ಪ್ರಧಾನ ಮಂತ್ರಿಯವರ ಕಛೇರಿ
ಅಹಮದಾಬಾದ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು
ಪ್ರಧಾನಮಂತ್ರಿಯವರು ಅಹಮದಾಬಾದ್ ಮೆಟ್ರೋದಲ್ಲಿ ಪ್ರಯಾಣ ಮಾಡಿದರು
Posted On:
30 SEP 2022 3:20PM by PIB Bengaluru
ಪ್ರಧಾನಮಂತ್ರಿಯವರು ಇಂದು ಅಹಮದಾಬಾದ್ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದರು ಮತ್ತು ಕಲುಪುರ್ ನಿಲ್ದಾಣದಿಂದ ದೂರದರ್ಶನ ಕೇಂದ್ರದ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.
ಗುಜರಾತ್ ಭೇಟಿಯ ಎರಡನೇ ದಿನದಂದು ಪ್ರಧಾನಮಂತ್ರಿಯವರು ಅಹಮದಾಬಾದ್ ಮೆಟ್ರೋ ರೈಲು ಯೋಜನೆಗೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. ಗಾಂಧಿನಗರ ನಿಲ್ದಾಣದಿಂದ ಹೊಚ್ಚ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ 2.0 ಅನ್ನು ಹತ್ತುವ ಮೂಲಕ ಪ್ರಧಾನಮಂತ್ರಿಯವರು ಕಲುಪುರ್ ನಿಲ್ದಾಣವನ್ನು ತಲುಪಿದರು. ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆಟ್ರೋ ರೈಲು ಪ್ರದರ್ಶನಕ್ಕೂ ಭೇಟಿ ನೀಡಿದರು.
ಪ್ರಧಾನಮಂತ್ರಿಯವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು.
ಮೆಟ್ರೋದಲ್ಲಿ ಪ್ರಧಾನಿಯವರು ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ಸಾಮಾನ್ಯ ಪ್ರಯಾಣಿಕರೊಂದಿಗೆ ಪ್ರಯಾಣಿಸಿದರು. ಅವರೊಂದಿಗೆ ಸಂವಾದ ನಡೆಸಿದರು. ಅವರಲ್ಲಿ ಹಲವರು ಆಟೋಗ್ರಾಫ್ ತೆಗೆದುಕೊಂಡರು.
ಅಹಮದಾಬಾದ್ ಮೆಟ್ರೋ ರೈಲು ಯೋಜನೆಯು ಬಹುಮುಖಿ ಮೂಲಸೌಕರ್ಯ ಸಂಪರ್ಕದ ಕಡೆಗೆ ಗಮನಾರ್ಹ ಉತ್ತೇಜನವಾಗಿದೆ. ಅಹಮದಾಬಾದ್ ಮೆಟ್ರೋ ಯೋಜನೆಯ ಹಂತ-1 ಪೂರ್ವ-ಪಶ್ಚಿಮ ಕಾರಿಡಾರ್ನ ಸುಮಾರು 32 ಕಿಲೋಮೀಟರ್ಗಳನ್ನು ಅಪರೆಲ್ ಪಾರ್ಕ್ನಿಂದ ಥಾಲ್ತೇಜ್ವರೆಗೆ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ಮೊಟೆರಾದಿಂದ ಗ್ಯಾಸ್ಪುರದವರೆಗೆ ಒಳಗೊಂಡಿದೆ. ಪೂರ್ವ-ಪಶ್ಚಿಮ ಕಾರಿಡಾರ್ನಲ್ಲಿ ಥಾಲ್ತೇಜ್-ವಸ್ತ್ರಾಲ್ ಮಾರ್ಗವು 17 ನಿಲ್ದಾಣಗಳನ್ನು ಹೊಂದಿದೆ. ಈ ಕಾರಿಡಾರ್ ನಾಲ್ಕು ನಿಲ್ದಾಣಗಳೊಂದಿಗೆ 6.6 ಕಿಮೀ ಭೂಗತ ವಿಭಾಗವನ್ನು ಹೊಂದಿದೆ. ಗ್ಯಾಸ್ಪುರದಿಂದ ಮೊಟೆರಾ ಸ್ಟೇಡಿಯಂಗೆ ಸಂಪರ್ಕಿಸುವ 19 ಕಿಮೀ ಉತ್ತರ-ದಕ್ಷಿಣ ಕಾರಿಡಾರ್ 15 ನಿಲ್ದಾಣಗಳನ್ನು ಹೊಂದಿದೆ. ಸಂಪೂರ್ಣ ಹಂತ 1 ಯೋಜನೆಯನ್ನು ₹12,900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಅಹಮದಾಬಾದ್ ಮೆಟ್ರೋವು ಭೂಗತ ಸುರಂಗಗಳು, ವಯಡಕ್ಟ್ಗಳು ಮತ್ತು ಸೇತುವೆಗಳು, ಎತ್ತರದ ಮತ್ತು ಭೂಗತ ನಿಲ್ದಾಣದ ಕಟ್ಟಡಗಳು, ಜಲ್ಲಿಕಲ್ಲಿಲ್ಲದ ರೈಲು ಹಳಿಗಳು ಮತ್ತು ಚಾಲಕ ರಹಿತ ರೈಲು ಕಾರ್ಯಾಚರಣೆಗೆ ಅನುಗುಣವಾಗಿ ರೋಲಿಂಗ್ ಸ್ಟಾಕ್ ಇತ್ಯಾದಿಗಳನ್ನು ಒಳಗೊಂಡಿರುವ ಬೃಹತ್ ಅತ್ಯಾಧುನಿಕ ಮೂಲಸೌಕರ್ಯ ಯೋಜನೆಯಾಗಿದೆ. ಈ ಮೆಟ್ರೋ ರೈಲು ಇಂಧನದ ಸಮರ್ಥ ಬಳಕೆಯ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದ್ದು, ಇದು ಇಂಧನದ ಬಳಕೆಯಲ್ಲಿ ಸುಮಾರು ಶೇಕಡಾ 30ರಿಂದ -35ಷ್ಟನ್ನು ಉಳಿಸುತ್ತದೆ. ರೈಲು ಅತ್ಯಾಧುನಿಕ ಸಸ್ಪೆನ್ಷನ್ ವ್ಯವಸ್ಥೆಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಅತ್ಯಂತ ಸುಗಮ ಪ್ರಯಾಣದ ಅನುಭವವನ್ನು ನೀಡುತ್ತದೆ.
*****
(Release ID: 1864698)
Visitor Counter : 119
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam