ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
Posted On:
08 AUG 2022 1:26PM by PIB Bengaluru
ಸದನದ ಅಧ್ಯಕ್ಷರು ಮತ್ತು ದೇಶದ ಉಪರಾಷ್ಟ್ರಪತಿಗಳಾಗಿರುವ ಗೌರವಾನ್ವಿತ ಶ್ರೀ ವೆಂಕಯ್ಯನಾಯ್ಡು ಜೀ ಅವರಿಗೆ ತಮ್ಮ ಅಧಿಕಾರಾವಧಿಯ ಮುಕ್ತಾಯದ ಸಮಯದಲ್ಲಿ ಧನ್ಯವಾದ ಅರ್ಪಿಸಲು ನಾವು ಇಲ್ಲಿ ಉಪಸ್ಥಿತರಿದ್ದೇವೆ. ಈ ಸದನಕ್ಕೆ ಇದು ತುಂಬಾ ಭಾವನಾತ್ಮಕ ಕ್ಷಣವಾಗಿದೆ. ಸದನದ ಅನೇಕ ಐತಿಹಾಸಿಕ ಕ್ಷಣಗಳು ನಿಮ್ಮ ಗೌರವಾನ್ವಿತ ಉಪಸ್ಥಿತಿಯೊಂದಿಗೆ ಸಂಬಂಧ ಹೊಂದಿವೆ. ನಾನು ರಾಜಕೀಯದಿಂದ ನಿವೃತ್ತನಾಗಿದ್ದೇನೆ ಆದರೆ ಸಾರ್ವಜನಿಕ ಜೀವನದಿಂದ ದಣಿದಿಲ್ಲ ಎಂದು ನೀವು ಅನೇಕ ಬಾರಿ ಹೇಳಿದ್ದೀರಿ. ಆದ್ದರಿಂದ, ಈ ಸದನವನ್ನು ಮುನ್ನಡೆಸುವ ನಿಮ್ಮ ಜವಾಬ್ದಾರಿಯು ಕೊನೆಗೊಳ್ಳಬಹುದು, ಆದರೆ ನಿಮ್ಮ ಅನುಭವಗಳು ದೇಶಕ್ಕೆ ಮತ್ತು ಭವಿಷ್ಯದಲ್ಲಿ ದೀರ್ಘಕಾಲದವರೆಗೆ ನಮ್ಮಂತಹ ಅನೇಕ ಸಾರ್ವಜನಿಕ ಜೀವನದ ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಿ ಇರಲಿವೆ.
ಗೌರವಾನ್ವಿತ ಅಧ್ಯಕ್ಷರೇ,
ಇಂದು, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶವು ತನ್ನ ಮುಂದಿನ 25 ವರ್ಷಗಳ ಹೊಸ ಪ್ರಯಾಣಕ್ಕೆ ಅಣಿಯಾಗುತ್ತಿರುವಾಗ, ದೇಶದ ನಾಯಕತ್ವವು ಒಂದು ರೀತಿಯಲ್ಲಿ ಹೊಸ ಯುಗದ ಕೈಯಲ್ಲಿದೆ. ಈ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವಾಗ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸ್ಪೀಕರ್ ಮತ್ತು ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯದ ನಂತರ ಜನಿಸಿದವರು ಮತ್ತು ಅವರಲ್ಲಿ ಪ್ರತಿಯೊಬ್ಬರೂ ಬಹಳ ಸರಳ ಹಿನ್ನೆಲೆಯಿಂದ ಬಂದವರು ಎಂಬುದೊಂದು ವಿಶೇಷವಾಗಿದೆ ಮತ್ತು ಅದು ನಮಗೆಲ್ಲರಿಗೆ ತಿಳಿದಿರುವ ಸಂಗತಿಯಾಗಿದೆ. ಇದು ಬಹು ದೊಡ್ಡ ಸಾಂಕೇತಿಕ ಮೌಲ್ಯವನ್ನು ಹೊಂದಿದೆ ಮತ್ತು ಇದು ಹೊಸ ಯುಗದ ಒಂದು ಇಣುಕುನೋಟವೂ ಆಗಿದೆ.
