ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಶ್ರೀ ಅನುರಾಗ್‌ ಠಾಕೂರ್‌ ಅವರು ಕ್ರೀಡಾಪಟುಗಳಿಗೆ ನಗದು ಪ್ರಶಸ್ತಿ, ರಾಷ್ಟ್ರೀಯ ಕಲ್ಯಾಣ ಮತ್ತು ಪಿಂಚಣಿಯ ಪರಿಷ್ಕೃತ ಯೋಜನೆಗಳಿಗೆ ಚಾಲನೆ ನೀಡಿದರು.


ಕ್ರೀಡಾಪಟುಗಳ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ಯೋಜನೆ ಮತ್ತು ಅರ್ಹ ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆಗಳು ಆನ್‌ಲೈನ್‌ಗೆ ಪರಿವರ್ತನೆ

ಪರಿಷ್ಕೃತ ಯೋಜನೆಗಳು ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಒದಗಿಸಲಿದ್ದು, ಕ್ರೀಡಾಪಟುಗಳಿಗೆ ದಾಖಲೆಯ ಸಮಯದಲ್ಲಿ ಪ್ರಯೋಜನವನ್ನು ನೀಡುತ್ತವೆ: ಶ್ರೀ ಅನುರಾಗ್‌ ಠಾಕೂರ್‌

ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಎನ್‌ಎಸ್‌ಡಿಎಫ್‌ ನ ಪೋರ್ಟಲ್‌ ಮೂಲಕ ಆಟಗಾರರು, ಕ್ರೀಡಾ ಸೌಲಭ್ಯಗಳು ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ನೇರವಾಗಿ ಕೊಡುಗೆ ನೀಡಬಹುದು

ನಗದು ಬಹುಮಾನಗಳ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಲು ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾ ಸಚಿವಾಲಯವು ವೆಬ್‌ಪೋರ್ಟಲ್‌ dbtyas-sports.gov.in ಅನ್ನು ಪ್ರಾರಂಭಿಸಿದೆ

ಕ್ರೀಡಾ ಸಚಿವಾಲಯವು ಎನ್‌ಎಸ್‌ಡಿಎಫ್‌ಗಾಗಿ ಸಂವಾದಾತ್ಮಕ ವೆಬ್‌ ಸೈಟ್‌ nsdf.yas.gov.in ಅನ್ನು ಸಹ ಪ್ರಾರಂಭಿಸುತ್ತದೆ

Posted On: 08 JUL 2022 3:08PM by PIB Bengaluru

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಚಿವರಾದ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ನವದೆಹಲಿಯಲ್ಲಿಇಂದು ನಗದು ಪ್ರಶಸ್ತಿಗಳು, ರಾಷ್ಟ್ರೀಯ ಕಲ್ಯಾಣ ಮತ್ತು ಕ್ರೀಡಾಪಟುಗಳಿಗೆ ಪಿಂಚಣಿ, ಕ್ರೀಡಾ ಇಲಾಖೆಯ ಯೋಜನೆಗಳ ವೆಬ್‌ ಪೋರ್ಟಲ್‌ (dbtyas-sports.gov.in) ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ ವೆಬ್‌ಸೈಟ್‌ (nsdf.yas.gov.in) ಗಳ ಪರಿಷ್ಕೃತ ಯೋಜನೆಗಳಿಗೆ ಚಾಲನೆ ನೀಡಿದರು.

 

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿನ ಪದಕ ವಿಜೇತರಿಗೆ ಮತ್ತು ಅವರ ತರಬೇತುದಾರರಿಗೆ ನಗದು ಪ್ರಶಸ್ತಿ ನೀಡುವ ಯೋಜನೆ, ಕ್ರೀಡಾಪಟುಗಳ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ (ಪಿಡಿಯುಎನ್‌ ಡಬ್ಲ್ಯುಎಫ್‌ ಎಸ್‌) ಯೋಜನೆ ಮತ್ತು ಕ್ರೀಡಾ ಇಲಾಖೆಯ ಅರ್ಹ ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆಗಳನ್ನು ಹೆಚ್ಚು ಬಳಕೆದಾರ ಸ್ನೇಹಿ, ಸುಗಮ ಮತ್ತು ಪಾರದರ್ಶಕವಾಗಿಸುವ ದೃಷ್ಟಿಕೋನದೊಂದಿಗೆ ಹಲವಾರು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ ಎಂದು ಶ್ರೀ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದರು.

 

ನಾಗರಿಕರನ್ನು ಸಶಕ್ತಗೊಳಿಸುವ ಮೂಲಕ ಮತ್ತು ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರ, ವ್ಯವಸ್ಥೆ ಮತ್ತು ಸೌಲಭ್ಯಗಳು, ಸಮಸ್ಯೆಗಳು ಮತ್ತು ಪರಿಹಾರಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತದ ಪ್ರಧಾನ ಮಂತ್ರಿಗಳ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುವುದರೊಂದಿಗೆ ಈ ಬೆಳವಣಿಗೆಯನ್ನು ಡಿಜಿಟಲ್‌ ಇಂಡಿಯಾದ ಕಡೆಗೆ ಮತ್ತೊಂದು ಹೆಜ್ಜೆ ಎಂದು ಕೇಂದ್ರ ಸಚಿವರು ಶ್ಲಾಘಿಸಿದರು. ಈ ಪರಿಷ್ಕೃತ ಯೋಜನೆಗಳು ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಒದಗಿಸಲಿದ್ದು, ಕ್ರೀಡಾ ವ್ಯಕ್ತಿಗಳಿಗೆ ದಾಖಲೆಯ ಸಮಯದಲ್ಲಿ ಪ್ರಯೋಜನವನ್ನು ನೀಡುತ್ತವೆ ಎಂದು ಸಚಿವರು ವಿವರಿಸಿದರು.

 

ಈಗ, ಯಾವುದೇ ಕ್ರೀಡಾಪಟುವು ಪುರುಷರ/ ಮಹಿಳೆಯ ಅರ್ಹತೆಗೆ ಅನುಗುಣವಾಗಿ ಎಲ್ಲಾ ಮೂರು ಯೋಜನೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದು ಶ್ರೀ ಠಾಕಾರ್‌ ಪ್ರತಿಪಾದಿಸಿದರು.‘‘ ಈ ಮೊದಲು ಕ್ರೀಡಾ ಒಕ್ಕೂಟಗಳು / ಸಾಯ್‌ ಮೂಲಕ ಪ್ರಸ್ತಾಪಗಳನ್ನು ಸ್ವೀಕರಿಸಲಾಗುತ್ತಿತ್ತು, ಅದು ಪ್ರಸ್ತಾಪಗಳನ್ನು ಸಲ್ಲಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಕೆಲವೊಮ್ಮೆ ಈ ಪ್ರಸ್ತಾಪವನ್ನು ಅನುಮೋದಿಸಲು 1-2 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಸಕಾಲಿಕ ಸಲ್ಲಿಕೆ ಮತ್ತು ನಗದು ಪ್ರಶಸ್ತಿಯ ನಂತರದ ಅನುಮೋದನೆಯನ್ನು ಖಚಿತಪಡಿಸಿಕೊಳ್ಳಲು, ಅರ್ಜಿದಾರರು ಈಗ ನಿರ್ದಿಷ್ಟ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವ ಕೊನೆಯ ದಿನಾಂಕದಿಂದ ಆರು ತಿಂಗಳೊಳಗೆ ನಗದು ಪ್ರಶಸ್ತಿ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು,’’ ಎಂದು ಅವರು ಹೇಳಿದರು.

ವಿಲೇವಾರಿ ವಿಧಾನದ ಸಮಯವನ್ನು ಕಡಿಮೆ ಮಾಡಲು ಎಲ್ಲಾ ಮೂರು ಯೋಜನೆಗಳಲ್ಲಿ ಪರಿಶೀಲನಾ ಪ್ರಕ್ರಿಯೆಯನ್ನು ದೊಡ್ಡ ಪ್ರಮಾಣದಲ್ಲಿ ಸರಳಗೊಳಿಸಲಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು. ತರಬೇತುದಾರರು ತಮ್ಮ ನಗದು ಬಹುಮಾನವನ್ನು ಸಕಾಲದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಈ ಯೋಜನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಡೀಫಾಲಿಂಪಿಕ್ಸ್‌( ಕಿವುಡರ ಒಲಿಂಪಿಕ್ಸ್‌ ) ಅಥ್ಲೀಟ್‌ಗಳಿಗೂ ಪಿಂಚಣಿ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ. ಈ ಯೋಜನೆಗಳಲ್ಲಿ ಮೇಲಿನ ವೈಶಿಷ್ಟ್ಯಗಳನ್ನು ಅನುಷ್ಠಾನಗೊಳಿಸಲು, ಕ್ರೀಡಾ ಇಲಾಖೆಯು ಕ್ರೀಡಾ ಇಲಾಖೆಯ ಮೇಲಿನ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ವೆಬ್‌ ಪೋರ್ಟಲ್‌ dbtyas-sports.gov.in ಅನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.

ಈ ಆನ್‌ಲೈನ್‌ ಪೋರ್ಟಲ್‌ ಕ್ರೀಡಾಪಟುಗಳಿಂದ ಅರ್ಜಿಗಳ ನೈಜ ಸಮಯದ ಟ್ರ್ಯಾಕಿಂಗ್‌ ಮತ್ತು ಅವರ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾದ ಒನ್‌ ಟೈಮ್‌ ಪಾಸ್ವರ್ಡ್‌ (ಒಟಿಪಿ) ಮೂಲಕ ದೃಢೀಕರಣವನ್ನು ಸುಗಮಗೊಳಿಸುತ್ತದೆ ಎಂದು ಶ್ರೀ ಠಾಕೂರ್‌ ಹೇಳಿದರು. ಅರ್ಜಿದಾರರು ಸಚಿವಾಲಯಕ್ಕೆ ಅರ್ಜಿಗಳನ್ನು ಭೌತಿಕವಾಗಿ ಸಲ್ಲಿಸುವುದು ಈಗ ಅಗತ್ಯವಿಲ್ಲ. ಈ ಪೋರ್ಟಲ್‌ ಅನ್ನು ಡಿಬಿಟಿ-ಎಂಐಎಸ್‌ ನೊಂದಿಗೆ ಸಂಯೋಜಿಸಲಾಗಿದ್ದು, ಇದು ಭಾರತ ಸರ್ಕಾರದ ಡಿಬಿಟಿ ಮಿಷನ್‌ನ ಉದ್ದೇಶಗಳನ್ನು ಪೂರೈಸಲು ಕ್ರೀಡಾಪಟುಗಳಿಗೆ ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.

ಈ ಪೋರ್ಟಲ್‌ ಎಲ್ಲಾ ಅರ್ಜಿಗಳನ್ನು ಕಾಲಮಿತಿಯೊಳಗೆ ತ್ವರಿತವಾಗಿ ವಿಲೇವಾರಿ ಮಾಡಲು ಇಲಾಖೆಗೆ ಸಹಾಯ ಮಾಡುವುದಲ್ಲದೆ, ಕ್ರೀಡಾಪಟುಗಳ ವಿವಿಧ ರೀತಿಯ ಅಗತ್ಯ ವರದಿಗಳನ್ನು ಉತ್ಪಾದಿಸಲು ಮತ್ತು ದತ್ತಾಂಶ ನಿರ್ವಹಣೆಗೆ ಸಹ ಬಳಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಕ್ರೀಡಾಪಟುಗಳ ಅಗತ್ಯತೆ ಮತ್ತು ಪ್ರಚಲಿತ ಸನ್ನಿವೇಶಗಳಿಗೆ ಅನುಗುಣವಾಗಿ ಆನ್‌ಲೈನ್‌ ಪೋರ್ಟಲ್‌ಅನ್ನು ಕಾಲಕಾಲಕ್ಕೆ ಮತ್ತಷ್ಟು ಮೇಲ್ದರ್ಜೆಗೇರಿಸಲಾಗುವುದು.

‘ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ’ (ಎನ್‌ಎಸ್‌ಡಿಎಫ್‌) ಗಾಗಿ nsdf.yas.gov.in ಇಲಾಖೆ ಮೀಸಲಾದ ಸಂವಾದಾತ್ಮಕ ವೆಬ್‌ಸೈಟ್‌ ಅನ್ನು ಸಹ ಅಭಿವೃದ್ಧಿಪಡಿಸಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಈ ನಿಧಿಯು ದೇಶದಲ್ಲಿಕ್ರೀಡೆಗಳ ಉತ್ತೇಜನ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಪಿಎಸ್‌ಯಗಳು, ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳು ಇತ್ಯಾದಿಗಳಿಂದ ಸಿಎಸ್‌ಆರ್‌ ಕೊಡುಗೆಗಳನ್ನು ಆಧರಿಸಿದೆ. ವೈಯಕ್ತಿಕ, ಸಂಸ್ಥೆ ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಈಗ ಪೋರ್ಟಲ್‌ ಮೂಲಕ ಆಟಗಾರರು, ಕ್ರೀಡಾ ಸೌಲಭ್ಯಗಳು ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ನೇರವಾಗಿ ಕೊಡುಗೆ ನೀಡಬಹುದು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

ಎನ್‌ಎಸ್‌ಡಿಎಫ್‌ ಕಾರ್ಪಸ್‌ ಅನ್ನು ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ (ಟಾಪ್‌) ಯೋಜನೆ, ಹೆಸರಾಂತ ಕ್ರೀಡಾಪಟುಗಳು ಮತ್ತು ಕ್ರೀಡಾ ಸಂಸ್ಥೆಗಳಿಂದ ಮೂಲಸೌಕರ್ಯ ಅಭಿವೃದ್ಧಿ ಇತ್ಯಾದಿಗಳಿಗೆ ಬಳಸಲಾಗುತ್ತದೆ. ‘‘ಈ ಸಮರ್ಪಿತ ವೆಬ್‌ಸೈಟ್‌ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ಸಿಎಸ್‌ಆರ್‌ ಕೊಡುಗೆದಾರರಿಗೆ ಸುಲಭ ಮತ್ತು ಪಾರದರ್ಶಕ ಪ್ರವೇಶವನ್ನು ಒದಗಿಸುತ್ತದೆ. ಎನ್‌ಎಸ್‌ಡಿಎಫ್‌ಅನ್ನು ದೇಶದಲ್ಲಿಕ್ರೀಡೆಯ ಅಭಿವೃದ್ಧಿಗೆ ದೊಡ್ಡ ಯಶಸ್ಸಾಗಿ ಮಾಡಲು ಈ ವೆಬ್‌ಸೈಟ್‌ ನಮಗೆ ಸಹಾಯ ಮಾಡುತ್ತದೆ,’’ ಎಂದು ಅವರು ಹೇಳಿದರು.

********



(Release ID: 1840260) Visitor Counter : 186