ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಅದಾಲಜ್‌ನಲ್ಲಿ ಮಿಷನ್‌ ಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್‌ಅನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

Posted On: 19 OCT 2022 5:21PM by PIB Bengaluru

ನಮಸ್ತೆ,

ನೀವು ಹೆಗಿದ್ದಿರಿ? ಹೌದು, ಈಗ ಸ್ವಲ್ಪ ಉತ್ಸಾಹವಿದೆ.

ಗುಜರಾತಿನ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್‌ ಜೀ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲರು, ಗುಜರಾತ್‌ ಸರ್ಕಾರದ ಮಂತ್ರಿಗಳು, ಶಿಕ್ಷಣ ಜಗತ್ತಿನ ಎಲ್ಲ ಧೀಮಂತರು, ಗುಜರಾತಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಇತರ ಎಲ್ಲಗಣ್ಯರು, ಸ್ತ್ರೀಯರೇ ಮತ್ತು ಮಹನೀಯರೇ!
ಇಂದು ಗುಜರಾತ್‌ ‘ಅಮೃತ್‌ ಕಾಲ್‌’ ನ ‘ಅಮೃತ್‌’ ಪೀಳಿಗೆಯ ಸೃಷ್ಟಿಯತ್ತ ದೊಡ್ಡ ಹೆಜ್ಜೆ ಇಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಗುಜರಾತ್‌ ಅನ್ನು ನಿರ್ಮಿಸುವ ನಿಟ್ಟಿನಲ್ಲಿಇದು ಒಂದು ಮೈಲಿಗಲ್ಲಾಗಲಿದೆ. ಮಿಷನ್‌ ಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್‌ ಅನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ಗುಜರಾತಿನ ಎಲ್ಲಾ ಜನರು, ಶಿಕ್ಷಕರು, ಯುವ ಸಹೋದ್ಯೋಗಿಗಳು ಮತ್ತು ಭವಿಷ್ಯದ ಪೀಳಿಗೆಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,
ಇತ್ತೀಚೆಗೆ, ದೇಶವು 5 ನೇ ತಲೆಮಾರಿನ ಯುಗವನ್ನು ಪ್ರವೇಶಿಸಿದೆ, ಅಂದರೆ 5 ಜಿ ಮೊಬೈಲ್‌ ಮತ್ತು ಇಂಟರ್ನೆಟ್‌. ನಾವು 1ಜಿ ಯಿಂದ 4 ಜಿ ವರೆಗಿನ ಇಂಟರ್ನೆಟ್‌ ಸೇವೆಗಳನ್ನು ಬಳಸಿದ್ದೇವೆ. ಈಗ 5 ಜಿ ದೇಶದಲ್ಲಿ ಭಾರಿ ಬದಲಾವಣೆಯನ್ನು ತರಲಿದೆ. ಪ್ರತಿ ತಲೆಮಾರಿನೊಂದಿಗೆ ವೇಗವು ಹೆಚ್ಚಾಗಿರುವುದು ಮಾತ್ರವಲ್ಲದೆ, ಪ್ರತಿಯೊಂದು ಪೀಳಿಗೆಯು ತಂತ್ರಜ್ಞಾನವನ್ನು ಜೀವನದ ಬಹುತೇಕ ಪ್ರತಿಯೊಂದು ಅಂಶಕ್ಕೂ ಜೋಡಿಸಿದೆ.

