ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

 8 ವರ್ಷ ಪೂರೈಸಿದ 'ಮೇಕ್ ಇನ್ ಇಂಡಿಯಾ', ವಾರ್ಷಿಕ ಎಫ್.ಡಿ.ಐ ದ್ವಿಗುಣಗೊಂಡು 83 ಶತಕೋಟಿ ಡಾಲರ್ ಗೆ ಏರಿಕೆ


ಆತ್ಮನಿರ್ಭರ ಭಾರತದ ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿಯ ಸಾಕಾರಕ್ಕೆ ಸೆಮಿಕಂಡಕ್ಟರ್ ಗಳಂತಹ ಪ್ರಮುಖ ಕ್ಷೇತ್ರಗಳತ್ತ ಗಮನ ಹರಿಸಲಿದೆ ಕೇಂದ್ರ ಸರ್ಕಾರ

ತಗ್ಗಿದ ಅನುಸರಣಾ ಹೊರೆಯಿಂದ ಇಳಿದ ವೆಚ್ಚ, ದೇಶದಲ್ಲಿ ಸುಗಮ ವ್ಯಾಪಾರವರ್ಧನೆ

ಎಲ್ಲಾ 14 ಯೋಜನೆಗಳು ಕಾರ್ಯನಿರ್ವಹಿಸುವುದರೊಂದಿಗೆ ಸ್ಥಳೀಯ ಉತ್ಪಾದನೆಗೆ ಭಾರಿ ಉತ್ತೇಜನ ನೀಡುತ್ತಿರುವ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ (ಪಿಎಲ್ಐ)

2013ರ ಏಪ್ರಿಲ್-ಆಗಸ್ಟ್ ಗೆ ಹೋಲಿಸಿದರೆ 2022 ರ ಇದೇ ಅವಧಿಯಲ್ಲಿ ಶೇ.636 ರಷ್ಟು ಅದ್ಭುತ ವೃದ್ಧಿ ದಾಖಲಿಸಿದ ಭಾರತದ ಆಟಿಕೆಗಳ ರಫ್ತು

ಸಾರ್ವಜನಿಕ ದಾಸ್ತಾನಿನಲ್ಲಿ ಸರಕುಗಳು, ಕಾಮಗಾರಿಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡುವ ಮೂಲಕ ಸ್ಥಳೀಯ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿರುವ ಸಾರ್ವಜನಿಕ ದಾಸ್ತಾನು (ಮೇಕ್ ಇನ್ ಇಂಡಿಯಾಗೆ ಆದ್ಯತೆ) ಆದೇಶ -2017

Posted On: 24 SEP 2022 4:11PM by PIB Bengaluru

ಹೂಡಿಕೆಗೆ ಅನುಕೂಲ ಕಲ್ಪಿಸುವ, ನಾವಿನ್ಯವನ್ನು ಉತ್ತೇಜಿಸುವ, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುವ ಮತ್ತು ಅತ್ಯುತ್ತಮ ದರ್ಜೆಯ ಉತ್ಪಾದನಾ ಮೂಲಸೌಕರ್ಯವನ್ನು ನಿರ್ಮಿಸಲು ಬಯಸುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮೇಕ್ ಇನ್ ಇಂಡಿಯಾ, 2022 ರ ಸೆಪ್ಟೆಂಬರ್ 25ಕ್ಕೆ 8 ವರ್ಷಗಳ ಮಹತ್ವದ ಸುಧಾರಣೆಯ ಪಯಣವನ್ನು ಪೂರ್ಣಗೊಳಿಸುತ್ತದೆ.

