ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav g20-india-2023

ರಾಮಕೃಷ್ಣ ಮಿಷನ್ ನ 'ಜಾಗೃತಿ' ಕಾರ್ಯಕ್ರಮಕ್ಕೆ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದ ಚಾಲನೆ


ಎಲ್ಲಾ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಚೌಕಟ್ಟನ್ನು ರೂಪಿಸಲು ಸಚಿವರ ಕರೆ  

Posted On: 15 SEP 2022 3:41PM by PIB Bengaluru

ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ರಾಮಕೃಷ್ಣ ಮಿಷನ್ ನ “ಜಾಗೃತಿ” ಕಾರ್ಯಕ್ರಮಕ್ಕೆ  ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಚಾಲನೆ ನೀಡಿದರು. ದಿಲ್ಲಿಯ ರಾಮಕೃಷ್ಣ ಮಿಷನ್ನಿನ  ಕಾರ್ಯದರ್ಶಿ ಸ್ವಾಮಿ ಶಾಂತಾತ್ಮಾನಂದ,  ಸಿಬಿಎಸ್ಇ ಅಧ್ಯಕ್ಷೆ ಶ್ರೀಮತಿ ನಿಧಿ ಚಿಬ್ಬರ್ ಮತ್ತು ಕೆವಿಎಸ್, ಎನ್ವಿಎಸ್ ಹಾಗು  ಸಚಿವಾಲಯದ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್ ಅವರು, ಎನ್ಇಪಿ 2020, ಸ್ವಾಮಿ ವಿವೇಕಾನಂದರ ತತ್ವಜ್ಞಾನದಿಂದ ಆಳವಾಗಿ ಪ್ರೇರಿತವಾಗಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದರಿಂದ ಹಿಡಿದು ಶ್ರೀ ಅರಬಿಂದೋ ಮತ್ತು ಮಹಾತ್ಮಾ ಗಾಂಧಿಯವರವರೆಗೆ, ನಮ್ಮ ಅನೇಕ ಮಹಾನ್ ವ್ಯಕ್ತಿಗಳು ದೇಶವನ್ನು ಮುನ್ನಡೆಸಲು ಪ್ರಗತಿಪರ ಮತ್ತು ನಮ್ಮ ನಾಗರಿಕತೆಯ ಮೌಲ್ಯಗಳಲ್ಲಿ ಬೇರೂರಿರುವ ಶಿಕ್ಷಣ ವ್ಯವಸ್ಥೆ ಅವಶ್ಯವಿರುವುದನ್ನು ಮನಗಂಡಿದ್ದರು,  ಹಾಗು ಕಲ್ಪಿಸಿಕೊಂಡಿದ್ದರು ಎಂದವರು ಅಭಿಪ್ರಾಯಪಟ್ಟರು.  ಸಾಮಾಜಿಕ ಪರಿವರ್ತನೆಯು ಶಿಕ್ಷಣದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ ಎಂದೂ  ಅವರು ಹೇಳಿದರು. ಭೌತಿಕ ಸಂಪತ್ತಿಗಿಂತ ಮೌಲ್ಯಗಳು ಮತ್ತು ಬುದ್ಧಿವಂತಿಕೆ, ಜ್ಞಾನ ಬಹಳ  ಮುಖ್ಯ. ಭವಿಷ್ಯಕ್ಕೆ ತಯಾರಾಗಿರುವಂತಹ  ಮತ್ತು ಸಾಮಾಜಿಕವಾಗಿ ಪ್ರಜ್ಞಾವಂತರಾಗಿರುವಂತಹ  ಪೀಳಿಗೆಯನ್ನು ನಿರ್ಮಾಣ ಮಾಡಲು ಮೌಲ್ಯಾಧಾರಿತ ಶಿಕ್ಷಣವು ಮುಖ್ಯವಾಗಿದೆ ಎಂದೂ  ಅವರು ನುಡಿದರು.

ರಾಮಕೃಷ್ಣ ಮಿಷನ್ ಆನ್ವಯಿಕ ಶಿಕ್ಷಣವನ್ನು ನೀಡುವ ಪರಂಪರೆಯನ್ನು ಹೊಂದಿದೆ ಎಂದು ಅವರು ಹೇಳಿದರು. ನಾವು ಎನ್ಇಪಿ 2020 ಅನ್ನು ಅನುಷ್ಠಾನಗೊಳಿಸುತ್ತಿರುವ ಕಾಲಘಟ್ಟದಲ್ಲಿ, 1 ರಿಂದ 8 ನೇ ತರಗತಿಗಳಿಗೆ ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ 9 ರಿಂದ 12 ನೇ ತರಗತಿಗಳಿಗೂ  ಅಂತಹ ಮೌಲ್ಯಾಧಾರಿತ ಶೈಕ್ಷಣಿಕ ಕಾರ್ಯಕ್ರಮಗಳನ್ನುರೂಪಿಸಲು ಒತ್ತು ನೀಡಬೇಕು. ಈ ವಿಶಿಷ್ಟ ಉಪಕ್ರಮವು ಎನ್ಇಪಿ 2020 ರಲ್ಲಿ ಅಡಕಗೊಂಡಿರುವ  ಮಗುವಿನ ಸಮಗ್ರ ವ್ಯಕ್ತಿತ್ವ ವಿಕಸನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದೂ ಅವರು ಹೇಳಿದರು.

ನಮ್ಮ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿರಬೇಕು ಎಂದು ಶ್ರೀ ಪ್ರಧಾನ್ ಬಲವಾಗಿ ಪ್ರತಿಪಾದಿಸಿದರು. ನಾವು ಜಾಗತಿಕ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವ 21 ನೇ ಶತಮಾನದ ನಾಗರಿಕರನ್ನು ಸೃಷ್ಟಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ನೇತೃತ್ವದ ಸಮಗ್ರ ಶಿಕ್ಷಣ ವ್ಯವಸ್ಥೆಯ ಮೇಲೆ ಗಮನ ಕೇಂದ್ರೀಕರಿಸುವ ಎನ್ಇಪಿ 2020 ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ಜೀವನದ ಸವಾಲುಗಳಿಗೆ ಸಿದ್ಧವಾಗಿರುವ ಮತ್ತು ರಾಷ್ಟ್ರೀಯ ಪ್ರಗತಿ ಮತ್ತು ಜಾಗತಿಕ ಕಲ್ಯಾಣಕ್ಕೆ ಬದ್ಧವಾಗಿರುವ ಪ್ರತಿಭಾ ಸಮೂಹ (ಪೂಲ್)ವನ್ನು ರೂಪಿಸಲು ಬಾಲವಾಟಿಕಾದಿಂದ ಹನ್ನೆರಡನೇ ತರಗತಿಯವರೆಗಿನ ಎಲ್ಲಾ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಉತ್ತೇಜಿಸಲು ಸಲಹಾ ಚೌಕಟ್ಟನ್ನು ಸ್ಥಾಪಿಸುವಂತೆ ಸಚಿವರು ಸಿಬಿಎಸ್ಇಗೆ ಕರೆ ನೀಡಿದರು.

*****(Release ID: 1859696) Visitor Counter : 80