ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಅವರು ಮಾಡುದ ಭಾಷಣದ ಅನುವಾದ.

Posted On: 20 JUN 2022 10:04PM by PIB Bengaluru

ಎಲ್ಲರಿಗೂ ನಮಸ್ಕಾರಗಳು !!


ಸುತ್ತೂರು ಸಂಸ್ಥಾನವು ಬೋಧನೆ, ಸಮಾಜಸೇವೆ, ಅನ್ನ ದಾಸೋಹಕ್ಕೆ ಹೆಸರಾಗಿರುವ ವಿಶ್ವ ವಿಖ್ಯಾತ ಸಂಸ್ಥೆಯಾಗಿದೆ. ಈ ಕ್ಷೇತ್ರಕ್ಕೆ ಆಗಮಿಸಿರುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ. 
ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ, ಶ್ರೀ ಸಿದ್ಧೇಶ್ವರ ಮಹಾಸ್ವಾಮಿಜಿ, ಶ್ರೀ ಸಿದ್ದಲಿಂಗ ಮಹಾಸ್ವಾಮಿ ಜಿ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಜಿ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಪ್ರಲ್ಹಾದ ಜೋಶಿ ಜಿ, ಕರ್ನಾಟಕ ಸರ್ಕಾರದ ಸಚಿವರು, ಸಂಸದರು, ಶಾಸಕರು, ಸುತ್ತೂರು ಮಠದೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಭಕ್ತರೇ ಮತ್ತು ನಮ್ಮನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದ ಎಲ್ಲ ಪೂಜ್ಯ ಸಂತರೇ.. !
ಮೈಸೂರಿನ ಅಧಿದೇವತೆ ಮಾತೆ ಚಾಮುಂಡೇಶ್ವರಿ ದೇವಿಗೆ ನಾನು ನಮಿಸುತ್ತೇನೆ, ಆ ತಾಯಿಯ ಆಶೀರ್ವಾದದಿಂದಾಗಿ ಮೈಸೂರಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ ಮತ್ತು ಇದೀಗ ಎಲ್ಲಾ ಸಂತರ ನಡುವೆ ಈ ಪುಣ್ಯ ಕಾರ್ಯಕ್ರಮದಲ್ಲಿ ಎಲ್ಲರ ಆಶೀರ್ವಾದ ಪಡೆಯುವ ಅವಕಾಶ ದೊರೆತಿರುವುದು ನನ್ನ ಪುಣ್ಯ. ನಾನು ಕೂಡ ಚಾಮುಂಡೇಶ್ವರಿ ಮಾತೆಯ ಆಶೀರ್ವಾದ ಪಡೆಯಲು ಅಲ್ಲಿಗೆ ತೆರಳಲಿದ್ದೇನೆ. ಈ ಆಧ್ಯಾತ್ಮಿಕ ಸಂದರ್ಭದಲ್ಲಿ, ಈ ಮಠದ ಶ್ರೇಷ್ಠ ಪರಂಪರೆಯನ್ನು ಮುಂದುವರಿಸುವುದಕ್ಕಾಗಿ ನಾನು ಶ್ರೀ ಸುತ್ತೂರು ಮಠದ ಸಂತರು, ಆಚಾರ್ಯರು ಮತ್ತು ಋಷಿಮುನಿಗಳಿಗೆ ನಮಸ್ಕರಿಸುತ್ತೇನೆ.  ಈ ಆಧ್ಯಾತ್ಮಿಕ ವೃಕ್ಷದ ಬೀಜವನ್ನು ನೆಟ್ಟ ಆದಿಜಗದ್ಗುರು ಶಿವರಾತ್ರಿ ಶಿವಯೋಗಿ ಮಹಾಸ್ವಾಮಿಗಳವರಿಗೆ ನಾನು ವಿಶೇಷವಾಗಿ  ನಮಿಸುತ್ತೇನೆ. ಇಂದು ಸುತ್ತೂರು ಮಠದ ಹಾಲಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ ಮಾರ್ಗದರ್ಶನದಲ್ಲಿ ಜ್ಞಾನ ಮತ್ತು ಆಧ್ಯಾತ್ಮಿಕತೆಯ ಶ್ರೇಷ್ಠ ಪರಂಪರೆಯು ಅರಳುತ್ತಿದೆ. ಶ್ರೀಮಂತ್ರ ಮಹರ್ಷಿಗಳು ಆರಂಭಿಸಿದ ಶಾಲೆಯು ಶ್ರೀ ರಾಜೇಂದ್ರ ಮಹಾಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಇಂತಹ ಬಹು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿದೆ.  ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಶಿಕ್ಷಣಕ್ಕಾಗಿ ಈ ಶಾಲೆಯ ನೂತನ ಕಟ್ಟಡವು ಇಂದು ಉದ್ಘಾಟನೆಯಾಗಿದೆ. ಈ ಆಧುನಿಕ ಮತ್ತು ಭವ್ಯ ಕಟ್ಟಡದ ರೂಪದಲ್ಲಿ ಈ ಸಂಸ್ಥೆಯು ಉತ್ತಮ ಭವಿಷ್ಯ ರೂಪಿಸುವ ತನ್ನ ಸಂಕಲ್ಪವನ್ನು ಇನ್ನಷ್ಟು ವಿಸ್ತರಿಸುತ್ತದೆಂಬ ಖಾತ್ರಿ ನನಗಿದೆ. ಇಂತಹ ನವೀನ ಪ್ರಯತ್ನಗಳಿಗಾಗಿಯೂ ಸಹ ಕೂಡ ಶಿರಬಾಗಿ ಎಲ್ಲರನ್ನೂ ಅಭಿನಂದಿಸುತ್ತೇನೆ. ನಾನು  ಶುಭ ಕೋರುತ್ತೇನೆ. 
ಮಿತ್ರರೇ,
ಇಂದು ನನಗೆ ಶ್ರೀ ಸಿದ್ಧೇಶ್ವರ ಸ್ವಾಮಿಜಿ ಅವರ ನಾರದ ಭಕ್ತಿ ಸೂತ್ರ, ಶಿವ ಸೂತ್ರ ಮತ್ತು ಪತಂಜಲಿ ಯೋಗ ಸೂತ್ರದ ವ್ಯಾಖ್ಯಾನಗಳನ್ನು ಲೋಕಾರ್ಪಣೆಗೊಳಿಸುವ ಅವಕಾಶ ಸಿಕ್ಕಿದೆ. ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿ ಜೀ ಅವರು ಭಾರತದ ಪ್ರಾಚೀನ ಋಷಿ ಪರಂಪರೆಯನ್ನು ಪ್ರತಿನಿಧಿಸುತ್ತಾರೆ, ಅದನ್ನು ಧರ್ಮಗ್ರಂಥಗಳಲ್ಲಿ ಶ್ರುತ ಸಂಪ್ರದಾಯ ಎಂದು ಕರೆಯಲಾಗುತ್ತದೆ. ಶ್ರುತ ಸಂಪ್ರದಾಯ ಎಂದರೆ ನಾವು ಕೇಳುವುದನ್ನು ಮನದಲ್ಲಿ ಮತ್ತು ಹೃದಯದಲ್ಲಿ ತುಂಬಿಕೊಳ್ಳುವುದು.
ವಿಶ್ವ ಯೋಗ ದಿನದ ಸಂದರ್ಭದಲ್ಲಿ, ಪತಂಜಲಿ ಯೋಗ ಸೂತ್ರ, ನಾರದ ಭಕ್ತಿ ಸೂತ್ರ ಮತ್ತು ಶಿವ ಸೂತ್ರದ ವ್ಯಾಖ್ಯಾನದ ಮೂಲಕ ಭಕ್ತಿ ಯೋಗ ಮತ್ತು ಜ್ಞಾನ ಯೋಗವನ್ನು ಸುಲಭವಾಗಿ ತಿಳಿಯುವಂತೆ ಮಾಡುವ ಈ ಪ್ರಯತ್ನದಿಂದ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಪ್ರಯೋಜನವಾಗುತ್ತದೆ.ನಾನು ಇಂದು ನಿಮ್ಮೆಲ್ಲರ ಮಧ್ಯೆ ಇರುವಾಗ, ಕಳೆದ ನಾಲ್ಕೈದು ಶತಮಾನಗಳಲ್ಲಿ ಜಗತ್ತಿನಲ್ಲಿ ಸಮಾಜ ವಿಜ್ಞಾನದ ಬಗ್ಗೆ ಏನು ಬರೆಯಲಾಗಿದೆಯೋ ಅದನ್ನು ಅಧ್ಯಯನ ಮಾಡಲು ಕರ್ನಾಟಕದ ವಿದ್ವಾಂಸರಲ್ಲಿ ವಿನಂತಿಸುತ್ತೇನೆ ಮತ್ತು ಅವರು ನಾರದ ಸೂತ್ರವು ಹಳೆಯದು ಎಂಬುದನ್ನು ಕಂಡುಕೊಳ್ಳಲಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನಾವು ಸಮಾಜ ವಿಜ್ಞಾನದ ಅತ್ಯುತ್ತಮ ಮೂಲವನ್ನು ಹೊಂದಿದ್ದೇವೆ. ಅದನ್ನು ಪ್ರಪಂಚ ಒಮ್ಮೆ ಅಧ್ಯಯನ ಮಾಡುವುದು ಅತ್ಯಂತ ಅಗತ್ಯವಾಗಿದೆ. ಪಾಶ್ಚಿಮಾತ್ಯರ ವಿಚಾರಗಳನ್ನು ಬಲ್ಲವರು ನಾರದ ಸೂತ್ರದ ಮೂಲಕ ಅಂದಿನ ಸಾಮಾಜಿಕ ವ್ಯವಸ್ಥೆ ಮತ್ತು ಮಾನವೀಯ ಮೌಲ್ಯಗಳನ್ನು ನೋಡಬೇಕು. ಈ ಅದ್ಭುತವಾದ ನಾರದ ಸೂತ್ರವನ್ನು ಆಧುನಿಕ ವ್ಯಾಖ್ಯಾನದಲ್ಲಿ ವಿಶ್ಲೇಷಿಸಲಾಗಿದೆ. ಆ ಮೂಲಕ ಸಮಾಜಕ್ಕೆ ನೀವು ಅತಿ ದೊಡ್ಡ ಸೇವೆ ಸಲ್ಲಿಸಿದ್ದೀರಿ. 
ಮಿತ್ರರೇ,
ಜ್ಞಾನಕ್ಕಿಂತ ಪವಿತ್ರವಾದದ್ದು ಯಾವುದೂ ಇಲ್ಲ ಮತ್ತು ಜ್ಞಾನಕ್ಕೆ ಪರ್ಯಾಯವಿಲ್ಲ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಆದ್ದರಿಂದ, ನಮ್ಮ ಋಷಿಗಳು ಮತ್ತು ಅತೀಂದ್ರಿಯರು ಆ ಪ್ರಜ್ಞೆಯೊಂದಿಗೆ ಭಾರತವನ್ನು ಸೃಷ್ಟಿಸಿದ್ದಾರೆ - ಜ್ಞಾನದಿಂದ ಪ್ರೇರಿತರಾಗಿ ಮತ್ತು ವಿಜ್ಞಾನದಿಂದ ಸಾಕಾರಗೊಂಡಿದ್ದು, ಅದು ಅರ್ಥ ಮಾಡಿಕೊಳ್ಳುವುದರಿಂದ ಬೆಳೆಯುತ್ತಿದೆ ಮತ್ತು ಸಂಶೋಧನೆಯಿಂದ ಬಲವರ್ಧನೆಗೊಳ್ಳುತ್ತಿದೆ. ಯುಗಗಳು ಉರುಳಿದವು ಕಾಲ ಬದಲಾಯಿತು ಮತ್ತು ಭಾರತವು ಸಹ ಕಾಲದ ಅನೇಕ ಬಿರುಗಾಳಿಗಳನ್ನು ಎದುರಿಸಿತು. ಭಾರತೀಯ ಪ್ರಜ್ಞೆ ದುರ್ಬಲಗೊಂಡಾಗ ನಮ್ಮ ಸಂತರು, ಋಷಿಗಳು, ಮುನಿಗಳು ಮತ್ತು ಆಚಾರ್ಯರು ಇಡೀ ಭಾರತವನ್ನು ಮಂಥನ ಮಾಡುವ ಮೂಲಕ ದೇಶದ ಆತ್ಮವನ್ನು ಪುನರುಜ್ಜೀವನಗೊಳಿಸಿದ್ದಾರೆ. ಗುಲಾಮಗಿರಿಯ ಸುದೀರ್ಘ ಅವಧಿಯಲ್ಲೂ ಉತ್ತರದ ಕಾಶಿಯಿಂದ ದಕ್ಷಿಣದ ನಂಜನಗೂಡಿನವರೆಗೆ, ದೇವಾಲಯಗಳು ಮತ್ತು ಮಠಗಳಂತಹ ಬಲಿಷ್ಠ ಸಂಸ್ಥೆಗಳು ಭಾರತದ ಜ್ಞಾನವನ್ನು ಪ್ರಕಾಶಿಸುವಂತೆ ಮಾಡಿವೆ. ಮೈಸೂರಿನ ಶ್ರೀ ಸುತ್ತೂರುಮಠ, ತುಮಕೂರಿನ ಶ್ರೀ ಸಿದ್ದಗಂಗಾ ಮಠ, ಚಿತ್ರದುರ್ಗದ ಶ್ರೀ ಸಿರಿಗೆರೆ ಮಠ, ಶ್ರೀ ಮುರುಘರಾಜೇಂದ್ರ ಮಠ, ಚಿಕ್ಕಮಗಳೂರಿನ ಶ್ರೀ ರಂಭಾಪುರಿಮಠ, ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠ, ಬೀದರ್‌ನ ಬಸವಕಲ್ಯಾಣ ಮಠ!  ಶತಮಾನಗಳಿಂದಲೂ ಅನಂತ ಶಿಸ್ತುಗಳಿಗೆ ನೀರುಣಿಸಿ ಪೋಷಿಸುತ್ತಿರುವ ಇಂತಹ ಹಲವು ಮಠಗಳಿಗೆ ದಕ್ಷಿಣ ಭಾರತವೊಂದೇ ಕೇಂದ್ರವಾಗಿದೆ. 
ಮಿತ್ರರೇ,
ಸತ್ಯದ ಅಸ್ತಿತ್ವವು ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುವುದಿಲ್ಲ, ಆದರೆ ಸೇವೆ ಮತ್ತು ತ್ಯಾಗದ ಮೇಲೆ ಅವಲಂಬಿತವಾಗಿರುತ್ತದೆ. ಶ್ರೀ ಸುತ್ತೂರು ಮಠ ಮತ್ತು ಜೆಎಸ್‌ಎಸ್ ಮಹಾವಿದ್ಯಾ ಪೀಠ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಜಿ ಸಮಾಜ ಸೇವೆಯ ಸಂಕಲ್ಪದೊಂದಿಗೆ ಉಚಿತ ವಿದ್ಯಾರ್ಥಿನಿಲಯವನ್ನು ತೆರೆದಾಗ, ಅವರು ಯಾವ ಸಂಪನ್ಮೂಲ ಹೊಂದಿದ್ದರು? ಅದೊಂದು ಬಾಡಿಗೆ ಕಟ್ಟಡವಾಗಿದ್ದು, ಪಡಿತರ ಹೊಂದಿಸಲೂ ಸಹ  ಹಣವಿರಲಿಲ್ಲ. ಒಮ್ಮೆ ಹಣದ ಕೊರತೆಯಿಂದ ವಿದ್ಯಾರ್ಥಿನಿಲಯಕ್ಕೆ ಪಡಿತರ ಪೂರೈಕೆ ನಿಂತು ಹೋದಾಗ ಸ್ವಾಮೀಜಿಯವರು ‘ಲಿಂಗ ಕರಡಿಗೆ’ಯನ್ನೂ ಮಾರುವ ಸಂದರ್ಭವೂ ಎದುರಾಗಿತ್ತು ಎಂದು ನಾನು  ಕೇಳಿದ್ದೇನೆ. ಅಂದರೆ ಅವರು ನಂಬಿಕೆಗಿಂತ ಸೇವೆಯಯೇ ಮಿಗಿಲು ಎಂದು ಪರಿಗಣಿಸಿದ್ದರು. ದಶಕಗಳ ಹಿಂದಿನ ಆ ತ್ಯಾಗ ಇಂದು ಸಾಧನೆಯ ರೂಪದಲ್ಲಿ ನಮ್ಮಕಣ್ಣ ಮುಂದಿದೆ. ಜೆಎಸ್ಎಸ್ ಮಹಾವಿದ್ಯಾ ಪೀಠವು ಇಂದು ದೇಶ ಮತ್ತು ವಿದೇಶಗಳಲ್ಲಿ 300 ಕ್ಕೂ  ಅಧಿಕ ಸಂಸ್ಥೆಗಳು ಮತ್ತು ಎರಡು ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದೆ. ಈ ಸಂಸ್ಥೆಗಳು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬ್ರಾಂಡ್ ರಾಯಭಾರಿಗಳು ಮಾತ್ರವಲ್ಲ, ವಿಜ್ಞಾನ, ಕಲೆ ಮತ್ತು ವಾಣಿಜ್ಯಕ್ಕೂ ಕೂಡ ಅಷ್ಟೇ ಸಮಾನವಾದ ಕೊಡುಗೆಯನ್ನು ನೀಡುತ್ತಿವೆ. ಸುತ್ತೂರು ಮಠವು ಬಡ ಮಕ್ಕಳಿಗೆ, ಆದಿವಾಸಿ ಸಮಾಜಕ್ಕೆ ಮತ್ತು ನಮ್ಮ ಹಳ್ಳಿಗಳಿಗೆ ಸೇವೆ ಸಲ್ಲಿಸುತ್ತಿರುವ ವಿಧಾನವೂ ಒಂದು ಉದಾಹರಣೆಯಾಗಿದೆ. 
ಮಿತ್ರರೇ,
ಕರ್ನಾಟಕ, ದಕ್ಷಿಣ ಭಾರತ ಮತ್ತು ಭಾರತದಲ್ಲಿ ಶಿಕ್ಷಣ, ಸಮಾನತೆ ಮತ್ತು ಸೇವೆಯ ವಿಚಾರಕ್ಕೆ  ಬಂದಾಗ,  ಭಗವಾನ್ ಬಸವೇಶ್ವರರ ಆಶೀರ್ವಾದದಿಂದ ಈ ಪ್ರವಚನಗಳು ಮತ್ತಷ್ಟು ವಿಸ್ತರಿಸಲ್ಪಡುತ್ತವೆ. ಭಗವಾನ್ ಬಸವಣ್ಣನವರು ನಮ್ಮ ಸಮಾಜಕ್ಕೆ ನೀಡಿದ ಶಕ್ತಿ, ಅವರು ಸ್ಥಾಪಿಸಿದ ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಸಮಾನತೆಯ ಆದರ್ಶಗಳು ಭಾರತದ ಭದ್ರ ಬುನಾದಿಯಾಗಿ ಮುಂದುವರೆದಿವೆ. ಲಂಡನ್‌ನಲ್ಲಿ ಒಮ್ಮೆ ಬಸವೇಶ್ವರರ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು ಮತ್ತು ಆ ಸಮಯದಲ್ಲಿ ನಾನು ಹೇಳಿದ್ದೆ ನೀವು ಮ್ಯಾಗ್ನ ಕಾರ್ಟಾ ಮತ್ತು ಭಗವಾನ್ ಬಸವಣ್ಣನ ವಚನಗಳನ್ನು ಹೋಲಿಕೆ ಮಾಡಿದರೆ, ನನ್ನ ದೇಶದಲ್ಲಿ ಮ್ಯಾಗ್ನ ಕಾರ್ಟಾಗಿಂತ ಹಲವು ಶತಮಾನಗಳ ಹಿಂದೆಯೇ, ಸಮಾಜದ ಬಗೆಗಿನ ಮನೋಭಾವವನ್ನು ನೀವು ಕಾಣಬಹುದು ಎಂದು ನಾನು ಹೇಳಿದ್ದೆ. 