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ 2014ರಲ್ಲಿ ಪ್ರಾರಂಭವಾದ 'ಮೇಕ್ ಇನ್ ಇಂಡಿಯಾ' ದೇಶವನ್ನು ಪ್ರಮುಖ ಜಾಗತಿಕ ಉತ್ಪಾದನೆ ಮತ್ತು ಹೂಡಿಕೆಯ ತಾಣವಾಗಿ ಪರಿವರ್ತಿಸುತ್ತಿದೆ. ಈ ಉಪಕ್ರಮವು ವಿಶ್ವದಾದ್ಯಂತ ಸಂಭಾವ್ಯ ಹೂಡಿಕೆದಾರರು ಮತ್ತು ಪಾಲುದಾರರಿಗೆ 'ನವ ಭಾರತ'ದ ಪ್ರಗತಿಯ ಗಾಥೆಯಲ್ಲಿ ಭಾಗವಹಿಸಲು ಮುಕ್ತ ಆಹ್ವಾನ ನೀಡಿದೆ.  ಮೇಕ್ ಇನ್ ಇಂಡಿಯಾ 27 ವಲಯಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಇವುಗಳಲ್ಲಿ ಉತ್ಪಾದನೆ ಮತ್ತು ಸೇವೆಗಳಂತಹ ವ್ಯೂಹಾತ್ಮಕ ವಲಯಗಳು ಸಹ ಸೇರಿವೆ.

ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು, ಭಾರತ ಸರ್ಕಾರವು ಉದಾರ ಮತ್ತು ಪಾರದರ್ಶಕ ನೀತಿಯನ್ನು ಜಾರಿಗೆ ತಂದಿದೆ, ಇದರಲ್ಲಿ ಹೆಚ್ಚಿನ ವಲಯಗಳು ಸ್ವಯಂಚಾಲಿತ ಮಾರ್ಗದ ಅಡಿಯಲ್ಲಿ ಎಫ್.ಡಿ.ಐಗೆ ಮುಕ್ತವಾಗಿವೆ. ಭಾರತದಲ್ಲಿ ಎಫ್.ಡಿ.ಐ ಒಳಹರಿವು 2014-2015 ರಲ್ಲಿ 45.15 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು ಮತ್ತು ಅಂದಿನಿಂದ ಸತತವಾಗಿ ಎಂಟು ವರ್ಷಗಳವರೆಗೆ ದಾಖಲೆಯ ಎಫ್.ಡಿ.ಐ ಒಳಹರಿವು ಬಂದಿದೆ. 2021-22ನೇ ಸಾಲಿನಲ್ಲಿ 83.6 ಶತಕೋಟಿ ಅಮೆರಿಕನ್ ಡಾಲರ್ ಎಫ್.ಡಿ.ಐ ದಾಖಲಾಗಿದೆ. ಈ ಎಫ್.ಡಿ.ಐ 101 ದೇಶಗಳಿಂದ ಬಂದಿದ್ದು, ದೇಶದ 31 ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ಹಾಗೂ 57 ವಲಯಗಳಲ್ಲಿ ಹೂಡಿಕೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸುಧಾರಣೆಗಳು ಮತ್ತು ಸುಗಮ ವ್ಯಾಪಾರದ ಹಿನ್ನೆಲೆಯಲ್ಲಿ, ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಎಫ್.ಡಿ.ಐ ಅನ್ನು ಆಕರ್ಷಿಸುವ ಹಾದಿಯಲ್ಲಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ದೊಡ್ಡ ಉತ್ತೇಜನವಾಗಿ 2020-21 ರಲ್ಲಿ 14 ಪ್ರಮುಖ ಉತ್ಪಾದನಾ ವಲಯಗಳಲ್ಲಿ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯನ್ನು ಪ್ರಾರಂಭಿಸಲಾಯಿತು. ಪಿಎಲ್ಐ ಯೋಜನೆಯು ಭಾರತವು ತುಲನಾತ್ಮಕ ಪ್ರಯೋಜನವನ್ನು ಹೊಂದಿರುವ ವ್ಯೂಹಾತ್ಮಕ ಬೆಳವಣಿಗೆಯ ಕ್ಷೇತ್ರಗಳಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು, ಪುನಶ್ಚೈತನ್ಯದ ಪೂರೈಕೆ ಸರಪಳಿಗಳನ್ನು ರೂಪಿಸುವುದು, ಭಾರತೀಯ ಕೈಗಾರಿಕೆಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವುದು ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದು ಸೇರಿವೆ. ಪಿಎಲ್ಐ ಯೋಜನೆಯು ಉತ್ಪಾದನೆ ಮತ್ತು ಉದ್ಯೋಗಕ್ಕಾಗಿ ಗಮನಾರ್ಹ ಲಾಭಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಪ್ರಯೋಜನಗಳು ಎಂಎಸ್ಎಂಇ ಪರಿಸರ ವ್ಯವಸ್ಥೆಗೆ ವಿಸ್ತರಿಸುತ್ತವೆ.
ವಿಶ್ವ ಆರ್ಥಿಕತೆಯಲ್ಲಿ ಸೆಮಿಕಂಡಕ್ಟರ್-ಅರೆವಾಹಕಗಳ ಪ್ರಾಮುಖ್ಯವನ್ನು ಮನಗಂಡು, ಭಾರತ ಸರ್ಕಾರವು ಭಾರತದಲ್ಲಿ ಸೆಮಿಕಂಡಕ್ಟರ್, ಡಿಸ್ ಪ್ಲೇ, ವಿನ್ಯಾಸ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು 10 ಶತಕೋಟಿ ಅಮೆರಿಕನ್ ಡಾಲರ್ ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬಲಪಡಿಸಲು, ಭಾರತ ಸರ್ಕಾರವು ಇತರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸುಧಾರಣಾ ಕ್ರಮಗಳಲ್ಲಿ ಕಾನೂನುಗಳಿಗೆ ತಿದ್ದುಪಡಿ, ಅನಗತ್ಯ ನಿಬಂಧನೆಗಳ ಹೊರೆಯನ್ನು ತಗ್ಗಿಸುವುದು, ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಭಾರತದಲ್ಲಿ ಸುಗಮ ವ್ಯಾಪಾರವರ್ಧನೆ  ಮಾರ್ಗಸೂಚಿಗಳು ಮತ್ತು ನಿಬಂಧನೆಗಳ ಉದಾರೀಕರಣ ಸೇರಿವೆ. ಸರಳೀಕರಣ, ತರ್ಕಬದ್ಧಗೊಳಿಸುವಿಕೆ, ಅಪರಾಧಮುಕ್ತೀಕರಣ ಮತ್ತು ಡಿಜಿಟಲೀಕರಣದ ಮೂಲಕ ನಿಯಮಗಳು ಮತ್ತು ನಿಬಂಧನೆಗಳಿಗೆ ಹೊರೆಯಾಗುವ ಅನುಸರಣೆಗಳನ್ನು ತಗ್ಗಿಸಲಾಗಿದ್ದು, ಇದು ಭಾರತದಲ್ಲಿ ಸುಗಮ ವ್ಯಾಪಾರಕ್ಕೆ ಇಂಬು ನೀಡಿದೆ. ಹೆಚ್ಚುವರಿಯಾಗಿ, ಕಾರ್ಮಿಕ ಸುಧಾರಣೆಗಳು ನೇಮಕಾತಿ ಮತ್ತು ಕೆಲಸದಿಂದ ತೆಗೆದುಹಾಕುವಲ್ಲಿ ನಮ್ಯತೆಯನ್ನು ತಂದಿವೆ. ಸ್ಥಳೀಯ ಉತ್ಪಾದನೆಯಲ್ಲಿ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಪರಿಚಯಿಸಲಾಗಿದೆ. ಉತ್ಪಾದನೆ ಮತ್ತು ಹೂಡಿಕೆಗಳನ್ನು ಉತ್ತೇಜಿಸುವ ಕ್ರಮಗಳಲ್ಲಿ ಸಾಂಸ್ಥಿಕ ತೆರಿಗೆಗಳ ಕಡಿತ, ಸಾರ್ವಜನಿಕ ಸಂಗ್ರಹಣೆ ಆದೇಶಗಳು ಮತ್ತು ಹಂತ ಹಂತವಾದ ಉತ್ಪಾದನಾ ಕಾರ್ಯಕ್ರಮವೂ ಸೇರಿದೆ.

