ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಷ್ಯಾದ ಅಧ್ಯಕ್ಷರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರಾಸ್ತಾವಿಕ ನುಡಿ

Posted On: 16 SEP 2022 11:57PM by PIB Bengaluru

ಘನತೆವೆತ್ತವರೇ,

ಮತ್ತೊಮ್ಮೆ ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ ಮತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸುವ ಅವಕಾಶವೂ ಸಿಕ್ಕಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ನೀವು ಭೇಟಿ ನೀಡಿದಾಗ, ನಾವು ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಮತ್ತು ನಂತರವೂ, ನೀವು ಹೇಳಿದಂತೆ, ನಾವು ಒಮ್ಮೆ ದೂರವಾಣಿಯಲ್ಲಿ ಚರ್ಚೆ ಮಾಡಿದ್ದೇವೆ ಮತ್ತು ಅಲ್ಲಿಯೂ ನಾವು ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ವಿಷಯಗಳ ಬಗ್ಗೆ ಮತ್ತು  ಪ್ರಪಂಚದಲ್ಲಿರುವ ಸಮಸ್ಯೆಗಳ ಬಗ್ಗೆ ಬಹಳ ವಿವರವಾಗಿ ಚರ್ಚಿಸಿದ್ದೇವೆ. ಇಂದು ನಾವು ಮತ್ತೊಮ್ಮೆ ಭೇಟಿಯಾಗಿದ್ದೇವೆ ಮತ್ತು ಇಂದು ಜಗತ್ತು ಮತ್ತು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ಆಹಾರ ಭದ್ರತೆ, ಇಂಧನ ಭದ್ರತೆ, ರಸಗೊಬ್ಬರಗಳ ಸಮಸ್ಯೆಗಳು; ಮತ್ತು ನಾವು ಕೆಲವು ಮಾರ್ಗವನ್ನು ಕಂಡುಕೊಳ್ಳಬೇಕು ಮತ್ತು ನೀವೂ ಅದಕ್ಕೆ ಕೊಡುಗೆ ನೀಡಬೇಕು. ಇಂದು ನಾವು ಆ ವಿಷಯಗಳನ್ನು ಚರ್ಚಿಸಲು ಅವಕಾಶ ಸಿಗುತ್ತಿದೆ.


ಘನತೆವೆತ್ತವರೇ,

ನಾನು ನಿಮಗೆ ಮತ್ತು ಉಕ್ರೇನ್ ದೇಶ ಇಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಏಕೆಂದರೆ ಆರಂಭಿಕ ದಿನಗಳಲ್ಲಿ ನಮ್ಮ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಕ್ಕಿಬಿದ್ದಾಗ, ಬಿಕ್ಕಟ್ಟಿನ ಸಮಯದಲ್ಲಿ, ನಿಮ್ಮ ಸಹಾಯದಿಂದ ಮತ್ತು ಉಕ್ರೇನ್ ಸಹಾಯದಿಂದ, ನಾವು ನಮ್ಮ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮತ್ತು ಅವರನ್ನು ತಮ್ಮ ಮನೆಗಳಿಗೆ ಕಳುಹಿಸಲು ಸಾಧ್ಯವಾಯಿತು,  ಇದಕ್ಕಾಗಿ ನಾನು ಎರಡೂ ದೇಶಗಳಿಗೆ ಅಭಾರಿಯಾಗಿದ್ದೇನೆ.

ಘನತೆವೆತ್ತವರೇ,

ಇಂದಿನ ಯುಗವು ಯುದ್ಧದ್ದಲ್ಲ ಎಂದು ನನಗೆ ತಿಳಿದಿದೆ  ಮತ್ತು ಪ್ರಜಾಪ್ರಭುತ್ವ ಮತ್ತು ರಾಜತಾಂತ್ರಿಕತೆ ಮತ್ತು ಸಂವಾದ ಇವೆಲ್ಲವೂ ಜಗತ್ತನ್ನು ಮುಟ್ಟುವ  ವಿಷಯಗಳು ಎಂದು  ನಾವು ನಿಮ್ಮೊಂದಿಗೆ ಅನೇಕ ಬಾರಿ ದೂರವಾಣಿಯಲ್ಲಿ ಮಾತನಾಡಿದ್ದೇವೆ.  ಮುಂದಿನ ದಿನಗಳಲ್ಲಿ ನಾವು ಶಾಂತಿಯ ಹಾದಿಯಲ್ಲಿ ಹೇಗೆ ಮುನ್ನಡೆಯಬಹುದು ಎಂಬುದನ್ನು ಚರ್ಚಿಸಲು ಇಂದು ನಮಗೆ ಅವಕಾಶವಿದೆ. ನಿಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಕೂಡ ನನಗೆ ಅವಕಾಶ ಸಿಗುತ್ತದೆ.

