ಸಂಪುಟ
azadi ka amrit mahotsav

ಗೃಹ ಬಳಕೆ‌ ಎಲ್.ಪಿ.ಜಿ. ಪೂರೈಕೆಯಿಂದ ಉಂಟಾದ ನಷ್ಟಕ್ಕೆ ಪರಿಹಾರವಾಗಿ ಸಾರ್ವಜನಿ ಕ‌ವಲಯದ ತೈಲ ಮಾರಾಟ ಸಂಸ್ಥೆಗಳಿಗೆ  (PSU OMCs) ಒಂದು ಬಾರಿಗೆ  22,000 ಕೋಟಿ ರೂಪಾಯಿಗಳ‌ ಅನುದಾನವನ್ನು ಅನುಮೋದಿಸಿದ ಸಚಿವ ಸಂಪುಟ 

Posted On: 12 OCT 2022 4:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ (PSU OMCs) ರೂ.22,000 ಕೋಟಿ ಮೊತ್ತದ ಒಂದು ಬಾರಿ ಅನುದಾನ ನೀಡುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈ ಅನುದಾನವನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಸಂಸ್ಥೆಗಳಿಗೆ ವಿತರಿಸಲಾಗುತ್ತದೆ.

ಅನುಮೋದನೆಯು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ  'ಆತ್ಮನಿರ್ಭರ್ ಭಾರತ್ ಅಭಿಯಾನ'ಕ್ಕೆ ತಮ್ಮ ಬದ್ಧತೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ, ಅಡೆತಡೆಯಿಲ್ಲದ ದೇಶೀಯ ಎಲ್‌ಪಿಜಿ ಪೂರೈಕೆಗಳನ್ನು ಖಾತ್ರಿಪಡಿಸುತ್ತದೆ ಮತ್ತು 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳ ಸಂಗ್ರಹಣೆಯನ್ನು ಬೆಂಬಲಿಸುತ್ತದೆ.

ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ಗಳನ್ನು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಮೂಲಕ ಗ್ರಾಹಕರಿಗೆ ನಿಯಂತ್ರಿತ ಬೆಲೆಯಲ್ಲಿ ಸರಬರಾಜು ಮಾಡಲಾಗುತ್ತದೆ.

ಜೂನ್ 2020 ರಿಂದ ಜೂನ್ 2022ರ ಅವಧಿಯಲ್ಲಿ, ಎಲ್‌ಪಿಜಿಯ ಅಂತರರಾಷ್ಟ್ರೀಯ ಬೆಲೆಗಳು ಸುಮಾರು 300% ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಎಲ್‌ಪಿಜಿ ಬೆಲೆಗಳಲ್ಲಿನ ಏರಿಳಿತಗಳಿಂದ ಗ್ರಾಹಕರನ್ನು ರಕ್ಷಿಸುವ ನಿಟ್ಟಿನಲ್ಲಿ ಈ, ವೆಚ್ಚದ ಹೆಚ್ಚಳವನ್ನು ದೇಶೀಯ ಎಲ್‌ಪಿಜಿಯ ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾಯಿಸಲಾಗಿಲ್ಲ. ಹೀಗಾಗಿ, ಈ ಅವಧಿಯಲ್ಲಿ ದೇಶೀಯ ಎಲ್‌ಪಿಜಿ ಬೆಲೆಗಳು ಕೇವಲ 72% ರಷ್ಟು ಏರಿಕೆಯಾಗಿದೆ. ಇದು ಈ ತೈಲ‌ ಮಾರಾಟ ಸಂಸ್ಥೆಗಳಿಗೆ ಗಮನಾರ್ಹ ನಷ್ಟಕ್ಕೆ ಕಾರಣವಾಗಿದೆ.

ಈ ನಷ್ಟಗಳ ಹೊರತಾಗಿಯೂ, ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಸಂಸ್ಥೆಗಳು ದೇಶದಲ್ಲಿ ಈ ಅಗತ್ಯ ಅಡುಗೆ ಇಂಧನದ ನಿರಂತರ ಪೂರೈಕೆಯನ್ನು ಖಾತರಿಪಡಿಸಿವೆ.

*****


(Release ID: 1867123) Visitor Counter : 224