ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ದೇಶವನ್ನುದ್ದೇಶಿಸಿ ಮಾಡಿದ ವಿದಾಯ ಭಾಷಣ
Posted On:
24 JUL 2022 7:32PM by PIB Bengaluru
ಪ್ರೀತಿಯ ದೇಶವಾಸಿಗಳೇ,
ನಮಸ್ಕಾರ!
1. ಐದು ವರ್ಷಗಳ ಹಿಂದೆ ನೀವು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು, ನಿಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ನನ್ನನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದಿರಿ. ನನ್ನ ಅಧಿಕಾರಾವಧಿಯನ್ನು ಮುಗಿಸಿ ನಾನು ನನ್ನ ಹುದ್ದೆಯಿಂದ ನಿರ್ಗಮಿಸುತ್ತಿರುವಾಗ, ನಿಮ್ಮೆಲ್ಲರೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ.
2. ಎಲ್ಲ ದೇಶವಾಸಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ನಾನು ಮಾತು ಪ್ರಾರಂಭಿಸುತ್ತೇನೆ. ದೇಶಾದ್ಯಂತ ನನ್ನ ಭೇಟಿಯ ಸಮಯದಲ್ಲಿ ನಾಗರಿಕರೊಂದಿಗಿನ ನನ್ನ ಸಂವಹನದಿಂದ ನಾನು ಸ್ಫೂರ್ತಿ ಪಡೆದಿದ್ದು, ಬಲಿಷ್ಠನಾಗಿದ್ದೇನೆ. ಸಣ್ಣ ಹಳ್ಳಿಗಳ ರೈತರು ಮತ್ತು ಕಾರ್ಮಿಕರು, ಯುವ ಮನಸ್ಸುಗಳನ್ನು ರೂಪಿಸುವ ಶಿಕ್ಷಕರು, ನಮ್ಮ ಪರಂಪರೆಯನ್ನು ಶ್ರೀಮಂತಗೊಳಿಸುವ ಕಲಾವಿದರು, ನಮ್ಮ ದೇಶದ ವಿವಿಧ ಆಯಾಮಗಳನ್ನು ಅನ್ವೇಷಿಸುವ ವಿದ್ವಾಂಸರು, ದೇಶಕ್ಕಾಗಿ ಸಂಪತ್ತನ್ನು ಸೃಷ್ಟಿಸುವ ಉದ್ಯಮಿಗಳು, ಜನರ ಸೇವೆ ಮಾಡುತ್ತಿರುವ ವೈದ್ಯರು ಮತ್ತು ದಾದಿಯರು, ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳು, ದೇಶದ ನ್ಯಾಯದಾನ ವ್ಯವಸ್ಥೆಗೆ ಕೊಡುಗೆ ನೀಡುತ್ತಿರುವ ನ್ಯಾಯಾಧೀಶರು ಮತ್ತು ವಕೀಲರು, ಆಡಳಿತವನ್ನು ಸುಸೂತ್ರವಾಗಿ ನಡೆಸುತ್ತಿರುವ ನಾಗರಿಕ ಸೇವೆಯಲ್ಲಿರುವವರು, ಪ್ರತಿಯೊಂದು ಸಾಮಾಜಿಕ ವರ್ಗವನ್ನೂ ಅಭಿವೃದ್ಧಿಯೊಂದಿಗೆ ಸಕ್ರಿಯವಾಗಿ ಸಂಪರ್ಕ ಕಲ್ಪಿಸುತ್ತಿರುವ ನಮ್ಮ ಸಾಮಾಜಿಕ ಕಾರ್ಯಕರ್ತರು, ಭಾರತೀಯ ಸಮಾಜದಲ್ಲಿ ಆಧ್ಯಾತ್ಮಿಕತೆಯ ಹರಿವನ್ನು ನಿರ್ವಹಿಸುವ ಎಲ್ಲಾ ಪಂಥಗಳ ಬೋಧಕರು ಮತ್ತು ಗುರುಗಳು - ನೀವೆಲ್ಲರೂ ನನಗೆ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ನಿರಂತರವಾಗಿ ಸಹಾಯ ಮಾಡಿದ್ದೀರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾನು ಸಮಾಜದ ಎಲ್ಲಾ ವರ್ಗಗಳಿಂದ ಸಂಪೂರ್ಣ ಸಹಕಾರ, ಬೆಂಬಲ ಮತ್ತು ಆಶೀರ್ವಾದಗಳನ್ನು ಪಡೆದಿದ್ದೇನೆ.
3. ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳು, ಅರೆ ಸೇನಾ ಪಡೆಗಳು ಮತ್ತು ಪೊಲೀಸರನ್ನು ಭೇಟಿ ಮಾಡುವ ಅವಕಾಶ ನನಗೆ ದೊರೆತ ಸಂದರ್ಭಗಳನ್ನು ನಾನು ವಿಶೇಷವಾಗಿ ಮೆಲುಕುಹಾಕುತ್ತೇನೆ. ಅವರ ದೇಶಭಕ್ತಿಯ ಉತ್ಸಾಹ ಎಷ್ಟು ಅದ್ಭುತವಾಗಿದೆಯೋ ಅಷ್ಟೇ ಸ್ಫೂರ್ತಿದಾಯಕವಾಗಿದೆ. ನಾನು ವಿದೇಶಕ್ಕೆ ಭೇಟಿ ನೀಡಿದಾಗ, ಅನಿವಾಸಿ ಭಾರತೀಯ ಸಮುದಾಯದೊಂದಿಗೆ ಮಾತನಾಡಿದಾಗಲೆಲ್ಲಾ, ತಾಯ್ನಾಡಿನ ಬಗ್ಗೆ ಅವರಿಗಿರುವ ಪ್ರೀತಿ ಮತ್ತು ಕಾಳಜಿಯು ನನಗೆ ತುಂಬಾ ಹೃದಯಸ್ಪರ್ಶಿಯಾಗಿ ಕಾಣುತ್ತಿತ್ತು. ನಾಗರಿಕ ಪ್ರಶಸ್ತಿಗಳ ಪ್ರದಾನ ಸಮಯದಲ್ಲಿ, ಕರ್ತವ್ಯದಲ್ಲಿ ಅಸಾಧಾರಣ ಸಾಧನೆ ಮಾಡಿದ ಮನಸ್ಸುಗಳನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ, ಅವರು ತಮ್ಮ ಸಹವಾಸೀ ಭಾರತೀಯರಿಗೆ ಉತ್ತಮ ಭವಿಷ್ಯವನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ.
4. ಇವೆಲ್ಲವೂ, ರಾಷ್ಟ್ರವೆಂಬುದು ತನ್ನ ಪ್ರಜೆಗಳಿಂದ ಕೂಡಿರುತ್ತದೆ ಎಂಬ ನಂಬಿಕೆಯನ್ನು ಮತ್ತೆ ದೃಢೀಕರಿಸುತ್ತದೆ; ಮತ್ತು ನೀವೆಲ್ಲರೂ ಭಾರತವನ್ನು ಉತ್ತಮ ಮತ್ತು ಅತ್ಯುತ್ತಮಗೊಳಿಸಲು ಪ್ರಯತ್ನಿಸುತ್ತಿರುವಾಗ, ರಾಷ್ಟ್ರದ ಮಹಾನ್ ಭವಿಷ್ಯವು ಸುರಕ್ಷಿತವಾಗಿದೆ ಎಂಬ ನಂಬಿಕೆಯನ್ನು ಪುನಃ ದೃಢೀಕರಿಸುತ್ತದೆ.
5. ಈ ಅನುಭವಗಳು ನನ್ನ ಬಾಲ್ಯವನ್ನು ಮತ್ತು ಐತಿಹಾಸಿಕ ಘಟನೆಗಳು ನಮ್ಮ ವೈಯಕ್ತಿಕ ಜೀವನವನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ನೆನಪಿಸುತ್ತವೆ.
