ಪ್ರಧಾನ ಮಂತ್ರಿಯವರ ಕಛೇರಿ

‘ಉದ್ಯಮಿ ಭಾರತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿ


“ನಮಗೆ ಎಂಎಸ್ಎಂಇ ಎಂದರೆ-ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಗರಿಷ್ಠ ಬೆಂಬಲ ಎಂದರ್ಥ’’


“ಎಂಎಸ್ಎಂಇ ವಲಯ ಬಲವರ್ಧನೆಗೊಂಡರೆ ಇಡೀ ಸಮಾಜ ಬಲವರ್ಧನೆಯಾಗುತ್ತದೆ’’



“ಯಾವುದೇ ಉದ್ಯಮ ಬೆಳೆಯಬೇಕು ಮತ್ತು ವಿಸ್ತರಣೆಗೊಳ್ಳಬೇಕೆಂದರೆ, ಸರ್ಕಾರ ಕೇವಲ ಬೆಂಬಲ ನೀಡಿದರೆ ಸಾಲದು ನೀತಿಗಳಲ್ಲೂ ಸಹ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು’’

“ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳನ್ನು ಮೂರು ಮಾನದಂಡಗಳು ಅಂದರೆ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದ ಮೇಲೆ ಮೌಲ್ಯಮಾಪನ ಮಾಡಲಾಗುತ್ತಿದೆ’’


“ಇದೇ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ವಹಿವಾಟು ಒಂದು ಲಕ್ಷ ಕೋಟಿ ರೂ. ದಾಟಿದೆ’’



“ಪ್ರತಿಯೊಬ್ಬ ಭಾರತೀಯರೂ ಸುಲಭವಾಗಿ ಉದ್ಯಮಶೀಲರನ್ನಾಗಿ ಮಾಡುವಲ್ಲಿ ಮುದ್ರಾ ಯೋಜನೆ ಬಹುದೊಡ್ಡ ಪಾತ್ರವಹಿಸಿದೆ’’


“ಉದ್ಯಮಶೀಲತೆಯಲ್ಲಿ ಒಳಗೊಳ್ಳುವಿಕೆ ಮತ್ತು ಆರ್ಥಿಕ ಸೇರ್ಪಡೆ ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯವಾಗಿದೆ’’


“ಸರ್ಕಾರ ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಲು ಮತ್ತು ನಿಮ್ಮೊಂದಿಗೆ ಸಕ್ರಿಯವಾಗಿ ಭಾಗವಹಿಸಲು ಸರ್ಕಾರ ಬದ್ಧವಾಗಿದೆ ಎಂದು ನಾನು ಎಂಎಸ್ ಎಂಇ ವಲಯಕ್ಕೆ ಭರವಸೆ ನೀಡುತ್ತೇನೆ’’


“ಉದ್ಯಮಶೀಲ ಭಾರತದ ಪ್ರತಿಯೊಂದು ಸಾಧನೆಯೂ ನಮ್ಮನ್ನು ಆತ್ಮನಿರ್ಭರ ಭಾರತದತ್ತ ಕೊಂಡೊಯ್ಯುತ್ತದೆ. ನಿಮ್ಮ ಬಗ್ಗೆ ಮತ್ತು ನಿಮ್ಮ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇದೆ".

Posted On: 30 JUN 2022 1:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ‘ಉದ್ಯಮಿ ಭಾರತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ ಕೈಗೊಂಡಿರುವ ಪ್ರಮುಖ ಉಪಕ್ರಮಗಳಾದ ‘ಎಂಎಸ್ ಎಂಇ ಗಳ ಕಾರ್ಯಕ್ಷಮತೆ ಹೆಚ್ಚಳ ಮತ್ತು ವೇಗವರ್ಧನೆ’ (ಆರ್ ಎಎಂಪಿ)ಯೋಜನೆ, ‘ಮೊದಲ ಬಾರಿಯ ಎಂಎಸ್ ಎಂಇ ರಫ್ತುದಾರರ ಸಾಮರ್ಥ್ಯ ವೃದ್ಧಿ’ (ಸಿಬಿಎಫ್ ಟಿಇ)ಯೋಜನೆ ಮತ್ತು ‘ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮಗಳ(ಪಿಎಂಇಜಿಪಿ) ಹೊಸ ವೈಶಿಷ್ಟ್ಯಗಳಿಗೆ ಚಾಲನೆ ನೀಡಿದರು.

