ಪ್ರಧಾನ ಮಂತ್ರಿಯವರ ಕಛೇರಿ

ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 05 OCT 2022 5:41PM by PIB Bengaluru

ಜೈ ಮಾತಾ ನೈನಾ ದೇವಿ!
(ಸ್ಥಳೀಯ ಭಾಷೆಯಲ್ಲಿ ದಸರಾ ಶುಭಾಶಯ ಕೋರಿಕೆ)

ಹಿಮಾಚಲ ಪ್ರದೇಶದ ಘನತೆವೆತ್ತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ; ಹಿಮಾಚಲ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಜೈ ರಾಮ್ ಠಾಕೂರ್ ಜಿ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ನಮ್ಮ ಮಾರ್ಗದರ್ಶಕರು ಹಾಗೂ ಈ ಮಣ್ಣಿನ ಮಗ ಶ್ರೀ ಜೆ ಪಿ ನಡ್ಡಾ ಜೀ; ನನ್ನ ಸಂಪುಟ ಸಹೋದ್ಯೋಗಿ ಶ್ರೀ ಅನುರಾಗ್ ಠಾಕೂರ್ ಜಿ; ಹಿಮಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ಮತ್ತು ನನ್ನ ಸಂಸದೀಯ ಸಹೋದ್ಯೋಗಿ ಸುರೇಶ್ ಕಶ್ಯಪ್ ಜಿ; ನನ್ನ ಸಂಸದೀಯ ಸಹೋದ್ಯೋಗಿಗಳಾದ ಕಿಶನ್ ಕಪೂರ್ ಜಿ, ಸಹೋದರಿ ಇಂದೂ ಗೋಸ್ವಾಮಿ ಜಿ ಮತ್ತು ಡಾ ಸಿಕಂದರ್ ಕುಮಾರ್ ಜಿ; ಇಲ್ಲಿರುವ ಎಲ್ಲಾ ಸಚಿವರು, ಸಂಸದರು ಮತ್ತು ಶಾಸಕರು, ಮತ್ತು ನಮ್ಮೆಲ್ಲರನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬಂದಿದ್ದಾರೆ. ನನ್ನ ಪ್ರೀತಿಯ ಸಹೋದರ ಸಹೋದರಿಯರೇ! ವಿಜಯದಶಮಿಯ ಸಂದರ್ಭದಲ್ಲಿ ನಿಮಗೆ ಮತ್ತು ಸಮಸ್ತ ನಾಡಿನ ಜನತೆಗೆ ಶುಭಾಶಯಗಳು!

ಈ ಮಂಗಳಕರ ಪವಿತ್ರ ಹಬ್ಬವು ಪ್ರತಿಯೊಂದು ದುಷ್ಟತನವನ್ನು ಜಯಿಸುವ ಮೂಲಕ ದೇಶವು 'ಅಮೃತ ಕಾಲ'ಕ್ಕಾಗಿ ಕೈಗೊಂಡಿರುವ ಪಂಚ ಪ್ರಾಣಗಳು' ಅಥವಾ ಸಂಕಲ್ಪಗಳನ್ನು ಸಾಧಿಸುವ ಹಾದಿಯಲ್ಲಿ ಮುನ್ನಡೆಯಲು ನಮಗೆ ಹೊಸ ಶಕ್ತಿ ನೀಡುತ್ತದೆ. ವಿಜಯದಶಮಿ ದಿನದಂದು ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಹಿಮಾಚಲ ಪ್ರದೇಶದ ಜನರಿಗೆ ಒದಗಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಅದೃಷ್ಟ. ಕಾಕತಾಳೀಯವೆಂಬಂತೆ, ವಿಜಯದಶಮಿಯಂದು ಗೆಲುವಿನ ಗಳಿಗೆ ಒಲಿಯುವ ಅವಕಾಶ ಸಿಕ್ಕಿದೆ. ಇದಲ್ಲದೆ, ಇದು ಪ್ರತಿ ಭವಿಷ್ಯದ ವಿಜಯದ ಆರಂಭವನ್ನು ಸೂಚಿಸುತ್ತಿದೆ. ಬಿಲಾಸ್ಪುರ್ ಇಂದು ಪ್ರಮುಖ 2 ಉಡುಗೊರೆಗಳನ್ನು ಸ್ವೀಕರಿಸುತ್ತಿದೆ; ಒಂದು ಶಿಕ್ಷಣ ಮತ್ತು ಇನ್ನೊಂದು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ. ಒಂದು ಹೈಡ್ರೋ ಕಾಲೇಜ್ ಆಗಿದ್ದರೆ, ಇನ್ನೊಂದು ಏಮ್ಸ್(ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ).

ಸಹೋದರ, ಸಹೋದರಿಯರೆ,
ಜೈರಾಮ್ ಜಿ ಪ್ರಸ್ತಾಪಿಸಿದಂತೆ, ಈ ಅಭಿವೃದ್ಧಿ ಯೋಜನೆಗಳನ್ನು ಇಲ್ಲಿ ನಿಮಗೆ ಹಸ್ತಾಂತರಿಸಿದ ನಂತರ, ನಾನು ಮತ್ತೊಂದು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಲಿದ್ದೇನೆ. ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಕುಲ್ಲು ದಸರಾದ ಭಾಗವಾಗುವ ಸೌಭಾಗ್ಯ ನನಗೆ ದೊರೆಯಲಿದೆ. ಭಗವಾನ್ ರಘುನಾಥ ಜೀ ಮತ್ತು ಇತರ ನೂರಾರು ದೇವತೆಗಳ ದಸರಾ ರಥಯಾತ್ರೆಯಲ್ಲಿ ಭಾಗವಹಿಸುವ ಮೂಲಕ ನಾನು ಇಡೀ ದೇಶದ ಪರವಾಗಿ ಆಶೀರ್ವಾದ ಪಡೆಯುತ್ತೇನೆ. ಇಂದು ನಾನು ಇಲ್ಲಿ ಬಿಲಾಸ್ಪುರಕ್ಕೆ ಬಂದಿದ್ದೇನೆ, ನನ್ನ ಹಳೆಯ ನೆನಪುಗಳು ಮರುಕಳಿಸುತ್ತಿವೆ. ನಾವು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಕಾಲವೊಂದಿತ್ತು. ಕೆಲವೊಮ್ಮೆ ನಾನು, ಧುಮಲ್ ಜಿ ಮತ್ತು ನಡ್ಡಾ ಜೀ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿದ್ದೆವು.  ನಾವು ಇಲ್ಲಿ ಬಿಲಾಸ್‌ಪುರದ ಬೀದಿಗಳಲ್ಲಿ ಬೃಹತ್ ರಥಯಾತ್ರೆ ಕಾರ್ಯಕ್ರಮದೊಂದಿಗೆ ನಡೆದು ಹೋಗಿದ್ದೆವು. ತದನಂತರ ಸ್ವರ್ಣ ಜಯಂತಿ ರಥಯಾತ್ರೆಯೂ ಮುಖ್ಯ ಮಾರುಕಟ್ಟೆಯ ಮೂಲಕ ಸಾಗಿತ್ತು,  ಸಾರ್ವಜನಿಕ ಸಭೆಯೂ ನಡೆದಿತ್ತು. ನಾನು ಹಲವಾರು ಬಾರಿ ಇಲ್ಲಿಗೆ ಬಂದಿದ್ದೇನೆ ಮತ್ತು ಇದೀಗ ನಿಮ್ಮೆಲ್ಲರ ನಡುವೆ ಇದ್ದೇನೆ.

ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವಾಗ ನಿರಂತರವಾಗಿ ಇಲ್ಲಿನ ಅಭಿವೃದ್ಧಿ ಪಯಣಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿದೆ. ನಾನು ಈ ಮೊದಲಿನ ಭಾಷಣಗಳನ್ನು ಕೇಳಿದ್ದೇನೆ. ಅನುರಾಗ್ ಜೀ ಅವರು, ಮೋದಿ ಜೀ ಇದನ್ನು ಮಾಡಿದರು ಮತ್ತು ಅದನ್ನು ಮಾಡಿದರು ಎಂದು ಬಹಳ ಉತ್ಸಾಹದಿಂದ ಮಾತನಾಡುತ್ತಿದ್ದರು. ನಡ್ಡಾ ಜೀ ಮತ್ತು ನಮ್ಮ ಮುಖ್ಯಮಂತ್ರಿ ಜೈರಾಮ್ ಜಿ ಕೂಡ, ಮೋದಿ ಜೀ ಇದು ಮತ್ತು ಅದನ್ನು ಮಾಡಿದರು ಎಂದು ಹೇಳುತ್ತಿದ್ದರು. ಆದರೆ ನಾನು ಕಟುಸತ್ಯ ಹೇಳಬಯಸುತ್ತೇನೆ. ಈ ಕೆಲಸಗಳನ್ನು ಮಾಡಿದವರು ಯಾರು? ನಾನು ಹೇಳಬೇಕೇ? ಇಂದು ಏನೇ ಕೆಲಸಗಳು ಆಗಿದ್ದರೂ ಅದಕ್ಕೆ ನೀವೆಲ್ಲಾ ಕಾರಣ. ನೀವು ಅದನ್ನು ಮಾಡಿದ್ದೀರಿ. ನಿಮ್ಮಿಂದಾಗಿ ಇದೆಲ್ಲಾ ಆಯಿತು. ನೀವು ದೆಹಲಿಯಲ್ಲಿ ಮೋದಿ ಜಿ ಅವರ ಮೇಲೆ ಮಾತ್ರ ನಿಮ್ಮ ಆಶೀರ್ವಾದ ಧಾರೆ ಎರೆದು, ಹಿಮಾಚಲ ಪ್ರದೇಶದಲ್ಲಿರುವ ಮೋದಿ ಜಿ ಸಹೋದ್ಯೋಗಿಗಳ ಮೇಲೆ ಧಾರೆ ಎರೆಯದೆ ಇದ್ದಿದ್ದರೆ, ಆಗ ಇಲ್ಲಿನ ಎಲ್ಲ ಕೆಲಸಗಳು ಅಥವಾ ಯೋಜನೆಗಳಲ್ಲಿ ಅಡೆತಡೆಗಳು ಮತ್ತು ಅಡಚಣೆಗಳು ಇರುತ್ತಿದ್ದವು. ದೆಹಲಿಯಲ್ಲಿ ರೂಪಿಸಲಾದ ಯೋಜನೆಗಳು ಇಲ್ಲಿ ತ್ವರಿತ ಗತಿಯಲ್ಲಿ ಅನುಷ್ಠಾನಗೊಳ್ಳಲು ಜೈರಾಮ್ ಜಿ ಮತ್ತು ಅವರ ತಂಡ ಕಾರಣವಾಗಿದೆ. ಆದ್ದರಿಂದಲೇ ಈ ಅಭಿವೃದ್ಧಿ ಬದಲಾವಣೆಗಳು ಆಗುತ್ತಿವೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ(ಎಐಐಎಂಎಸ್)ಯನ್ನು ನಿಮ್ಮ 'ಪ್ರತಿಯೊಂದು ಮತ'ದ ಶಕ್ತಿಯಿಂದ ನಿರ್ಮಿಸಲಾಗಿದೆ. ಒಂದು ಸುರಂಗ ನಿರ್ಮಿಸಿದ್ದರೆ ಅದು ನಿಮ್ಮ ಮತದ ಶಕ್ತಿಯಿಂದಾಗಿ; ಹೈಡ್ರೊ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾದರೆ ಮತ್ತೆ ಅದು ನಿಮ್ಮ ಮತದ ಶಕ್ತಿ; ವೈದ್ಯಕೀಯ ಸಾಧನ ಉದ್ಯಾನ ಸ್ಥಾಪಿಸಲಾಗುತ್ತಿದ್ದರೆ, ಅದು ಮತ್ತೆ ನಿಮ್ಮ ಶಕ್ತಿಯಿಂದ ಆಗುತ್ತದೆ.  ‘ಒಂದೇ ಒಂದುಮತ’ಕ್ಕೆ ಅಷ್ಟೊಂದು ಅಧಿಕಾರವಿದೆ. ಹಾಗಾಗಿ ಇಂದು ಹಿಮಾಚಲ ಪ್ರದೇಶ ಜನರ ನಿರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಒಂದರ ಹಿಂದೆ ಒಂದರಂತೆ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸುತ್ತಿದ್ದೇನೆ.

ಬಹು ದಿನಗಳ ಹಿಂದಿನಿಂದಲೂ ಸಹ ದೇಶದಲ್ಲಿ ಅಭಿವೃದ್ಧಿ ವಿಚಾರದಲ್ಲಿ ವಿಕೃತ ಚಿಂತನೆ ನಡೆಯುವುದನ್ನು ಕಂಡಿದ್ದೇವೆ. ಈ ಆಲೋಚನೆ ಏನು? ‘ಕೆಲವು ರಾಜ್ಯಗಳು, ಕೆಲವು ದೊಡ್ಡ ನಗರಗಳು ಮತ್ತು ದೆಹಲಿಯ ಸುತ್ತಮುತ್ತ ಮಾತ್ರ ಒಳ್ಳೆಯ ರಸ್ತೆಗಳು ಇರಬೇಕು; ಎಲ್ಲ ಉನ್ನತ ದರ್ಜೆಯ ಶಿಕ್ಷಣ ಸಂಸ್ಥೆಗಳು ದೊಡ್ಡ ನಗರಗಳಲ್ಲಿ ಇರಬೇಕು; ಎಲ್ಲ ಉತ್ತಮ ಆಸ್ಪತ್ರೆಗಳು ದೆಹಲಿಯಲ್ಲಿರಬೇಕು ಮತ್ತು ಬೇರೆಲ್ಲಿಯೂ ಅಲ್ಲ; ದೊಡ್ಡ ಕೈಗಾರಿಕೆಗಳು ಮತ್ತು ವ್ಯವಹಾರಗಳನ್ನು ದೊಡ್ಡ ನಗರಗಳಲ್ಲಿ ಮಾತ್ರ ಸ್ಥಾಪಿಸಬೇಕು. ವಾಸ್ತವವಾಗಿ, ನಿರ್ದಿಷ್ಟವಾಗಿ ದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಹಲವಾರು ವರ್ಷಗಳ ಕಾಲ ಕಾದ ನಂತರ ಕೊನೆಗೆ ಮಾತ್ರ ತಲುಪುತ್ತವೆ. ಆ ಹಳೆಯ ಚಿಂತನೆಯ ಪರಿಣಾಮವೆಂದರೆ, ಅದು ದೇಶದಲ್ಲಿ ಅಭಿವೃದ್ಧಿಯ ದೊಡ್ಡ ಅಸಮತೋಲನವನ್ನು ಸೃಷ್ಟಿಸಿತು. ಈ ಕಾರಣದಿಂದಾಗಿ, ದೇಶದ ಹೆಚ್ಚಿನ ಭಾಗವು ಅನನುಕೂಲತೆಯ ಅಡಿ ವಾಸಿಸುವಂತಾಗಿತ್ತು.
ಆದರೆ ಕಳೆದ 8 ವರ್ಷಗಳಲ್ಲಿ ಆ ಹಳೆಯ ಚಿಂತನೆ ಬಿಟ್ಟು ಈಗ ಹೊಸ ಚಿಂತನೆ, ಆಧುನಿಕ ಚಿಂತನೆಯೊಂದಿಗೆ ದೇಶ ಮುನ್ನಡೆಯುತ್ತಿದೆ. ನಾನು ಇಲ್ಲಿಗೆ ಬಂದಾಗಲೆಲ್ಲಾ, ಇಲ್ಲಿನ ಜನರು ಕೇವಲ ಒಂದು ವಿಶ್ವವಿದ್ಯಾಲಯವನ್ನು ಅವಲಂಬಿಸಿರುವುದನ್ನು ನಾನು ನಿರಂತರವಾಗಿ ಗಮನಿಸುತ್ತಿದ್ದೆ. ಚಿಕಿತ್ಸೆ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಬಂದಾಗ, ಜನರು ಐಜಿಎಂಸಿ ಶಿಮ್ಲಾ ಅಥವಾ ಟಾಟಾ ಮೆಡಿಕಲ್ ಕಾಲೇಜ್ ಅವಲಂಬಿಸಿದ್ದರು.  ಗಂಭೀರ ಕಾಯಿಲೆಗಳು, ಶಿಕ್ಷಣ ಅಥವಾ ಉದ್ಯೋಗದ ಬಗ್ಗೆ ಹೇಳುವುದಾದರೆ, ಹಿಮಾಚಲದ ಜನರು ಆ ಸಮಯದಲ್ಲಿ ಚಂಡೀಗಢ ಮತ್ತು ದೆಹಲಿಗೆ ಹೋಗಬೇಕಾಗಿತ್ತು. ಆದರೆ ಕಳೆದ 8 ವರ್ಷಗಳಲ್ಲಿ ನಮ್ಮ ಡಬಲ್ ಇಂಜಿನ್ ಸರ್ಕಾರ ಹಿಮಾಚಲದ ಅಭಿವೃದ್ಧಿಯ ಯಶೋಗಾಥೆಯನ್ನು ಹೊಸ ಆಯಾಮಕ್ಕೆ ಕೊಂಡೊಯ್ದಿದೆ. ಇಂದು ಹಿಮಾಚಲವು ಕೇಂದ್ರೀಯ ವಿಶ್ವವಿದ್ಯಾಲಯ, ಐಐಟಿ, ಐಐಐಟಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ) ಅನ್ನು ಸಹ ಹೊಂದಿದೆ. ಈಗ ದೇಶದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯದ ಅತಿದೊಡ್ಡ ಸಂಸ್ಥೆಯಾದ ಐಮ್ಸ್, ಬಿಲಾಸ್‌ಪುರ ಮತ್ತು ಹಿಮಾಚಲ ಜನರ ಹೆಮ್ಮೆ ಹೆಚ್ಚಿಸುತ್ತಿದೆ.
 ಬಿಲಾಸ್ಪುರ್ ಏಮ್ಸ್ ಮತ್ತೊಂದು ಬದಲಾವಣೆಯ ಸಂಕೇತವಾಗಿದೆ. ಇದನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿರುವ ಗ್ರೀನ್ ಏಮ್ಸ್ ಎಂದು ಕರೆಯಲಾಗುವುದು. ಹಿಂದಿನ ಸರ್ಕಾರಗಳು ಶಂಕುಸ್ಥಾಪನೆ ಮಾಡಿ ಚುನಾವಣೆಯ ನಂತರ ಅದನ್ನು ಮರೆತುಬಿಡುತ್ತಿದ್ದವು ಎಂದು ನಮ್ಮ ಸಹೋದ್ಯೋಗಿಗಳೆಲ್ಲರೂ ಸ್ವಲ್ಪ ಸಮಯದ ಹಿಂದೆ ಉಲ್ಲೇಖಿಸಿದ್ದರು. ಧುಮಾಲ್ ಜಿ ಅವರು ಶಂಕುಸ್ಥಾಪನೆ ಮಾಡಿದ ಎಲ್ಲಾ ಯೋಜನೆಗಳನ್ನು ಹುಡುಕಲು ಒಮ್ಮೆ ಆಂದೋಲನವನ್ನೇ ಆಯೋಜಿಸಿದ್ದರು, ಆದರೆ ಆ ಯೋಜನೆಗಳೆಲ್ಲಾ ಪೂರ್ಣವಾಗಲೇ ಇಲ್ಲ.

ನಾನು ಒಮ್ಮೆ ರೈಲ್ವೆ ಯೋಜನೆಯ ಪರಾಮರ್ಶೆ ಮಾಡಿದ್ದು ನನಗೆ ಇನ್ನೂ ನೆನಪಿದೆ. ಉನಾ ಬಳಿ ರೈಲು ಮಾರ್ಗ ಹಾಕಬೇಕಿತ್ತು. ಈ ನಿರ್ಧಾರವನ್ನು 35 ವರ್ಷಗಳ ಹಿಂದೆ ತೆಗೆದುಕೊಳ್ಳಲಾಗಿದೆ. ಸಂಸತ್ತಿನಲ್ಲಿ ಘೋಷಣೆಯಾಯಿತು, ಆದರೆ ನಂತರ ಅದರ ಕಡತಗಳನ್ನು ಮುಚ್ಚಿಡಲಾಯಿತು. ಹಿಮಾಚಲದ ಅಭಿವೃದ್ಧಿಯನ್ನು ಯಾರು ಪ್ರಶ್ನಿಸುತ್ತಿದ್ದರು?  ನಮ್ಮ ಸರ್ಕಾರದ ವಿಶೇಷತೆ ಏನೆಂದರೆ, ಯೋಜನೆಗೆ ಶಂಕುಸ್ಥಾಪನೆ ವೇಳೆ ಉದ್ಘಾಟನೆಯೂ ನಡೆಯಲಿದೆ. ಸ್ಥಗಿತಗೊಂಡ ಮತ್ತು ನಿಧಾನಗತಿಯ ಯೋಜನೆಗಳ ಯುಗ ಕಳೆದುಹೋಗಿದೆ ಸ್ನೇಹಿತರೇ!