ಘನತೆವೆತ್ತವರೇ,

ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಹಲವು ಪಟ್ಟು ಹೆಚ್ಚಾಗಿದೆ. ನಾವು ಈ ಸಂಬಂಧವನ್ನು ಗೌರವಿಸುತ್ತೇವೆ ಏಕೆಂದರೆ ನಾವು ಕಳೆದ ಹಲವಾರು ದಶಕಗಳಿಂದ ಪ್ರತಿ ಕ್ಷಣವೂ ಪರಸ್ಪರ ಸ್ನೇಹಿತರಾಗಿದ್ದೇವೆ ಮತ್ತು ಭಾರತದೊಂದಿಗೆ ರಷ್ಯಾದ ಸಂಬಂಧ ಹೇಗಿದೆ ಮತ್ತು ರಷ್ಯಾದೊಂದಿಗೆ ಭಾರತದ ಸಂಬಂಧ ಹೇಗಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ , ಆದ್ದರಿಂದ ಜಗತ್ತೂ ಸಹ ಅದೊಂದು ಅವಿನಾಭಾವ ಸ್ನೇಹ ಎಂದು ತಿಳಿದಿದೆ. ವೈಯಕ್ತಿಕವಾಗಿ ಹೇಳುವುದಾದರೆ, ಒಂದು ರೀತಿಯಲ್ಲಿ, ನಮ್ಮಿಬ್ಬರ ಪ್ರಯಾಣವು ಒಂದೇ ಸಮಯದಲ್ಲಿ ಪ್ರಾರಂಭವಾಯಿತು. 2001 ರಲ್ಲಿ ನೀವು ಸರ್ಕಾರದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾಗ ಮತ್ತು ನಾನು ರಾಜ್ಯ ಸರ್ಕಾರದ ಮುಖ್ಯಸ್ಥನಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ನಾನು ನಿಮ್ಮನ್ನು ಮೊದಲು ಭೇಟಿಯಾದೆ. ಇಂದಿಗೆ 22 ವರ್ಷಗಳು ಕಳೆದಿವೆ, ನಮ್ಮ ಸ್ನೇಹ ನಿರಂತರವಾಗಿ ಬೆಳೆಯುತ್ತಿದೆ, ಈ ಪ್ರದೇಶದ ಒಳಿತಿಗಾಗಿ, ಜನರ ಯೋಗಕ್ಷೇಮಕ್ಕಾಗಿ ನಾವು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇಂದು, ಎಸ್ ಸಿ ಒ ಶೃಂಗಸಭೆಯಲ್ಲಿ, ಭಾರತಕ್ಕಾಗಿ ನೀವು ವ್ಯಕ್ತಪಡಿಸಿದ ಎಲ್ಲಾ ಭಾವನೆಗಳಿಗಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.

ಘನತೆವೆತ್ತವರೇ,

ಇಂದಿನ ನಮ್ಮ ದ್ವಿಪಕ್ಷೀಯ ಸಭೆಗಳು, ಇಂದಿನ ನಮ್ಮ ಮಾತುಕತೆಗಳು ಮುಂದಿನ ದಿನಗಳಲ್ಲಿ ನಮ್ಮ ಸಂಬಂಧಗಳನ್ನು ಇನ್ನಷ್ಟು ಗಾಢವಾಗಿಸುತ್ತದೆ ಮತ್ತು ಪ್ರಪಂಚದ ಭರವಸೆ ಮತ್ತು ನಿರೀಕ್ಷೆಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ಇಂದು ನಿಮ್ಮ ಸಮಯಕ್ಕಾಗಿ ಮತ್ತೊಮ್ಮೆ ನಾನು ನಿಮಗೆ ಬಹಳ ಕೃತಜ್ಞನಾಗಿದ್ದೇನೆ. 

ಸೂಚನೆ : ಇದು ಪ್ರಧಾನಮಂತ್ರಿಯವರ ಭಾ಼ಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****
 


(Release ID: 1860301) Visitor Counter : 137