ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಬಾಲಿಯಲ್ಲಿ ನಡೆದ ಜಿ 20 ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಭಾಗವಹಿಸಿದ್ದರು
ಬಲಿಷ್ಠ ಮತ್ತು ಸ್ಥಿತಿಸ್ಥಾಪಕತೆಯುಕ್ತ ಚೇತರಿಕೆಗಾಗಿ ಕಾರ್ಮಿಕರ ಉದ್ಯೋಗ ಪರಿಸ್ಥಿತಿಗಳನ್ನು ಸುಧಾರಿಸುವತ್ತ ಗಮನ ಹರಿಸುವ ಅಗತ್ಯವಿದೆ: ಶ್ರೀ ಭೂಪೇಂದರ್ ಯಾದವ್
Posted On:
14 SEP 2022 3:16PM by PIB Bengaluru
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ. ಭೂಪೇಂದರ್ ಯಾದವ್ ಅವರು 2022 ರ ಸೆಪ್ಟೆಂಬರ್ 13 - 14 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು.
ಸಚಿವರ ಅಧಿವೇಶನದಲ್ಲಿ ಕೇಂದ್ರ ಸಚಿವರು, ಜಾಗತಿಕ ಸಾಂಕ್ರಾಮಿಕ ರೋಗದ ನಂತರದ ಅವಧಿಯಲ್ಲಿ ಹೆಚ್ಚು ಸ್ಥಿತಿಸ್ಥಾಪಕತ್ವವುಳ್ಳ, ನ್ಯಾಯಸಮ್ಮತ ಮತ್ತು ಸುಸ್ಥಿರ ಚೇತರಿಕೆಯನ್ನು ಖಚಿತಪಡಿಸಿಕೊಳ್ಳಲು ಉದ್ಯೋಗ ಸೃಷ್ಟಿ, ಸಾಮಾಜಿಕ ಸುರಕ್ಷೆ, ಕೌಶಲ್ಯ ಮತ್ತು ಔಪಚಾರಿಕತೆಗೆ ಸಂಬಂಧಿಸಿದ ಜವಾಬ್ದಾರಿಯುತ ಸ್ಪಂದನಾತ್ಮಕ ಮತ್ತು ದೃಢವಾದ ನೀತಿಗಳನ್ನು ಉತ್ತೇಜಿಸಲು ದೇಶಗಳು ಒಗ್ಗೂಡಬೇಕಾದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
ನಿರಂತರ ಬದಲಾಗುತ್ತಿರುವ ಕಾರ್ಯ ಜಗತ್ತಿನಲ್ಲಿ ನಿರ್ಣಾಯಕವಾಗಿರುವ ಆದ್ಯತೆಯ ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದಕ್ಕಾಗಿ ಇಂಡೋನೇಷ್ಯಾವನ್ನು ಕೇಂದ್ರ ಸಚಿವರು ಶ್ಲಾಘಿಸಿದರು. ಅವುಗಳೆಂದರೆ, ವಿಕಲಚೇತನ ವ್ಯಕ್ತಿಗಳ ಕಾರ್ಮಿಕ ಮಾರುಕಟ್ಟೆಯ ಏಕೀಕರಣ, ಸಮುದಾಯ ಆಧಾರಿತ ವೃತ್ತಿಪರ ತರಬೇತಿಯನ್ನು ಬಲಪಡಿಸುವ ಮೂಲಕ ಮಾನವ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಸುಸ್ಥಿರ ಬೆಳವಣಿಗೆ ಮತ್ತು ಉತ್ಪಾದಕತೆ, ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಉದ್ಯೋಗ ಸೃಷ್ಟಿ ಸಾಧನವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಸ್ಎಂಇ) ಬೆಂಬಲಿಸುವುದು ಮತ್ತು ಹೆಚ್ಚು ಪರಿಣಾಮಕಾರಿ ರಕ್ಷಣೆ ಮತ್ತು ಎಲ್ಲಾ ಕಾರ್ಮಿಕರಿಗೆ ಹೆಚ್ಚಿನ ಸ್ಥಿತಿಸ್ಥಾಪಕತ್ವವುಳ್ಳ ಪುನಶ್ಚೇತನಕ್ಕಾಗಿ ಕಾರ್ಮಿಕ ರಕ್ಷಣೆ/ಭದ್ರತೆಯನ್ನು ಅಳವಡಿಸಿಕೊಳ್ಳುವುದು. ಈ ಎಲ್ಲ ಕ್ಷೇತ್ರಗಳಲ್ಲಿ ಭಾರತದ ಅನುಕರಣೀಯ ಸಾಧನೆಗಳತ್ತ ಕೇಂದ್ರ ಸಚಿವರು ಗಮನ ಸೆಳೆದರು. ಉದ್ಯೋಗದಾತರು ಮತ್ತು ಉದ್ಯೋಗಿ ಎಂಬ ಸಂಬಂಧ ಇಲ್ಲದೆ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಮಾಡಲಾದ ನಿಬಂಧನೆಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಭವಿಷ್ಯದಲ್ಲಿ ಕೆಲಸದ ಅಗತ್ಯಕ್ಕೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿಯನ್ನು ಜೋಡಿಸಲಾಗುತ್ತಿದೆ ಎಂಬುದನ್ನೂ ಅವರು ಒತ್ತಿ ಹೇಳಿದರು. ಈ ವರ್ಷದ ಜಿ-20 ಎಂಪ್ಲಾಯ್ ಮೆಂಟ್ ವರ್ಕಿಂಗ್ ಗ್ರೂಪ್ ಸಭೆಗಳಿಂದ ಪಡೆದ ಅನುಭವಗಳು ಮುಂಬರುವ ಅಧ್ಯಕ್ಷ ಸ್ಥಾನದಲ್ಲಿ ಭಾರತಕ್ಕೆ ಸಹಾಯ ಮಾಡಲಿವೆ ಮತ್ತು 21ನೇ ಶತಮಾನದ ಕಾರ್ಯ ಜಗತ್ತಿನ ಕ್ರಿಯಾತ್ಮಕ ಸ್ವರೂಪದ ಬೆಳಕಿನಲ್ಲಿ ಕಾರ್ಮಿಕ ಕಲ್ಯಾಣವನ್ನು ಖಾತ್ರಿಪಡಿಸುವ ನಮ್ಮ ಇರಾದೆಗೆ ಕೊಡುಗೆ ನೀಡುತ್ತವೆ ಎಂದೂ ಅವರು ಹೇಳಿದರು.
ಕೇಂದ್ರ ಸಚಿವರು ಜರ್ಮನಿ, ಸಿಂಗಾಪುರ, ಯುಎಇ, ಸೌದಿ ಅರೇಬಿಯಾ, ನೆದರ್ಲ್ಯಾಂಡ್ಸ್ ಮತ್ತು ತುರ್ಕಿಯೇ ಸೇರಿದಂತೆ ಹಲವು ದೇಶಗಳೊಂದಿಗೆ ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಈ ಎಲ್ಲ ಸಭೆಗಳಲ್ಲಿ, ಸಚಿವರು ನಮ್ಮ ಮುಂಬರುವ ಅಧ್ಯಕ್ಷ ಸ್ಥಾನ ಮತ್ತು ವಿಶಾಲ ಆದ್ಯತೆಗಳ ಬಗ್ಗೆ ವಿವರಿಸಿದರು ಮತ್ತು ನಮ್ಮ ಗುರಿಗಳಿಗೆ ಈ ದೇಶಗಳು ಮತ್ತು ಸಂಸ್ಥೆಗಳ ಬೆಂಬಲವನ್ನು ಕೋರಿದರು. ಚಲನಶೀಲತೆಯನ್ನು ಸುಗಮಗೊಳಿಸಲು ಮತ್ತು ಅಂತರರಾಷ್ಟ್ರೀಯ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಲಸೆ ಮತ್ತು ಚಲನಶೀಲತೆ ಒಪ್ಪಂದ ಮತ್ತು ಸಾಮಾಜಿಕ ಭದ್ರತಾ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕುವ ಅಗತ್ಯವನ್ನು ಒತ್ತಿ ಹೇಳಲಾಯಿತು.
ಇಂಡೋನೇಷ್ಯಾದ ಮಾನವ ಸಂಪನ್ಮೂಲ ಸಚಿವರಾದ ಗೌರವಾನ್ವಿತ ಇಡಾ ಫೌಜಿಯಾ ಅವರು ಆಯೋಜಿಸಿದ್ದ ಸ್ವಾಗತ ಔತಣಕೂಟದಲ್ಲಿ ಕೇಂದ್ರ ಸಚಿವರು ಭಾಗವಹಿಸಿದ್ದರು ಮತ್ತು ಜಿ 20 ರ ಎರಡು ಪ್ರಮುಖ ಕಾರ್ಯನಿಶ್ಚಯ ಗುಂಪುಗಳಾದ ಬಿ 20 - ಎಲ್ 20 ರ ಜಂಟಿ ಹೇಳಿಕೆಯನ್ನು ಸಾಕ್ಷೀಕರಿಸಿದರು.
(Release ID: 1859231)
Visitor Counter : 172