ಪ್ರಧಾನ ಮಂತ್ರಿಯವರ ಕಛೇರಿ

ಬಾಂಗ್ಲಾದೇಶದ ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆ

Posted On: 06 SEP 2022 5:53PM by PIB Bengaluru

ಘನತೆವೆತ್ತ ಪ್ರಧಾನ ಮಂತ್ರಿಯವರಾದ ಶೇಖ್ ಹಸೀನಾ ಜಿ,
ಎರಡೂ ನಿಯೋಗಗಳ ಗೌರವಾನ್ವಿತ ಸದಸ್ಯರೇ,
ಮಾಧ್ಯಮದ ನಮ್ಮ ಸ್ನೇಹಿತರೇ,

ನಮಸ್ಕಾರ!
ಮೊದಲನೆಯದಾಗಿ, ನಾನು ಪ್ರಧಾನಮಂತ್ರಿ ಶೇಖ್ ಹಸೀನಾ ಜಿ ಮತ್ತು ಅವರ ನಿಯೋಗವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಕಳೆದ ವರ್ಷ ನಾವು ಬಾಂಗ್ಲಾದೇಶದ ಸ್ವಾತಂತ್ರ್ಯದ ಐವತ್ತನೇ ವಾರ್ಷಿಕೋತ್ಸವ, ನಮ್ಮ ರಾಜತಾಂತ್ರಿಕ ಸಂಬಂಧಗಳ ಸುವರ್ಣ ಮಹೋತ್ಸವ ಮತ್ತು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವವನ್ನು ಒಟ್ಟಿಗೆ ಆಚರಿಸಿದ್ದೇವೆ. ಕಳೆದ ವರ್ಷ ಡಿಸೆಂಬರ್ 6 ರಂದು ನಾವು ಮೊದಲ 'ಮೈತ್ರಿ ದಿವಸ್' ಅನ್ನು ಪ್ರಪಂಚದಾದ್ಯಂತ ಒಟ್ಟಿಗೆ ಆಚರಿಸಿದ್ದೇವೆ. ಇಂದು, ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶೇಖ್ ಹಸೀನಾ ಜಿ ಅವರ ಭೇಟಿ ನಡೆಯುತ್ತಿದೆ. ಮತ್ತು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸ್ನೇಹವು ಹೊಸ ಎತ್ತರವನ್ನು ಮುಟ್ಟುತ್ತದೆ ಎಂದು ನನಗೆ ವಿಶ್ವಾಸವಿದೆ. 

ಸ್ನೇಹಿತರೇ,
ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ನೇತೃತ್ವದಲ್ಲಿ ಬಾಂಗ್ಲಾದೇಶ ಗಮನಾರ್ಹ ಪ್ರಗತಿ ಸಾಧಿಸಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ, ನಮ್ಮ ಪರಸ್ಪರ ದೇಶಗಳ ಸಹಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಹೆಚ್ಚುತ್ತಿದೆ. ಇಂದು, ಬಾಂಗ್ಲಾದೇಶವು ಭಾರತದ ಅತಿದೊಡ್ಡ ಅಭಿವೃದ್ಧಿಯ ಪಾಲುದಾರ ಮತ್ತು ಈ ಪ್ರದೇಶದಲ್ಲಿ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ.
ನಮ್ಮ ನಿಕಟ ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳಲ್ಲಿ ಸ್ಥಿರವಾದ ಹೆಚ್ಚಳವೂ ಕಂಡುಬಂದಿದೆ. ಇಂದು ಪ್ರಧಾನ ಮಂತ್ರಿ ಶೇಖ್ ಹಸೀನಾ ಜಿ ಮತ್ತು ನಾನು ಎಲ್ಲಾ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದೇವೆ.
 
ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಜಾಗತಿಕ ಬೆಳವಣಿಗೆಗಳಿಂದ ಪಾಠಗಳನ್ನು ಕಲಿಯುವ ಮೂಲಕ, ನಾವು ನಮ್ಮ ಆರ್ಥಿಕತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ನಾವಿಬ್ಬರೂ ನಂಬುತ್ತೇವೆ.
ನಮ್ಮ ಎರಡು ದೇಶಗಳ ನಡುವಿನ ಸಂಪರ್ಕದ ವಿಸ್ತರಣೆ ಮತ್ತು ಗಡಿಯಲ್ಲಿ ವ್ಯಾಪಾರ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ, ಎರಡು ಆರ್ಥಿಕತೆಗಳು ಪರಸ್ಪರ ಹೆಚ್ಚು ಸಂಪರ್ಕ ಸಾಧಿಸುತ್ತವೆ ಮತ್ತು ಪರಸ್ಪರ ಬೆಂಬಲಿಸಲು ಸಾಧ್ಯವಾಗುತ್ತದೆ. ನಮ್ಮ ದ್ವಿಪಕ್ಷೀಯ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ. ಇಂದು ಇಡೀ ಏಷ್ಯಾದಲ್ಲಿ ಬಾಂಗ್ಲಾದೇಶ ರಫ್ತಿಗೆ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿದೆ. ಈ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲು, ನಾವು ಶೀಘ್ರದಲ್ಲೇ ದ್ವಿಪಕ್ಷೀಯ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಕುರಿತು ಚರ್ಚೆಗಳನ್ನು ಪ್ರಾರಂಭಿಸುತ್ತೇವೆ. 
ನಮ್ಮ ಯುವ ಪೀಳಿಗೆಗೆ ಆಸಕ್ತಿಯಿರುವ ಐಟಿ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ನಾವು ಹವಾಮಾನ ಬದಲಾವಣೆ ಮತ್ತು ಸುಂದರಬನ್‌ಗಳಂತಹ ಸಾಮಾನ್ಯ ಪರಂಪರೆಯನ್ನು ಸಂರಕ್ಷಿಸುವಲ್ಲಿಯೂ  ಸಹಕಾರವನ್ನು ಮುಂದುವರಿಸುತ್ತೇವೆ.

ಸ್ನೇಹಿತರೇ,
ಏರುತ್ತಿರುವ ಇಂಧನ ಬೆಲೆಗಳು ಈ ಸಮಯದಲ್ಲಿ ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸವಾಲಾಗಿದೆ. ಇಂದು ಮೈತ್ರೀ ಶಾಖೋತ್ಪನ್ನ ವಿದ್ಯುತ್ ಕೇಂದ್ರದ  ಮೊದಲ ಘಟಕದ ಅನಾವರಣವು ಬಾಂಗ್ಲಾದೇಶದಲ್ಲಿ ಕೈಗೆಟುಕುವ ಬೆಲೆಯ ವಿದ್ಯುತ್ ಲಭ್ಯತೆಯನ್ನು ಹೆಚ್ಚಿಸುತ್ತದೆ.
ವಿದ್ಯುತ್ ಪ್ರಸರಣ ಮಾರ್ಗಗಳನ್ನು ಸಂಪರ್ಕಿಸುವ ಕುರಿತು ಉಭಯ ದೇಶಗಳ ನಡುವೆ ಫಲಪ್ರದ ಮಾತುಕತೆಗಳು ಸಹ ನಡೆಯುತ್ತಿವೆ. ರೂಪಶಾ ನದಿಯ ಮೇಲಿನ ರೈಲ್ವೆ ಸೇತುವೆಯ ಉದ್ಘಾಟನೆಯು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಗಮನಾರ್ಹ ಹೆಜ್ಜೆಯಾಗಿದೆ. ಈ ಸೇತುವೆಯು ಭಾರತದ ‘ಲೈನ್ ಆಫ್ ಕ್ರೆಡಿಟ್ ‘ಅಡಿಯಲ್ಲಿ ಖುಲ್ನಾ ಮತ್ತು ಮೊಂಗ್ಲಾ ಪೋರ್ಟ್ ನಡುವೆ ನಿರ್ಮಿಸಲಾಗುತ್ತಿರುವ ಹೊಸ ರೈಲು ಮಾರ್ಗದ ಪ್ರಮುಖ ಭಾಗವಾಗಿದೆ. ಬಾಂಗ್ಲಾದೇಶದ ರೈಲ್ವೆ ವ್ಯವಸ್ಥೆಯ ಅಭಿವೃದ್ಧಿ ಮತ್ತು ವಿಸ್ತರಣೆಗೆ ಭಾರತವು ಎಲ್ಲಾ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ. 
ಸ್ನೇಹಿತರೇ,