ಅಲ್ಲದೆ, ಪ್ರಧಾನಿ 2022-23ನೇ ಸಾಲಿನಲ್ಲಿ ಪಿಎಂಇಜಿಪಿ ಫಲಾನುಭವಿಗಳಿಗೆ ಸಹಾಯ ಧನವನ್ನು ಡಿಜಿಟಲ್ ಮೂಲಕ ವರ್ಗಾವಣೆ ಮಾಡಿದರು; ಎಂಎಸ್ಎಂಇ ಐಡಿಯಾ ಹ್ಯಾಕಥಾನ್ 2022 ರ ಫಲಿತಾಂಶ ಪ್ರಕಟಿಸಿದರು; ರಾಷ್ಟ್ರೀಯ ಎಂಎಸ್ಎಂಇ 2022 ಪ್ರಶಸ್ತಿಗಳನ್ನು ವಿತರಿಸಿದರು; ಮತ್ತು ಸ್ವಾವಲಂಬಿ ಭಾರತ ನಿಧಿ (ಎಸ್ ಆರ್ ಐ) ಯಡಿಯಲ್ಲಿ 75 ಎಂಎಸ್ ಎಂಇಗಳಿಗೆ ಡಿಜಿಟಲ್ ಇಕ್ವಿಟಿ ಪ್ರಮಾಣಪತ್ರ ವಿತರಿಸಿದರು. ಕೇಂದ್ರ ಸಚಿವರಾದ ಶ್ರೀ ನಾರಾಯಣ ರಾಣೆ ಮತ್ತು ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ, ದೇಶದ ಎಲ್ಲ ಭಾಗಗಳ ಎಂಎಸ್ ಎಂಇ ಪಾಲುದಾರರು ಮತ್ತು ವಿವಿಧ ದೇಶಗಳ ರಾಯಭಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಎಂಎಸ್ಎಂಇ ಪ್ರಯತ್ನಗಳು ಆತ್ಮನಿರ್ಭರ ಭಾರತದ ಪ್ರಮುಖ ಚಾಲಕ ಶಕ್ತಿಯಾಗಲಿವೆ ಎಂದು ಹೇಳಿದರು. 21ನೇ ಶತಮಾನದ ಭಾರತವು ಎಷ್ಟು ಎತ್ತರಕ್ಕೆ ಬೇಕಾದರೂ ಏರುತ್ತದೆ, ಸಾಧನೆ ಮಾಡುತ್ತದೆ ಎಂದರೆ ಅದು ಎಂಎಸ್ ಎಂಇ ವಲಯದ ಯಶಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು. ಭಾರತದ ರಫ್ತು ಪ್ರಮಾಣ ಹೆಚ್ಚಿಸಲು ಮತ್ತು ಭಾರತದ ಉತ್ಪನ್ನಗಳು ಹೊಸ ಮಾರುಕಟ್ಟೆಗಳನ್ನು ತಲುಪುವಂತೆ ಮಾಡುವುದು, ಭಾರತದ ಎಂಎಸ್ಎಂಇ ವಲಯವು ಬಲಿಷ್ಠವಾಗು ಬೆಳೆಯುವುದು ಮುಖ್ಯವಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. “ನಮ್ಮ ಸರ್ಕಾರವು ನಿಮ್ಮ ಸಾಮರ್ಥ್ಯ ಮತ್ತು ಈ ಕ್ಷೇತ್ರದ ಅಪಾರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಹೊಸ ನೀತಿಗಳನ್ನು ರೂಪಿಸುತ್ತಿದೆ’’ ಎಂದು ಅವರು ಹೇಳಿದರು. ಇಂದು ಚಾಲನೆ ನೀಡಿದ ಉಪಕ್ರಮಗಳು ಮತ್ತು ಸರ್ಕಾರವು ಕೈಗೊಂಡ ಇತರ ಕ್ರಮಗಳು ಎಂಎಸ್ಎಂಇ ಗಳ ಗುಣಮಟ್ಟ ಮತ್ತು ಪ್ರೊತ್ಸಾಹದೊಂದಿಗೆ ಸಂಯೋಜನೆಗೊಂಡಿವೆ ಎಂದು ಅವರು ಹೇಳಿದರು. 

ನಾವು ಎಂಎಸ್ಎಂಇ ಬಗ್ಗೆ ಮಾತನಾಡುವಾಗ, ಅದು ತಾಂತ್ರಿಕ ಭಾಷೆಯಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಿಸ್ತೃತ ರೂಪವಾಗಿದೆ ಎಂದು ಎಂದು ಪ್ರಧಾನಿ ಉಲ್ಲೇಖಿಸಿದರು. ಆದರೆ ಈ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಭಾರತದ ಬೆಳವಣಿಗೆಯ ಪಯಣದ ಬಹುದೊಡ್ಡ ಆಧಾರ ಸ್ತಂಭವಾಗಿದೆ. ಎಂಎಸ್ಎಂಇ ವಲಯವು ಭಾರತದ ಆರ್ಥಿಕತೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಎಂಎಸ್ಎಂಇ ವಲಯವನ್ನು ಬಲವರ್ಧನೆಗೊಳಿಸುವುದು ಇಡೀ ಸಮಾಜವನ್ನು ಬಲವರ್ಧನೆಪಡಿಸಿದಂತೆ, ಪ್ರತಿಯೊಬ್ಬರಿಗೂ ಅಭಿವೃದ್ಧಿಯ ಪ್ರಯೋಜನಗಳನ್ನು ತಲುಪಿಸುತ್ತದೆ. ಅದಕ್ಕಾಗಿಯೇ ಈ ಕ್ಷೇತ್ರವು ಸರ್ಕಾರದ ಅಗ್ರ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. 

ಕಳೆದ ಎಂಟು ವರ್ಷಗಳಲ್ಲಿ ಎಂಎಸ್ಎಂಇ ವಲಯದ ಬಲವರ್ಧನೆಗೆ ಸರ್ಕಾರವು ಬಜೆಟ್ ಹಂಚಿಕೆಯನ್ನು ಶೇ.650 ಕ್ಕಿಂತ ಅಧಿಕಗೊಳಿಸಿದೆ ಎಂದು ಪ್ರಧಾನಿ ಹೇಳಿದರು. “ನಮಗೆ, ಎಂಎಸ್ಎಂಇ ಎಂದರೆ – ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗರಿಷ್ಠ ಬೆಂಬಲ’’ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. 

