ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಹಮದಾಬಾದ್‌ನಲ್ಲಿ 36 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪ್ರಧಾನಿ

ಪ್ರಧಾನಿಯವರಿಂದ ದೇಸಾರ್‌ನಲ್ಲಿ ವಿಶ್ವ ದರ್ಜೆಯ ‘ಸ್ವರ್ಣಿಮ್ ಗುಜರಾತ್ ಕ್ರೀಡಾ ವಿಶ್ವವಿದ್ಯಾಲಯ’ದ ಉದ್ಘಾಟನೆ

"ಕಾರ್ಯಕ್ರಮ ತುಂಬಾ ಅದ್ಭುತ ಮತ್ತು ವಿಶಿಷ್ಟವಾದಾಗ, ಅದರ ಶಕ್ತಿಯು ಇಷ್ಟೊಂದು ಅಸಾಧಾರಣವಾಗಿರುತ್ತದೆ"

"ಕ್ರೀಡಾಪಟುಗಳ ಗೆಲುವು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅವರ ಬಲವಾದ ಪ್ರದರ್ಶನವು ಇತರ ಕ್ಷೇತ್ರಗಳಲ್ಲಿ ದೇಶದ ವಿಜಯಕ್ಕೆ ದಾರಿ ಮಾಡಿಕೊಡುತ್ತದೆ"

"ಕ್ರೀಡೆಗಳ ಸಾಮರ್ಥ್ಯವು ದೇಶದ ಗುರುತು ಮತ್ತು ಅಸ್ಮಿತೆಯನ್ನು ಬಹುಪಟ್ಟು ಹೆಚ್ಚಿಸುತ್ತದೆ"

" ಏಷ್ಯಾಟಿಕ್ ಸಿಂಹ ಸಾವಾಜ್ನ ಚಿಹ್ನೆಯು ಭಾರತದ ಯುವಕರ ನಿರ್ಭೀತ ಭಾಗವಹಿಸುವಿಕೆ ಮನಸ್ಥಿತಿಯ ಪ್ರತಿಬಿಂಬವಾಗಿದೆ"

"ಮೂಲಸೌಕರ್ಯವು ಉತ್ತಮ ಮಾನದಂಡವಾಗಿದ್ದಾಗ, ಕ್ರೀಡಾಪಟುಗಳ ಆತ್ಮಸ್ಥೈರ್ಯವೂ ಹೆಚ್ಚಾಗುತ್ತದೆ"

“ನಾವು ಕ್ರೀಡಾ ಮನೋಭಾವದಿಂದ ಕ್ರೀಡಾಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದೇವೆ. ಟಾಪ್ಸ್ ನಂತಹ ಯೋಜನೆಗಳ ಮೂಲಕ ಮಿಷನ್ ಮೋಡ್‌ನಲ್ಲಿ ಸಿದ್ಧವಾಗಿದ್ದೇವೆ ”

"ಫಿಟ್ ಇಂಡಿಯಾ ಮತ್ತು ಖೇಲೊ ಇಂಡಿಯಾದಂತಹ ಕ್ರಮಗಳು ಜನಾಂದೋಲನವಾಗಿವೆ"

"ಕಳೆದ 8 ವರ್ಷಗಳಲ್ಲಿ ದೇಶದ ಕ್ರೀಡಾ ಬಜೆಟ್ ಸುಮಾರು 70 ಪ್ರತಿಶತದಷ್ಟು ಹೆಚ್ಚಾಗಿದೆ"

"ಕ್ರೀಡೆ ಸಾವಿರಾರು ವರ್ಷಗಳಿಂದ ಭಾರತದ ಪರಂಪರೆ ಮತ್ತು ಬೆಳವಣಿಗೆಯ ಪ್ರಯಾಣದ ಭಾಗವಾಗಿದೆ"