ಸ್ನೇಹಿತರೆ,
ರಾಷ್ಟ್ರ ರಕ್ಷಣೆಯಲ್ಲಿ ಹಿಮಾಚಲ ಪ್ರದೇಶ ಸದಾ ಕಾಲವೂ ಉತ್ತಮ ಕೊಡುಗೆ ನೀಡುತ್ತಾ ಬಂದಿದೆ. ರಾಷ್ಟ್ರ ರಕ್ಷಿಸುವ ವೀರರಿಗೆ ದೇಶದಲ್ಲೇ  ಹೆಸರುವಾಸಿಯಾದ ಹಿಮಾಚಲ ಪ್ರದೇಶವು ಈಗ ಏಮ್ಸ್ ಮೂಲಕ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 2014ರ ವರೆಗೆ ಹಿಮಾಚಲದಲ್ಲಿ ಕೇವಲ 3 ವೈದ್ಯಕೀಯ ಕಾಲೇಜುಗಳು ಇದ್ದವು. ಅವುಗಳಲ್ಲಿ 2 ಸರ್ಕಾರಿ ಕಾಲೇಜುಗಳಾಗಿವೆ. ಕಳೆದ 8 ವರ್ಷಗಳಲ್ಲಿ, ಹಿಮಾಚಲದಲ್ಲಿ 5 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. 2014ರ ವರೆಗೆ ಕೇವಲ 500 ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಬಹುದಾಗಿತ್ತು. ಇಂದು ಈ ಸಂಖ್ಯೆ 1200ಕ್ಕಿಂತ ಹೆಚ್ಚಾಗಿದೆ, ಅಂದರೆ 2 ಪಟ್ಟು ಹೆಚ್ಚಾಗಿದೆ. ಪ್ರತಿ ವರ್ಷ ಅನೇಕ ಹೊಸ ವೈದ್ಯರು ಏಮ್ಸ್ ನಿಂದ ಹೊರಬರುತ್ತಾರೆ, ಯುವಕರು ಇಲ್ಲಿ ನರ್ಸಿಂಗ್‌ಗೆ ಸಂಬಂಧಿಸಿದ ತರಬೇತಿ ಪಡೆಯುತ್ತಾರೆ. ಇದಕ್ಕೆಲ್ಲಾ ಕಾರಣರಾದ ಜೈರಾಮ್ ಜಿ ಅವರ ತಂಡವನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ಜೆ ಪಿ ನಡ್ಡಾ ಆರೋಗ್ಯ ಸಚಿವರಾಗಿದ್ದಾಗ ನಾವು ಈ ನಿರ್ಧಾರ ಕೈಗೊಂಡಿದ್ದೆವು. ಹಾಗಾಗಿ ಅವರಿಗೆ ದೊಡ್ಡ ಜವಾಬ್ದಾರಿ ಇತ್ತು. ಇಲ್ಲಿ ಶಿಲಾನ್ಯಾಸವನ್ನೂ ಮಾಡಿದ್ದೆ. ಅದು ಭಯಾನಕ ಕೊರೊನಾ ಸಾಂಕ್ರಾಮಿಕದ ಅವಧಿ. ಜತೆಗೆ, ಹಿಮಾಚಲದಲ್ಲಿ ಪ್ರತಿಯೊಂದು ವಸ್ತುವನ್ನು ಪರ್ವತಗಳ ಮೇಲಿಂದ ತಂದು ನಿರ್ಮಾಣ ಕೆಲಸ ಮಾಡುವುದು ಕಷ್ಟ ಎಂದು ನಮಗೆ ತಿಳಿದಿದೆ. ಬಯಲು ಸೀಮೆಯಲ್ಲಿ ಒಂದು ಗಂಟೆಯಲ್ಲಿ ಮಾಡುವ ಕೆಲಸ ಮಲೆನಾಡಿನಲ್ಲಿ ಮುಗಿಯಲು ಒಂದು ದಿನ ಬೇಕಾಗುತ್ತದೆ. ಅದರ ಹೊರತಾಗಿಯೂ ಮತ್ತು ಕೊರೊನಾ ಸಾಂಕ್ರಾಮಿಕದ ಹೊರತಾಗಿಯೂ, ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಮತ್ತು ಜೈರಾಮ್ ಜಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ತಂಡವು ಏಮ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ಏಮ್ಸ್  ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ.
ವೈದ್ಯಕೀಯ ಕಾಲೇಜು ಮಾತ್ರವಲ್ಲ, ನಾವು ಮತ್ತೊಂದು ದಿಕ್ಕಿನಲ್ಲಿ ಸಾಗಿದ್ದೇವೆ. ಔಷಧಿಗಳು ಮತ್ತು ಜೀವ ಉಳಿಸುವ ಲಸಿಕೆಗಳ ತಯಾರಕ ತಾಣವಾಗಿ ಹಿಮಾಚಲದ ಪಾತ್ರವನ್ನು ಹೆಚ್ಚು ವಿಸ್ತರಿಸಲಾಗುತ್ತಿದೆ. ಬಲ್ಕ್ ಡ್ರಗ್ಸ್ ಪಾರ್ಕ್ ಯೋಜನೆಗೆ ದೇಶದ 3 ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ ಒಂದು ರಾಜ್ಯ ಯಾವುದು? ಹೌದು, ಅದು ಹಿಮಾಚಲ ಪ್ರದೇಶ. ನೀವು ಅದರ ಬಗ್ಗೆ ಹೆಮ್ಮೆಪಡುತ್ತೀರೋ ಅಥವಾ ಇಲ್ಲವೋ? ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಇದು ಅಡಿಪಾಯವೇ ಅಥವಾ ಇಲ್ಲವೇ? ಇದು ನಿಮ್ಮ ಮಕ್ಕಳ ಉಜ್ವಲ ಭವಿಷ್ಯದ ಗ್ಯಾರಂಟಿಯೋ ಅಥವಾ ಇಲ್ಲವೋ? ನಾವು ಈಗಿನ ಪೀಳಿಗೆಗೆ  ಮಾತ್ರವಲ್ಲದೆ, ಮುಂದಿನ ಪೀಳಿಗೆಗೂ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ.
ಅದೇ ರೀತಿ, ವೈದ್ಯಕೀಯ ಸಾಧನ ಉದ್ಯಾನಕ್ಕೆ 4 ರಾಜ್ಯಗಳನ್ನು ಆಯ್ಕೆ ಮಾಡಲಾಗಿದ್ದು, ವೈದ್ಯಕೀಯದಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ವಿಶೇಷ ರೀತಿಯ ಉಪಕರಣಗಳನ್ನು ತಯಾರಿಸಲು ದೇಶದ 4 ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ. ಭಾರತವು ಬೃಹತ್ ಜನಸಂಖ್ಯೆ ಹೊಂದಿರುವ ವಿಶಾಲ ದೇಶವಾಗಿದೆ, ಆದರೆ ಹಿಮಾಚಲವು ಬಹಳ ಚಿಕ್ಕ ರಾಜ್ಯವಾಗಿದೆ. ಆದರೆ ಇದು ವೀರರ ನಾಡು ಮತ್ತು ಈ ಸ್ಥಳದಲ್ಲಿ ನನ್ನ ಪಾಲಿನ ಅನ್ನವಿದೆ. ಆದ್ದರಿಂದ, ನಾನು ಅದನ್ನು ಹಿಂತಿರುಗಿಸಲೇಬೇಕು. 4ನೇ ವೈದ್ಯಕೀಯ ಸಾಧನ ಉದ್ಯಾನವನ್ನು ಎಲ್ಲಿ ನಿರ್ಮಿಸಲಾಗುತ್ತಿದೆ ಎಂದು ನೀವು ಊಹಿಸಬಹುದು? ಸ್ನೇಹಿತರೇ, ಹಿಮಾಚಲದಲ್ಲಿ 4ನೇ ವೈದ್ಯಕೀಯ ಸಾಧನ ಉದ್ಯಾನ ನಿರ್ಮಿಸಲಾಗುತ್ತಿದೆ. ವಿಶ್ವಾದ್ಯಂತ ಇರುವ ವಿವಿಧ ದಿಗ್ಗಜರು ಇಲ್ಲಿಗೆ ಬರುತ್ತಾರೆ. ನಲಗಢದಲ್ಲಿ ಈ ವೈದ್ಯಕೀಯ ಸಾಧನ ಉದ್ಯಾನಕ್ಕೆ ಶಂಕುಸ್ಥಾಪನೆ ಈ ಯೋಜನೆಯ ಭಾಗವಾಗಿದೆ. ಈ ಡಿವೈಸ್ ಪಾರ್ಕ್ ನಿರ್ಮಾಣಕ್ಕೆ ಇಲ್ಲಿ ಸಾವಿರಾರು ಕೋಟಿ ರೂ ವ್ಯಯಿಸಲಾಗುತ್ತದೆ.  ಇದಕ್ಕೆ ಸಂಬಂಧಿಸಿದ ಅನೇಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಸಮೀಪದಲ್ಲೇ ಅಭಿವೃದ್ಧಿ ಹೊಂದುತ್ತವೆ. ಇದರಿಂದ ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ದೊರೆಯಲಿದೆ.