ಸಾರ್ವಜನಿಕ ಸಂಗ್ರಹಣೆಯಲ್ಲಿ ಸ್ಥಳೀಯ ಕೈಗಾರಿಕೆಗಳ ಸರಕುಗಳು, ಕಾಮಗಾರಿಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡುವ ಮೂಲಕ ಅವುಗಳನ್ನು ಉತ್ತೇಜಿಸಲು, ಸಾರ್ವಜನಿಕ ದಾಸ್ತಾನು (ಮೇಕ್ ಇನ್ ಇಂಡಿಯಾಗೆ ಆದ್ಯತೆ) ಆದೇಶ 2017 ಅನ್ನು ಸಾಮಾನ್ಯ ಹಣಕಾಸು ನಿಯಮಗಳು 2017ರ ನಿಯಮ 153 (iii) ಕ್ಕೆ ಅನುಸಾರವಾಗಿ, ಸಕ್ರಿಯಗೊಳಿಸುವ ನಿಬಂಧನೆಯಾಗಿ ಹೊರಡಿಸಲಾಗಿದೆ.  ಈ ನೀತಿಯು ಕೇವಲ ವ್ಯಾಪಾರಕ್ಕೆ ಆಮದು ಮಾಡಿಕೊಳ್ಳುವ ಅಥವಾ ವಸ್ತುಗಳನ್ನು ಜೋಡಿಸುವ ಘಟಕಗಳ ಮೇಲಿನ ಸಾರ್ವಜನಿಕ ದಾಸ್ತಾನು ಚಟುವಟಿಕೆಗಳಲ್ಲಿ ದೇಶೀಯ ತಯಾರಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ನೀತಿಯು ಎಲ್ಲಾ ಸಚಿವಾಲಯಗಳು ಅಥವಾ ಇಲಾಖೆಗಳು ಅಥವಾ ಅದಕ್ಕೆ ಸಂಪರ್ಕಿತವಾದ ಅಥವಾ ಅಧೀನ ಕಚೇರಿಗಳು ಅಥವಾ ಭಾರತ ಸರ್ಕಾರದಿಂದ ನಿಯಂತ್ರಿಸಲಾಗುವ ಸ್ವಾಯತ್ತ ಸಂಸ್ಥೆಗೆ ಅನ್ವಯಿಸುತ್ತದೆ ಮತ್ತು ಕಂಪನಿಗಳ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾದ ಸರ್ಕಾರಿ ಕಂಪನಿಗಳನ್ನೂ ಒಳಗೊಂಡಿರುತ್ತದೆ.

ಇದಲ್ಲದೆ, ಅನುಮೋದನೆಗಳು ಮತ್ತು ಅನುಮತಿಗಳಿಗಾಗಿ ಹೂಡಿಕೆದಾರರಿಗೆ ಒಂದೇ ಡಿಜಿಟಲ್ ವೇದಿಕೆಯನ್ನು ಒದಗಿಸುವ ಮೂಲಕ ಸುಗಮ ವ್ಯಾಪಾರವನ್ನು ಸುಧಾರಿಸಲು ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆ (ಎನ್.ಎಸ್.ಡಬ್ಲ್ಯು.ಎಸ್) ಅನ್ನು ಸೆಪ್ಟೆಂಬರ್ 2021 ರಲ್ಲಿ ಮೃದು-ಆರಂಭ ನೀಡಲಾಯಿತು. ಹೂಡಿಕೆದಾರರ ಅನುಭವವನ್ನು ಹೆಚ್ಚಿಸಲು ಈ ಪೋರ್ಟಲ್ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳು / ಇಲಾಖೆಗಳ ಅನೇಕ ಅಸ್ತಿತ್ವದಲ್ಲಿರುವ ಅನುಮೋದನೆ ವ್ಯವಸ್ಥೆಗಳನ್ನು ಸಂಯೋಜಿಸಿದೆ.

ಪ್ರಧಾನಮಂತ್ರಿಯವರ ಗತಿಶಕ್ತಿ ಕಾರ್ಯಕ್ರಮ ಎಂದು ಕರೆಯಲಾಗುವ ದೇಶದ ಉತ್ಪಾದನಾ ವಲಯಗಳಿಗೆ ಬಹು ಮಾದರಿ ಸಂಪರ್ಕಕ್ಕಾಗಿ ಸರ್ಕಾರವು ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದೆ, ಇದು ಸಂಪರ್ಕವನ್ನು ಸುಧಾರಿಸುವ ಮೂಲಸೌಕರ್ಯಗಳ ಸೃಷ್ಟಿಯ ಮೂಲಕ ವ್ಯಾಪಾರ ಕಾರ್ಯಾಚರಣೆಗಳಲ್ಲಿ ವ್ಯವಸ್ಥಾಪನಾ ದಕ್ಷತೆಯನ್ನು ಖಾತ್ರಿಪಡಿಸುತ್ತದೆ. ಇದು ಸರಕುಗಳು ಮತ್ತು ಜನರ ವೇಗದ ಚಲನೆಯನ್ನು ಶಕ್ತಗೊಳಿಸುತ್ತದೆ, ಮಾರುಕಟ್ಟೆಗಳು, ತಾಣಗಳು ಮತ್ತು ಅವಕಾಶಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಒಂದು ಜಿಲ್ಲೆ-ಒಂದು ಉತ್ಪನ್ನ (ಒಡಿಒಪಿ) ಉಪಕ್ರಮವು ದೇಶದ ಪ್ರತಿಯೊಂದು ಜಿಲ್ಲೆಯಿಂದ ಸ್ಥಳೀಯ ಉತ್ಪನ್ನಗಳ ಪ್ರಚಾರ ಮತ್ತು ಉತ್ಪಾದನೆಗೆ ಅನುಕೂಲ ಮಾಡಿಕೊಡುವ 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನದ ಮತ್ತೊಂದು ಅಭಿವ್ಯಕ್ತಿಯಾಗಿದೆ ಮತ್ತು ಕೈಮಗ್ಗ, ಕರಕುಶಲ ವಸ್ತುಗಳು, ಜವಳಿ, ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಕುಶಲಕರ್ಮಿಗಳು ಮತ್ತು ತಯಾರಕರಿಗೆ ಜಾಗತಿಕ ವೇದಿಕೆಯನ್ನು ಒದಗಿಸುತ್ತದೆ, ಆ ಮೂಲಕ ದೇಶದ ವಿವಿಧ ಪ್ರದೇಶಗಳ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆಗಸ್ಟ್ 2020 ರಲ್ಲಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಸಮಯದಲ್ಲಿ, ಭಾರತವನ್ನು ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವಾಗಿ ರೂಪಿಸುವ ಮತ್ತು ದೇಶೀಯ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

ಭಾರತದಲ್ಲಿ ಆಟಿಕೆ ಉದ್ಯಮವು ಐತಿಹಾಸಿಕವಾಗಿ ಆಮದು ಅವಲಂಬಿತವಾಗಿದೆ. ಕಚ್ಚಾವಸ್ತು, ತಂತ್ರಜ್ಞಾನ, ವಿನ್ಯಾಸ ಸಾಮರ್ಥ್ಯ ಇತ್ಯಾದಿಗಳ ಕೊರತೆಯು ಆಟಿಕೆಗಳು ಮತ್ತು ಅದರ ಘಟಕಗಳ ಬೃಹತ್ ಆಮದಿಗೆ ಕಾರಣವಾಯಿತು. 2018-19ರಲ್ಲಿ 371 ದಶಲಕ್ಷ ಅಮೆರಿಕನ್ ಡಾಲರ್ (2960 ಕೋಟಿ ರೂ.) ಮೌಲ್ಯದ ಆಟಿಕೆಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳಲಾಗಿದೆ.  ಈ ಆಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದ ಆಟಿಕೆಗಳು ಅಸುರಕ್ಷಿತ, ಕಳಪೆ ಗುಣಮಟ್ಟ, ಖೋಟಾ ಮತ್ತು ಅಗ್ಗವಾದವುಗಳಾಗಿವೆ.

ಕಡಿಮೆ ಗುಣಮಟ್ಟದ ಮತ್ತು ಅಪಾಯಕಾರಿ ಆಟಿಕೆಗಳ ಆಮದನ್ನು ಪರಿಹರಿಸಲು ಮತ್ತು ಆಟಿಕೆಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು, ಸರ್ಕಾರವು ಹಲವಾರು ವ್ಯೂಹಾತ್ಮಕ ಮಧ್ಯಸ್ಥಿಕೆಗಳನ್ನು ತೆಗೆದುಕೊಂಡಿದೆ. ಕೆಲವು ಪ್ರಮುಖ ಉಪಕ್ರಮಗಳಲ್ಲಿ ಮೂಲ ಸೀಮಾ ಸುಂಕವನ್ನು ಶೇ.20 ರಿಂದ ಶೇ.60ಕ್ಕೆ ಹೆಚ್ಚಿಸುವುದು, ಗುಣಮಟ್ಟ ನಿಯಂತ್ರಣ ಆದೇಶದ ಅನುಷ್ಠಾನ, ಆಮದು ಮಾಡಿದ ಆಟಿಕೆಗಳ ಕಡ್ಡಾಯ ಮಾದರಿ ಪರೀಕ್ಷೆ, ದೇಶೀಯ ಆಟಿಕೆ ತಯಾರಕರಿಗೆ 850 ಕ್ಕೂ ಹೆಚ್ಚು ಬಿಐಎಸ್ ಪರವಾನಗಿಗಳನ್ನು ನೀಡುವುದು, ಆಟಿಕೆ ಗುಚ್ಛಗಳ ಅಭಿವೃದ್ಧಿ ಇತ್ಯಾದಿಗಳು ಸೇರಿವೆ. ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ನಾವೀನ್ಯತೆ ಮತ್ತು ಹೊಸ ಯುಗದ ವಿನ್ಯಾಸವನ್ನು ಉತ್ತೇಜಿಸಲು ದೇಶೀಯ ಆಟಿಕೆಗಳನ್ನು ಉತ್ತೇಜಿಸಲು ಇಂಡಿಯಾ ಟಾಯ್ ಫೇರ್ 2021, ಟಾಯ್ಕಾಥಾನ್ 2021, ಟಾಯ್ ಬಿಸಿನೆಸ್ ಲೀಗ್ 2022 ಸೇರಿದಂತೆ ಹಲವಾರು ಪ್ರಚಾರ ಉಪಕ್ರಮಗಳನ್ನು ನಡೆಸಲಾಗಿದೆ.

ದೇಶೀಯ ಆಟಿಕೆ ತಯಾರಕರ ಪ್ರಶಂಸನಾರ್ಹ ಪ್ರಾಮಾಣಿಕ ಪ್ರಯತ್ನಗಳಿಂದ, ಕೋವಿಡ್ -19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಭಾರತೀಯ ಆಟಿಕೆ ಉದ್ಯಮದ ವೃದ್ಧಿ 2 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಗಮನಾರ್ಹವಾಗಿದೆ.  2021-22ನೇ ಹಣಕಾಸು ವರ್ಷದಲ್ಲಿ ಆಟಿಕೆಗಳ ಆಮದು ಶೇ.70ರಷ್ಟು 110 ದಶಲಕ್ಷ ಡಾಲರ್ ಗೆ (877.8 ಕೋಟಿ ರೂ.) ತಗ್ಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಆಟಿಕೆಗಳ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಅದೇ ವೇಳೆ, ಉದ್ಯಮದ ಪ್ರಯತ್ನಗಳು 2021-22ನೇ ಹಣಕಾಸು ವರ್ಷದಲ್ಲಿ 326 ದಶಲಕ್ಷ ಅಮೆರಿಕನ್ ಡಾಲರ್ (2601.5 ಕೋಟಿ ರೂ.) ಆಟಿಕೆಗಳನ್ನು ರಫ್ತು ಮಾಡಲು ಕಾರಣವಾಗಿವೆ, ಇದು 18-19 ರ ಹಣಕಾಸು ವರ್ಷದಲ್ಲಿದ್ದ 202 ದಶಲಕ್ಷ ಅಮೆರಿಕನ್ ಡಾಲರ್ (1612 ಕೋಟಿ ರೂ.) ಗಿಂತ ಶೇ. 61 ಕ್ಕಿಂತ ಹೆಚ್ಚಾಗಿದೆ. ಭಾರತದ ಆಟಿಕೆಗಳ ರಫ್ತು 2013 ರ ಇದೇ ಅವಧಿಗೆ ಹೋಲಿಸಿದರೆ 2022 ರ ಏಪ್ರಿಲ್-ಆಗಸ್ಟ್ ನಲ್ಲಿ ಶೇ.636ರಷ್ಟು ಅದ್ಭುತ ವೃದ್ಧಿಯನ್ನು ದಾಖಲಿಸಿದೆ.

ದೇಶೀಯ ಮೌಲ್ಯವರ್ಧನೆ ಮತ್ತು ಸ್ಥಳೀಯ ಮೂಲಗಳ ಹೆಚ್ಚಳ, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯ ಮತ್ತು ಸುಸ್ಥಿರತೆ ಕ್ರಮಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ಸೇರಿದಂತೆ ಭಾರತೀಯ ಉತ್ಪಾದನೆಯಲ್ಲಿ ಬದಲಾವಣೆಯನ್ನು ಗುರುತಿಸುವ ಹಲವಾರು ಪ್ರವೃತ್ತಿ ಕಂಡುಬಂದಿವೆ.

ಮೇಕ್ ಇನ್ ಇಂಡಿಯಾ ಉಪಕ್ರಮವು ಭಾರತದಲ್ಲಿ ವ್ಯಾಪಾರ ಮಾಡುವ ಹೂಡಿಕೆದಾರರಿಗೆ ಮತ್ತು ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ರಾಷ್ಟ್ರದ ವ್ಯಾಪಾರ ಪರಿಸರ ವ್ಯವಸ್ಥೆ ಅನುಕೂಲಕರವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಶ್ರಮಿಸುತ್ತಿದೆ. ಹೂಡಿಕೆಯ ಒಳಹರಿವು ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾದ ಹಲವಾರು ಸುಧಾರಣೆಗಳ ಮೂಲಕ ಇದನ್ನು ಮಾಡಲಾಗಿದೆ.

ಈ ಉಪಕ್ರಮವು ಮುಂಚೂಣಿಯಲ್ಲಿರುವುದರಿಂದ, 'ಮೇಡ್ ಇನ್ ಇಂಡಿಯಾ' ಆಗಿರುವ ಉತ್ಪನ್ನಗಳು ಸಹ 'ಮೇಡ್ ಫಾರ್ ದಿ ವರ್ಲ್ಡ್' ಆಗಬೇಕು ಎಂಬ ಗುರಿಯನ್ನು ಭಾರತದಲ್ಲಿನ ಉದ್ದಿಮೆಗಳು ಹೊಂದಿವೆ, ಇದು ಗುಣಮಟ್ಟದ ಜಾಗತಿಕ ಮಾನದಂಡಗಳಿಗೆ ಬದ್ಧವಾಗಿದೆ.

********


(Release ID: 1861993) Visitor Counter : 491