ಮಿತ್ರರೇ,
ಅದೇ ಆದರ್ಶಗಳನ್ನು ಪಾಲಿಸುತ್ತಾ, ಶ್ರೀ ಸಿದ್ದಗಂಗಾ ಮಠವು ಇಂದು 150 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ, ಸಮಾಜದಲ್ಲಿ ಶಿಕ್ಷಣ ಮತ್ತು ಆಧ್ಯಾತ್ಮಿಕತೆಯನ್ನು ಪಸರಿಸುತ್ತಿದೆ ಮತ್ತು ಪ್ರಸ್ತುತ ಸಿದ್ದಗಂಗಾ ಮಠದ ಶಾಲೆಗಳಲ್ಲಿ ಸುಮಾರು 10,000 ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆಂದು ನಾನು ಕೇಳಲ್ಪಟ್ಟಿದ್ದೇನೆ. ಭಗವಾನ್ ಬಸವಣ್ಣನವರ ನಿಸ್ವಾರ್ಥ ಸೇವೆಯ ಈ ಸ್ಫೂರ್ತಿ ಮತ್ತು ಭಕ್ತಿ ನಮ್ಮ ಭಾರತಕ್ಕೆ ಭದ್ರ ಬುನಾದಿಯಾಗಿದೆ. ಈ ಬುನಾದಿ ಎಷ್ಟು ಸದೃಢವಾಗಿರುತ್ತದೆಯೋ ನಮ್ಮ ದೇಶ ಅಷ್ಟು ಬಲಿಷ್ಠವಾಗುತ್ತದೆ. 
ಮಿತ್ರರೇ,
ದೇಶದ 75ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿರುವಾಗ ನಾವು ಸ್ವಾತಂತ್ರ್ಯದ 'ಅಮೃತ ಕಾಲ’ದ ಈ ಸಮಯದಲ್ಲಿ  'ಸಬ್ ಕಾ ಪ್ರಯಾಸ್' ನ ಅತ್ಯುತ್ತಮ ಪ್ರಯತ್ನವಾಗಿದೆ. ನಮ್ಮ ಋಷಿಮುನಿಗಳು ಈ ಎಲ್ಲರ ಸಹಕಾರ ಮತ್ತು ಪ್ರಯತ್ನದ ಸಂಕಲ್ಪವನ್ನು ‘ಸಹನಾ ಭವತು ಸಹನೌ ಭುನಕ್ತು’ ಎಂದು ಕರೆದು ‘ಸಹ ವೀರ್ಯಂ ಕರವಾವಹೈ’ ಎಂದು ವೇದಗಳ ರೂಪದಲ್ಲಿ ನಮಗೆ ನೀಡಿದ್ದಾರೆ. ಸಹಸ್ರಾರು ವರ್ಷಗಳ ಆ ಆಧ್ಯಾತ್ಮಿಕ ಅನುಭವವನ್ನು ನಿಜವಾಗಿಸುವ ಸಮಯ ಇದೀಗ ಬಂದಿದೆ.  ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಾವು ಕಂಡ ಕನಸುಗಳನ್ನು ನನಸಾಗಿಸುವ ಸಮಯ ಇದಾಗಿದ್ದು, ಅದಕ್ಕಾಗಿ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಾವು ನಮ್ಮ ಪ್ರಯತ್ನಗಳನ್ನು ರಾಷ್ಟ್ರದ ನಿರ್ಣಯಗಳೊಂದಿಗೆ ಸಂಯೋಜಿಸಬೇಕು. 
