ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗ್ರಾಹಕರಿಗೆ ಗುಣಮಟ್ಟವಿಲ್ಲದ ಪ್ರೆಷರ್ ಕುಕ್ಕರ್‌ಗಳನ್ನು ಮಾರಾಟ ಮಾಡಿದ ಫ್ಲಿಪ್‌ಕಾರ್ಟ್‌ಗೆ ಸಿಸಿಪಿಎ ದಂಡ; 1 ಲಕ್ಷ ರೂ. ಪಾವತಿಸಲು ಸೂಚನೆ


ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಪಾಲಿಸದ 598 ಪ್ರೆಷರ್ ಕುಕ್ಕರ್‌ಗಳನ್ನು ಹಿಂಪಡೆಯಲು, ಗ್ರಾಹಕರಿಗೆ ಹಣ ಮರುಪಾವತಿಸಲು ಫ್ಲಿಪ್‌ಕಾರ್ಟ್ ಗೆ ಸಿಸಿಪಿಎ ನಿರ್ದೇಶನ

Posted On: 17 AUG 2022 2:17PM by PIB Bengaluru

ಕಡ್ಡಾಯ ಮಾನದಂಡಗಳನ್ನು ಪಾಲಿಸದೆ ದೇಶೀಯ ಪ್ರೆಷರ್ ಕುಕ್ಕರ್‌ಗಳನ್ನು ಮಾರಾಟ ಮಾಡಿದ ಇ-ಕಾಮರ್ಸ್ ಕಂಪನಿ 'ಫ್ಲಿಪ್‌ಕಾರ್ಟ್'ಗೆ ಕುರಿತು ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ವು ಗ್ರಾಹಕರ ಹಕ್ಕುಗಳನ್ನು ಉಲ್ಲಂಘನೆಯ ಆದೇಶ ಜಾರಿಗೊಳಿಸಿದೆ.

ಸಿಸಿಪಿಎ ಮುಖ್ಯ ಆಯುಕ್ತೆ ಶ್ರೀಮತಿ ನಿಧಿ ಖರೆ ನೇತೃತ್ವದ ತಂಡವು, ಗ್ರಾಹಕರಿಗೆ ಮಾರಾಟ ಮಾಡಿದ ಎಲ್ಲಾ 598 ಪ್ರೆಶರ್ ಕುಕ್ಕರ್‌ಗಳನ್ನು ಹಿಂಪಡೆಯುವಂತೆ ಮತ್ತು ಅವುಗಳ ಬೆಲೆಗಳನ್ನು ಗ್ರಾಹಕರಿಗೆ ಮರುಪಾವತಿಸುವಂತೆ ಫ್ಲಿಪ್‌ಕಾರ್ಟ್‌ಗೆ ನಿರ್ದೇಶನ ನೀಡಿದ್ದು, 45 ದಿನಗಳಲ್ಲಿ ಅದರ ಅನುಸರಣೆ ವರದಿ ಸಲ್ಲಿಸುವಂತೆಯೂ ನಿರ್ದೇಶಿಸಿದೆ. ಕಂಪನಿಯು ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಂತಹ ಪ್ರೆಷರ್ ಕುಕ್ಕರ್‌ಗಳನ್ನು ಮಾರಾಟ ಮಾಡಿದ್ದಕ್ಕೆ ಮತ್ತು ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ 1,00,000 ರೂ. ದಂಡ ಪಾವತಿಸುವಂತೆ ಸಿಸಿಪಿಎ ನಿರ್ದೇಶಿಸಿದೆ.

ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಗುಣಮಟ್ಟ ನಿಯಂತ್ರಣ ಆದೇಶಗಳ ಕಡ್ಡಾಯ ಅನುಸರಣೆಯನ್ನು ನಿಗದಿಪಡಿಸುತ್ತದೆ. ಉತ್ಪನ್ನಗಳ ಹಾನಿ ಮತ್ತು ಹಾನಿಯ ಅಪಾಯದಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ಸಾರ್ವಜನಿಕರ ಹಿತದೃಷ್ಟಿ ಸಂರಕ್ಷಿಸಲು ಸಿಸಿಪಿಎ, ಪ್ರಮಾಣಿತ ಮಾರ್ಕ್‌ ಬಳಕೆಯನ್ನು ಜಾರಿಗೆ ತಂದಿದೆ. 01.02.2021ರಿಂದ ಜಾರಿಗೆ ಬಂದಿರುವ ದೇಶೀಯ ಪ್ರೆಷರ್ ಕುಕ್ಕರ್ (ಗುಣಮಟ್ಟ ನಿಯಂತ್ರಣ) ಆದೇಶವು ಎಲ್ಲಾ ದೇಶೀಯ ಪ್ರೆಷರ್ ಕುಕ್ಕರ್‌ಗಳಿಗೆ ಐಎಸ್ 2347:2017ರ ಅನುಸರಣೆಯನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ, 01.02.2021ರಿಂದ, ಎಲ್ಲಾ ಪ್ರೆಷರ್ ಕುಕ್ಕರ್‌ಗಳು ಐಎಸ್ 2347:2017 ಮಾನದಂಡಕ್ಕೆ ಅನುಗುಣವಾಗಿರಬೇಕು. ಪ್ರೆಷರ್ ಕುಕ್ಕರ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ ವೇದಿಕೆಯಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದ್ದರೂ, ಗುಣಮಟ್ಟ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಉತ್ಪನ್ನದ ಪ್ರತಿಯೊಂದು ಸರಕು ಪಟ್ಟಿಯಲ್ಲಿ ಫ್ಲಿಪ್ ಕಾರ್ಟ್ ಕಡ್ಡಾಯವಾಗಿ ಬಳಸುವ ಪದಗಳಲ್ಲಿ 'ಫ್ಲಿಪ್‌ಕಾರ್ಟ್‌ನಿಂದ ನಡೆಸಲ್ಪಡುವ' ಪದದ ಬಳಕೆ ಇರುತ್ತದೆ. ಇದು ಫ್ಲಿಪ್‌ಕಾರ್ಟ್ ಬಳಸುವ ಮತ್ತು ನಿರ್ವಹಿಸುವ ನಿಯಮ ನಿಬಂಧನೆಗಳ ಪಾತ್ರವನ್ನು ಸೂಚಿಸುತ್ತದೆ ಎಂದು ಸಿಸಿಪಿಎ ಗುರುತಿಸಿದೆ. ಚಿನ್ನ, ಬೆಳ್ಳಿ ಮತ್ತು ಕಂಚು ಮತ್ತಿತರ ಉತ್ಪನ್ನಗಳ ನಾನಾ ಪ್ರಯೋಜನಗಳನ್ನು ಒದಗಿಸಿ, ಗ್ರಾಹಕರಿಗೆ ಮಾರಾಟ ಮಾಡುವ ಮಾರಾಟಗಾರರು ಇಂತಹ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಮಾಡಿದ ಪ್ರೆಷರ್ ಕುಕ್ಕರ್‌ಗಳ ವಿಷಯದಲ್ಲೂ ಫ್ಲಿಪ್ ಕಾರ್ಟ್ ಇಂತಹ ನಿಯಮಗಳನ್ನು ಅನುಸರಿಸುವುದು ಕಡ್ಡಾಯ ಎಂದು ಸಿಸಿಪಿಎ ಬೊಟ್ಟು ಮಾಡಿದೆ.

 

ಫ್ಲಿಪ್‌ಕಾರ್ಟ್ ತನ್ನ ಇ-ಕಾಮರ್ಸ್ ವೇದಿಕೆಯಲ್ಲಿ ಪ್ರೆಷರ್ ಕುಕ್ಕರ್‌ಗಳ ಮಾರಾಟದಿಂದ ಒಟ್ಟು 1,84,263 ರೂ. ಹಣ ಪಡೆದಿದೆ ಎಂದು ಒಪ್ಪಿಕೊಂಡಿದೆ. ಅಂತಹ ಪ್ರೆಷರ್ ಕುಕ್ಕರ್‌ಗಳ ಮಾರಾಟದಿಂದ ಫ್ಲಿಪ್‌ಕಾರ್ಟ್ ವಾಣಿಜ್ಯಿಕವಾಗಿ ಲಾಭ ಗಳಿಸಿದಾಗ, ಗ್ರಾಹಕರಿಗೆ ಅವುಗಳ ಮಾರಾಟದಿಂದ ಎದುರಾಗುವ ನ್ಯೂನತೆಗಳು ಮತ್ತು ಸಮಸ್ಯೆಗಳಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂದು ಸಿಸಿಪಿಎ ಸ್ಪಷ್ಟಪಡಿಸಿದೆ.

ಗ್ರಾಹಕರಲ್ಲಿ ಜಾಗೃತಿ ಮತ್ತು ಗುಣಮಟ್ಟದ ಪ್ರಜ್ಞೆ ಹೆಚ್ಚಿಸಲು, ಕೇಂದ್ರ ಸರ್ಕಾರ ಪ್ರಕಟಿಸಿದ ಗುಣಮಟ್ಟ ನಿಯಂತ್ರಣ ಆದೇಶಗಳನ್ನು(ಕ್ಯುಸಿಒ) ಉಲ್ಲಂಘಿಸುವ ಮತ್ತು ನಕಲಿ ಸರಕುಗಳ ಮಾರಾಟ ತಡೆಗಟ್ಟಲು ಸಿಸಿಪೆ, ದೇಶಾದ್ಯಂತ ಅಭಿಯಾನ ಪ್ರಾರಂಭಿಸಿದೆ. ಅಭಿಯಾನದ ಭಾಗವಾಗಿ ಗುರುತಿಸಲಾದ ದೈನಂದಿನ ಬಳಕೆಯ ಉತ್ಪನ್ನಗಳಲ್ಲಿ ಹೆಲ್ಮೆಟ್‌ಗಳು, ದೇಶೀಯ ಪ್ರೆಷರ್ ಕುಕ್ಕರ್‌ಗಳು ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳು ಸೇರಿವೆ. ಅಂತಹ ಉತ್ಪನ್ನಗಳ ತಯಾರಿಕೆ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತನಿಖೆ ಮಾಡಲು, ಕ್ರಮ ತೆಗೆದುಕೊಂಡ ಬಗ್ಗೆ ವರದಿ ಸಲ್ಲಿಸಲು ಸಿಸಿಪಿಎ, ದೇಶಾದ್ಯಂತ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

 

ಅಭಿಯಾನದ ಅಡಿ ಬಿಐಎಸ್(ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್), ಪ್ರಮಾಣಿತವಲ್ಲದ ಹಲವಾರು ಹೆಲ್ಮೆಟ್‌ಗಳು ಮತ್ತು ಪ್ರೆಷರ್ ಕುಕ್ಕರ್‌ಗಳನ್ನು ಶೋಧಿಸಿ ವಶಪಡಿಸಿಕೊಂಡಿದೆ. ಕಡ್ಡಾಯ ಮಾನದಂಡಗಳಿಗೆ ಅನುಗುಣವಾಗಿರದ 1,435 ಪ್ರೆಶರ್ ಕುಕ್ಕರ್ ಮತ್ತು 1,088 ಹೆಲ್ಮೆಟ್‌ಗಳನ್ನು ಬಿಐಎಸ್ ವಶಪಡಿಸಿಕೊಂಡಿದೆ.

ಕಾನೂನಿನ ಅಡಿ ಅಗತ್ಯ ಕ್ರಮಗಳನ್ನು ನಿರ್ದೇಶಿಸಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರವು ಕಡ್ಡಾಯವಾಗಿ ಬಳಸಲು ನಿರ್ದೇಶಿಸಿದ ಮಾನದಂಡಗಳ ಅನುಸರಣೆಯನ್ನು ಖಚಿತ ಪಡಿಸಿಕೊಳ್ಳುವಂತೆ ಸಿಸಿಪಿಎ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆದಿದೆ. 

 

ಇದಲ್ಲದೆ, 2016ರ ಬಿಐಎಸ್ ಕಾಯಿದೆಯ ನಿಬಂಧನೆಗಳ ಅಡಿ, ಕಡ್ಡಾಯ ಮಾನದಂಡಗಳ ಉಲ್ಲಂಘನೆ ಅಪರಾಧಗಳಿಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಬಿಐಎಸ್ ನ ಎಲ್ಲಾ ಪ್ರಾದೇಶಿಕ ಶಾಖೆಗಳಿಗೆ ಸಮರ್ಪಕ ಸೂಚನೆ ನೀಡುವಂತೆ ಸಿಸಿಪಿಎ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಮಹಾನಿರ್ದೇಶಕರಿಗೂ ಪತ್ರ ಬರೆದಿದೆ.

 

ಗ್ರಾಹಕ ವ್ಯವಹಾರಗಳ ಸಚಿವಾಲಯು ಹೊಸ ಕಿರುಸಂಕೇತ ‘1915’ ಅನ್ನು ಪ್ರಾರಂಭಿಸಿದಾಗಿನಿಂದ, ಹೆಚ್ಚು ಹೆಚ್ಚು ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ನೋಂದಾಯಿಸುತ್ತಿದ್ದಾರೆ. ಎನ್‌ಸಿಎಚ್‌ನಲ್ಲಿ ನೋಂದಾಯಿಸಲಾದ ಹೆಚ್ಚಿನ ಕುಂದುಕೊರತೆಗಳು ಇ-ಕಾಮರ್ಸ್ ವೇದಿಕೆಗಳಲ್ಲಿ ಕಂಡುಬರುತ್ತಿವೆ. 2022 ಜುಲೈನಲ್ಲಿ ಎನ್‌ಸಿಎಚ್‌ನ ಎಲ್ಲಾ ಕುಂದುಕೊರತೆಗಳ ಪೈಕಿ 38% ಪ್ರಮಾಣ ಇ-ಕಾಮರ್ಸ್‌ಗೆ ಸಂಬಂಧಿಸಿದ್ದಾಗಿವೆ. ಇ-ಕಾಮರ್ಸ್‌ನಲ್ಲಿನ ಗ್ರಾಹಕರ ಕುಂದುಕೊರತೆಗಳ ಪ್ರಮುಖ ವರ್ಗಗಳೆಂದರೆ ದೋಷಪೂರಿತ ಉತ್ಪನ್ನದ ವಿತರಣೆ, ಪಾವತಿಸಿದ ಮೊತ್ತ ಮರುಪಾವತಿ ವೈಫಲ್ಯ, ಉತ್ಪನ್ನದ ವಿತರಣೆ ವಿಳಂಬ ಇತ್ಯಾದಿ ಸೇರಿವೆ.

ಐಎಸ್ಐ ಮಾರ್ಕ್ ಹೊಂದಿರದ ಮತ್ತು ಕಡ್ಡಾಯ ಬಿಐಎಸ್ ಮಾನದಂಡಗಳನ್ನು ಉಲ್ಲಂಘಿಸುವ ಸರಕುಗಳನ್ನು ಖರೀದಿಸುವ ವಿರುದ್ಧ ಗ್ರಾಹಕರನ್ನು ಎಚ್ಚರಿಸಲು ಮತ್ತು ಜಾಗೃತಿ ಮೂಡಿಸಲು ಸಿಸಿಪಿಎ ಕಾಯಿದೆಯ ಸೆಕ್ಷನ್ 18(2)(ಜೆ) ಅಡಿ, ಸುರಕ್ಷತಾ ಸೂಚನೆಗಳನ್ನು ನೀಡಿದೆ. ಹೆಲ್ಮೆಟ್‌ಗಳು, ಪ್ರೆಷರ್ ಕುಕ್ಕರ್‌ಗಳು ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಸಂಬಂಧಿಸಿದಂತೆ ಮೊದಲ ಸುರಕ್ಷತಾ ಸೂಚನೆಯನ್ನು ನೀಡಲಾಗಿದೆ. ಎಲೆಕ್ಟ್ರಿಕ್ ಇಮ್ಮರ್ಶನ್ ವಾಟರ್ ಹೀಟರ್‌ಗಳು, ಹೊಲಿಗೆ ಯಂತ್ರಗಳು, ಮೈಕ್ರೋವೇವ್ ಓವನ್‌ಗಳು, ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸ್ಟವ್‌ಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳಿಗೆ ಸಂಬಂಧಿಸಿದ 2ನೇ ಸುರಕ್ಷತಾ ಸೂಚನೆಯನ್ನು ಸಹ ನೀಡಲಾಗಿದೆ.

 

*****


(Release ID: 1852741) Visitor Counter : 243