ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್‌ನ ಗಾಂಧಿನಗರದಲ್ಲಿರುವ ʻಮಹಾತ್ಮಾ ಮಂದಿರ ಸಭಾಂಗಣ ಮತ್ತು ವಸ್ತುಪ್ರದರ್ಶನ ಕೇಂದ್ರʼದಲ್ಲಿ ʻಡಿಫೆನ್ಸ್ ಎಕ್ಸ್‌ಪೋ-22ʼಗೆ ಚಾಲನೆ ನೀಡಿದ ಪ್ರಧಾನಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿದ ʻಎಚ್‌ಟಿಟಿ-40ʼ ಸ್ವದೇಶಿ ತರಬೇತಿ ವಿಮಾನ ಅನಾವರಣಗೊಳಿಸಿದರು
ʻಮಿಷನ್ ಡಿಫೆನ್ಸ್‌ಸ್ಪೇಸ್ʼಗೆ ಪ್ರಧಾನಿಯವರಿಂದ ಚಾಲನೆ
ದೀಸಾ ವಾಯುನೆಲೆಗೆ ಶಂಕುಸ್ಥಾಪನೆ ನೆರವೇರಿಸಿದರು
"ಇದು ಭಾರತೀಯ ಕಂಪನಿಗಳು ಮಾತ್ರ ಭಾಗವಹಿಸುತ್ತಿರುವ ಮೊದಲ ರಕ್ಷಣಾ ಪ್ರದರ್ಶನವಾಗಿದೆ ಮತ್ತು ಇದು ʻಮೇಡ್ ಇನ್ ಇಂಡಿಯಾʼ ಉಪಕರಣಗಳನ್ನು ಮಾತ್ರ ಒಳಗೊಂಡಿದೆ" ಎಂದು ಪ್ರಧಾನಿ ಹೇಳಿದರು.
"ಡಿಫೆನ್ಸ್ ಎಕ್ಸ್‌ಪೋ ಭಾರತದ ಬಗ್ಗೆ ಜಾಗತಿಕ ವಿಶ್ವಾಸದ ಸಂಕೇತವಾಗಿದೆ"
"ಭಾರತ ಮತ್ತು ಆಫ್ರಿಕಾ ನಡುವಿನ ಸಂಬಂಧವು ಗಾಢವಾಗುತ್ತಿದೆ ಮತ್ತು ಹೊಸ ಆಯಾಮಗಳನ್ನು ಸ್ಪರ್ಶಿಸುತ್ತಿದೆ"
"ದೀಸಾದಲ್ಲಿ ಕಾರ್ಯಾಚರಣೆಯ ನೆಲೆಯೊಂದಿಗೆ, ನಮ್ಮ ಪಡೆಗಳ ನಿರೀಕ್ಷೆ ಇಂದು ಈಡೇರುತ್ತಿದೆ"
"ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ವಿವಿಧ ಸವಾಲುಗಳನ್ನು ಮೂರು ಪಡೆಗಳು
ಪರಿಶೀಲಿಸಿವೆ ಮತ್ತು ಗುರುತಿಸಿವೆ"
"ಬಾಹ್ಯಾಕಾಶ ತಂತ್ರಜ್ಞಾನವು ಭಾರತದ ಉದಾರ ಬಾಹ್ಯಾಕಾಶ ರಾಜತಾಂತ್ರಿಕತೆಯ ಹೊಸ ವ್ಯಾಖ್ಯಾನಗಳನ್ನು ರೂಪಿಸುತ್ತಿದೆ"
"ರಕ್ಷಣಾ ಕ್ಷೇತ್ರದಲ್ಲಿ, ನವ ಭಾರತವು ʻಸಂಕಲ್ಪ, ನಾವಿನ್ಯತೆ ಮತ್ತು ಅನುಷ್ಠಾನʼದ ಮಂತ್ರದೊಂದಿಗೆ ಮುಂದುವರಿಯುತ್ತಿದೆ"
"ನಾವು ಮುಂಬರುವ ದಿನಗಳಲ್ಲಿ 5 ಶತಕೋಟಿ ಡಾಲರ್ ಅಂದ
Posted On:
19 OCT 2022 11:53AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾರತ್‌ನ ಗಾಂಧಿನಗರದಲ್ಲಿರುವ ಮಹಾತ್ಮಾ ಮಂದಿರ ಸಭಾಂಗಣ ಮತ್ತು ವಸ್ತುಪ್ರದರ್ಶನ ಕೇಂದ್ರದಲ್ಲಿ ʻಡಿಫೆನ್ಸ್ ಎಕ್ಸ್‌ಪೋ-22ʼʼಗೆ ಚಾಲನೆ ನೀಡಿದರು. ʻಇಂಡಿಯಾ ಪೆವಿಲಿಯನ್ʼನಲ್ಲಿ ಪ್ರಧಾನಮಂತ್ರಿಯವರು ʻಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ʼ ವಿನ್ಯಾಸಗೊಳಿಸಿದ ಸ್ವದೇಶಿ ತರಬೇತಿ ವಿಮಾನ ʻಎಚ್‌ಟಿಟಿ-40ʼ ಅನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ʻಮಿಷನ್ ಡೆಫೆನ್ಸ್ ಸ್ಪೇಸ್ʼಗೆ ಚಾಲನೆ ನೀಡಿದರು ಮತ್ತು ಗುಜರಾತ್‌ನಲ್ಲಿ ದೀಸಾ ವಾಯುನೆಲೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ಪ್ರಧಾನಿಯಾಗಿ ಹಾಗೂ ಗುಜರಾತಿನ ಮಗನಾಗಿ ಸಮರ್ಥ ಮತ್ತು ಆತ್ಮನಿರ್ಭರ ಭಾರತದ ಕಾರ್ಯಕ್ರಮಕ್ಕೆ ಪ್ರತಿನಿಧಿಗಳನ್ನು ಸ್ವಾಗತಿಸಿದರು.
