ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಜಲೌನ್ ನಲ್ಲಿ ಬುಂಡೇಲ್ ಖಂಡ್ ಎಕ್ಸ್ ಪ್ರೆಸ್ ವೇ ಉದ್ಘಾಟನೆ ವೇಳೆ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಅನುವಾದ
Posted On:
16 JUL 2022 4:05PM by PIB Bengaluru
ಭಾರತ್ ಮಾತಾ ಕಿ – ಜೈ ! ಭಾರತ್ ಮಾತಾ ಕಿ – ಜೈ ! ಭಾರತ್ ಮಾತಾ ಕಿ – ಜೈ ! ಜೈ ಬುಂಡೇಲ್ ಖಂಡ್ ! ವೇದವ್ಯಾಸರ ಜನ್ಮಸ್ಥಳ ಮತ್ತು ಮಹಾರಾಣಿ ಲಕ್ಷ್ಮೀಬಾಯಿ ಅವರ ಸ್ಥಳಕ್ಕೆ ಮತ್ತೆ ಭೇಟಿ ನೀಡುತ್ತಿರುವುದು ನನ್ನ ಸೌಭಾಗ್ಯ. ನನಗೆ ತುಂಬಾ ಸಂತೋಷವಾಗುತ್ತಿದೆ. ನಮಸ್ಕಾರ.
ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಶ್ರೀ ಕೇಶವ್ ಪ್ರಸಾದ್ ಮೌರ್ಯ ಜಿ ಮತ್ತು ಶ್ರೀ ಬ್ರಜೇಶ್ ಪಾಟಕ್ ಜಿ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾದ ಶ್ರೀ ಬಾನುಪ್ರತಾಪ್ ಸಿಂಗ್ ಜಿ, ಈ ಪ್ರದೇಶವನ್ನು ಪ್ರತಿನಿಧಿಸುವ ಉತ್ತರ ಪ್ರದೇಶ ಸರ್ಕಾರದ ಸಚಿವರು, ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳೇ ಮತ್ತು ಬುಂಡೇಲ್ ಖಂಡದ ನನ್ನೆಲ್ಲಾ ನೆಚ್ಚಿನ ಸಹೋದರ ಸಹೋದರಿಯರೇ,
ಉತ್ತರ ಪ್ರದೇಶದ ಎಲ್ಲ ಜನರಿಗೆ, ಬುಂಡೇಲ್ ಖಂಡದ ಸಹೋದರ ಸಹೋದರಿಯರಿಗೆ ಈ ಆಧುನಿಕ ಬುಂಡೇಲ್ ಖಂಡ ಎಕ್ಸ್ ಪ್ರೆಸ್ ವೇ ಗಾಗಿ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರುತ್ತೇನೆ. ಈ ಎಕ್ಸ್ ಪ್ರೆಸ್ ವೇ ಅನ್ನು ಬುಂಡೇಲ್ ಖಂಡದ ವೈಭವದ ಪರಂಪರೆಗೆ ಅರ್ಪಿಸುತ್ತಿದ್ದೇವೆ. ಉತ್ತರ ಪ್ರದೇಶದ ಸಂಸದನಾಗಿ ಮತ್ತು ಉತ್ತರ ಪ್ರದೇಶದ ಪ್ರತಿನಿಧಿಯಾಗಿ ಈ ಎಕ್ಸ್ ಪ್ರೆಸ್ ವೇಯನ್ನು ಬುಂಡೇಲ್ ಖಂಡಕ್ಕೆ ಕೊಡುಗೆಯಾಗಿ ನೀಡುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ಈ ಪ್ರದೇಶ ಅಸಂಖ್ಯಾತ ಯೋಧರನ್ನು ಮತ್ತು ದೇಶಕ್ಕಾಗಿ ರಕ್ತ ಹರಿಸಿದವರನ್ನು ಮತ್ತು ಶೌರ್ಯ ಹಾಗೂ ಕಠಿಣ ಪರಿಶ್ರಮದ ಪುರುಷರು ಮತ್ತು ಮಹಿಳೆಯರನ್ನು ಕೊಡುಗೆಯಾಗಿ ನೀಡಿದೆ.
ಸಹೋದರ ಮತ್ತು ಸಹೋದರಿಯರೇ,
ನಾನು ದಶಕಗಳಿಂದ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇನೆ. ಉತ್ತರ ಪ್ರದೇಶದ ನಿಮ್ಮೆಲ್ಲರ ಆಶೀರ್ವಾದದಿಂದಾಗಿ ಕಳೆದ 8 ವರ್ಷಗಳಿಂದ ನನಗೆ ದೇಶದ ಪ್ರಧಾನ್ ಸೇವಕನಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆಯನ್ನು ನೀವು ನೀಡಿದ್ದೀರಿ. ಉತ್ತರ ಪ್ರದೇಶಕ್ಕೆ ಎರಡು ಪ್ರಮುಖ ಸಂಗತಿಗಳನ್ನು ಸೇರಿಸಬೇಕು ಎಂದು ನಾನು ಸದಾ ನಂಬಿದ್ದೇನೆ. ಇಲ್ಲಿನ ನ್ಯೂನತೆಗಳನ್ನು ಸರಿಪಡಿಸಿದರೆ, ಉತ್ತರ ಪ್ರದೇಶ ಸವಾಲುಗಳನ್ನು ಎದುರಿಸಲು ಹೆಚ್ಚಿನ ಸಾಮರ್ಥ್ಯ ಪಡೆಯಲಿದೆ ಮತ್ತು ಪುನರುಜ್ಜೀವನಗೊಳ್ಳಲಿದೆ. ಮೊದಲನೇ ಸಂಗತಿ ಎಂದರೆ ಕಳಪೆ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಗತಿ ಮತ್ತು ನಾನು ಅದರ ಬಗ್ಗೆ ಹಿಂದೆಯೂ ಮಾತನಾಡಿದ್ದೇನೆ. ಪರಿಸ್ಥಿತಿ ಏನಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆಯಲ್ಲವೇ ? ಮತ್ತು ಎರಡನೇ ವಿಚಾರ ಎಲ್ಲಾ ಆಯಾಮಗಳಿಂದಲೂ ಕಳಪೆ ಸಂಪರ್ಕ. ಇಂದು ಉತ್ತರ ಪ್ರದೇಶದ ಜನರು ಯೋಗಿ ಆದಿತ್ಯನಾಥ್ ಜಿ ಅವರ ನಾಯಕತ್ವದಲ್ಲಿ ಇಡೀ ಉತ್ತರ ಪ್ರದೇಶದ ಚಿತ್ರಣ ಬದಲಿಸಿದ್ದಾರೆ. ಯೋಗಿ ಜಿ ನೇತೃತ್ವದ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಮತ್ತು