ಗೌರವಾನ್ವಿತ ಅಧ್ಯಕ್ಷರೇ,
ನೀವು ಸದಾ ನಿಮ್ಮ ಎಲ್ಲಾ ವಿಭಿನ್ನ ಸಾಮರ್ಥ್ಯಗಳಲ್ಲಿ ಯುವಕರಿಗಾಗಿ ಕೆಲಸ ಮಾಡಿದಂತಹ ಉಪರಾಷ್ಟ್ರಪತಿಯಾಗಿರುವಿರಿ. ನೀವು ಸದನದಲ್ಲಿ ಸದಾ ಯುವ ಸಂಸದರನ್ನು ಪ್ರೋತ್ಸಾಹಿಸುತ್ತಿದ್ದಿರಿ. ಯುವಕರೊಂದಿಗೆ ಸಂವಹನ ನಡೆಸಲು ನೀವು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಿರಿ. ನೀವು ಹೊಸ ಪೀಳಿಗೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ್ದೀರಿ ಮತ್ತು ಯುವಕರು ನಿಮ್ಮ ಮಾರ್ಗದರ್ಶನವನ್ನು ಪಡೆದಿದ್ದಾರೆ ಮತ್ತು ಅವರು ನಿಮ್ಮನ್ನು ಭೇಟಿಯಾಗಲು ಯಾವಾಗಲೂ ಉತ್ಸುಕರಾಗಿದ್ದಾರೆ. ಈ ಎಲ್ಲಾ ಸಂಸ್ಥೆಗಳಲ್ಲಿ ನಿಮ್ಮ ಜನಪ್ರಿಯತೆಯು ಬಹಳ ಉತ್ತುಂಗದಲ್ಲಿದೆ. ಉಪರಾಷ್ಟ್ರಪತಿಯಾಗಿ ನೀವು ಸದನದ ಹೊರಗೆ ಮಾಡಿದ ಭಾಷಣಗಳಲ್ಲಿ ಸುಮಾರು 25 ಪ್ರತಿಶತದಷ್ಟು ಯುವಜನರ ನಡುವೆ ಮಾಡಿದಂತಹವು ಎಂದು ನನಗೆ ತಿಳಿಸಲಾಗಿದೆ. ಇದರಲ್ಲಿ ಕೂಡಾ ಒಂದು ಮಹತ್ವದ ಸಂಗತಿ ಇದೆ.
ಗೌರವಾನ್ವಿತ ಅಧ್ಯಕ್ಷರೇ,
ವೈಯಕ್ತಿಕವಾಗಿ, ನಿಮ್ಮನ್ನು ಬಹಳ ಹತ್ತಿರದಿಂದ ವಿಭಿನ್ನ ಪಾತ್ರಗಳಲ್ಲಿ ನೋಡಿದ ಅದೃಷ್ಟಶಾಲಿ ನಾನಾಗಿದ್ದೇನೆ. ನಿಮ್ಮೊಂದಿಗೆ ಜೊತೆಯಾಗಿ ಕೆಲಸ ಮಾಡುವ ಸುಯೋಗವೂ ನನಗೆ ಸಿಕ್ಕಿದೆ. ಪಕ್ಷದ ಕಾರ್ಯಕರ್ತನಾಗಿ ನಿಮ್ಮ ಸೈದ್ಧಾಂತಿಕ ಬದ್ಧತೆ, ಶಾಸಕರಾಗಿ ನಿಮ್ಮ ಕೆಲಸ, ಸಂಸದರಾಗಿ ಸದನದಲ್ಲಿ ನಿಮ್ಮ ಕಾರ್ಯ,ಚಟುವಟಿಕೆ, ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನಿಮ್ಮ ವೈಯಕ್ತಿಕ ಕೌಶಲ್ಯ ಮತ್ತು ನಾಯಕತ್ವ, ಸಂಪುಟ ಸಚಿವರಾಗಿ ನಿಮ್ಮ ಕಠಿಣ ಪರಿಶ್ರಮ ಅಥವಾ ಆವಿಷ್ಕಾರದ, ನಾವೀನ್ಯತೆಯ ನಿಮ್ಮ ಪ್ರಯತ್ನಗಳು ಮತ್ತು ಆ ಪ್ರಯತ್ನಗಳಿಂದ ಪಡೆದ ಯಶಸ್ಸುಗಳು ದೇಶಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ನೀವು ಉಪರಾಷ್ಟ್ರಪತಿಯಾಗಿ ಅಥವಾ ಸದನದ ಅಧ್ಯಕ್ಷರಾಗಿ ನಿಮ್ಮ ವಿವಿಧ ಜವಾಬ್ದಾರಿಗಳನ್ನು ದಯೆ ಮತ್ತು ಶ್ರದ್ಧೆಯಿಂದ ನಿರ್ವಹಿಸುವುದನ್ನು ನಾನು ನೋಡಿದ್ದೇನೆ. ನೀವು ಯಾವುದೇ ಕೆಲಸವನ್ನು ಹೊರೆ ಎಂದು ಎಂದಿಗೂ ಪರಿಗಣಿಸಲಿಲ್ಲ ಮತ್ತು ಯಾವುದೇ ಕೆಲಸದಲ್ಲಿ ಹೊಸ ಜೀವನದ ಉಸಿರಾಟವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಿರಿ. ನಿಮ್ಮ ಉತ್ಸಾಹ ಮತ್ತು ಸಮರ್ಪಣೆಯನ್ನು ನಾವು ಸದಾ ನೋಡುತ್ತಲೇ ಬಂದಿದ್ದೇವೆ. ಈ ಸದನದ ಮೂಲಕ, ನಾನು ಪ್ರತಿಯೊಬ್ಬ ಗೌರವಾನ್ವಿತ ಸಂಸದರು ಮತ್ತು ದೇಶದ ಪ್ರತಿಯೊಬ್ಬ ಯುವಕರಿಗೆ ಸಮಾಜ, ದೇಶ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಿಮ್ಮಿಂದ ಸಾಕಷ್ಟು ಕಲಿಯಬಹುದು ಎಂದು ಹೇಳಲು ಬಯಸುತ್ತೇನೆ. ಆಲಿಸುವುದು, ಕಲಿಯುವುದು, ಮುನ್ನಡೆಸುವುದು, ಸಂಪರ್ಕಿಸುವುದು, ಸಂವಹನ ಮಾಡುವುದು, ಬದಲಾಯಿಸುವುದು, ಪ್ರತಿಬಿಂಬಿಸುವುದು ಮತ್ತು ಮರುಸಂಪರ್ಕಿಸುವಂತಹ ಪುಸ್ತಕಗಳು ನಿಮ್ಮ ಬಗ್ಗೆ ಸಾಕಷ್ಟು ಹೇಳುತ್ತವೆ. ನಿಮ್ಮ ಅನುಭವಗಳು ನಮ್ಮ ಯುವಕರಿಗೆ ಮಾರ್ಗದರ್ಶನ ನೀಡುತ್ತವೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ.
ಗೌರವಾನ್ವಿತ ಅಧ್ಯಕ್ಷರೇ,
ನಾನು ನಿಮ್ಮ ಪುಸ್ತಕಗಳನ್ನು ಉಲ್ಲೇಖಿಸಲು ಕಾರಣವೇನೆಂದರೆ, ಅವುಗಳ ಶೀರ್ಷಿಕೆಗಳು ನೀವು ಖ್ಯಾತರಾಗಿರುವ ಪದಗಳ ಬಗ್ಗೆ ನಿಮ್ಮ ಚಾಕಚಕ್ಯತೆಯನ್ನು ಪ್ರತಿಬಿಂಬಿಸುತ್ತವೆ. ನಿಮ್ಮ ಒನ್-ಲೈನರ್ ಗಳು ವಿಟ್-ಲೈನರ್ ಗಳು ಜೊತೆಗೆ ವಿನ್-ಲೈನರ್ ಗಳಾಗಿವೆ. ಇದರರ್ಥ ಆ ಸಾಲುಗಳ ನಂತರ ಹೆಚ್ಚಿನದನ್ನು ಹೇಳಬೇಕಾಗಿಲ್ಲ. ನಿಮ್ಮ ಪ್ರತಿಯೊಂದು ಪದವನ್ನು ಕೇಳಲಾಗುತ್ತದೆ, ಆದ್ಯತೆ ನೀಡಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ ಮತ್ತು ಎಂದಿಗೂ ಅವುಗಳನ್ನು ವಿರೋಧಿಸಿದ್ದಿಲ್ಲ. ನಿಮ್ಮ ಭಾಷೆಯ ಮೇಲಿನ ಪ್ರಭುತ್ವ ಮತ್ತು ಸನ್ನಿವೇಶಗಳನ್ನು, ಪರಿಸ್ಥಿತಿಯ ದಿಕ್ಕನ್ನು ಕೌಶಲ್ಯಯುಕ್ತವಾಗಿ ಮತ್ತು ಸುಲಭವಾಗಿ ತಿರುಗಿಸುವ ನಿಮ್ಮ ಸಾಮರ್ಥ್ಯಕ್ಕಾಗಿ ನಾನು ನಿಮ್ಮನ್ನು ನಿಜವಾಗಿಯೂ ಅಭಿನಂದಿಸುತ್ತೇನೆ.
ಸ್ನೇಹಿತರೇ,
ನಾವು ಏನು ಹೇಳುತ್ತೇವೆ ಎಂಬುದು ಮುಖ್ಯ ಆದರೆ ನಾವು ಹೇಗೆ ತಿಳಿಸುತ್ತೇವೆ ಎಂಬುದು ಬಹಳ ಮುಖ್ಯ. ಯಾವುದೇ ಸಂವಾದದ ಯಶಸ್ಸಿನ ಅಳತೆಗೋಲು ಏನೆಂದರೆ, ಅದು ಆಳವಾದ ಪರಿಣಾಮವನ್ನು ಬೀರಬೇಕು ಮತ್ತು ಜನರು ಅದನ್ನು ನೆನಪಿಟ್ಟುಕೊಳ್ಳಬೇಕು ಮತ್ತು ನಾವು ಏನು ಹೇಳುತ್ತೇವೆ ಎಂಬುದರ ಬಗ್ಗೆ ಯೋಚಿಸಲು ಅವರನ್ನು ಪ್ರೇರೇಪಿಸುವಂತಿರಬೇಕು. ಸದನದಲ್ಲಿ ಮತ್ತು ಸದನದ ಹೊರಗೆ ಈ ಅಭಿವ್ಯಕ್ತಿ ಕಲೆಯಲ್ಲಿ ವೆಂಕಯ್ಯ ಜೀ ಅವರ ಕೌಶಲ್ಯದ ಬಗ್ಗೆ ದೇಶದ ಜನರಿಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಅಭಿವ್ಯಕ್ತಿಯ ಶೈಲಿಯು ದೋಷರಹಿತ ಮತ್ತು ಅನನ್ಯವಾಗಿದೆ. ನಿಮ್ಮ ಮಾತುಗಳಲ್ಲಿ ಆಳ ಮತ್ತು ಗಾಂಭೀರ್ಯ ಇರುತ್ತದೆ. ನಿಮ್ಮ ಭಾಷಣದಲ್ಲಿ ಬುದ್ಧಿವಂತಿಕೆ, ಹಾಸ್ಯ ಮತ್ತು ತೂಕವಿರುತ್ತದೆ. ಅಲ್ಲಿ ಆತ್ಮೀಯತೆ ಮತ್ತು ಅರಿವು/ಜ್ಞಾನ ಇದೆ. ನಿಮ್ಮ ಸಂವಹನದ ರೀತಿಯು ಹೃದಯವನ್ನು ಸ್ಪರ್ಶಿಸುತ್ತದೆ ಮತ್ತು ಕಿವಿಗಳಿಗೆ ಆಹ್ಲಾದಕರವಾಗಿರುತ್ತದೆ.
ಗೌರವಾನ್ವಿತ ಅಧ್ಯಕ್ಷರೇ,
ನೀವು ನಿಮ್ಮ ರಾಜಕೀಯ ಜೀವನವನ್ನು ದಕ್ಷಿಣದಲ್ಲಿ, ವಿದ್ಯಾರ್ಥಿ ರಾಜಕಾರಣದೊಂದಿಗೆ ಪ್ರಾರಂಭಿಸಿದಿರಿ. ಆಗ ಜನರು ನೀವು ಸೇರಿರುವ ಪಕ್ಷಕ್ಕೆ ಮತ್ತು ಸಿದ್ಧಾಂತಗಳಿಗೆ ಮುಂದಿನ ದಿನಗಳಲ್ಲಿ ದಕ್ಷಿಣದಲ್ಲಿ ಯಾವುದೇ ಭವಿತವ್ಯ ಇಲ್ಲ ಎಂದು ಹೇಳುತ್ತಿದ್ದರು. ಆದರೆ ನೀವು ದಕ್ಷಿಣ ಭಾರತದ ಒಬ್ಬ ಸಾಮಾನ್ಯ ವಿದ್ಯಾರ್ಥಿ ಕಾರ್ಯಕರ್ತನಾಗಿ ಪ್ರಯಾಣವನ್ನು ಪ್ರಾರಂಭಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಉನ್ನತ ಹುದ್ದೆಗೆ ಏರಿದಿರಿ. ಇದು ಕರ್ತವ್ಯ ಮತ್ತು ಕೆಲಸದ ಬಗ್ಗೆ ನಿಮ್ಮ ಅಚಲ ಭಕ್ತಿಯ, ಅರ್ಪಣಾಭಾವದ ಸಂಕೇತವಾಗಿದೆ. ನಮಗೆ ದೇಶದ ಬಗ್ಗೆ ಪ್ರೀತಿ, ಮಾತನಾಡುವ ಕಲೆ ಮತ್ತು ಭಾಷಾ ವೈವಿಧ್ಯತೆಯಲ್ಲಿ ನಂಬಿಕೆ ಇದ್ದರೆ ಭಾಷೆ ಎಂದಿಗೂ ನಮಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ.
ಗೌರವಾನ್ವಿತ ಅಧ್ಯಕ್ಷರೇ,
ನೀವು ಒಮ್ಮೆ ಹೇಳಿದ್ದನ್ನು ಅನೇಕ ಜನರು ನೆನಪಿಸಿಕೊಳ್ಳುತ್ತಾರೆ. ನನಗೆ ವಿಶೇಷವಾಗಿ ನೆನಪಿದೆ. ನೀವು ಮಾತೃಭಾಷೆಯ ಬಗ್ಗೆ ತುಂಬಾ ಆತ್ಮೀಯತೆ ಮತ್ತು ನಿರಂತರತೆಯನ್ನು, ಹಠ ಎನ್ನುವಂತಹ ಪ್ರೀತಿಯನ್ನು ಹೊಂದಿದ್ದೀರಿ ಎಂಬುದನ್ನು ನಾನು ಸದಾ ಕೇಳುತ್ತಿರುತ್ತೇನೆ. ಆದರೆ ಅದನ್ನು ಸಂವಹನ ಮಾಡುವ ನಿಮ್ಮ ವಿಧಾನವೂ ಸಹ ತುಂಬಾ ಸುಂದರವಾಗಿದೆ. ಮಾತೃಭಾಷೆ ಕಣ್ಣುಗಳಿದ್ದಂತೆ ಮತ್ತು ಇತರ ಭಾಷೆಗಳು ಓದುವ ಕನ್ನಡಕದಂತೆ ಎಂದು ನೀವು ಹೇಳಿದಾಗ, ಹೃದಯದ ಆಳದಿಂದ ಮಾತ್ರ ಅಂತಹ ಭಾವನೆ ಬರುವುದು ಸಾಧ್ಯ. ವೆಂಕಯ್ಯ ಜೀ ಅವರ ಉಪಸ್ಥಿತಿಯಲ್ಲಿ ಸದನದ ಕಾರ್ಯಕಲಾಪಗಳಲ್ಲಿ ಪ್ರತಿಯೊಂದು ಭಾರತೀಯ ಭಾಷೆಗೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನೀವು ಸದನದಲ್ಲಿ ಎಲ್ಲಾ ಭಾರತೀಯ ಭಾಷೆಗಳ ಪ್ರಚಾರಕ್ಕಾಗಿ, ಉತ್ತೇಜನ ನಿಟ್ಟಿನಲ್ಲಿ ಕೆಲಸ ಮಾಡಿದ್ದೀರಿ. ಗೌರವಾನ್ವಿತ ಸದಸ್ಯರು ಸದನದಲ್ಲಿ ನಮ್ಮ 22 ಅನುಸೂಚಿ ಭಾಷೆಗಳಲ್ಲಿ ಯಾವುದಾದರೂ ಒಂದರಲ್ಲಿ ಮಾತನಾಡಬಹುದು ಎಂಬುದನ್ನು ನೀವು ಖಚಿತಪಡಿಸಿದ್ದೀರಿ. ನಿಮ್ಮ ಪ್ರತಿಭೆ ಮತ್ತು ನಿಷ್ಠೆಯು ಭವಿಷ್ಯದಲ್ಲಿಯೂ ಸದನಕ್ಕೆ ಸದಾ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಸಂಸದೀಯ ಮತ್ತು ಸೌಜನ್ಯಯುತ ರೀತಿಯಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯವನ್ನು ಹೇಗೆ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬಹುದು ಎಂಬುದಕ್ಕೆ ನೀವು ಸ್ಫೂರ್ತಿಯಾಗಿ ಉಳಿಯುತ್ತೀರಿ.
ಗೌರವಾನ್ವಿತ ಅಧ್ಯಕ್ಷರೇ,
ನಿಮ್ಮ ಸಮರ್ಥ ನಾಯಕತ್ವ ಮತ್ತು ಶಿಸ್ತು ಈ ಸದನದ ಬದ್ಧತೆ ಮತ್ತು ಉತ್ಪಾದಕತೆಗೆ ಹೊಸ ಎತ್ತರಗಳನ್ನು ನೀಡಿದೆ. ನಿಮ್ಮ ಅಧಿಕಾರಾವಧಿಯಲ್ಲಿ ರಾಜ್ಯಸಭೆಯ ಉತ್ಪಾದಕತೆಯು 70% ರಷ್ಟು ಹೆಚ್ಚಾಗಿದೆ. ಸದನದಲ್ಲಿ ಸದಸ್ಯರ ಹಾಜರಾತಿ ಹೆಚ್ಚಾಗಿದೆ. ಈ ಅವಧಿಯಲ್ಲಿ, ದಾಖಲೆಯ 177 ಮಸೂದೆಗಳನ್ನು ಅಂಗೀಕರಿಸಲಾಯಿತು ಅಥವಾ ಚರ್ಚಿಸಲಾಯಿತು. ನಿಮ್ಮ ಮಾರ್ಗದರ್ಶನದಲ್ಲಿ ಇಂತಹ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ, ಅವು ಆಧುನಿಕ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿವೆ. ನಿಮ್ಮ ಅನೇಕ ನಿರ್ಧಾರಗಳು ಮೇಲ್ಮನೆಯ ಮೇಲ್ಮುಖವಾದ ಪ್ರಯಾಣಕ್ಕಾಗಿ ಅಂದರೆ ಅವುಗಳ ಔನ್ನತ್ಯಕ್ಕಾಗಿ ನೆನಪಿನಲ್ಲಿ ಉಳಿಯುತ್ತವೆ. ಸಚಿವಾಲಯದ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ಒಂದು ಸಮಿತಿಯನ್ನು ಸಹ ರಚಿಸಿದ್ದೀರಿ. ಅಂತೆಯೇ, ರಾಜ್ಯಸಭೆಯ ಸಚಿವಾಲಯವನ್ನು ಸುವ್ಯವಸ್ಥಿತಗೊಳಿಸುವುದು, ಮಾಹಿತಿ ತಂತ್ರಜ್ಞಾನವನ್ನು ಉತ್ತೇಜಿಸುವುದು ಮತ್ತು ಕಾಗದರಹಿತ ವ್ಯವಸ್ಥೆಗಾಗಿ ಇ-ಕಚೇರಿ ವ್ಯವಸ್ಥೆಯನ್ನು ಜಾರಿಗೊಳಿಸುವುದು ಮುಂತಾದ ನಿಮ್ಮ ಇಂತಹ ಅನೇಕ ಉಪಕ್ರಮಗಳು ಮೇಲ್ಮನೆಗೆ ಹೊಸ ಎತ್ತರವನ್ನು ಗಳಿಸಿಕೊಳ್ಳಲು ಸಹಾಯ ಮಾಡಿವೆ.
ಗೌರವಾನ್ವಿತ ಅಧ್ಯಕ್ಷರೇ,
ಇದನ್ನು ನಮ್ಮ ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ: न स सभा यत्र न सन्ति वृद्धा न ते वृद्धा ये न वदन्ति धर्मम् !