Posted On: 29 SEP 2022 8:42PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 36 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಯವರು ದೇಸಾರ್‌ನಲ್ಲಿ ವಿಶ್ವ ದರ್ಜೆಯ “ಸ್ವರ್ಣಿಮ್ ಗುಜರಾತ್ ಕ್ರೀಡಾ ವಿಶ್ವವಿದ್ಯಾಲಯ” ವನ್ನು ಸಹ ಉದ್ಘಾಟಿಸಿದರು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ದೇಶಾದ್ಯಂತದ ಕ್ರೀಡಾಪಟುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿರುವ ಆಹ್ಲಾದಕರ ವಾತಾವರಣವು ಮಾತುಗಳನ್ನು ಮೀರಿದ್ದಾಗಿದೆ ಎಂದು ಉದ್ಗರಿಸಿದರು.  ಇಂತಹ ಭವ್ಯ ಕಾರ್ಯಕ್ರಮದ ಭಾವನೆ ಮತ್ತು ಶಕ್ತಿಯು ಪದಗಳನ್ನು ಮೀರಿದ್ದು ಎಂದು ಅವರು ಹೇಳಿದರು. 7000 ಕ್ಕೂ ಹೆಚ್ಚು ಕ್ರೀಡಾಪಟುಗಳು, 15000 ಕ್ಕೂ ಹೆಚ್ಚು ಭಾಗವಹಿಸುವವರು, 35000 ಕ್ಕೂ ಹೆಚ್ಚು ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳು ಮತ್ತು ರಾಷ್ಟ್ರೀಯ ಆಟಗಳೊಂದಿಗೆ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೇರ ಸಂಪರ್ಕವು ಅದ್ಭುತವಾಗಿದೆ ಮತ್ತು ಅಭೂತಪೂರ್ವವಾಗಿದೆ ಎಂದು ಅವರು ಉದ್ಗರಿಸಿದರು. "ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ, ವಿಶ್ವದ ಅಂತಹ ಯುವ ದೇಶ ಮತ್ತು ದೇಶದ ಅತಿದೊಡ್ಡ ಕ್ರೀಡಾ ಉತ್ಸವ! ಕಾರ್ಯಕ್ರಮ ತುಂಬಾ ಅದ್ಭುತ ಮತ್ತು ವಿಶಿಷ್ಟವಾದಾಗ, ಅದರ ಶಕ್ತಿಯು ತುಂಬಾ ಅಸಾಧಾರಣವಾಗಿರುತ್ತದೆ ”ಎಂದು ಪ್ರಧಾನಿ ಹೇಳಿದರು. ಅವರು ರಾಷ್ಟ್ರೀಯ ಕ್ರೀಡಾಕೂಟ ರಾಷ್ಟ್ರಗೀತೆ ‘ಜುಡೆಗಾ ಇಂಡಿಯಾ - ಜೀತೆಗಾ ಇಂಡಿಯಾ’ ದ ಪ್ರಮುಖ ಪದಗಳನ್ನು ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರತಿಯೊಬ್ಬರ ಹಿನ್ನೆಲೆಯೊಂದಿಗೆ ಪಠಿಸಿದರು. ಕ್ರೀಡಾಪಟುಗಳ ಮುಖದ ಮೇಲಿರುವ ಆತ್ಮವಿಶ್ವಾಸವು ಭಾರತೀಯ ಕ್ರೀಡಾಕ್ಷೇತ್ರದ ಮುಂಬರುವ ಸುವರ್ಣಯುಗದ ಮುನ್ಸೂಚಕವಾಗಿದೆ ಎಂದು ಅವರು ಹೇಳಿದರು. ತುಂಬಾ ಕಡಿಮೆ ಅವಧಿಯಲ್ಲಿ ಇಂತಹ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಿದ ಗುಜರಾತ್ ಜನರ ಸಾಮರ್ಥ್ಯವನ್ನು ಅವರು ಶ್ಲಾಘಿಸಿದರು.

ನಿನ್ನೆ ಅಹಮದಾಬಾದ್‌ನಲ್ಲಿ ನಡೆದ ಗ್ರ್ಯಾಂಡ್ ಡ್ರೋನ್ ಪ್ರದರ್ಶನವನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಯವರು, ಇಂತಹ ಚಮತ್ಕಾರವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಹೆಮ್ಮೆಪಟ್ಟಿದ್ದಾರೆ ಎಂದು ಹೇಳಿದರು. ಡ್ರೋನ್‌ನಂತೆ ತಂತ್ರಜ್ಞಾನದ ಎಚ್ಚರಿಕೆಯ ಬಳಕೆಯು ಭಾರತ ಮತ್ತು ಗುಜರಾತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರೀಯ ಕ್ರೀಡಾಕೂಟ 2022 ರ ಅಧಿಕೃತ ಚಿಹ್ನೆ ಏಷ್ಯಾಟಿಕ್ ಸಿಂಹ ಸಾವಾಜ್‌ ಬಗ್ಗೆ ಮಾತನಾಡಿದ ಪ್ರಧಾನಿಯವರು, ಈ ಚಿಹ್ನೆಯು ಭಾರತದ ಯುವಕರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ, ಕ್ರೀಡಾ ರಂಗಕ್ಕೆ ನಿರ್ಭೀತ ಪ್ರವೇಶದ ಸಂಕೇತವಾಗಿದೆ ಎಂದು ಹೇಳಿದರು. ಜಾಗತಿಕ ಸನ್ನಿವೇಶದಲ್ಲಿ ಇದು ಪ್ರಗತಿಪರ ಭಾರತದ ಸಂಕೇತವಾಗಿದೆ ಎಂದು ಅವರು ಹೇಳಿದರು.

ಕ್ರೀಡಾಂಗಣದ ಅನನ್ಯತೆಯ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಇತರ ಸಂಕೀರ್ಣಗಳು ಕೆಲವೇ ಕ್ರೀಡಾ ಸೌಲಭ್ಯಗಳಿಗೆ ಸೀಮಿತವಾಗಿದ್ದರೂ, ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣವು ಫುಟ್ಬಾಲ್, ಹಾಕಿ, ಬ್ಯಾಸ್ಕೆಟ್‌ಬಾಲ್, ಕಬಡ್ಡಿ, ಬಾಕ್ಸಿಂಗ್ ಮತ್ತು ಲಾನ್ ಟೆನಿಸ್‌ನಂತಹ ಅನೇಕ ಕ್ರೀಡೆಗಳಿಗೆ ಸೌಲಭ್ಯಗಳನ್ನು ಹೊಂದಿದೆ. ಒಂದು ರೀತಿಯಲ್ಲಿ, ಇದು ಇಡೀ ದೇಶಕ್ಕೆ ಮಾದರಿಯಾಗಿದೆ. ಮೂಲಸೌಕರ್ಯಗಳು ಮಾನದಂಡವಾದಾಗ, ಕ್ರೀಡಾಪಟುಗಳ ಆತ್ಮಸ್ಥೈರ್ಯವೂ ಹೆಚ್ಚಾಗುತ್ತದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಆಟಗಾರರು ರಾಜ್ಯದಲ್ಲಿ ನವರಾತ್ರಿ ಕಾರ್ಯಕ್ರಮವನ್ನು ಆನಂದಿಸಲು ಕರೆನೀಡಿದ ಪ್ರಧಾನಿಯವರು, ಉತ್ಸವಗಳು ದುರ್ಗಾಮಾತೆಯ ಆರಾಧನೆಯನ್ನು ಮೀರಿವೆ ಮತ್ತು ಗರ್ಬಾ ನೃತ್ಯದ ಸಂತೋಷದಾಯಕ ಆಚರಣೆಗಳೂ ನಡೆಯುತ್ತವೆ. ಇದು ತನ್ನದೇ ಆದ ಗುರುತನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು.