ಸಂಪರ್ಕ ಅತ್ಯಂತ ಕ್ಷಿಪ್ರವಾಗಿ ಸುಧಾರಿಸುತ್ತಿದೆ. ಸ್ವಾತಂತ್ರ್ಯಾ ನಂತರ 7 ದಶಕಗಳ ಬಳಿಕ ಉತ್ತರ ಪ್ರದೇಶದಲ್ಲಿ ಆಧುನಿಕ ಸಾರಿಗೆ ಸಂಪರ್ಕಗಳನ್ನು ಕಲ್ಪಿಸಲಾಗಿದ್ದು, ಆ ಎಲ್ಲ ಕಾರ್ಯಗಳು ಇಂದು ನಡೆಯುತ್ತಿವೆ. ನಾನು ನಿಮ್ಮನ್ನು ಕೇಳುತ್ತೇನೆ. ಆ ಕಾರ್ಯಗಳು ನಡೆಯುತ್ತಿವೆಯೇ? ಇಲ್ಲವೇ ಎಂದು ಅವು ಗೋಚರಿಸುತ್ತಿವೆಯೇ ಇಲ್ಲವೇ ಎಂದು ? ಬುಂಡೇಲ್ ಖಂಡ ಎಕ್ಸ್ ಪ್ರೆಸ್ ವೇ ಚಿತ್ರಕೂಟ ಮತ್ತು ದೆಹಲಿ ನಡುವಿನ ಅಂತರವನ್ನು 3-4 ಗಂಟೆ ತಗ್ಗಿಸಿರುವುದೇ ಅಲ್ಲದೆ, ಅದಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ದೊರಕಿಸಿಕೊಟ್ಟಿದೆ. ಈ ಎಕ್ಸ್ ಪ್ರೆಸ್ ವೇ ಇಲ್ಲಿನ ವಾಹನಗಳಿಗೆ ವೇಗ ನೀಡುವುದಷ್ಟೇ ಅಲ್ಲ, ಇಡೀ ಬುಂಡೇಲ್ ಖಂಡದ ಕೈಗಾರಿಕಾ ಪ್ರಗತಿಗೆ ವೇಗ ನೀಡಲಿದೆ. ಗೋದಾಮುಗಳು ಮತ್ತು ಶೈಥ್ಯಾಗಾರ ಸೌಕರ್ಯಗಳು ಸೇರಿದಂತೆ ಹಲವು ಬಗೆಯ ಕೈಗಾರಿಕೆಗಳು ಎಕ್ಸ್ ಪ್ರೆಸ್ ವೇನ ಎರಡೂ ಬದಿಯಲ್ಲಿ ಸ್ಥಾಪನೆಯಾಗಲಿವೆ. ಎಕ್ಸ್ ಪ್ರೆಸ್ ವೇಯಿಂದಾಗಿ ಈ ಪ್ರದೇಶದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವುದು ಅತ್ಯಂತ ಸುಲಭವಾಗಿದೆ ಮತ್ತು ಕೃಷಿ ಉತ್ಪನ್ನಗಳನ್ನು ಹೊಸ ಮಾರುಕಟ್ಟೆಗಳಿಗೆ ಸಾಗಿಸುವುದು ಅತ್ಯಂತ ಸುಲಭವಾಗಿದೆ. ಜತೆಗೆ ಇದು ಬುಂಡೇಲ್ ಖಂಡದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ಕಾರಿಡಾರ್ ಗೂ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಒಂದು ರೀತಿಯಲ್ಲಿ ಈ ಎಕ್ಸ್ ಪ್ರೆಸ್ ವೇ ಬುಂಡೇಲ್ ಖಂಡದ ಪ್ರತಿಯೊಂದು ಭಾಗವನ್ನು ಅಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಹೊಸ ಅವಕಾಶಗಳಿಗೆ ಸಂಪರ್ಕಿಸುವಂತೆ ಮಾಡುತ್ತದೆ.
ಗೆಳೆಯರೇ,
ಕೇವಲ ದೊಡ್ಡ ನಗರಗಳು ಮಾತ್ರ ಆಧುನಿಕ ಸಾರಿಗೆ ವಿಧಾನಗಳನ್ನು ಹೊಂದುವ ಮೊದಲ ಹಕ್ಕಿತ್ತು ಎಂದು ನಂಬಿದ್ದ ಕಾಲವೊಂದಿತ್ತು. ಎಲ್ಲ ಸೌಕರ್ಯಗಳು ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದ್ರಾಬಾದ್ ಅಥವಾ ದೆಹಲಿಗೆ ಮಾತ್ರ ಲಭ್ಯವಾಗುತ್ತಿದ್ದವು. ಆದರೆ ಈಗ ಸರ್ಕಾರದಲ್ಲಿ ಬದಲಾವಣೆಯಾಗಿದೆ. ಮನೋಭಾವವೂ ಕೂಡ ಬದಲಾಗಿದೆ. ಹಿಂದಿನ ಮನಸ್ಥಿತಿಯನ್ನು ತೆಗೆದುಹಾಕಿ, ಹೊಸ ಹಾದಿಯಲ್ಲಿ ಮೋದಿ ಮತ್ತು ಯೋಗಿ ಜತೆಯಾಗಿ ಮುನ್ನಡೆಯುತ್ತಿದ್ದಾರೆ. ದೊಡ್ಡ ನಗರಗಳ ಸಂಪರ್ಕದ ಜತೆ, ಸಣ್ಣ ನಗರಗಳಿಗೂ ಸಮಾನ ಆದ್ಯತೆ ನೀಡಲಾಗುತ್ತಿದ್ದು, 2017ರಿಂದೀಚೆಗೆ ಉತ್ತರ ಪ್ರದೇಶದಲ್ಲಿ ಹಲವು ಸಂಪರ್ಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಬುಂಡೇಲ್ ಖಂಡ ಎಕ್ಸ್ ಪ್ರೆಸ್ ವೇ, ಚಿತ್ರಕೂಟ, ಬಂದಾ, ಹಮೀರ್ ಪುರ್, ಮಹೋಬಾ, ಜಲೌನ್, ಔರೈಯಾ ಮತ್ತು ಇಟಾವಾ ಮೂಲಕ ಹಾದು ಹೋಗುತ್ತವೆ. ಪೂರ್ವಾಂಚಲ ಎಕ್ಸ್ ಪ್ರೆಸ್ ವೇ, ಲಖನೌ ಮಾತ್ರವಲ್ಲದೆ, ಬಾರಾಬಂಕಿ, ಅಮೇಥಿ, ಸುಲ್ತಾನ್ ಪುರ್, ಅಯೋಧ್ಯ, ಅಂಬೇಡ್ಕರ್ ನಗರ, ಅಜಂಗಢ, ಮೌ ಮತ್ತು ಗಾಜಿಪುರ ಮೂಲಕ ಹಾದು ಹೋಗುತ್ತವೆ. ಗೋರಖ್‌ಪುರ ಲಿಂಕ್ ಎಕ್ಸ್‌ಪ್ರೆಸ್‌ವೇ, ಅಂಬೇಡ್ಕರ್‌ನಗರ, ಸಂತ ಕಬೀರ ನಗರ ಮತ್ತು ಅಜಂಗಢದ ನಡುವೆ ಸಂಪರ್ಕ ಕಲ್ಪಿಸುತ್ತದೆ. ಗಂಗಾ ಎಕ್ಸ್‌ಪ್ರೆಸ್‌ವೇ ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಷಹಜಹಾನ್‌ಪುರ, ಹರ್ದೋಯ್, ಉನ್ನಾವೋ, ರಾಯ್ ಬರೇಲಿ, ಪ್ರತಾಪ್‌ಗಢ ಮತ್ತು ಪ್ರಯಾಗ್‌ರಾಜ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಭಾರೀ ಶಕ್ತಿ ಸೃಷ್ಟಿಯಾಗಿರುವುದನ್ನು ನೀವು ಕಾಣಬಹುದು. ಉತ್ತರ ಪ್ರದೇಶದ ಪ್ರತಿಯೊಂದು ಮೂಲೆಯು ಹೊಸ ಕನಸುಗಳು ಮತ್ತು ಸಂಕಲ್ಪದೊಂದಿಗೆ ಮತ್ತು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ನೊಂದಿಗೆ ಅತ್ಯಂತ ವೇಗವಾಗಿ ಮುನ್ನಡೆಯಲು ಸಿದ್ಧವಾಗಿವೆ. ಯಾರೊಬ್ಬರೂ ಹಿಂದೆ ಉಳಿಯಬಾರದು ಮತ್ತು ಎಲ್ಲರೂ ಒಗ್ಗೂಡಿ ಮುನ್ನಡೆಯಬೇಕು. ಡಬಲ್ ಇಂಜಿನ್ ಸರ್ಕಾರ ಆ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತರ ಪ್ರದೇಶದ ಸಣ್ಣ ಜಿಲ್ಲೆಗಳಿಗೆ ವಿಮಾನಯಾನ ಸೇವೆಯ ಸಂಪರ್ಕ ಕಲ್ಪಿಸುವ ಕಾರ್ಯ ಕ್ಷಿಪ್ರವಾಗಿ ನಡೆಯುತ್ತಿದೆ. ಇತ್ತೀಚೆಗೆ ಪ್ರಯಾಗ್ ರಾಜ್ ಗಾಜಿಯಾಬಾದ್ ಗಳಲ್ಲಿ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಗಳನ್ನು ನಿರ್ಮಿಸಲಾಗಿದೆ. ಖುಷಿ ನಗರದಲ್ಲಿ ಹೊಸ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದೆ. ನೋಯ್ಡಾದ ಜವಾರ್ ನಲ್ಲಿ ಮತ್ತೊಂದು ಅಂತಾರಾಷ್ಟ್ರಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಉತ್ತರ ಪ್ರದೇಶದ ಇನ್ನೂ ಹಲವು ನಗರಗಳಿಗೆ ಮುಂದಿನ ದಿನಗಳಲ್ಲಿ ವಿಮಾನಯಾನ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ನಡೆದಿವೆ. ಈ ಸೌಕರ್ಯಗಳಿಂದ ಪ್ರವಾಸೋದ್ಯಮ ಉದ್ದಿಮೆಯೂ ಹೆಚ್ಚು ಶಕ್ತಿ ಪಡೆದಿದೆ. ಈ ವೇದಿಕೆಗೆ ಆಗಮಿಸುವ ಮುನ್ನ ನಾನು ಬುಂಡೇಲ್ ಖಂಡ ಎಕ್ಸ್ ಪ್ರೆಸ್ ವೇನ ಪ್ರಾತ್ಯಕ್ಷಿಕೆಯನ್ನು ನೋಡುತ್ತಿದ್ದೆ. ನಾನು ಒಂದು ಮಾದರಿಯನ್ನು ನೋಡಿದೆ. ಈ ಎಕ್ಸ್ ಪ್ರೆಸ್ ವೇ ಅಕ್ಕಪಕ್ಕದಲ್ಲಿ ಹಲವು ಕೋಟೆಗಳು ಇವೆ. ಝಾನ್ಸಿಯ ಕೋಟೆ ಮಾತ್ರವಲ್ಲದೆ, ಇತರೆ ಹಲವು ಕೋಟೆಗಳಿವೆ. ವಿದೇಶಗಳಿಗೆ ಭೇಟಿ ನೀಡಿದವರು. ಯೂರೋಪ್ ನ ಹಲವು ದೇಶಗಳಲ್ಲಿ ಸಾಕಷ್ಟು ಪ್ರವಾಸೋದ್ಯಮ ಉಳಿದಿರುವುದೇ ಕೋಟೆಗಳ ರೂಪದಲ್ಲಿ ಎಂಬುದನ್ನು ಕಾಣಬಹುದು. ಬುಂಡೇಲ್ ಖಂಡ ಎಕ್ಸ್ ಪ್ರೆಸ್ ವೇ ಉದ್ಘಾಟನೆ ನಂತರ ಇಂದು ನಾನು ಈ ಎಲ್ಲ ಕೋಟೆಗಳ ಪ್ರವಾಸೋದ್ಯಮ ಸರ್ಕೀಟ್ ಅನ್ನು ರಚಿಸಲು ಯೋಗಿ ಜಿ ಸರ್ಕಾರಕ್ಕೆ ಆಗ್ರಹಿಸುತ್ತೇನೆ. ವಿಶ್ವದ ಎಲ್ಲ ಕಡೆಯಿಂದಲೂ ಪ್ರವಾಸಿಗರು ಇಲ್ಲಿಗೆ ಬಂದು ಬುಂಡೇಲ್ ಖಂಡದ ಸಾಮರ್ಥ್ಯವನ್ನು ಕಾಣುವಂತಾಗಬೇಕು. ಯೋಗಿ ಜಿ ಅವರಿಗೆ ನಾನು ಮಾಡುವ ಮತ್ತೊಂದು ಮನವಿಯೆಂದರೆ ಚಳಿಗಾಲ ಆರಂಭವಾದ ಕೂಡಲೇ ಉತ್ತರ ಪ್ರದೇಶದ ಯುವಜನತೆಗೆ ಕೋಟೆ ಹತ್ತುವ ಸ್ಪರ್ಧೆಗಳನ್ನು ನಡೆಸಿ ಎಂದು. ಆ ಮಾರ್ಗ ಸಾಂಪ್ರದಾಯಿಕವಾಗಿರಬಾರದು, ಅತ್ಯಂತ ಕಠಿಣವಾಗಿರಬೇಕು. ಮೊದಲು ಕೋಟೆ ಹತ್ತಿದ ಯುವಕರ ಸಭೆಯನ್ನು ಆಯೋಜಿಸಬೇಕು. ಉತ್ತರ ಪ್ರದೇಶದ ಸಾವಿರಾರು ಯುವಕರು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನೋಡಬಹುದು. ಇದರಿಂದಾಗಿ ಬೇರೆ ಬೇರೆ ಭಾಗದ ಜನರು ಬುಂಡೇಲ್ ಖಂಡಕ್ಕೆ ಆಗಮಿಸುತ್ತಾರೆ. ರಾತ್ರಿ ವೇಳೆ ಅವರು ವಾಸ್ತವ್ಯ ಹೂಡುತ್ತಾರೆ. ಅವರು ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಭಾರೀ ಪ್ರಮಾಣದ ಜೀವನೋಪಾಯ ಅವಕಾಶಗಳು ಸೃಷ್ಟಿಯಾಗುತ್ತವೆ. ಮಿತ್ರರೇ ಈ ಎಕ್ಸ್ ಪ್ರೆಸ್ ವೇ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲಿದೆ.
