ಸಂಪುಟ
azadi ka amrit mahotsav

ಕೇಂದ್ರ ಪ್ರಾಯೋಜಿತ ಹೊಸ ಯೋಜನೆ ಪಿಎಂ ಶ್ರೀ (PM SHRI - PM Schools for Rising India -ಉದಯಿಸುತ್ತಿರುವ ಭಾರತಕ್ಕೆ ಪಿ.ಎಂ. ಶಾಲೆಗಳು) ಗೆ ಸಂಪುಟದ ಅನುಮೋದನೆ

ಎನ್ಇಪಿ 2020 ರ ಎಲ್ಲಾ ಘಟಕಗಳನ್ನು ಪ್ರದರ್ಶಿಸಲು ದೇಶಾದ್ಯಂತ 14500 ಕ್ಕೂ ಹೆಚ್ಚು ಶಾಲೆಗಳು ಪಿಎಂ ಶ್ರೀ ಶಾಲೆಗಳಾಗಿ ಅಭಿವೃದ್ಧಿ

ಉನ್ನತೀಕರಿಸಿದ ಮೂಲಸೌಕರ್ಯ, ನವೀನ ಬೋಧನಾಶಾಸ್ತ್ರ ಮತ್ತು ತಂತ್ರಜ್ಞಾನದೊಂದಿಗೆ, ಅನುಕರಣೀಯ ಶಾಲೆಗಳಾಗಲಿರುವ ಪಿಎಂ ಶ್ರೀ ಶಾಲೆಗಳು

ಪಿ.ಎಂ. ಶ್ರೀ ಶಾಲೆಗಳು 21 ನೇ ಶತಮಾನದ ಪ್ರಮುಖ ಕೌಶಲ್ಯಗಳೊಂದಿಗೆ ಸಜ್ಜುಗೊಂಡ ಸಮಗ್ರ ಮತ್ತು ಉತ್ತಮ ಪರಿಪೂರ್ಣ ವ್ಯಕ್ತಿಗಳನ್ನು ರೂಪಿಸುತ್ತವೆ ಮತ್ತು ಪೋಷಿಸುತ್ತವೆ

ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೆ ಮಾರ್ಗದರ್ಶನ ಮತ್ತು ನಾಯಕತ್ವ ಒದಗಿಸುವ ಪಿಎಂ ಶ್ರೀ ಶಾಲೆಗಳು

2022-23 ರಿಂದ 2026 ರವರೆಗಿನ ಐದು ವರ್ಷಗಳ ಅವಧಿಗೆ ಒಟ್ಟು 27360 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಪಿಎಂ ಶ್ರೀ ಶಾಲೆಗಳ ಯೋಜನೆಯ ಅನುಷ್ಠಾನ

Posted On: 07 SEP 2022 3:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಪ್ರಾಯೋಜಿತ ಹೊಸ ಯೋಜನೆಯಾದ ಪಿಎಂ ಶ್ರೀ ಶಾಲೆಗಳು (PM SHRI - PM ScHools for Rising India -ಉದಯಿಸುತ್ತಿರುವ ಭಾರತಕ್ಕೆ ಪಿ.ಎಂ. ಶಾಲೆಗಳು)ಗೆ ತನ್ನ ಅನುಮೋದನೆ ನೀಡಿದೆ. ಇದು ಕೇಂದ್ರ / ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶ ಸರ್ಕಾರ / ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತಿರುವ ಆಯ್ದ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಬಲಪಡಿಸುವ ಮೂಲಕ ದೇಶಾದ್ಯಂತ 14500ಕ್ಕೂ ಹೆಚ್ಚು ಶಾಲೆಗಳನ್ನು ಪಿಎಂ ಶ್ರೀ ಶಾಲೆಗಳಾಗಿ ಅಭಿವೃದ್ಧಿಪಡಿಸುವ ಹೊಸ ಯೋಜನೆಯಾಗಿದೆ. ಪಿ.ಎಂ. ಶ್ರೀ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಎಲ್ಲಾ ಅಂಶಗಳನ್ನು ಪ್ರದರ್ಶಿಸುತ್ತವೆ, ಅನುಕರಣೀಯ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ತಮ್ಮ ಸುತ್ತಮುತ್ತಲಿನ ಇತರ ಶಾಲೆಗಳಿಗೆ ಮಾರ್ಗದರ್ಶನವನ್ನು ಸಹ ನೀಡುತ್ತವೆ. ಪಿಎಂ ಶ್ರೀ ಶಾಲೆಗಳು ವಿದ್ಯಾರ್ಥಿಗಳ ಅರಿವಿನ ಅಭಿವೃದ್ಧಿಗಾಗಿ ಗುಣಮಟ್ಟದ ಬೋಧನೆಯನ್ನು ನೀಡುತ್ತವೆ ಮತ್ತು 21ನೇ ಶತಮಾನದ ಪ್ರಮುಖ ಕೌಶಲ್ಯಗಳನ್ನು ಹೊಂದಿರುವ ಸಮಗ್ರ ಮತ್ತು ಉತ್ತಮ ಪರಿಪೂರ್ಣ ವ್ಯಕ್ತಿಗಳನ್ನು ರೂಪಿಸಲು ಮತ್ತು ಪೋಷಿಸಲು ಶ್ರಮಿಸುತ್ತವೆ.