ರಾಷ್ಟ್ರೀಯ ಜೀವನದಲ್ಲಿ ಕ್ರೀಡೆಗಳ ಮಹತ್ವವನ್ನು ಪ್ರಧಾನಿ ಪುನರುಚ್ಚರಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಆಟಗಾರರ ಗೆಲುವು, ಅವರ ಬಲವಾದ ಪ್ರದರ್ಶನವು ಇತರ ಕ್ಷೇತ್ರಗಳಲ್ಲಿ ದೇಶದ ವಿಜಯಕ್ಕೆ ದಾರಿ ಮಾಡಿಕೊಡುತ್ತದೆ. ಕ್ರೀಡೆಗಳ ಸಾಮರ್ಥ್ಯವು ದೇಶದ ಗುರುತು ಮತ್ತು ಅಸ್ಮಿತೆಯನ್ನು ಬಹುಪಟ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಕ್ರೀಡೆಗಳಿಗೆ ಸಂಬಂಧಿಸಿದ ನನ್ನ ಸ್ನೇಹಿತರಿಗೆ ನಾನು ಆಗಾಗ್ಗೆ ಹೇಳುತ್ತೇನೆ, ಯಶಸ್ಸು ಕ್ರಿಯೆಯೊಂದಿಗೆ ಪ್ರಾರಂಭವಾಗುತ್ತದೆ! ಅಂದರೆ, ನೀವು ಪ್ರಾರಂಭಿಸಿದ ಕ್ಷಣ, ಯಶಸ್ಸು ಸಹ ಪ್ರಾರಂಭವಾಗುತ್ತದೆ. ಮುನ್ನುಗ್ಗುವ ಮನೋಭಾವವನ್ನು ನೀವು ಬಿಡದಿದ್ದರೆ, ಗೆಲುವು ನಿಮ್ಮನ್ನು ಬೆನ್ನಟ್ಟುತ್ತದೆ  ಎಂದು ಪ್ರಧಾನಿ ಹೇಳಿದರು.

ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಪ್ರಗತಿಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಯವರು, 8 ವರ್ಷಗಳ ಹಿಂದೆ ಭಾರತದ ಆಟಗಾರರು ನೂರಕ್ಕೂ ಕಡಿಮೆ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಹೇಳಿದರು. ಇದಕ್ಕೆ ತದ್ವಿರುದ್ಧವಾಗಿ, ಭಾರತದಿಂದ ಭಾಗವಹಿಸುವ ಅಂತರರಾಷ್ಟ್ರೀಯ ಕೂಟಗಳ ಸಂಖ್ಯೆ ಈಗ 300 ಕ್ಕೆ ಏರಿದೆ. “8 ವರ್ಷಗಳ ಹಿಂದೆ ಭಾರತದ ಆಟಗಾರರು 20-25 ಕ್ರೀಡೆಗಳನ್ನು ಆಡಲು ಹೋಗುತ್ತಿದ್ದರು. ಈಗ ಭಾರತದ ಆಟಗಾರರು ಸುಮಾರು 40 ವಿಭಿನ್ನ ಕ್ರೀಡೆಗಳಲ್ಲಿ ಭಾಗವಹಿಸಲು ಹೋಗುತ್ತಾರೆ. ಇಂದು ಪದಕಗಳ ಸಂಖ್ಯೆ ಮತ್ತು ಭಾರತದ ಶೋಭೆ ಹೆಚ್ಚುತ್ತಿದೆ ಎಂದು ಪ್ರಧಾನಿ ಹೇಳಿದರು.

ಕೊರೊನಾದ ಕಠಿಣ ಅವಧಿಯಲ್ಲಿಯೂ ಸಹ, ಕ್ರೀಡಾ ಪಟುಗಳ ಸ್ಥೈರ್ಯ ಕುಂದಲು ಬಿಡಲಿಲ್ಲ ಎಂದು ಪ್ರಧಾನಿ ಹೇಳಿದರು. ನಾವು ಕ್ರೀಡಾ ಮನೋಭಾವದಿಂದ ಕ್ರೀಡಾಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದೇವೆ. ಟಾಪ್ಸ್ ನಂತಹ ಯೋಜನೆಗಳ ಮೂಲಕ ಮಿಷನ್ ಮೋಡ್‌ನಲ್ಲಿ ಸಿದ್ಧವಾಗಿದ್ದೇವೆ. ಇಂದು, ದೊಡ್ಡ ಆಟಗಾರರ ಯಶಸ್ಸಿನಿಂದ ಹೊಸ ಆಟಗಾರರ ಭವಿಷ್ಯವನ್ನು ರೂಪಿಸುವವರೆಗೆ, ಟಾಪ್ಸ್ ದೊಡ್ಡ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಹೇಳಿದರು.  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ವರ್ಷ ಭಾರತ ತನ್ನ ಅತ್ಯುತ್ತಮ ಒಲಿಂಪಿಕ್ಸ್ ಪ್ರದರ್ಶನ ನೀಡಿತು ಎಂದು ನೆನಪಿಸಕೊಂಡ ಪ್ರಧಾನಿಯವರು, ಅಂತೆಯೇ, ಬ್ಯಾಡ್ಮಿಂಟನ್ ತಂಡದ ಥಾಮಸ್ ಕಪ್ ಗೆಲುವು ಹೊಸ ಮೆರಗು ತಂದಿತು ಎಂದರು. ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ಯಾರಾ-ಕ್ರೀಡಾಪಟುಗಳ ಸಾಧನೆಯನ್ನು ಅವರು ಶ್ಲಾಘಿಸಿದರು. ಈ ಪುನರುತ್ಥಾನದಲ್ಲಿ ಮಹಿಳಾ ಕ್ರೀಡಾಪಟುಗಳ ಸಮಾನ ಮತ್ತು ಬಲವಾದ ಭಾಗವಹಿಸುವಿಕೆಯ ಬಗ್ಗೆ ಅವರು ಸಂತೋಷವನ್ನು ವ್ಯಕ್ತಪಡಿಸಿದರು.

