ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎಫ್.ಎಂ. ರೇಡಿಯೋ ಹಂತ-IIIರ ನೀತಿ ಮಾರ್ಗಸೂಚಿಗಳ ತಿದ್ದುಪಡಿಗೆ ಸರ್ಕಾರದ ಅನುಮೋದನೆ

Posted On: 04 OCT 2022 1:09PM by PIB Bengaluru

ಖಾಸಗಿ ಎಫ್‌.ಎಂ ಹಂತ-IIIರ ನೀತಿ ಮಾರ್ಗಸೂಚಿಗಳು ಎಂದು ಉಲ್ಲೇಖಿಸಲಾಗುವ ಖಾಸಗಿ ಸಂಸ್ಥೆಗಳ ಮೂಲಕ (ಹಂತ-III) ಎಫ್‌.ಎಂ ರೇಡಿಯೊ ಪ್ರಸಾರ ಸೇವೆಗಳ ವಿಸ್ತರಣೆಯ ಕುರಿತಾದ ನೀತಿ ಮಾರ್ಗಸೂಚಿಗಳಲ್ಲಿ ಒಳಗೊಂಡಿರುವ ಕೆಲವು ನಿಬಂಧನೆಗಳ ತಿದ್ದುಪಡಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ನಿಟ್ಟಿನಲ್ಲಿ, 15 ವರ್ಷಗಳ ಪರವಾನಗಿ ಅವಧಿಯಲ್ಲಿ ಅದೇ ನಿರ್ವಹಣಾ ಗುಂಪಿನೊಳಗೆ ಎಫ್.ಎಂ. ರೇಡಿಯೊ ಅನುಮತಿಗಳ ಪುನಾರಚನೆಗಾಗಿ 3 ವರ್ಷಗಳ ಪರೀಕ್ಷಾ (ವಿಂಡೋ) ಅವಧಿಯನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ವಾಹಿನಿಗಳ ಹಿಡುವಳಿಯ ಮೇಲಿನ ಶೇ.15ರಷ್ಟು ರಾಷ್ಟ್ರೀಯ ಮಿತಿಯನ್ನು ತೆಗೆದುಹಾಕಬೇಕೆಂಬ ರೇಡಿಯೊ ಉದ್ಯಮದ ಬಹುಕಾಲದ ಬೇಡಿಕೆಗೂ ಸರ್ಕಾರ ಸಮ್ಮತಿಸಿದೆ. ಎಫ್.ಎಂ. ರೇಡಿಯೊ ನೀತಿಯಲ್ಲಿನ ಆರ್ಥಿಕ ಅರ್ಹತೆಯ ಮಾನದಂಡಗಳ ಸರಳೀಕರಣದೊಂದಿಗೆ, ಅರ್ಜಿದಾರ ಕಂಪನಿಯು ಈಗ ಹಿಂದಿನ 1.5 ಕೋಟಿ ರೂ. ಬದಲಿಗೆ ಕೇವಲ ರೂ.1 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದರೂ 'ಸಿ' ಮತ್ತು 'ಡಿ' ವರ್ಗದ ನಗರಗಳ ಹರಾಜಿನಲ್ಲಿ ಭಾಗವಹಿಸಬಹುದು.

ಈ ಮೂರು ತಿದ್ದುಪಡಿಗಳು ಒಟ್ಟಾರೆ ಖಾಸಗಿ ಎಫ್‌ಎಂ ರೇಡಿಯೊ ಉದ್ಯಮದ ಆರ್ಥಿಕತೆಯ ಸಂಪೂರ್ಣ ಹತೋಟಿಗೆ ನೆರವಾಗುತ್ತದೆ ಮತ್ತು ಎಫ್‌ಎಂ ರೇಡಿಯೊ ಮತ್ತು ಮನರಂಜನೆಯ ಮತ್ತಷ್ಟು ವಿಸ್ತರಣೆಗೆ ದೇಶದ ಶ್ರೇಣಿ-III ನಗರಗಳಲ್ಲಿ ದಾರಿ ಮಾಡಿಕೊಡುತ್ತದೆ. ಇದು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ಎಫ್.ಟಿ.ಎ. (ಫ್ರೀ ಟು ಏರ್) ರೇಡಿಯೊ ಮಾಧ್ಯಮದ ಮೂಲಕ ಸಂಗೀತ ಮತ್ತು ಮನರಂಜನೆ ದೇಶದ ದೂರದ ಮತ್ತು ಮೂಲೆಮೂಲೆಗಳಲ್ಲಿ ಶ್ರೀಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುತ್ತದೆ.

ದೇಶದಲ್ಲಿ ಸುಗಮ ವ್ಯಾಪಾರ ಮಾಡುವುದನ್ನು ಸುಧಾರಿಸಲು, ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಮಾಡಲು ಅಸ್ತಿತ್ವದಲ್ಲಿರುವ ನಿಯಮಗಳ ಸರಳೀಕರಣ ಮತ್ತು ತರ್ಕಬದ್ಧಗೊಳಿಸುವಿಕೆಗೆ ಸರ್ಕಾರ ಒತ್ತು ನೀಡಿದೆ, ಇದರಿಂದ ಅದರ ಪ್ರಯೋಜನಗಳು ಸಾಮಾನ್ಯ ಜನರಿಗೆ ತಲುಪುತ್ತವೆ.

*****



(Release ID: 1865098) Visitor Counter : 160