ಗೆಳೆಯರೇ,
ಡಬಲ್ ಇಂಜಿನ್ ಸರ್ಕಾರದಲ್ಲಿ ನಿಜಕ್ಕೂ ಹಿಂದೆಂದೂ ನಿರೀಕ್ಷಿಸದ ರೀತಿಯಲ್ಲಿ ಉತ್ತರಪ್ರದೇಶ ಆಧುನೀಕರಣಗೊಳ್ಳುತ್ತಿದೆ. ನಾನು ಏನು ಹೇಳುತ್ತಿದ್ದೇನೆ ಎಂಬುದು ನೆನಪಿರಲಿ ಸ್ನೇಹಿತರೇ, ನೀವು ನೆನಪಿನಲ್ಲಿಟ್ಟುಕೊಳ್ಳುತ್ತೀರಾ ? ಕೈ ಎತ್ತಿ ನಾನು ನೆನಪಿನಲ್ಲಿಟ್ಟುಕೊಳ್ಳುತ್ತೀನಿ ಎಂದು ಹೇಳಿ, ಖಂಡಿತಾ ನೀವು ನೆನಪಿನಲ್ಲಿಟ್ಟುಕೊಳ್ಳುತ್ತೀರಾ ಮತ್ತು ಮತ್ತೆ ಮತ್ತೆ ಅದನ್ನು ಹೇಳಿ ಜನರೇ? ಉತ್ತರ ಪ್ರದೇಶದಲ್ಲಿ ಸರಯು ನಾಲಾ ಯೋಜನೆ ಪೂರ್ಣಗೊಳ್ಳಲು 40 ವರ್ಷ ಹಿಡಿಯಿತು. ಗೋರಖ್ ಪುರ್ ರಸಗೊಬ್ಬರ ಘಟಕ 30 ವರ್ಷಗಳ ಕಾಲ ಬಂದ್ ಆಗಿತ್ತು. ಅರ್ಜುನ ಅಣೆಕಟ್ಟು ಯೋಜನೆ ಪೂರ್ಣಗೊಳ್ಳಲು 12 ವರ್ಷ ಹಿಡಿಯಿತು. ಅಮೇಥಿ ಬಂದೂಕು ಕಾರ್ಖಾನೆ ಹೊರಗೆ ಕೇವಲ ಒಂದೇ ಒಂದು ಫಲಕವಿತ್ತು ಮತ್ತು ರಾಯ್ ಬರೇಲಿ ರೈಲ್ ಕೋಚ್ ಕಾರ್ಖಾನೆ ಬೋಗಿಗಳನ್ನು ಉತ್ಪಾದಿಸುತ್ತಿರಲಿಲ್ಲ, ಅದು ಕೇವಲ ಬೋಗಿಗಳನ್ನು ಅಲಂಕರಿಸಿ ಮತ್ತೆ ಬಣ್ಣ ಹಚ್ಚುತ್ತಿತ್ತು. ಇಂದು ಉತ್ತರ ಪ್ರದೇಶದಲ್ಲಿ ಅತ್ಯಂತ ಗಂಭೀರವಾಗಿ ಮೂಲಸೌಕರ್ಯ ಸೃಷ್ಟಿ ಕಾರ್ಯ ನಡೆಯುತ್ತಿದೆ. ಮಿತ್ರರೇ, ರಾಜ್ಯ ಇಂದು ಹಲವು ಅಭಿವೃದ್ಧಿ ಹೊಂದಿದ ರಾಜ್ಯಗಳನ್ನೂ ಸಹ ಹಿಂದಿಕ್ಕಿದೆ. ಇಂದು ದೇಶಾದ್ಯಂತ ಉತ್ತರ ಪ್ರದೇಶವನ್ನು ಗುರುತಿಸುವುದು ಬದಲಾಗಿದೆ. ಆ ಬಗ್ಗೆ ನಿಮಗೆ ಹೆಮ್ಮೆ ಇದೆಯೇ ಅಥವಾ ಇಲ್ಲವೇ? ಉತ್ತರ ಪ್ರದೇಶವನ್ನು ಇಂದು ವೈಭವೀಕರಿಸಲಾಗುತ್ತಿದೆ. ಆ ಬಗ್ಗೆ ನಿಮಗೆ ಹೆಮ್ಮೆ ಇದೆಯೇ ಅಥವಾ ಇಲ್ಲವೇ ? ಇಂದು ಇಡೀ ಭಾರತ ಉತ್ತರ ಪ್ರದೇಶವನ್ನು ಗೌರವಯುತವಾಗಿ ನೋಡುತ್ತಿದೆ. ನೀವು ಅದನ್ನು ಆನಂದಿಸುತ್ತೀರಾ ಅಥವಾ ಇಲ್ಲವೇ.
ಮತ್ತು ಮಿತ್ರರೇ,
ಅಭಿವೃದ್ಧಿ ಕೇವಲ ಹೆದ್ದಾರಿಗಳು ಅಥವಾ ವಿಮಾನಯಾನ ಮಾರ್ಗಗಳಿಗೆ ಮಾತ್ರವಲ್ಲ, ಉತ್ತರಪ್ರದೇಶ ಪ್ರತಿಯೊಂದು ವಲಯದಲ್ಲೂ ಪ್ರಗತಿ ಸಾಧಿಸುತ್ತಿದೆ. ಅದು ಶಿಕ್ಷಣ, ಉತ್ಪಾದನೆ ಮತ್ತು ಕೃಷಿ ಕ್ಷೇತ್ರಗಳಲ್ಲೂ ಸಹ. ನಾನು ಇದೀಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಕೈಎತ್ತಿ ಮತ್ತು ನಾನು ನೆನಪಿನಲ್ಲಿಟ್ಟುಕೊಳ್ಳುತ್ತೀನಿ ಎಂದು ಜೋರಾಗಿ ಹೇಳಿ. ಮೊದಲು ಉತ್ತರಪ್ರದೇಶದಲ್ಲಿ ಪ್ರತಿ ವರ್ಷ ಸರಾಸರಿ 50 ಕಿ.ಮೀ. ರೈಲು ಮಾರ್ಗ ಕಾಮಗಾರಿ ನಡೆಯುತ್ತಿತ್ತು. ಎಷ್ಟು ಕಿ.ಮೀ ನಡೆಯುತ್ತಿತ್ತು? ನಮ್ಮ ಸರ್ಕಾರಕ್ಕೂ ಮುನ್ನ ಕೇವಲ ವರ್ಷಕ್ಕೆ 50 ಕಿ.ಮೀ. ರೈಲ್ವೆ ಮಾರ್ಗ ಡಬ್ಲಿಂಗ್ ಕಾರ್ಯ ನಡೆಯುತ್ತಿತ್ತು. ಇಂದು ಪ್ರತಿ ವರ್ಷ ಸರಾಸರಿ 200 ಕಿ.ಮೀ. ರೈಲು ಮಾರ್ಗ ನಿರ್ಮಾಣ ನಡೆಯುತ್ತಿದೆ. 2014ಕ್ಕೂ ಮುನ್ನ ಉತ್ತರಪ್ರದೇಶದಲ್ಲಿ ಕೇವಲ 11,000 ಸಾಮಾನ್ಯ ಸೇವಾ ಕೇಂದ್ರಗಳು ಇದ್ದವು. ಎಷ್ಟು ಹೇಳಿ ? 11,000. ಇಂದು ಉತ್ತರಪ್ರದೇಶದಲ್ಲಿ 1.30 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ನೀವು ಈ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುತ್ತೀರಾ ಅಲ್ಲವೆ. ಒಂದು ಕಾಲದಲ್ಲಿ ಉತ್ತರಪ್ರದೇಶದಲ್ಲಿ ಕೇವಲ 12 ವೈದ್ಯಕೀಯ ಕಾಲೇಜುಗಳು ಇದ್ದವು. ಈ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಿ, ಎಷ್ಟು ವೈದ್ಯಕೀಯ ಕಾಲೇಜುಗಳು ಇದ್ದವು? ಗಟ್ಟಿಯಾಗಿ ಹೇಳಿ ಎಷ್ಟು ಇದ್ದವು, 12 ವೈದ್ಯಕೀಯ ಕಾಲೇಜುಗಳು. ಇಂದು ಉತ್ತರಪ್ರದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 35ಕ್ಕೂ ಅಧಿಕವಿದೆ ಮತ್ತು 14 ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 14 ಮತ್ತು 50ರ ನಡುವಿನ ವ್ಯತ್ಯಾಸವನ್ನು ಗಮನಿಸಿ.
ಸಹೋದರ ಮತ್ತು ಸಹೋದರಿಯರೇ,
ದೇಶ ಇಂದು ಮೂಲತಃ ಎರಡು ಪ್ರಮುಖ ಆಯಾಮಗಳನ್ನು ಅಭಿವೃದ್ಧಿಯನ್ನು ಹೊಂದುತ್ತಿದೆ. ಒಂದು ಉದ್ದೇಶ ಮತ್ತು ಮತ್ತೊಂದು ಘನತೆ. ಸದ್ಯ ದೇಶಕ್ಕೆ ನಾವು ಹೊಸ ಸೌಕರ್ಯಗಳನ್ನಷ್ಟೇ ಸೃಷ್ಟಿಸುತ್ತಿಲ್ಲ. ದೇಶದ ಭವಿಷ್ಯವನ್ನೂ ಸಹ ನಿರ್ಮಾಣ ಮಾಡುತ್ತಿದ್ದೇವೆ. ನಾವು ಪಿಎಂ ಗತಿಶಕ್ತಿ ರಾಷ್ಟ್ರೀಯ ಕ್ರೀಯಾ ಯೋಜನೆಯಡಿ 21ನೇ ಶತಮಾನದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.
ಮತ್ತು ಮಿತ್ರರೇ,
ನಾವು ನಮ್ಮ ಅಭಿವೃದ್ಧಿ ಬದ್ಧತೆಯಲ್ಲಿ ಸಮಯದ ಮಿತಿ ಹಿನ್ನಡೆಯಾಗಲು ಬಿಡುವುದಿಲ್ಲ. ನಾವು ನಿಗದಿತ ಕಾಲಮಿತಿಯೊಳಗೆ ಹೇಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇವೆ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ಅಸಂಖ್ಯಾತ ಉದಾಹರಣೆಗಳನ್ನು ಕಾಣಬಹುದಾಗಿದೆ. ನಮ್ಮ ಸರ್ಕಾರ ಕಾಶಿಯ ವಿಶ್ವನಾಥ ಧಾಮದ ಸೌಂದರೀಕರಣ ಕಾರ್ಯವನ್ನು ಆರಂಭಿಸಿತು ಮತ್ತು ನಮ್ಮ ಸರ್ಕಾರವೇ ಅದನ್ನು ಪೂರ್ಣಗೊಳಿಸಿತು. ನಮ್ಮ ಸರ್ಕಾರ ಗೋರಖ್ ಪುರ್ ಏಮ್ಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿತ್ತು ಮತ್ತು ಅದನ್ನು ಈ ಸರ್ಕಾರವೇ ಉದ್ಘಾಟಿಸಿತು. ನಮ್ಮ ಸರ್ಕಾರವೇ ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿತ್ತು ಮತ್ತು ನಮ್ಮ ಸರ್ಕಾರವೇ ಅದನ್ನು ಉದ್ಘಾಟನೆಯನ್ನೂ ಸಹ ಮಾಡಿತ್ತು. ಬುಂಡೇಲ್ ಖಂಡ್ ಎಕ್ಸ್ ಪ್ರೆಸ್ ವೇ ಕೂಡ ಅದಕ್ಕೊಂದು ಉದಾಹರಣೆಯಾಗಿದೆ. ಇದು ಮುಂದಿನ ವರ್ಷ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಬೇಕಿತ್ತು, ಆದರೆ ಮಿತ್ರರೇ ಇದು ನಿಗದಿಗಿಂತ 7-8 ತಿಂಗಳು ಮೊದಲೇ ಪೂರ್ಣಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಪ್ರತಿಯೊಂದು ಕುಟುಂಬಗಳು ಹಲವು ಕಷ್ಟಗಳನ್ನು ಎದುರಿಸಿವೆ. ಅಂತಹ ಕಷ್ಟಗಳ ನಡುವೆಯೇ ನಿಗದಿತ ಅವಧಿಗೆ ಮುನ್ನವೇ ನಾವು ಯೋಜನೆಯನ್ನು ಪೂರ್ಣಗೊಳಿಸಿದ್ದೇವೆ. ಇಂತಹ ಕಾರ್ಯದಿಂದಾಗಿ ಪ್ರತಿಯೊಬ್ಬ ದೇಶವಾಸಿಯೂ ತಾವು ಮಾಡಿದ ಮತದಾನಕ್ಕೆ ನಿಜವಾದ ಗೌರವವನ್ನು ಸಲ್ಲಿಸಲಾಗುತ್ತಿದೆ ಮತ್ತು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ನಾನು ಯೋಗಿ ಜಿ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ.
ಮಿತ್ರರೇ,
ನಾನು ಯಾವುದೇ ರಸ್ತೆ, ಆಸ್ಪತ್ರೆ ಅಥವಾ ಕಾರ್ಖಾನೆಯನ್ನು ಉದ್ಘಾಟಿಸಿದಾಗಲೂ ನನ್ನಲ್ಲಿನ ಭಾವನೆಯೆಂದರೆ ಈ ಸರ್ಕಾರವನ್ನು ರಚಿಸಿದ ಮತದಾರರಿಗೆ ನಾವು ಗೌರವ ಸಲ್ಲಿಸಬೇಕು ಎಂಬುದು ಮತ್ತು ಆದ್ದರಿಂದ ನಾನು ಎಲ್ಲ ಸೌಕರ್ಯಗಳನ್ನು ದೇಶದ ಮತದಾರರಿಗೆ ಅರ್ಪಿಸುತ್ತೇನೆ.
ಮಿತ್ರರೇ,
ಇಂದು ಇಡೀ ವಿಶ್ವ ಭರವಸೆಯಿಂದ ಭಾರತದತ್ತ ನೋಡುತ್ತಿದೆ. ನಾವು ಸ್ವಾತಂತ್ರ್ಯೋತ್ಸವದ 75ನೇ ವರ್ಷವನ್ನು ಆಚರಿಸುತ್ತಿದ್ದೇವೆ ಮತ್ತು ಮುಂದಿನ 25 ವರ್ಷಗಳಿಗೆ ಭಾರತಕ್ಕೆ ನೀಲನಕ್ಷೆಯನ್ನು ರೂಪಿಸುತ್ತಿದ್ದೇವೆ. ಇಂದು ನಾನು ಬುಂಡೇಲ್ ಖಂಡದ ಪ್ರದೇಶಕ್ಕೆ ಆಗಮಿಸಿದಾಗ ಬುಂಡೇಲ್ ಖಂಡ, ಝಾನ್ಸಿರಾಣಿ ಲಕ್ಷ್ಮೀಭಾಯಿಯ ಈ ತಪೋಭೂಮಿಗೆ ಆಗಮಿಸಿದಾಗ ಈ ದೀರೋದ್ಧಾತ ಜಾಗದ 6 ಲಕ್ಷಕ್ಕೂ ಅಧಿಕ ಗ್ರಾಮಗಳ ಜನರಲ್ಲಿ ನಾನು ಮನವಿ ಮಾಡುತ್ತೇನೆ. ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ್ಯದ ಉತ್ಸವ ನೂರಾರು ವರ್ಷಗಳ ಕಾಲ ಕಷ್ಟ ಅನುಭವಿಸಿದ ನಮ್ಮ ಪೂರ್ವಜರ ತ್ಯಾಗ, ಬಲಿದಾನಗಳಿಂದ ಬಂದಿರುವಂತಹದು. ಆದ್ದರಿಂದ ನಾವು ಇಂದಿನಿಂದ ಹೊಣೆಗಾರಿಕೆಯಿಂದ ಯೋಜನೆಗಳನ್ನು ರೂಪಿಸಬೇಕಿದೆ. ಆಗಸ್ಟ್ 15ರ ವರೆಗೆ ಗ್ರಾಮಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಗ್ರಾಮಗಳಲ್ಲಿ ಯೋಜನೆಗಳನ್ನು ರೂಪಿಸಬೇಕು. ನಾವು ಸ್ವಾತಂತ್ರ್ಯ ಯೋಧರು ಮತ್ತು ನಾಯಕರನ್ನು ಸ್ಮರಿಸಬೇಕು ಮತ್ತು ಪ್ರತಿಯೊಂದು ಗ್ರಾಮದಲ್ಲೂ ಹೊಸ ಸಂಕಲ್ಪವನ್ನು ತೊಡುವಂತಹ ವಾತಾವರಣವನ್ನು ಸೃಷ್ಟಿಸಬೇಕು ಎಂದು ನಾನು ಇಂದು ಈ ಧೀರೋದ್ದಾತ ನೆಲದಿಂದ ದೇಶವಾಸಿಗಳಲ್ಲಿ ಮನವಿ ಮಾಡುತ್ತೇನೆ.
ಮಿತ್ರರೇ,
ಇಂದು ಸದ್ಯದ ಜನರ ಅಶೋತ್ತರಗಳು ಮತ್ತು ಭಾರತದ ಉಜ್ವಲ ಭವಿಷ್ಯದ ವಿಚಾರ ಬಿಟ್ಟು ಬೇರೆ ಏನು ಮಾಡಲಾಗುತ್ತಿಲ್ಲ. ದೇಶದ ಅಭಿವೃದ್ಧಿಗೆ ವೇಗ ನೀಡಲು ಪ್ರತಿಯೊಂದು ನಿರ್ಧಾರ ಮತ್ತು ನೀತಿಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ದೇಶಕ್ಕೆ ಹಾನಿಯಾಗುವಂತಹ ಮತ್ತು ದೇಶದ ಅಭಿವೃದ್ಧಿಗೆ ತೊಂದರೆಯಾಗುವಂತಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ವಾತಂತ್ರ್ಯದ ನಂತರ 75 ವರ್ಷಗಳಲ್ಲಿ ಅಭಿವೃದ್ಧಿಯ ಉತ್ತಮ ಅವಕಾಶ ಭಾರತಕ್ಕೆ ಲಭಿಸಿದೆ. ನಾವು ಈ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಈ ಅವಧಿಯಲ್ಲಿ ನಾವು ಗರಿಷ್ಠ ಅಭಿವೃದ್ಧಿಯನ್ನು ಕೈಗೊಳ್ಳುತ್ತೇವೆ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಮತ್ತು ನವಭಾರತವನ್ನು ನಿರ್ಮಿಸುತ್ತೇವೆ.
ಮಿತ್ರರೆ,
ನವಭಾರತದ ಮುಂದೆ ಬಹುದೊಡ್ಡ ಸವಾಲುಗಳಿವೆ. ಇದೀಗ ನಾವು ಗಮನಹರಿಸದೇ ಹೋದರೆ ಭಾರತದ ಯುವಜನತೆಗೆ ಮತ್ತು ಇಂದಿನ ತಲೆಮಾರಿಗೆ ಸಾಕಷ್ಟು ಹಾನಿಯಾಗಲಿದೆ. ನಿಮ್ಮ ಸದ್ಯದ ಭವಿಷ್ಯ ಮರೆಯಾಗಲಿದೆ ಮತ್ತು ನಿಮ್ಮ ಭವಿಷ್ಯ ಕತ್ತಲೆಯಿಂದ ಮುಳಗಲಿದೆ ಮಿತ್ರರೇ, ಆದ್ದರಿಂದ ಈಗ ನಾವು ಎದ್ದೇಳುವುದು ಅತ್ಯಂತ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಮತಗಳನ್ನು ಸಂಗ್ರಹಿಸುವ ಸಂಸ್ಕೃತಿ ದೇಶದೆಲ್ಲೆಡೆ ಪರಿಚಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಂದು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಉಚಿತ ಕೊಡುಗೆಗಳ ಸಂಸ್ಕೃತಿ ಅತ್ಯಂತ ಅಪಾಯಕಾರಿ. ದೇಶದ ಜನತೆಗೆ ವಿಶೇಷವಾಗಿ ನಮ್ಮ ಯುಜನತೆ ಈ ಉಚಿತ ಕೊಡುಗೆ ಸಂಸ್ಕೃತಿಯ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಇಂತಹ ಸಂಸ್ಕೃತಿಯ ಜನರು ಯಾವುದೇ ಹೊಸ ಎಕ್ಸ್ ಪ್ರೆಸ್ ವೇಗಳು, ವಿಮಾನ ನಿಲ್ದಾಣಗಳು ಅಥವಾ ರಕ್ಷಣಾ ಕಾರಿಡಾರ್ ಗಳನ್ನು ನಿಮಗಾಗಿ ನಿರ್ಮಿಸುವುದಿಲ್ಲ. ಅವರು ಉಚಿತ ಕೊಡುಗೆಗಳನ್ನು ಜನರಿಗೆ ನೀಡಿ, ಖರೀದಿಸಬಹುದು ಎಂಬ ಭಾವನೆ ಹೊಂದಿದ್ದಾರೆ. ನಾವೆಲ್ಲರೂ ಒಗ್ಗೂಡಿ ಈ ಮನೋಭಾವವನ್ನು ಸೋಲಿಸಬೇಕು ಮತ್ತು ದೇಶದ ರಾಜಕಾರಣದಿಂದ ಈ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ತೊಡೆದು ಹಾಕಬೇಕಾಗಿದೆ.
ಮಿತ್ರರೇ,
ಉಚಿತ ಕೊಡುಗೆಗಳ ಸಂಸ್ಕೃತಿ ಬದಲಿಗೆ ನಾವು ಜನರ ಆಶೋತ್ತರಗಳನ್ನು ಪೂರ್ಣಗೊಳಿಸಲು ದೇಶದಲ್ಲಿ ರಸ್ತೆಗಳು ಮತ್ತು ಹೊಸ ರೈಲು ಮಾರ್ಗಗಳ ನಿರ್ಮಾಣದ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಾವು ಬಡವರಿಗಾಗಿ ಕೋಟ್ಯಾಂತರ ಪಕ್ಕಾ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ದಶಕಗಳಿಂದ ಪೂರ್ಣಗೊಳ್ಳದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಹಲವು ಸಣ್ಣ ಮತ್ತು ಬೃಹತ್ ಅಣೆಕಟ್ಟೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನಾವು ಹೊಸ ವಿದ್ಯುತ್ ಘಟಕಗಳನ್ನು ಸ್ಥಾಪಿಸುತ್ತಿದ್ದೇವೆ. ಆ ಮೂಲಕ ಬಡವರು ಮತ್ತು ರೈತರ ಜೀವನ ಸುಲಭಗೊಳಿಸುತ್ತಿದ್ದೇವೆ ಮತ್ತು ದೇಶದ ಭವಿಷ್ಯದ ಯುವಜನತೆ ಕತ್ತಲೆಯಲ್ಲಿ ಮುಳುಗದಂತೆ ನೋಡಿಕೊಳ್ಳುತ್ತಿದ್ದೇವೆ.
ಗೆಳೆಯರೇ,
ಇದಕ್ಕೆ ಅತ್ಯಂತ ಪರಿಶ್ರಮ ಬೇಕಾಗಿದೆ ಮತ್ತು ಜನರ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕಾಗಿದೆ. ದೇಶದಲ್ಲಿ ಎಲ್ಲೆಲ್ಲಿ ಡಬಲ್ ಇಂಜಿನ್ ಸರ್ಕಾರಗಳಿವೆಯೋ ಅಲ್ಲೆಲ್ಲ ಅಭಿವೃದ್ಧಿಗಾಗಿ ನಾವು ಕಠಿಣ ಶ್ರಮವಹಿಸಿ ದುಡಿಯುತ್ತಿದ್ದೇವೆ ಎಂಬುದನ್ನು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರಗಳು ಉಚಿತ ಕೊಡುಗೆಗಳನ್ನು ನೀಡುವ ಶಾರ್ಟ್ ಕಟ್ ಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ಅವು ರಾಜ್ಯಗಳ ಭವಿಷ್ಯವನ್ನು ಸುಧಾರಿಸಲು ಕಠಿಣ ಶ್ರಮವಹಿಸುತ್ತಿವೆ.
ಮತ್ತು ಮಿತ್ರರೇ,
ಇಂದು ನಾನು ನಿಮಗೆ ಮತ್ತೊಂದು ಸಂಗತಿಯನ್ನು ಹೇಳ ಬಯಸುತ್ತೇನೆ. ದೇಶದ ಸಮತೋಲಿತ ಅಭಿವೃದ್ಧಿ ಮತ್ತು ಸಣ್ಣ ಪುಟ್ಟ ಪಟ್ಟಣಗಳು ಹಾಗೂ ಗ್ರಾಮಗಳಲ್ಲೂ ಕೂಡ ಅತ್ಯಾಧುನಿಕ ಸೌಕರ್ಯಗಳು ಲಭ್ಯವಾಗುವಂತೆ ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯ ಒದಗಿಸಲಾಗುತ್ತಿದೆ. ಪೂರ್ವ ಭಾರತದ ಜನರು ಮತ್ತು ಬುಂಡೇಲ್ ಖಂಡದ ಜನರು ದಶಕಗಳ ಕಾಲ ಸೌಕರ್ಯಗಳಿಂದ ವಂಚಿತರಾಗಿದ್ದರು. ಇಂದು ಈ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯಗಳು ಅಭಿವೃದ್ಧಿಗೊಂಡಿರುವಾಗ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಲಾಗಿದೆ. ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಾಗ ಅವುಗಳು ತಮ್ಮ ಹಿಂದುಳಿದಿರುವಿಕೆಯಿಂದ ಹೊರಬರುತ್ತವೆ. ಅದು ಕೂಡ ಸಾಮಾಜಿಕ ನ್ಯಾಯದ ವಿಧಾನವಾಗಿದೆ. ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದು, ಪ್ರತಿಯೊಂದು ಮನೆಗೂ ಅಡುಗೆ ಅನಿಲ ಸಂಪರ್ಕ ಒದಗಿಸುವುದು, ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿ ಕೊಡುವುದು ಮತ್ತು ಶೌಚಾಲಯಗಳ ನಿರ್ಮಾಣ ಕೂಡ ಸಾಮಾಜಿಕ ನ್ಯಾಯವನ್ನು ಬಲವರ್ಧನೆಗೊಳಿಸುವ ಕ್ರಮಗಳಾಗಿವೆ. ನಮ್ಮ ಸರ್ಕಾರದ ಸಾಮಾಜಿಕ ನ್ಯಾಯದ ಉಪಕ್ರಮಗಳಿಂದ ಬುಂಡೇಲ್ ಖಂಡದ ಜನರಿಗೆ ಸಾಕಷ್ಟು ಪ್ರಯೋಜನವಾಗಿದೆ.
ಸಹೋದರ ಮತ್ತು ಸಹೋದರಿಯರೇ,
ಬುಂಡೇಲ್ ಖಂಡದ ಮತ್ತೊಂದು ಸಂಕಷ್ಟವನ್ನು ನಿವಾರಿಸಲು ನಮ್ಮ ಸರ್ಕಾರ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಯೊಂದು ಮನೆಗೂ ಕೊಳವೆ ಮೂಲಕ ಶುದ್ಧ ನೀರು ಒದಗಿಸಲು ಜಲಜೀವನ್ ಮಿಷನ್ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಮಿಷನ್ ಅಡಿ ಬುಂಡೇಲ್ ಖಂಡದ ಲಕ್ಷಾಂತರ ಕುಟುಂಬಳಿಗೆ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ನಮ್ಮ ತಾಯಂದಿರುವ ಮತ್ತು ಸಹೋದರಿಯರಿಗೆ ಇದರಿಂದ ಭಾರೀ ಅನುಕೂಲವಾಗಿದೆ ಮತ್ತು ಅವರ ಕಷ್ಟಗಳು ನಿವಾರಣೆಯಾಗಿದೆ. ಬುಂಡೇಲ್ ಖಂಡದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮನೆಗಳಿಗೆ ನದಿ ನೀರನ್ನು ಪೂರೈಸಲು ನಾವು ನಿರಂತರವಾಗಿ ಪ್ರಯತ್ನಗಳನ್ನು ಕೈಗೊಂಡಿದ್ದೇವೆ. ರತೋಲಿ ಅಣೆಕಟ್ಟೆ ಯೋಜನೆ, ಭಾವನಿ ಅಣೆಕಟ್ಟು ಯೋಜನೆ ಮತ್ತು ಮಾಜ್ಗಾಂವ್-ಚಿಲ್ಲಿ ಹನಿ ನೀರಾವರಿ ಯೋಜನೆ, ಆ ಪ್ರಯತ್ನಗಳ ಫಲವಾಗಿವೆ. ಕೆನ್-ಬೆಟ್ವಾ ನದಿ ಸಂಪರ್ಕ ಯೋಜನೆಗೆ ಸಾವಿರಾರು ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡಲಾಗಿದೆ. ಇದು ಬುಂಡೇಲ್ ಖಂಡದ ಬಹುದೊಡ್ಡ ಭಾಗದ ಜನರ ಜೀವನವನ್ನು ಬದಲಿಸಲಿದೆ.
ಮಿತ್ರರೇ,
ಬುಂಡೇಲ್ ಖಂಡದ ಮಿತ್ರರಲ್ಲಿ ನಾನು ಮತ್ತೊಂದು ಮನವಿಯನ್ನು ಮಾಡಲು ಬಯಸುತ್ತೇನೆ. 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶದ ಅಮೃತ ಸರೋವರಗಳನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿದೆ. ಬುಂಡೇಲ್ ಖಂಡದ ಪ್ರತಿಯೊಂದು ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಾಣ ಮಾಡಬೇಕಿದೆ. ಈ ಶ್ರೇಷ್ಠ ಕಾರ್ಯವನ್ನು ನೀರಿನ ಭದ್ರತೆ ಮತ್ತು ನಮ್ಮ ಭವಿಷ್ಯದ ಜನಾಂಗಕ್ಕಾಗಿ ನಾವು ಮಾಡಬೇಕಾಗಿದೆ. ಈ ಆದರ್ಶ ಕಾರ್ಯಕ್ಕೆ ನೆರವು ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ನೀವು ಮುಂದಾಗಬೇಕು ಎಂದು ನಾನು ನಿಮಗೆ ಕರೆ ನೀಡುತ್ತೇನೆ. ಅಮೃತ ಸರೋವರಕ್ಕಾಗಿ ಗ್ರಾಮ-ಗ್ರಾಮಗಳ ನಡುವೆ ತಂತಿ ಸೇವಾ ಅಭಿಯಾನವನ್ನು ಆರಂಭಿಸಬೇಕು.
ಸಹೋದರ ಮತ್ತು ಸಹೋದರಿಯರೇ,
ಬುಂಡೇಲ್ ಖಂಡದ ಅಭಿವೃದ್ಧಿಯಲ್ಲಿ ಗುಡಿ ಕೈಗಾರಿಕೆಗಳು ಹೆಚ್ಚಿನ ಸಾಮರ್ಥ್ಯ ಹೊಂದಿವೆ. ನಮ್ಮ ಸರ್ಕಾರ ಆತ್ಮನಿರ್ಭರ್ ಭಾರತದ ಮೂಲಕ ಗುಡಿ ಕೈಗಾರಿಕೆಗಳ ಪರಂಪರೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಲ್ಲೂ ಭಾರತದಲ್ಲಿ ಗುಡಿ ಕೈಗಾರಿಕೆಗಳ ಪರಂಪರೆಗೆ ಒತ್ತು ನೀಡಲಾಗುತ್ತಿದೆ. ನಾನು ಇಂದು ನಿಮ್ಮೊಂದಿಗೆ ಒಂದು ಉದಾಹರಣೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ ಮತ್ತು ದೇಶವಾಸಿಗಳ ಸಣ್ಣ ಪ್ರಯತ್ನಗಳೂ ಹೇಗೆ ಭಾರೀ ಪರಿಣಾಮವನ್ನು ಬೀರಬಲ್ಲವು ಎಂಬುದನ್ನು ತಿಳಿಸಲು ಬಯಸುತ್ತೇನೆ.
ಮಿತ್ರರೇ,
ಭಾರತ ಪ್ರತಿ ವರ್ಷ ವಿಶ್ವದ ನಾನಾ ರಾಷ್ಟ್ರಗಳೀಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ನಮ್ಮ ಮಕ್ಕಳಿಗೆ ಸಣ್ಣ ಆಟಿಕೆಗಳನ್ನೂ ಕೂಡ ಹೊರಗಿನಿಂದ ತರಲಾಗುತ್ತಿತ್ತು. ಭಾರತದಲ್ಲಿ ಆಟಿಕೆಗಳನ್ನು ತಯಾರಿಸುವುದು ಕುಟುಂಬ ಮತ್ತು ಸಾಂಪ್ರದಾಯಿಕ ಉದ್ಯಮವಾಗಿದೆ. ಅದು ಕುಟುಂಬದ ವ್ಯವಹಾರವೂ ಆಗಿದೆ. ಆ ದೃಷ್ಟಿಯಿಂದ ದೇಶದ ಆಟಿಕೆ ಉದ್ಯಮಕ್ಕೆ ನಾನು ಹೊಸ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸಲು ಕರೆ ನೀಡಿದ್ದೆ. ಜತೆಗೆ ಜನತೆಗೆ ಭಾರತೀಯ ಆಟಿಕೆಗಳನ್ನು ಮಾತ್ರ ಖರೀದಿಸಲು ಮನವಿ ಮಾಡಿದ್ದೆ. ಅತ್ಯಲ್ಪ ಅವಧಿಯಲ್ಲಿಯೇ ಸರ್ಕಾರದ ಮಟ್ಟದಲ್ಲಿ ಏನು ಮಾಡಬೇಕಾಗಿತ್ತೋ ಅಂತಹ ಅಗತ್ಯ ಕೆಲಸಗಳನ್ನು ಮಾಡಲಾಯಿತು. ಇಂದು ದೇಶದ ಪ್ರತಿಯೊಬ್ಬ ಭಾರತೀಯನೂ ಹೆಮ್ಮ ಪಡುವಂತಾಗಿದೆ ಮತ್ತು ದೇಶದ ಜನತೆ ಹೇಗೆ ಸತ್ಯವನ್ನು ಹೃದಯಪೂರ್ವಕವಾಗಿ ಪೋಷಿಸುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಇದೆಲ್ಲದರ ಪರಿಣಾಮ ಇಂದು ವಿದೇಶಗಳಿಂದ ಭಾರತಕ್ಕೆ ಆಮದಾಗುತ್ತಿದ್ದ ಆಟಿಕೆಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅದಕ್ಕಾಗಿ ನಾನು ದೇಶವಾಸಿಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಇಂದು ಭಾರತದಿಂದ ಅತಿದೊಡ್ಡ ಪ್ರಮಾಣದಲ್ಲಿ ಆಟಿಕೆಗಳ ರಫ್ತು ಮಾಡಲಾಗುತ್ತಿದೆ. ಇದರಿಂದ ಯಾರಿಗೆ ಅನುಕೂಲವಾಗಿದೆ ಹೇಳಿ? ಬಹುತೇಕ ನಮ್ಮ ಆಟಿಕೆ ತಯಾರಕರು ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬದವರು. ನಮ್ಮ ಮಹಿಳೆಯರು ಈ ಆಟಿಕೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಈ ಉದ್ಯಮದಿಂದ ಈ ಎಲ್ಲ ವರ್ಗದ ಜನರಿಗೆ ಅನುಕೂಲವಾಗಿದೆ. ಝಾನ್ಸಿ, ಚಿತ್ರಕೂಟ ಮತ್ತು ಬುಂಡೇಲ್ ಖಂಡದಲ್ಲಿ ಆಟಿಕೆಗಳ ಪರಂಪರೆಯ ಶ್ರೀಮಂತಿಕೆ ಇದೆ. ಇದನ್ನೂ ಸಹ ಡಬಲ್ ಇಂಜಿನ್ ಸರ್ಕಾರ ಉತ್ತೇಜಿಸುತ್ತಿದೆ.
ಮಿತ್ರರೇ,
ಯೋಧರ ನಾಡು ಬುಂಡೇಲ್ ಖಂಡದ ನಾಯಕರು ಆಟದ ಮೈದಾನದಲ್ಲಿ ವಿಜಯದ ಧ್ವಜ ಹಾರಿಸಿದ್ದರು. ದೇಶದ ಅತಿದೊಡ್ಡ ಕ್ರೀಡಾ ಗೌರವವನ್ನು ಇದೀಗ ಮೇಜರ್ ಧ್ಯಾನ್ ಚಂದ್ ಎಂದು ಹೆಸರಿಸಲಾಗಿದ್ದು, ಅವರು ಬುಂಡೇಲ್ ಖಂಡದ ಮಗ. ಅವರ ನೆನಪಿನಲ್ಲಿ ಧ್ಯಾನ್ ಚಂದ್ ಬಹುತೇಕ ಸಮಯವನ್ನು ಕಳೆದ ಮೀರತ್ ನಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಝಾನ್ಸಿಯ ಪುತ್ರಿ ಶೈಲಿ ಸಿಂಗ್ ಅದ್ಭುತ ಕಾರ್ಯವನ್ನು ಮಾಡಿದರು. ಬುಂಡೇಲ್ ಖಂಡದ ನಮ್ಮ ಪುತ್ರಿ ಶೈಲಿ ಸಿಂಗ್, ಉದ್ದ ಜಿಗಿತದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದರು. ಅವರು ಕಳೆದ ವರ್ಷ 20ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಪದಕ ಜಯಿಸಿದ್ದರು. ಬುಂಡೇಲ್ ಖಂಡ ಅತ್ಯಂತ ಪ್ರತಿಭಾವಂತರಿಂದ ಕೂಡಿದ ಪ್ರದೇಶವಾಗಿದೆ. ನಮ್ಮ ಸರ್ಕಾರ ಇಲ್ಲಿನ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ದೊರಕಿಸಿಕೊಡಲು, ಅವರು ಮುಂದೆ ಬರಲು ಇಲ್ಲಿಂದ ವಲಸೆ ಹೋಗದಂತೆ ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಇಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಸೃಷ್ಟಿಸುತ್ತಿದೆ. ಉತ್ತಮ ಆಡಳಿತದ ಹೊಸ ಹೆಗ್ಗುರುತನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮುಂದುವರಿಸುತ್ತೇವೆ. ಈ ಆಶಯದೊಂದಿಗೆ ನಾನು ಬುಂಡೇಲ್ ಖಂಡ ಎಕ್ಸ್ ಪ್ರೆಸ್ ವೇಗಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಆಗಸ್ಟ್ 15ರ ವರೆಗೆ ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಯಲ್ಲೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡಬೇಕು ಎಂದು ನಾನು ನಿಮಗೆ ನೆನಪಿಸುತ್ತೇನೆ. ನಿಮ್ಮೆಲ್ಲರಿಗೂ ಶುಭ ಕಾಮನೆಗಳು ಮತ್ತು ತುಂಬಾ ತುಂಬಾ ಧನ್ಯವಾದಗಳು ಮತ್ತೊಮ್ಮೆ ನೀವು ಜೋರು ಧ್ವನಿಯಲ್ಲಿ ಭಾರತ್ ಮಾತಾ ಕಿ – ಜೈ, ಭಾರತ್ ಮಾತಾ ಕಿ – ಜೈ, ಭಾರತ್ ಮಾತಾ ಕಿ – ಜೈ ಎಂದು ಕೂಗಿ. ತುಂಬಾ ತುಂಬಾ ಧನ್ಯವಾದಗಳು.
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.
**********
(Release ID: 1842281)
Visitor Counter : 179
Read this release in:
Malayalam
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu