ಸಂಸ್ಕೃತಿ ಸಚಿವಾಲಯ
azadi ka amrit mahotsav

ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ 6 ಕೋಟಿಗೂ ಹೆಚ್ಚು ತಿರಂಗಾ ಸೆಲ್ಫಿಗಳನ್ನು ಹರ್ ಘರ್ ತಿರಂಗಾ ಜಾಲತಾಣದಲ್ಲಿ  ಅಪ್ಲೋಡ್ ಮಾಡಲಾಗಿದೆ


ಚಂಡೀಗಢದಲ್ಲಿ 5,885 ಜನರ ಭಾಗವಹಿಸುವಿಕೆಯೊಂದಿಗೆ ರಚಿಸಲಾದ ವಿಶ್ವದ ' ಅತ್ಯಂತ ದೊಡ್ಡ ಹಾರುವ ರಾಷ್ಟ್ರಧ್ವಜದ ಮಾನವ ಚಿತ್ರ' ಗಿನ್ನಿಸ್ ವಿಶ್ವ ದಾಖಲೆಗೆ

ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ಇಡೀ ದೇಶ ಒಗ್ಗೂಡಿದೆ. ವಿವಿಧ ವಯೋಮಾನದ ಜನರ ಈ ರೀತಿಯ ಉತ್ಸಾಹವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಅಚಲ ಮನೋಭಾವದ ಸಂಕೇತವಾಗಿದೆ : ಶ್ರೀ ಜಿ.ಕೆ.ರೆಡ್ಡಿ

Posted On: 16 AUG 2022 4:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿರಂಗಾವನ್ನು ಮನೆಗೆ ತರಲು ಮತ್ತು ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುವುದರ ಅಂಗವಾಗಿ  ಅದನ್ನು ಆರೋಹಿಸಲು ಜನರನ್ನು ಉತ್ತೇಜಿಸುವುದಕ್ಕಾಗಿ  "ಹರ್ ಘರ್ ತಿರಂಗಾ" ಅಭಿಯಾನಕ್ಕೆ ಚಾಲನೆ ನೀಡಿದ್ದರು.  ಈ ಉಪಕ್ರಮದ ಹಿಂದಿನ ಉದ್ದೇಶವೆಂದರೆ ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಬಲಪಡಿಸುವುದು ಮತ್ತು ಜನ್ ಭಾಗಿದಾರಿ ಮನೋಭಾವದಿಂದ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುವುದು. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಚಿವಾಲಯಗಳು ಈ ಅಭಿಯಾನದಲ್ಲಿ ವ್ಯಾಪಕವಾಗಿ ಪೂರ್ಣ ಉತ್ಸಾಹದಿಂದ ಭಾಗವಹಿಸಿದ್ದವು. ಆಜಾದಿ ಕಾ ಅಮೃತ ಮಹೋತ್ಸವದ ಯಶಸ್ಸಿನ ಹಾದಿಯಲ್ಲಿ ಹರ್ ಘರ್ ತಿರಂಗಾವನ್ನು ಒಂದು ಅಪ್ರತಿಮ ಮಾನದಂಡವನ್ನಾಗಿ ಮಾಡಲು ವಿವಿಧ ಸ್ಥಳಗಳ ಎನ್.ಜಿ.ಒ.ಗಳು ಮತ್ತು ಸ್ವಸಹಾಯ ಗುಂಪುಗಳು ಸಹ ಕೊಡುಗೆ ನೀಡಿವೆ. ಇಡೀ ದೇಶದ ದೇಶಭಕ್ತಿ ಮತ್ತು ಏಕತೆಯನ್ನು ಚಿತ್ರಿಸಲು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಜೀವನದ ಎಲ್ಲಾ ವರ್ಗಗಳ, ವಿವಿಧ ವಯೋಮಾನದ ಜನರನ್ನು ಒಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಚಂಡೀಗಢದ ಸೆಕ್ಟರ್ 16ರ ಕ್ರಿಕೆಟ್ ಕ್ರೀಡಾಂಗಣದಲ್ಲಿ  5,885 ಜನರ ಭಾಗವಹಿಸುವಿಕೆಯೊಂದಿಗೆ ವಿಶ್ವದ ಅತಿದೊಡ್ಡ  “ಎ ವೇವಿಂಗ್ ನ್ಯಾಷನಲ್ ಫ್ಲ್ಯಾಗ್ ನ ಮಾನವ ಚಿತ್ರ'ದಂತಹ ಗಿನಿಸ್ ದಾಖಲೆ  ಒಳಗೊಂಡಂತೆ ಹಲವಾರು ಹೊಸ ಮೈಲಿಗಲ್ಲುಗಳನ್ನು ಈ ಅಭಿಯಾನದಲ್ಲಿ ನಿರ್ಮಾಣ ಮಾಡಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ 'ಹರ್ ಘರ್ ತಿರಂಗಾ' ಅಭಿಯಾನವನ್ನು ಬಲಪಡಿಸಲು ಎನ್ಐಡಿ ಪ್ರತಿಷ್ಟಾನ ಮತ್ತು ಚಂಡೀಗಢ ವಿಶ್ವವಿದ್ಯಾಲಯವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಮತ್ತೊಂದು ಅದ್ಭುತ ಸಾಧನೆ ಎಂದರೆ, ಹರ್ ಘರ್ ತಿರಂಗಾ ಜಾಲತಾಣದಲ್ಲಿ  ಇಲ್ಲಿಯವರೆಗೆ 6 ಕೋಟಿಗೂ ಹೆಚ್ಚು ತಿರಂಗಾ ಸೆಲ್ಫಿಗಳನ್ನು ಅಪ್ಲೋಡ್ ಮಾಡಲಾಗಿದೆ. ಹೈಬ್ರಿಡ್ ಮಾದರಿಯಲ್ಲಿ ರೂಪಿಸಲಾದ ಈ ಕಾರ್ಯಕ್ರಮವು ವೈಯಕ್ತಿಕ ಹಿನ್ನೆಲೆಯಲ್ಲಿ ಧ್ವಜದೊಂದಿಗೆ ಭೌತಿಕ ಮತ್ತು ಭಾವನಾತ್ಮಕ ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ಈ ಉಪಕ್ರಮಕ್ಕಾಗಿ ರಚಿಸಲಾದ ವಿಶೇಷ ಜಾಲತಾಣದಲ್ಲಿ  ಸೆಲ್ಫಿಯನ್ನು ಅಪ್ಲೋಡ್ ಮಾಡುವ ಮೂಲಕ ಸಾಮೂಹಿಕ ಆಚರಣೆ ಮತ್ತು ದೇಶಭಕ್ತಿಯ ಉತ್ಸಾಹವನ್ನು ಹೆಚ್ಚಿಸುತ್ತದೆ. (www.harghartiranga.com).

ಅಲ್ಲದೆ, ಪ್ರಸ್ತುತ ನಡೆಯುತ್ತಿರುವ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಭಾಗವಾಗಿ 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿ ಶ್ರೀನಗರ ಜಿಲ್ಲಾಡಳಿತವು 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಬಕ್ಷಿ ಕ್ರೀಡಾಂಗಣದಲ್ಲಿ 1850 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿತು.

ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ವಲಯದ (ಡಿಒಎನ್ಇಆರ್) ಅಭಿವೃದ್ಧಿ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ ಅವರು ದೇಶದ ನಾಗರಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು "ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ಇಡೀ ದೇಶ ಒಗ್ಗೂಡಿದೆ. ಜೀವನದ ವಿವಿಧ ಸ್ತರಗಳಲ್ಲಿನ ಜನರ ಈ ರೀತಿಯ ಉತ್ಸಾಹವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಅಚಲ ಮನೋಭಾವದ ಸಂಕೇತವಾಗಿದೆ" ಎಂದು ಹೇಳಿದ್ದಾರೆ. "ಹರ್ ಘರ್ ತಿರಂಗಾದಲ್ಲಿ ಇಡೀ ದೇಶ ಭಾಗವಹಿಸಿದೆ ಮತ್ತು ಇಲ್ಲಿಯವರೆಗೆ ತಿರಂಗಾದೊಂದಿಗೆ 6 ಕೋಟಿಗೂ ಹೆಚ್ಚು ಸೆಲ್ಫಿಗಳನ್ನು ತೆಗೆದುಕೊಂಡು ಅಪ್ಲೋಡ್ ಮಾಡಲಾಗಿದೆ. ಇದು ಈ ಮಹಾನ್ ರಾಷ್ಟ್ರದ ಬಗ್ಗೆ ನಮ್ಮ ಪ್ರೀತಿ ಮತ್ತು ಹೆಮ್ಮೆಯನ್ನು ಪ್ರತಿಬಿಂಬಿಸುತ್ತದೆ. ತಿರಂಗಾದೊಂದಿಗೆ ಸೆಲ್ಫಿ ತೆಗೆದುಕೊಂಡವರೆಲ್ಲರೂ ಹರ್ ಘರ್ ತಿರಂಗಾ ಪೋರ್ಟಲ್ ನಲ್ಲಿ ಚಿತ್ರಗಳನ್ನು ಹಬ್ಬದ ಉತ್ಸಾಹದಲ್ಲಿ ಅಪ್ಲೋಡ್ ಮಾಡುವುದನ್ನು ಮುಂದುವರಿಸುವಂತೆ ನಾನು ವಿನಂತಿಸುತ್ತೇನೆ" ಎಂದೂ ಅವರು ಹೇಳಿದ್ದಾರೆ.

“ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಹರ್ ಘರ್ ತಿರಂಗಾ ಚಳವಳಿಗೆ ಸೇರುವಂತೆ ಸ್ಪಷ್ಟವಾದ  ಕರೆ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳು” ಎಂದು ಶ್ರೀ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. "ಪ್ರಧಾನಿಯವರು ದೇಶದ ನಾಗರಿಕರಿಗೆ ಕರೆ ನೀಡಿದಾಗೆಲ್ಲ, ಅದು ಅಗತ್ಯ ಇಲ್ಲದವರು ಅಡುಗೆ ಅನಿಲ ಸಬ್ಸಿಡಿ ತ್ಯಾಗ ಮಾಡುವುದು ಇರಲಿ,  ಅಥವಾ ಕೋವಿಡ್ -19 ಮುಂಚೂಣಿ ಯೋಧರ ಪ್ರಯತ್ನಗಳನ್ನು ಗುರುತಿಸುವುದಿರಲಿ ಅಥವಾ ಹರ್ ಘರ್ ತಿರಂಗಾ ಸಂದರ್ಭವಿರಲಿ, ಜನರು ಅಪಾರ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ" ಎಂದೂ ಅವರು ಹೇಳಿದ್ದಾರೆ. 2022 ರ ಆಗಸ್ಟ್ 15 ಕ್ಕೆ 75 ವಾರಗಳ ಕ್ಷಣಗಣನೆಯನ್ನು  ಪೂರ್ಣಗೊಳಿಸಿ ಭಾರತವು ತನ್ನ 76 ನೇ ಸ್ವಾತಂತ್ರ್ಯೋತ್ಸವ ವರ್ಷಕ್ಕೆ ಕಾಲಿಡುತ್ತಿರುವಾಗ ಹರ್ ಘರ್ ತಿರಂಗಾವು  ಆಜಾದಿ ಕಾ ಅಮೃತ ಮಹೋತ್ಸವಕ್ಕಾಗಿ ನೋಡಲ್ ಸಚಿವಾಲಯವಾಗಿರುವ  ಸಂಸ್ಕೃತಿ ಸಚಿವಾಲಯದಿಂದ ಚಾಲನೆಗೊಂಡ ಸರ್ಕಾರದ ಉಪಕ್ರಮವಾಗಿತ್ತು.

ಭಾರತದಾದ್ಯಂತ ಧ್ವಜಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡಿತ್ತು. ದೇಶದ ಅಂಚೆ ಕಚೇರಿಗಳು 2022 ರ ಆಗಸ್ಟ್ 1 ರಿಂದ ಧ್ವಜಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದವು. ಇದಲ್ಲದೆ, ರಾಜ್ಯ ಸರ್ಕಾರಗಳು ಧ್ವಜಗಳ ಪೂರೈಕೆ ಮತ್ತು ಮಾರಾಟಕ್ಕಾಗಿ ವಿವಿಧ ಭಾಗೀದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು. ಭಾರತೀಯ ರಾಷ್ಟ್ರಧ್ವಜವನ್ನು ಜಿಇಎಂ ಪೋರ್ಟಲ್ ನಲ್ಲಿ ನೋಂದಾಯಿಸಲಾಗಿದೆ. ಧ್ವಜದ ಪೂರೈಕೆಯ ಪ್ರಕ್ರಿಯೆಯನ್ನು ಸುಗಮಗೊಳಿಸಲು ಭಾರತ ಸರ್ಕಾರವು ವಿವಿಧ ಇ-ಕಾಮರ್ಸ್ ಜಾಲತಾಣಗಳು ಮತ್ತು ಸ್ವಸಹಾಯ ಗುಂಪುಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಮಾರ್ಚ್ 12 ರಂದು ಭಾರತದ ಸ್ವಾತಂತ್ರ್ಯದ 75 ವೈಭವೋಪೇತ ವರ್ಷಗಳನ್ನು ಆಚರಿಸಲು ಮತ್ತು ಸ್ಮರಿಸುವುದಕ್ಕಾಗಿ ಆಜಾದಿ ಕಾ ಅಮೃತ ಮಹೋತ್ಸವದ ಉಪಕ್ರಮವನ್ನು ಪ್ರಾರಂಭಿಸಿದರು. ಆರಂಭದಿಂದಲೂ, ಈ ಉಪಕ್ರಮವು ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿಯ ಭವ್ಯತೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು ಮತ್ತು 150+ ದೇಶಗಳಲ್ಲಿ 60,000 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮವು ವ್ಯಾಪ್ತಿ ಮತ್ತು ಭಾಗವಹಿಸುವಿಕೆಯ ದೃಷ್ಟಿಯಿಂದ ಇದುವರೆಗೆ ಆಯೋಜಿಸಲಾದ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಸ್ವಾತಂತ್ರ್ಯದ 75 ವರ್ಷಗಳ ಸ್ಮರಣೆಯ ಅಂಗವಾಗಿ 2021 ರ ಮಾರ್ಚ್ 12 ರಂದು 75 ವಾರಗಳ ಕ್ಷಣಗಣನೆ  ಪ್ರಾರಂಭಗೊಂಡು  2022 ರ ಆಗಸ್ಟ್ 15 ರವರೆಗೆ ಸಾಗಿ ಬಂದಿದ್ದು,  ಬಳಿಕ ಅದು 2023ರ ಆಗಸ್ಟ್ 15 ರವರೆಗೆ ಮುಂದುವರಿಯಲಿದೆ.

***************


(Release ID: 1852442) Visitor Counter : 152