6. ನಾನು ಒಂದು ಸಣ್ಣ ಹಳ್ಳಿಯಲ್ಲಿ ಬೆಳೆಯುತ್ತಿದ್ದಾಗ, ರಾಷ್ಟ್ರವು ಆಗಷ್ಟೇ ಸ್ವಾತಂತ್ರ್ಯವನ್ನು ಪಡೆದಿತ್ತು. ದೇಶವನ್ನು ಪುನರ್ನಿರ್ಮಿಸಲು ಹೊಸ ಚೈತನ್ಯದ ಅಲೆ ಇತ್ತು; ಅಲ್ಲಿ ಹೊಸ ಕನಸುಗಳಿದ್ದವು. ನನ್ನಲ್ಲೂ ಮುಂದೊಂದು ದಿನ ನಾನು ಈ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂಬ ಒಂದು ಕನಸು ಇತ್ತು. ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದ ಒಬ್ಬ ಯುವಕನಿಗೆ ಗಣರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಬಗ್ಗೆ ಯಾವುದೇ ಕಲ್ಪನೆ ಸಹ ಇರಲಿಲ್ಲ. ಆದರೆ ನಮ್ಮ ಸಾಮೂಹಿಕ ಅದೃಷ್ಟವನ್ನು ರೂಪಿಸುವಲ್ಲಿ ಪ್ರತಿಯೊಬ್ಬ ಪ್ರಜೆಯೂ ಭಾಗವಹಿಸಲು ಅನುವು ಮಾಡಿಕೊಡುವ ಮಾರ್ಗಗಳನ್ನು ಭಾರತದ ಪ್ರಜಾಪ್ರಭುತ್ವದ ಶಕ್ತಿ ಸೃಷ್ಟಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಪರೌಂಖ್ ಗ್ರಾಮದ ರಾಮನಾಥ್ ಕೋವಿಂದ್ ಇಂದು ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ, ಅದು ನಮ್ಮ ರೋಮಾಂಚಕ ಪ್ರಜಾಪ್ರಭುತ್ವ ಸಂಸ್ಥೆಗಳ ಅಂತಃಶಕ್ತಿಯಾಗಿದ್ದು, ಅದಕ್ಕೆ ಧನ್ಯವಾದಗಳು.
7. ನಾನು ನನ್ನ ಹಳ್ಳಿಯನ್ನು ಉಲ್ಲೇಖಿಸಿರುವುದರಿಂದ, ನನ್ನ ಜೀವನದ ಕೆಲವು ಅವಿಸ್ಮರಣೀಯ ಕ್ಷಣವನ್ನೂ ಸ್ಮರಿಸುತ್ತೇನೆ, ನನ್ನ ಅಧಿಕಾರಾವಧಿಯಲ್ಲಿ ನನ್ನ ಮನೆಗೆ ಭೇಟಿ ನೀಡಿ, ಕಾನ್ಪುರದಲ್ಲಿ ನನ್ನ ಗುರುಗಳ ಆಶೀರ್ವಾದವನ್ನು ಪಡೆಯಲು ಅವರ ಪಾದ ಸ್ಪರ್ಶಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಈ ವರ್ಷ, ಪ್ರಧಾನಮಂತ್ರಿಯವರು ಕೂಡ ಪರೌಂಖ್ ಗೆ ಭೇಟಿ ನೀಡಿ, ನನ್ನ ಗ್ರಾಮದ ಗೌರವ ಹೆಚ್ಚಿಸಿದರು. ನಮ್ಮ ಬೇರುಗಳೊಂದಿಗಿನ ಈ ಸಂಬಂಧವು ಭಾರತದ ಸಾರವಾಗಿದೆ. ತಮ್ಮ ಹಳ್ಳಿ ಅಥವಾ ಪಟ್ಟಣ, ಅವರ ಶಾಲೆಗಳು ಮತ್ತು ಶಿಕ್ಷಕರೊಂದಿಗೆ ಸಂಪರ್ಕ ಹೊಂದಿರುವ ಈ ಸಂಪ್ರದಾಯವನ್ನು ಮುಂದುವರಿಸುವಂತೆ ನಾನು ಯುವ ಪೀಳಿಗೆಯನ್ನು ವಿನಂತಿಸುತ್ತೇನೆ.
ಆತ್ಮೀಯ ನಾಗರಿಕರೇ,
8. ರಾಷ್ಟ್ರವು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿದೆ. ಮುಂದಿನ ತಿಂಗಳು, ನಾವು ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದೇವೆ. ನಾವು ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಕಾರಣವಾಗುವ 25 ವರ್ಷಗಳ ಅವಧಿಯ 'ಅಮೃತ್ ಕಾಲ'ವನ್ನು ಪ್ರವೇಶಿಸುತ್ತೇವೆ. ಈ ವಾರ್ಷಿಕೋತ್ಸವಗಳು ಗಣರಾಜ್ಯದ ಪಯಣದ ಮೈಲಿಗಲ್ಲುಗಳಾಗಿವೆ, ಅದರ ಸಾಮರ್ಥ್ಯವನ್ನು ಕಂಡುಹಿಡಿಯುವ ಮತ್ತು ವಿಶ್ವಕ್ಕೆ ಅದರ ಅತ್ಯುತ್ತಮವಾದದ್ದನ್ನು ನೀಡುವ ಪಯಣವಾಗಿದೆ.
9. ಆಧುನಿಕ ಕಾಲಘಟ್ಟದಲ್ಲಿ, ವಸಾಹತುಶಾಹಿ ಆಳ್ವಿಕೆಯ ಸಮಯದಲ್ಲಿ ರಾಷ್ಟ್ರೀಯ ಭಾವನೆಗಳ ಜಾಗೃತಿ ಮತ್ತು ಸ್ವಾತಂತ್ರ್ಯ ಹೋರಾಟದ ಪ್ರಾರಂಭದೊಂದಿಗೆ ನಮ್ಮ ದೇಶದ ಭವ್ಯ ಪಯಣವು ಪ್ರಾರಂಭವಾಯಿತು. ಹತ್ತೊಂಬತ್ತನೇ ಶತಮಾನದಲ್ಲಿ ದೇಶಾದ್ಯಂತ ಅನೇಕ ದಂಗೆಗಳು ನಡೆದವು. ಆದರೆ ಹೊಸ ಉದಯದ ಭರವಸೆಗಳನ್ನು ತಂದ ಅನೇಕ ವೀರರ ಹೆಸರುಗಳು ಬಹಳ ಹಿಂದೆಯೇ ಮರೆತುಹೋಗಿವೆ. ಅವುಗಳಲ್ಲಿ ಕೆಲವು ಕೊಡುಗೆಗಳು ಇತ್ತೀಚಿನ ದಿನಗಳಲ್ಲಿ ಮತ್ತೆ ಮೆಚ್ಚುಗೆಗೆ ಪಾತ್ರವಾಗಿವೆ. ಶತಮಾನದ ತಿರುವಿನಲ್ಲಿ, ವಿವಿಧ ಹೋರಾಟಗಳು ಒಗ್ಗೂಡಿ ಹೊಸ ಪ್ರಜ್ಞೆಯನ್ನು ಸೃಷ್ಟಿಸುತ್ತಿದ್ದವು.
10. 1915ರಲ್ಲಿ ಗಾಂಧೀಜಿ ತಾಯ್ನಾಡಿಗೆ ಮರಳಿದಾಗ, ರಾಷ್ಟ್ರೀಯತೆಯ ಉತ್ಸಾಹವು ವೇಗವನ್ನು ಪಡೆಯಿತು. ಇಪ್ಪತ್ತನೆಯ ಶತಮಾನದ ಆರಂಭದ ಕೆಲವು ದಶಕಗಳ ಅವಧಿಯಲ್ಲಿ, ಅಸಾಧಾರಣ ಮನಸ್ಸುಳ್ಳ ನಾಯಕರ ಸಮೂಹವನ್ನು ಹೊಂದುವಲ್ಲಿ ಭಾರತದಷ್ಟು ಅದೃಷ್ಟ ಬೇರೆ ಯಾವ ದೇಶಕ್ಕೂ ಇಲ್ಲ ಎಂದು ನಾನು ಸದಾ ಬಲವಾಗಿ ನಂಬಿದ್ದೇನೆ. ಗುರುದೇವ್ ರವೀಂದ್ರನಾಥ ಠಾಕೂರರು ಆಧುನಿಕ ಕಾಲದ 'ಋಷಿ'ಯಂತೆ, ನಮ್ಮ ಸಾಂಸ್ಕೃತಿಕ ಬೇರುಗಳನ್ನು ಮತ್ತೆ ಕಂಡುಹಿಡಿಯಲು ನಮಗೆ ಸಹಾಯ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರೆ, ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ಹೆಚ್ಚಿನ ಮುಂದುವರಿದ ದೇಶಗಳಲ್ಲಿ ಕೇಳರಿಯದ ಸಮಾನತೆಯ ಉದ್ದೇಶದ ಸಾಧನೆಗಾಗಿ ಬಲವಾಗಿ ಪ್ರತಿಪಾದಿಸುತ್ತಿದ್ದರು. ತಿಲಕ್ ಮತ್ತು ಗೋಖಲೆಯವರಿಂದ ಹಿಡಿದು ಭಗತ್ ಸಿಂಗ್ ಮತ್ತು ನೇತಾಜಿವರೆಗೆ, ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್ ರಿಂದ ಹಿಡಿದು ಶ್ಯಾಮಾಪ್ರಸಾದ ಮುಖರ್ಜಿ, ಸರೋಜಿನಿ ನಾಯ್ಡು ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯರವರೆಗೆ ಮಾನವಕುಲದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮನಸ್ಸುಗಳು ಒಂದೇ ಉದ್ದೇಶಕ್ಕಾಗಿ ಒಗ್ಗೂಡಿದ್ದಿಲ್ಲ.