ಮಿತ್ರರೇ,
ಶಿಕ್ಷಣ ಕ್ಷೇತ್ರದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ಯ ಉದಾಹರಣೆಯು ನಮ್ಮ ಮುಂದಿದೆ. ಶಿಕ್ಷಣವು ನಮ್ಮ ಭಾರತದ ಸ್ವಾಭಾವಿಕ ಅಂಶವಾಗಿದೆ, ಇದರಿಂದಾಗಿ  ನಮ್ಮ ಹೊಸ ಪೀಳಿಗೆಗೆ ಮುನ್ನಡೆ ಸಾಧಿಸಲು ಸುಲಭವಾಗಿ ಅವಕಾಶ ದೊರಕಬೇಕು. ಆದ್ದರಿಂದ, ಸ್ಥಳೀಯ ಭಾಷೆಗಳಲ್ಲಿ ಅಧ್ಯಯನ ಮಾಡಲು ಆಯ್ಕೆಗಳನ್ನು ನೀಡಲಾಗುತ್ತಿದೆ. ಕನ್ನಡ, ತಮಿಳು, ತೆಲುಗು ಜತೆಗೆ ಸಂಸ್ಕೃತದಂತಹ ಭಾಷೆಗಳನ್ನೂ ಸಹ ಉತ್ತೇಜಿಸಲಾಗುತ್ತಿದೆ. ಶತಮಾನಗಳಿಂದಲೂ ನಮ್ಮ ಎಲ್ಲಾ ಮಠಗಳು ಮತ್ತು ಧಾರ್ಮಿಕ ಸಂಸ್ಥೆಗಳು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ದೇಶದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮ’ ಇಂದಿಗೂ ಮೈಸೂರಿನಿಂದ ಪ್ರಕಟವಾಗುತ್ತಿದೆ. ದೇಶವೂ ಇದೀಗ ಇಂತಹ ಪ್ರಯತ್ನಗಳಿಗೆ  ಬೆಂಬಲ ನೀಡುತ್ತಿದೆ.
ಅಂತೆಯೇ, ಭಾರತ ಆರೋಗ್ಯ ಮತ್ತು ಸ್ವಾಸ್ಥ್ಯದತ್ತ ನಡೆಸುತ್ತಿರುವ ಹೆಚ್ಚಿನ ಪ್ರಯತ್ನಗಳಿಂದಾಗಿ ಇಂದು ಆಯುರ್ವೇದ ಮತ್ತು ಯೋಗವು ಪ್ರಪಂಚದಾದ್ಯಂತ ಹೊಸ ಮಾನ್ಯತೆಯನ್ನು ಸಂಪಾದಿಸಿದೆ. ದೇಶದ ಯಾವೊಬ್ಬ ಪ್ರಜೆಯೂ ಈ ಪರಂಪರೆಯಿಂದ ವಂಚಿತರಾಗಿ ಅಜ್ಞಾನಿಗಳಾಗಿ ಉಳಿಯಬಾರದೆಂಬುದು ನಮ್ಮ ಪ್ರಯತ್ನವಾಗಿದೆ. ಈ ಧ್ಯೇಯವನ್ನು ಪೂರ್ಣಗೊಳಿಸಲು ನಮ್ಮ ಆಧ್ಯಾತ್ಮಿಕ ಸಂಸ್ಥೆಗಳ ಸಹಕಾರ ಅತಿ ಮುಖ್ಯ. ಅಂತೆಯೇ ನಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಜಲ ಸಂರಕ್ಷಣೆಗಾಗಿ, ಪರಿಸರಕ್ಕಾಗಿ ಹಾಗೂ ಸ್ವಚ್ಛ ಭಾರತಕ್ಕಾಗಿ ನಾವೆಲ್ಲರೂ ಒಗ್ಗೂಡಬೇಕಿದೆ. ಮತ್ತೊಂದು ಪ್ರಮುಖ ಸಂಕಲ್ಪವು ನೈಸರ್ಗಿಕ ಕೃಷಿಗೆ ಸಂಬಂಧಿಸಿದೆ. ನಮ್ಮ ಆಹಾರ ಎಷ್ಟು ಪರಿಶುದ್ಧವಾಗಿರುತ್ತದೆಯೋ ನಮ್ಮ ಜೀವನ ಮತ್ತು ಮನಸ್ಸು ಅಷ್ಟು ಶುದ್ಧವಾಗಿರುತ್ತದೆ. ಆ ನಿಟ್ಟಿನಲ್ಲಿ ನಮ್ಮ ಎಲ್ಲಾ ಧಾರ್ಮಿಕ ಮಠಗಳು ಮತ್ತು ಸಂಸ್ಥೆಗಳು ಮುಂದೆ ಬಂದು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ನಾನು ಬಯಸುತ್ತೇನೆ. ನಮ್ಮ ಭಾರತ ಮಾತೆಯನ್ನು, ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ಮುಕ್ತಗೊಳಿಸೋಣ. ಆ ನಿಟ್ಟಿನಲ್ಲಿ ನಾವು ಏನೇ ಮಾಡಿದರೂ ತಾಯಿಯ ಆಶೀರ್ವಾದವು ಶತಮಾನಗಳವರೆಗೆ ನಮಗೆ ಉಪಯುಕ್ತವಾಗುತ್ತದೆ. 
ಮಿತ್ರರೇ,
ಸಂತರ ಪ್ರಯತ್ನಗಳನ್ನು ಒಳಗೊಂಡಿರುವ ಉಪಕ್ರಮಗಳಿಗೆ ಆಧ್ಯಾತ್ಮಿಕ ಪ್ರಜ್ಞೆ ಮತ್ತು ದೈವಿಕ ಕೃಪೆಗಳನ್ನೂ ಸಹ ಸೇರಿಸಲಾಗುತ್ತದೆ. ದೇಶವು ಎಲ್ಲಾ ಸಂತರ ಆಶೀರ್ವಾದ ಪಡೆಯುವುದನ್ನು ಮುಂದುವರಿಸುತ್ತದೆ ಎಂದು ನಾನು ನಂಬಿದ್ದೇನೆ. ನಾವೆಲ್ಲರೂ ಒಗ್ಗೂಡಿ ನವ ಭಾರತದ ಕನಸನ್ನು ನನಸು ಮಾಡೋಣ. ಇಂದು ನನಗೆ ಅತ್ಯಂತ ಅದೃಷ್ಟದ ಕ್ಷಣವಾಗಿದೆ. ಪೂಜ್ಯ ಸಂತರು ನನ್ನ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ರೀತಿಯಿಂದ ಸಂತಸವಾಗಿದೆ. ನನಗೆ ಗೊತ್ತು ನಾನು ಅಲ್ಲಿಗೆ ತಲುಪಲು ನಾನು ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ ಎಂಬುದು. 
ನಿಮ್ಮ ಆಶೀರ್ವಾದ, ನಮ್ಮ ಶ್ರೇಷ್ಠ ಸಾಂಸ್ಕೃತಿಕ ಪರಂಪರೆ ಮತ್ತು ನಿಮ್ಮ ಮಾರ್ಗದರ್ಶನದಲ್ಲಿ ನಾನು ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇನೆ. ಶ್ರೇಷ್ಠ ಪರಂಪರೆಯ ಪ್ರೇರಣೆಯಿಂದ ನಾನು ಆ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ. ನನ್ನ ಕೆಲಸದಲ್ಲಿ ಯಾವುದೇ ಲೋಪವಾಗದಂತೆ ಮತ್ತು ನಿಮ್ಮ ನಿರೀಕ್ಷೆ ಅಪೂರ್ಣವಾಗದಂತೆ ನನ್ನನ್ನು ಆಶೀರ್ವದಿಸಿ. ನಾನು ನಿಮ್ಮ ನಡುವೆ ಇರುವ ಸೌಭಾಗ್ಯ ನನ್ನದಾಗಿದೆ ಮತ್ತು ಆಂತಹ ಆಶೀರ್ವಾದ ದೊರೆತಿದೆ. ಮತ್ತೊಮ್ಮೆ ಎಲ್ಲರಿಗೂ ತುಂಬಾ ಧನ್ಯವಾದಗಳು.

ಮತ್ತೊಮ್ಮೆ ಎಲ್ಲರಿಗೂ ನಮಸ್ಕಾರಗಳು !                                                              
ಘೋಷಣೆ: ಇದು ಪ್ರಧಾನಮಂತ್ರಿ ಅವರು ಭಾಷಣದ ಯಥಾವತ್ ಅನುವಾದವಲ್ಲ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು. 

 

******



(Release ID: 1836106) Visitor Counter : 176