತನ್ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಾಗ ರಕ್ಷಣಾ ಉಪಕರಣಗಳ ರಫ್ತುದಾರನಾಗಿ ಮಾರ್ಪಟ್ಟಿದೆ ಮತ್ತು ಡ್ರೋನ್ ಗಳಂತಹ ಆಧುನಿಕ ಮತ್ತು ಪರಿಣಾಮಕಾರಿ ತಂತ್ರಜ್ಞಾನದಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

 "ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುವ ಸಂಪ್ರದಾಯಗಳನ್ನು ನಾವು ಅನುಸರಿಸುತ್ತೇವೆ" ಎಂದು ಶ್ರೀ ಮೋದಿ ಹೇಳಿದರು. ಭಾರತವು ಸದಾ ವಿಶ್ವ ಶಾಂತಿಯ ಪರವಾಗಿದೆ ಎಂದು ಅವರು ಹೇಳಿದರು. "ನಾವು ಯುದ್ಧವನ್ನು ವಿರೋಧಿಸುತ್ತೇವೆ, ಆದರೆ ಶಕ್ತಿಯಿಲ್ಲದೆ ಶಾಂತಿ ಸಾಧ್ಯವಿಲ್ಲ" ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ನಮ್ಮ ಸೈನ್ಯ ಸಾಮರ್ಥ್ಯ ಮತ್ತು ವ್ಯೂಹವನ್ನು ಹೊಂದಿವೆ, ಮತ್ತು ಯಾರಾದರೂ ನಮ್ಮನ್ನು ನೋಡಿದರೆ, ನಮ್ಮ ಸೈನ್ಯಕ್ಕೆ ತಮ್ಮದೇ ಭಾಷೆಯಲ್ಲಿ ಶತ್ರುಗಳಿಗೆ ಹೇಗೆ ಸೂಕ್ತ ಪ್ರತ್ಯುತ್ತರ ನೀಡಬೇಕು ಎಂಬುದು ತಿಳಿದಿವೆ ಎಂದು ಅವರು ಹೇಳಿದರು. ಗುಲಾಮಗಿರಿಯ ಮನೋಸ್ಥಿತಿಯನ್ನು ತೊಡೆದುಹಾಕಲು ಕೈಗೊಂಡ ಪ್ರಯತ್ನಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಹೊಸದಾಗಿ ಉದ್ಘಾಟನೆಗೊಂಡ ಕರ್ತವ್ಯ ಮಾರ್ಗದ ಉದಾಹರಣೆಯನ್ನು ನೀಡಿದರು ಮತ್ತು ಇದು ನವ ಭಾರತದ ಹೊಸ ನಂಬಿಕೆಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು. "ಅದು ರಾಷ್ಟ್ರೀಯ ಯುದ್ಧ ಸ್ಮಾರಕವಾಗಲಿ ಅಥವಾ ರಾಷ್ಟ್ರೀಯ ಪೊಲೀಸ್ ಸ್ಮಾರಕವಾಗಲಿ, ಇವು ನವ ಭಾರತಕ್ಕೆ ಹೊಸ ಅಸ್ಮಿತೆಯನ್ನು ನೀಡುತ್ತವೆ" ಎಂದು ಅವರು ಹೇಳಿದರು. ಹೊಸ ಭಾರತೀಯ ನೌಕಾಪಡೆಯ ಧ್ವಜಲಾಂಛನವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, "ಈಗ ಶಿವಾಜಿಯ ಶೌರ್ಯದ ಸ್ಫೂರ್ತಿಯನ್ನು ನೌಕಾ ಧ್ವಜಕ್ಕೆ ಸೇರಿಸಲಾಗಿದೆ" ಎಂದು ಹೇಳಿದರು. 

ಇಂದು ಇಡೀ ವಿಶ್ವದ ಕಣ್ಣು ಭಾರತ ಮತ್ತು ಅದರ ಪ್ರಗತಿಯ ಸಾಮರ್ಥ್ಯದ ಮೇಲೆ ಇವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆಜಾದಿ ಕಾ ಅಮೃತ ಕಾಲ ಭಾರತದ ಈ ಶಕ್ತಿಗೆ ನಿಜವಾದ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. "ಇದರಲ್ಲಿ ನಿಮ್ಮ ಪಾತ್ರ ದೊಡ್ಡದಾಗಿದೆ ಏಕೆಂದರೆ ನೀವು ಭಾರತದ ಹೆಮ್ಮೆ", ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಸಮರ್ಪಿತವಾದ ಕವಿತೆಯನ್ನು ವಾಚಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

*****


(Release ID: 1870671) Visitor Counter : 259