11. ಇನ್ನೂ ಅನೇಕ ಹೆಸರುಗಳು ನನ್ನ ಮನಸ್ಸಿನಲ್ಲಿ ಮಿನುಗುತ್ತವೆ, ಆದರೆ ನಾನು ಹೇಳಬಯಸುವ ಅಂಶವೆಂದರೆ, ಸ್ವತಂತ್ರ ಭಾರತಕ್ಕಾಗಿ ತಮ್ಮ ವೈವಿಧ್ಯಮಯ ಆಲೋಚನೆಗಳನ್ನು ಹೊಂದಿರುವ ವೈವಿಧ್ಯಮಯ ಶ್ರೇಣಿಯ ಮಹಾನ್ ನಾಯಕರು ಸ್ವಾತಂತ್ರ್ಯ ಚಳವಳಿಗಾಗಿ ಅಪಾರ ತ್ಯಾಗ ಮಾಡಿದ್ದಾರೆ. ಗಾಂಧೀಜಿಯವರ, ಪರಿವರ್ತನಾತ್ಮಕ ವಿಚಾರಗಳು ಫಲಶ್ರುತಿಯ ಮೇಲೆ ಹೆಚ್ಚು ಪ್ರಭಾವ ಬೀರಿದವು ಮತ್ತು ಈ ಪ್ರಕ್ರಿಯೆಯಲ್ಲಿ ಅನೇಕರ ಬದುಕನ್ನು ಬದಲಾಯಿಸಿದವು.
12. ನಾವೆಲ್ಲರೂ ಸಾಗುತ್ತಿರುವ ಪ್ರಜಾಸತ್ತಾತ್ಮಕ ಮಾರ್ಗದ ಔಪಚಾರಿಕ ನಕ್ಷೆಯನ್ನು ಸಂವಿಧಾನ ರಚನಾ ಸಭೆಯು ಸಿದ್ಧಪಡಿಸಿತು. ಹಂಸಾಬೆನ್ ಮೆಹ್ತಾ, ದುರ್ಗಾಬಾಯಿ ದೇಶಮುಖ್, ರಾಜಕುಮಾರಿ ಅಮೃತ್ ಕೌರ್ ಮತ್ತು ಸುಚೇತಾ ಕೃಪಲಾನಿ ಅವರಂತಹ 15 ಗಮನಾರ್ಹ ಮಹಿಳೆಯರು ಸೇರಿದಂತೆ ದೇಶಾದ್ಯಂತದ ಮಹಾನ್ ವ್ಯಕ್ತಿಗಳನ್ನು ಸಭೆ ಒಳಗೊಂಡಿತ್ತು. ಅವರೆಲ್ಲರ ಅಮೂಲ್ಯ ಕೊಡುಗೆಗಳೊಂದಿಗೆ ಅವರು ಸಿದ್ಧಪಡಿಸಿದ ಸಂವಿಧಾನವು ನಮಗೆ ದಾರಿದೀಪವಾಗಿದೆ. ಅದರಲ್ಲಿ ಪ್ರತಿಷ್ಠಾಪಿಸಲಾದ ಮೌಲ್ಯಗಳು ಅನಾದಿಕಾಲದಿಂದಲೂ ಭಾರತೀಯ ನೈತಿಕತೆಯ ಭಾಗವಾಗಿವೆ.
13. ಸಂವಿಧಾನವನ್ನು ಅಂಗೀಕರಿಸುವ ಮೊದಲು ಸಂವಿಧಾನ ರಚನಾ ಸಭೆಯಲ್ಲಿ ತಮ್ಮ ಸಮಾರೋಪ ಭಾಷಣಗಳಲ್ಲಿ ಡಾ. ಅಂಬೇಡ್ಕರ್ ಅವರು ಎರಡು ರೀತಿಯ ಪ್ರಜಾಪ್ರಭುತ್ವದ ನಡುವಿನ ವ್ಯತ್ಯಾಸವನ್ನು ಪ್ರತಿಪಾದಿಸಿದ್ದರು. ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ತೃಪ್ತರಾಗಬಾರದು ಎಂದು ಅವರು ಹೇಳುತ್ತಿದ್ದರು. ನಾನು ಅವರ ಮಾತುಗಳನ್ನು ಉಲ್ಲೇಖಿಸುತ್ತೇನೆ, "ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು. ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯಲ್ಲಿ ಇರದ ಹೊರತು ಉಳಿಯಲು ಸಾಧ್ಯವಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವದ ಅರ್ಥವೇನು? ಇದರರ್ಥ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ತತ್ವಗಳಾಗಿ ಗುರುತಿಸುವ ಜೀವನ ವಿಧಾನ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಈ ತತ್ವಗಳನ್ನು ತ್ರಿವಳಿಗಳಲ್ಲಿ ಪ್ರತ್ಯೇಕ ಅಂಶಗಳೆಂದು ಪರಿಗಣಿಸಬಾರದು. ಅವು ತ್ರಿವಳಿಗಳ ಒಕ್ಕೂಟವನ್ನು ರೂಪಿಸುತ್ತವೆ, ಅಂದರೆ ಒಬ್ಬರಿಂದ ಇನ್ನೊಬ್ಬರನ್ನು ವಿಭಜಿಸುವುದು ಪ್ರಜಾಪ್ರಭುತ್ವದ ಉದ್ದೇಶವನ್ನೇ ಮಣಿಸುವುದಾಗಿದೆ."
ಪ್ರೀತಿಯ ದೇಶವಾಸಿಗಳೇ,
14. ಆದರ್ಶಗಳ ಈ ತ್ರಿವಳಿಯು ಉದಾತ್ತ, ಘನೋದ್ದೇಶದ ಮತ್ತು ಉನ್ನತಿಯಿಂದ ಕೂಡಿದೆ. ಅವುಗಳನ್ನು ಅಮೂರ್ತತೆಗಳು ಎಂದು ತಪ್ಪಾಗಿ ಭಾವಿಸಬಾರದು. ನಮ್ಮ ಇತಿಹಾಸವು, ಆಧುನಿಕ ಕಾಲಕ್ಕೆ ಮಾತ್ರವಲ್ಲದೆ ಪ್ರಾಚೀನ ಕಾಲದಿಂದ ಕೂಡ, ಅವು ನೈಜವಾಗಿವೆ ಎಂದು ನಮಗೆ ನೆನಪಿಸುತ್ತದೆ; ಅವುಗಳನ್ನು ಸಾಕ್ಷಾತ್ಕರಿಸಬಹುದು, ಮತ್ತು ನಿಜವಾಗಿಯೂ ವಿವಿಧ ಯುಗಮಾನಗಳಲ್ಲಿ ಸಾಕ್ಷಾತ್ಕಾರಗೊಂಡಿವೆ. ನಮ್ಮ ಆಧುನಿಕ ರಾಷ್ಟ್ರದ ಪೂರ್ವಜರು ಮತ್ತು ಸ್ಥಾಪಕರು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಅರ್ಥವನ್ನು ಕಠಿಣ ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಉದಾಹರಣೆಯಾಗಿ ನೀಡಿದ್ದಾರೆ. ನಾವು ಅವರ ಹೆಜ್ಜೆಗಳನ್ನು ಮಾತ್ರ ಅನುಸರಿಸಬೇಕು ಮತ್ತು ನಡೆಯುತ್ತಲೇ ಇರಬೇಕು.
