ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಯಾವುದೇ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಸೇರಿಸುವಂತಿಲ್ಲ: ಗ್ರಾಹಕ ವ್ಯವಹಾರಗಳ ಸಚಿವಾಲಯ


ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವ ಸಂಬಂಧ ಅನುಚಿತ ವ್ಯಾಪಾರ ಪದ್ಧತಿಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ

ಗ್ರಾಹಕರು ತಮಗೆ ವಿಧಿಸಿದ ಸೇವಾ ಶುಲ್ಕದ ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (ಎನ್‌ಸಿಎಚ್) ದೂರು ಸಲ್ಲಿಸಬಹುದು

ತ್ವರಿತ ಮತ್ತು ಪರಿಣಾಮಕಾರಿ ಪರಿಹಾರಕ್ಕಾಗಿ ಇ-ದಾಖಿಲ್ ಪೋರ್ಟಲ್ ಮೂಲಕವೂ ವಿದ್ಯುನ್ಮಾನವಾಗಿ ದೂರು ಸಲ್ಲಿಸಬಹುದು

Posted On: 04 JUL 2022 5:11PM by PIB Bengaluru

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ವಿಧಿಸುವ ವಿಚಾರದಲ್ಲಿ ಅನುಚಿತ ವ್ಯಾಪಾರ ಪದ್ಧತಿಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

ʻಸಿಸಿಪಿಎʼ ಹೊರಡಿಸಿದ ಮಾರ್ಗಸೂಚಿಯು ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಆಹಾರ ಬಿಲ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸುತ್ತದೆ. ಬೇರೆ ಯಾವುದೇ ಹೆಸರಿನಿಂದಲೂ ಸೇವಾ ಶುಲ್ಕದ ಸಂಗ್ರಹ ಮಾಡುವಂತಿಲ್ಲ. ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕವನ್ನು ಪಾವತಿಸುವಂತೆ ಗ್ರಾಹಕನನ್ನು ಒತ್ತಾಯಿಸಬಾರದು. ಸೇವಾ ಶುಲ್ಕ ಪಾವತಿಯು ಸ್ವಯಂಪ್ರೇರಿತ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಗೆ ಬಿಟ್ಟದ್ದು ಎಂದು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಸೇವಾ ಶುಲ್ಕದ ಸಂಗ್ರಹದ ಆಧಾರದ ಮೇಲೆ ಗ್ರಾಹಕರಿಗೆ ಸೇವೆಗಳ ಲಭ್ಯತೆ ಅಥವಾ ಒದಗಿಸುವಿಕೆಯನ್ನು ನಿರ್ಬಂಧ ಮಾಡುವಂತಿಲ್ಲ. ಆಹಾರ ಪದಾರ್ಥಗಳ ಬಿಲ್‌ ಜೊತೆಗೆ ಅದನ್ನು ಸೇರಿಸುವ ಮೂಲಕ ಮತ್ತು ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಸೇವಾ ಶುಲ್ಕವನ್ನು ಸಂಗ್ರಹಿಸುವಂತಿಲ್ಲ. ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮಾರ್ಗಸೂಚಿಗಳನ್ನು ನೋಡಬಹುದು.

ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕವನ್ನು ವಿಧಿಸುತ್ತಿದೆ ಎಂದು ಯಾವುದೇ ಗ್ರಾಹಕರ ಗಮನಕ್ಕೆ ಬಂದರೆ, ಗ್ರಾಹಕರು ಬಿಲ್ ಮೊತ್ತದಿಂದ ಸೇವಾ ಶುಲ್ಕವನ್ನು ತೆಗೆಯುವಂತೆ ಸಂಬಂಧಪಟ್ಟ ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ವಿನಂತಿಸಬಹುದು. ಅಲ್ಲದೆ, ಗ್ರಾಹಕರು 1915 ಸಂಖ್ಯೆಗೆ ಕರೆ ಮಾಡಿ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (ಎನ್‌ಸಿಎಚ್) ದೂರು ನೀಡಬಹುದು. ಅಥವಾ ಎನ್ಸ್‌ಸಿಎಚ್ ಮೊಬೈಲ್ ತಂತ್ರಾಂಶದ ಮೂಲಕವೂ ದೂರು ನೀಡಲು ಅವಕಾಶವಿದ್ದು, ವ್ಯಾಜ್ಯ-ಪೂರ್ವ ಮಟ್ಟದಲ್ಲೇ ವಿವಾದದ ಪರಿಹಾರಕ್ಕೆ ಇದೊಂದು ಪರ್ಯಾಯ ವೇದಿಕೆಯಾಗಿದೆ.

ಗ್ರಾಹಕರು ಅನುಚಿತ ವ್ಯಾಪಾರ ಅಭ್ಯಾಸದ ವಿರುದ್ಧ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಬಹುದು. ತ್ವರಿತ ಮತ್ತು ಪರಿಣಾಮಕಾರಿ ಪರಿಹಾರಕ್ಕಾಗಿ ಇ-ದಾಖಿಲ್ ಪೋರ್ಟಲ್ www.e-daakhil.nic.in ಮೂಲಕವೂ ವಿದ್ಯುನ್ಮಾನ ಮಾರ್ಗದ ಮೂಲಕವಾಗಿ ಸಲ್ಲಿಸಬಹುದು. ಇದಲ್ಲದೆ, ʻಸಿಸಿಪಿಎʼ ತನಿಖೆ ಮತ್ತು ನಂತರದ ವಿಚಾರಣೆಗಾಗಿ ಗ್ರಾಹಕರು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬಹುದು. ದೂರನ್ನು mailto:com-ccpa[at]nic[dot]in ಇ-ಮೇಲ್ ಮೂಲಕ ʻಸಿಸಿಪಿಎʼಗೆ ಕಳುಹಿಸಬಹುದು.

ಸೇವಾ ಶುಲ್ಕ ವಿಧಿಸುವ ಬಗ್ಗೆ ಗ್ರಾಹಕರು ʻರಾಷ್ಟ್ರೀಯ ಗ್ರಾಹಕ ಸಹಾಯವಾಣಿʼಗೆ (ಎನ್‌ಸಿಎಚ್) ಹಲವಾರು ದೂರುಗಳನ್ನು ದಾಖಲಿಸಿದ್ದಾರೆ. ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನು ಕಡ್ಡಾಯಗೊಳಿಸುವುದು ಮತ್ತು ಅದನ್ನು ಪೂರ್ವನಿಯೋಜಿತವಾಗಿ ಬಿಲ್‌ನಲ್ಲಿ ಸೇರಿಸುವುದು, ಅಂತಹ ಶುಲ್ಕವನ್ನು ಪಾವತಿಸುವುದು ಐಚ್ಛಿಕ ಮತ್ತು ಸ್ವಯಂಪ್ರೇರಿತ ಎಂಬ ವಿಷಯವನ್ನು ಮರೆಮಾಚುವುದು ಹಾಗೂ ಸೇವಾ ಶುಲ್ಕವನ್ನು ಪಾವತಿಸಲು ಗ್ರಾಹಕರು ನಿರಾಕರಿಸಿದರೆ ಅವರನ್ನು ಮುಜುಗರಕ್ಕೀಡುಮಾಡುವುದು ಮುಂತಾದವು ಗ್ರಾಹಕರು ದೂರಿನಲ್ಲಿ ಎತ್ತಿರುವ ಸಮಸ್ಯೆಗಳಲ್ಲಿ ಸೇರಿವೆ.

ಸೇವಾ ಶುಲ್ಕವನ್ನು ವಿಧಿಸುವುದಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಗ್ರಾಹಕರ ಆಯೋಗಗಳು ಗ್ರಾಹಕರ ಪರವಾಗಿ ತೀಪು ನೀಡಿವೆ. ಅದನ್ನು ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ಧತಿಯಾಗಿ ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿವೆ. 

*******

 

 

 

 

 


(Release ID: 1839204) Visitor Counter : 330