ಅದರರ್ಥ, ಧರ್ಮವನ್ನು ಅಂದರೆ ಕರ್ತವ್ಯವನ್ನು ಬೋಧಿಸುವವರು ಇರುವ ಅನುಭವಿಗಳು ಮತ್ತು ಅನುಭವಿಗಳನ್ನು ಒಳಗೊಂಡ ಒಂದು ಸಭೆ ಇರುತ್ತದೆ. ನಿಮ್ಮ ಮಾರ್ಗದರ್ಶನದಲ್ಲಿ, ರಾಜ್ಯಸಭೆಯಲ್ಲಿ ಈ ಮಾನದಂಡಗಳನ್ನು ಅತ್ಯಂತ ಗುಣಮಟ್ಟಗಳೊಂದಿಗೆ ಪೂರೈಸಲಾಗಿದೆ. ನೀವು ಗೌರವಾನ್ವಿತ ಸದಸ್ಯರಿಗೆ ಸೂಚನೆಗಳನ್ನು ನೀಡುತ್ತೀರಿ ಮತ್ತು ಅವರಿಗೆ ನಿಮ್ಮ ಅನುಭವಗಳ ಪ್ರಯೋಜನವನ್ನು ಒದಗಿಸುತ್ತೀರಿ ಮತ್ತು ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಪ್ರೀತಿಯಿಂದ ಬೈಯುತ್ತಿದ್ದಿರಿ. ಯಾವ ಸದಸ್ಯರೂ ನಿಮ್ಮ ಯಾವುದೇ ಮಾತುಗಳನ್ನು ಬೇರೆ ರೀತಿಯಲ್ಲಿ ತೆಗೆದುಕೊಂಡಿಲ್ಲ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಆ ಆದರ್ಶಗಳು ಮತ್ತು ಮಾನದಂಡಗಳನ್ನು ಅನುಸರಿಸಿದಾಗ ಅಲ್ಲೊಂದು ಬಂಡವಾಳ ಸೃಷ್ಟಿಯಾಗುತ್ತದೆ. ಸಂಸತ್ತಿನಲ್ಲಿ ಒಂದು ಮಿತಿಯನ್ನು ಮೀರಿ ಕಲಾಪಗಳಿಗೆ ಅಡ್ಡಿಪಡಿಸುವುದು ಸದನದ ನಿಂದನೆಗೆ ಸಮಾನ ಎಂದು ನೀವು ಸದಾ ಒತ್ತಿಹೇಳಿದ್ದೀರಿ. ನೀವು ನಿಗದಿಪಡಿಸಿದ ಈ ಮಾನದಂಡಗಳಲ್ಲಿ ಪ್ರಜಾಪ್ರಭುತ್ವದ ಪ್ರಬುದ್ಧತೆಯನ್ನು ನಾನು ಕಾಣುತ್ತೇನೆ. ಈ ಹಿಂದೆ ಸದನದಲ್ಲಿನ ಚರ್ಚೆಯ ಸಮಯದಲ್ಲಿ ಅಡೆತಡೆಗಳಿದ್ದರೆ ಕಲಾಪಗಳನ್ನು ಮುಂದೂಡುವುದು ಒಂದು ನಿಯಮವೆಂಬಂತೆ ಪರಿಗಣಿಸಲಾಗಿತ್ತು. ಆದರೆ ನೀವು ಸದನವನ್ನು ಸಂವಾದ, ಸಂಪರ್ಕ ಮತ್ತು ಸಮನ್ವಯದ ಮೂಲಕ ನಡೆಸಿದ್ದೀರಿ ಮಾತ್ರವಲ್ಲ, ಅದನ್ನು ಉತ್ಪಾದಕವಾಗಿಸಿದ್ದೀರಿ. ಸದನದ ಕಾರ್ಯಕಲಾಪಗಳ ಸಂದರ್ಭದಲ್ಲಿ ಸದಸ್ಯರ ನಡುವೆ ಸಂಘರ್ಷ ಉಂಟಾದರೆ, ನೀವು ಸದಾ ಒಂದು ಮಾತನ್ನು ಹೇಳುತ್ತೀರಿ: "ಸರ್ಕಾರವು ಪ್ರಸ್ತಾಪಿಸಲಿ, ಪ್ರತಿಪಕ್ಷಗಳು ವಿರೋಧಿಸಲಿ ಮತ್ತು ಸದನಕ್ಕೆ ವಿಲೇವಾರಿ ಮಾಡಲು ಬಿಡಿ." ಈ ಸದನವು ಇನ್ನೊಂದು ಸದನದಿಂದ ಬಂದಿರುವ ಮಸೂದೆಗಳ ಬಗ್ಗೆ ಒಪ್ಪಿಗೆ ನೀಡುವ ಅಥವಾ ಭಿನ್ನಾಭಿಪ್ರಾಯವನ್ನು ಮಂಡಿಸುವ ಹಕ್ಕನ್ನು ಖಂಡಿತವಾಗಿಯೂ ಹೊಂದಿದೆ. ಈ ಸದನವು ಅವುಗಳನ್ನು ಅಂಗೀಕರಿಸಬಹುದು, ತಿರಸ್ಕರಿಸಬಹುದು ಅಥವಾ ತಿದ್ದುಪಡಿ ಮಾಡಬಹುದು. ಆದರೆ ಅವುಗಳನ್ನು ತಡೆಹಿಡಿಯುವ ಅಥವಾ ಅವುಗಳಿಗೆ ಅಡ್ಡಿಪಡಿಸುವ ಪರಿಕಲ್ಪನೆಯು ನಮ್ಮ ಪ್ರಜಾಪ್ರಭುತ್ವದಲ್ಲಿಲ್ಲ.
ಗೌರವಾನ್ವಿತ ಅಧ್ಯಕ್ಷರೇ,
ನಮ್ಮ ಒಪ್ಪಿಗೆಗಳು ಅಥವಾ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಸದನದ ಎಲ್ಲಾ ಸದಸ್ಯರು ಇಂದು ನಿಮ್ಮನ್ನು ಬೀಳ್ಕೊಡಲು ಉಪಸ್ಥಿತರಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವದ ಸೌಂದರ್ಯ. ಇದು ಈ ಸದನದಲ್ಲಿ ನಿಮ್ಮ ಬಗ್ಗೆ ಇರುವ ಗೌರವವನ್ನು ತೋರಿಸುತ್ತದೆ. ನಿಮ್ಮ ಉಪಕ್ರಮಗಳು ಮತ್ತು ಅನುಭವಗಳು ಭವಿಷ್ಯದಲ್ಲಿ ಖಂಡಿತವಾಗಿಯೂ ಎಲ್ಲಾ ಸದಸ್ಯರಿಗೆ ಪ್ರೇರಣೆ ನೀಡುತ್ತವೆ ಎಂದು ನಾನು ಭಾವಿಸುತ್ತೇನೆ. ವಿಶಿಷ್ಟ ರೀತಿಯಲ್ಲಿ ಸದನವನ್ನು ನಡೆಸುವ ಮೂಲಕ ನೀವು ಸದನ ನಡೆಸುವುದಕ್ಕೆ ಮಾನದಂಡಗಳನ್ನು ನಿಗದಿಪಡಿಸಿದ್ದೀರಿ, ಇದು ಈ ಹುದ್ದೆಯನ್ನು ಹೊಂದಿರುವವರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರೆಸುತ್ತದೆ. ರಾಜ್ಯಸಭೆಯು ನೀವು ಸ್ಥಾಪಿಸಿದ ಪರಂಪರೆಯನ್ನು ಅನುಸರಿಸುತ್ತದೆ ಮತ್ತು ದೇಶದ ಬಗ್ಗೆ ಅದರ ಉತ್ತರದಾಯಿತ್ವಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಈ ನಂಬಿಕೆಯೊಂದಿಗೆ, ನಾನು, ಇಡೀ ಸದನದ ಪರವಾಗಿ, ನಿಮಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಎಲ್ಲರ ಪರವಾಗಿ, ನಾನು ನಿಮಗೆ ಋಣಿಯಾಗಿರುತ್ತೇನೆ. ನೀವು ದೇಶಕ್ಕಾಗಿ ಮತ್ತು ಈ ಸದನಕ್ಕಾಗಿ ಏನೆಲ್ಲಾ ಮಾಡಿದ್ದೀರೋ ಅದಕ್ಕಾಗಿ ನಿಮಗೆ ಧನ್ಯವಾದಗಳು. ಅನೇಕ ಶುಭ ಹಾರೈಕೆಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
*************
(Release ID: 1852453)
Visitor Counter : 139
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu