ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು(ಎನ್ಎಚ್ಎ) ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼನ(ಎಬಿಡಿಎಂ) ʻಆರೋಗ್ಯ ಕೇಂದ್ರ ನೋಂದಣಿʼಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸರಕಾರಿ ಮತ್ತು ಖಾಸಗಿ ಆರೋಗ್ಯ ಆರೈಕೆ ಕೇಂದ್ರಗಳು ಯಶಸ್ವಿಯಾಗಿ ಸೇರ್ಪಡೆಯಾಗಿವೆ ಎಂದು ಘೋಷಿಸಿದೆ
Posted On:
06 JUL 2022 5:05PM by PIB Bengaluru
`ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’(ಎಬಿಡಿಎಂ) ಅಡಿಯಲ್ಲಿ ʻಆರೋಗ್ಯ ಕೇಂದ್ರ ನೋಂದಣಿʼ(ಎಚ್ಎಫ್ಆರ್)ಯಲ್ಲಿ ಸರಕಾರಿ ಮತ್ತು ಖಾಸಗಿ ವಲಯದ ಒಂದು ಲಕ್ಷಕ್ಕೂ ಅಧಿಕ ಆರೋಗ್ಯ ಆರೈಕೆ ಕೇಂದ್ರಗಳು ಯಶಸ್ವಿಯಾಗಿ ಸೇರ್ಪಡೆಯಾಗಿವೆ. ಈ ಐತಿಹಾಸಿಕ ಮೈಲುಗಲ್ಲು, ದೇಶಾದ್ಯಂತ ಡಿಜಿಟಲ್ ಆರೋಗ್ಯ ವೇದಿಕೆ ಮತ್ತು ಸೇವೆಗಳ ಅಳವಡಿಕೆ ಹೆಚ್ಚಳಕ್ಕೆ ದಾರಿ ಮಾಡಲಿದೆ.
ʻಎಬಿಡಿಎಂʼ - ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಎಂಬುದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್ಎಚ್ಎ) ಜಾರಿಗೆ ತರುತ್ತಿರುವ ಸರಕಾರದ ಪ್ರಮುಖ ಯೋಜನೆಯಾಗಿದೆ. ʻಎಬಿಡಿಎಂʼ ಅಡಿಯಲ್ಲಿ ರೂಪಿಸಲಾಗುತ್ತಿರುವ ʻಆರೋಗ್ಯ ಕೇಂದ್ರ ನೋಂದಣಿʼ (ಹೆಲ್ತ್ ಫೆಸಿಲಿಟಿ ರಿಜಿಸ್ಟ್ರಿ –ʻಎಚ್‌ಎಫ್‌ಆರ್ʼ) ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ಒಳಗೊಂಡ ದೇಶದ ಆರೋಗ್ಯ ಕೇಂದ್ರಗಳ ಸಮಗ್ರ ಭಂಡಾರವಾಗಿದೆ. ಆಸ್ಪತ್ರೆಗಳು, ಕ್ಲಿನಿಕ್‌ಗಳು, ರೋಗನಿರ್ಣಯ ಪ್ರಯೋಗಾಲಯಗಳು ಮತ್ತು ಇಮೇಜಿಂಗ್ ಕೇಂದ್ರಗಳು ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಕೇಂದ್ರಗಳನ್ನು ಇದು ಒಳಗೊಂಡಿದೆ.
ʻಡಿಜಿಟಲ್ ಹೆಲ್ತ್ ಕೇರ್ʼ ಪರಿಸರ ವ್ಯವಸ್ಥೆಯೊಳಗೆ ಪರಸ್ಪರ ಸಮನ್ವಯದ ಕಾರ್ಯನಿರ್ವಹಣೆಗೆ ಅನುವುಮಾಡಿಕೊಡಲು ತಡೆರಹಿತ ಆನ್‌ಲೈನ್ ವೇದಿಕೆಯೊಂದನ್ನು ಸೃಷ್ಟಿಸುವ ಗುರಿಯನ್ನು ʻಎಬಿಡಿಎಂʼ ಹೊಂದಿದೆ. ಆರೋಗ್ಯ ಕೇಂದ್ರಗಳು, ರೋಗಿಗಳು ಮತ್ತು ಆರೋಗ್ಯ ಆರೈಕೆ ವೃತ್ತಿಪರರು - ಎಲ್ಲರಿಗೆ ತಡೆರಹಿತ ಡಿಜಿಟಲ್ ಹೆಲ್ತ್ಕೇರ್ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ಮೂಲ ರಚನೆಗಳು(ಬಿಲ್ಡಿಂಗ್ ಬ್ಲಾಕ್ಸ್) ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ʻಎಪಿಐʼಗಳನ್ನು (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ʻಎಬಿಡಿಎಂʼ ಅಭಿವೃದ್ಧಿಪಡಿಸಿದೆ. ಅಂತಹ ಪ್ರಮುಖ ಮೂಲ ರಚನೆಗಳಲ್ಲಿ (ಬಿಲ್ಡಿಂಗ್ ಬ್ಲಾಕ್) ʻಆರೋಗ್ಯ ಕೇಂದ್ರ ನೋಂದಣಿʼಯೂ ಒಂದಾಗಿದೆ.
ʻಆರೋಗ್ಯ ಕೇಂದ್ರ ನೋಂದಣಿʼಯ ಮಹತ್ವವನ್ನು ವಿವರಿಸಿದ ʻಎಚ್‌ಎಫ್‌ಆರ್ʼದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್.ಎಸ್.ಶರ್ಮಾ ಅವರು, "ದೇಶಾದ್ಯಂತ ನೋಂದಾಯಿತ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಕೇಂದ್ರಗಳ ವಿವರಗಳನ್ನು ರೋಗಿಗಳು ಸುಲಭವಾಗಿ ಪಡೆಯಬಹುದಾದ ವಿಶ್ವಾಸಾರ್ಹ ರಾಷ್ಟ್ರೀಯ ವೇದಿಕೆಯೊಂದನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಆರೋಗ್ಯ ಕೇಂದ್ರಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ನಾವು ನೋಡಿದ್ದೇವೆ, ಅವುಗಳು ಈಗ ಈ ʻರಾಷ್ಟ್ರೀಯ ನೋಂದಣಿʼಯ ಭಾಗವಾಗಿ ಮಾರ್ಪಟ್ಟಿವೆ. ʻಎಬಿಡಿಎಂʼ ಜಾಲದ ಮೂಲಕ ಆಧುನಿಕ ಔಷಧ (ಅಲೋಪಥಿಕ್), ಆಯುರ್ವೇದ, ದಂತವೈದ್ಯಕೀಯ, ಹೋಮಿಯೋಪಥಿ, ಫಿಸಿಯೋಥೆರಪಿ, ಯುನಾನಿ, ಸಿದ್ಧ ಅಥವಾ ʻಸೋವಾ-ರಿಗ್ಪಾʼ(ಅಮ್ಚಿ ಎಂದೂ ಕರೆಯಲಾಗುವ ಅತ್ಯಂತ ಪುರಾತನ ವೈದ್ಯ ಪದ್ಧತಿ)ಗಳಂತಹ ವಿವಿಧ ವೈದ್ಯಕೀಯ ಪದ್ಧತಿಗಳಲ್ಲಿ ಸೇವೆ ಒದಗಿಸುವ ನೋಂದಾಯಿತ ಆರೋಗ್ಯ ಕೇಂದ್ರಗಳಿಗಾಗಿ ರೋಗಿಗಳು ಸುಲಭವಾಗಿ ಶೋಧಿಸಬಹುದು. ಅಂತೆಯೇ, ನಾವು ರೋಗಿಗಳಿಗೆ ʻಆಯುಷ್ಮಾನ್ ಭಾರತ್ ಆರೋಗ್ಯ ಖಾತೆ(ʻಎಬಿಎಚ್ಎ) ಸಂಖ್ಯೆಗಳನ್ನು ಹೊಂದಿದ್ದೇವೆ. ಹಾಗೆಯೇ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯಂತಹ ವೃತ್ತಿಪರರಿಗೆ ʻಆರೋಗ್ಯ ವೃತ್ತಿಪರರ ನೋಂದಣಿ (ʻಹೆಲ್ತ್‌ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ-ʻಎಚ್‌ಪಿಆರ್ʼ) ಅನ್ನು ಹೊಂದಿದ್ದೇವೆ. ಈ ರಾಷ್ಟ್ರೀಯ ನೋಂದಣಿಗಳು ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಹಾಗೂ ಕೈಗೆಟುಕುವಂತೆ ಮಾಡಲು ಸಹಾಯ ಮಾಡುತ್ತವೆ,ʼʼ ಎಂದು ಹೇಳಿದರು.
ʻಆರೋಗ್ಯ ಕೇಂದ್ರ ನೋಂದಣಿʼಯಲ್ಲಿ ನೋಂದಣಿಯಾಗುವುದರಿಂದ ಆರೋಗ್ಯ ಕೇಂದ್ರಗಳ ವಿಶ್ವಾಸಾರ್ಹ ರಾಷ್ಟ್ರೀಯ ವೇದಿಕೆಯಲ್ಲಿ ಸೇರ್ಪಡೆಯಾಗಲು ಅನುವಾಗುತ್ತದೆ ಮತ್ತು ʻಎಬಿಡಿಎಂʼ ಜೊತೆ ಹೊಂದಾಣಿಕೆಯಾಗುವ ಸಾಫ್ಟ್‌ವೇರ್ ಮೂಲಕ ಭಾರತದ ʻಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆʼಗೆ ಸಂಪರ್ಕ ಸಾಧಿಸಲು ಆರೋಗ್ಯ ಕೇಂದ್ರಗಳಿಗೆ ಸಾಧ್ಯವಾಗುತ್ತದೆ. ಇದರಿಂದ ಶೀಘ್ರದಲ್ಲೇ ಆರಂಭವಾಗಲಿರುವ ʻಯುನಿಫೈಡ್ ಹೆಲ್ತ್ ಇಂಟರ್ಫೇಸ್ʼ ಮುಖಾಂತರ ತಮಗೆ ಬೇಕಾದ ಆರೋಗ್ಯ ಕೇಂದ್ರಗಳನ್ನು ಹುಡುಕಲು ಬಯಸುವ ನಾಗರಿಕರಿಗೆ ಸಹಾಯಕವಾಗಲಿದೆ. ಆರೋಗ್ಯ ಕೇಂದ್ರಗಳು https://facility.abdm.gov.in/ ವೆಬ್‌ಸೈಟ್ ಮೂಲಕ ಅಥವಾ ವಿವಿಧ ಹೆಲ್ತ್-ಟೆಕ್ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಬಹುದು.
ಪ್ರಮಾಣೀಕೃತ ಆರೋಗ್ಯ ಕೇಂದ್ರಗಳಲ್ಲಿ, ಸುಮಾರು 97% ಸರಕಾರಿ ವಲಯಕ್ಕೆ ಸೇರಿವೆ. ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಮಾಣೀಕೃತ ಆರೋಗ್ಯ ಕೇಂದ್ರಗಳಿವೆ. ʻಎಚ್ಎಫ್ಆರ್ʼನಲ್ಲಿ ನೋಂದಣಿಗೊಂಡ ಪ್ರಮಾಣೀಕೃತ ಆರೋಗ್ಯ ಕೇಂದ್ರಗಳ ಮಾಲೀಕತ್ವ (ಸಾರ್ವಜನಿಕ ಅಥವಾ ಖಾಸಗಿ), ಅವು ಒದಗಿಸುವ ವೈದ್ಯಕೀಯ ಪದ್ಧತಿಗಳು ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶವಾರು ಕಾರ್ಯಕ್ಷಮತೆ ಮುಂತಾದ ಹೆಚ್ಚಿನ ವಿವರಗಳನ್ನು ʻಎಬಿಡಿಎಂʼ ಸಾರ್ವಜನಿಕ ಡ್ಯಾಶ್‌ಬೋರ್ಡ್ https://dashboard.abdm.gov.in/abdm/ ನಲ್ಲಿ ಲಭ್ಯವಿವೆ. ಕೋಷ್ಟಕಗಳು ಈ ರಾಷ್ಟ್ರೀಯ ಮಟ್ಟದ ನೋಂದಣಿಯ ಪ್ರಗತಿ ಕುರಿತಾದ ದೈನಂದಿನ, ಮಾಸಿಕ ಮತ್ತು ಸಮಗ್ರ ಪ್ರವೃತ್ತಿಗಳನ್ನು ಸೂಚಿಸುತ್ತವೆ.
ನೋಂದಣಿಯಲ್ಲಿರುವ ಪ್ರತಿಯೊಂದು ಆರೋಗ್ಯ ಕೇಂದ್ರವೂ ವಿಶಿಷ್ಟ ಗುರುತನ್ನು ಹೊಂದಿರುತ್ತದೆ. ʻಎಬಿಡಿಎಂʼ ಪರಿಸರ ವ್ಯವಸ್ಥೆಯಲ್ಲಿ ಅಂತಹ ಕೇಂದ್ರವನ್ನು ಪತ್ತೆ ಹಚ್ಚಲು ಹಾಗೂ ದೇಶದ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಬಗ್ಗೆ ಸಮಗ್ರ ದತ್ತಾಂಶವನ್ನು ಒದಗಿಸಲು ಇದನ್ನು ವಿಶಿಷ್ಟ ಗುರುತನ್ನು ಬಳಸಲಾಗುತ್ತದೆ. ಆರೋಗ್ಯ ಕೇಂದ್ರಗಳನ್ನು ಗುರುತಿಸಲು, ಆಯಾ ಕೇಂದ್ರಕ್ಕೆ ಸಂಬಂಧಿಸಿದ ದತ್ತಾಂಶ ಪಡೆಯಲು ಮತ್ತು ಅಂತಹ ದತ್ತಾಂಶವನ್ನು ಅಗತ್ಯ ಉದ್ದೇಶಗಳಿಗಾಗಿ ಬಳಸಲು ʻಎಬಿಡಿಎಂʼ ಜೊತೆ ಹೊಂದಾಣಿಕೆಯಾಗುವ ಸಾಫ್ಟ್‌ವೇರ್ ಪೂರೈಕೆದಾರರು ಸೇರಿದಂತೆ ಇತರ ಸಂಸ್ಥೆಗಳೂ ಈ ವಿಶಿಷ್ಟ ಗುರುತನ್ನು ಉಪಯೋಗಿಸಬಹುದಾಗಿದೆ.
*********
(Release ID: 1839708)
Visitor Counter : 180