ಈ ಯಶಸ್ಸನ್ನು ಮೊದಲೇ ಸಾಧಿಸಬಹುದಿತ್ತು ಎಂದು ಪ್ರಧಾನಿ ಗಮನಸೆಳೆದರು. ಆದರೆ ಅಗತ್ಯವಾದ ವೃತ್ತಿಪರತೆಯ ಬದಲು ಭಾರತದಲ್ಲಿ ಕ್ರೀಡೆಗಳು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ನಾಶವಾದವು. ನಾವು ಅದನ್ನು ಸ್ವಚ್ಛಗೊಳಿಸಿದ್ದೇವೆ ಮತ್ತು ಯುವಕರಲ್ಲಿ ತಮ್ಮ ಕನಸುಗಳ ಬಗ್ಗೆ ವಿಶ್ವಾಸವನ್ನು ಬೆಳೆಸಿದ್ದೇವೆ ಎಂದು ಅವರು ಹೇಳಿದರು. ಕೇವಲ ನೀತಿ ನಿರೂಪಣೆಯಲ್ಲಿ ಮಾತ್ರವಲ್ಲದೆ, ರಾಷ್ಟ್ರದ ಯುವಕರೊಂದಿಗೆ ಒಟ್ಟಾಗಿ ಮುಂದುವರಿಯುವ ನವ ಭಾರತದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಫಿಟ್ ಇಂಡಿಯಾ ಮತ್ತು ಖೇಲೊ ಇಂಡಿಯಾದಂತಹ ಪ್ರಯತ್ನಗಳು ಜನಾಂದೋಲನವಾಗಿವೆ. ಕಳೆದ 8 ವರ್ಷಗಳಲ್ಲಿ ದೇಶದ ಕ್ರೀಡಾ ಬಜೆಟ್ ಸುಮಾರು 70 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಇದು ಆಟಗಾರರಿಗೆ ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುತ್ತದೆ, ಇದು ಆಟಗಾರರಿಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ರಾಷ್ಟ್ರದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಸುಧಾರಿತ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ನಿವೃತ್ತ ಆಟಗಾರರ ಜೀವನವನ್ನು ಸುಲಭಗೊಳಿಸಲು ಸಹ ಪ್ರಯತ್ನಗಳು ನಡೆಯುತ್ತಿವೆ. ಈ ದಿಕ್ಕಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದರಿಂದ ಹೊಸ ಪೀಳಿಗೆಯು ನಿವೃತ್ತ ಆಟಗಾರರ ಅನುಭವಗಳಿಂದ ಪ್ರಯೋಜನ ಪಡೆಯಬಹುದು ಎಂದು ಶ್ರೀ ಮೋದಿ ಹೇಳಿದರು.

ಭಾರತದ ನಾಗರಿಕತೆ ಮತ್ತು ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿಯವರು, ಕ್ರೀಡೆಗಳು ಭಾರತದ ಪರಂಪರೆ ಮತ್ತು ಬೆಳವಣಿಗೆಯ ಪ್ರಯಾಣದ ಒಂದು ಭಾಗವಾಗಿವೆ ಎಂದು ಹೇಳಿದರು. ಆಜಾದಿ ಕಾ ಅಮೃತ ಕಾಲದಲ್ಲಿ, ದೇಶವು ಈ ಸಂಪ್ರದಾಯವನ್ನು ಹೆಮ್ಮೆಯಿಂದ ಪುನರುಜ್ಜೀವನಗೊಳಿಸುತ್ತಿದೆ. ದೇಶದ ಪ್ರಯತ್ನಗಳು ಮತ್ತು ಉತ್ಸಾಹವು ಕೇವಲ ಒಂದು ಕ್ರೀಡೆಗೆ ಸೀಮಿತವಾಗಿಲ್ಲ.  ಬದಲಿಗೆ ಭಾರತೀಯ ಕ್ರೀಡೆಗಳಾದ 'ಕಲರಿಪಯಟ್ಟು' ಮತ್ತು ಯೋಗಾಸನ ಸಹ ಪ್ರಾಮುಖ್ಯ ಪಡೆಯುತ್ತಿವೆ ಎಂದು ಪ್ರಧಾನ ಮಂತ್ರಿ ಹೇಳಿದರು, ರಾಷ್ಟ್ರೀಯ ಕ್ರೀಡಾಕೂಟದಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಈ ಆಟಗಳನ್ನು ಸೇರಿಸಿರುವುದು ನನಗೆ ಸಂತಸ ತಂದಿದೆ ಎಂದರು. ಈ ಕ್ರೀಡೆಗಳನ್ನು ಇಲ್ಲಿ ಪ್ರತಿನಿಧಿಸುತ್ತಿರುವ ಆಟಗಾರರಿಗೆ, ನಾನು ನಿರ್ದಿಷ್ಟವಾಗಿ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನೀವು ಒಂದು ಕಡೆ, ಸಾವಿರಾರು ವರ್ಷಗಳ ಹಳೆಯ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೀರಿ, ಅದೇ ಸಮಯದಲ್ಲಿ ಕ್ರೀಡಾ ಪ್ರಪಂಚದ ಭವಿಷ್ಯಕ್ಕೆ ನಾಯಕತ್ವವನ್ನು ನೀಡುತ್ತೀರಿ. ಮುಂದಿನ ದಿನಗಳಲ್ಲಿ ಈ ಆಟಗಳು ಜಾಗತಿಕ ಮಾನ್ಯತೆಯನ್ನು ಪಡೆಯುವಾಗ, ಈ ಕ್ಷೇತ್ರಗಳಲ್ಲಿ ನಿಮ್ಮ ಹೆಸರುಗಳು ದಂತಕಥೆಗಳಾಗಿರುತ್ತವೆ ಎಂದು ಪ್ರಧಾನಿ ಹೇಳಿದರು.

ತಮ್ಮ ಭಾಷಣವನ್ನು ವಿಳಾಸವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನ ಮಂತ್ರಿಯವರು ನೇರವಾಗಿ ಆಟಗಾರರೊಂದಿಗೆ ಸಂವಾದ ನಡೆಸಿದರು ಮತ್ತು ಅವರೊಂದಿಗೆ ಮಂತ್ರವನ್ನು ಹಂಚಿಕೊಂಡರು. "ನೀವು ಸ್ಪರ್ಧೆಯನ್ನು ಗೆಲ್ಲಲು ಬಯಸಿದರೆ, ನೀವು ಬದ್ಧತೆ ಮತ್ತು ನಿರಂತರತೆಯನ್ನು ಕಾಪಾಡಿಕೊಳ್ಳುವುದನ್ನು ಕಲಿಯಬೇಕು" ಎಂದು ಅವರು ಹೇಳಿದರು. ಕ್ರೀಡಾ ಮನೋಭಾವದ ಕುರಿತು ಮಾತನಾಡುತ್ತಾ, ಕ್ರೀಡೆಗಳಲ್ಲಿ ಸೋಲು ಮತ್ತು ವಿಜಯವನ್ನು ಅಂತಿಮ ಫಲಿತಾಂಶವೆಂದು ಎಂದಿಗೂ ಪರಿಗಣಿಸಬಾರದು ಎಂದರು. ಕ್ರೀಡಾ ಮನೋಭಾವವು ನಿಮ್ಮ ಜೀವನದ ಒಂದು ಭಾಗವಾಗಿದ್ದರೆ ಭಾರತದಂತಹ ಯುವ ದೇಶದ ಕನಸುಗಳನ್ನು ಸಾಕಾರಗೊಳಿಸಬಹುದು ಎಂದು ಶ್ರೀ ಮೋದಿ ಹೇಳಿದರು. "ನೀವು ನೆನಪಿಟ್ಟುಕೊಳ್ಳಬೇಕು, ಎಲ್ಲಿ ಚಲನೆ ಇದೆಯೋ, ಅಲ್ಲಿ ಪ್ರಗತಿ ಇರುತ್ತದೆ" ಎಂದು ಶ್ರೀ ಮೋದಿ ಹೇಳಿದರು. "ನೀವು ಈ ಆವೇಗವನ್ನು ಕ್ರೀಡಾಂಗಣದ ಹೊರಗೂ ಉಳಿಸಿಕೊಳ್ಳಬೇಕು. ಈ ವೇಗವು ನಿಮ್ಮ ಜೀವನದ ಧ್ಯೇಯವಾಗಿರಬೇಕು. ನನಗೆ ಖಾತ್ರಿಯಿದೆ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಿಮ್ಮ ಗೆಲುವು ರಾಷ್ಟ್ರದ ಸಂಭ್ರಮಕ್ಕೆ ಕಾರಣವಾಗುತ್ತದೆ ಮತ್ತು ಭವಿಷ್ಯದಲ್ಲಿ ಹೊಸ ವಿಶ್ವಾಸವನ್ನು ತುಂಬುತ್ತದೆ ಎಂದು ಪ್ರಧಾನಿಯವರು ಹೇಳಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್‌, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಸಂಸತ್ ಸದಸ್ಯರಾದ ಶ್ರೀ ಸಿ ಆರ್ ಪಾಟೀಲ್, ಗುಜರಾತ್ ಗೃಹ ಸಚಿವ ಶ್ರೀ ಹರ್ಶ್ ಸಾಂಘ್ವಿ, ಮತ್ತು ಅಹಮದಾಬಾದ್‌ ಮೇಯರ್ ಶ್ರೀ ಕಿರಿತ್ ಪರ್ಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.


ಹಿನ್ನೆಲೆ

ಗುಜರಾತ್ ರಾಜ್ಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಮೊದಲ ಬಾರಿಗೆ ಆಯೋಜಿಸಲಾಗಿದೆ. ಇದನ್ನು 2022 ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12 ರವರೆಗೆ ಆಯೋಜಿಸಲಾಗಿದೆ.  ದೇಶಾದ್ಯಂತ ಸುಮಾರು 15,000 ಕ್ರೀಡಾಪಟುಗಳು, ತರಬೇತುದಾರರು ಮತ್ತು ಅಧಿಕಾರಿಗಳು 36 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲಿದ್ದು, ಇದುವರೆಗಿನ ಅತಿದೊಡ್ಡ ರಾಷ್ಟ್ರೀಯ ಕ್ರೀಡಾಕೂಟವಾಗಿದೆ. ಕ್ರೀಡಾಕೂಟಗಳನ್ನು ಆರು ನಗರಗಳಲ್ಲಿ ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಭಾವನಗರಗಳಲ್ಲಿ ಆಯೋಜಿಸಲಾಗುವುದು. ಅಂದಿನ ಮುಖ್ಯಮಂತ್ರಿ ಮತ್ತು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಗುಜರಾತ್ ಅಂತರರಾಷ್ಟ್ರೀಯ ಮಾನದಂಡಗಳ ದೃಢವಾದ ಕ್ರೀಡಾ ಮೂಲಸೌಕರ್ಯವನ್ನು ನಿರ್ಮಿಸುವ ಪ್ರಯಾಣವನ್ನು ಕೈಗೊಂಡಿತು. ಇದು ಬಹಳ ಕಡಿಮೆ ಅವಧಿಯಲ್ಲಿ ಕ್ರೀಡಾಕೂಟಕ್ಕೆ ತಯಾರಿ ನಡೆಸಲು ರಾಜ್ಯಕ್ಕೆ ನೆರವಾಯಿತು.

 

 

 

 

 

 

 

 

 

 

 

 

 

 

*****


  •  

 


(Release ID: 1863750) Visitor Counter : 412