ಭಾರತ-ಬಾಂಗ್ಲಾದೇಶದ ಗಡಿಯಲ್ಲಿ 54 ನದಿಗಳು ಹಾದು ಹೋಗುತ್ತವೆ ಮತ್ತು ಶತಮಾನಗಳಿಂದ ಉಭಯ ದೇಶಗಳ ಜನರ ಜೀವನೋಪಾಯಕ್ಕೆ ಸಂಬಂಧ ಹೊಂದಿದೆ. ಈ ನದಿಗಳು, ಅವುಗಳ ಕುರಿತಾದ ಜನಪದ ಕಥೆಗಳು, ಜಾನಪದ ಹಾಡುಗಳು, ನಮ್ಮ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿವೆ. ಇಂದು ಕುಶಿಯಾರ ನದಿ ನೀರು ಹಂಚಿಕೆ ಕುರಿತು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ಭಾರತದ ದಕ್ಷಿಣ ಅಸ್ಸಾಂ ಮತ್ತು ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ.
ಪ್ರವಾಹ ತಗ್ಗಿಸುವಿಕೆಗೆ ಸಂಬಂಧಿಸಿದಂತೆ ಸಹಕಾರವನ್ನು ಹೆಚ್ಚಿಸುವ ಕುರಿತು, ನಾನು ಮತ್ತು ಪ್ರಧಾನಮಂತ್ರಿ ಶೇಖ್ ಹಸೀನಾಜಿ ಫಲಪ್ರದ ಮಾತುಕತೆ ನಡೆಸಿದ್ದೇವೆ. ಭಾರತವು ನೈಜ ಸಮಯದ ಆಧಾರದ ಮೇಲೆ ಬಾಂಗ್ಲಾದೇಶದೊಂದಿಗೆ ಪ್ರವಾಹ-ಸಂಬಂಧಿತ ದತ್ತಾಂಶವನ್ನು ಹಂಚಿಕೊಳ್ಳುತ್ತಿದೆ ಮತ್ತು ನಾವು ದತ್ತಾಂಶ ಹಂಚಿಕೆಯ ಅವಧಿಯನ್ನು ವಿಸ್ತರಿಸಿದ್ದೇವೆ.
ಇಂದು ನಾವು ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧ ಸಹಕಾರದ ಬಗ್ಗೆಯೂ ಒತ್ತು ನೀಡಿದ್ದೇವೆ. 1971ರ ಚೈತನ್ಯವನ್ನು ಜೀವಂತವಾಗಿಡಲು, ನಮ್ಮ ಪರಸ್ಪರ ನಂಬಿಕೆಯ ಮೇಲೆ ಆಕ್ರಮಣ ಮಾಡಲು ಬಯಸುವ ಅಂತಹ ಶಕ್ತಿಗಳನ್ನು ನಾವು ಒಟ್ಟಾಗಿ ಎದುರಿಸುವುದು ಬಹಳ ಅವಶ್ಯಕ.

ಸ್ನೇಹಿತರೇ,

ಬಂಗಬಂಧು ಅವರು ಕಂಡ ಸ್ಥಿರ, ಸಮೃದ್ಧ ಮತ್ತು ಪ್ರಗತಿಪರ ಬಾಂಗ್ಲಾದೇಶದ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ  , ಭಾರತವು ಬಾಂಗ್ಲಾದೇಶದೊಂದಿಗೆ ಹೆಜ್ಜೆ ಹೆಜ್ಜೆಗೂ ಜೊತೆಯಾಗಿರುವುದನ್ನು ಮುಂದುವರಿಸುತ್ತದೆ. ನಮ್ಮ ಇಂದಿನ ಮಾತುಕತೆಯುಈ ಪ್ರಮುಖ ಬದ್ಧತೆಯನ್ನು ಪುನರುಚ್ಚರಿಸಲು ಅತ್ಯುತ್ತಮ ಅವಕಾಶವಾಗಿದೆ.
ಮತ್ತೊಮ್ಮೆ, ನಾನು ಪ್ರಧಾನ ಮಂತ್ರಿ ಶೇಖ್ ಹಸೀನಾ ಜಿ ಮತ್ತು ಭಾರತಕ್ಕೆ ಅವರ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಮತ್ತು ಅವರಿಗೆ ಭಾರತದಲ್ಲಿ ಆಹ್ಲಾದಕರ ವಾಸ್ತವ್ಯವನ್ನು ಕೋರುತ್ತೇನೆ.
ಬಹಳ ಬಹಳ ಧನ್ಯವಾದಗಳು.

ಸೂಚನೆ: ಇದು ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

*****



(Release ID: 1858477) Visitor Counter : 129