15. ಅಂತಹ ಆದರ್ಶಗಳು ಇಂದು ಒಬ್ಬ ಸಾಮಾನ್ಯ ನಾಗರಿಕನಿಗೆ ಯಾವ ಅರ್ಥ ನೀಡುತ್ತವೆ? ಜೀವನದ ಸಂತೋಷವನ್ನು ಅನ್ವೇಷಿಸಲು ಅವರಿಗೆ ಸಹಾಯ ಮಾಡುವುದು ಮುಖ್ಯ ಗುರಿ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ, ಮೊದಲನೆಯದಾಗಿ, ಅವರ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳಬೇಕು. ಸಂಪನ್ಮೂಲಗಳ ಕೊರತೆಯ ದಿನಗಳಿಂದ ನಾವು ನಿಜವಾಗಿಯೂ ಬಹಳ ದೂರ ಬಂದಿದ್ದೇವೆ. ಪ್ರತಿ ಕುಟುಂಬಕ್ಕೂ ಉತ್ತಮ ವಸತಿ ಮತ್ತು ಕುಡಿಯುವ ನೀರು ಮತ್ತು ವಿದ್ಯುತ್ ಲಭ್ಯತೆಯನ್ನು ಒದಗಿಸುವ ಉದ್ದೇಶದಿಂದ ನಾವು ಶ್ರಮಿಸುತ್ತಿದ್ದೇವೆ. ಯಾವುದೇ ತಾರತಮ್ಯವನ್ನು ಅರಿಯದ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ವೇಗದಿಂದ ಈ ಬದಲಾವಣೆ ಸಾಧ್ಯವಾಗಿದೆ.
16. ಮೂಲಭೂತ ಆವಶ್ಯಕತೆಗಳ ಕಾಳಜಿವಹಿಸಿದ ನಂತರದ ಅಗತ್ಯ, ಪ್ರತಿಯೊಬ್ಬ ನಾಗರಿಕನು ತನ್ನ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಮೂಲಕ ಸಂತೋಷವನ್ನು ಮುಂದುವರಿಸಲು ಅನುಮತಿಸುವುದಾಗಿದ್ದು, ಅವರು ಮಾತ್ರ ಮಾಡಬಹುದಾದ್ದನ್ನು ಮಾಡಲು ಬಿಡುವುದಾಗಿದೆ. ಇಲ್ಲಿ, ಶಿಕ್ಷಣವು ಪ್ರಮುಖವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಯುವ ಭಾರತೀಯರಿಗೆ ತಮ್ಮ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಇಪ್ಪತ್ತೊಂದನೇ ಶತಮಾನದಲ್ಲಿ ಅವರ ಹೆಜ್ಜೆಗಳನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ಮಾಡುವಲ್ಲಿ ಬಹಳ ದೂರ ಸಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾಳೆ ಅವರು ಅಭಿವೃದ್ಧಿ ಹೊಂದಲು, ಆರೋಗ್ಯ ರಕ್ಷಣೆ ಅತ್ಯಗತ್ಯ. ಸಾಂಕ್ರಾಮಿಕ ರೋಗವು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸುವ ಅಗತ್ಯವನ್ನು ಒತ್ತಿಹೇಳಿದೆ. ಸರ್ಕಾರವು ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ನನಗೆ ಸಂತಸ ತಂದಿದೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಜಾರಿಯಾದ ನಂತರ, ಆರ್ಥಿಕ ಸುಧಾರಣೆಗಳು ನಾಗರಿಕರಿಗೆ ತಮ್ಮ ಜೀವನಕ್ಕೆ ಉತ್ತಮ ಮಾರ್ಗವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ. ನಮ್ಮ ದೇಶವು 21ನೇ ಶತಮಾನವನ್ನು, ಭಾರತದ ಶತಮಾನವನ್ನು ಮಾಡಲು ಸಜ್ಜುಗೊಳ್ಳುತ್ತಿದೆ ಎಂದು ನಾನು ದೃಢವಾಗಿ ನಂಬುತ್ತೇನೆ.
ಆತ್ಮೀಯ ಪ್ರಜೆಗಳೇ
17. ನನ್ನ ಅಧಿಕಾರಾವಧಿಯ ಐದು ವರ್ಷಗಳಲ್ಲಿ, ನಾನು ನನ್ನ ಜವಾಬ್ದಾರಿಗಳನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸಿದ್ದೇನೆ. ಡಾ. ರಾಜೇಂದ್ರ ಪ್ರಸಾದ್, ಡಾ. ಎಸ್. ರಾಧಾಕೃಷ್ಣನ್ ಮತ್ತು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಮಹಾನ್ ದಿಗ್ಗಜರುಗಳ ಉತ್ತರಾಧಿಕಾರಿ ಎಂಬುದರ ಬಗ್ಗೆ ನಾನು ಪ್ರಜ್ಞಾಪೂರ್ವಕವಾಗಿದ್ದೆ. ನಾನು ರಾಷ್ಟ್ರಪತಿ ಭವನವನ್ನು ಪ್ರವೇಶಿಸಿದಾಗ, ನನ್ನ ನಿಕಟ ಪೂರ್ವ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಸಹ ನನ್ನ ಕರ್ತವ್ಯಗಳ ಬಗ್ಗೆ ತಮ್ಮ ಸೂಕ್ತ ಸಲಹೆಯನ್ನು ನನ್ನೊಂದಿಗೆ ಹಂಚಿಕೊಂಡರು. ಆದರೂ, ನನಗೆ ಸಂದೇಹ ಬಂದಾಗಲೆಲ್ಲಾ, ನಾನು ಗಾಂಧೀಜಿ ಮತ್ತು ಅವರ ಜನಪ್ರಿಯ ಮಾಂತ್ರಿಕ ಶಕ್ತಿಯ ಕಡೆಗೆ ತಿರುಗಿ ನೋಡುತ್ತಿದ್ದೆ. ಅತ್ಯಂತ ಬಡವನ ಮುಖವನ್ನು ನೆನಪಿಸಿಕೊಂಡು ನಾನು ತೆಗೆದುಕೊಳ್ಳಲಿರುವ ಹೆಜ್ಜೆಯು ಅವರಿಗೆ ಏನಾದರೂ ಉಪಯೋಗಕ್ಕೆ ಬರುತ್ತದೆಯೇ ಎಂದು ನನ್ನನ್ನು ನಾನೇ ಕೇಳಿಕೊಳ್ಳುವ ಅವರ ಸಲಹೆಯತ್ತ ನೋಡುತ್ತಿದ್ದೆ. ನಾನು ಮತ್ತೆ ಪುನರುಚ್ಚರಿಸುವ ಸಾಹಸ ಮಾಡುತ್ತಿರುವೆ, ಏನೆಂದರೆ ಗಾಂಧೀಜಿಯವರ ಜೀವನ ಮತ್ತು ಬೋಧನೆಗಳನ್ನು ಪ್ರತಿದಿನ ಕನಿಷ್ಠ ಕೆಲವು ನಿಮಿಷಗಳ ಕಾಲ ಆಲೋಚಿಸುವಂತೆ ನಾನು ನಿಮ್ಮನ್ನು ಆಗ್ರಹಿಸುತ್ತೇನೆ.
ಪ್ರೀತಿಯ ದೇಶವಾಸಿಗಳೇ,
18. ಪ್ರಕೃತಿ ಮಾತೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾಳೆ ಮತ್ತು ಹವಾಮಾನ ಬಿಕ್ಕಟ್ಟು ಈ ಗ್ರಹದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡಬಹುದು. ನಮ್ಮ ಮಕ್ಕಳ ಹಿತದೃಷ್ಟಿಯಿಂದ ನಾವು ನಮ್ಮ ಪರಿಸರ, ನಮ್ಮ ನೆಲ, ಗಾಳಿ ಮತ್ತು ನೀರಿನ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ದೈನಂದಿನ ಜೀವನ ಮತ್ತು ದೈನಂದಿನ ಆಯ್ಕೆಗಳಲ್ಲಿ, ನಮ್ಮ ಮರಗಳು, ನದಿಗಳು, ಸಮುದ್ರಗಳು ಮತ್ತು ಪರ್ವತಗಳು ಮತ್ತು ಇತರ ಎಲ್ಲಾ ಜೀವಿಗಳನ್ನು ರಕ್ಷಿಸಲು ನಾವು ಹೆಚ್ಚು ಜಾಗರೂಕರಾಗಿರಬೇಕು. ಪ್ರಥಮ ಪ್ರಜೆಯಾಗಿ, ನಾನು ನನ್ನ ದೇಶವಾಸಿಗಳಿಗೆ ಒಂದು ಸಲಹೆಯನ್ನು ನೀಡಬೇಕೆಂದರೆ, ಅದು ಇದೇ ಆಗಿರುತ್ತದೆ.
19. ನನ್ನ ಭಾಷಣದ ಕೊನೆಯಲ್ಲಿ, ನಾನು ಮತ್ತೊಮ್ಮೆ ನನ್ನ ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಭಾರತ ಮಾತೆಗೆ ನನ್ನ ನಮಸ್ಕಾರಗಳು! ಮತ್ತು ಉಜ್ವಲ ಭವಿಷ್ಯಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.
ಧನ್ಯವಾದಗಳು
ಜೈ ಹಿಂದ್!
*********
(Release ID: 1844472)
Visitor Counter : 239
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam