ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಆಸ್ಟ್ರೇಲಿಯಾದ 8 ವಿಶ್ವವಿದ್ಯಾಲಯಗಳ ಗುಂಪಿನೊಂದಿಗೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಸಂವಾದದಲ್ಲಿ ಭಾಗಿ


ಆಸ್ಟ್ರೇಲಿಯಾ-ಭಾರತ ಸಂಶೋಧನಾ ಸಹಭಾಗಿತ್ವ ಬಲಪಡಿಸಲು ಧರ್ಮೇಂದ್ರ ಪ್ರಧಾನ್ ಕರೆ

Posted On: 24 AUG 2022 4:23PM by PIB Bengaluru

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಆಸ್ಟ್ರೇಲಿಯಾದ 8 (ಜಿಒ8)ವಿಶ್ವವಿದ್ಯಾಲಯಗಳ ಉನ್ನತ ಗುಂಪಿನ ಶೈಕ್ಷಣಿಕ ನಾಯಕರೊಂದಿಗೆ ಆಸ್ಟ್ರೇಲಿಯಾ-ಭಾರತ ಯಶಸ್ವೀ ಸಂಶೋಧನಾ ಸಹಭಾಗಿತ್ವ ಸ್ಥಾಪಿಸುವ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ 'ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ' ಘೋಷಣೆಗೆ 'ಜೈ ಅನುಸಂಧಾನ' ಮಂತ್ರ ಸೇರಿಸಿದ್ದನ್ನು ಪುನರುಚ್ಚರಿಸಿದರು. ಮುಂಬರುವ ದಶಕ ಮತ್ತು ಅದರಾಚೆಗೆ ಈ ಘೋಷಣೆಯು ಭಾರತದ ಆರ್ಥಿಕ ಬೆಳವಣಿಗೆಗೆ ಭದ್ರ ಬುನಾದಿ ಹಾಕಲಿದೆ. ಈ ದಶಕವನ್ನು ಭಾರತದ ತಂತ್ರಜ್ಞಾನ ದಶಕವಾಗಿ ಮಾಡಲು ಮತ್ತು ಸ್ವಾವಲಂಬಿಯಾಗಿಸಲು ತನ್ನ ಪ್ರತಿ ಸಂಪನ್ಮೂಲವನ್ನು ಒಟ್ಟುಗೂಡಿಸುವ ಭಾರತದ ದೃಢಸಂಕಲ್ಪವನ್ನು ಸಚಿವರು ಹಂಚಿಕೊಂಡರು. ಭಾರತದೊಂದಿಗೆ ಸಂಶೋಧನಾ ಸಹಭಾಗಿತ್ವ ಬಲಪಡಿಸುವುದರಿಂದ ಎಲ್ಲರಿಗೂ ಗೆಲುವಿನ ಪರಿಸ್ಥಿತಿ ತಂದುಕೊಡಲಿದೆ ಎಂದು ಅವರು ಹೇಳಿದರು.

ಭಾರತ ಮತ್ತು ಆಸ್ಟ್ರೇಲಿಯಾ ಭರವಸೆಯ ಸಂಶೋಧನಾ ಪಾಲುದಾರಿಕೆ ಹೊಂದಿವೆ ಎಂದು ತಿಳಿಸಿದ ಪ್ರಧಾನ್, ಭಾರತದ ಜತೆ ಸಂಶೋಧನಾ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸಲು, ಪರಸ್ಪರ ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ಪೂರೈಸಲು ಹೊಸ ಅವಕಾಶಗಳನ್ನು ಅಳವಡಿಸಿಕೊಳ್ಳಲು ಮತ್ತು ಜಾಗತಿಕ ಸವಾಲುಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸಲು ಮುಂದೆ ಬಂದಿರುವ ಆಸ್ಟ್ರೇಲಿಯಾದ 8 ವಿಶ್ವವಿದ್ಯಾಲಯಗಳ ಗುಂಪನ್ನು ಅವರು ಸ್ವಾಗತಿಸಿದರು.

'ಶಿಕ್ಷಣ, ಸಂಶೋಧನೆ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ಉದಯೋನ್ಮುಖ ಅವಕಾಶಗಳು' ಎಂಬ ಸಂವಾದದಲ್ಲಿ ಆಸ್ಟ್ರೇಲಿಯಾದ ಸರ್ಕಾರದ ಪ್ರತಿನಿಧಿಗಳು, ಮೊನಾಶ್ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞರು ಮತ್ತು ಆಸ್ಟ್ರೇಲಿಯಾ-ಇಂಡಿಯಾ ಕೈಗಾರಿಕೆ ಮತ್ತು ವಾಣಿಜ್ಯ ಒಕ್ಕೂಟದ ಸದಸ್ಯರೊಂದಿಗೆ ಸಚಿವರು ಸಂವಾದ ನಡೆಸಿದರು. ಪ್ರಧಾನ ಮಂತ್ರಿ ಅವರು ಸಾಕ್ಷ್ಯಾಧಾರಿತ ಸಂಶೋಧನೆಗೆ ಒತ್ತು ನೀಡಿದ್ದಾರೆ. ಮನುಕುಲದ ಪ್ರಗತಿ, ಕಲ್ಯಾಣ ಮತ್ತು ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ‘ಲ್ಯಾಬ್-ಟು-ಲ್ಯಾಂಡ್’ ಮತ್ತು ‘ಲ್ಯಾಂಡ್-ಟು-ಲ್ಯಾಬ್’ ಎಂಬ ಮಂತ್ರ ನೀಡಿದ್ದಾರೆ ಎಂದು ಸಚಿವರು ಹೇಳಿದರು. ಭಾರತವು ಎಲ್ಲಾ ಹಂತಗಳಲ್ಲಿ ಕುತೂಹಲಭರಿತ ಸಂಶೋಧನೆ ಮತ್ತು ನಾವೀನ್ಯತೆ ಹುಟ್ಟುಹಾಕಲು ತೀವ್ರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ಸಚಿವ ಶ್ರೀ ಪ್ರಧಾನ್ ಅವರು ಇದೇ ಸಂದರ್ಭದಲ್ಲಿ ಮೆಲ್ಬೋರ್ನ್‌ನಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಉತ್ಸಾಹಭರಿತ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಅನುಭವಗಳನ್ನು ಆಲಿಸಿ, ಸಂತಸಪಟ್ಟರು. ಭಾರತವನ್ನು ಜ್ಞಾನದ ಮಹಾಶಕ್ತಿ(ನಾಲೆಜ್ ಸೂಪರ್ ಪವರ್)ಯಾಗಿ ರೂಪಿಸುವ ವಿದ್ಯಾರ್ಥಿಗಳ ಆಲೋಚನೆಗಳು ಶ್ರೀಮಂತವಾಗಿವೆ ಎಂದು ಸಚಿವರು ಹೇಳಿದರು.

*****


(Release ID: 1854224) Visitor Counter : 143