ʻಡಿಫೆನ್ಸ್ ಎಕ್ಸ್‌ಪೋ 2022ʼರ ಆಯೋಜನೆ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ʻʻಇದು ನವ ಭಾರತದ ಮತ್ತು ಅದರ ಸಾಮರ್ಥ್ಯಗಳ ಚಿತ್ರಣವನ್ನು ಒದಗಿಸುತ್ತದೆ. ʻಅಮೃತ ಕಾಲʼದ ಸಮಯದಲ್ಲಿ ನವ ಭಾರತದ ಸಂಕಲ್ಪವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು. ಇದು ದೇಶದ ಅಭಿವೃದ್ಧಿ ಮತ್ತು ರಾಜ್ಯಗಳ ಸಹಕಾರದ ಸಂಯೋಜನೆಯಾಗಿದೆ ಎಂದು ಸಹ ಅವರು ಉದ್ಗರಿಸಿದರು. "ಇದು ಯುವಕರ ಶಕ್ತಿ ಮತ್ತು ಕನಸುಗಳನ್ನು ಹೊಂದಿದೆ, ಇದು ಯುವಕರ ಸಂಕಲ್ಪ ಮತ್ತು ಸಾಮರ್ಥ್ಯಗಳನ್ನು ಹೊಂದಿದೆ. ಇದು ವಿಶ್ವದ ಬಗ್ಗೆ ಭರವಸೆಗಳನ್ನು ಮತ್ತು ಸ್ನೇಹಪರ ರಾಷ್ಟ್ರಗಳಿಗೆ ಹೊಸ ಅವಕಾಶಗಳನ್ನು ಹೊಂದಿದೆ" ಎಂದು ಪ್ರಧಾನಿ ಹೇಳಿದರು.
ʻಡೆಫೆನ್ಸ್ ಎಕ್ಸ್‌ಪೋʼದ ಈ ಆವೃತ್ತಿಯ ಅನನ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, "ಇದು ಭಾರತೀಯ ಕಂಪನಿಗಳು ಮಾತ್ರ ಭಾಗವಹಿಸುತ್ತಿರುವ ಮೊದಲ ರಕ್ಷಣಾ ಪ್ರದರ್ಶನವಾಗಿದೆ ಮತ್ತು ಇದು ʻಮೇಡ್ ಇನ್ ಇಂಡಿಯಾʼ ಉಪಕರಣಗಳನ್ನು ಮಾತ್ರ ಒಳಗೊಂಡಿದೆ" ಎಂದು ಹೇಳಿದರು. "ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ನೆಲದಿಂದ ನಾವು ಭಾರತದ ಸಾಮರ್ಥ್ಯವನ್ನು ವಿಶ್ವದ ಮುಂದೆ ಮಾದರಿಯಾಗಿ ಇಡುತ್ತಿದ್ದೇವೆ. ಈ ರಕ್ಷಣಾ ವಸ್ತುಪ್ರದರ್ಶನದಲ್ಲಿ 1300ಕ್ಕೂ ಹೆಚ್ಚು ಪ್ರದರ್ಶಕರು ಇದ್ದಾರೆ. ಇದರಲ್ಲಿ ಭಾರತ ರಕ್ಷಣಾ ಉದ್ಯಮ, ಭಾರತೀಯ ರಕ್ಷಣಾ ಉದ್ಯಮಕ್ಕೆ ಸಂಬಂಧಿಸಿದ ಕೆಲವು ಜಂಟಿ ಉದ್ಯಮಗಳು, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಂಎಸ್ಎಂಇ) ಹಾಗೂ 100ಕ್ಕೂ ಹೆಚ್ಚು ನವೋದ್ಯಮಗಳು ಸೇರಿವೆ. ಇದು ಒಂದೇ ಚೌಕಟ್ಟಿನಲ್ಲಿ ಭಾರತದ ಸಾಮರ್ಥ್ಯ ಮತ್ತು ಸಾಧ್ಯತೆಗಳ ಕುರಿತಾಗಿ ಒಂದು ಇಣುಕುನೋಟವನ್ನು ಒದಗಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇದೇ ಮೊದಲ ಬಾರಿಗೆ 400ಕ್ಕೂ ಹೆಚ್ಚು ಒಡಂಬಡಿಕೆಗಳಿಗೆ ಸಹಿ ಹಾಕಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ವಿವಿಧ ದೇಶಗಳ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ತನ್ನ ಕನಸುಗಳಿಗೆ ರೂಪುರೇಷೆ ನೀಡುತ್ತಿರುವಾಗ, ಆಫ್ರಿಕಾದ 53 ಮಿತ್ರ ರಾಷ್ಟ್ರಗಳು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡನೇ ಭಾರತ-ಆಫ್ರಿಕಾ ರಕ್ಷಣಾ ಸಂವಾದವೂ ನಡೆಯಲಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. "ಭಾರತ ಮತ್ತು ಆಫ್ರಿಕಾದ ನಡುವಿನ ಈ ಸಂಬಂಧವು ಸುದೀರ್ಘ ಕಾಲದ ನಂಬಿಕೆಯನ್ನು ಆಧರಿಸಿದೆ, ಅದು ಸಮಯ ಕಳೆದಂತೆ ಹೊಸ ಆಯಾಮಗಳನ್ನು ಸ್ಪರ್ಶಿಸುತ್ತಿದೆ ಮತ್ತು ಮತ್ತಷ್ಟು ಗಾಢವಾಗುತ್ತಿದೆ," ಎಂದು ಪ್ರಧಾನಿ ಹೇಳಿದರು. ಆಫ್ರಿಕಾ ಮತ್ತು ಗುಜರಾತ್ ನಡುವಿನ ಹಳೆಯ ಬಾಂಧವ್ಯದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಆಫ್ರಿಕಾದ ಮೊದಲ ರೈಲು ಮಾರ್ಗಗಳು ನಿರ್ಮಾಣ ಕಾರ್ಯದಲ್ಲಿ ಕಛ್ ಜನರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದ್ದವು ಎಂಬುದನ್ನು ಸ್ಮರಿಸಿದರು. ಆಫ್ರಿಕಾದ ದೈನಂದಿನ ಜೀವನದಲ್ಲಿ ಬಳಸುವ ಅನೇಕ ಪದಗಳು ಆಫ್ರಿಕಾದ ಗುಜರಾತಿ ಸಮುದಾಯದ ಮೂಲದಿಂದ ಬಂದಂಥವು. "ಮಹಾತ್ಮಾ ಗಾಂಧಿ ಅವರಂತಹ ಜಾಗತಿಕ ನಾಯಕನಿಗೆ ಸಹ, ಗುಜರಾತ್ ಅವರ ಜನ್ಮಸ್ಥಳವಾಗಿದ್ದರೆ, ಆಫ್ರಿಕಾ ಅವರ ಮೊದಲ 'ಕರ್ಮಭೂಮಿ'ಯಾಗಿತ್ತು. ಆಫ್ರಿಕಾದ ಬಗೆಗಿನ ಈ ಒಲವು ಭಾರತದ ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ. ಕರೋನಾ ಅವಧಿಯಲ್ಲಿ, ಇಡೀ ಜಗತ್ತು ಲಸಿಕೆಯ ಬಗ್ಗೆ ಚಿಂತಾಕ್ರಾಂತವಾಗಿದ್ದಾಗ, ಭಾರತವು ಆಫ್ರಿಕಾದ ನಮ್ಮ ಮಿತ್ರ ದೇಶಗಳಿಗೆ ಆದ್ಯತೆ ನೀಡಿ ಲಸಿಕೆಯನ್ನು ವಿತರಿಸಿತು", ಎಂದು ಅವರು ಹೇಳಿದರು.
ʻಎಕ್ಸ್‌ಪೋʼ ಸಂದರ್ಭದಲ್ಲಿ ʻ2ನೇ ಹಿಂದೂ ಮಹಾಸಾಗರ ಪ್ರದೇಶ+(ಐಒಆರ್+) ಸಮಾವೇಶʼ ನಡೆಯಲಿದೆ. ಇದು ʻಐಒಆರ್+ʼ ರಾಷ್ಟ್ರಗಳ ನಡುವೆ ಶಾಂತಿ, ಬೆಳವಣಿಗೆ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಕ್ಷಣಾ ಸಹಕಾರವನ್ನು ಪ್ರೋತ್ಸಾಹಿಸಲು ಸಮಗ್ರ ಸಂವಾದಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಆ ಮೂಲಕ ʻಈ ವಲಯದಲ್ಲಿರುವ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿʼ(ಸಾಗರ್) ಎಂಬ ಪ್ರಧಾನ ಮಂತ್ರಿಯವರ ಆಶಯವನ್ನು ಈ ಸಮಾವೇಶ ಎತ್ತಿ ಹಿಡಿಯಲಿದೆ. "ಇಂದು, ಅಂತರರಾಷ್ಟ್ರೀಯ ಭದ್ರತೆಯಿಂದ ಹಿಡಿದು ಜಾಗತಿಕ ವ್ಯಾಪಾರದವರೆಗೆ, ಸಾಗರ ಭದ್ರತೆಯು ಜಾಗತಿಕ ಆದ್ಯತೆಯಾಗಿ ಹೊರಹೊಮ್ಮಿದೆ. ಜಾಗತೀಕರಣದ ಯುಗದಲ್ಲಿ ವ್ಯಾಪಾರಿ ನೌಕಾದಳದ ಪಾತ್ರವೂ ವಿಸ್ತರಿಸಿದೆ,ʼʼ ಎಂದು ಪ್ರಧಾನಿ ಹೇಳಿದರು. ಮಾತು ಮುಂದುವರಿಸಿದ ಅವರು, "ಭಾರತದಿಂದ ವಿಶ್ವದ ನಿರೀಕ್ಷೆಗಳು ಹೆಚ್ಚಿವೆ, ಮತ್ತು ಭಾರತವು ಅವುಗಳನ್ನು ಪೂರೈಸುತ್ತದೆ ಎಂದು ನಾನು ವಿಶ್ವ ಸಮುದಾಯಕ್ಕೆ ಭರವಸೆ ನೀಡುತ್ತೇನೆ. ಆದ್ದರಿಂದ, ಈ ರಕ್ಷಣಾ ವಸ್ತು ಪ್ರದರ್ಶನವು ಭಾರತದ ಬಗ್ಗೆ ಜಾಗತಿಕ ನಂಬಿಕೆಯ ಸಂಕೇತವಾಗಿದೆ," ಎಂದು ಅವರು ಹೇಳಿದರು.