ಸ್ನೇಹಿತರೆ,
ಹಿಮಾಚಲದ ಮತ್ತೊಂದು ಮುಖವಿದೆ, ಇದರಲ್ಲಿ ಅಭಿವೃದ್ಧಿಯ ಅನಂತ ಸಾಧ್ಯತೆಗಳು ಅಡಗಿವೆ. ಅದು ವೈದ್ಯಕೀಯ ಪ್ರವಾಸೋದ್ಯಮ ಆಗಿರಬಹುದು, ಇಲ್ಲಿನ ಹವಾಮಾನ, ಪರಿಸರ, ಇಲ್ಲಿನ ಗಿಡಮೂಲಿಕೆಗಳು ಉತ್ತಮ ಆರೋಗ್ಯಕ್ಕೆ ಸೂಕ್ತವಾಗಿವೆ. ಇಂದು ಭಾರತವು ವೈದ್ಯಕೀಯ ಪ್ರವಾಸೋದ್ಯಮ ದೃಷ್ಟಿಯಿಂದ ವಿಶ್ವದ ಪ್ರಮುಖ ಆಕರ್ಷಣೆಯ ಕೇಂದ್ರವಾಗುತ್ತಿದೆ. ದೇಶದ ಮತ್ತು ಪ್ರಪಂಚದ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ಬಯಸಿದಾಗ, ಈ ನೆಲದ ನೈಸರ್ಗಿಕ ಸೌಂದರ್ಯವಿರುವ ಈ ಸ್ಥಳಕ್ಕೆ ಪ್ರವಾಸ ಮಾಡಲು ಬಯಸುತ್ತದೆ. ಒಂದು ರೀತಿಯಲ್ಲಿ, ಅವರು 2 ರೀತಿಯ ಪ್ರಯೋಜನ ಪಡೆಯುತ್ತಾರೆ. ಒಂದು ಆರೋಗ್ಯ ಮತ್ತು ಇನ್ನೊಂದು ಪ್ರವಾಸೋದ್ಯಮ. ಹಾಗಾಗಿ ಹಿಮಾಚಲ ಪ್ರದೇಶ ಎರಡೂ ರೀತಿಯಲ್ಲಿ ಲಾಭ ಪಡೆಯುತ್ತದೆ.
ಸ್ನೇಹಿತರೆ,
ಬಡ ಮತ್ತು ಮಧ್ಯಮ ವರ್ಗದವರ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಿ, ಚಿಕಿತ್ಸೆಯ ಗುಣಮಟ್ಟ ಉತ್ತಮವಾಗಿಸಿ, ಚಿಕಿತ್ಸೆ ಹತ್ತಿರದಲ್ಲೇ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದ್ದರಿಂದ ಇಂದು ನಾವು ಏಮ್ಸ್ ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ಸೌಲಭ್ಯಗಳು ಮತ್ತು ಹಳ್ಳಿಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ನಿರ್ಮಿಸುವ ಮೂಲಕ ತಡೆರಹಿತ ಸಂಪರ್ಕಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಈ ಅಂಶಗಳಿಗೆ ಈಗ ಒತ್ತು ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ಹಿಮಾಚಲದ ಬಹುತೇಕ ಕುಟುಂಬಗಳು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿವೆ.
 
ಈ ಯೋಜನೆಯಡಿ ಇದುವರೆಗೆ ದೇಶಾದ್ಯಂತ 3 ಕೋಟಿ 60 ಲಕ್ಷ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 1.5 ಲಕ್ಷ ಫಲಾನುಭವಿಗಳು ಹಿಮಾಚಲದವರಾಗಿದ್ದಾರೆ. ಈವರೆಗೆ ದೇಶದಲ್ಲಿ ಇವರೆಲ್ಲರ ಚಿಕಿತ್ಸೆಗೆ ಸರ್ಕಾರ 45 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದೆ. ಆಯುಷ್ಮಾನ್ ಭಾರತ್ ಯೋಜನೆ ಇಲ್ಲದಿದ್ದರೆ, ಈ ಬಡ ಕುಟುಂಬಗಳು ಚಿಕಿತ್ಸೆಗಾಗಿ ಸುಮಾರು 2 ಪಟ್ಟು ಅಂದರೆ ಸುಮಾರು 90 ಸಾವಿರ ಕೋಟಿ ರೂಪಾಯಿಯನ್ನು ತಮ್ಮ ಜೇಬಿನಿಂದ ಪಾವತಿಸಬೇಕಾಗಿತ್ತು. ಅಂದರೆ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿವೆ, ಆರೋಗ್ಯಕ್ಕೆ ಆಗುತ್ತಿದ್ದ ವೆಚ್ಚದಲ್ಲಿ ಈಗ  ತುಂಬಾ ಹಣ ಉಳಿಯುತ್ತಿದೆ.

ಸ್ನೇಹಿತರೆ,
ಇನ್ನೊಂದು ಕಾರಣಕ್ಕಾಗಿ ನಾನು ಸಂತಸಪಡುತ್ತೇನೆ. ಸರ್ಕಾರದ ಇಂತಹ ಯೋಜನೆಗಳಿಂದ ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಹೆಚ್ಚು ಪ್ರಯೋಜನ ಪಡೆದಿದ್ದಾರೆ. ದೇಹದಲ್ಲಿ ಸಾಕಷ್ಟು ನೋವು ಮತ್ತು ತೊಂದರೆಗಳಿದ್ದರೂ, ನಮ್ಮ ತಾಯಂದಿರು ಮತ್ತು ಸಹೋದರಿಯರು ಅದರ ಬಗ್ಗೆ ಮೌನವಾಗಿಡುವ ಸ್ವಭಾವ ಹೊಂದಿದ್ದಾರೆ ಎಂಬುದು ನಮಗೆ ತಿಳಿದಿದೆ. ಅವರು ಕುಟುಂಬದಲ್ಲಿ ಯಾರಿಗೂ ಹೇಳುವುದಿಲ್ಲ. ಅವರು ತಮ್ಮಷ್ಟಕ್ಕೆ ನೋವು ಸಹಿಸಿಕೊಂಡು ಕೆಲಸ ಮಾಡುತ್ತಲೇ ಇರುತ್ತಾರೆ. ಜತೆಗೆ, ಅವರು ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾರೆ. ಏಕೆಂದರೆ ಕಾಯಿಲೆ ಬಮದಾಗ ಕುಟುಂಬದ ಸದಸ್ಯರಿಗೆ  ಅಥವಾ ಮಕ್ಕಳಿಗೆ ಗೊತ್ತಾದರೆ ಸಾಲ ಮಾಡಿ ಚಿಕಿತ್ಸೆ ಕೊಡಿಸುತ್ತಾರೆ ಎಂಬ ಭಾವನೆ ಅವರದು. ತಾಯಿಯಾದವಳು ಅನಾರೋಗ್ಯ ಸಹಿಸಿಕೊಳ್ಳುತ್ತೇನೆ ಎಂದು ಭಾವಿಸುತ್ತಾಳೆ, ಆದರೆ ತನ್ನ ಮಕ್ಕಳನ್ನು ಸಾಲ ಮಾಡಲು ಬಿಡುವುದಿಲ್ಲ. ಹಾಗಾಗಿ ಆಸ್ಪತ್ರೆಗಳಿಗೆ ಹಣ ಖರ್ಚು ಮಾಡುತ್ತಿರಲಿಲ್ಲ. ಈ ತಾಯಂದಿರ ಬಗ್ಗೆ ಯಾರು ಯೋಚಿಸುತ್ತಾರೆ? ಈ ತಾಯಂದಿರು ಮೌನವಾಗಿ ಇಂತಹ ದುಃಖವನ್ನು ಅನುಭವಿಸಬೇಕೇ? ಹೀಗಿರುವಾಗ ನನ್ನಂಥ ಮಗನಿಂದ ಏನು ಪ್ರಯೋಜನ? ಆದ್ದರಿಂದ, ಅದೇ ಉತ್ಸಾಹದಲ್ಲಿ ನನ್ನ ತಾಯಂದಿರು ಮತ್ತು ಸಹೋದರಿಯರು ಅನಾರೋಗ್ಯ ಬಾಧೆಯಿಂದ ಬದುಕಬಾರದು ಎಂಬ ದೂರದೃಷ್ಟಿಯಿಂದ ಆಯುಷ್ಮಾನ್ ಭಾರತ್ ಯೋಜನೆ ಹುಟ್ಟಿಕೊಂಡಿತು. ಆಯುಷ್ಮಾನ್ ಭಾರತ್ ಯೋಜನೆಯಡಿ, ತಾಯಂದಿರು ಮತ್ತು ಸಹೋದರಿಯರೇ ಶೇಕಡಾ 50ಕ್ಕಿಂತ ಹೆಚ್ಚಿನ ಫಲಾನುಭವಿಗಳು ಇದ್ದಾರೆ.

ಸ್ನೇಹಿತರೆ,
ಶೌಚಾಲಯ ನಿರ್ಮಿಸುವ ಸ್ವಚ್ಛ ಭಾರತ ಅಭಿಯಾನವಾಗಲಿ, ಉಚಿತ ಗ್ಯಾಸ್ ಸಂಪರ್ಕ ನೀಡುವ ಉಜ್ವಲ ಯೋಜನೆಯಾಗಲಿ, ಉಚಿತ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಅಭಿಯಾನವಾಗಲಿ, ಮಾತೃ ವಂದನಾ ಯೋಜನೆಯಡಿ ಪ್ರತಿ ಗರ್ಭಿಣಿ ಮಹಿಳೆಗೆ ಪೌಷ್ಟಿಕ ಆಹಾರಕ್ಕಾಗಿ ನೀಡುವ ಸಾವಿರಾರು ರೂಪಾಯಿ ಸಹಾಯವಾಗಲಿ, ಮನೆಗಳಿಗೆ ನಲ್ಲಿ ನೀರು ಸರಬರಾಜು ಮಾಡುವ ನಮ್ಮ ಅಭಿಯಾನ, ನನ್ನ ತಾಯಂದಿರು ಮತ್ತು ಸಹೋದರಿಯರನ್ನು ಸಬಲೀಕರಣಗೊಳಿಸಲು ನಾವು ಈ ಎಲ್ಲ ಕೆಲಸಗಳನ್ನು ಒಂದರ ನಂತರ ಒಂದರಂತೆ ಮಾಡುತ್ತಿದ್ದೇವೆ. ತಾಯಂದಿರು, ಸಹೋದರಿಯರು, ಹೆಣ್ಣು ಮಕ್ಕಳ ಸಂತೋಷ, ಅನುಕೂಲತೆ, ಗೌರವ, ಸುರಕ್ಷತೆ ಮತ್ತು ಆರೋಗ್ಯವು ಡಬಲ್ ಎಂಜಿನ್ ಸರ್ಕಾರದ ಅತಿದೊಡ್ಡ ಆದ್ಯತೆಯಾಗಿದೆ.

ಜೈರಾಮ್ ಜಿ ಮತ್ತು ಅವರ ಇಡೀ ತಂಡವು ಕೇಂದ್ರ ಸರ್ಕಾರವು ರೂಪಿಸಿದ ಯೋಜನೆಗಳನ್ನು ಅತ್ಯಂತ ವೇಗದಲ್ಲಿ ಸಾಕಾರಗೊಳಿಸಿದೆ ಮತ್ತು ಹೆಚ್ಚಿನ ಉತ್ಸಾಹದಿಂದ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದು ನಮ್ಮೆಲ್ಲರ ಕಣ್ಣ ಮುಂದೆಯೇ ಇದೆ. ಪ್ರತಿ ಮನೆಗೂ ನಲ್ಲಿ ನೀರು ಒದಗಿಸುವ ಕಾಮಗಾರಿ ತ್ವರಿತ ಗತಿಯಲ್ಲಿ ಪೂರ್ಣಗೊಂಡಿದೆ. ಕಳೆದ 7 ದಶಕಗಳಲ್ಲಿ ಹಿಮಾಚಲ ಪ್ರದೇಶಕ್ಕೆ ನೀಡಲಾದ ನಲ್ಲಿ ನೀರು ಸಂಪರ್ಕಗಳ ಸಂಖ್ಯೆಯನ್ನು ಕಳೆದ 3 ವರ್ಷಗಳಲ್ಲಿ ನಾವು 2 ಪಟ್ಟು ಹೆಚ್ಚು ನೀಡಿದ್ದೇವೆ. ಈ 3 ವರ್ಷಗಳಲ್ಲಿ 8.5 ಲಕ್ಷಕ್ಕೂ ಹೆಚ್ಚು ಹೊಸ ಕುಟುಂಬಗಳು ಪೈಪ್‌ಲೈನ್‌ ನೀರಿನ ಸೌಲಭ್ಯ ಪಡೆದಿವೆ.

ಸಹೋದರ, ಸಹೋದರಿಯರೆ,
ಇನ್ನೊಂದು ವಿಚಾರಕ್ಕಾಗಿ ಜೈರಾಮ್ ಜಿ ಮತ್ತು ಅವರ ತಂಡವನ್ನು ರಾಷ್ಟ್ರವು ತುಂಬಾ ಶ್ಲಾಘಿಸುತ್ತಿದೆ. ಅದು ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ವಿಸ್ತರಿಸಿರುವುದಕ್ಕಾಗಿ. ಇಂದು ಹಿಮಾಚಲದಲ್ಲಿ ಪಿಂಚಣಿ ಸೌಲಭ್ಯ ಪಡೆಯದ ಯಾವುದೇ ಕುಟುಂಬವಿಲ್ಲ. ಅಂತಹ ಕುಟುಂಬಗಳಿಗೆ ವಿಶೇಷವಾಗಿ ನಿರ್ಗತಿಕರಿಗೆ ಅಥವಾ ಕೆಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪಿಂಚಣಿ ಮತ್ತು ವೈದ್ಯಕೀಯ ವೆಚ್ಚಗಳಿಗೆ ಸಂಬಂಧಿಸಿದ ಸಹಾಯ ಒದಗಿಸುವ ಪ್ರಯತ್ನಗಳು ಶ್ಲಾಘನೀಯ. ಹಿಮಾಚಲ ಪ್ರದೇಶದ ಸಾವಿರಾರು ಕುಟುಂಬಗಳು 'ಒಂದು ಶ್ರೇಣಿ-ಒಂದು ಪಿಂಚಣಿ' ಅನುಷ್ಠಾನದಿಂದ ಅಪಾರ ಪ್ರಯೋಜನ ಪಡೆದಿವೆ.
 ಸ್ನೇಹಿತರೆ,
ಹಿಮಾಚಲ ಪ್ರದೇಶವು ಅವಕಾಶಗಳ ನಾಡು. ನಾನು ಮತ್ತೊಮ್ಮೆ ಜೈರಾಮ್ ಜಿ ಅವರನ್ನು ಅಭಿನಂದಿಸಲು ಬಯಸುತ್ತೇನೆ. ದೇಶಾದ್ಯಂತ ಕೋವಿಡ್ ಲಸಿಕೆ ಹಾಕುವ ಕೆಲಸ ನಡೆಯುತ್ತಿದೆ. ಆದರೆ ನಿಮ್ಮ ಸುರಕ್ಷತೆಗಾಗಿ 100ಪ್ರತಿಶತ ಲಸಿಕೆ ನೀಡಿಕೆ ಪೂರ್ಣಗೊಳಿಸಿದ ದೇಶದ ಮೊದಲ ರಾಜ್ಯ ಹಿಮಾಚಲವಾಗಿದೆ. ಆದ್ದರಿಂದ, ಇಲ್ಲಿ ಕೊರತೆಯ ಕೆಲಸಗಳಿಗೆ ಅವಕಾಶವಿಲ್ಲ. ಒಮ್ಮೆ ನಿರ್ಧರಿಸಿದ ನಂತರ ಅದನ್ನು ಮಾಡಬೇಕು, ಮಾಡಲಾಗಿದೆ.

ಇಲ್ಲಿ ಜಲವಿದ್ಯುತ್‌ನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹಣ್ಣು ಮತ್ತು ತರಕಾರಿಗಳಿಗೆ ಫಲವತ್ತಾದ ಭೂಮಿ ಇದೆ. ಇಲ್ಲಿನ ಪ್ರವಾಸೋದ್ಯಮ ಅಂತ್ಯವಿಲ್ಲದ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಉತ್ತಮ ಸಂಪರ್ಕ ಕೊರತೆಯು ಈ ಅವಕಾಶಗಳಿಗೆ ದೊಡ್ಡ ಅಡಚಣೆಯಾಗಿತ್ತು. ಹಿಮಾಚಲ ಪ್ರದೇಶದ ಪ್ರತಿ ಹಳ್ಳಿಯಲ್ಲೂ ಅತ್ಯುತ್ತಮ ಮೂಲಸೌಕರ್ಯಗಳನ್ನು ತರಲು 2014ರಿಂದಲೂ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂದು ಹಿಮಾಚಲದ ರಸ್ತೆಗಳ ವಿಸ್ತರಣೆ ಕೆಲಸವೂ ಎಲ್ಲೆಡೆ ನಡೆಯುತ್ತಿದೆ. ಪ್ರಸ್ತುತ ಹಿಮಾಚಲದ ಸಂಪರ್ಕ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಪಿಂಜೋರ್‌ನಿಂದ ನಲಗಢದವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ, ನಲಗಢ ಮತ್ತು ಬಡ್ಡಿಯಂತಹ ಕೈಗಾರಿಕಾ ಪ್ರದೇಶಗಳಿಗೆ ಮಾತ್ರವಲ್ಲ, ಚಂಡೀಗಢ ಮತ್ತು ಅಂಬಾಲದಿಂದ ಬಿಲಾಸ್‌ಪುರ, ಮಂಡಿ ಮತ್ತು ಮನಾಲಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ. ಇದಲ್ಲದೆ, ಹಿಮಾಚಲ ಜನರನ್ನು ಕಿರಿದಾದ ರಸ್ತೆಗಳಿಂದ ಮುಕ್ತಗೊಳಿಸಲು ಸುರಂಗಗಳ ಜಾಲವನ್ನು ಸಹ ನಿರ್ಮಿಸಲಾಗುತ್ತಿದೆ.

ಸ್ನೇಹಿತರೆ,
ಡಿಜಿಟಲ್ ಸಂಪರ್ಕ ಕಲ್ಪಿಸುವ ವಿಷಯದಲ್ಲೂ ಹಿಮಾಚಲದಲ್ಲಿ ಅಭೂತಪೂರ್ವ ಕೆಲಸ ಮಾಡಲಾಗಿದೆ. ಕಳೆದ 8 ವರ್ಷಗಳಲ್ಲಿ 'ಮೇಡ್ ಇನ್ ಇಂಡಿಯಾ' ಮೊಬೈಲ್ ಫೋನ್‌ಗಳು ಅಗ್ಗವಾಗುತ್ತಿರುವುದು ಮಾತ್ರವಲ್ಲದೆ, ನೆಟ್‌ವರ್ಕ್ ಪ್ರತಿ ಹಳ್ಳಿಗೂ ತಲುಪಿದೆ. ಉತ್ತಮ 4ಜಿ ಸಂಪರ್ಕದಿಂದಾಗಿ ಹಿಮಾಚಲ ಪ್ರದೇಶವು ಡಿಜಿಟಲ್ ವಹಿವಾಟಿನ ವಿಷಯದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿದೆ. 'ಡಿಜಿಟಲ್ ಇಂಡಿಯಾ' ಅಭಿಯಾನದ ಗರಿಷ್ಠ ಲಾಭವನ್ನು ಹಿಮಾಚಲದ ನನ್ನ ಸಹೋದರ, ಸಹೋದರಿಯರು ಪಡೆಯುತ್ತಿದ್ದಾರೆ. ಮೊದಲು ಜನರು ಬಿಲ್ ಪಾವತಿ ಅಥವಾ ಬ್ಯಾಂಕ್ ಸಂಬಂಧಿತ ಕೆಲಸಗಳು, ಅಪ್ಲಿಕೇಷನ್ ಅಥವಾ ಅರ್ಜಿಗಳಂತಹ ಪ್ರತಿಯೊಂದು ಸಣ್ಣ ಕೆಲಸಕ್ಕೂ ಬಯಲು ಪ್ರದೇಶದಲ್ಲಿರುವ ಕಚೇರಿಗಳಿಗೆ ಹೋಗಬೇಕಾಗಿತ್ತು. ಇದು ಒಂದು ದಿನ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಕೆಲವೊಮ್ಮೆ ರಾತ್ರಿ ಅಲ್ಲೇ ಉಳಿಯಬೇಕಾಗಿತ್ತು. ಇದೀಗ ದೇಶದಲ್ಲೇ ಪ್ರಥಮ ಬಾರಿಗೆ 'ಮೇಡ್ ಇನ್ ಇಂಡಿಯಾ' 5ಜಿ ತಂತ್ರಜ್ಞಾನ ಸೇವೆಗಳು ಆರಂಭವಾಗಿದ್ದು, ಇದರ ಲಾಭ ಅತಿ ಶೀಘ್ರದಲ್ಲಿ ಹಿಮಾಚಲ ಪ್ರದೇಶಕ್ಕೆ ತಲುಪಲಿದೆ.

ಡ್ರೋನ್‌ ತಯಾರಿಕೆಗೆ ಸಂಬಂಧಿಸಿದಂತೆ ಭಾರತವು ರೂಪಿಸಿದ ಮತ್ತು ಬದಲಾಯಿಸಿದ ಕಾನೂನುಗಳಿಗಾಗಿ ನಾನು ಹಿಮಾಚಲ ಪ್ರದೇಶವನ್ನು ಅಭಿನಂದಿಸುತ್ತೇನೆ. ರಾಜ್ಯದ ಡ್ರೋನ್ ನೀತಿಯನ್ನು ರೂಪಿಸಿದ ದೇಶದ ಮೊದಲ ರಾಜ್ಯ ಹಿಮಾಚಲ. ಈಗ ಸಾರಿಗೆಗಾಗಿ ಡ್ರೋನ್‌ಗಳ ಬಳಕೆ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಉದಾಹರಣೆಗೆ, ನಾವು ಕಿನ್ನೌರ್‌ನಿಂದ ಡ್ರೋನ್‌ಗಳ ಮೂಲಕ ಆಲೂಗಡ್ಡೆ ಎತ್ತಿಕೊಂಡು ಅತಿ ಕಡಿಮೆ ಸಮಯದಲ್ಲಿ ಕೆಲವು ದೊಡ್ಡ ಮಾರುಕಟ್ಟೆಗೆ ತರಬಹುದು. ನಮ್ಮ ಹಣ್ಣುಗಳು ನಾಶವಾಗುತ್ತಿದ್ದವು, ಆದರೆ ಈಗ ಡ್ರೋನ್‌ಗಳಿಂದ ಎತ್ತಿಕೊಂಡು ಹೋಗಬಹುದು. ಮುಂದಿನ ದಿನಗಳಲ್ಲಿ ಹಲವಾರು ಅನುಕೂಲಗಳು ಆಗಲಿವೆ. ನಾವು ಈ ರೀತಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ, ಇದು ಪ್ರತಿಯೊಬ್ಬ ನಾಗರಿಕನ ಅನುಕೂಲತೆಯನ್ನು ಹೆಚ್ಚಿಸುತ್ತದೆ, ಪ್ರತಿಯೊಬ್ಬ ನಾಗರಿಕನ ಸಮೃದ್ಧಿ ಸಾಧ್ಯವಾಗಲಿದೆ. ಇದು 'ಅಭಿವೃದ್ಧಿ ಹೊಂದಿದ ಭಾರತ' ಮತ್ತು ಅಭಿವೃದ್ಧಿ ಹೊಂದಿದ ಹಿಮಾಚಲ ಪ್ರದೇಶದ ಸಂಕಲ್ಪವನ್ನು ಈಡೇರಿಸಲಿದೆ.

ವಿಜಯದಶಮಿಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ಆಶೀರ್ವಾದದ ನಡುವೆ ವಿಜಯದ ಘೋಷ ಮೊಳಗಿಸುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಖುಷಿಯಾಗಿದೆ. ಏಮ್ಸ್ ಸೇರಿದಂತೆ ಎಲ್ಲ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಎರಡೂ ಮುಷ್ಟಿಗಳನ್ನು ಜೋಡಿಸಿ, ನನ್ನೊಂದಿಗೆ ಗಟ್ಟಿಯಾಗಿ ಹೇಳಿ –

ಭಾರತ್ ಮಾತಾ ಕೀ ಜೈ! ಜೋರಾಗಿ ಹೇಳಿ

ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!

ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು!
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

*****



(Release ID: 1865800) Visitor Counter : 159