ಸ್ನೇಹಿತರೇ,
ಅಂತೆಯೇ, ನಾವು ದೇಶದಲ್ಲಿ ವಿವಿಧ ತಲೆಮಾರುಗಳ ಶಾಲೆಗಳನ್ನು ಸಹ ನೋಡಿದ್ದೇವೆ. ಈಗ 5 ಜಿ ಸ್ಮಾರ್ಟ್‌ ಸೌಲಭ್ಯಗಳು, ಸ್ಮಾರ್ಟ್‌ ಕ್ಲಾಸ್‌ ರೂಮ್‌ಗಳು ಮತ್ತು ಸ್ಮಾರ್ಟ್‌ ಬೋಧನೆಗಳನ್ನು ಮೀರಿ ಚಲಿಸುವ ಮೂಲಕ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಈಗ ನಮ್ಮ ಶಾಲಾ ವಿದ್ಯಾರ್ಥಿಗಳು ವರ್ಚುವಲ್‌ ರಿಯಾಲಿಟಿ ಮತ್ತು ಇಂಟರ್ನೆಟ್‌ ಆಫ್‌ ಥಿಂಗ್ಸ್‌ನ ಶಕ್ತಿಯನ್ನು ಬಹಳ ಸುಲಭವಾಗಿ ಅನುಭವಿಸಲು ಸಾಧ್ಯವಾಗುತ್ತದೆ. ಮಿಷನ್‌ ಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್‌ ರೂಪದಲ್ಲಿಗುಜರಾತ್‌ ದೇಶದಲ್ಲಿಅತ್ಯಂತ ಮಹತ್ವದ ಮತ್ತು ಮೊದಲ ಹೆಜ್ಜೆ ಇಟ್ಟಿದೆ ಎಂದು ನನಗೆ ಸಂತೋಷವಾಗಿದೆ. ಭೂಪೇಂದ್ರಭಾಯಿ, ಅವರ ಸರ್ಕಾರ ಮತ್ತು ಅವರ ಇಡೀ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೇ,
ಕಳೆದ ಎರಡು ದಶಕಗಳಲ್ಲಿ ಗುಜರಾತಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿಆಗಿರುವ ಬದಲಾವಣೆ ಅಭೂತಪೂರ್ವವಾಗಿದೆ. 20 ವರ್ಷಗಳ ಹಿಂದೆ ಗುಜರಾತ್‌ನಲ್ಲಿ100 ಮಕ್ಕಳಲ್ಲಿ 20 ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಅಂದರೆ, ಐದನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಇದಲ್ಲದೆ, ಶಾಲೆಗೆ ಹೋಗುವ ಹೆಚ್ಚಿನ ವಿದ್ಯಾರ್ಥಿಗಳು 8ನೇ ತರಗತಿಯನ್ನು ತಲುಪುವ ಹೊತ್ತಿಗೆ ಶಾಲೆಯಿಂದ ಹೊರಗುಳಿಯುತ್ತಿದ್ದರು . ದುರದೃಷ್ಟವಶಾತ್‌, ಹೆಣ್ಣುಮಕ್ಕಳ ಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಅನೇಕ ಹಳ್ಳಿಗಳ ಹೆಣ್ಣುಮಕ್ಕಳನ್ನು ಸಂಪೂರ್ಣವಾಗಿ ಶಾಲೆಗೆ ಕಳುಹಿಸಲಿಲ್ಲ. ಬುಡಕಟ್ಟು ಪ್ರದೇಶಗಳಲ್ಲಿಅಸ್ತಿತ್ವದಲ್ಲಿದ್ದ ಯಾವುದೇ ಶಿಕ್ಷಣ ಕೇಂದ್ರಗಳಲ್ಲಿ ವಿಜ್ಞಾನವನ್ನು ಒಂದು ವಿಷಯವಾಗಿ ಕಲಿಸಲು ಯಾವುದೇ ಸಂಪನ್ಮೂಲಗಳಿರಲಿಲ್ಲ. ನಾನು ಸಂತೋಷವಾಗಿದ್ದೇನೆ ಮತ್ತು ಜಿತುಭಾಯ್‌ ಮತ್ತು ಅವರ ತಂಡದ ಕಲ್ಪನೆಯನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ನಿಮ್ಮಲ್ಲಿ ಹೆಚ್ಚಿನವರಿಗೆ ರಂಗದ ಮೇಲೆ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಕಾರಣ, ನಾನು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ನಾನು ಈಗ ಭೇಟಿಯಾದ ಮಕ್ಕಳು 2003 ರಲ್ಲಿ ಮೊದಲ ಬಾರಿಗೆ ಶಾಲೆಗೆ ದಾಖಲಾದವರು. ಆಗ ನಾನು ಒಂದು ಬುಡಕಟ್ಟು ಹಳ್ಳಿಗೆ ಹೋಗಿದ್ದೆ. ಇದು ಜೂನ್‌ ಮಧ್ಯ ಭಾಗವಾಗಿದ್ದು, ತಾಪಮಾನವು 40-45 ಡಿಗ್ರಿ ಸೆಂಟಿಗ್ರೇಡ್‌ನ ಆಸುಪಾಸಿನಲ್ಲಿತ್ತು. ನಾನು ಒಂದು ಹಳ್ಳಿಗೆ ಹೋಗಿದ್ದೆ, ಅಲ್ಲಿಮಕ್ಕಳಿಗೆ ಕನಿಷ್ಠ ಶಿಕ್ಷಣವಿತ್ತು, ಮತ್ತು ಹುಡುಗಿಯರ ಸ್ಥಿತಿ ತುಂಬಾ ದಯನಿಯವಾಗಿತ್ತು. ನಾನು ಏನನ್ನಾದರೂ ಕೇಳಲು ಅವರ ಬಳಿಗೆ ಬಂದಿದ್ದೇನೆ ಎಂದು ನಾನು ಗ್ರಾಮಸ್ಥರಿಗೆ ಹೇಳಿದೆ. ಅವರು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಾರೆ ಎಂಬ ಭರವಸೆಯನ್ನು ನಾನು ಆಲಿಸಿದೆ. ನಾನು ಮೊದಲ ಬಾರಿಗೆ ಶಾಲೆಗೆ ಕರೆದೊಯ್ದಿದ್ದ ಇಂದಿನ ಮಕ್ಕಳನ್ನು ಭೇಟಿಯಾಗುವ ಸೌಭಾಗ್ಯ ನನಗೆ ಒದಗಿಬಂದಿದೆ. ಈ ಸಂದರ್ಭದಲ್ಲಿ, ನನ್ನ ವಿನಂತಿಯನ್ನು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರ ಹೆತ್ತವರಿಗೆ ತಲೆಬಾಗುತ್ತೇನೆ. ನಾನು ಅವರನ್ನು ಶಾಲೆಗೆ ಕರೆದೊಯ್ದೆ. ಶಿಕ್ಷಣದ ಮಹತ್ವವನ್ನು ಮನಗಂಡು, ಅವರು ತಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಕಲಿಸಿದರು ಮತ್ತು ಇಂದು ಆ ಮಕ್ಕಳು ಸ್ವತಂತ್ರರಾಗಿದ್ದಾರೆ. ನಾನು ಶಾಲೆಗಳಲ್ಲಿಪ್ರವೇಶ ಖಾತ್ರಿಪಡಿಸಿದ ಮಕ್ಕಳನ್ನು ಭೇಟಿಯಾಗಲು ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಗುಜರಾತ್‌ ಸರ್ಕಾರ ಮತ್ತು ಜಿತುಭಾಯಿ ಅವರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,
ಕಳೆದ ಎರಡು ದಶಕಗಳಲ್ಲಿ ಗುಜರಾತಿನ ಜನರು ತಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಿದ್ದಾರೆ. ಈ ಎರಡು ದಶಕಗಳಲ್ಲಿ ಗುಜರಾತ್‌ ನಲ್ಲಿ1.25 ಲಕ್ಷಕ್ಕೂ ಹೆಚ್ಚು ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ‘ ಶಾಲಾ ಪ್ರವೇಶೋತ್ಸವ ’ (ಪ್ರಾಥಮಿಕ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವ ಅಭಿಯಾನ) ಮತ್ತು ‘ಕನ್ಯಾ ಕೆಲವಾನಿ ಮಹೋತ್ಸವ’ (ಬಾಲಕಿಯರ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ಔಪಚಾರಿಕ ಶಿಕ್ಷಣವನ್ನು ಉತ್ತೇಜಿಸುವುದು) ಪ್ರಾರಂಭವಾದ ದಿನ ನನಗೆ ಇನ್ನೂ ನೆನಪಿದೆ. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಮೊದಲ ಬಾರಿಗೆ ಶಾಲೆಗೆ ಹೋದಾಗ ಹಬ್ಬವನ್ನು ಹಬ್ಬವಾಗಿ ಆಚರಿಸುವುದು ಇದರ ಉದ್ದೇಶವಾಗಿತ್ತು. ಕುಟುಂಬದಲ್ಲಿ, ಊರಿನಲ್ಲಿ ಮತ್ತು ಇಡೀ ಹಳ್ಳಿಯಲ್ಲಿ ಆಚರಣೆ ಇರಬೇಕು, ಏಕೆಂದರೆ ನಾವು ದೇಶದ ಹೊಸ ಪೀಳಿಗೆಗೆ ಶಿಕ್ಷಣ ನೀಡಲು ಪ್ರಾರಂಭಿಸುತ್ತಿದ್ದೇವೆ. ಮುಖ್ಯಮಂತ್ರಿಯಾಗಿ, ನಾನು ಸ್ವತಃ ಹಳ್ಳಿಗಳಿಗೆ ಹೋಗಿ ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಎಲ್ಲ ಜನರನ್ನು ವಿನಂತಿಸಿಕೊಂಡೆ ಮತ್ತು ಇದರ ಪರಿಣಾಮವೆಂದರೆ ಇಂದು ಗುಜರಾತ್‌ನ ಬಹುತೇಕ ಪ್ರತಿಯೊಬ್ಬ ಮಗ ಮತ್ತು ಮಗಳು ಶಾಲಾ ಕಾಲೇಜುಗಳಿಗೆ ಹೋಗಲು ಪ್ರಾರಂಭಿಸಿದ್ದಾರೆ.

ಸ್ನೇಹಿತರೇ,
ಇದರೊಂದಿಗೆ, ನಾವು ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶಕ್ಕೆ ಗರಿಷ್ಠ ಒತ್ತು ನೀಡಿದ್ದೇವೆ. ಅದಕ್ಕಾಗಿಯೇ ನಾವು ‘ಪ್ರವೇಶೋತ್ಸವ’ದ ಜೊತೆಗೆ ‘ಗುಣೋತ್ಸವ’ (ಮಕ್ಕಳ ಕಲಿಕಾ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುವ ಉಪಕ್ರಮ) ಅನ್ನು ಪ್ರಾರಂಭಿಸಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅವನ ಸಾಮರ್ಥ್ಯ‌ಗಳು, ಆಸಕ್ತಿಗಳು ಮತ್ತು ಅವನ ಉದಾಸೀನತೆಯ ಆಧಾರದ ಮೇಲೆ ವಿವರವಾಗಿ ಮೌಲ್ಯಮಾಪನ ಮಾಡಲಾಗುತ್ತಿತ್ತು ಎಂದು ನನಗೆ ಚೆನ್ನಾಗಿ ನೆನಪಿದೆ. ಅವರೊಂದಿಗೆ, ಶಿಕ್ಷಕರನ್ನು ಸಹ ಮೌಲ್ಯಮಾಪನ ಮಾಡಲಾಯಿತು.ಶಾಲಾ ಇಲಾಖೆಗಳಲ್ಲದೆ, ನಮ್ಮ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ಸಹ ಅಭಿಯಾನದ ಭಾಗವಾಗಿ ಮೂರು ದಿನಗಳ ಕಾಲ ಹಳ್ಳಿಗಳಲ್ಲಿನ ಶಾಲೆಗಳಿಗೆ ಹೋಗುತ್ತಿದ್ದರು.

ಕೆಲವು ದಿನಗಳ ಹಿಂದೆ ನಾನು ಗಾಂಧಿನಗರಕ್ಕೆ ಬಂದಾಗ, ‘ವಿದ್ಯಾ ಸಮೀಕ್ಷಾ ಕೇಂದ್ರಗಳು’ (ಶಿಕ್ಷ ಣ ಪರಿಶೀಲನಾ ಕೇಂದ್ರಗಳು) ರೂಪದಲ್ಲಿ‘ಗುಣೋತ್ಸವ’ದ ಅತ್ಯಂತ ಸುಧಾರಿತ, ತಂತ್ರಜ್ಞಾನ ಆಧಾರಿತ ಆವೃತ್ತಿಯನ್ನು ನೋಡಿ ನನಗೆ ಸಂತೋಷವಾಯಿತು. ‘ವಿದ್ಯಾ ಸಮೀಕ್ಷಾ ಕೇಂದ್ರ’ಗಳ ಹೊಸತನವನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಭಾರತ ಸರ್ಕಾರ ಮತ್ತು ದೇಶದ ಶಿಕ್ಷಣ ಸಚಿವರು ಇತ್ತೀಚೆಗೆ ದೇಶಾದ್ಯಂತದ ಶಿಕ್ಷ ಣ ಸಚಿವರು ಮತ್ತು ಶಿಕ್ಷ ಣ ಇಲಾಖೆಯ ಅಧಿಕಾರಿಗಳ ಸಭೆಯನ್ನು ಗಾಂಧಿನಗರಕ್ಕೆ ಕರೆದಿದ್ದರು. ಅವರೆಲ್ಲರೂ ತಮ್ಮ ಸಮಯದ ಗಣನೀಯ ಭಾಗವನ್ನು ‘ವಿದ್ಯಾ ಸಮೀಕ್ಷಾ ಕೇಂದ್ರಗಳು’ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಕಳೆದರು. ಈಗ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ‘ವಿದ್ಯಾ ಸಮೀಕ್ಷಾ ಕೇಂದ್ರ’ಗಳನ್ನು ಅಧ್ಯಯನ ಮಾಡಲು ಬರುತ್ತಾರೆ ಮತ್ತು ಆಯಾ ರಾಜ್ಯಗಳಲ್ಲಿಆ ಮಾದರಿಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಈ ಉಪಕ್ರಮಕ್ಕಾಗಿ ಗುಜರಾತ್‌ ಅಭಿನಂದನೆಗೆ ಅರ್ಹವಾಗಿದೆ.

ರಾಜ್ಯದ ಸಂಪೂರ್ಣ ಶಾಲಾ ಶಿಕ್ಷಣದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಕೇಂದ್ರ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದು ಒಂದು ರೀತಿಯ ನವೀನ ಪ್ರಯೋಗವಾಗಿದೆ. ಸಾವಿರಾರು ಶಾಲೆಗಳು, ಲಕ್ಷಾಂತರ ಶಿಕ್ಷಕರು ಮತ್ತು ಗುಜರಾತ್‌ನ ಸುಮಾರು 1.25 ಕೋಟಿ ವಿದ್ಯಾರ್ಥಿಗಳನ್ನು ಇಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅವರಿಗೆ ಪ್ರತಿಕ್ರಿಯೆಯನ್ನು ನೀಡಲಾಗುತ್ತದೆ. ಬಿಗ್‌ ಡೇಟಾ ಅನಾಲಿಸಿಸ್‌, ಮಶೀನ್‌ ಲರ್ನಿಂಗ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ವೀಡಿಯೊ ವಾಲ್ಸ್‌ನಂತಹ ತಂತ್ರಗಳೊಂದಿಗೆ ಡೇಟಾವನ್ನು ವಿಶ್ಲೇಷಿಸಲಾಗುತ್ತದೆ. ಅದರಂತೆ, ಉತ್ತಮ ಕಾರ್ಯನಿರ್ವಹಣೆಗಾಗಿ ಮಕ್ಕಳಿಗೆ ಅಗತ್ಯ ಸಲಹೆಗಳನ್ನು ನೀಡಲಾಗುತ್ತದೆ.

ಸ್ನೇಹಿತರೇ,
ಶಿಕ್ಷಣ ಕ್ಷೇತ್ರದಲ್ಲಿ ಹೊಸ, ವಿಶಿಷ್ಟ ಮತ್ತು ಪ್ರಯೋಗವನ್ನು ಮಾಡುವುದು ಗುಜರಾತ್‌ನ ಡಿಎನ್‌ಎ ಮತ್ತು ಸ್ವಭಾವದಲ್ಲಿದೆ. ಮೊದಲ ಬಾರಿಗೆ, ಅವರ ತರಬೇತಿಗಾಗಿ ಶಿಕ್ಷಕರ ಶಿಕ್ಷಣ ಸಂಸ್ಥೆಯನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಯಿತು. ಇಲ್ಲಿನ ಮಕ್ಕಳ ವಿಶ್ವವಿದ್ಯಾಲಯವು ವಿಶ್ವದ ಏಕೈಕ ವಿಶ್ವವಿದ್ಯಾಲಯವಾಗಿದೆ. ‘ಕ್ರೀಡೆಯ ಮಹಾಕುಂಭ’ದ ಅನುಭವವನ್ನು ನೋಡಿ. ಸರ್ಕಾರಿ ಯಂತ್ರಗಳಲ್ಲಿನ ಶಿಸ್ತುಬದ್ಧ ಕೆಲಸದ ಸಂಸ್ಕೃತಿ, ಕ್ರೀಡೆಗಳ ಬಗ್ಗೆ ಗುಜರಾತ್‌ನ ಯುವಕರ ಆಸಕ್ತಿ ಮತ್ತು ಈ ಇಡೀ ಪರಿಸರ ವ್ಯವಸ್ಥೆಯು ‘ ಕ್ರೀಡೆಯ ಮಹಾಕುಂಭ’ದ ಪರಿಣಾಮವಾಗಿದೆ. ರಾಷ್ಟ್ರೀಯ ಕ್ರೀಡಾಕೂಟವು ಅನೇಕ ವರ್ಷಗಳ ನಂತರ ಇತ್ತೀಚೆಗೆ ಗುಜರಾತ್‌ನಲ್ಲಿ ನಡೆಯಿತು. ಆಟಗಳು ಸಾಕಷ್ಟು ಪ್ರಶಂಸೆಗೆ ಒಳಪಟ್ಟವು. ಕ್ರೀಡಾಪಟುಗಳು ಮತ್ತು ಅವರ ತರಬೇತುದಾರರೊಂದಿಗೆ ನಾನು ಸಂಪರ್ಕದಲ್ಲಿರುವುದರಿಂದ, ಅವರು ಈ ಕೂಟಕ್ಕಾಗಿ  ನನ್ನನ್ನು ಅಭಿನಂದಿಸಿದರು. ನನ್ನನ್ನು ಅಭಿನಂದಿಸಬೇಡಿ ಎಂದು ನಾನು ಅವರಿಗೆ ಹೇಳಿದೆ, ಏಕೆಂದರೆ ಗುಜರಾತ್‌ ಮುಖ್ಯಮಂತ್ರಿ ಮತ್ತು ಗುಜರಾತ್‌ ಸರ್ಕಾರವು ಈ ಎಲ್ಲ ಗೌರವಗಳಿಗೆ ಅರ್ಹವಾಗಿದೆ. ಅವರ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದಾಗಿಯೇ ದೇಶದ ಇಂತಹ ದೊಡ್ಡ ಕ್ರೀಡಾ ಉತ್ಸವವು ಗುಜರಾತ್‌ನಲ್ಲಿ ನಡೆಯಿತು. ಅಂತಾರಾಷ್ಟ್ರೀಯ ಟೂರ್ನಿಗಳಿಗೆ ನೀಡಿದ ಆತಿಥ್ಯ ಮತ್ತು ವ್ಯವಸ್ಥೆಗಳಿಗೆ ಗುಜರಾತ್‌ ಸರಿಸಾಟಿಯಾಗಿದೆ ಎಂದು ಎಲ್ಲಾ ಕ್ರೀಡಾಪಟುಗಳು ಹೇಳಿದರು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ, ಕ್ರೀಡಾ ಜಗತ್ತನ್ನು ಉತ್ತೇಜಿಸುವ ಮೂಲಕ ಮತ್ತು ಉನ್ನತ ಮಾನದಂಡಗಳನ್ನು ಸ್ಥಾಪಿಸುವ ಮೂಲಕ ಗುಜರಾತ್‌ ನಿಜವಾಗಿಯೂ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದೆ. ನಾನು ಗುಜರಾತ್‌ ಸರ್ಕಾರ, ಅದರ ಎಲ್ಲಾ ಅಧಿಕಾರಿಗಳು ಮತ್ತು ಕ್ರೀಡಾ ಪ್ರಪಂಚದ ಎಲ್ಲಾ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,
ಟಿವಿ ಒಂದು ದಶಕದ ಹಿಂದೆ ಗುಜರಾತಿನಲ್ಲಿ15,000 ಶಾಲೆಗಳನ್ನು ತಲುಪಿತ್ತು. ಕಂಪ್ಯೂಟರ್‌ ಅನುದಾನಿತ ಕಲಿಕಾ ಪ್ರಯೋಗಾಲಯಗಳು ಮತ್ತು ಅಂತಹ ಅನೇಕ ವ್ಯವಸ್ಥೆಗಳು ಅನೇಕ ವರ್ಷಗಳ ಹಿಂದೆ ಗುಜರಾತ್‌ನ 20,000 ಕ್ಕೂ ಹೆಚ್ಚು ಶಾಲೆಗಳ ಅವಿಭಾಜ್ಯ ಅಂಗವಾಗಿದ್ದವು. ಇಂದು ಗುಜರಾತ್‌ನಲ್ಲಿ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನಾಲ್ಕು ಲಕ್ಷ  ಶಿಕ್ಷ ಕರು ಆನ್‌ಲೈನ್‌ ಹಾಜರಾತಿ ಹೊಂದಿದ್ದಾರೆ. ಈ ಹೊಸ ಪ್ರಯೋಗಗಳ ಸರಣಿಯ ಭಾಗವಾಗಿ, ಇಂದು ಗುಜರಾತ್‌ನ 20,000 ಶಾಲೆಗಳು ಶಿಕ್ಷಣದ 5 ಜಿ ಯುಗಕ್ಕೆ ಪ್ರವೇಶಿಸಲಿವೆ. ಮಿಷನ್‌ ಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್‌ ಅಡಿಯಲ್ಲಿ, ಈ ಶಾಲೆಗಳಲ್ಲಿ50,000 ಹೊಸ ತರಗತಿ ಕೊಠಡಿಗಳು ಮತ್ತು ಒಂದು ಲಕ್ಷಕ್ಕೂ ಹೆಚ್ಚು ಸ್ಮಾರ್ಟ್‌ ಕ್ಲಾಸ್‌ ರೂಮ್‌ಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಶಾಲೆಗಳು ಆಧುನಿಕ ಡಿಜಿಟಲ್‌ ಮತ್ತು ಭೌತಿಕ ಮೂಲಸೌಕರ್ಯಗಳನ್ನು ಹೊಂದಿರುವುದು ಮಾತ್ರವಲ್ಲದೆ, ಮಕ್ಕಳ ಜೀವನ ಮತ್ತು ಅವರ ಶಿಕ್ಷ ಣದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ. ಇಲ್ಲಿಮಕ್ಕಳ ಸಾಮರ್ಥ್ಯ‌ವನ್ನು ಹೆಚ್ಚಿಸಲು ಪ್ರತಿಯೊಂದು ಅಂಶದ ಮೇಲೆ ಕೆಲಸ ಮಾಡಲಾಗುವುದು. ಅಂದರೆ, ವಿದ್ಯಾರ್ಥಿಯ ಸಾಮರ್ಥ್ಯ‌ ಮತ್ತು ಅವರ ಸುಧಾರಣೆಯ ವ್ಯಾಪ್ತಿಯ ಮೇಲೆ ಗಮನ ಕೇಂದ್ರೀಕರಿಸಲಾಗುವುದು.

ಸ್ನೇಹಿತರೇ,
5 ಜಿ ತಂತ್ರಜ್ಞಾನವು ಕಲಿಕಾ ವ್ಯವಸ್ಥೆಯನ್ನು ತುಂಬಾ ಸುಲಭಗೊಳಿಸಲಿದೆ. 2ಜಿ, 4ಜಿ ಮತ್ತು 5ಜಿಯನ್ನು ಸರಳ ಪದಗಳಲ್ಲಿ ವಿವರಿಸಬೇಕಾದರೆ, 4ಜಿ ಒಂದು ಚಕ್ರವಿದ್ದಂತೆ ಮತ್ತು 5ಜಿ ಒಂದು ವಿಮಾನವಿದ್ದಂತೆ. ಇದೇ ವ್ಯತ್ಯಾಸ. ಹಳ್ಳಿಗಳ ಭಾಷೆಯಲ್ಲಿ ನಾನು ತಂತ್ರಜ್ಞಾನವನ್ನು ವಿವರಿಸಬೇಕಾದರೆ ನಾನು ಈ ರೀತಿ ವಿವರಿಸುತ್ತೇನೆ. 4ಜಿ ಎಂದರೆ ಸೈಕಲ್‌ ಮತ್ತು 5ಜಿ ಎಂದರೆ ನೀವು ವಿಮಾನವನ್ನು ಹೊಂದಿದ್ದೀರಿ ಎಂದರ್ಥ. ಅದು ಹೊಂದಿರುವ ಶಕ್ತಿ ಅದು.

ಗುಜರಾತ್‌ 5ಜಿ ಶಕ್ತಿಯನ್ನು ಅರಿತುಕೊಂಡಿದೆ ಮತ್ತು ಆಧುನಿಕ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸುತ್ತಿದೆ, ಇದು ಗುಜರಾತ್‌ನ ಅದೃಷ್ಟವನ್ನು ಬದಲಾಯಿಸುತ್ತದೆ ಮತ್ತು ಇದು ಪ್ರತಿ ಮಗುವಿಗೆ ಅವನ ಅಗತ್ಯಗಳಿಗೆ ಅನುಗುಣವಾಗಿ ಕಲಿಯುವ ಅವಕಾಶವನ್ನು ನೀಡುತ್ತದೆ. ಇದು ವಿಶೇಷವಾಗಿ ದೂರದ ಹಳ್ಳಿಗಳಲ್ಲಿನ ಶಾಲೆಗಳ ಶಿಕ್ಷಣಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. ಈ ಸೇವೆಯ ಮೂಲಕ ಅತ್ಯುತ್ತಮ ಶಿಕ್ಷಕರು ದೂರದ ಪ್ರದೇಶಗಳಲ್ಲಿ ಲಭ್ಯವಿರುತ್ತಾರೆ. ಅತ್ಯುತ್ತಮ ಶಿಕ್ಷ ಕರು ಸಾವಿರಾರು ಕಿಲೋಮೀಟರ್‌ ದೂರದಲ್ಲಿರುತ್ತಾರೆ, ಆದರೆ ಅವರು ತರಗತಿಯಲ್ಲಿಇದ್ದಾರೆ ಎಂದು ಬಿಂಬಿಸುತ್ತದೆ. ಪ್ರತಿಯೊಂದು ವಿಷಯದ ಅತ್ಯುತ್ತಮ ವಿಷಯವು ಎಲ್ಲರಿಗೂ ಲಭ್ಯವಾಗುತ್ತದೆ. ಈಗ ವಿಭಿನ್ನ ಕೌಶಲ್ಯಗಳನ್ನು ಕಲಿಸುವ ಅತ್ಯುತ್ತಮ ಶಿಕ್ಷಕರು ವಿವಿಧ ಹಳ್ಳಿಗಳು ಮತ್ತು ನಗರಗಳಲ್ಲಿ ಮಕ್ಕಳಿಗೆ ವಾಸ್ತವಿಕ ಸಮಯದಲ್ಲಿ ಕಲಿಸಲು ಸಾಧ್ಯವಾಗುತ್ತದೆ. ಇದು ವಿವಿಧ ಶಾಲೆಗಳಲ್ಲಿ ಕಂಡುಬರುವ ಅಂತರವನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಈ ಅತ್ಯಾಧುನಿಕ ಶಾಲೆಗಳು ಅಂಗನವಾಡಿ ಮತ್ತು ಬಾಲ ವಾಟಿಕಾ (ಪೂರ್ವ ಶಿಕ್ಷಣ) ದಿಂದ ವಿದ್ಯಾರ್ಥಿಗಳ ವೃತ್ತಿಜೀವನದ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತವೆ. ಕಲೆಗಳು, ಕರಕುಶಲ ವಸ್ತುಗಳು, ವ್ಯಾಪಾರದಿಂದ ಹಿಡಿದು ಕೋಡಿಂಗ್‌ ಮತ್ತು ರೋಬೊಟಿಕ್ಸ್‌ವರೆಗೆ, ಎಲ್ಲಾ ರೀತಿಯ ಶಿಕ್ಷಣವು ಚಿಕ್ಕ ವಯಸ್ಸಿನಿಂದಲೇ ಇಲ್ಲಿಲಭ್ಯವಿರುತ್ತದೆ. ಅಂದರೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರತಿಯೊಂದು ಅಂಶವನ್ನೂ ಇಲ್ಲಿ ಜಾರಿಗೆ ತರಲಾಗುವುದು.

ಸಹೋದರ ಸಹೋದರಿಯರೇ,
ಇಂದು, ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಇಡೀ ದೇಶದಲ್ಲಿಇದೇ ರೀತಿಯ ಬದಲಾವಣೆಗಳನ್ನು ಪ್ರೋತ್ಸಾಹಿಸುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರವು ದೇಶಾದ್ಯಂತ 14,500 ಕ್ಕೂ ಹೆಚ್ಚು ಪಿಎಂ ಶ್ರೀ ಶಾಲೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಇದನ್ನು ಭಾರತದ ವಿವಿಧ ಭಾಗಗಳಲ್ಲಿ ಪ್ರಾರಂಭಿಸಲಾಗುವುದು. ಇದನ್ನು ಸುಮಾರು ಒಂದು ವರ್ಷದವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಕೆಲವು ನ್ಯೂನತೆಗಳಿದ್ದರೆ ಅಥವಾ ಬದಲಾಗುತ್ತಿರುವ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹೊಸದನ್ನು ಸೇರಿಸುವ ಅಗತ್ಯವಿದ್ದರೆ, ಅದನ್ನು ಮಾಡಲಾಗುತ್ತದೆ. ಭವಿಷ್ಯದಲ್ಲಿಇದನ್ನು ಪರಿಪೂರ್ಣ ಮಾದರಿಯನ್ನಾಗಿ ಮಾಡುವ ಮೂಲಕ ದೇಶದ ಗರಿಷ್ಠ ಸಂಖ್ಯೆಯ ಶಾಲೆಗಳಿಗೆ ಕೊಂಡೊಯ್ಯಲು ಪ್ರಯತ್ನಿಸಲಾಗುವುದು. ಈ ಶಾಲೆಗಳು ದೇಶಾದ್ಯಂತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಮಾದರಿ ಶಾಲೆಗಳಾಗಲಿವೆ.

ಈ ಯೋಜನೆಗಾಗಿ ಕೇಂದ್ರ ಸರ್ಕಾರ 27,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ. ಈ ಶಾಲೆಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿರುತ್ತವೆ, ಇದು ವಿಮರ್ಶಾತ್ಮಕ ಚಿಂತನೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಕ್ಕಳಿಗೆ ತಮ್ಮದೇ ಆದ ಭಾಷೆಯಲ್ಲಿಉತ್ತಮ ಶಿಕ್ಷಣವನ್ನು ಒದಗಿಸುವ ಕಲ್ಪನೆಯನ್ನು ಹೊಂದಿದೆ. ಒಂದು ರೀತಿಯಲ್ಲಿ, ಅವುಗಳು ಉಳಿದ ಶಾಲೆಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತವೆ.

ಸ್ನೇಹಿತರೇ,
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿಗುಲಾಮ ಮನಸ್ಥಿತಿಯನ್ನು ತೊಡೆದುಹಾಕಲು ದೇಶವು ಪ್ರತಿಜ್ಞೆ ಮಾಡಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶವನ್ನು ಗುಲಾಮ ಮನಸ್ಥಿತಿಯಿಂದ ಹೊರತರುವ ಮತ್ತು ಪ್ರತಿಭೆ ಮತ್ತು ನಾವೀನ್ಯವನ್ನು ಪರಿಷ್ಕರಿಸುವ ಪ್ರಯತ್ನವಾಗಿದೆ. ನೋಡಿ, ದೇಶದ ಪರಿಸ್ಥಿತಿ ಹೇಗಿತ್ತು? ಇಂಗ್ಲಿಷ್‌ ಭಾಷೆಯ ಜ್ಞಾನವನ್ನು ಬುದ್ಧಿವಂತಿಕೆಯ ಅಳತೆಗೋಲಾಗಿ ತೆಗೆದುಕೊಳ್ಳಲಾಯಿತು, ಆದರೆ ಭಾಷೆ ಕೇವಲ ಸಂವಹನದ ಮಾಧ್ಯಮವಾಗಿದೆ. ಆದರೆ ಭಾಷೆ ಅದೆಷ್ಟು ದಶಕಗಳಿಂದ ಅಡೆತಡೆಯಾಗಿ ಪರಿಣಮಿಸಿತ್ತೆಂದರೆ, ಹಳ್ಳಿಗಳು ಮತ್ತು ಬಡಕುಟುಂಬಗಳಲ್ಲಿನ ಪ್ರತಿಭೆಗಳ ಸಂಪತ್ತಿನ ಲಾಭವನ್ನು ದೇಶವು ಪಡೆಯಲಾಗಲಿಲ್ಲ. ಅನೇಕ ಪ್ರತಿಭಾವಂತ ಮಕ್ಕಳು ವೈದ್ಯರು ಮತ್ತು ಎಂಜಿನಿಯರ್ ಗಳಾಗಲು ಸಾಧ್ಯವಾಗಲಿಲ್ಲ, ಏಕೆಂದರೆ ಅವರು ಅರ್ಥಮಾಡಿಕೊಂಡ ಭಾಷೆಯಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ಪಡೆಯಲಿಲ್ಲ. ಈಗ ಈ ಪರಿಸ್ಥಿತಿಯನ್ನು ಬದಲಾಯಿಸಲಾಗುತ್ತಿದೆ. ಈಗ ವಿದ್ಯಾರ್ಥಿಗಳು ಭಾರತೀಯ ಭಾಷೆಗಳಲ್ಲಿವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಇತ್ಯಾದಿಗಳನ್ನು ಅಧ್ಯಯನ ಮಾಡುವ ಆಯ್ಕೆಯನ್ನು ಪಡೆಯಲು ಪ್ರಾರಂಭಿಸಿದ್ದಾರೆ.

ತನ್ನ ಮಗುವಿಗೆ ಇಂಗ್ಲಿಷ್‌ ಶಾಲೆಯಲ್ಲಿ ಶಿಕ್ಷಣ ನೀಡಲು ಸಾಧ್ಯವಾಗದ ಬಡ ತಾಯಿಯೂ ಸಹ ಅವನನ್ನು ಅಥವಾ ಅವಳನ್ನು  ವೈದ್ಯರನ್ನಾಗಿ ಮಾಡುವ ಕನಸು ಕಾಣಬಹುದು. ಮಗುವು ತನ್ನ ಮಾತೃಭಾಷೆಯಲ್ಲಿ ವೈದ್ಯರಾಗಬಹುದು. ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ, ಇದರಿಂದ ಬಡವರ ಕುಟುಂಬದಿಂದ ಬಂದ ವ್ಯಕ್ತಿಯೂ ಸಹ ವೈದ್ಯರಾಗಬಹುದು. ಹಲವಾರು ಭಾರತೀಯ ಭಾಷೆಗಳಲ್ಲಿ ಮತ್ತು ಗುಜರಾತಿ ಭಾಷೆಯಲ್ಲಿ ಕೋರ್ಸ್‌ಗಳನ್ನು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರತಿಯೊಬ್ಬರ ಪ್ರಯತ್ನದ ಸಮಯ ಇದು. ದೇಶದಲ್ಲಿಯಾವುದೇ ಕಾರಣಕ್ಕೂ ಯಾರನ್ನೂ ಹೊರಗಿಡಬಾರದು. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸ್ಫೂರ್ತಿಯಾಗಿದೆ ಮತ್ತು ಈ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ.

ಸ್ನೇಹಿತರೇ,
ಪ್ರಾಚೀನ ಕಾಲದಿಂದಲೂ ಶಿಕ್ಷಣವು ಭಾರತದ ಅಭಿವೃದ್ಧಿಯ ಕೇಂದ್ರಬಿಂದುವಾಗಿದೆ. ನಾವು ಸ್ವಭಾವತಃ ಜ್ಞಾನದ ಬೆಂಬಲಿಗರಾಗಿದ್ದೇವೆ. ಆದ್ದರಿಂದ, ನಮ್ಮ ಪೂರ್ವಜರು ಜ್ಞಾನ ಮತ್ತು ವಿಜ್ಞಾನದಲ್ಲಿ ಛಾಪು ಮೂಡಿಸಿದರು, ನೂರಾರು ವರ್ಷಗಳ ಹಿಂದೆ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದರು ಮತ್ತು ಅತಿದೊಡ್ಡ ಗ್ರಂಥಾಲಯಗಳನ್ನು ಸ್ಥಾಪಿಸಿದರು. ಆದಾಗ್ಯೂ, ಆಕ್ರಮಣಕಾರರು ಭಾರತದ ಈ ಸಂಪತ್ತನ್ನು ನಾಶಮಾಡಲು ಅಭಿಯಾನವನ್ನು ಪ್ರಾರಂಭಿಸಿದ ಕಾಲವೊಂದಿತ್ತು. ಆದರೆ ಭಾರತವು ಶಿಕ್ಷಣದ ಬಗ್ಗೆ ತನ್ನ ಬಲವಾದ ಉದ್ದೇಶಗಳನ್ನು ಬಿಟ್ಟುಕೊಡಲಿಲ್ಲ. ಅದು ದೌರ್ಜನ್ಯಗಳನ್ನು ಅನುಭವಿಸಿತು, ಆದರೆ ಅದು ಶಿಕ್ಷಣದ ಮಾರ್ಗವನ್ನು ಬಿಡಲಿಲ್ಲ.

ಈ ಕಾರಣದಿಂದಾಗಿಯೇ ಇಂದಿಗೂ ನಾವು ಜ್ಞಾನ, ವಿಜ್ಞಾನ ಮತ್ತು ನಾವೀನ್ಯದ ಜಗತ್ತಿನಲ್ಲಿ ವಿಭಿನ್ನ ಗುರುತನ್ನು ಹೊಂದಿದ್ದೇವೆ. ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ತನ್ನ ಪ್ರಾಚೀನ ಪ್ರತಿಷ್ಠೆಯನ್ನು ಪುನಃಸ್ಥಾಪಿಸುವ ಅವಕಾಶವಿದೆ. ಭಾರತವು ವಿಶ್ವದ ಅತ್ಯುತ್ತಮ ಜ್ಞಾನ ಆರ್ಥಿಕತೆಯಾಗಲು ಅಪಾರ ಸಾಮರ್ಥ್ಯ‌ವನ್ನು ಹೊಂದಿದೆ ಮತ್ತು ಅವಕಾಶಗಳು ಸಹ ಕಾಯುತ್ತಿವೆ. ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಸಂಬಂಧಿಸಿದ ಹೆಚ್ಚಿನ ಆವಿಷ್ಕಾರಗಳು 21ನೇ ಶತಮಾನದಲ್ಲಿ ಭಾರತದಲ್ಲಿನಡೆಯುತ್ತವೆ. ನನ್ನ ದೇಶದ ಯುವಕರಲ್ಲಿ ನನ್ನ ನಂಬಿಕೆ ಮತ್ತು ನನ್ನ ದೇಶದ ಯುವಕರ ಪ್ರತಿಭೆಯಿಂದಾಗಿ ನಾನು ಇದನ್ನು ಹೇಳಲು ಧೈರ್ಯ ಮಾಡುತ್ತೇನೆ.

ಈ ನಿಟ್ಟಿನಲ್ಲಿ ಗುಜರಾತ್‌ಗೂ ಒಂದು ದೊಡ್ಡ ಅವಕಾಶವಿದೆ. ಇಲ್ಲಿಯವರೆಗೆ ನಾವು ವ್ಯಾಪಾರಿಗಳು ಮತ್ತು ಉದ್ಯಮಿಗಳು ಎಂಬುದು ಗುಜರಾತ್‌ನ ಅಸ್ಮಿತೆಯಾಗಿತ್ತು. ಅವರು ಒಂದು ಸ್ಥಳದಿಂದ ಸರಕುಗಳನ್ನು ಖರೀದಿಸುತ್ತಾರೆ, ಅವುಗಳನ್ನು ಮತ್ತೊಂದು ಸ್ಥಳದಲ್ಲಿ ಮಾರಾಟ ಮಾಡುತ್ತಾರೆ ಮತ್ತು ಬ್ರೋಕರೇಜ್‌ ನಿಂದ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. ಗುಜರಾತ್‌ ಅದರಿಂದ ಹೊರಬಂದಿದೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ನಿಧಾನವಾಗಿ ತನ್ನ ಹೆಸರನ್ನು ಗಳಿಸಲು ಪ್ರಾರಂಭಿಸಿದೆ. ಈಗ ಗುಜರಾತ್‌ 21ನೇ ಶತಮಾನದಲ್ಲಿ ದೇಶದ ಜ್ಞಾನ ಮತ್ತು ಆವಿಷ್ಕಾರದ ಕೇಂದ್ರವಾಗಿ ಬೆಳೆಯುತ್ತಿದೆ . ಗುಜರಾತ್‌ ಸರ್ಕಾರದ ಮಿಷನ್‌ ಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್ ಈ ಮನೋಭಾವವನ್ನು ಬಲಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೇ,
ಇಂದು ಈ ಅತ್ಯಂತ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುಯೋಗ ನನ್ನದಾಗಿದೆ. ಕೇವಲ ಒಂದು ಗಂಟೆಯ ಹಿಂದೆ, ನಾನು ದೇಶದ ಮಿಲಿಟರಿ ಶಕ್ತಿಯ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ್ದೆ ಮತ್ತು ಒಂದು ಗಂಟೆಯ ನಂತರ ಗುಜರಾತ್‌ನಲ್ಲಿ ದೇಶದ ಜ್ಞಾನ ಶಕ್ತಿಯ ಈ ಕಾರ್ಯಕ್ರಮಕ್ಕೆ ಸೇರಲು ನನಗೆ ಅವಕಾಶ ಸಿಕ್ಕಿತು. ಈ ಕಾರ್ಯಕ್ರಮದ ನಂತರ, ನಾನು ಜುನಾಗಢ ಮತ್ತು ರಾಜ್‌ಕೋಟ್‌ಗೆ ಹೋಗುತ್ತಿದ್ದೇನೆ, ಅಲ್ಲಿ ಸಮೃದ್ಧಿಯ ವಿಷಯಗಳು ಮೇಲುಗೈ ಸಾಧಿಸುತ್ತವೆ.

ಸ್ನೇಹಿತರೇ,
ಇಂದು ಈ ಮಹತ್ವದ ಸಂದರ್ಭದಲ್ಲಿನಾನು ಮತ್ತೊಮ್ಮೆ ಗುಜರಾತ್‌ನ ಶಿಕ್ಷಣ ಜಗತ್ತಿಗೆ, ಭವಿಷ್ಯದ ಪೀಳಿಗೆಗೆ ಮತ್ತು ಅವರ ಪೋಷಕರಿಗೆ ಶುಭ ಕೋರುತ್ತೇನೆ. ಭೂಪೇಂದ್ರಭಾಯಿ ಮತ್ತು ಅವರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು!
ಧನ್ಯವಾದಗಳು.

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ  ಮಾಡಲಾಗಿದೆ.

*****


(Release ID: 1870329) Visitor Counter : 123