ಅಭಿವೃದ್ಧಿ ಮತ್ತು ಔದ್ಯಮಿಕ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ಗುಜರಾತ್‌ನ ಅಸ್ಮಿತೆಯನ್ನು ಪ್ರಧಾನಮಂತ್ರಿಯವರು ಗುರುತಿಸದರು. "ಈ ʻಡಿಫೆನ್ಸ್ ಎಕ್ಸ್‌ಪೋʼ ಈ ಅಸ್ಮಿತೆಗೆ ಹೊಸ ಎತ್ತರವನ್ನು ಒದಗಿಸುತ್ತಿದೆ," ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಗುಜರಾತ್ ರಕ್ಷಣಾ ಉದ್ಯಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಗುಜರಾತ್ ನಲ್ಲಿ ದೀಸಾ ವಾಯುನೆಲೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿಯವರು, ಈ ಮುಂಚೂಣಿ ವಾಯುಪಡೆ ನೆಲೆಯು ದೇಶದ ಭದ್ರತಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಗಡಿಯೊಂದಿಗಿನ ದೀಸಾ ವಾಯುನೆಲೆಯ ಸಾಮೀಪ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈಗ ಪಶ್ಚಿಮದ ಗಡಿಗಳಲ್ಲಿನ ಯಾವುದೇ ದುಸ್ಸಾಹಸಕ್ಕೆ ಪ್ರತಿಕ್ರಿಯಿಸಲು ಭಾರತ ಉತ್ತಮ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಹೇಳಿದರು. "ಅಧಿಕಾರಕ್ಕೆ ಬಂದ ನಂತರ, ನಾವು ದೀಸಾದಲ್ಲಿ ಕಾರ್ಯಾಚರಣೆಯ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಿದ್ದೆವು ಮತ್ತು ನಮ್ಮ ಪಡೆಗಳ ಈ ನಿರೀಕ್ಷೆಯನ್ನು ಇಂದು ಪೂರೈಸಲಾಗುತ್ತಿದೆ. ಈ ಪ್ರದೇಶವು ಈಗ ದೇಶದ ಭದ್ರತೆಯ ಪರಿಣಾಮಕಾರಿ ಕೇಂದ್ರವಾಗಲಿದೆ", ಎಂದು ಶ್ರೀ ಮೋದಿ ಹೇಳಿದರು.
"ಭವಿಷ್ಯದಲ್ಲಿ ಯಾವುದೇ ಪ್ರಬಲ ರಾಷ್ಟ್ರದ ಪಾಲಿಗೆ ಭದ್ರತೆ ಎಂದರೆ ಏನು ಎಂಬುದಕ್ಕೆ ಬಾಹ್ಯಾಕಾಶ ತಂತ್ರಜ್ಞಾನವು ಒಂದು ಉದಾಹರಣೆಯಾಗಿದೆ. ಈ ಕ್ಷೇತ್ರದಲ್ಲಿನ ವಿವಿಧ ಸವಾಲುಗಳನ್ನು ಮೂರೂ ಪಡೆಗಳು ಪರಿಶೀಲಿಸಿವೆ ಮತ್ತು ಗುರುತಿಸಿವೆ. ಅವುಗಳನ್ನು ಪರಿಹರಿಸಲು ನಾವು ವೇಗವಾಗಿ ಕೆಲಸ ಮಾಡಬೇಕು," ಎಂದು ಅವರು ಕರೆ ನೀಡಿದರು. "ಮಿಷನ್ ಡಿಫೆನ್ಸ್ ಸ್ಪೇಸ್" ಉಪಕ್ರಮವು ಕೇವಲ ಆವಿಷ್ಕಾರವನ್ನು ಉತ್ತೇಜಿಸುವುದು ಮತ್ತು ನಮ್ಮ ಪಡೆಗಳನ್ನು ಬಲಪಡಿಸುವುದು ಮಾತ್ರವಲ್ಲದೆ ಹೊಸ ಮತ್ತು ನವೀನ ಪರಿಹಾರಗಳನ್ನು ಸಹ ಒದಗಿಸುತ್ತದೆ ಎಂದು ಅವರು ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನವು ಭಾರತದ ಉದಾರ ಬಾಹ್ಯಾಕಾಶ ರಾಜತಾಂತ್ರಿಕತೆಯ ಹೊಸ ವ್ಯಾಖ್ಯಾನಗಳನ್ನು ರೂಪಿಸುತ್ತಿದ್ದು, ಹೊಸ ಸಾಧ್ಯತೆಗಳಿಗೆ ನಾಂದಿ ಹಾಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಅನೇಕ ಆಫ್ರಿಕನ್ ದೇಶಗಳು ಮತ್ತು ಇತರ ಅನೇಕ ಸಣ್ಣ ದೇಶಗಳು ಇದರಿಂದ ಪ್ರಯೋಜನ ಪಡೆಯುತ್ತಿವೆ," ಎಂದು ಅವರು ಹೇಳಿದರು. 60ಕ್ಕೂ ಹೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳಿದ್ದು, ಅವುಗಳೊಂದಿಗೆ ಭಾರತವು ತನ್ನ ಬಾಹ್ಯಾಕಾಶ ವಿಜ್ಞಾನವನ್ನು ಹಂಚಿಕೊಳ್ಳುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ದಕ್ಷಿಣ ಏಷ್ಯಾದ ಉಪಗ್ರಹವು ಇದಕ್ಕೆ ಪರಿಣಾಮಕಾರಿ ಉದಾಹರಣೆಯಾಗಿದೆ. ಮುಂದಿನ ವರ್ಷದ ವೇಳೆಗೆ, ಹತ್ತು ʻಆಸಿಯಾನ್ʼ ದೇಶಗಳು ಭಾರತದ ಉಪಗ್ರಹ ದತ್ತಾಂಶಕ್ಕೆ ನೈಜ ಸಮಯದ ಪ್ರವೇಶವನ್ನು ಪಡೆಯಲಿವೆ. ಯುರೋಪ್ ಮತ್ತು ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳು ಸಹ ನಮ್ಮ ಉಪಗ್ರಹ ದತ್ತಾಂಶವನ್ನು ಬಳಸುತ್ತಿವೆ", ಎಂದು ಅವರು ಹೇಳಿದರು.
ರಕ್ಷಣಾ ಕ್ಷೇತ್ರದಲ್ಲಿ, ನವ ಭಾರತವು ʻಉದ್ದೇಶ, ನಾವಿನ್ಯತೆ ಮತ್ತು ಅನುಷ್ಠಾನʼದ ಮಂತ್ರದೊಂದಿಗೆ ಮುಂದುವರಿಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 8 ವರ್ಷಗಳ ಹಿಂದಿನವರೆಗೆ, ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಆಮದುದಾರ ಎಂದು ಗುರುತಿಸಲ್ಪಟ್ಟಿತ್ತು. ಆದರೆ ʻನವ ಭಾರತʼವು ಸಂಕಲ್ಪವನ್ನು ತೊಟ್ಟಿತು, ಇಚ್ಛಾಶಕ್ತಿಯನ್ನು ಪ್ರದರ್ಶಿಸಿತು ಮತ್ತು 'ಮೇಕ್ ಇನ್ ಇಂಡಿಯಾ' ಎಂಬುದು ಇಂದು ರಕ್ಷಣಾ ವಲಯದಲ್ಲಿ ಯಶೋಗಾಥೆಯಾಗುತ್ತಿದೆ ಎಂದರು. "ಕಳೆದ 5 ವರ್ಷಗಳಲ್ಲಿ ನಮ್ಮ ರಕ್ಷಣಾ ರಫ್ತು 8 ಪಟ್ಟು ಹೆಚ್ಚಾಗಿದೆ. ನಾವು ವಿಶ್ವದ 75ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ರಫ್ತು ಮಾಡುತ್ತಿದ್ದೇವೆ. 2021-22ರಲ್ಲಿ ಭಾರತದಿಂದ ರಕ್ಷಣಾ ರಫ್ತು 1.59 ಶತಕೋಟಿ ಡಾಲರ್ ಅಂದರೆ ಸುಮಾರು 13 ಸಾವಿರ ಕೋಟಿ ರೂ.ಗಳನ್ನು ತಲುಪಿದೆ. ಮತ್ತು ಮುಂಬರುವ ದಿನಗಳಲ್ಲಿ, ನಾವು ಈ ಪ್ರಮಾಣವನ್ನು 5 ಶತಕೋಟಿ ಡಾಲರ್ ಅಂದರೆ 40 ಸಾವಿರ ಕೋಟಿ ರೂಪಾಯಿಗಳಿಗೆ ತಲುಪಿಸುವ ಗುರಿಯನ್ನು ಹೊಂದಿದ್ದೇವೆ," ಎಂದು ಅವರು ಮಾಹಿತಿ ನೀಡಿದರು.
ವಿಶ್ವವು ಇಂದು ಭಾರತದ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಭಾರತದ ಸೇನಾಪಡೆಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಭಾರತೀಯ ನೌಕಾಪಡೆಯು ʻಐಎನ್ಎಸ್-ವಿಕ್ರಾಂತ್ʼನಂತಹ ಅತ್ಯಾಧುನಿಕ ವಿಮಾನ ವಾಹಕ ನೌಕೆಗಳನ್ನು ತನ್ನ ಸೇವೆಗೆ ಸೇರ್ಪಡೆಗೊಳಿಸಿದೆ. ಈ ಎಂಜಿನಿಯರಿಂಗ್ ದೈತ್ಯ ಮತ್ತು ಬೃಹತ್ ಮೇರು ಹಡಗನ್ನು ʻಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ʼ ದೇಶೀಯ ತಂತ್ರಜ್ಞಾನದೊಂದಿಗೆ ತಯಾರಿಸಿದೆ. ಭಾರತೀಯ ವಾಯುಪಡೆಯ 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ʻಪ್ರಚಂಡʼ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಸೇವೆಗೆ ಸೇರ್ಪಡೆ ಮಾಡಿರುವುದು ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ವಿಶ್ಲೇಷಿಸಿದರು.
ಭಾರತದ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿಸಲು ಕೈಗೊಂಡ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ದೇಶೀಯವಾಗಿ ಮಾತ್ರ ಖರೀದಿಸಲಾಗುವ ಉಪಕರಣಗಳ ಎರಡು ಪಟ್ಟಿಗಳನ್ನು ಸೇನಾಪಡೆಗಳು ಅಂತಿಮಗೊಳಿಸಿವೆ ಎಂದು ಒತ್ತಿ ಹೇಳಿದರು. 101 ಉತ್ಪನ್ನಗಳನ್ನು ಒಳಗೊಂಡ ಆ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಈ ನಿರ್ಧಾರಗಳು ಸ್ವಾವಲಂಬಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಆ ಪಟ್ಟಿಯ ಬಿಡುಗಡೆಯ ನಂತರ, ರಕ್ಷಣಾ ವಲಯದಲ್ಲಿ "ಮೇಕ್ ಇನ್ ಇಂಡಿಯಾ" ಅಡಿಯಲ್ಲಿ ಮಾತ್ರ ಖರೀದಿಸಲಾಗುವ ಒಟ್ಟು ಉಪಕರಣಗಳು ಮತ್ತು ಸಲಕರಣೆಗಳ ಸಂಖ್ಯೆ 411ಕ್ಕೆ ತಲುಪಲಿದೆ. ಇಂತಹ ಬೃಹತ್ ಬಜೆಟ್ ಭಾರತೀಯ ಕಂಪನಿಗಳ ಅಡಿಪಾಯವನ್ನು ಬಲಪಡಿಸುತ್ತದೆ ಮತ್ತು ಅವುಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಇದರಿಂದ ರಾಷ್ಟ್ರದ ಯುವಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಕ್ಷಣಾ ಸಲಕರಣೆಗಳ ಪೂರೈಕೆ ಕ್ಷೇತ್ರದಲ್ಲಿ ಕೆಲವು ಕಂಪನಿಗಳು ಸೃಷ್ಟಿಸಿರುವ ಏಕಸ್ವಾಮ್ಯವನ್ನು ಬದಲಾಯಿಸಲು ವಿಶ್ವಾಸಾರ್ಹ ಆಯ್ಕೆಗಳು ಈಗ ಅಗಾಧ ಸಂಖ್ಯೆಯಲ್ಲಿ ಬೆಳೆಯುತ್ತಿವೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. "ರಕ್ಷಣಾ ಉದ್ಯಮದಲ್ಲಿನ ಈ ಏಕಸ್ವಾಮ್ಯವನ್ನು ಮುರಿಯುವ ಶಕ್ತಿಯನ್ನು ಭಾರತದ ಯುವಕರು ತೋರಿಸಿದ್ದಾರೆ ಮತ್ತು ನಮ್ಮ ಯುವಕರ ಈ ಪ್ರಯತ್ನವು ಜಾಗತಿಕ ಒಳಿತಿಗಾಗಿ," ಎಂದು ಶ್ರೀ ಮೋದಿ ಹೇಳಿದರು. ಸಂಪನ್ಮೂಲಗಳ ಕೊರತೆಯಿಂದಾಗಿ ತಮ್ಮ ಸುರಕ್ಷತೆಯಲ್ಲಿ ಹಿಂದೆ ಉಳಿದಿರುವ ವಿಶ್ವದ ಸಣ್ಣ ದೇಶಗಳು ಈಗ ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತವೆ ಎಂದು ಅವರು ಒತ್ತಿ ಹೇಳಿದರು.
"ಭಾರತವು ರಕ್ಷಣಾ ವಲಯವನ್ನು ಅನಂತ ಅವಕಾಶಗಳ ಆಗರವಾಗಿ, ಸಕಾರಾತ್ಮಕ ಸಾಧ್ಯತೆಗಳಾಗಿ ನೋಡುತ್ತದೆ," ಎಂದು ಪ್ರಧಾನಿ ಒತ್ತಿ ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿನ ಹೂಡಿಕೆಯ ಅವಕಾಶಗಳ ಬಗ್ಗೆ ಮಾತನಾಡಿದ ಅವರು, ಭಾರತವು ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಎರಡು ರಕ್ಷಣಾ ಕಾರಿಡಾರ್‌ಗಳನ್ನು ನಿರ್ಮಿಸುತ್ತಿದೆ ಮತ್ತು ವಿಶ್ವದ ಅನೇಕ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿವೆ ಎಂದು ಮಾಹಿತಿ ನೀಡಿದರು. ಈ ವಲಯದಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (ʻಎಂಎಸ್ಎಂಇ) ಶಕ್ತಿಯನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಜೊತೆಗೆ ಈ ಹೂಡಿಕೆಯ ಹಿಂದೆ ಪೂರೈಕೆ ಸರಪಳಿಗಳ ದೊಡ್ಡ ಜಾಲವನ್ನು ಸೃಷ್ಟಿಸುವುದರಿಂದ ಈ ದೊಡ್ಡ ಕಂಪನಿಗಳನ್ನು ನಮ್ಮ ʻಎಂಎಸ್ಎಂಇʼಗಳು ಬೆಂಬಲಿಸುತ್ತವೆ ಎಂದು ಮಾಹಿತಿ ನೀಡಿದರು. "ಈ ವಲಯದಲ್ಲಿ ಈ ಪ್ರಮಾಣದ ಹೂಡಿಕೆಯು ಈ ಹಿಂದೆ ಯೋಚನೆಯನ್ನೂ ಮಾಡದಂತಹ ಕ್ಷೇತ್ರಗಳಲ್ಲಿ ಯುವಕರಿಗೆ ಭಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ," ಎಂದು ಪ್ರಧಾನಿ ಹೇಳಿದರು.
ಭವಿಷ್ಯದ ಭಾರತವನ್ನು ಗಮನದಲ್ಲಿರಿಸಿಕೊಂಡು ಈ ಅವಕಾಶಗಳಿಗೆ ರೂಪವನ್ನು ನೀಡುವಂತೆ ʻಡಿಫೆನ್ಸ್ ಎಕ್ಸ್‌ಪೋʼದಲ್ಲಿ ಉಪಸ್ಥಿತವಾಗಿದ್ದ ಎಲ್ಲ ಕಂಪನಿಗಳಿಗೆ ಪ್ರಧಾನಮಂತ್ರಿಯವರು ಕರೆ ನೀಡಿದರು. "ನೀವು ಆವಿಷ್ಕಾರ ಮಾಡಿ, ವಿಶ್ವದ ಅತ್ಯುತ್ತಮ ರಾಷ್ಟ್ರವಾಗಲು ಸಂಕಲ್ಪ ಮಾಡಿ ಮತ್ತು ಬಲವಾದ ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಆಕಾರವನ್ನು ನೀಡಿ. ನಾನು ಸದಾ ನಿಮ್ಮ ಬೆಂಬಲಕ್ಕಿರುತ್ತೇನೆ,ʼʼ ಎಂದು ಆಶ್ವಾಸನೆ ನೀಡುವ ಮೂಲಕ ಪ್ರಧಾನಿ ಮಾತು ಮುಗಿಸಿದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ತ್ರಿವಳಿ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಭೂಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್.ಚೌಧರಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಭಾರತ ಸರಕಾರದ ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ʻಡಿಫೆನ್ಸ್ ಎಕ್ಸ್‌ಪೋ-22ʼಗೆ ಚಾಲನೆ ನೀಡಿದರು. 'ಹೆಮ್ಮೆಯ ಹಾದಿ' ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿರುವ ಈ ರಕ್ಷಣಾ ವಸ್ತು ಪ್ರದರ್ಶನವು, ಇದುವರೆಗೂ ನಡೆದ ಭಾರತೀಯ ರಕ್ಷಣಾ ವಸ್ತು ಪ್ರದರ್ಶನಗಳಲ್ಲೇ ಅತಿಹೆಚ್ಚು ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ, ವಿದೇಶಿ ಮೂಲ ಸಲಕರಣೆ ತಯಾರಕರ (ಒಇಎಂ) ಭಾರತೀಯ ಅಂಗಸಂಸ್ಥೆಗಳು, ಭಾರತದಲ್ಲಿ ನೋಂದಾಯಿತ ಕಂಪನಿಯ ವಿಭಾಗ, ಭಾರತೀಯ ಕಂಪನಿಯೊಂದಿಗೆ ಜಂಟಿ ಉದ್ಯಮವನ್ನು ಹೊಂದಿರುವ ಪ್ರದರ್ಶಕರು ಸೇರಿದಂತೆ ಭಾರತೀಯ ಕಂಪನಿಗಳಿಗಾಗಿ ಪ್ರತ್ಯೇಕವಾಗಿ ನಡೆಯುವ ರಕ್ಷಣಾ ಪ್ರದರ್ಶನಕ್ಕೆ ಇದು ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮವು ಭಾರತೀಯ ರಕ್ಷಣಾ ಉತ್ಪಾದನಾ ಪರಾಕ್ರಮದ ವಿಸ್ತಾರವಾದ ವ್ಯಾಪ್ತಿ ಮತ್ತು ಪ್ರಮಾಣವನ್ನು ಪ್ರದರ್ಶಿಸುತ್ತದೆ. ಈ ವಸ್ತು ಪ್ರದರ್ಶನದಲ್ಲಿ ʻಇಂಡಿಯಾ ಪೆವಿಲಿಯನ್ʼ ಮತ್ತು ಹತ್ತು ʻರಾಜ್ಯ ಪೆವಿಲಿಯನ್ʼಗಳು ಇರಲಿವೆ. ʻಇಂಡಿಯಾ ಪೆವಿಲಿಯನ್ʼನಲ್ಲಿ ಪ್ರಧಾನಮಂತ್ರಿಯವರು ʻಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ʼ (ಎಚ್‌ಎಎಲ್) ವಿನ್ಯಾಸಗೊಳಿಸಿದ ಸ್ವದೇಶಿ ತರಬೇತಿ ವಿಮಾನ ʻಎಚ್‌ಟಿಟಿ-40ʼ ಅನ್ನು ಅನಾವರಣಗೊಳಿಸಿದರು. ವಿಮಾನವು ಅತ್ಯಾಧುನಿಕ ಸಮಕಾಲೀನ ವ್ಯವಸ್ಥೆಗಳನ್ನು ಹೊಂದಿದೆ ಮತ್ತು ಪೈಲಟ್-ಸ್ನೇಹಿ ವೈಶಿಷ್ಟ್ಯಗಳೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಯಕ್ರಮದ ವೇಳೆ, ಪ್ರಧಾನಮಂತ್ರಿಯವರು ಉದ್ಯಮ ಮತ್ತು ನವೋದ್ಯಮಗಳ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ರಕ್ಷಣಾ ಪಡೆಗಳಿಗೆ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದ ʻಮಿಷನ್ ಡೆಫೆನ್ಸ್ ಸ್ಪೇಸ್ʼಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಗುಜರಾತ್‌ನಲ್ಲಿ ದೀಸಾ ವಾಯುನೆಲೆಗೂ ಶಂಕುಸ್ಥಾಪನೆ ನೆರವೇರಿಸಿದರು. ಈ ಮುಂಚೂಣೆ ವಾಯುನೆಲೆಯು ದೇಶದ ಭದ್ರತಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ.
'ಭಾರತ-ಆಫ್ರಿಕಾ: ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಸಮನ್ವಯಗೊಳಿಸಲು ಕಾರ್ಯತಂತ್ರದ ಅಳವಡಿಕೆʼ ಎಂಬ ವಿಷಯದ ಅಡಿಯಲ್ಲಿ 2ನೇ ʻಭಾರತ-ಆಫ್ರಿಕಾ ರಕ್ಷಣಾ ಸಂವಾದʼಕ್ಕೆ ಈ ವಸ್ತು ಪ್ರದರ್ಶನವು ಸಾಕ್ಷಿಯಾಗಲಿದೆ. ʻ2ನೇ ಹಿಂದೂ ಮಹಾಸಾಗರ ಪ್ರದೇಶ+(ಐಒಆರ್+) ಸಮಾವೇಶʼ ಸಹ ಈ ವಸ್ತು ಪ್ರದರ್ಶನದ ವೇಳೆ ನಡೆಯಲಿದೆ. ʻಐಒಆರ್+ʼ ರಾಷ್ಟ್ರಗಳ ನಡುವೆ ಶಾಂತಿ, ಬೆಳವಣಿಗೆ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಕ್ಷಣಾ ಸಹಕಾರವನ್ನು ಪ್ರೋತ್ಸಾಹಿಸಲು ಸಮಗ್ರ ಸಂವಾದಕ್ಕೆ ಇದು ವೇದಿಕೆಯನ್ನು ಒದಗಿಸುತ್ತದೆ. ಇದು ʻಈ ವಲಯದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆʼ (ಸಾಗರ್) ಎಂಬ ಪ್ರಧಾನ ಮಂತ್ರಿಯವರ ಆಶಯಕ್ಕೆ ಅನುಗುಣವಾಗಿ ಈ ಸಮಾವೇಶ ನಡೆಯಲಿದೆ. ಈ ವಸ್ತುಪ್ರದರ್ಶನ ವೇಳೆ, ರಕ್ಷಣಾ ಕ್ಷೇತಗ್ರಕ್ಕಾಗಿ ಮೀಸಲಾದ ಮೊದಲ ಹೂಡಿಕೆದಾರರ ಸಮಾವೇಶವೂ ನಡೆಯಲಿದೆ. ʻಐಡೆಕ್ಸ್ʼನ (ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್) ರಕ್ಷಣಾ ಆವಿಷ್ಕಾರ ಕಾರ್ಯಕ್ರಮವಾದ ʻಮಂಥನ-2022ʼದಲ್ಲಿ ನೂರಕ್ಕೂ ಹೆಚ್ಚು ನವೋದ್ಯಮಗಳು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯಲಿವೆ. ಈ ವಸ್ತು ಪ್ರದರ್ಶನವು 'ಬಂಧನ್' ಕಾರ್ಯಕ್ರಮದ ಮೂಲಕ 451 ಪಾಲುದಾರಿಕೆಗಳು/ ಉದ್ಘಾಟನೆಗಳಿಗೂ ಸಾಕ್ಷಿಯಾಗಲಿದೆ.
*******
(Release ID: 1869402)
Visitor Counter : 189
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam