ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಧರಂಪುರ್ ನಲ್ಲಿ ಶ್ರೀಮದ್ ರಾಜಚಂದ್ರ ಮಿಷನ್ ನ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ


ಗುಜರಾತ್ ನ ವಲ್ಸಾದ್ ನ ಧರಂಪುರದಲ್ಲಿ ಶ್ರೀಮದ್ ರಾಜಚಂದ್ರ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಮಂತ್ರಿ

ಗುಜರಾನ್ ನ ವಲ್ಸಾದ್ ನಲ್ಲಿ ಶ್ರೀಮದ್ ರಾಜಚಂದ್ರ ಮಹಿಳಾ ಉತ್ಕೃಷ್ಟತಾ ಕೇಂದ್ರ ಹಾಗೂ ಶ್ರೀಮದ್ ರಾಜಚಂದ್ರ ಪಶು ಆಸ್ಪತ್ರೆಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ

“ಹೊಸ ಆಸ್ಪತ್ರೆ, ಆರೋಗ್ಯ ವಲಯದಲ್ಲಿ ಸಬ್ಕಾ ಪ್ರಯಾಸ್ ಸ್ಫೂರ್ತಿಯನ್ನು ಬಲಗೊಳಿಸುತ್ತದೆ”

“ನಾರಿ ಶಕ್ತಿ”ಯನ್ನು “ರಾಷ್ಟ್ರಶಕ್ತಿ”ಯನ್ನಾಗಿ ಮುನ್ನೆಲೆಗೆ ತರುವುದು ನಮ್ಮ ಜವಾಬ್ದಾರಿ”

“ಮಹಿಳೆಯರು, ಬುಡಕಟ್ಟು, ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ಜನ ದೇಶದ ಪ್ರಜ್ಞೆಯನ್ನು ಜೀವಂತವಾಗಿಡುತ್ತಿದ್ದಾರೆ”

Posted On: 04 AUG 2022 5:49PM by PIB Bengaluru

ಗುಜರಾತ್ ನ ವಲ್ಸಾದ್ ಜಿಲ್ಲೆಯ ಧರಂಪುರ್ ನ ಶ್ರೀಮದ್ ರಾಜಚಂದ್ರ ಮಿಷನ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಶಿಲಾನ್ಯಾಸ ನೆರವೇರಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಆಸ್ಪತ್ರೆ ಮತ್ತಿತರ ಯೋಜನೆಗಳಿಂದ ಮಹಿಳೆಯರು ಮತ್ತು ಸಮಾಜದ ಇತರೆ ವರ್ಗಗಳಿಗೆ ಪರಮೋಚ್ಛ ಸೇವೆ ದೊರೆಯಲಿದೆ ಎಂದರು. ಶ್ರೀಮದ್ ರಾಜಚಂದ್ರ ಮಿಷನ್ ನ ಮೌನ ಸೇವಾ ಸ್ಫೂರ್ತಿಯ ಬಗ್ಗೆ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 

ಮಿಷನ್ ನೊಂದಿಗೆ ತಮ್ಮ ಸಹಭಾಗಿತ್ವವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಇಲ್ಲಿನ ದಾಖಲೆಯ ಪ್ರಮಾಣದ ಸೇವೆಯನ್ನು ಕೊಂಡಾಡಿದರು ಹಾಗೂ ಆಜಾದಿ ಕಾ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ಕರ್ತವ್ಯ ಸ್ಪೂರ್ತಿಯ ಅಗತ್ಯವನ್ನು ಇದು ಪ್ರತಿಪಾದಿಸುತ್ತದೆ. ಗುಜರಾತ್ ನ ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಪೂಜ್ಯ ಗುರುದೇವ್ ಅವರ ನಾಯಕತ್ವದಲ್ಲಿ ಶ್ರೀಮದ್ ರಾಜಚಂದ್ರ ಮಿಷನ್ ಶ್ಲಾಘನೀಯ ಕೆಲಸ ಮಾಡಿದೆ. ಬಡವರಿಗೆ ಸೇವೆ ಸಲ್ಲಿಸುವ ಮಿಷನ್ ನ ಬದ್ಧತೆಯನ್ನು ಹೊಸ ಆಸ್ಪತ್ರೆ ಬಲಗೊಳಿಸುತ್ತದೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪ್ರತಿಯೊಬ್ಬರಿಗೂ ಗುಣಮಟ್ಟದ, ಕೈಗೆಟುಕುವ ಆರೋಗ್ಯ ಸೇವೆ ಒದಗಿಸಲಿದೆ. “ಅಮೃತ ಕಾಲ”ದಲ್ಲಿ ಆರೋಗ್ಯ ವಲಯದಲ್ಲಿ ಸಬ್ಕಾ ಪ್ರಯಾಸ್ [ಪ್ರತಿಯೊಬ್ಬರ ಪ್ರಯತ್ನ] ನ ಸ್ಪೂರ್ತಿಯನ್ನು ಬಲಗೊಳಿಸುತ್ತದೆ ಎಂದು ಹೇಳಿದರು.     

 

ಆಜಾದಿ ಕಾ ಅಮೃತ ಮಹೋತ್ಸದಲ್ಲಿ ಭಾರತವನ್ನು ಗುಲಾಮಗಿರಿಯಿಂದ ಹೊರ ತರಲು ಶ್ರಮಿಸಿದ ಮಕ್ಕಳನ್ನು ದೇಶ ಸ್ಮರಿಸಿಕೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ಈ ದೇಶದ ಇತಿಹಾಸದಲ್ಲಿ ಶ‍್ರೀಮದ್ ರಾಜಚಂದ್ರ ಜೀ ಅವರಂತಹ ಸಂತರು ಅಮೋಘ ಕೊಡುಗೆ ನೀಡಿದ್ದಾರೆ. ಶ್ರೀಮದ್ ರಾಜಚಂದ್ರ ಜೀ ಅವರ ಬಗ್ಗೆ ಮಹಾತ್ಮಾ ಗಾಂಧಿ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಸ್ಮರಿಸಿಕೊಂಡರು. ಶ್ರೀ ರಾಕೇಶ್ ಜೀ ಅವರು ಶ್ರೀಮದ್ ರ ಕೆಲಸವನ್ನು ಯಶಸ್ವಿಯಾಗಿ ಮುಂದುವರೆಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.  

 

ಮಹಿಳೆಯರು, ಬುಡಕಟ್ಟು, ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ತಮ್ಮ ಜೀವನ ಮೀಸಲಿಟ್ಟ ಜನ ದೇಶದ ಪ್ರಜ್ಞೆಯನ್ನು ಜೀವಂತವಾಗಿಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮಹಿಳಾ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿ ಮಹಿಳೆಯರ ಸಬಲೀಕರಣಕ್ಕಾಗಿ ದೊಡ್ಡ ಹೆಜ್ಜೆ ಇಡಲಾಗಿದೆ. ಶ್ರೀಮದ್ ರಾಜಚಂದ್ರ ಜೀ ಅವರು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಕೌಶಲ್ಯದ ಮೂಲಕ ಸಬಲೀಕರಣಕ್ಕಾಗಿ ಹೆಚ್ಚು ಒತ್ತು ನೀಡಿದ್ದರು. ಕಡಿಮೆ ವಯಸ್ಸಿನಲ್ಲಿಯೇ ಶ್ರೀಮದ್ ಅವರು ಮಹಿಳಾ ಸಬಲೀಕರಣದ ಬಗ್ಗೆ ಶ್ರೆದ್ಧೆಯಿಂದ ಮಾತನಾಡಿದ್ದರು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ದೇಶದ ಸ್ರೀ ಶಕ್ತಿಯನ್ನು ರಾಷ್ಟ್ರೀಯ ಶಕ್ತಿಯ ರೂಪದಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.    