ಈ ವಲಯದೊಂದಿಗೆ 11 ಕೋಟಿಗೂ ಹೆಚ್ಚು ಜನರು ಸಂಪರ್ಕ ಹೊಂದಿದ್ದಾರೆಂಬುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಉದ್ಯೋಗ ಸೃಷ್ಟಿಗೆ ಎಂಎಸ್ಎಂಇ ನಿರ್ಣಾಯಕವಾಗಿದೆ ಎಂದು ಪ್ರಸಂಶಿಸಿದರು. ಸಾಂಕ್ರಾಮಿಕ ಸಮಯದಲ್ಲಿ ಸಣ್ಣ ಉದ್ಯಮಗಳನ್ನು ಉಳಿಸಲು ಮತ್ತು ಅವರಿಗೆ ಹೊಸ ಶಕ್ತಿಯನ್ನು ನೀಡಲು ಸರ್ಕಾರ ನಿರ್ಧರಿಸಿತು. ತುರ್ತು ಸಾಲ ಮಾರ್ಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರವು ಎಂಎಸ್ಎಂಇಗಳಿಗೆ 3.5 ಲಕ್ಷ ಕೋಟಿ ರೂ. ಸಾಲ ಖಾತ್ರಿಪಡಿಸಿದೆ ಎಂದು ಅವರು ಹೇಳಿದರು. ವರದಿಗಳ ಪ್ರಕಾರ, ಇದು ಸುಮಾರು 1.5 ಕೋಟಿ ಉದ್ಯೋಗಗಳನ್ನು ಉಳಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಭಾರತದ ಸ್ವಾತಂತ್ರೋತ್ಸವ ‘ಅಮೃತ್ ಕಾಲ’ದ ಸಂಕಲ್ಪಗಳನ್ನು ಸಾಧಿಸಲು ಎಂಎಸ್ಎಂಇ ಪ್ರಮುಖ ಮಾಧ್ಯಮವಾಗಿದೆ ಎಂದು ಹೇಳಿದರು. 

ಹಿಂದಿನ ಸರ್ಕಾರಗಳು ಈ ಕ್ಷೇತ್ರದ ಮಹತ್ವವನ್ನು ಗುರುತಿಸದೇ ಮತ್ತು ಸಣ್ಣ ಉದ್ಯಮವನ್ನು ಸಣ್ಣದಾಗಿಯೇ ಇರಿಸುವ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕ್ಷೇತ್ರವನ್ನು ಮೂಲೆಗುಂಪು ಮಾಡಿದ್ದ ಕಾಲವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. ಇದನ್ನು ಪರಿಹರಿಸಲು, ಎಂಎಸ್ಎಂಇ ಯ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ. ಯಾವುದೇ ಉದ್ಯಮವು ಬೆಳೆಯಲು ಮತ್ತು ವಿಸ್ತರಿಸಲು ಬಯಸಿದರೆ, ಸರ್ಕಾರವು ಅದನ್ನು ಬೆಂಬಲಿಸುವುದು ಮಾತ್ರವಲ್ಲದೆ ನೀತಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಸಹ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಜಿಇಎಂನಲ್ಲಿ ಸರ್ಕಾರಕ್ಕೆ ಸರಕು ಮತ್ತು ಸೇವೆಗಳನ್ನು ಒದಗಿಸಲು ಎಂಎಸ್ಎಂಇ ಅತ್ಯಂತ ಬಲಿಷ್ಠ ವೇದಿಕೆಯನ್ನು ಒದಗಿಸಿದೆ ಎಂದು ಪ್ರಧಾನಮಂತ್ರಿ ಗಮನ ಸೆಳೆದರು. ಅವರು ಜಿಇಎಂ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರತಿ ಎಂಎಸ್ಎಂಇಳಿಗೆ ಮನವಿ ಮಾಡಿದರು. ಅಂತೆಯೇ, 200 ಕೋಟಿಗಿಂತ ಕಡಿಮೆ ಮೌಲ್ಯದ ಯೋಜನೆಗಳಿಗೆ ಜಾಗತಿಕ ಟೆಂಡರ್ ಕರೆಯುವುದನ್ನು ನಿಷೇಧ ಮಾಡಿರುವುದೂ ಸಹ ಎಂಎಸ್ಎಂಇಗಳಿಗೆ ಸಹಾಯಕವಾಗುತ್ತದೆ ಎಂದರು.

ರಫ್ತು ಪ್ರಮಾಣ ಹೆಚ್ಚಿಸಲು ಎಂಎಸ್ಎಂಇಗೆ ಸಹಾಯ ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಎಂಬ ಮೂರು ಮಾನದಂಡಗಳ ಮೇಲೆ ಕಚೇರಿಗಳ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 

2008-2012ರ ನಡುವಿನ ಅವಧಿಯಲ್ಲಿ ತನ್ನ ಗುರಿಗಳನ್ನು ಸಾಧಿಸಲು ಸಾಧ್ಯವಾಗದ ಕಾರಣ 2014 ರ ನಂತರ ಪ್ರಧಾನಮಂತ್ರಿ ರೋಜ್ಗಾರ್ ಸೃಜನ್ ಕಾರ್ಯಕ್ರಮವನ್ನು ನವೀಕರಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 2014 ರಿಂದ ಈ ಕಾರ್ಯಕ್ರಮದಡಿಯಲ್ಲಿ 40 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಈ ಅವಧಿಯಲ್ಲಿ 14 ಸಾವಿರ ಕೋಟಿ ರೂಪಾಯಿ ಮೌಲ್ಯದ ಹಣಕಾಸು ಸಬ್ಸಿಡಿಯನ್ನು ಈ ಉದ್ಯಮಗಳಿಗೆ ಒದಗಿಸಲಾಗಿದೆ. ಈ ಯೋಜನೆಯಲ್ಲಿ ಬೀಳುವ ಉತ್ಪನ್ನಗಳ ವೆಚ್ಚದ ಮಿತಿಯನ್ನು ಸಹ ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದರು. 

ಎಲ್ಲವನ್ನೂ ಒಳಗೊಂಡ ಅಭಿವೃದ್ಧಿ ಕುರಿತು ಮಾತನಾಡಿದ ಪ್ರಧಾನಮಂತ್ರಿ, ತೃತೀಯ ಲಿಂಗಿ ಉದ್ಯಮಿಗಳಿಗೆ ಅವರ ಗುರಿಗಳನ್ನು ಸಾಧಿಸಲು ಎಲ್ಲಾ ಸಹಾಯ ಒದಗಿಸಲಾಗುತ್ತಿದೆ ಎಂದರು. 

ಇದೇ ಮೊದಲ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗದ ವಹಿವಾಟು 1 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. “ಗ್ರಾಮಗಳಲ್ಲಿನ ನಮ್ಮ ಸಣ್ಣ ಉದ್ಯಮಿಗಳು ಮತ್ತು ನಮ್ಮ ಸಹೋದರಿಯರು ತುಂಬಾ ಶ್ರಮಿಸಿದ್ದರಿಂದ ಇದು ಸಾಧ್ಯವಾಗಿದೆ. ಕಳೆದ 8 ವರ್ಷಗಳಲ್ಲಿ ಖಾದಿ ಮಾರಾಟ ಪ್ರಮಾಣ 4 ಪಟ್ಟು ಹೆಚ್ಚಾಗಿದೆ’’ ಎಂದರು. 

ಖಾತರಿಯಿಲ್ಲದೆ ಸಾಲ ಪಡೆಯಲು ಆಗುತ್ತಿದ್ದ ತೊಂದರೆಗಳು ಸಮಾಜದ ದುರ್ಬಲ ವರ್ಗಗಳಿಗೆ ಉದ್ಯಮಶೀಲತೆಯ ಹಾದಿಯಲ್ಲಿ ನಡೆಯಲು ಪ್ರಮುಖ ಅಡಚಣೆಯಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. 2014 ರ ನಂತರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮೂಲಕ ಉದ್ಯಮಶೀಲತೆಯ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಮುದ್ರಾ ಯೋಜನೆಯು ಪ್ರತಿಯೊಬ್ಬ ಭಾರತೀಯನ ಉದ್ಯಮಶೀಲತೆಯನ್ನು ಸುಲಭಗೊಳಿಸುವಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಅವರು ಹೇಳಿದರು. ಖಾತ್ರಿಯಿಲ್ಲದ ಬ್ಯಾಂಕ್ ಸಾಲದ ಈ ಯೋಜನೆಯು ದೇಶದಲ್ಲಿ ಮಹಿಳಾ ಉದ್ಯಮಿಗಳು, ದಲಿತ, ಹಿಂದುಳಿದ, ಆದಿವಾಸಿ ಉದ್ಯಮಿಗಳ ದೊಡ್ಡ ವಲಯವನ್ನೇ ಸೃಷ್ಟಿಸಿದೆ. ಈ ಯೋಜನೆಯಡಿ ಈವರೆಗೆ ಸುಮಾರು 19 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. ಸಾಲಗಾರರಲ್ಲಿ ಮೊದಲ ಬಾರಿಗೆ ಉದ್ಯಮವನ್ನು ಪ್ರಾರಂಭಿಸಿದ, ಹೊಸ ಉದ್ಯಮಿಗಳಾಗಿ ಮಾರ್ಪಟ್ಟಿರುವ ಸುಮಾರು 7 ಕೋಟಿ ಉದ್ಯಮಿಗಳಿದ್ದಾರೆ ಎಂದು ಅವರು ಹೇಳಿದರು. ಉದ್ಯಮ ಪೋರ್ಟಲ್ನಲ್ಲಿಯೂ ಸಹ ನೋಂದಣಿಯಾದವರಲ್ಲಿ ಶೇಕಡ 18 ಕ್ಕಿಂತ ಹೆಚ್ಚು ಮಹಿಳಾ ಉದ್ಯಮಿಗಳಿದ್ದಾರೆ ಎಂದು ಅವರು ಉಲ್ಲೇಖಿಸಿದರು. “ಉದ್ಯಮಶೀಲತೆಯಲ್ಲಿ ಈ ಒಳಗೊಳ್ಳುವಿಕೆ ಮತ್ತು ಈ ಆರ್ಥಿಕ ಸೇರ್ಪಡೆ ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯ ಲಭಿಸಿದಂತಾಗಿದೆ’’ ಎಂದು ಅವರು ಹೇಳಿದರು. 

“ಇಂದು ಈ ಕಾರ್ಯಕ್ರಮದ ಮೂಲಕ ನಿಮ್ಮ ಅಗತ್ಯಗಳನ್ನು ಪೂರೈಸುವ ಮತ್ತು ನಿಮ್ಮೊಂದಿಗೆ ಸಕ್ರಿಯವಾಗಿ ನಡೆಯುವ ನೀತಿಗಳನ್ನು ರೂಪಿಸಲು ಸರ್ಕಾರವು ಬದ್ಧವಾಗಿದೆ’’ ಎಂದು ಎಂಎಸ್ಎಂಇ ವಲಯಕ್ಕೆ ಸಂಬಂಧಿಸಿದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ಭರವಸೆ ನೀಡುತ್ತಿದ್ದೇನೆ. ಉದ್ಯಮಶೀಲ ಭಾರತದ ಪ್ರತಿಯೊಂದು ಸಾಧನೆಯೂ ನಮ್ಮನ್ನು ಸ್ವಾವಲಂಬಿ ಭಾರತದತ್ತ ಕೊಂಡೊಯ್ಯುತ್ತದೆ. ನಿಮ್ಮನ್ನು ಮತ್ತು ನಿಮ್ಮ ಸಾಮರ್ಥ್ಯವನ್ನು ನಾನು ನಂಬುತ್ತೇನೆ.  

ಕಾರ್ಯಕ್ರಮದ ಹಿನ್ನೆಲೆ: 

‘ಉದ್ಯಮಿ ಭಾರತ್’ ಎಂಎಸ್ಎಂಇಗಳ ಸಬಲೀಕರಣಕ್ಕಾಗಿ ಮೊದಲ ದಿನದಿಂದಲೇ ಕೆಲಸ ಮಾಡುವ ಸರ್ಕಾರದ ನಿರಂತರ ಬದ್ಧತೆ ಪ್ರತಿಬಿಂಬಿಸುತ್ತದೆ. ಸರ್ಕಾರವು ಕಾಲಕಾಲಕ್ಕೆ ಮುದ್ರಾ ಯೋಜನೆ, ತುರ್ತು ಸಾಲ ಖಾತ್ರಿ ಯೋಜನೆ, ಸಾಂಪ್ರದಾಯಿಕ ಗುಡಿ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ ನಿಧಿ ಯೋಜನೆ (ಎಸ್ಎಫ್ ಯುಆರ್ ಟಿಐ) ಮತ್ತಿತರ ಹಲವು ಉಪಕ್ರಮ ಆರಂಭಿಸಿದೆ, ಇದು ದೇಶಾದ್ಯಂತ ಕೋಟ್ಯಾಂತರ ಜನರಿಗೆ ಅನುಕೂಲಕಾರಿಯಾಗಿರುವ ಎಂಎಸ್ಎಂಇ ವಲಯಕ್ಕೆ ಅಗತ್ಯ ಮತ್ತು ಸಮಯೋಚಿತ ಬೆಂಬಲ ನೀಡಲು ಸಹಾಯ ಮಾಡಿದೆ.

ಸುಮಾರು 6000 ಕೋಟಿ ರೂಪಾಯಿಗಳ ವೆಚ್ಚದ ‘ಎಂಎಸ್ ಎಂಇ ಗಳ ಕಾರ್ಯಕ್ಷಮತೆ ಹೆಚ್ಚಳ ಮತ್ತು ವೇಗ ವರ್ಧನೆ’ (ಆರ್ ಎಎಂಪಿ ) ಯೋಜನೆಯಡಿ ಹಾಲಿ ಅಸ್ತಿತ್ವದಲ್ಲಿರುವ ಎಂಎಸ್ಎಂಇ ಯೋಜನೆಗಳ ವೇಗವರ್ಧನೆಯೊಂದಿಗೆ ರಾಜ್ಯಗಳಲ್ಲಿ ಎಂಎಸ್ಎಂಇ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾಗಿ ನಾವೀನ್ಯತೆ, ಹೊಸ ಚಿಂತನೆಗಳನ್ನು ಪ್ರೋತ್ಸಾಹಿಸುವುದು, ಗುಣಮಟ್ಟದ ಮಾನದಂಡ ಅಭಿವೃದ್ಧಿಪಡಿಸುವುದು, ಪದ್ದತಿ ಮತ್ತು ಪ್ರಕ್ರಿಯೆ ಸುಧಾರಿಸುವುದು, ಮಾರುಕಟ್ಟೆ ಲಭ್ಯತೆ ವೃದ್ಧಿಸುವುದು, ತಾಂತ್ರಿಕ ಪರಿಕರಗಳನ್ನು ನಿಯೋಜಿಸುವುದು ಮತ್ತು ಉದ್ಯಮ 4.0ಗಾಗಿ ಎಂಎಸ್ಎಂಇ ಗಳನ್ನು ಸ್ವಯಂ-ಸ್ಪರ್ಧಾತ್ಮಕ ಮತ್ತು ಸ್ವಯಂ-ಸ್ಪರ್ಧಾತ್ಮಕವಾಗಿಸುವ ಮೂಲಕ ಹೊಸ ವ್ಯಾಪಾರ ಮತ್ತು ಉದ್ಯಮಶೀಲತೆ ಉತ್ತೇಜಿಸಲಾಗುವುದು. 

‘ಮೊದಲ ಬಾರಿಯ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವೃದ್ಧಿ’ (ಸಿಬಿಎಫ್ ಟಿಇ) ಯೋಜನೆಯು ಜಾಗತಿಕ ಮಾರುಕಟ್ಟೆಗೆ ಅಂತರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು ಎಂಎಸ್ಎಂಇ ಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಜಾಗತಿಕ ಮೌಲ್ಯ ಸರಣಿಯಲ್ಲಿ ಭಾರತೀಯ ಎಂಎಸ್ಎಂಇಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅವರ ರಫ್ತು ಸಾಮರ್ಥ್ಯ ಅರ್ಥೈಸಿಕೊಳ್ಳಲು ನೆರವಾಗುತ್ತದೆ. 

‘ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮಗಳ(ಪಿಎಂಇಜಿಪಿ)’ ಹೊಸ ವೈಶಿಷ್ಟ್ಯಗಳಲ್ಲಿ ಉತ್ಪಾದನಾ ವಲಯಕ್ಕೆ ಗರಿಷ್ಠ ಯೋಜನಾ ವೆಚ್ಚವನ್ನು 50 ಲಕ್ಷ ರೂ.ಗಳಿಗೆ (25 ಲಕ್ಷ ರೂ.ಗಳಿಂದ) ಮತ್ತು ಸೇವಾ ವಲಯದಲ್ಲಿ 20 ಲಕ್ಷ ರೂ.ಗಳಿಗೆ (10 ಲಕ್ಷ ರೂ.ಗಳಿಂದ) ಹೆಚ್ಚಳ ಮಾಡುವುದು ಮತ್ತು ಹೆಚ್ಚಿನ ಸಬ್ಸಿಡಿಗಳನ್ನು ಪಡೆಯಲು ವಿಶೇಷ ವರ್ಗದ ಅರ್ಜಿದಾರರಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ತೃತೀಯ ಲಿಂಗಿಗಳ ಅರ್ಜಿದಾರರನ್ನು ಸೇರಿಸುವ ಅಂಶಗಳು ಒಳಗೊಂಡಿವೆ. ಅಷ್ಟೇ ಅಲ್ಲದೆ, ಬ್ಯಾಂಕಿಂಗ್, ತಾಂತ್ರಿಕ ಮತ್ತು ಮಾರುಕಟ್ಟೆ ತಜ್ಞರ ತೊಡಗಿಸಿಕೊಳ್ಳುವಿಕೆಯ ಮೂಲಕ ಅರ್ಜಿದಾರರು/ಉದ್ಯಮಿಗಳ ಕೈ ಹಿಡಿದು ಬೆಂಬಲ ನೀಡಲಾಗುವುದು. 

ಎಂಎಸ್ಎಂಇ ಐಡಿಯಾ ಹ್ಯಾಕಥಾನ್ 2022, ವ್ಯಕ್ತಿಗಳಲ್ಲಿ ಬಳಕೆಯಾಗದ ಸೃಜನಶೀಲತೆ ಉತ್ತೇಜಿಸುವ ಮತ್ತು ಬೆಂಬಲಿಸುವ ಗುರಿಯನ್ನು ಹೊಂದಿದೆ, ಎಂಎಸ್ಎಂಇ ಗಳಲ್ಲಿ ಆಧುನಿಕ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳ ಅಳವಡಿಕೆ ಉತ್ತೇಜಿಸಲಾಗುವುದು. ಆಯ್ಕೆಮಾಡಿದ ಸಂಪೋಷಣಾ (ಇನ್ಕ್ಯುಬೇಟಿ) ಆಲೋಚನೆಗಳಿಗೆ, ಪ್ರತಿ ಅನುಮೋದಿತ ಚಿಂತನೆಗೆ 15 ಲಕ್ಷ ರೂ.ವರೆಗೆ ನಿಧಿಯ ಬೆಂಬಲವನ್ನು ಒದಗಿಸಲಾಗುವುದು. 

ರಾಷ್ಟ್ರೀಯ ಎಂಎಸ್ಎಂಇ ಪ್ರಶಸ್ತಿ 2022, ಭಾರತದ ಸಕ್ರಿಯ ಎಂಎಸ್ಎಂಇ ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಅದರ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಕೊಡುಗೆ ನೀಡಿದ ಎಂಎಸ್ಎಂಇಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಆಶೋತ್ತರ ಜಿಲ್ಲೆಗಳು ಮತ್ತು ಬ್ಯಾಂಕ್ಗಳನ್ನು ಗುರುತಿಸಿ ಗೌರವಿಸುವುದಾಗಿದೆ.

 

*******



(Release ID: 1838235) Visitor Counter : 204