2022-23 ರಿಂದ 2026-27ರವರೆಗಿನ ಐದು ವರ್ಷಗಳ ಅವಧಿಗೆ 18128 ಕೋಟಿ ರೂ.ಗಳ ಕೇಂದ್ರ ಪಾಲನ್ನು ಒಳಗೊಂಡಿರುವ 27360 ಕೋಟಿ ರೂ.ಗಳ ಒಟ್ಟು ಯೋಜನಾ ವೆಚ್ಚದೊಂದಿಗೆ ಪಿಎಂ ಶ್ರೀ ಶಾಲೆಗಳ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಅನುಷ್ಠಾನಗೊಳಿಸಲಾಗುವುದು.
 

ಪ್ರಮುಖ ಲಕ್ಷಣಗಳು


•ಪಿ.ಎಂ.ಶ್ರೀ ಶಾಲೆಗಳು ಮಕ್ಕಳ ವೈವಿಧ್ಯಮಯ ಹಿನ್ನೆಲೆ, ಬಹುಭಾಷಾ ಅಗತ್ಯಗಳು ಮತ್ತು ವಿವಿಧ ಶೈಕ್ಷಣಿಕ ಸಾಮರ್ಥ್ಯಗಳನ್ನು ನೋಡಿಕೊಳ್ಳುವ ಮತ್ತು ಎನ್ಇಪಿ 2020 ರ ದೃಷ್ಟಿಕೋನದ ರೀತ್ಯ ತಮ್ಮದೇ ಆದ ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವ ಸಮಾನ, ಅಂತರ್ಗತ ಮತ್ತು ಆಹ್ಲಾದಕರ ಶಾಲಾ ವಾತಾವರಣದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತವೆ.  


•ಪಿಎಂ ಶ್ರೀ ಶಾಲೆಗಳು ತಮ್ಮ ತಮ್ಮ ಪ್ರದೇಶಗಳ ಇತರ ಶಾಲೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ ನಾಯಕತ್ವವನ್ನು ಒದಗಿಸುತ್ತವೆ.


ಸೌರ ಫಲಕಗಳು ಮತ್ತು ಎಲ್ಇಡಿ ದೀಪಗಳು, ನೈಸರ್ಗಿಕ ಕೃಷಿಯೊಂದಿಗೆ ಪೌಷ್ಟಿಕಾಂಶ ಉದ್ಯಾನಗಳು, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ, ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ರೂಢಿಗಳು / ಸಂಪ್ರದಾಯಗಳ ಅಧ್ಯಯನ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಹ್ಯಾಕಥಾನ್ ಮತ್ತು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸುವುದು ಮುಂತಾದ ಪರಿಸರ ಸ್ನೇಹಿ ಅಂಶಗಳನ್ನು ಒಳಗೊಂಡ ಪಿಎಂ ಶ್ರೀ  ಶಾಲೆಗಳನ್ನು ಹಸಿರು ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗುವುದು.


•ಈ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾದ ಬೋಧನಾಶಾಸ್ತ್ರವು ಹೆಚ್ಚು ಅನುಭವಾತ್ಮಕ, ಸಮಗ್ರ, ಅಂತರ್ಗತ, ಆಟ / ಆಟಿಕೆ-ಆಧಾರಿತ (ವಿಶೇಷವಾಗಿ, ಆರಂಭಿಕ ವರ್ಷಗಳಲ್ಲಿ) ಪ್ರಶ್ನೆ-ಚಾಲಿತ, ಆವಿಷ್ಕಾರ-ಆಧಾರಿತ, ಕಲಿಕೆ-ಕೇಂದ್ರಿತ, ಚರ್ಚೆ-ಆಧಾರಿತ, ಹೊಂದಿಕೊಳ್ಳುವ ಮತ್ತು ಆಹ್ಲಾದಕರವಾಗಿರುತ್ತದೆ.


•ಪ್ರತಿ ಗ್ರೇಡ್ ನಲ್ಲಿ ಪ್ರತಿ ಮಗುವಿನ ಕಲಿಕೆಯ ಫಲಿತಾಂಶಗಳ ಮೇಲೆ ಗಮನ ಹರಿಸಲಾಗುವುದು. ಎಲ್ಲಾ ಹಂತಗಳಲ್ಲಿ ಮೌಲ್ಯಮಾಪನವು ಪರಿಕಲ್ಪನೆಯ ತಿಳಿವಳಿಕೆ ಮತ್ತು ನಿಜ ಜೀವನದ ಸನ್ನಿವೇಶಗಳಿಗೆ ಜ್ಞಾನದ ಅನ್ವಯವನ್ನು ಆಧರಿಸಿರುತ್ತದೆ ಮತ್ತು ಸಾಮರ್ಥ್ಯ-ಆಧಾರಿತವಾಗಿರುತ್ತದೆ.


•ಲಭ್ಯವಿರುವ ಸಂಪನ್ಮೂಲಗಳ ಮೌಲ್ಯಮಾಪನ ಮತ್ತು ಪ್ರತಿಯೊಂದು ಡೊಮೇನ್ ಗಳಿಗೆ ಲಭ್ಯತೆ, ಸಮರ್ಪಕತೆ, ಸೂಕ್ತತೆ ಮತ್ತು ಬಳಕೆಯ ದೃಷ್ಟಿಯಿಂದ ಅವುಗಳ ಪರಿಣಾಮಕಾರಿತ್ವ ಮತ್ತು ಅವುಗಳ ಪ್ರಮುಖ ಕಾರ್ಯನಿರ್ವಹಣೆ ಸೂಚಕಗಳನ್ನು ಮಾಡಲಾಗುತ್ತದೆ ಮತ್ತು ಅಂತರಗಳನ್ನು ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ತುಂಬಲಾಗುವುದು.


•ಉದ್ಯೋಗಾವಕಾಶವನ್ನು ಹೆಚ್ಚಿಸಲು ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ಸೆಕ್ಟರ್ ಕೌಶಲ್ಯ ಮಂಡಳಿಗಳು ಮತ್ತು ಸ್ಥಳೀಯ ಉದ್ಯಮದೊಂದಿಗಿನ ಸಂಪರ್ಕವನ್ನು ಪರಿಶೋಧಿಸಲಾಗುವುದು.


•ಫಲಿತಾಂಶಗಳನ್ನು ಅಳೆಯಲು ಪ್ರಮುಖ ಕಾರ್ಯಕ್ಷಮತೆಯ ಸೂಚಕಗಳನ್ನು ನಿರ್ದಿಷ್ಟಪಡಿಸಿ, ಶಾಲಾ ಗುಣಮಟ್ಟ ಮೌಲ್ಯಮಾಪನ ಚೌಕಟ್ಟನ್ನು (ಎಸ್.ಕ್ಯು.ಎ.ಎಫ್.) ಅಭಿವೃದ್ಧಿಪಡಿಸಲಾಗುತ್ತಿದೆ. ಅಪೇಕ್ಷಿತ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಈ ಶಾಲೆಗಳ ಗುಣಮಟ್ಟದ ಮೌಲ್ಯಮಾಪನವನ್ನು ನಿಯಮಿತ ಮಧ್ಯಂತರದಲ್ಲಿ ಕೈಗೊಳ್ಳಲಾಗುವುದು.


ಪಿ.ಎಂ. ಶ್ರೀ ಶಾಲೆಗಳ (ಉದಯಿಸುತ್ತಿರುವ ಭಾರತಕ್ಕಾಗಿ ಪ್ರಧಾನಮಂತ್ರಿ ಶಾಲೆಗಳು) ಯೋಜನೆಯ ಪ್ರಮುಖ ದೃಷ್ಟಾಂತಾತ್ಮಕ ಮಧ್ಯಪ್ರವೇಶಗಳೆಂದರೆ:


a.ಗುಣಮಟ್ಟ ಮತ್ತು ನಾವಿನ್ಯತೆ (ಕಲಿಕಾ ವರ್ಧನೆ ಕಾರ್ಯಕ್ರಮ, ಸಮಗ್ರ ಪ್ರಗತಿ ಕಾರ್ಡ್, ನವೀನ ಬೋಧನೆಗಳು, ಚೀಲರಹಿತ ದಿನಗಳು, ಸ್ಥಳೀಯ ಕುಶಲಕರ್ಮಿಗಳೊಂದಿಗೆ ತರಬೇತಿ, ಸಾಮರ್ಥ್ಯ ವರ್ಧನೆ ಇತ್ಯಾದಿ).

b.ಆರ್.ಟಿಇ ಕಾಯ್ದೆಯಡಿ ಫಲಾನುಭವಿ ಆಧಾರಿತ ಹಕ್ಕುಗಳು. ಪಿಎಂ ಶ್ರೀ ಶಾಲೆಗಳ ಶೇ.100 ವಿಜ್ಞಾನ ಮತ್ತು ಗಣಿತ ಕಿಟ್ ಗಳನ್ನು ಪಡೆಯುತ್ತವೆ.

c.ವಾರ್ಷಿಕ ಶಾಲಾ ಅನುದಾನಗಳು (ಸಂಯೋಜಿತ ಶಾಲಾ ಅನುದಾನ, ಗ್ರಂಥಾಲಯ ಅನುದಾನ, ಕ್ರೀಡಾ ಅನುದಾನ)

d.ಬಾಲವಾಟಿಕಾ ಮತ್ತು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಸೇರಿದಂತೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ

e.ಬಾಲಕಿಯರು ಮತ್ತು ಸಿಡಬ್ಲ್ಯೂಎಸ್ಎನ್.ಗೆ ಸುರಕ್ಷಿತ ಮತ್ತು ಸೂಕ್ತ ಮೂಲಸೌಕರ್ಯವನ್ನು ಒದಗಿಸುವುದೂ ಸೇರಿದಂತೆ ಸಮಾನತೆ ಮತ್ತು ಸೇರ್ಪಡೆ.

 f.ವಿದ್ಯಾರ್ಥಿಗಳಿಗೆ ನೀಡಲಾಗುವ ವಿಷಯಗಳ ಆಯ್ಕೆಯಲ್ಲಿ ನಮ್ಯತೆಯನ್ನು ಉತ್ತೇಜಿಸುವುದು.

g.ಭಾಷಾ ಅಡೆತಡೆಗಳನ್ನು ನಿವಾರಿಸಲು ನೆರವಾಗಲು ತಾಂತ್ರಿಕ ಮಧ್ಯಸ್ಥಿಕೆಗಳನ್ನು ಬಳಸಿಕೊಂಡು ಮಾತೃಭಾಷೆ / ಸ್ಥಳೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಪ್ರೋತ್ಸಾಹಿಸುವುದು.

h.ಐಸಿಟಿ, ಸ್ಮಾರ್ಟ್ ತರಗತಿಗಳು ಮತ್ತು ಡಿಜಿಟಲ್ ಗ್ರಂಥಾಲಯಗಳು ಡಿಜಿಟಲ್ ಬೋಧನಾಶಾಸ್ತ್ರದ ಬಳಕೆ. ಶೇ.100ರಷ್ಟು ಪಿಎಂ ಶ್ರೀ ಶಾಲೆಗಳು ಐಸಿಟಿ, ಸ್ಮಾರ್ಟ್ ಕ್ಲಾಸ್ ರೂಮ್ ಗಳು ಮತ್ತು ಡಿಜಿಟಲ್ ಉಪಕ್ರಮಗಳನ್ನು ಒಳಗೊಂಡಿರುತ್ತವೆ.

i.ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಬಲಪಡಿಸುವುದು

j.ವೃತ್ತಿಪರ ಮಧ್ಯಪ್ರವೇಶಗಳು ಮತ್ತು ತರಬೇತಿ / ಉದ್ಯಮಶೀಲತೆಯ ಅವಕಾಶಗಳನ್ನು ವಿಶೇಷವಾಗಿ ಸ್ಥಳೀಯ ಉದ್ಯಮದೊಂದಿಗೆ ಹೆಚ್ಚಿಸುವುದು. ಅಭಿವೃದ್ಧಿ ಯೋಜನೆಗಳು / ಹತ್ತಿರದ ಉದ್ಯಮದೊಂದಿಗೆ ಕೌಶಲ್ಯಗಳನ್ನು ಮ್ಯಾಪಿಂಗ್ ಮಾಡುವುದು ಮತ್ತು ಅದಕ್ಕೆ ಅನುಗುಣವಾಗಿ ಕೋರ್ಸ್ ಗಳು / ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದು.

k.ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಈ ಶಾಲೆಗಳನ್ನು ಅಭಿವೃದ್ಧಿಪಡಿಸಲು ಗರಿಷ್ಠಸಂತೃಪ್ತಿ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಎಲ್ಲಾ ಶಾಲೆಗಳಿಗೆ ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯ, ಐಸಿಟಿ ಸೌಲಭ್ಯ ಮತ್ತು ವೃತ್ತಿಪರ ಪ್ರಯೋಗಾಲಯಗಳು ಇತ್ಯಾದಿಗಳನ್ನು ಒದಗಿಸಲಾಗುವುದು.

ಹಸಿರು ಶಾಲಾ ಉಪಕ್ರಮಗಳು

ಇದಲ್ಲದೆ, ಈ ಯೋಜನೆಯು ಅಸ್ತಿತ್ವದಲ್ಲಿರುವ ಯೋಜನೆಗಳು / ಪಂಚಾಯತ್ ರಾಜ್ ಸಂಸ್ಥೆಗಳು / ನಗರ ಸ್ಥಳೀಯ ಸಂಸ್ಥೆಗಳು ಮತ್ತು ಶಾಲೆಯ ಮೂಲಸೌಕರ್ಯ ಉನ್ನತೀಕರಣ ಮತ್ತು ಸೌಲಭ್ಯಗಳ ಸೃಷ್ಟಿಗಾಗಿ ಸಮುದಾಯದ ಭಾಗವಹಿಸುವಿಕೆಯೊಂದಿಗೆ ಒಗ್ಗೂಡುವಿಕೆಯನ್ನು ಕಲ್ಪಿಸುತ್ತದೆ.

ಅನುಷ್ಠಾನ ಕಾರ್ಯತಂತ್ರ 

(ಎ.) ಸಮಗ್ರ ಶಿಕ್ಷಾ, ಕೆವಿಎಸ್ ಮತ್ತು ಎನ್.ವಿಎಸ್ ಗೆ ಲಭ್ಯವಿರುವ ಪ್ರಸ್ತುತ ಆಡಳಿತಾತ್ಮಕ ರಚನೆಯ ಮೂಲಕ ಪಿ.ಎಂ. ಶ್ರೀ ಶಾಲೆಗಳನ್ನು ಕಾರ್ಯಗತಗೊಳಿಸಲಾಗುವುದು. ಇತರ ಸ್ವಾಯತ್ತ ಸಂಸ್ಥೆಗಳು ಅಗತ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಯೋಜನಾ ಆಧಾರದ ಮೇಲೆ ತೊಡಗಿಸಿಕೊಳ್ಳುತ್ತವೆ.

(ಬಿ.)ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಠಾನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಗತಿಯ ಮೌಲ್ಯಮಾಪನ ಮಾಡಲು ಈ ಶಾಲೆಗಳ ತೀವ್ರ ಮೇಲ್ವಿಚಾರಣೆ ಮಾಡಲಾಗುತ್ತದೆ.

ಆಯ್ಕೆ ವಿಧಾನ:

ಪಿಎಂ ಶ್ರೀ ಶಾಲೆಗಳ ಆಯ್ಕೆಯನ್ನು ಸವಾಲಿನ ವಿಧಾನದ ಮೂಲಕ ಮಾಡಲಾಗುತ್ತದೆ, ಇದರಲ್ಲಿ ಶಾಲೆಗಳು ಅನುಕರಣೀಯ ಶಾಲೆಗಳ ಬೆಂಬಲಕ್ಕಾಗಿ ಸ್ಪರ್ಧಿಸುತ್ತವೆ. ಶಾಲೆಗಳು ಆನ್ ಲೈನ್ ಪೋರ್ಟಲ್ ನಲ್ಲಿ ಸ್ವಯಂ-ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪೋರ್ಟಲ್ ಅನ್ನು ಯೋಜನೆಯ ಮೊದಲ ಎರಡು ವರ್ಷಗಳವರೆಗೆ ವರ್ಷಕ್ಕೆ ನಾಲ್ಕು ಬಾರಿ, ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ತೆರೆಯಲಾಗುವುದು.


ಕೇಂದ್ರ/ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು/ ಯುಡಿಐಎಸ್ಇ+ ಕೋಡ್ ಹೊಂದಿರುವ ಸ್ಥಳೀಯ ಸ್ವಯಂ-ಆಡಳಿತದಿಂದ ನಿರ್ವಹಿಸಲಾಗುವ ಪ್ರಾಥಮಿಕ ಶಾಲೆಗಳು (1-5/1-8ನೇ ತರಗತಿ) ಮತ್ತು ಮಾಧ್ಯಮಿಕ/ ಹಿರಿಯ ಮಾಧ್ಯಮಿಕ ಶಾಲೆಗಳನ್ನು (1-10/1-12/6-10/6-12ನೇ ತರಗತಿ) ಈ ಯೋಜನೆಯಡಿ ಆಯ್ಕೆಗೆ ಪರಿಗಣಿಸಲ್ಪಡುತ್ತದೆ.

ನಿರ್ದಿಷ್ಟ ಕಾಲಮಿತಿಯೊಂದಿಗೆ ಮೂರು-ಹಂತದ ಪ್ರಕ್ರಿಯೆಯ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ, ಅದು ಈ ಕೆಳಗಿನಂತಿದೆ:-

A.ಹಂತ -1: ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಎನ್ಇಪಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಒಪ್ಪುವ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕುತ್ತವೆ, ಪಿಎಂ ಶ್ರೀ ಶಾಲೆಗಳಾಗಿ ನಿರ್ದಿಷ್ಟ ಗುಣಮಟ್ಟದ ಭರವಸೆಯನ್ನು ಸಾಧಿಸಲು ಈ ಶಾಲೆಗಳನ್ನು ಬೆಂಬಲಿಸುವ ಬದ್ಧತೆಗಳನ್ನು ಕೇಂದ್ರವು ನೀಡುತ್ತದೆ.

B.ಹಂತ -2: ಈ ಹಂತದಲ್ಲಿ, ಯುಡಿಐಎಸ್ಇ + ದತ್ತಾಂಶದ ಮೂಲಕ ನಿಗದಿತ ಕನಿಷ್ಠ ಮಾನದಂಡದ ಆಧಾರದ ಮೇಲೆ ಪಿಎಂ ಶ್ರೀ ಶಾಲೆಗಳಾಗಿ ಆಯ್ಕೆಯಾಗಲು ಅರ್ಹವಾದ ಶಾಲೆಗಳ ಗುಂಪನ್ನು ಗುರುತಿಸಲಾಗುವುದು.

C.ಹಂತ -3: ಈ ಹಂತವು ಕೆಲವು ಮಾನದಂಡಗಳನ್ನು ಪೂರೈಸುವ ಸವಾಲಿನ ವಿಧಾನವನ್ನು ಆಧರಿಸಿದೆ. ಮೇಲಿನ ಅರ್ಹ ಶಾಲೆಗಳ ಗುಂಪಿನ ಶಾಲೆಗಳು ಮಾತ್ರ ಸವಾಲಿನ ಷರತ್ತುಗಳನ್ನು ಪೂರೈಸಲು ಸ್ಪರ್ಧಿಸುತ್ತವೆ. ಷರತ್ತುಗಳನ್ನು ಪೂರೈಸುವುದನ್ನು ರಾಜ್ಯಗಳು/ಕೆವಿಎಸ್/ಜೆಎನ್ ವಿ ಭೌತಿಕ ತಪಾಸಣೆಯ ಮೂಲಕ ಪ್ರಮಾಣೀಕರಿಸಲಾಗುತ್ತದೆ.

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು / ಕೆವಿಎಸ್ / ಜೆಎನ್ ವಿ ಶಾಲೆಗಳು ವರದಿ ಮಾಡಿದ ಕ್ಲೇಮುಗಳನ್ನು ಪರಿಶೀಲಿಸಬೇಕು ಮತ್ತು ಶಾಲೆಗಳ ಪಟ್ಟಿಯನ್ನು ಸಚಿವಾಲಯಕ್ಕೆ ಶಿಫಾರಸು ಮಾಡಬೇಕು.

ಭಾರತದಾದ್ಯಂತ ಒಟ್ಟು ಶಾಲೆಗಳ ಸಂಖ್ಯೆಯ ಗರಿಷ್ಠ ಮಿತಿಯೊಂದಿಗೆ ಪ್ರತಿ ಬ್ಲಾಕ್ /ಯುಎಲ್.ಬಿಗೆ ಗರಿಷ್ಠ ಎರಡು ಶಾಲೆಗಳನ್ನು (ಒಂದು ಪ್ರಾಥಮಿಕ ಮತ್ತು ಒಂದು ಮಾಧ್ಯಮಿಕ / ಹಿರಿಯ ಮಾಧ್ಯಮಿಕ) ಆಯ್ಕೆ ಮಾಡಲಾಗುತ್ತದೆ. ಪಿಎಂ ಶ್ರೀ ಶಾಲೆಗಳ ಆಯ್ಕೆ ಮತ್ತು ಮೇಲ್ವಿಚಾರಣೆಗಾಗಿ ಶಾಲೆಗಳ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತದೆ. ಬಾಹ್ಯಾಕಾಶ ಆನ್ವಯಿಕ ಮತ್ತು ಭೂ ಮಾಹಿತಿ ಕುರಿತ ಭಾಸ್ಕರಾಚಾರ್ಯ ರಾಷ್ಟ್ರೀಯ ಸಂಸ್ಥೆ (ಬಿಐಎಸ್ಎಜಿ-ಎನ್) ಸೇವೆಗಳನ್ನು ಜಿಯೋ-ಟ್ಯಾಗಿಂಗ್ ಮತ್ತು ಇತರ ಸಂಬಂಧಿತ ಕಾರ್ಯಗಳಿಗಾಗಿ ತೆಗೆದುಕೊಳ್ಳಲಾಗುತ್ತದೆ. ಶಾಲೆಗಳ ಅಂತಿಮ ಆಯ್ಕೆಗಾಗಿ ತಜ್ಞರ ಸಮಿತಿಯನ್ನು ರಚಿಸಲಾಗುವುದು.

ಪಿಎಂ ಶ್ರೀ ಶಾಲೆಗಳ ಗುಣಮಟ್ಟದ ಭರವಸೆ

i.ಎನ್ಇಪಿ 2020 ರ ಪ್ರದರ್ಶನ
ii.ದಾಖಲಾತಿ ಮತ್ತು ಕಲಿಕೆಯ ಪ್ರಗತಿಯನ್ನು ಪತ್ತೆ ಮಾಡಲು ವಿದ್ಯಾರ್ಥಿ ದಾಖಲೀಕರಣ
iii.ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಮಟ್ಟಗಳನ್ನು ಸಾಧಿಸಲು ಪ್ರತಿ ಮಗುವಿನ ಕಲಿಕೆಯ                           ಫಲಿತಾಂಶಗಳಲ್ಲಿ ಸುಧಾರಣೆ
iv.ಪ್ರತಿ ಮಧ್ಯಮ ದರ್ಜೆಯ ಮಗುವು ಅತ್ಯಾಧುನಿಕ ಮತ್ತು 21 ನೇ ಶತಮಾನದ ಕೌಶಲ್ಯಗಳಿಗೆ ಒಡ್ಡಿಕೊಳ್ಳುತ್ತದೆ /                 ಪುನರ್ ಮನನಗೊಳ್ಳುತ್ತದೆ
v.ಪ್ರತಿ ಮಾಧ್ಯಮಿಕ ದರ್ಜೆಯ ಮಗುವು ಕನಿಷ್ಠ ಒಂದು ಕೌಶಲ್ಯದಲ್ಲಿ ಸಾಗುತ್ತದೆ
vi.ಪ್ರತಿ ಮಗುವಿಗೂ ಕ್ರೀಡೆ, ಕಲೆ, ಐಸಿಟಿ
vii.ಸುಸ್ಥಿರ ಮತ್ತು ಹಸಿರು ಶಾಲೆಗಳು                                                                                                                             
viii.ಪ್ರತಿ ಶಾಲೆಯು ಮಾರ್ಗದರ್ಶನಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಹೊಂದುತ್ತದೆ / ಸಂಪರ್ಕಿಸಲಾಗುತ್ತದೆ
ix.ಪ್ರತಿ ಶಾಲೆಯು ಸ್ಥಳೀಯ ಉದ್ಯಮಶೀಲ ಪರಿಸರ ವ್ಯವಸ್ಥೆಗೆ ಸಂಪರ್ಕ ಹೊಂದುತ್ತದೆ / ಸಂಪರ್ಕಿಸಲಾಗುತ್ತದೆ
x.ಪ್ರತಿಯೊಂದು ಮಗುವಿನ ಮಾನಸಿಕ ಯೋಗಕ್ಷೇಮ ಮತ್ತು ವೃತ್ತಿಜೀವನಕ್ಕಾಗಿ ಸಮಾಲೋಚನೆ.
xi.ವಿದ್ಯಾರ್ಥಿಗಳಿಗೆ ಭಾರತದ ಜ್ಞಾನ ಮತ್ತು ಪರಂಪರೆ ಬೇರೂರುತ್ತದೆ, ನಾಗರಿಕ ತತ್ವಗಳು ಮತ್ತು ಭಾರತದ                      ಮೌಲ್ಯಗಳ ಬಗ್ಗೆ ಹೆಮ್ಮೆ ಪಡುತ್ತಾರೆ, ವಿಶ್ವಕ್ಕೆ ಭಾರತದ ಕೊಡುಗೆಯ ಬಗ್ಗೆ ಅರಿವು ಹೊಂದುತ್ತಾರೆ, ಸಮಾಜ,                  ಜೀವಿಗಳು ಮತ್ತು ಪ್ರಕೃತಿಯ ಬಗ್ಗೆ ಕರ್ತವ್ಯಗಳ ಬಗ್ಗೆ ಅರಿವು ಹೊಂದಿರುತ್ತಾರೆ, ಭಾರತೀಯ ಭಾಷೆಗಳಲ್ಲಿ                         ಸಂವಹನಾತ್ಮಕವಾಗಿ ಸಮರ್ಥರಾಗುತ್ತಾರೆ, ಒಳಗೊಳ್ಳುವಿಕೆ, ಸಮಾನತೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು                   ಗೌರವಿಸುತ್ತಾರೆ, ಸೇವಾ ಪ್ರಜ್ಞೆ ಮತ್ತು 'ಏಕ ಭಾರತ ಶ್ರೇಷ್ಠ ಭಾರತ' ಎಂಬ ಮನೋಭಾವವನ್ನು ಹೆಚ್ಚಿಸುತ್ತಾರೆ.
xii.ಚಾರಿತ್ರ್ಯ ನಿರ್ಮಾಣ, ಪೌರತ್ವ ಮೌಲ್ಯಗಳು, ಮೂಲಭೂತ ಕರ್ತವ್ಯಗಳು ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ ಜವಾಬ್ದಾರಿಗಳು.

ಈ ಶಾಲೆಗಳನ್ನು ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ರೋಮಾಂಚಕ ಶಾಲೆಗಳಾಗಿ                     ಅಭಿವೃದ್ಧಿಪಡಿಸಲಾಗುವುದು.

ಫಲಾನುಭವಿಗಳು

18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ನೇರ ಫಲಾನುಭವಿಗಳಾಗುವ ನಿರೀಕ್ಷೆಯಿದೆ. ಪಿಎಂ ಶ್ರೀ ಶಾಲೆಗಳ ಸುತ್ತಮುತ್ತಲಿನ ಶಾಲೆಗಳ ಮಾರ್ಗದರ್ಶನ ಮತ್ತು ಕೈಹಿಡಿಯುವಿಕೆಯ ಮೂಲಕ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಲಾಗುತ್ತದೆ.

*****(Release ID: 1857649) Visitor Counter : 442