 

ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಪ್ರಗತಿಯನ್ನು ನಿಯಂತ್ರಿಸುವ ಅಡೆತಡೆಗಳನ್ನು ತೆರವುಗೊಳಿಸುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಭಾರತದ ಆರೋಗ್ಯ ನೀತಿ ನಮ್ಮ ಆಸುಪಾಸಿನ ಪ್ರತಿಯೊಂದು ಜೀವಿಗಳ ಆರೋಗ್ಯಕ್ಕೆ ಸಂಬಂಧಿಸಿದೆ. ಭಾರತ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನವನ್ನು ನಡೆಸುತ್ತಿದ್ದು, ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳಿಗೂ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.  

 

ಯೋಜನೆ ಬಗ್ಗೆ

 

ವಲ್ಸಾದ್ ನ ಧರಂಪುರ್ ನ ಶ್ರೀಮದ್ ರಾಜಚಂದ್ರ ಆಸ್ಪತ್ರೆಯ ಯೋಜನಾ ವೆಚ್ಚ ಸುಮಾರು 200 ಕೋಟಿ ರೂಪಾಯಿ. ಇದು 250 ಹಾಸಿಗೆಗಳ ಬಹು ವಿಶೇಷತೆ ಹೊಂದಿರುವ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ, ವಿಶ್ವದರ್ಜೆಯ ವೈದ್ಯಕೀಯ ಸೌಕರ್ಯಗಳನ್ನು ಒಳಗೊಂಡಿದ್ದು, ವಿಶೇಷವಾಗಿ ದಕ್ಷಿಣ ಗುಜರಾತ್ ವಲಯದ ಜನರಿಗೆ ಇದರಿಂದ ಅನುಕೂಲವಾಗಲಿದೆ.  

 

ಶ್ರೀಮದ್ ರಾಜಚಂದ್ರ ಪಶು ಆಸ್ಪತ್ರೆ 150 ಹಾಸಿಗೆಗಳನ್ನು ಒಳಗೊಂಡಿದೆ ಮತ್ತು ಇದನ್ನು ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶ್ರೇಷ್ಠ ದರ್ಜೆಯ ಪರಿಕರಗಳನ್ನು ಇದು ಒಳಗೊಂಡಿದ್ದು, ನುರಿತ, ಸಮರ್ಪಣಾ ಭಾವದ ಪಶು ವೈದ್ಯರು ಮತ್ತು ಸಹಾಯಕ ಸಿಬ್ಬಂದಿಯನ್ನು ಈ ಆಸ್ಪತ್ರೆ ಒಳಗೊಂಡಿದೆ. ಪ್ರಾಣಿಗಳ ಆರೈಕೆ ಮತ್ತು ಪಾಲನೆಗಾಗಿ ಸಾಂಪ್ರದಾಯಿಕ ಔಷಧದ ಜೊತೆಗೆ ಸಮಗ್ರ ವೈದ್ಯಕೀಯ ಆರೈಕೆ ವ್ಯವಸ್ಥೆಯನ್ನು ಇದು ಹೊಂದಿದೆ.   

 

ಶ್ರೀಮದ್ ರಾಜಚಂದ್ರ ಮಹಿಳಾ ಉತ್ಕೃಷ್ಟತಾ ಕೇಂದ್ರವನ್ನು 40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮನೋರಂಜನೆ, ಸ್ವಯಂ ಅಭಿವೃದ್ಧಿಗಾಗಿ ಸೂಕ್ತ ಕೊಠಡಿಗಳು ಮತ್ತು ವಿಶ್ರಾಂತಿ ಕೊಠಡಿಗಳನ್ನು ಇದು ಹೊಂದಿದೆ. 700 ಕ್ಕೂ ಹೆಚ್ಚು ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ಮತ್ತು ಇತರೆ ಸಹಸ್ರಾರು ಮಂದಿಗೆ ಜೀವನೋಪಾಯವನ್ನು ಇದು ಒದಗಿಸಲಿದೆ.

 

***********



(Release ID: 1848834) Visitor Counter : 112